ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

ಅಜ್ಜಂಪುರದ ಇತಿಹಾಸದಲ್ಲಿ ಯಾರೂ ಮರೆಯಲಾರದ, ಮರೆಯಬಾರದ ಹೆಸರೆಂದರೆ ಶ್ರೀ ಸುಬ್ರಹ್ಮಣ್ಯ ಶೆಟ್ಟರದು.ಶ್ರೀಯುತ ಎಸ್. ಸುಬ್ರಹ್ಮಣ್ಯ ಶೆಟ್ಟರು ಹುಟ್ಟಿದ್ದು 2.2.1910. ಕಳೆದ ವರ್ಷವೇ ಅವರ ಶತಮಾನೋತ್ಸವ ವರ್ಷ ಆಚರಿಸಲ್ಪಟ್ಟಿತು. ಅವರು ನಿಧನರಾದುದು 12.06.1973 ರಂದು. ಕುಳ್ಳು ಆಕೃತಿ, ಸದಾ ಖಾದಿಧಾರಿ, ತಲೆಯ ಮೇಲೊಂದು ಗಾಂಧಿ ಟೋಪಿ. ಮರೆಯಲಾಗದ ಮಂದಹಾಸ. ಸದಾ ಚಟುವಟಿಕೆಯ, ಸಾಮಾಜಿಕ ಚಿಂತನೆಯ ಕಳಕಳಿಯುಳ್ಳ ಅವರಂಥ ಹಿರಿಯರು ಸರ್ವದಾ ಸ್ಮರಣೀಯರು. ವರ್ತಕರಾಗಿ, ಸಮಾಜ ಸುಧಾರಕರಾಗಿ, ನೈತಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದ ಅವರ ಜೀವನ ತೆರೆದಿಟ್ಟ ಪುಸ್ತಕದಂತಿತ್ತು. ಅಜ್ಜಂಪುರದ ಸಾರ್ವಜನಿಕ ಜೀವನದಲ್ಲಿ ತಾವು ನಂಬಿದ ಮೌಲ್ಯಗಳನ್ನು ಯಾವ ಅಬ್ಬರ-ಆವುಟಗಳಿಲ್ಲದೆ ಜನರಲ್ಲಿ ಬಿತ್ತಿಹೋದ ಅವರ ಶತಮಾನೋತ್ಸವದ ಸಂದರ್ಭದಲ್ಲಿ  ಶ್ರೀ ಸುಬ್ರಹ್ಮಣ್ಯ ಶೆಟ್ಟರನ್ನು ಗೆಳೆಯ ಮಂಜುನಾಥ ಅಜ್ಜಂಪುರ ನೆನಪಿಸಿಕೊಂಡಿದ್ದಾರೆ. ಅವರ ಬರಹ ಇಲ್ಲಿದೆ, ನಿಮಗಾಗಿ.
ನಾವೆಲ್ಲ ಚಿಕ್ಕವರಿದ್ದಾಗ, ನಾವು ಯಾವ ಊರಿಗೇ ಹೋಗಲಿ, ಅಜ್ಜಂಪುರ ಎಂದೊಡನೆ, ಜನ ಶಿವಾನಂದಾಶ್ರಮವನ್ನು, ಕಲಾ ಸೇವಾ ಸಂಘವನ್ನು, ಸುಬ್ರಹ್ಮಣ್ಯ ಶೆಟ್ಟರನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಶೆಟ್ಟರ ವ್ಯಕ್ತಿತ್ವವೇ ಅಂಥದು. ಊರಿನ ಜನಸಂಖ್ಯೆಯಲ್ಲಿ ಒಂದೆರಡು ಶತಾಂಶಗಳ ಪ್ರಾತಿನಿಧ್ಯವೂ ಇರದ, ಇಂದಿನ ಪರಿಭಾಷೆಯಲ್ಲಿ ಮೈನಾರಿಟಿ ಕಮ್ಯುನಿಟಿ ಎನ್ನಬಹುದಾದ ವ್ಯಾಪಾರಿ ಸಮುದಾಯದಲ್ಲಿ ಹುಟ್ಟಿದ ಸುಬ್ರಹ್ಮಣ್ಯ ಶೆಟ್ಟರು ಹೆಚ್ಚು ಓದಲು ಸಾಧ್ಯವಾಗಲಿಲ್ಲ. ಅಂದಿನ ಎಲ್.ಎಸ್. ಪರೀಕ್ಷೆ (ಎಂಟನೇ ತರಗತಿ) ಸಹ ಓದಲಾಗಲಿಲ್ಲ.
ಕರ್ತೃತ್ವ ಶಕ್ತಿಗೂ, ಶಿಕ್ಷಣಕ್ಕೂ ಏನು ಸಂಬಂಧ ಎನ್ನುವಂತಿದ್ದರು ಶೆಟ್ಟರು. ಬಡತನದ ಹಿನ್ನೆಲೆಯ ಅವರು ಬಹಳ ದೊಡ್ಡ ವ್ಯಾಪಾರಿಯಾದರು, ದೊಡ್ಡ ದಿನಸಿ ಅಂಗಡಿ, ಹಿಟ್ಟಿನ ಗಿರಣಿ, ಗದ್ದೆ, ತೋಟ, ಆಲೆಮನೆ, ಪ್ರಿಂಟಿಂಗ್ ಪ್ರೆಸ್ ಇತ್ಯಾದಿ ಪ್ರಾರಂಭಿಸಿದರು. ಯಶಸ್ಸನ್ನೂ ಪಡೆದರು. ಇವುಗಳ ನಡುವೆಯೇ ಸ್ವಾತಂತ್ರ್ಯ ಹೋರಾಟ, ರಾಜಕಾರಣಗಳನ್ನೂ ಮಾಡಿದುದು ವಿಶೇಷ. ಮೂವತ್ತು-ನಲವತ್ತರ ದಶಕದಲ್ಲಿ ಮಹಾತ್ಮಾ ಗಾಂಧೀಜಿಯ ಪ್ರಭಾವ ಹೆಚ್ಚು, ಅಂತೆಯೇ ಸುಬ್ರಹ್ಮಣ್ಯ ಶೆಟ್ಟರು ಗಾಂಧೀ ಪ್ರಣೀತ ಬಹು ಆಯಾಮಗಳ ಸಾಮಾಜಿಕ ಆಂದೋಲನ ಆರಂಭಿಸಿದರು. ಖಾದಿ ಪ್ರಚಾರ ಮಾಡಿದರು, ಸ್ವತಃ ಜೀವಮಾನವಿಡೀ ಅವರು ಖಾದಿಯನ್ನೇ ಧರಿಸಿದರು, ಶೆಟ್ಟರ ಮನೆಯವರು, ಬಂಧುಗಳು, ಮಿತ್ರಸಂಕುಲ ಎಲ್ಲರೂ ಖಾದೀಧಾರಿಗಳಾದರು. ಅಂದಿನ ಗುಲಾಮಗಿರಿಯ, ಅಂಧಕಾರದ ಕಾಲಘಟ್ಟದಲ್ಲಿ, ನಮ್ಮೂರಿನ ಸುತ್ತಮುತ್ತ ಸಾವಿರಾರು ಹಳ್ಳಿಗರಿಗೆ ಖಾದಿಯನ್ನು ನೂಲವುದು, ನೇಯುವುದು ಜೀವನೋಪಾಯವಾಯಿತು, ಅನ್ನ ನೀಡಿತು. ಕತ್ತಲು ತುಂಬಿದ ಗುಡಿಸಲುಗಳಲ್ಲಿ ದೀಪ ಬೆಳಗಿತು, ಒಲೆ ಉರಿಯಿತು.


ಇಂದು ಸೆಕ್ಯುಲರ್ ಪದವನ್ನು ಜನರು ತುಂಬ ಬಳಸುತ್ತಿದ್ದಾರೆ. ಈ ಪದದೊಂದಿಗೆ ನನಗೆ ನಮ್ಮೂರಿನ ಮಟ್ಟಿಗೆಂದರೆ ನೆನಪಾಗುವುದು ಸುಬ್ರಹ್ಮಣ್ಯ ಶೆಟ್ಟರು ಮಾತ್ರವೇ. ಏಕೆಂದರೆ ಅವರು ಅಜ್ಜಂಪುರದ ಸಮಸ್ತ ಸಮುದಾಯಗಳ, ಮತಗಳ ನಾಯಕರನ್ನು-ಹಿರಿಯರನ್ನು ಕರೆದು ಕರೆದು ಚಳವಳಿ ಮಾಡಿದರು, ಪ್ರತಿ ಸಮುದಾಯದಲ್ಲೂ ನಾಯಕರನ್ನು ಬೆಳೆಸಿದರು. ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಿದ ರಾಜಕೀಯ ಅವರದು. ಜಾತ್ಯತೀತವಾದದ ನೈಜ ಪ್ರತಿರೂಪವೆಂಬಂತೆ ಇದ್ದುದಕ್ಕೆ ಅವರು ಬೆಳೆಸಿದ ನಮ್ಮೂರಿನ ವಿವಿಧ ಜನಾಂಗದ ನಾಯಕರ ಪಡೆಯೇ ಸಾಕ್ಷಿ. ಸ್ವಾತಂತ್ರ್ಯ ಚಳವಳದಲ್ಲಿ ಅಂಥ ಮೌಲ್ಯಗಳು ಜೀವಂತವಾಗಿದ್ದವು. ಇಂಥ ಒಂದು ಚಳವಳಿಯಲ್ಲಿ ಸರಕಾರವು ಸುಬ್ರಹ್ಮಣ್ಯ ಶೆಟ್ಟರು ಮತ್ತು ಅವರ ಸಹವರ್ತಿಗಳನ್ನು ಬಂಧಿಸಿ ಜೈಲಿಗೆ ಹಾಕಿತು. ಶೆಟ್ಟರ ಮೊದಲ ಮಗ ಮೋಹನದಾಸ (ಗಾಂಧಿಯ ಹೆಸರನ್ನೇ ತಮ್ಮ ಮಗನಿಗಿಟ್ಟಿದ್ದರು) ಆಗ ಪುಟ್ಟ ಬಾಲಕ. ಅನಾರೋಗ್ಯದಿಂದ ನರಳುತ್ತಿದ್ದ. ಕೊನೆಗೆ ಸತ್ತೂಹೋದ. ಕ್ಷಮಾಪಣಾ ಪತ್ರ ಬರೆದುಕೊಟ್ಟರೆ ಜಾಮೀನಿನ ಮೇಲೇ ಬಿಡುಗಡೆ ಮಾಡುತ್ತೇವೆ ಎಂದಿತು ಸರಕಾರ. ಶೆಟ್ಟರು ಸ್ವಾಭಿಮಾನಿ. ಕ್ಷಮಾಪಣೆ ಅವರ ರಕ್ತದಲ್ಲೇ ಇರಲಿಲ್ಲ. ಮಗನನ್ನು ಕಳೆದುಕೊಂಡರು. ಅಂತ್ಯಸಂಸ್ಕಾರ ಮಾಡಲೂ ಸಾಧ್ಯವಾಗಲಿಲ್ಲ. ಗಾಂಧೀ ಆದರ್ಶದ ಚಳವಳಿ ಅವರ ದೃಷ್ಟಿಯಲ್ಲಿ ಅತ್ಯುನ್ನತ ಪ್ರಾಶಸ್ತ್ಯ ಪಡೆದಿತ್ತು.

     ಶೆಟ್ಟರು ಅಸ್ಪೃಶ್ಯತೆಯ ವಿರುದ್ಧವೂ ಹೋರಾಡಿದರು. ಸ್ವಾತಂತ್ರ್ಯಪೂರ್ವದ ಆ ಅವಧಿಯು ಅಜ್ಞಾನದ, ಮೂರ್ಖತನದ ಅವಧಿಯೂ ಆಗಿತ್ತು. ಶೆಟ್ಟರು ವಿವಿಧ ದಲಿತ ಸಮುದಾಯಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಬೆಳೆಸಿದರು. ಅಸ್ಪೃಶ್ಯತಾ ಆಚರಣೆ ಇಲ್ಲವಾಯಿತು. ದಲಿತರ ಕೇರಿಗಳಲ್ಲಿ ಭಜನೆ ಆರಂಭಿಸಿದರು, ಊರಿನ ಉಳಿದೆಲ್ಲ ಬೀದಿಗಳಿಗಿಂತ, ದಲಿತರ ಕೇರಿಗಳು ತುಂಬ ಅಚ್ಚುಕಟ್ಟು, ಶಿಸ್ತುಗಳಿಗೆ ಹೆಸರಾದವು. ಮುಂದೆ ಈ ದಲಿತ ಸಮುದಾಯದವರು ವೈದ್ಯರಾದರು, ಜಿಲ್ಲಾಧಿಕಾರಿಗಳಾದರು, ಕಮಿಷನರ್ ಆದರು, ನಂತರದ ತಲೆಮಾರಿನವರು ಐ.ಎಫ್.ಎಸ್. ಸಹ ಮಾಡಿದರು. ಅಂಥ ಐತಿಹಾಸಿಕ ಬದಲಾವಣೆಗೆ ಶೆಟ್ಟರ ನಾಯಕತ್ವ ಪರೋಕ್ಷವಾಗಿ ಕಾರಣವಾಯಿತು. ಇಂದಿಗೆ ಏಳು ದಶಕಗಳ ಹಿಂದೆ, ಸುಬ್ರಹ್ಮಣ್ಯ ಶೆಟ್ಟರು ತಮ್ಮ ಮನೆಯೊಳಗೆ ದಲಿತರನ್ನು ಕರೆದು ಊಟ ಹಾಕುವ ಸಾಮಾಜಿಕ ಕ್ರಾಂತಿ ಮಾಡಿದರು. ಇದಕ್ಕೆಲ್ಲ ಅವರಿಗೆ ಜತೆಜತೆಯಾಗಿ ನಿಂತ ಮರಾತಾಯಿ ರುಕ್ಮಿಣಮ್ಮನವರು, ಸುಬ್ರಹ್ಮಣ್ಯ ಶೆಟ್ಟರಿಗೆ ಸರಿಯಾದ ಧರ್ಮಪತ್ನಿ. ಅವರೂ ವಿಶೇಷ ವ್ಯಕ್ತಿಯೇ. ಜೀವಮಾನವಿಡೀ ಖಾದಿ ಧರಿಸಿದರು, ಮಹಿಳಾ ಸಮಾಜ ಪ್ರಾರಂಭಿಸಿದರು. ಹೊಲಿಗೆ ತರಬೇತಿ ನೀಡಿದರು, ಮಹಿಳೆಯರ, ಮಕ್ಕಳ ಜಾಗೃತಿಗೆ ಪ್ರಯತ್ನಿಸಿದರು. ಅಕ್ಷರಶಃ ನೂರಾರು ಹೆಣ್ಣುಮಕ್ಕಳ ಜೀವನೋಪಾಯಕ್ಕೆ ದಾರಿ ಮಾಡಿದರು. ಬಾಲ್ಯವಿವಾಹದ ಅಂದಿನ ದಿನಗಳಲ್ಲಿ, ರುಕ್ಮಿಣಮ್ಮನವರು ಸ್ವತಃ ಪ್ರಾಥಮಿಕ ಶಾಲೆಯನ್ನೂ ಪೂರೈಸದಿದ್ದರೂ, ಬಡವರ, ಗತಿಯಿಲ್ಲದವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದರು. ಅವರ ಕೈ ದೊಡ್ಡದು. ಕಲಾವಿದರು, ಸ್ವಾಮೀಜಿಗಳು, ಸಾಹಿತಿಗಳು, ರಾಜಕಾರಣಿಗಳು, ಹರಿಕಥೆದಾಸರು - ಹೀಗೆ ಯಾರೇ ಊರಿಗೆ ಬಂದರೂ, ಅವರ ಊಟ ಸುಬ್ರಹ್ಮಣ್ಯ ಶೆಟ್ಟರ ಮನೆಯಲ್ಲೇ. ಅಲ್ಲಿ ನಿತ್ಯ ಸಂತರ್ಪಣೆ, ಸಮಾರಾಧನೆ. ನಾವೆಲ್ಲ ಚಿಕ್ಕವರಿದ್ದಾಗ ಪೇಟೆಯ ಜನ ತಮಾಷೆಗೆ "ಶೆಟ್ಟರ ಮನೆಯವರೆಷ್ಟು ಜನ, ಅಲ್ಲಿ ಊಟ ಮಾಡುವವರು ಎಷ್ಟು ಜನ ಎಣಿಸಿರೋ" ಎಂದು ಹೇಳುತ್ತಿದ್ದರು. ನಿಜ, ಮನೆಯವರು ಇದ್ದುದು ಬೆರಳೆಣಿಕೆಯಷ್ಟೇ. ಆ ಸಂಖ್ಯೆಯ ಇಮ್ಮಡಿ, ಮುಮ್ಮಡಿ ಊಟಗಳು ಅವರ ಮನೆಯಲ್ಲಿ ನಿತ್ಯವೂ ಅತಿಥಿ, ಅಭ್ಯಾಗತರಿಗೆ ಮೀಸಲಾಗಿದ್ದವು. ಮುಂದೆ ರುಕ್ಮಿಣಮ್ಮನವರು ಪುರಸಭಾ ಸದಸ್ಯರೂ ಆಗಿ ಸೃಜನಾತ್ಮಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದರು.

      ಸ್ವತಃ ಸುಬ್ರಹ್ಮಣ್ಯ ಶೆಟ್ಟರು ಸಂಗೀತ ಪ್ರೇಮಿ, ಕಲಾಪ್ರೇಮಿ ಮತ್ತ ಕಲಾ ಪೋಷಕರಾಗಿದ್ದರು. ಹೇಳಿಕೇಳಿ ಹಾರ್ಮೋನಿಯಂ ಕಲಿತು ಅದ್ಭುತವಾಗಿ ನುಡಿಸುತ್ತಿದ್ದರು. ಆರು ದಶಕಗಳ ಹಿಂದೆ ಕಲಾ ಸೇವಾ ಸಂಘ ಪ್ರಾರಂಭಿಸಿ, ಹವ್ಯಾಸಿ ಕಲಾವಿದರಿಗೆ ಬೆಂಬಲವಾಗಿ ನಿಂತರು. ಅಜ್ಜಂಪುರದ ನಟರು, ಕಲಾವಿದರು ನಾಟಕ ಸಿನಿಮಾಗಳಲ್ಲಿ ಹೆಸರು ಮಾಡಿದರು. ಅಜ್ಜಂಪುರದಲ್ಲಿ ನಡೆಯುತ್ತಿದ್ದ ಹವ್ಯಾಸಿ ನಾಟಕ ಸ್ಪರ್ಧೆಗಳು ನಾಡಿನಾದ್ಯಂತ ಹೆಸರು ಮಾಡಿದವು. ಬಹುಮಾನ, ಪಾರಿತೋಷಕಗಳು ಕಲಾವಿದರ ಗ್ಲಾಮರ್, ಹೆಸರನ್ನು ಹೆಚ್ಚಿಸಿದವು. ಗುಬ್ಬಿ ವೀರಣ್ಣ, ರಾಜಕುಮಾರ್, ಹರಿಣಿ - ಹೀಗೆ ನೂರಾರು ಖ್ಯಾತನಾಮರನ್ನು ಕರೆಸಿ ಕಲಾಸೇವಾ ಸಂಘಕ್ಕೆ, ಸ್ಪರ್ಧೆಗಳಿಗೆ ಸಾವಿರಾರು ಅಭಿಮಾನಿಗಳು, ರಸಿಕರು ಮುಗಿಬೀಳುವಂತೆ ಮಾಡಿದರು.

    ಅಜ್ಜಂಪುರದಲ್ಲಿ ಸ್ವಾಮಿ ಶಂಕರಾನಂದರು ಭಗವದ್ಗೀತಾ ಪ್ರಚಾರಕ್ಕೇ ಮೀಸಲಾದ ಶಿವಾನಂದಾಶ್ರಮವನ್ನು ಸ್ಥಾಪಿಸಿದಾಗ, ಬೆಂಬಲಕ್ಕೆ ನಿಂತವರು ಸುಬ್ರಹ್ಮಣ್ಯ ಶೆಟ್ಟರು. ಅದು ಸಹ ನಾಡಿನಾದ್ಯಂತ ಜನಪ್ರಿಯವಾಯಿತು. ಗೀತಾಸಪ್ತಾಹ, ಗೀತಾಜಯಂತಿ, ಉತ್ಸವಗಳೊಂದಿಗೆ ಸುಲಭ ಬೆಲೆಯ ಭಗವದ್ಗೀತೆಯ ಪ್ರತಿಗಳು ಐದಾರು ದಶಕಗಳ ಹಿಂದೆಯೇ ಜನರ ಪ್ರೀತಿಗೆ ಪಾತ್ರವಾದವು. ಕನ್ನಡ ಭಾಷೆಯಲ್ಲಿ ಭಗವದ್ಗೀತೆಯ ಪ್ರಚಾರ-ಪ್ರಸಾರಕ್ಕೆಂದು ಮೀಸಲಾದ ಪತ್ರಿಕೆ ಇರಲೇ ಇಲ್ಲ. ಸುಬ್ರಹ್ಮಣ್ಯ ಶೆಟ್ಟರು ೧೯೬೩ರಲ್ಲಿ "ಗೀತಾಮಿತ್ರ " ಎಂಬ ಮಾಸಪತ್ರಿಕೆಯನ್ನು ತಮ್ಮ ಸಂಪಾದಕತ್ವದಲ್ಲಿ  ಪ್ರಕಟಣೆಯನ್ನು ಆರಂಭಿಸಿದರು.     

      ಐವತ್ತು-ಅರವತ್ತರ ದಶಕದಲ್ಲಿ ಉದ್ಯೋಗ, ಜೀವನೋಪಾಯಗಳಿಗೆಂದು ಯುವಜನರು ಹಳ್ಳಿಗಳಿಂದ ನಗರಗಳಗೆ ವಲಸೆ ಹೋಗುತ್ತಿದ್ದುದು ಸಾಮಾನ್ಯವಾಗಿತ್ತು. ಅದು ತಪ್ಪಿ,  ಜನ ಹಳ್ಳಿಗಳಲ್ಲೇ ನೆಲೆಗೊಳ್ಳಬೇಕು,ಉದ್ಯಮ, ಕೈಗಾರಿಕೆಗಳು ಗ್ರಾಮಗಳಲ್ಲೇ ಸ್ಥಾಪನೆಯಾಗಬೇಕೆಂಬ ಕನಸು ಶೆಟ್ಟರಿಗಿತ್ತು. ಅದರಂತೆ ತಮ್ಮಿಂದ ಸಾಧ್ಯವಾದ ಪ್ರಯತ್ನಗಳನ್ನಂತೂ ಮಾಡಿದರು. ಇತ್ತೀಚಿನ ದಶಕಗಳಲ್ಲಿ ದೊರೆಯುತ್ತಿರುವ ಸಹಾಯಧನ, ಅಭಿವೃದ್ಧಿ ಯೋಜನೆಗಳು ಇದ್ದಿದ್ದರೆ, ಉದ್ಯಮ ಜಾಲವನ್ನೇ ಸೃಷ್ಟಿಸುತ್ತಿದ್ದರು.

      ಅಜ್ಜಂಪುರದ ಪುರಸಭೆಯ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶೆಟ್ಟರು ತಮ್ಮ ಊರನ್ನು ಮಾದರಿ ಊರಾಗಿ ಮಾಡಲು ಶ್ರಮಿಸಿದರು. ಚರಂಡಿ, ರಸ್ತೆ ಮುಂತಾದ ಸಾರ್ವಜನಿಕ ಕೆಲಸಗಳ ಮೇಲುಸ್ತುವಾರಿ ನೋಡಲು ಸ್ವತಃ ಅವರೇ ಓಡಾಡುತ್ತಿದ್ದರು. ಕುಳ್ಳು ಆಕೃತಿ, ತಲೆಯಮೇಲೆ ಗಾಂಧೀ ಟೋಪಿ, ಗಾಂಧಿಯವರಂತೇ ವೇಗದ ನಡಿಗೆ ಅವರದು. ಅವರು ನಡೆಯುತ್ತಿದ್ದರೆ ಉಳಿದವರು ಓಡಬೇಕಾಗುತ್ತಿತ್ತು.

    ಜಾನುವಾರುಗಳ ವ್ಯಾಪಾರ, ವಿನಿಮಯಗಳಿಗೆ ಅನುಕೂಲವಾದರೆ, ರೈತರಿಗೆ ಬೆಂಬಲ ದೊರೆತಂತೆ. ಇದನ್ನು ಗಮನದಲ್ಲಿರಿಸಿಕೊಂಡು ಸುಬ್ರಹ್ಮಣ್ಯ ಶೆಟ್ಟರು ಅಜ್ಜಂಪುರದಲ್ಲಿ  ದನಗಳ ಜಾತ್ರೆಯನ್ನು ಅರ್ಧ ಶತಮಾನದ ಹಿಂದೆ ಆರಂಭಿಸಿದರು. ಇದರೊಂದಿಗೆ ರೈತರಿಗೆ ವ್ಯವಸಾಯ ಮತ್ತು ಅದರ ಉತ್ಪನ್ನಗಳ ಬಗ್ಗೆ ತಿಳುವಳಿಕೆಯೂ ಅವಶ್ಯವೆಂದು, ಸರ್ಕಾರೀ ಅಧಿಕಾರಿಗಳು, ಇಲಾಖೆಗಳ ಮಾರ್ಗದರ್ಶನ ದೊರೆಯಲೆಂದು ವಸ್ತು ಪ್ರದರ್ಶನ, ಪ್ರಾತ್ಯಕ್ಷಿಕೆಗಳ ವ್ಯವಸ್ಥೆಮಾಡಿದರು. ಸ್ಥಳೀಯ ಕಲೆಗಳು, ಸಂಗೀತ, ನಾಟಕ, ನೃತ್ಯ ಕಾರ್ಯಕ್ರಮಗಳು ಜಾತ್ರೆಯ ಭಾಗವಾದವು. ನಾಡಿನ ಖ್ಯಾತ ಕವಿಗಳ ಸಾಹಿತ್ಯವನ್ನು ತಮ್ಮ ದಿವ್ಯ ಕಂಠಸಿರಿಯಿಂದ ನಾಡಿನಾದ್ಯಂತ ಜನಪ್ರಿಯಗೊಳಿಸಿದ ಮಹಾನ್ ಗಾಯಕ ಪಿ. ಕಾಳಿಂಗರಾಯರು ದನಗಳ ಜಾತ್ರೆಯಲ್ಲಿ ಕಾರ್ಯಕ್ರಮ ನೀಡಿದರು. ಇದಲ್ಲದೆ ಕೇಂದ್ರ, ರಾಜ್ಯ ಸರಕಾರಗಳ ವಾರ್ತಾಇಲಾಖೆಯ ಚಲನಚಿತ್ರ, ಸುದ್ದಿ, ಮಾಹಿತಿಗಳ ಪ್ರದರ್ಶನವೂ ಏರ್ಪಾಟಾಗುತ್ತಿತ್ತು. ರೈತರಿಗೆ ವ್ಯವಸಾಯ ಮಾಹಿತಿಗಳ ಜತೆಗೆ ಕಲೆ, ಸಂಸ್ಕೃತಿಗಳ ದರ್ಶನವೂ ಅತ್ಯಗತ್ಯವೆಂಬ ಮುಂದಾಲೋಚನೆಯಿಂದ ರೂಢಿಸಿದ ಈ ಕಾರ್ಯಕ್ರಮ ಇಂದಿಗೂ ನಡೆದುಕೊಂಡು ಬರುತ್ತಿದೆ. 
   
      ಸುಬ್ರಹ್ಮಣ್ಯ ಶೆಟ್ಟರ ಚಟುವಟಿಕೆಗಳು ಒಂದೇ, ಎರಡೇ! ಅಭಿವೃದ್ಧಿ ಕಾರ್ಯಗಳು ಅಷ್ಟೊಂದು. ನೆನಪು ಮಾಡಿಕೊಂಡಂತೆ ಮುಗಿಯದಷ್ಟು ಸರಕು. ವಿಸ್ಮಯವಾಗುವಷ್ಟು ಪರಿಶ್ರಮ, ಪ್ರತಿಭೆ ಅವರದು. ಪ್ರೌಢಶಾಲೆಯು ಅಧ್ಯಾಪಕರ ಕೊರತೆಯಿಂದ ತತ್ತರಿಸಿದಾಗ, ಪಾಠ ಪ್ರವಚನಗಳಿಲ್ಲದೆ ವಿದ್ಯಾರ್ಥಿಗಳು - ಮುಖ್ಯೋಪಾಧ್ಯಾಯರು ದಿಕ್ಕುತೋಚದೇ ಕೂತಿದ್ದಾಗ, ಅವರ ಬೆಂಬಲಕ್ಕೆ ನಿಂತವರು ಇದೇ ಸುಬ್ರಹ್ಮಣ್ಯ ಶೆಟ್ಟರು. ಸ್ವತಃ ಎಲ್. ಎಸ್. ಪರೀಕ್ಷೆ ಪಾಸಾಗದಿದ್ದರೂ, ಹೈಸ್ಕೂಲು ವಿದ್ಯಾರ್ಥಿಗಳಿಗೆ ಇತಿಹಾಸ, ರಾಜಕೀಯ ಶಾಸ್ತ್ರ, ಸಾಮಾನ್ಯ ಜ್ಞಾನ ಕುರಿತಂತೆ ಪಾಠವನ್ನೂ ಮಾಡಿಬಿಟ್ಟರು. ಅವರ ಪ್ರತಿ ಸಾಧನೆಯೂ ಇಂಥ ದಾಖಲೆಯೇ. ಕರ್ನಾಟಕ ಸರ್ಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು, ಅವರಿಗೆ ೬೦ ವರ್ಷವಾದಾಗ ನಾಡಿನಾದ್ಯಂತ ಜನ ಬಂದು ಗೌರವಾರ್ಪಣೆ ಮಾಡಿದ್ದು, ಕುಡಿಯುವ ನೀರಿನ ಯೋಜನೆಯ ಉದ್ಘಾಟನೆಗೆ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಕರೆಸಿದ್ದು, ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ವೀರೇಂದ್ರಪಾಟೀಲ್ ರಂತಹ ಮುಖಂಡರನ್ನು ಕರೆಸಿದ್ದು, ಎಲ್ಲವೂ ನೆನಪಾಗುತ್ತದೆ. ಪಟ್ಟಿ ಮುಗಿಯುವುದೇ ಇಲ್ಲ. ಶೆಟ್ಟರು ಅನೇಕ ವೃತ್ತಪತ್ರಿಕೆಗಳ, ಮಾಸಪತ್ರಿಕೆ ಮತ್ತು ವಾರಪತ್ರಿಕೆಗಳ ಏಜೆನ್ಸಿಯನ್ನೂ ನಿರ್ವಹಿಸುತ್ತಿದ್ದರು.

     ಜವಾಹರಲಾಲ್ ನೆಹರೂ, ಲಾಲ್ ಬಹಾದುರ್ ಶಾಸ್ತ್ರಿ ಮುಂತಾದ ರಾಷ್ಟ್ರನಾಯಕರ ಮರಣದ ಸುದ್ದಿ ಬರುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ಶೆಟ್ಟರು ಊರತುಂಬ ಮೌನಮೆರವಣಿಗೆ ಮಾಡಿಸಿದ್ದು ನೆನಪಾಗುತ್ತದೆ. ಊರಿನ ಜನ ರಾಜಕೀಯವಾಗಿ ಜಾಗೃತಿ, ಅರಿವು ಪಡೆಯಲು ಅವರು ಪರೋಕ್ಷವಾಗಿ ಕಾರಣರಾದರು.
                                 
     ಅವರದು ತುಂಬ ಒಳ್ಳೆಯ ಆರೋಗ್ಯ. ಒಂದು ದಿನಕ್ಕೂ ಅವರೂ ವೈದ್ಯರ ಬಳಿ ಹೋದವರಲ್ಲ. ಮಾತ್ರೆ ಔಷದಿ ತೆಗೆದುಕೊಂಡವರಲ್ಲ. ಊರಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯೊಬ್ಬರು ವರ್ಗಾವಣೆಗೊಂಡಾಗಿನ ತಮ್ಮ ಅಭಿನಂದನಾ ಸಮಾರಂಭದಲ್ಲಿ "ಇಷ್ಟು ವರ್ಷಗಳ ನನ್ನ ಸೇವಾವಧಿಯಲ್ಲಿ ಶೆಟ್ಟರಂತಹ ವ್ಯಕ್ತಿಯನ್ನು ನೋಡಿಲ್ಲ. ಊರಿನ ಕೆಲಸಗಳಿಗೆಂದು ಅವರು ನನ್ನ ಬಳಿಗೆ ಹಲವಾರು ಬಾರಿ ಬಂದರು, ಆದರೆ ಒಂದೇ ಒಂದು ಬಾರಿಯೂ ರೋಗಿಯಾಗಿ ಬಾರದವರೆಂದರೆ ಇವರೊಬ್ಬರೇ"  ಎಂದು ಪ್ರಶಂಸೆ ಮಾಡಿದರು. ಇಷ್ಟೂ ಉತ್ತಮ ಆರೋಗ್ಯದಿಂದ ಇರುತ್ತಿದ್ದ ಶೆಟ್ಟರು ಹೃದಯಾಘಾತದ ನೆಪದಲ್ಲಿ ೧೯೭೩ರಲ್ಲಿ, ತಮ್ಮ ಅರವತ್ತಮೂರನೆಯ ವಯಸ್ಸಿನಲ್ಲೇ ಬಾರದ ದಾರಿಯಲ್ಲಿ ನಡೆದುಬಿಟ್ಟರು.

     ಮಕ್ಕಳೆಂದರೆ ಸುಬ್ರಹ್ಮಣ್ಯ ಶೆಟ್ಟರಿಗೆ ತುಂಬ ಪ್ರೀತಿ. ಕ್ವಿಜ್ ಎನ್ನುವ ಪದ ಆಗ ಗೊತ್ತಿರಲಿಲ್ಲ ಅಷ್ಟೇ. ಮಕ್ಕಳಿಗೆಂದು ನೂರಾರು ಕಾರ್ಯಕ್ರಮಗಳನ್ನು ಏರ್ಪಡಿಸಿದರು. ಬ್ಯಾಂಕ್ ಮ್ಯಾನೇಜರ್, ಪೋಸ್ಟ್ ಮಾಸ್ಟರ್, ರೈಲ್ವೆ ಸ್ಟೇಷನ್ ಮಾಸ್ಟರ್, ಸರಕಾರೀ ವೈದ್ಯರು, ಹೀಗೆ ಎಲ್ಲ ಕ್ಷೇತ್ರದಳ ಅಧಿಕಾರಿಗಳನ್ನು ಕರೆಸಿ ಅವರವರ ಕ್ಷೇತ್ರಗಳ ಬಗ್ಗೆ ಅಧಿಕೃತ ಮಾಹಿತಿಗಳು ಮಕ್ಕಳಿಗೆ ತಲುಪುವಂತೆ ಮಾಡಿದರು.
 
     ಸದಾ ಕಣ್ಮುಂದೆ ಸುಬ್ರಹ್ಮಣ್ಯ ಶೆಟ್ಟರು ಹಾಗೂ ಅವರ ಪತ್ನಿ ರುಕ್ಮಿಣಮ್ಮನವರ ನಗುಮೊಗದ ಚಿತ್ರಗಳು ಮೂಡುತ್ತವೆ. ಎರಡು ಮೂಗುತಿಗಳ, ದುಂಡುಮುಖದ, ಮಹಾಲಕ್ಷ್ಮಿಯ ಮುಖಲಕ್ಷಣದ ಮಹಾತಾಯಿ ರುಕ್ಮಿಣಮ್ಮನವರು ಪುಟುಪುಟು ಓಡಾಟ ನೆನಪಾಗುತ್ತದೆ. ಈ ವರ್ಷದ ಫೆಬ್ರವರಿ ೨ನೇ ತಾರೀಖಿಗೆ ಅವರ ನೂರೊಂದನೆಯ ಜನ್ಮದಿನ ನಡೆಯಿತು. ಅವರ ಸ್ಮರಣೆಯೇ ನಮ್ಮಲ್ಲಿ ಅವರ ಕ್ರಿಯಾಶೀಲತೆಯ ಬಗ್ಗೆ ಆಶ್ಚರ್ಯಗೊಳ್ಳುವಂತೆ ಮಾಡುವಷ್ಟು ಪ್ರಭಾವದ ಜೀವನ ಅವರದು.

* * * * * * *

ಕಾಮೆಂಟ್‌ಗಳು

  1. ಪ್ರಿಯ ದತ್ತ
    ಅಜ್ಜಂಪುರ ಮಂಜು, ನನ್ನ ಮಿತ್ರನ ಮನ್ಯಾ ಶ್ರೀ ಸುಬ್ರಮನ್ಯ ಶೇಟ್ಟರ ಬಗ್ಗೆ ಬರೆದ ವಿಚಾರ ಓದಿ ಸಂತೋಷ ಮತ್ತು ಹಳೆಯ ನೆನಪುಗಳು ಮರುಕಳಿಸಿತು. ಮಂಜುನಾಥರವರಿಗೆ ಸಪ್ರೇಮ ವಂದನೆಗಳು. ಕೇಶವಮೂರ್ತಿ,

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

87. ಬಂಗಾರದ ಭರವಸೆ ಹುಟ್ಟಿಸುವ ಹಣ್ಣೆ ಗುಡ್ಡ

82. "ಬಾರ್ನ್ ಹೆಡ್ ಮಾಸ್ಟರ್" ಅಜ್ಜಂಪುರ ವೆಂಕಟೇಶಮೂರ್ತಿ

ಮಹಾರಾಜರ ಕಟ್ಟೆ !