01. ಅಂತರಜಾಲದಲ್ಲಿ ಅಜ್ಜಂಪುರ

ಅಜ್ಜಂಪುರದ ಆತ್ಮೀಯ ಬಂಧುಗಳೇ


ಇದು ನನ್ನ ಹೊಸ ಬ್ಲಾಗ್.

ದಶಕಗಳ ಹಿಂದೆ ತರೀಕೆರೆ ಅಂಚೆವಾರ್ತೆಯ ಸಂಪಾದಕ ಶ್ರೀ ಅಂಚೆ ನಾಗಭೂಷಣರನ್ನು ಭೇಟಿಮಾಡಿದ್ದಾಗ ಅವರೊಂದು ವಿಷಯ ಪ್ರಸ್ತಾಪಿಸಿದ್ದರು. ಅದು ನಾನು ಅಜ್ಜಂಪುರದ ಕೋಟೆ ಆಂಜನೇಯ ದೇವಾಲಯದ ಪುನರ್ ಪ್ರತಿಷ್ಠಾಪನೆಯ ಸಂದರ್ಭ. ಆಗ ನಾನು ಈ ದೇವಾಲಯ ಬೆಳೆದು ಬಂದ ಹಾದಿಯನ್ನು ಚಿತ್ರ ಮತ್ತು ಮಾಹಿತಿಗಳ ಸಹಿತವಾದ ಒಂದು ಗಣಕ ಪ್ರಾತ್ಯಕ್ಷಿಕೆಯನ್ನು ನೀಡಿದ್ದೆ. ಆ ಯತ್ನವನ್ನು ಗುರುತಿಸಿ, ಬೆಂಬಲಿಸಿ ಅಂಚೆ ನಾಗಭೂಷಣರು ಹೀಗೆ ಹೇಳಿದ್ದರು: "ಒಂದು ಊರಿನ ಇತಿಹಾಸವನ್ನು ದಾಖಲಿಸುವಲ್ಲಿ ಇಂತಹ ಪ್ರಯತ್ನಗಳು ಸ್ವಾಗತಾರ್ಹ. ಇದೇ ರೀತಿ ನೀವು ಅಜ್ಜಂಪುರದಲ್ಲಿ ಬಾಳಿ ಬದುಕಿದ ಹಿರಿಯರ ಚಿತ್ರ-ಮಾಹಿತಿಗಳನ್ನು ಒಂದೆಡೆ ಸಂಗ್ರಹಿಸುವಂತಾದರೆ ಅದಕ್ಕೆ ಮಹತ್ವ ಬರುತ್ತದೆ. ಈ ಕೆಲಸವನ್ನು ಸ್ಥಳೀಕರು ಮಾಡಿದಲ್ಲಿ ಅದಕ್ಕೆ ಹೆಚ್ಚಿನ ವಜನು ಬರುತ್ತದೆ". ಇದಲ್ಲದೆ ನಾನು ಸಂಪಾದಿಸುತ್ತಿರುವ ನಮ್ಮ ಕುಲದೇವತೆ ಶ್ರೀ ಕಾಲಭೈರವನ ಬ್ಲಾಗ್ (Link : kalabhiaravablogspot.com) ನಲ್ಲಿ ಅಜ್ಜಂಪುರದ ಹಿರಿಯರಾದ ಶ್ರೀ ಭೈರಾಭಟ್ಟರ ಭಾವಚಿತ್ರ ಸಹಿತ ಒಂದು ಲೇಖನವನ್ನು ಪ್ರಕಟಿಸಿದ್ದೆ. ಅದನ್ನು ನೋಡಿದ ನನ್ನ ಮಿತ್ರ ಅಜ್ಜಂಪುರ ಮಂಜುನಾಥ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಅಜ್ಜಂಪುರದ ನೆನಪಿನ ಮೆರವಣಿಗೆಯಿದು ಎಂಬ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು. ಇದು ಕೂಡ ಅಜ್ಜಂಪುರವನ್ನು ಅಂತರಜಾಲದಲ್ಲಿ ವಿನಿಮಯಿಸಿಕೊಳ್ಳುವ ಚಿಂತನೆಗೆ ಪ್ರೇರಕ.

    ಅಂದು ನೀಡಿದ ಸಲಹೆ ನನ್ನ ಮನಸ್ಸಿನಲ್ಲಿ ಹಾಗೆಯೇ ಉಳಿದಿತ್ತು. ಆದರೆ ಅದನ್ನು ಜಾರಿಗೊಳಿಸಲು, ಮುದ್ರಣ ಮಾಧ್ಯಮದಲ್ಲಿ ಚಿತ್ರ-ಮಾಹಿತಿಗಳನ್ನು ಹೊರತರುವುದೆಂದರೆ ಅದೊಂದು ಅಗಾಧ ಕಾರ್ಯ. ಏಕೆಂದರೆ ಒಂದು ಪುಸ್ತಕ ಹೊರಬರಲು ಏನೆಲ್ಲ ಶ್ರಮ, ಸಮಯ, ಹಣಗಳನ್ನು ವಿನಿಯೋಗಿಸಬೇಕೆಂಬುದು ಸರ್ವವಿದಿತ. ಮಾಹಿತಿಗಳನ್ನು ಸಂಗ್ರಹಿಸಲು ಹಲವಾರು ಜನರನ್ನು ಸಂಪರ್ಕಿಸಬೇಕು, ಆ ಮಾಹಿತಿಗಳನ್ನು ಕ್ರಮಬದ್ಧವಾಗಿ ಜೋಡಿಸಿ ಪ್ರಕಟಿಸಬೇಕು, ಅದಕ್ಕೆಂದು ಮಾಹಿತಿ ನೀಡುವವರು ತಮ್ಮ ಸಮಯ, ಹಣಗಳನ್ನು ವ್ಯಯಿಸಬೇಕು, ಹೀಗೆ ಅನೇಕ ಅಡೆತಡೆಗಳಿವೆ. ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯನ್ನು ಕುರಿತು ಹೊರತರುವ ಸಂಭಾವನಾ ಗ್ರಂಥ ಹೊರಬರಲು ಏನೆಲ್ಲ ಸಂಕಟಗಳಿವೆಯೂ ಅದಷ್ಟನ್ನೂ ಅನುಭವಿಸಬೇಕು. ಇಷ್ಟಾಗಿಯೂ, ಅಂಥ ಗ್ರಂಥಕ್ಕೆ ಒಂದು ಕಾಲಮಿತಿಯಂತೂ ಇರುತ್ತದೆಯಲ್ಲವೆ. ಅದನ್ನು ಕಾಲದಿಂದ ಕಾಲಕ್ಕೆ ಪುನರ್ನವೀಕರಿಸುವುದು ಆಗಲಾರದು.  ಆದರೆ ಈಗ ಬಳಕೆಯಲ್ಲಿರುವ ಬ್ಲಾಗ್ ವ್ಯವಸ್ಥೆ ಈ ಎಲ್ಲ ಕೊರತೆಗಳನ್ನೂ ನೀಗಿಸಬಲ್ಲದು. ಅದಕ್ಕೆಂದೇ ಈ ಯತ್ನ.

    ನಾನು ನನ್ನ ಅರಿವಿಗೆ ಬಾರದಂತೆ ಮಾಡಿದ ಒಂದು ಚಿಕ್ಕ ಪ್ರಯತ್ನ ಈಗ ಉಪಯೋಗಕ್ಕೆ ಬರುತ್ತಿದೆ. ಅದೆಂದರೆ ನಾನು ಊರಿಗೆ ಭೇಟಿ ನೀಡಿದಾಗಲೆಲ್ಲ, ನನ್ನ ಸಂಬಂಧಿಗಳು, ಪರಿಚಯದವರ ಮನೆಗಳಿಗೆ ಹೋದಾಗ, ಅವರ ಹಿರಿಯರ ಭಾವಚಿತ್ರಗಳನ್ನು ತೆಗದುಕೊಂಡು ಬಂದು ಸಂಗ್ರಹಿಸಿದೆ.  ಹಾಗೆ ಸಂಗ್ರಹವಾದ ಚಿತ್ರಗಳಲ್ಲಿ ಇರುವ ಅನೇಕ ಮಂದಿ ಇಂದು ನಮ್ಮೊಡನೆ ಇಲ್ಲ. ಆದರೆ ಅವರೊಂದಿಗೆ ಕಳೆದ ಕಾಲ, ಅವರಾಡಿದ ಮಾತುಗಳು, ಅವರ ಹಾವಭಾವಗಳು, ಭಂಗಿಗಳು ನಮ್ಮ ಮನದಲ್ಲಿ ಉಳಿದಿರುತ್ತವೆ. ಅವರ ಚಿತ್ರಗಳನ್ನು ಆಗೀಗ ಕಂಪ್ಯೂಟರ್ ನಲ್ಲಿ ನೋಡುವಾಗ ಕಾಲ ಹಿಂದಕ್ಕೆ ಹೋಗುತ್ತದೆ, ಹಳೆಯದೆಲ್ಲ ನೆನಪಾಗುತ್ತದೆ. ಇದು ನಿಮ್ಮ ಅನುಭವ ಕೂಡ! ಇದೇ ಸಂಗತಿಗಳು ಊರಿನ ಬೆಳವಣಿಗೆಗೂ ಅನ್ವಯಿಸುತ್ತದೆ. ನನ್ನ ಊರು ನಾನು ನಾಲ್ಕು ದಶಕಗಳ ಹಿಂದೆ ಅಲ್ಲಿದ್ದಾಗ ಇದ್ದಂತೆ ಈಗಿಲ್ಲ. ಅದು ಸ್ವಾಭಾವಿಕ ಕೂಡ. ಅನೇಕ ಬೆಳವಣಿಗೆಗಳಾಗಿವೆ. ಅದು ಭೌಗೋಳಿಕವಾಗಿ ಬೆಳೆದಿದೆ. ನಾವು ಓದಿದ ಶಾಲೆಗಳು ಹಾಗೆಯೇ ಇವೆ. ಕಲಾ ಸೇವಾ ಸಂಘದಂಥ ಸಂಸ್ಥೆಗಳು ಇನ್ನೂ ಇವೆ. ಹೀಗೆ ಊರಿನ ಬಗ್ಗೆಯೂ ಮೆಲುಕುಹಾಕುವಂಥ ಅನೇಕ ಸಂಗತಿಗಳಿವೆ. ನಾನು ಗಮನಿಸಿದಂತೆ ಅನೇಕರು ತಮ್ಮ ಅನುಭವಗಳನ್ನು, ನೆನಪುಗಳನ್ನು ಕಂಪ್ಯೂಟರಿನ ಹಲವು ಅನುಕೂಲಗಳನ್ನು ಬಳಸಿ ದಾಖಲಿಸಿರುವುದನ್ನು ನೋಡಿರುವೆ. 

    ಇದೆಲ್ಲವನ್ನೂ ಒಂದೆಡೆ ದಾಖಲಿಸುವ, ಹಂಚಿಕೊಳ್ಳುವ ಸದಾಶಯದಿಂದ ಈ ಬ್ಲಾಗ್‌ನ್ನು ಆರಂಭಿಸಲಾಗಿದೆ. ಅನೇಕರಿಗೆ ಈ ಆಲೋಚನೆ ಬಂದಿರಬಹುದು. ಅದನ್ನು ಸರಿಯಾಗಿ ಕಾರ್ಯಗತಮಾಡುವ ವ್ಯವಧಾನ, ಅವಕಾಶಗಳು ಇಲ್ಲದಿರಬಹುದು. ಆಸಕ್ತರು ತಮ್ಮಲ್ಲಿರುವ ಮಾಹಿತಿಗಳನ್ನು, ಚಿತ್ರಗಳನ್ನು ಈ ಬ್ಲಾಗ್ ವಿಳಾಸಕ್ಕೆ ಕಳುಹಿಸುವ ಮೂಲಕ ತಮ್ಮ ಬರಹ, ಅನುಭವಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿ ಈ ಬ್ಲಾಗನ್ನು ಬಳಸಿಕೊಳ್ಳಬಹುದು.

    ಸದ್ಯಕ್ಕೆ ನನಗೆ ಪರಿಚಿತರಿರುವ ಮತ್ತು ಈ-ಮೇಲ್ ವಿಳಾಸ ಲಭ್ಯವಿರುವ ಮಂದಿಗೆ ಈ ಆರಂಭಿಕ ಲೇಖನದ ಪ್ರತಿಯನ್ನು ಕಳಿಸುತ್ತಿರುವೆ. ಅವರು ಇದರ ಕೊಂಡಿಯನ್ನು ತಮಗೆ ಪರಿಚಿತರಿರುವ, ಜಗತ್ತಿನ ವಿವಿಧ ದೇಶಗಳಲ್ಲಿ ವಾಸಿಸುತ್ತಿರುವ ನಮ್ಮ ಊರಿನ ಮಂದಿಗೆ ವರ್ಗಾಯಿಸುವ ಮೂಲಕ ಹೆಚ್ಚು ಜನರಿಗೆ ತಲುಪಿಸಬಹುದು. 

    ನಮ್ಮೂರಿನ ಜನರ ಸಾಧನೆ ಜಗತ್ತಿಗೆ ಪರಿಚಯವಾಗಲಿ! ಈ ಮೂಲಕ ಕನ್ನಡದಲ್ಲಿ ಜನ ನಮ್ಮನ್ನು ಅರಿಯುವಂತಾಗಲಿ!



ಕಾಮೆಂಟ್‌ಗಳು

  1. ಪ್ರೀತಿಯ ದತ್ತಶಂಕರ,

    ಅಜ್ಜಂಪುರ ಕುರಿತ ಒಂದು ಬ್ಲಾಗ್ ಮಾಡಿದ್ದು ನಿಜಕ್ಕೂ ಅಭಿನಂದನೀಯ. ತುಂಬ ವಿಷಯಗಳಿವೆ. ಎಲ್ಲವೂ ಒಂದೆಡೆ ಅಂತರಜಾಲದಲ್ಲಿ ದೊರೆಯುವಂತಹುದು ಒಳ್ಳೆಯದು.

    ೨. ನಿನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡುವಾಗ ಹೇಳಿದಂತೆ, ನಮ್ಮ ಊರಿನ ಬಗೆಗೆ, ಒಂದು ಮಿಥ್ಯೆಯಿದೆ. ಮೊದಲು ಅದರ ನಿವಾರಣೆಯಾಗಬೇಕು. ೧೯೨೦ ರ ದಶಕದಲ್ಲಿ ಅಂದಿನ ಬ್ರಿಟಿಷ್ ಸರ್ಕಾರದವರು ಎಲ್ಲ ಜಿಲ್ಲೆಗಳ Gazetteer (ಇದನ್ನು ಭೂವಿವರಕೋಶ ಅಥವಾ ದೇಶವಿಷಯಕೋಶ ಎನ್ನಬಹುದು) ಮುದ್ರಿಸಿದ್ದರು. ನಮ್ಮ ಜಿಲ್ಲೆ ಆಗ ಕಡೂರು ಜಿಲ್ಲೆ. ಅದರಲ್ಲಿ ಅನೇಕ ಸ್ವಾರಸ್ಯಪೂರ್ಣವಾದ ವಿವರಗಳಿದ್ದವು. ಅದನ್ನು ನಾನು ದಾವಣಗೆರೆಯ ನಮ್ಮ ಕಾಲೇಜಿನ ಗ್ರಂಥಾಲಯದಲ್ಲಿ ನೋಡಿ ಅಲ್ಲಿನ ವಿವರಗಳನ್ನು ಬರೆದುಕೊಂಡು ಬಂದಿದ್ದೆ. ಅದನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿ ಹಲವಾರು ಜನ ಗೆಳೆಯರೊಂದಿಗೆ ಹಂಚಿಕೊಂಡಿದ್ದೆ. ಅದು ೧೯೬೭ ನೆಯ ಇಸವಿಯ ಮಾತು. ಅಲ್ಲಿ ನಮ್ಮ ಊರಿನ ಹೆಸರಿನ ಕುರಿತಾದ ಒಂದು ಐತಿಹ್ಯವಿದೆ. ಶಿರಾದ ನವಾಬನ ಒಬ್ಬ ಬಂಟ ಅಜೀಂಖಾನನೆಂಬವನು, ಈಗ ನಮ್ಮ ಊರು ಇರುವ ಪ್ರದೇಶದ ಕಾಡಿನಲ್ಲಿ ಬೇಟೆ ಆಡುವಾಗ ಅವನ ಬೇಟೆ ನಾಯಿಗಳನ್ನು, ಇಲ್ಲಿನ ಕಾಡಿನ ಮೊಲಗಳು ಅಟ್ಟಿಸಿಕೊಂಡು ಹೋದುವಂತೆ, ಬೆದರಿಸಿ ಓಡಿಸಿದುವಂತೆ. ಇದು ವೀರಭೂಮಿ ಎಂದು ಅಜೀಂಖಾನನು ಇಲ್ಲಿ ಕೋಟೆಯೊಂದನ್ನು ಕಟ್ಟಿಸಿದನಂತೆ, ಇತ್ಯಾದಿ, ಇತ್ಯಾದಿ. ಇಂತಹ ಕತೆಗಳು ಯಾವಾಗಲೂ ಮಸಾಲೆಯ ರುಚಿಯುಳ್ಳವು. ಈಗ ಒಂದೆರಡು ದಶಕಗಳ ಹಿಂದೆ, ಇತ್ತೀಚೆಗೆ ಕರ್ನಾಟಕ ಸರ್ಕಾರವು ಮುದ್ರಿಸಿದ ಇಂತಹ ದೇಶ ವಿಷಯಕೋಶಗಳನ್ನು ಪರಾಮರ್ಶಿಸಿದಾಗ, ಈ ಮೊಲ - ಬೇಟೆನಾಯಿ - ಅಜೀಂಖಾನನ ಕತೆಯಿರಲಿಲ್ಲ. ಇದನ್ನು ನನ್ನ ಗೆಳೆಯ - ಚಿಂತಕ - ಲೇಖಕ ಅಪೂರ್ವ (ಜಿ.ಬಿ.ಅಪ್ಪಾಜಿ) ಅವರೊಂದಿಗೆ ಚರ್ಚಿಸಿದಾಗ ಅವರು, ಇಂತಹ ತಲೆಬುಡವಿಲ್ಲದ ಕಗ್ಗಗಳ ಬಗ್ಗೆ ಅಮೂಲ್ಯವಾದ ವಿಚಾರಗಳನ್ನು ಹೇಳಿದರು. ಬೀರೂರಿನ ಶಾಸನತಜ್ಞ ಇಸ್ಮಾಯಿಲ್ ಅವರನ್ನು ನನಗೆ ಪರಿಚಯಿಸಿದರು.

    ೩. ಇಸ್ಮಾಯಿಲ್ ಅವರ ವಿಶ್ಲೇಷಣೆ ಚೆನ್ನಾಗಿದೆ. ಅಜ್ಜಂಪುರವು ಮೂಲತಃ "ಆರ್ಯಪುರ" ಆಗಿರಬೇಕು. ಆರ್ಯ ಎನ್ನುವ ಸಂಸ್ಕೃತ ಪದದ ತದ್ಭವ "ಅಜ್ಜ". ಆರ್ಯಪುರವೇ ಅಜ್ಜಂಪುರ ಆಗಿರಬೇಕು. ಅಜೀಂಖಾನನ ಕತೆ ಪೂರಾ ನಂಬಲನರ್ಹವಾದ ಕಗ್ಗ. ಅಪೂರ್ವ ಅವರು ಅಭಿಪ್ರಾಯ ಪಡುವಂತೆ, ವಿಜಯನಗರ ಮೊದಲುಗೊಂಡು, ಇಂತಹ ’ಮೊಲಗಳೇ ಬೇಟೆನಾಯಿಗಳನ್ನು ಓಡಿಸಿಕೊಂಡು ಹೋದ ಕತೆಗಳು’ ಬರಿಯ ಬುರುಡೆಗಳೇ ಸರಿ.

    ೪. ನನಗೂ ಈ ವಿಶ್ಲೇಷಣೆ ಸೂಕ್ತವೆನಿಸಿತು. ಹಾಗೆಂದೇ, ಇಂದು ಲಭ್ಯವಿರುವ ಈ Gazetteerಗಳಲ್ಲಿ ಇಂತಹ ಕಗ್ಗಗಳನ್ನು ಕೈಬಿಟ್ಟಿದ್ದಾರೆ. ನಮ್ಮ ಊರಿನ ಬಳಿ ಹೊಯ್ಸಳರ - ವಿಜಯನಗರದ ಅರಸರ ಅನೇಕ ದೇವಾಲಯಗಳಿವೆ, ಕೆರೆಗಳಿವೆ. ಆಸಂದಿಯು ಹನ್ನೆರಡು ಶತಮಾನಗಳ ಹಿಂದೆ ಗಂಗರ ರಾಜಧಾನಿಯಾಗಿತ್ತು. ಅಂದಿನ ರಾಜ ವಿನಯಾದಿತ್ಯನು ತುಂಬ ಹೆಸರು ಮಾಡಿದ ರಾಜ. ಆ ಕಾಲದ ದೇವಾಲಯಗಳು ಶಿಥಿಲವಾಗಿದ್ದರೂ, ಇಂದಿಗೂ ಉಳಿದುಕೊಂಡಿವೆ. ಬುಕ್ಕಾಂಬುಧಿಯಂತೂ ವಿಜಯನಗರದ ಸ್ಥಾಪಕರಾದ ಹಕ್ಕ - ಬುಕ್ಕರಲ್ಲೊಬ್ಬನಾದ ಬುಕ್ಕರಾಯ ನಿರ್ಮಿಸಿದ ಕೆರೆಯಿಂದ ಖ್ಯಾತವಾಗಿದೆ. ಅಂದಿನ ಕಾಲದ ದೇವಾಲಯವೂ ಇದೆ. ಏಳೆಂಟು ಶತಮಾನಗಳ ಹಿಂದಿನ ಸುವಿಖ್ಯಾತ ಅಮೃತಾಪುರದ ದೇವಾಲಯವೂ ಸುಸ್ಥಿತಿಯಲ್ಲಿದೆ. ಇನ್ನು ಬೇರೆ ಬೇರೆ ಅರಸರ ನಿರ್ಮಾಣದ ಹಿರೇನಲ್ಲೂರು - ಬಗ್ಗವಳ್ಳಿ - ಸೊಲ್ಲಾಪುರಗಳಲ್ಲಿ ಅನೇಕ ಪ್ರಮುಖ ದೇವಾಲಯಗಳಿವೆ. ಶತಶತಮಾನಗಳ ಕಾಲದ ಈ ದೇವಾಲಯಗಳು ಶಿಥಿಲವಾಗಿದ್ದರೂ, ಅವು ಯಾವುವೂ ಆಕ್ರಮಣಕಾರಿಗಳಿಂದ ನಾಶವಾಗಿಲ್ಲ ಮತ್ತು ಪೂಜಾವಿಗ್ರಹಗಳು ಭಗ್ನಗೊಂಡಿಲ್ಲ ಎನ್ನುವುದು ಮಹತ್ತ್ವದ ಸಂಗತಿಯಾಗಿದೆ. ಮುಸ್ಲಿಂ ಆಕ್ರಮಣಕಾರಿಗಳಿಗೆ ಸಿಕ್ಕ ಹಳೇಬೀಡು, ವಿಜಯನಗರ ಮುಂತಾದ ಸಾಮ್ರಾಜ್ಯಗಳ ನಿರ್ಮಾಣದ ದೇವಾಲಯಗಳು - ಪೂಜಾವಿಗ್ರಹಗಳು ಭಗ್ನಗೊಂಡಿರುವುದು ನಮಗೆ ಗೊತ್ತೇ ಇದೆ. ಈ ಹಿನ್ನೆಲೆಯಲ್ಲಿ, ಅಜ್ಜಂಪುರದ ಸನಿಹದ (ವಿವಿಧ ಶತಮಾನಗಳಲ್ಲಿ ನಿರ್ಮಿತವಾದ) ದೇವಾಲಯಗಳು - ಪೂಜಾ ವಿಗ್ರಹಗಳು ಭಗ್ನಗೊಳ್ಳದೇ ಇರುವುದನ್ನು ಗಮನಿಸಿದರೆ, ಇಲ್ಲಿ ಯಾವ ಮುಸ್ಲಿಂ ಸುಲ್ತಾನ - ನವಾಬರೂ ಆಳಿಲ್ಲ ಎಂಬುದನ್ನು ಸುಲಭವಾಗಿ ಊಹಿಸಬಹುದು. ಮೂಲತಃ ಅಜ್ಜಂಪುರವು, ಆರ್ಯಪುರವೇ ಎಂಬುದನ್ನು ನಾವಿಲ್ಲಿ ಪರಿಗಣಿಸಬಹುದು.

    ಪ್ರತ್ಯುತ್ತರಅಳಿಸಿ
  2. ಪ್ರೀತಿಯ ದತ್ತಶಂಕರ,

    ಇನ್ನೊಂದು ಮಾತು :

    ಈ ಬ್ಲಾಗ್ ಹೆಸರನ್ನು "ಅಂತರ್ಜಾಲದಲ್ಲಿ ಅಜ್ಜಂಪುರ" ಎಂಬುದರ ಬದಲು, "ಅಂತರಜಾಲದಲ್ಲಿ ಅಜ್ಜಂಪುರ" ಎಂದು ಬದಲಿಸಬಹುದು.

    ಕಂಪ್ಯೂಟರ್‌ಗಳಲ್ಲಿ ಕನ್ನಡ ಭಾಷೆಯನ್ನು ಅನುಷ್ಠಾನಗೊಳಿಸುವ ಸಾಹಸಪೂರ್ಣ ಕಾರ್ಯದಲ್ಲಿ "ಕನ್ನಡ ಗಣಕ ಪರಿಷತ್ತು" ಬಹು ದೊಡ್ಡ ಕಾಣಿಕೆ ನೀಡಿದೆ. ಅದರ ರೂವಾರಿಗಳಾದ ಚಿ| ವಿ| ಶ್ರೀನಾಥ ಶಾಸ್ತ್ರಿಗಳು ಮತ್ತು ಜಿ.ಎನ್.ನರಸಿಂಹಮೂರ್ತಿಗಳು ವಿದ್ವಾಂಸರು, ಪ್ರತಿಭಾವಂತರು. ಕೆಲವು ವರ್ಷಗಳ ಹಿಂದೆ ಅವರೊಂದಿಗೆ ಅನುವಾದ - ಪದಸಾಮ್ಯಗಳ ಬಗ್ಗೆ ಚರ್ಚಿಸಿದಾಗ, ಇಂಗ್ಲಿಷ್‌ನ INTRANET ಶಬ್ದಕ್ಕೆ "ಅಂತರ್ಜಾಲ" ಎಂಬುದಾಗಿಯೂ, INTERNET ಶಬ್ದಕ್ಕೆ "ಅಂತರಜಾಲ" ಎಂಬುದಾಗಿಯೂ ಸೂಚಿಸಿದರು. ಅದು ಬಳಕೆಗೂ ಬಂದಿದೆ. ಈ ಹಿನ್ನೆಲೆಯಲ್ಲಿ, ಈ ಬ್ಲಾಗ್ ಹೆಸರನ್ನು "ಅಂತರಜಾಲದಲ್ಲಿ ಅಜ್ಜಂಪುರ", ಎಂದು ಪುನರ್ನಾಮಕರಣ ಮಾಡಬಹುದು.

    ಪ್ರತ್ಯುತ್ತರಅಳಿಸಿ
  3. ಪ್ರತಿಕ್ರಿಯೆಗಳು, ಪ್ರತಿಸ್ಪಂದನಗಳು ಚೇತೋಹಾರಿಯಾಗಿವೆ.

    ಪ್ರತ್ಯುತ್ತರಅಳಿಸಿ
  4. Namma oorina pramukaru lekanagalu chennagi bandive
    ark yaavara bagge innashtu bareyabahudaagittu, photogalu blognalli mudibandilla, font size chikkadaagide, BRH Kannada font-12 upyOgisuvudu olleyadu, nanna computernalli yella lekanagalu mudibandive, sports teacher Jabbarravarannu samparkisidalli, ajjampurada school bagge vivira mattu photogalu doreyabahudu. haage school nalli clerk agidda shastrigala bagge, hotel ownerns bank nalli kelasa maaduttiruva avara tamma nalli vivira matun photo doreyuttade. M.S.Ramarao ravaranny samparkisidare namma oorinabagge hecchina maahiti sigabahuru

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.