83. ಅಪರೂಪದ ಕಲಾವಿದ ದಂಪತಿ – ಉರುಮೆ ವಾದ್ಯ ಕಲಾವಿದ ರಾಮದಾಸಪ್ಪ, ಜಾನಪದ ಗಾಯಕಿ ಕಮಲಮ್ಮ

ಆತ್ಮೀಯ ಓದುಗರೇ,

ಅಜ್ಜಂಪುರದ ಹಿಂದುಳಿದ ವರ್ಗದ ಸಮಾಜವೊಂದರ ಸಾಧನೆಗಳು, ಕಲೆ ಮತ್ತು ಸಂಸ್ಕೃತಿಗಳಿಗೆ ನೀಡಿರುವ ದೇಣಿಗೆಯ ವಿವರಗಳು ಈ ಸಂಚಿಕೆಯಲ್ಲಿದೆ. ಈ ಬರಹವನ್ನು ಆಪ್ತವಾಗಿ ನಮಗೆ ಸಂಗ್ರಹಿಸಿಕೊಟ್ಟವರು ಪ್ರೀತಿಯ ಮಿತ್ರ ಅಪೂರ್ವ ಬಸು. 

ಅವರು ಲೇಖನದಲ್ಲಿ ಹೇಳಿರುವಂತೆ ಚೆಲುವಾದಿಗರ ಬೀದಿಯೆಂದರೆ ಚೆಲುವಿನ ಬೀದಿಯೆನ್ನಿಸುವಂತಿದ್ದುದು ದಿಟವೇ ಸರಿ. ಸಾರಿಸಿದ ಕಪ್ಪು ನೆಲದ ಮೇಲಿನ ಬಿಳಿಯ ರಂಗೋಲಿ, ಬೀದಿಯುದ್ದಕ್ಕು ಎದ್ದು ಕಾಣುವಂತಿದ್ದ ಸ್ವಚ್ಛತೆ ಇಂದಿಗೂ ನೆನಪಿನಿಂದ ಮರೆಯಾಗಿಲ್ಲ. ಸ್ವಯಂ ಪ್ರೇರಿತರಾಗಿ ಶಿಸ್ತು, ವಿದ್ಯಾಭ್ಯಾಸಕ್ಕೆ ಗೌರವ, ಪರಿಶ್ರಮಗಳ ಮೌಲ್ಯದಿಂದ ಮೇಲೆದ್ದುಬಂದ ಈ ಸಮಾಜದ ಹಿರಿಯರ ಕೊಡುಗೆ ನಾಡಿಗೆ ಸಾಕಷ್ಟಿದೆ. 
ಇದರಲ್ಲಿ ಶಾಸಕ ಶ್ರೀ ತಿಪ್ಪಯ್ಯನವರ ಕೊಡುಗೆಯನ್ನು ಈಗಾಗಲೇ ಸ್ಮರಿಸಿದ್ದಿದೆ. ಕಂದಹಾರ್ ವಿಮಾನ ಅಪಹರಣದ ಸಂದರ್ಭದಲ್ಲಿ ಶ್ರೀ ಘನಶ್ಯಾಮರ ಸಾಹಸವನ್ನು ಹಿಂದಿನ ಸಂಚಿಕೆಯಲ್ಲಿ ದಾಖಲಿಸಲಾಗಿದೆ. ಶ್ರೀ ಪುಟ್ಟರಂಗಪ್ಪ ಎಂಬ ಹಿರಿಯರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರರಾಗಿದ್ದವರು. ಅವರ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಲು ಯತ್ನಿಸಿದಲೂ, ಅದಿನ್ನೂ ಸಫಲವಾಗಿಲ್ಲ. ಈ ಸಂಚಿಕೆಯನ್ನು ಓದಿದವರಲ್ಲಿ ಯಾರಿಗಾದರೂ, ಅವರ ಸಾಧನೆಗಳ ಬಗ್ಗೆ ಮಾಹಿತಿಯಿದ್ದಲ್ಲಿ ತಿಳಿಸಲು ಕೋರುತ್ತೇನೆ.
ಅಜ್ಜಂಪುರದಲ್ಲೇ ಇದ್ದುಕೊಂಡು ಕಲೆ ಮತ್ತು ಸಂಸ್ಕೃತಿಗಳಿಗೆ ಕೊಡುಗೆ ನೀಡುತ್ತಿರುವ ದಂಪತಿಗಳಾದ ಶ್ರೀ ರಾಮದಾಸಪ್ಪ ಮತ್ತು ಮಧುರ ಕಂಠದ ಅವರ ಪತ್ನಿ ಶ್ರೀಮತಿ ಕಮಲಮ್ಮನವರ ಬಗ್ಗೆ ಪರಿಚಯಾತ್ಮಕ ಲೇಖನದ ಜತೆಗೆ, ಅವರ ವಾದನ ಮತ್ತು ಹಾಡುಗಾರಿಕೆಯ ದೃಶ್ಯಗಳನ್ನು ದಾಖಲಿಸಿರುವುದು ಈ ಸಂಚಿಕೆಯ ವಿಶೇಷ. ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಲು ಎಂದಿನಂತೆ ನನ್ನ ವಿನಂತಿ.
-ಶಂಕರ ಅಜ್ಜಂಪುರ
ಸಂಪಾದಕ
ಅಂತರಜಾಲದಲ್ಲಿ ಅಜ್ಜಂಪುರ
ದೂರವಾಣಿ 99866 72483
ಈ-ಮೇಲ್ shankarajp@gmail.com

ನಮ್ಮೂರಿನ ಚಲುವಾದಿಗರ ಬೀದಿಯೆಂದರೆ ನನಗೆ ಒಂದು ಬಗೆಯ ಆಕರ್ಷಣೆ. ನಾನು ಐದನೆಯ ತರಗತಿಯಲ್ಲಿ ಓದುತ್ತಿದ್ದಾಗ ಅಲ್ಲಿ ಸಿಂಹ ಎಂಬ ಹೆಸರಿನ ಸಹಪಾಠಿಯಿದ್ದ. ಅವನು ಚಿತ್ರಗೀತೆ, ಜಾನಪದ ಗೀತೆಗಳನ್ನು ಶಾಲಾದಿನಗಳಲ್ಲಿ ಹಾಡುತ್ತಿದ್ದ. ಅವನ ಚಿಕ್ಕಮ್ಮ ರುದ್ರಮ್ಮ ಕೂಡ ಮಧುರವಾಗಿ ಹಾಡುತ್ತಿದ್ದರು. ಆ ಬೀದಿಯ ಪ್ರತಿಮನೆಯಲ್ಲಿಯೂ ಶಾಲೆಗೆ ಬರುವ ಮಕ್ಕಳಿದ್ದರು. ಪೇಟೆಬೀದಿಯಲ್ಲಿ ಇರುತ್ತಿದ್ದ ನಮ್ಮೂರಿನ ಸ್ವಾತಂತ್ರ್ಯ ಹೋರಾಟಗಾರ, ಗಾಂಧೀವಾದಿ ಎಸ್. ಸುಬ್ರಹ್ಮಣ್ಯಶೆಟ್ಟರನ್ನು ಅನುಸರಿಸಿದ ಖಾದಿಧಾರಿಗಳಾದ ಪಾಂಡುರಂಗಪ್ಪ, ಎಸ್. ಸಿದ್ದಪ್ಪ ಮತ್ತು ಡಿ. ರಂಗಯ್ಯ ಎಂಬ ಹಿರಿಯರಿದ್ದರು. ನನ್ನ ಗೆಳೆಯ ಸಿಂಹನ ಅಜ್ಜ ದಾಸಪ್ಪ ಸನಾದಿ ನುಡಿಸುತ್ತಿದ್ದರು. ಬಸವಣ್ಣ ಮತ್ತು ಕಿರಾಳಮ್ಮನ ಗುಡಿಗಳ ಮುಂದೆ ಕುಳಿತು ಸನಾದಿ ನುಡಿಸುವ ಸೇವೆ ಮಾಡುತ್ತಿದ್ದರು. ನಮ್ಮ ಮಾಧ್ಯಮಿಕ ಶಾಲೆಯ ಮೇಷ್ಟ್ರುಗಳಾದ ಪಿ. ತಿಪ್ಪಯ್ಯ, ಮತ್ತು ಎ.ಡಿ. ನಾಗಪ್ಪ ಇದೇ ಬೀದಿಯವರು. ನಂಜುಂಡಪ್ಪ ಮತ್ತು ಕಣ್ಣ ಎಂಬುವವರು ನನ್ನ ಜತೆಗೆ ಓದಿದವರಾಗಿದ್ದರು.
ಗುಡಿಸಿ ಸಾರಿಸಿದ ಹಾಗೆ ಸದಾ ಕಂಗೊಳಿಸುತ್ತಿದ್ದ ಈ ಚೆಲುವಾದಿಗರ ಬೀದಿ ನಮ್ಮ ಬಾಲ್ಯಕಾಲದಲ್ಲಿ ಚೆಲುವಿನ ಬೀದಿಯಾಗಿತ್ತು. ಇಲ್ಲಿ ಅನೇಕ ಸುಪ್ತ ಪ್ರತಿಭೆಗಳಿದ್ದವು. ಸನಾದಿ ನುಡಿಸುವ ದಾಸಪ್ಪ, ನುರಿತ ರಾಜಕಾರಿಣಿ ಎಸ್. ಸಿದ್ದಪ್ಪ, ಭಜನೆ, ನಾಟಕ, ನೃತ್ಯಗಳನ್ನು ಕಲಿಸುತ್ತಿದ್ದ ಡಿ. ರಂಗಯ್ಯ, ಮುಂದೆ ಶಾಸಕರಾದ ತಿಪ್ಪಯ್ಯ ಮೇಷ್ಟ್ರು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಹಾನಿರ್ವಾಹಕ, ಕೃಷಿ ಇಲಾಖೆಯ ಆಯುಕ್ತರಾಗಿ ನಿವೃತ್ತರಾದ ಪಿ. ಪುಟ್ಟರಂಗಪ್ಪ, ಅಮೆರಿಕದಲ್ಲಿದ್ದ ಅವರ ಸೋದರ ಡಾ. ಗೋವಿಂದಸ್ವಾಮಿ ಇವರೆಲ್ಲ ಈ ಬೀದಿಯಲ್ಲೇ ಆಡಿ ಬೆಳೆದವರು. ಕಂದಹಾರ್ ವಿಮಾನ ಅಪಹರಣದ ಸಂದರ್ಭದಲ್ಲಿ ಕೇಂದ್ರ ಸರಕಾರವು ಸಂಧಾನಕ್ಕೆಂದು ಕಳಿಸಿದ್ದ ಘನಶ್ಯಾಮ್ ಕೂಡ ಇಲ್ಲಿಯವರೇ. ಇದೆಲ್ಲ ನೆನೆಯುವಾಗ ನಮ್ಮೂರಿನ ಚೆಲುವಾದಿಗರ ಬೀದಿಯ ಜನರ ಸಾಧನೆಗಳ ಬಗ್ಗೆ ಹೆಮ್ಮೆಯೆನಿಸುತ್ತದೆ.
-0-0-0-0-0-0-0-0-0-0-0-0-

ಇಲ್ಲಿನವರೇ ಆದ ಇನ್ನೆರಡು ಪ್ರತಿಭೆಗಳೆಂದರೆ, ರಾಮದಾಸಪ್ಪ ಮತ್ತು ಕಮಲಮ್ಮ ದಂಪತಿಗಳು. ಕಳೆದ ವರ್ಷದ ಕೊನೆಯಲ್ಲಿ ಈ ದಂಪತಿಗಳನ್ನು ಮಾತನಾಡಿಸಲೆಂದು ಹೋದಾಗ ಮೇಲಿನ ಸಂಗತಿಗಳೆಲ್ಲ ನೆನಪಾಗಿ ಪುನರಾವರ್ತಿತವಾದವು. ರಾಮದಾಸಪ್ಪ ಉರಿಮೆ ವಾದ್ಯದ ಕಲಾವಿದರು. ಶುಭ್ರ ಬಿಳಿಯ ಅಂಗಿ, ಪಂಚೆ ಧರಿಸಿದ ಅವರು ಅಜ್ಜಂಪುರದ ಕಿರಾಳಮ್ಮನ ಗುಡಿಯಲ್ಲಿ ಉರುಮೆ ಬಾರಿಸುತ್ತಿದ್ದುದನ್ನು ನೋಡಿದ್ದೆ. ಸೊಲ್ಲಾಪುರದ ಸಿದ್ಧರಾಮೇಶ್ವರ ಸ್ವಾಮಿ ಊರಿಗೆ ಬಂದಾಗ, ಮಡಿವಾಳ ಮಾಚಿದೇವರ ಉತ್ಸವಕಾಲದಲ್ಲೂ ಅವರದೇ ಉರುಮೆಯ ಸೇವೆ. ನಾಲ್ಕು ವಿವಿಧ ತಾಳಗಳಲ್ಲಿ ನುಡಿಸುವ ಈ ವಾದ್ಯದ ಕಲೆ ಅವರಿಗೆ ವಂಶಪಾರಂಪರ್ಯವಾಗಿ ಬಂದದ್ದು. ಇವರಿಗೆ ರಾಜ್ಯ ಸರಕಾರವು ನೀಡುತ್ತಿರುವ ಮಾಸಾಶನ ದೊರಕುತ್ತಿದೆ. ಕಳೆದ ವರ್ಷವೇ ಜಿಲ್ಲಾ ಜಾನಪದ ಕಲಾವಿದರ ಒಕ್ಕೂಟವು ಬಸವ ಜ್ಯೋತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ರಾಮದಾಸಪ್ಪನವರ ಪತ್ನಿ ಕಮಲಮ್ಮ ಅದ್ಭುತ ಜಾನಪದ ಗಾಯಕಿ. ರಾಮದಾಸಪ್ಪನವರನ್ನು ಸಂದರ್ಶಿಸಲು ಹೋದಾಗ ಈಕೆ ತನ್ನ ಪರಿಚಯ ತಿಳಿಸುತ್ತ, ತಾನೂ ಓರ್ವ ಭಜನೆ ಮತ್ತು ಜಾನಪದ ಕೃತಿಗಳನ್ನು ಹಾಡುವ ಕಲಾವಿದೆ ಎಂದರು. ಅವರು ಹಾಡಿದ ಎರಡು ಗೀತೆಗಳು ಆಕರ್ಷಣೀಯವಾಗಿದ್ದವು. ಸಂಗೀತದ ಹಿನ್ನೆಲೆಯಿಲ್ಲದೆಯೂ, ಶ್ರುತಿಬದ್ಧವಾಗಿ ಹಾಡುವ ಸುಶ್ರಾವ್ಯ ಕಂಠ ಅವರದು. ಕೇಳಿಕೆಯಿಂದಲೇ ಹಾಡುಗಳ ರಾಗ, ಸಾಹಿತ್ಯ ಮತ್ತು ಮಟ್ಟುಗಳನ್ನು ನೆನಪಿಟ್ಟುಕೊಂಡು ಹಾಡುವ ಇವರ ಪ್ರತಿಭೆ ಅನನ್ಯ. ಕಮಲಮ್ಮನವರಿಗೆ ಒಂದು ಕೊರಗಿದೆ. ತನಗೂ ಮಾಸಾಶನ ಬರಬೇಕಿತ್ತು ಎಂದು ಹೇಳಿಕೊಂಡರು. 1972-73ರಲ್ಲಿ  ಮಾಜಿ ಸಚಿವೆ ಮೋಟಮ್ಮನವರು ಭಜನೆಯ ಉಪಕರಣಗಳನ್ನು ಸರಕಾರದಿಂದ ಕೊಡಿಸಿದ್ದನ್ನು ಬಿಟ್ಟರೆ ಬೇರಾವ ಪುರಸ್ಕಾರವೂ ಸಿಕ್ಕಿಲ್ಲ ಎಂದರು. ಈ ದಂಪತಿಯ ಪುತ್ರಿ ರೇಖಾ ಹೋಂಗಾರ್ಡ್. ಈಕೆ ಅಜ್ಜಂಪುರ ಸಮೀಪದ ಅಮೃತಾಪುರದ ಅಮೃತೇಶ್ವರ ದೇಗುಲದಲ್ಲಿ ಮುಜರಾಯಿ ಇಲಾಖೆಯ ಭದ್ರತಾ ಸಿಬ್ಬಂದಿಯಾಗಿ ತಾತ್ಕಾಲಿಕ ಸೇವೆಯಲ್ಲಿದ್ದಾರೆ. 


-0-0-0-0-0-0-0-0-0-0-0-0-


ಈ ಕಲಾವಿದ ದಂಪತಿಗಳ ಪ್ರತಿಭೆಯ ಚಿತ್ರಣದ ದೃಶ್ಯಗಳು ಇಲ್ಲಿವೆ.







ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ