ಅಜ್ಜಂಪುರದ ಟಿ.ಬಿ. ರಸ್ತೆಯಲ್ಲಿರುವ ಈಶ್ವರನ ಗುಡಿ - ಅಪೂರ್ವ ಅಜ್ಜಂಪುರ

ಪ್ರತಿ‌ ವರ್ಷ ಮಹಾಶಿವರಾತ್ರಿ‌ ಬಂದಿತು ಅಂದರೆ ಶಿವಾಲಯ, ಈಶ್ವರನ ದೇವಸ್ಥಾನಗಳಿಗೆ ಆಸ್ತಿಕರು ಭೇಟಿ ಕೊಡುವುದು ಸಾಮಾನ್ಯ. ಅಜ್ಜಂಪುರದಲ್ಲಿ‌ ಕೋಟೆ ಸೋಮೇಶ್ವರ ದೇವಸ್ಥಾನಕ್ಕೆ ಅಂದು‌ ರಾತ್ರಿ ಭಕ್ತಸಾಗರವು ಹರಿದು ಬರುವುದು‌ ದೃಶ್ಯವು ಪ್ರತಿ ವರ್ಷವೂ ಸಾಮಾನ್ಯ. 

ಎರೆಹೊಸೂರು‌ ರಸ್ತೆಯ ಪಶ್ಚಿಮಕ್ಕೆ ಇರುವ ಮತ್ತೊಂದು ರಸ್ತೆಯಲ್ಲಿ ‌ಮಲ್ಲೇದೇವರು ಎಂಬ ಜಂಗಮ ಪುರೋಹಿತರ ತೋಟವಿದೆ. ಅಲ್ಲಿ ಒಂದು ಈಶ್ವರ ದೇವಾಲಯ ಇದೆ.  ಅಲ್ಲಿಗೂ ಶಿವರಾತ್ರಿಯಂದು‌ ಊರಿನ ಜನರು ಹೋಗುತ್ತಾರೆ. 

ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ‌ನಗರೇಶ್ವರನ ಹೆಸರಲ್ಲಿ‌ ಈಶ್ವರ ಲಿಂಗವಿದೆ.‌ ಇದಲ್ಲದೆ ಪೇಟೆಯ ಬಸವಣ್ಣ ದೇವಾಲಯದಲ್ಲಿ ನಂದಿಯ ಜೊತೆಗೆ ಇರುವ ಉಮಾಮಹೇಶ್ವರರ ಉತ್ಸವಮೂರ್ತಿ ಇದೆ.

ಎಲೆಮರೆಯ ಕಾಯಿಯಂತೆ ಇರುವ, ಅಷ್ಟು ಬೆಳಕಿಗೆ ಬಾರದ ಇನ್ನೂ ಒಂದು ಈಶ್ವರನ ಗುಡಿ ಟಿ.ಬಿ.ರಸ್ತೆಯಲ್ಲಿ ಇದೆ. ಪ್ರತಿ ವರ್ಷ ಮಹಾಶಿವರಾತ್ರಿಯ ದಿನದಂದು  ಈ ಗುಡಿಗೆ ಗೊತ್ತಿರುವ ಕೆಲವೇ ಭಕ್ತರು ಭೇಟಿ ನೀಡುತ್ತಾರೆ. ಈ ಗುಡಿಯ ಬಗ್ಗೆ ಮಾಹಿತಿಯನ್ನು ಪ್ರಥಮ ಬಾರಿಗೆ ನಮ್ಮ ಬ್ಲಾಗಿನಲ್ಲಿ ಹಂಚಿಕೊಳ್ಳಲಾಗಿದೆ.

ಪೋಸ್ಟಾಫೀಸ್ ರಸ್ತೆ ಮತ್ತು ಟಿ.ಬಿ.ರಸ್ತೆಗಳು ಕತ್ತರಿಸುವ     
ಒಂದು ಮೂಲೆಗೆ ಇರುವ  ವಿಶಾಲವಾದ ಜಾಗದಲ್ಲಿ ಎನ್.ಟಿ.ಜಿ.ಎಂ.ಎಸ್. ಶಾಲೆ ಇದ್ದದ್ದು ಹಳೆಯ ತಲೆಮಾರಿನವರಿಗೆ ಗೊತ್ತಿರುವ ಸಂಗತಿ. ನ್ಯೂ ಟೈಪ್ ಗರ್ಲ್ಸ್ ಮಿಡಲ್ ಸ್ಕೂಲ್ ಎಂದು ರಾಜ್ಯ ಸರ್ಕಾರದ ಶಾಲೆಯು ಮಹತ್ವಾಕಾಂಕ್ಷೆಯ ಶೈಕ್ಷಣಿಕ ಉದ್ದೇಶದೊಂದಿಗೆ ಅಜ್ಜಂಪುರದಲ್ಲಿ ಆ ಕಾಲಕ್ಕೆ ಅಸ್ತಿತ್ವದಲ್ಲಿತ್ತು. ಶಾಲೆಯ ಆವರಣದಲ್ಲಿ ಈ ಮೊದಲು ಉಲ್ಲೇಖಿಸಿರುವ ಪುಟ್ಟ ಈಶ್ವರನ ಗುಡಿ ಇದೆ. 

ಸರ್ಕಾರಕ್ಕೂ ಮೊದಲು ಬಾಲಕಿಯರಿಗೆ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಸಂಗೀತಾಭ್ಯಾಸವು ಅಗತ್ಯವೆಂದು ಒಬ್ಬ ಮಹಾನುಭಾವರು ದೊಡ್ಡ ನಿವೇಶನವನ್ನು ಕೊಟ್ಟು, ಸೊಗಸಾದ ಶಾಲಾ ಕಟ್ಟಡವನ್ನು ಕಟ್ಟಿಸಿಕೊಟ್ಟರು. ಶಾಲೆ ಕಟ್ಟಿಸಿದ್ದಲ್ಲದೆ ಕೆಲವು ವರ್ಷ ಶಿಕ್ಷಕರಿಗೆ ಸಂಬಳವನ್ನು ನೀಡಿದರು.  ಆ ಮಹಾನುಭಾವರು ಭಂಗಿ ರೇವಣ್ಣನವರು. ತಮ್ಮ ಪತ್ನಿ ಮಲ್ಲಮ್ಮನವರ ಹೆಸರಲ್ಲಿ ಶಾಲೆ ಪ್ರಾರಂಭಿಸಿದರು. ಗ್ರಾನೈಟ್ ಕಲ್ಲಿನ ಸಾಲು ಕಂಬಗಳುಳ್ಳ ಅಂದಿನ ಶಾಲೆ ಇನ್ನೂ ಸುಸ್ಥಿತಿಯಲ್ಲಿದೆ. ಕಳೆದ ಶತಮಾನದ 1913 ರಲ್ಲಿ ಈ ಶಾಲೆ ಅಸ್ತಿತ್ವಕ್ಕೆ ಬಂದಿತು. 

ಈ ಬ್ಲಾಗ್ ನಲ್ಲಿ ಸ್ಮರಿಸಲಾಗಿರುವ ಮತ್ತೊ೦ದು ಶಿವಮಂದಿರವು ಅಜ್ಜಂಪುರ ಪರ್ವತರಾಯನ ಕೆರೆಯ ತೂಬಿನ ಹಿಂದೆ ಇದೆ. ಇದು ವಿಜಯನಗರ ಕಾಲದ ರಚನೆಯಾಗಿದ್ದು,  ಶ್ರೀಶಂಕರಲಿಂಗೇಶ್ವರ ದೇವಾಲಯವೆಂದು ಹೆಸರಿಸಲಾಗಿದೆ.

1913 ರಲ್ಲಿ ಮೇ ತಿಂಗಳ ಮೂವತ್ತರಂದು ಈ ಶಾಲೆಯು ಪ್ರಾರಂಭವಾಗಿ ಅಜ್ಜಂಪುರದಲ್ಲಿ ಹೆಣ್ಣುಮಕ್ಕಳಿಗೆ ಮೀಸಲಾಗಿದ್ದು ವಿಶೇಷ. ಅಲ್ಲದೆ ಶಾಸ್ತ್ರೀಯ ಸಂಗೀತ ಶಿಕ್ಷಣವನ್ನು ಆ ಕಾಲಕ್ಕೇ ಪ್ರಾರಂಭಿಸಿದ್ದು ಅಪರೂಪದ ಒಂದು ಘಟನೆಯೇ ಸರಿ.

ಅದಕ್ಕಾಗಿ 1939 ರಲ್ಲಿ ಮತ್ತೊಂದು ಕಟ್ಟಡವನ್ನು ಕಟ್ಟಿಸಿದರು.  ಅಂದು ಸಂಗೀತ ಕಲಿಸಿಕೊಡುತ್ತಿದ್ದವರು ಒಬ್ಬ ಅಂಧ ಶಿಕ್ಷಕರು. ನಂತರ ‌ನೇಮಕವಾದವರು ಒಬ್ಬರು ಅಂಧ ಶಿಕ್ಷಕರೇ. ಅವರು ಪಕೋಡ ಖ್ಯಾತಿಯ ಭಾಗಮ್ಮನವರ ಹಿರಿಯ ಮಗ. ಇತ್ತೀಚೆಗೆ ಇದ್ದವರು ಜೋಷಿ ಎಂಬ ಅಂಧ ಶಿಕ್ಷಕರು. ಅವರು ತೀರಿಹೋದ ನಂತರ ಸಂಗೀತ ಶಿಕ್ಷಕರ ನೇಮಕಾತಿ ಆಗಿಲ್ಲ. ಈ ಬಗ್ಗೆ ಪ್ರಯತ್ನಿಸುತ್ತಿರುವುದಾಗಿ ರೇವಣ್ಣನವರ ಮೊಮ್ಮಗ ಪಿ.ಎ.ಸ್ವಾಮಿನಾಥ್ ತಿಳಿಸಿದ್ದಾರೆ. ಹಿರಿಯರು ಪ್ರಾರಂಭಿಸಿದ ಈ 

ಶಾಲೆಯು ಸರ್ವತೋಮುಖ ಅಭಿವೃದ್ಧಿ ಹೊಂದಬೇಕೆಂದು ಪಿ. ಎ. ಸ್ವಾಮಿನಾಥ್ ಹಾಗೂ ಅವರ ಕಿರಿಯ ಸಹೋದರ ಪಿ.ಎ. ವಾಸುದೇವ ಪ್ರಯತ್ನಿಸುತ್ತಿದ್ದಾರೆ. ಇದೀಗ ಎಲ್.ಕೆ.ಜಿ. ಹಾಗೂ ಯು.ಕೆ.ಜಿ. ಶಿಕ್ಷಣವನ್ನು ಪ್ರಾರಂಭಿಸಿ ಯಶಸ್ವಿಯಾಗಿ ನಡೆಯುತ್ತಿದೆ. ವಾಸುದೇವ ಅವರು ಈ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ  ಸರ್ಕಾರದ ಸಮವಸ್ತ್ರಗಳಲ್ಲದೆ ಹೆಚ್ಚುವರಿಯಾಗಿ ಸಮವಸ್ತ್ರಗಳನ್ನು ಕೂಡ ವೈಯಕ್ತಿಕ ಖರ್ಚಿನಲ್ಲಿ ಕೊಡಿಸುತ್ತಾರೆ.
                   ‌   ‌‌‌‌      * * *
ಈಶ್ವರನ ಗುಡಿಗೂ ಪ್ರಸ್ತಾಪಿತ ಶಾಲಾ ಸಂಸ್ಥಾಪನೆಗೂ ನಿಕಟ ಸಂಬಂಧವಿದೆ. ಹಾಗಾಗಿ ಶಾಲೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಭಂಗಿ ರೇವಣ್ಣನವರ ದೂರದೃಷ್ಟಿ ಮತ್ತು ಉದಾರ ಮನೋಭಾವಗಳಿಂದ ದಿನಾಂಕ 30/5/1913 ರಲ್ಲಿ ಬಾಲಿಕಾ ಶಾಲೆ ಪ್ರಾರಂಭವಾಗಿದ್ದು ಸರಿಯಷ್ಟೆ. ಶಾಲೆಯ ಕಟ್ಟಡ ನಿರ್ಮಾಣಕ್ಕೆ ನೆಲವನ್ನು ಅಗೆಯುವಾಗ ಈಶ್ವರನ ಲಿಂಗ ಹಾಗೂ ಬಸವಣ್ಣ ಶಿಲ್ಪಗಳು ಸಿಕ್ಕವು. ಅವುಗಳನ್ನು ಅದೇ ವರ್ಷ ಮೇಲ್ಛಾವಣಿಯಿಲ್ಲದ ಗ್ರಾನೈಟ್ ಸೈಜುಗಲ್ಲುಗಳ ಗುಡಿಯನ್ನು ನಿರ್ಮಿಸಿ, ಈ ಶಿಲ್ಪಗಳನ್ನು ಪ್ರತಿಷ್ಠಾಪಿಸಲಾಯಿತು. ಈ ಗುಡಿ ಪ್ರಾರಂಭಿಸಿ ನೂರಾ ಹನ್ನೆರಡು ‌ವರ್ಷಗಳಾಗಿವೆ.

ಶಾಲಾ ಕಟ್ಟಡ ನಿರ್ಮಿತಿಗಾಗಿ ನಿವೇಶನದಲ್ಲಿ ಅಗೆದಾಗ ಸಿಕ್ಕ ಈಶ್ವರ ಲಿಂಗ, ಬಸವಣ್ಣ ಶಿಲ್ಪಗಳು ಮೃದುವಾದ ಬಳಪದ ಕಲ್ಲಿನವು. ಕಾಲಕ್ರಮೇಣ ಸವೆಯುತ್ತ ಬಂದವು. 

ಎಪ್ಪತ್ತರ ದಶಕದ ಪ್ರಾರಂಭದಲ್ಲಿ ಊರಿನ ಶಿವಾನಂದಾಶ್ರಮಕ್ಕೆ ಅಮೃತಶಿಲೆಯ ಎರಡು ಈಶ್ವರ ಲಿಂಗಗಳು ತರಿಸಿರುತ್ತಾರೆ. ಆಶ್ರಮದ ಸಂಸ್ಥಾಪಕ, ಗೀತಾ ಪ್ರಸಾರಕ್ಕೆ ಪ್ರಸಿದ್ಧರಾದ ಸ್ವಾಮಿ ಶಂಕರಾನಂದರ   ಸಮಾಧಿಯ ಮೇಲೆ ಒಂದು ಲಿಂಗವನ್ನು ಸ್ಥಾಪಿಸುತ್ತಾರೆ. ತದ್ರೂಪದ ಮತ್ತೊಂದು ಅಮೃತಶಿಲೆಯ ಈಶ್ವರ ಲಿಂಗವು ಉಳಿದಿರುವ ಸಾಧ್ಯತೆ ಇದೆ. 

ಪಟೇಲ್ ಗುಂಡಪ್ಪನವರು ಆಶ್ರಮಕ್ಕೆ ನಿಕಟವಾಗಿದ್ದವರು. ಅವರು ಭಂಗಿ ರೇವಣ್ಣನವರ ಮನೆಯವರಿಗೆ ಈ ವಿಷಯ ಪ್ರಸ್ತಾಪಿಸಿ, ಬಳಪದ ಶಿವಲಿಂಗವನ್ನು ತೆಗೆಯುವುದಾದರೆ ಆಶ್ರಮದಿಂದ ಅಮೃತಶಿಲೆಯ ಈಶ್ವರ ಲಿಂಗವನ್ನು ಕೊಡಿಸುವುದಾಗಿ ತಿಳಿಸುತ್ತಾರೆ. 

ಭಂಗಿ ರೇವಣ್ಣನವರ ಅಳಿಯ ಪಿ.ಎಸ್. ಅಡವಪ್ಪನವರು ಸತ್ಯಸಾಯಿ ಬಾಬಾರವರ ಪರಮಭಕ್ತರು. ಅವರು ಒಪ್ಪಿಗೆ ಸೂಚಿಸಿದರೂ ಪ್ರಾಚೀನ ಲಿಂಗವನ್ನು ಹೂತುಹಾಕಲು ಒಪ್ಪುವುದಿಲ್ಲ. ಪ್ರಾಚೀನ ಲಿಂಗದ ಮೇಲೆ ಪೀಠ ಸ್ಥಾಪಿಸಿ, ಅದರ ಮೇಲೆ ಅಮೃತಶಿಲೆಯ ಈಶ್ವರ ಲಿಂಗವನ್ನು ಸ್ಥಾಪಿಸಲು ಒಪ್ಪುತ್ತಾರೆ. ಆಶ್ರಮದಿಂದ ಅಮೃತಶಿಲೆಯ ಲಿಂಗವನ್ನು ಎತ್ತಿನ ಗಾಡಿಯ ಮೂಲಕ ಎನ್.ಟಿ.ಜಿ.ಎಂ.ಎಸ್. ಶಾಲೆಯ ಆವರಣಕ್ಕೆ ‌ಮೆರವಣಿಗೆಯಲ್ಲಿ ತರುತ್ತಾರೆ. ನಂತರ ‌ವಿಧ್ಯುಕ್ತವಾಗಿ ಪ್ರತಿಷ್ಠಾಪಿಸಲಾಯಿತು. ಅದೇ ಸಮಯಕ್ಕೆ ಸುಂದರವಾದ ಬಸವನ ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ. 

ಒಟ್ಟಾರೆ ಗುಡಿಯ ಸ್ಥಾಪನೆಯಾಗಿ ನೂರಾ ಹನ್ನೆರಡು ವರ್ಷಗಳಾಗಿವೆ. ಶಿಲ್ಪಗಳು, ಕಟ್ಟಡವೂ ನವೀಕೃತಗೊಂಡಿವೆ. 

ಇಲ್ಲಿ ನಿತ್ಯ ಬೆಳಗ್ಗೆ-ಸಂಜೆ ಎರಡೂ ಹೊತ್ತು ಪೂಜೆ ನಡೆಯುತ್ತದೆ. ಭಂಗಿ ವಂಶಸ್ಥರೇ ಈ ಪೂಜಾಕಾರ್ಯವನ್ನು ನಿರಂತರವಾಗಿ ಶ್ರದ್ಧಾಭಕ್ತಿಯಿಂದ ನೆರವೇರಿಸಿಕೊಂಡು ಬರುತ್ತಿದ್ದಾರೆ. ರೇವಣ್ಣನವರ ಮೊಮ್ಮಕ್ಕಳಾದ ಸ್ವಾಮಿನಾಥ್,  ವಾಸುದೇವ ಹಾಗೂ ಬಿ.ಆರ್.ವಿಶ್ವನಾಥ ಅವರ ಮನೆಯವರು ‌ಇಂದಿಗೂ ಯಾವುದೇ ಲೌಕಿಕ ಫಲಾಪೇಕ್ಷೆಯಿಲ್ಲದೆ ದೇಗುಲ ಮತ್ತು ‌ಶಾಲಾಭಿವೃದ್ಧಿಗಳಿಗಾಗಿ ಶ್ರಮಿಸುತ್ತಿದ್ದಾರೆ. 






    ‌‌‌  ‌  ‌‌‌ ‌         * * * * *

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

12. ಅಜ್ಜಂಪುರ ಗ್ರಾಮದೇವತೆ ಕಿರಾಳಮ್ಮ - ಐತಿಹ್ಯ - ಸ್ಥಳಪುರಾಣ - ಚರಿತ್ರೆ