04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

ಅಜ್ಜಂಪುರದ ಇತಿಹಾಸದಲ್ಲಿ ಯಾರೂ ಮರೆಯಲಾರದ, ಮರೆಯಬಾರದ ಹೆಸರೆಂದರೆ ಶ್ರೀ ಸುಬ್ರಹ್ಮಣ್ಯ ಶೆಟ್ಟರದು.ಶ್ರೀಯುತ ಎಸ್. ಸುಬ್ರಹ್ಮಣ್ಯ ಶೆಟ್ಟರು ಹುಟ್ಟಿದ್ದು 2.2.1910. ಕಳೆದ ವರ್ಷವೇ ಅವರ ಶತಮಾನೋತ್ಸವ ವರ್ಷ ಆಚರಿಸಲ್ಪಟ್ಟಿತು. ಅವರು ನಿಧನರಾದುದು 12.06.1973 ರಂದು. ಕುಳ್ಳು ಆಕೃತಿ, ಸದಾ ಖಾದಿಧಾರಿ, ತಲೆಯ ಮೇಲೊಂದು ಗಾಂಧಿ ಟೋಪಿ. ಮರೆಯಲಾಗದ ಮಂದಹಾಸ. ಸದಾ ಚಟುವಟಿಕೆಯ, ಸಾಮಾಜಿಕ ಚಿಂತನೆಯ ಕಳಕಳಿಯುಳ್ಳ ಅವರಂಥ ಹಿರಿಯರು ಸರ್ವದಾ ಸ್ಮರಣೀಯರು. ವರ್ತಕರಾಗಿ, ಸಮಾಜ ಸುಧಾರಕರಾಗಿ, ನೈತಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದ ಅವರ ಜೀವನ ತೆರೆದಿಟ್ಟ ಪುಸ್ತಕದಂತಿತ್ತು. ಅಜ್ಜಂಪುರದ ಸಾರ್ವಜನಿಕ ಜೀವನದಲ್ಲಿ ತಾವು ನಂಬಿದ ಮೌಲ್ಯಗಳನ್ನು ಯಾವ ಅಬ್ಬರ-ಆವುಟಗಳಿಲ್ಲದೆ ಜನರಲ್ಲಿ ಬಿತ್ತಿಹೋದ ಅವರ ಶತಮಾನೋತ್ಸವದ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ಶೆಟ್ಟರನ್ನು ಗೆಳೆಯ ಮಂಜುನಾಥ ಅಜ್ಜಂಪುರ ನೆನಪಿಸಿಕೊಂಡಿದ್ದಾರೆ. ಅವರ ಬರಹ ಇಲ್ಲಿದೆ, ನಿಮಗಾಗಿ. ನಾವೆಲ್ಲ ಚಿಕ್ಕವರಿದ್ದಾಗ, ನಾವು ಯಾವ ಊರಿಗೇ ಹೋಗಲಿ, ಅಜ್ಜಂಪುರ ಎಂದೊಡನೆ, ಜನ ಶಿವಾನಂದಾಶ್ರಮವನ್ನು, ಕಲಾ ಸೇವಾ ಸಂಘವನ್ನು, ಸುಬ್ರಹ್ಮಣ್ಯ ಶೆಟ್ಟರನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಶೆಟ್ಟರ ವ್ಯಕ್ತಿತ್ವವೇ ಅಂಥದು. ಊರಿನ ಜನಸಂಖ್ಯೆಯಲ್ಲಿ ಒಂದೆರಡು ಶತಾಂಶಗಳ ಪ್ರಾತಿನಿಧ್ಯವೂ ಇರದ, ಇಂದಿನ ಪರಿಭಾಷೆಯಲ್ಲಿ ಮೈನಾರಿಟಿ ಕಮ್ಯುನಿಟಿ ಎನ್ನಬಹುದಾದ ವ್ಯಾಪಾರಿ ಸಮುದಾಯದಲ್ಲಿ ಹ...