06. ಶ್ರೀ ಶೆಟ್ರು ಸಿದ್ದಪ್ಪನವರು



ಇವರು ನಮ್ಮ ಹಿರಿಯರು ಮಾಲಿಕೆಯ ೫ ನೇ ಲೇಖನವಿದು. ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.



ಇದೇ ಸೆಪ್ಟೆಂಬರ್ ನಲ್ಲಿ ಅಜ್ಜಂಪುರಕ್ಕೆ ಹೋಗುವ ಸಂದರ್ಭ ಒದಗಿತು. ಈ ಮೊದಲು ಬ್ಲಾಗ್‌ನಲ್ಲಿ ಸ್ಮರಿಸಬೇಕಿದ್ದ ಹೆಸರು ಶೆಟ್ರು ಸಿದ್ದಪ್ಪನವರದು. ಆದರೆ ಸಾಕಷ್ಟು ವಿವರಗಳು ದೊರೆಯದ ಕಾರಣ ಪ್ರಕಟಿಸಲು ಸಾಧ್ಯವಾಗಿರಲಿಲ್ಲ. ಇದೀಗ ಶೆಟ್ರು ಸಿದ್ದಪ್ಪನವರ ಮೊಮ್ಮಗ ಶ್ರೀ ಶಿವಶಂಕರ್ ರವರನ್ನು ಸಂದರ್ಶಿಸಿದೆ. ಇವರೊಂದಿಗೆ ವಿದ್ಯಾ ಇಲಾಖೆಯ ನಿವೃತ್ತ ಶಾಲಾ ಪರೀವೀಕ್ಷಕರಾದ ಶ್ರೀ ಶ್ರೀಕಂಠಯ್ಯನವರೂ, ಆಕಸ್ಮಿಕವಾಗಿ ಭೇಟಿಯಾದರು. ಇವರೀರ್ವರು ನೀಡಿದ ಮಾಹಿತಿ ನಿಮ್ಮ ಓದಿಗಾಗಿ ಇಲ್ಲಿದೆ. 
- ಶಂಕರ ಅಜ್ಜಂಪುರ
   

ಶ್ರೀ ಶೆಟ್ರು ಸಿದ್ದಪ್ಪನವರು


ಅವರು ಅಜಾತ ಶತ್ರು. ಅಜ್ಜಂಪುರದ ಸಮೀಪದ ಗ್ರಾಮ ಸೊಲ್ಲಾಪುರದಲ್ಲಿರುವ ಸಿದ್ಧರಾಮೇಶ್ವರನ ಪರಮಭಕ್ತರು. ಈ ಪ್ರದೇಶದ ಅತಿ ದೊಡ್ಡ ಕೃಷಿಕರು ಮತ್ತು ಕೃಷಿ ಉತ್ಪನ್ನಗಳ ವರ್ತಕರು. ಅವರ ನಿವಾಸ ಅಜ್ಜಂಪುರದ ರೇಲ್ವೇ ನಿಲ್ದಾಣದ ಎದುರಿಗೆ ಇದೆ. ಉತ್ತರ ಕರ್ನಾಟಕ ದೊಡ್ಡ ವಾಡೆಯನ್ನು ನೆನಪಿಸುವಂತಹ ವಾಸ್ತುಹೊಂದಿರುವ ಆ ಕಟ್ಟಡ ಅಜ್ಜಂಪುರದ ಪ್ರಮುಖ ಗುರುತು. ಕೃಷಿ, ವ್ಯಾಪಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶೆಟ್ರು ಸಿದ್ದಪ್ಪನವರು ಎತ್ತರದ ಆಳು. ಗಿರಿಜಾ ಮೀಸೆ. ಕತ್ತು ಮುಚ್ಚುವ ಕಪ್ಪು ನೀಳ ಕೋಟು, ಕಚ್ಚೆಪಂಚೆ, ತಲೆಯಮೇಲೆ ದೊಡ್ಡದಾದ ಬಿಳಿಯ ಸರಿಗೆಯ ರುಮಾಲು, ಹಣೆಯ ಮೇಲೆ ವಿಭೂತಿ. ಎಂಥ ಜನಸಂದಣಿಯಲ್ಲೂ ಗುರುತು ಹಿಡಿಯಬಹುದಾದ ವಿಶಿಷ್ಟ ಚಹರೆ ಅವರದು. 

ಕರ್ನಾಟಕ ಏಕೀಕರಣದ ಚಳವಳಿ ನಡೆಯುತ್ತಿದ್ದ ದಿನಗಳಲ್ಲಿ ಶೆಟ್ರು ಸಿದ್ದಪ್ಪನವರ ಹಂಬಲವೆಂದರೆ, ಅದು ತನ್ನ ಕಾಲದಲ್ಲೇ ನಡೆಯುವಂತಾಗಲಿ ಎಂಬ ಅಭಿಲಾಷೆಯಿತ್ತು. ಆಗ ಭಾಷಾವಾರು ಪ್ರಾಂತಗಳ ವಿಂಗಡಣೆಯ ಕಾಲಕ್ಕೆ ಸರದಾರ್ ಪಟೇಲರ ನಿರ್ಧಾರಗಳನ್ನು ನೆಹರೂ ಒಪ್ಪಿಕೊಳ್ಳಲೂ ಆಗದ, ಆದರೆ ಬಿಡಲಾಗದ ಪರಿಸ್ಥಿತಿ ಎದುರಿಸುತ್ತಿದ್ದರು. ನೆಹರೂರಿಗೆ ವರದಿಯನ್ನು ಸಲ್ಲಿಸಿದ ನಂತರ, ವಿಂಗಡಣೆಯ ಹೆಸರಿನಲ್ಲಿ ಹಿಂಸಾಚಾರ ಹಬ್ಬುವುದು ಅವರಿಗೆ ಬೇಕಿರಲಿಲ್ಲ. ಅದಕ್ಕೆಂದೇ ಈ ಸಂಬಂಧದ ವಿವರಗಳನ್ನು ರೇಡಿಯೋ ಮೂಲಕ ದೇಶಾದ್ಯಂತ ಏಕಕಾಲಕ್ಕೆ  ಪ್ರಸಾರ ಮಾಡುವ ತಂತ್ರ ಅನುಸರಿಸಿದರು. ಆಗೆಲ್ಲ ರೇಡಿಯೋ ಇದ್ದವರೇ ಶ್ರೀಮಂತರು. ಅಜ್ಜಂಪುರದಲ್ಲಿ ಕೇವಲ ಎರಡು ರೇಡಿಯೋಗಳಿದ್ದವು. ಒಂದು ಸುಬ್ರಹ್ಮಣ್ಯ ಶೆಟ್ಟರ ಮನೆಯಲ್ಲಿ, ಮತ್ತೊಂದು ಶೆಟ್ರು ಸಿದ್ದಪ್ಪನವರ ಮನೆಯಲ್ಲಿ. ಪ್ರಾಂತವಾರು ವಿಭಜನೆಯ ಸುದ್ದಿ ತಿಳಿದಕೂಡಲೇ ಈ ಇಬ್ಬರು ಹಿರಿಯರೂ ಚಿಕ್ಕಮಕ್ಕಳಂತೆ ಸಂಭ್ರಮಿಸಿದ್ದನ್ನು ನೋಡಿದ್ದ ಹಿರಿಯರಾದ ಶ್ರೀಕಂಠಯ್ಯನವರು ತಿಳಿಸಿದರು.
ಶೆಟ್ರು ಸಿದ್ದಪ್ಪನವರ ನಿವಾಸ

ತಾನೂ ಬೆಳೆಯಬೇಕು, ತನ್ನ ಸುತ್ತಣ ಎಲ್ಲರೂ ಬೆಳೆಯಬೇಕೆಂಬುದು ಅವರ ಜೀವನ ಧ್ಯೇಯ. ಸಾರ್ವಜನಿಕ ಜೀವನದಲ್ಲಿ ತಮ್ಮ ಛಾಪು ಒತ್ತಿದವರು. ಇಂಥ ವಿಶಾಲ ದೃಷ್ಟಿಯಿದ್ದುದರಿಂದಲೇ ಅವರು ಅಜ್ಜಂಪುರದಲ್ಲಿ ಅಜರಾಮರರು. ಅವರು Member of Representative  Assemblyಯ ಸದಸ್ಯರಾಗಿದ್ದರು. ಆಗೆಲ್ಲ ಈ ಸ್ಥಾನಗಳಿಗೆ ಚುನಾವಣೆಯಿರುತ್ತಿರಲಿಲ್ಲ. ಸಮಾಜದಲ್ಲಿ ಶ್ರೀಮಂತರಾಗಿದ್ದು, ಜನಪರ ಕಾರ್ಯ ಕೈಗೊಳ್ಳುವವರನ್ನು ಆಯ್ಕೆಮಾಡಲಾಗುತ್ತಿತ್ತು. ಹೀಗೆ ನಡೆದ ಪ್ರಕ್ರಿಯೆಯಲ್ಲಿ ಶಿವನೆಯ ಪಟೇಲ್ ಶಿವಪ್ಪನವರು ಆರಂಭದಲ್ಲಿ ಆಯ್ಕೆಯಾದರು. ತದನಂತರದ ಸರದಿ ಶೆಟ್ರ ಸಿದ್ದಪ್ಪನವರದು. ಅಜ್ಜಂಪುರಕ್ಕೆ ಪುರಸಭೆ ಬಂದಾಗ ಅದು ಸರಕಾರದ ಆಡಳಿತದಲ್ಲಿ ಇರುತ್ತಿತ್ತು. ಎಂದರೆ, ಪ್ರಜಾಪ್ರತಿನಿಧಿಗಳು ಇರುತ್ತಿದ್ದರೂ, ತಾಲ್ಲೂಕಿನ ಧಣಿಯೆಂದೇ ಕರೆಯಲ್ಪಡುತ್ತಿದ್ದ ಅಮಲ್ದಾರರು ಪುರಸಭೆಯ ಅಧ್ಯಕ್ಷರಾಗಿರುತ್ತಿದ್ದರು. ನಂತರದ ಉಪಾಧ್ಯಕ್ಷರ ಹಂತದಿಂದ ಪ್ರಜಾಪ್ರತಿನಿಧಿಗಳಿಗೆ ಅವಕಾಶವಿರುತ್ತಿತ್ತು. ಹೀಗಾಗಿ ಅಜ್ಜಂಪುರದ ಶೆಟ್ರು ಸಿದ್ದಪ್ಪನವರು ಸತತ ಕಾಲು ಶತಮಾನಕ್ಕೂ ಹೆಚ್ಚು ಸಮಯ ಪ್ರಥಮ ಪುರಸಭಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಆರೆಂಟು ದಶಕಗಳ ಹಿಂದೆ ಅಜ್ಜಂಪುರ ಇತರ ಎಲ್ಲ ಹೋಬಳಿಗಳಂತೆಯೆ ಸಾರ್ವಜನಿಕ ಸೌಲಭ್ಯಗಳ ವಿಷಯದಲ್ಲಿ ಹಿಂದುಳಿದಿತ್ತು. ಸ್ವಾತಂತ್ರ್ಯ ಬಂದ ತರುಣದಲ್ಲಿನ ಉತ್ಸಾಹ ಎಲ್ಲರಲ್ಲೂ ಜೀವಂತವಾಗಿತ್ತು. ತಮ್ಮ ಊರು ಅಭಿವೃದ್ಧಿಯಾಗಬೇಕೆಂಬ ಹಂಬಲವುಳ್ಳ ಜನ ಸಾರ್ವಜನಿಕ ಜೀವನದಲ್ಲಿದ್ದರು. ಹೀಗಾಗಿ ಶೆಟ್ರು ಸಿದ್ದಪ್ಪನವರು ಅಜ್ಜಂಪುರಕ್ಕೆ ವಿದ್ಯಾಭ್ಯಾಸ, ಆರೋಗ್ಯ, ಕೃಷಿಗಳಿಗೆ ಸಂಬಂಧಿಸಿದಂತೆ ತಮ್ಮಿಂದಾದ ಕಾರ್ಯಗಳನ್ನು ಮಾಡಬೇಕೆಂದು ಸಂಕಲ್ಪಿಸಿದರು. 

ಶೆಟ್ರು ಸಿದ್ದಪ್ಪನವರ ಪತ್ನಿ ಮರಿಶಾಂತಮ್ಮನವರು ಹೆರಿಗೆ ಸಮಯದಲ್ಲಿ ಸೂಕ್ತ ವೈದ್ಯಕೀಯ ಅನುಕೂಲಗಳಿಲ್ಲದೇ, ಹುಟ್ಟಿದ ಮಗುವೂ ಸೇರಿದಂತೆ ತೀರಿಕೊಂಡರು. ಈ ಘಟನೆ ಶೆಟ್ರು ಸಿದ್ದಪ್ಪನವರ ಮೇಲೆ ಅಗಾಧ ಪರಿಣಾಮ ಬೀರಿತು. ತನ್ನ ಪತ್ನಿಗೆ ಒದಗಿದ ಸ್ಥಿತಿ ಮತ್ತಾರಿಗೂ ಬರಬಾರದೆಂಬ ಭಾವನೆಯಿಂದ ಪತ್ನಿಯ ಹೆಸರಿನಲ್ಲಿ ಹೆರಿಗೆ ವಾರ್ಡ್‌ನ್ನು ಕಟ್ಟಿಸಿದರು. ವಿವಿಧ ಸಂಸ್ಥೆಗಳಿಗೆ ಭೂಮಿಯನ್ನು ದಾನ ಮಾಡುವ ಮೂಲಕ ಸಮಾಜದ ಋಣ ತೀರಿಸುವ ಕಾರ್ಯವನ್ನು ನಡೆಸಿದರು. 


 ಅಜ್ಜಂಪುರದ ಮಾಧ್ಯಮಿಕ ಶಾಲಾ ಕಟ್ಟಡ ೧
ಅಜ್ಜಂಪುರದ ಮಾಧ್ಯಮಿಕ ಶಾಲಾ ಕಟ್ಟಡ ೨
  

ಹಿಂದಕ್ಕೆ ಕಡೂರು ಜಿಲ್ಲೆಯಾಗಿತ್ತೆಂಬ ಸಂಗತಿ ಇಂದಿನ ತಲೆಮಾರಿನವರಿಗೆ ತಿಳಿದಿರಲಾರದು. ಪ್ರಾಥಮಿಕ ವಿದ್ಯಾಭ್ಯಾಸ ಮುಗಿದ ನಂತರ ಹೆಚ್ಚಿನ ಓದಿಗಾಗಿ ಜಿಲ್ಲಾಕೇಂದ್ರಕ್ಕೆ ಹೋಗುವುದು ಆಗ ಅನಿವಾರ್ಯವಾಗಿತ್ತು. ಅಜ್ಜಂಪುರಕ್ಕೆ ಜಿಲ್ಲಾಧಿಕಾರಿಗಳು ಬಂದಾಗ, ಲೋವರ್ ಸೆಕೆಂಡರಿ ಶಾಲೆಯನ್ನು ಮಂಜೂರುಮಾಡುವುದಾಗಿ ತಿಳಿಸಿದರು. ಆದರೆ ಅದಕ್ಕೆ ತಕ್ಕ ಸಿದ್ಧತೆ ಊರಿನಲ್ಲಿ ಇರಲಿಲ್ಲ. ಇದಕ್ಕೆಂದು ಭೂಮಿ ಮತ್ತು ಹಣವನ್ನು ಹೊಂದಿಸುವುದು ಕಷ್ಟಕರವಾಗಿತ್ತು. ಆಗ ಮುಂದೆ ಬಂದವರು ಶೆಟ್ರು ಸಿದ್ದಪ್ಪನವರು. ಈ ಶಾಲೆಗೆಂದು ಅವರು ಕಟ್ಟಿಸಿದ ಕಟ್ಟಡದ ಚಿತ್ರ ಇದರೊಂದಿಗಿದೆ. ಇದಕ್ಕೆಂದು ಸಿರಿಗೆರೆಯಲ್ಲಿದ್ದ ತಮ್ಮ ೪೫೦ ಎಕರೆ ಭೂಮಿಯನ್ನು ಮಾರಿದರು. ಇದಲ್ಲದೆ ವಿನೋಬಾ ಭಾವೆಯವರ ಭೂದಾನ ಚಳವಳಿಗೆಂದು ಹಿರೇನಲ್ಲೂರಿನ ಸಮೀಪದ ಕೇದಿಗೆರೆಯಲ್ಲಿ ೧೦ ಎಕರೆ ನೆಲವನ್ನು ದಾನ ನೀಡಿದರು.  ನೂರಾರು ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಮಾಡಿದರು.  ಅಜ್ಜಂಪುರದಲ್ಲಿ ವಿದ್ಯುತ್ ಇಲಾಖೆ ತನ್ನ ಕಛೇರಿಯನ್ನು ಆರಂಭಮಾಡುವ ಕಾಲಕ್ಕೂ ಅದೇ ಸ್ಥಿತಿ. ಶೆಟ್ರು ಸಿದ್ದಪ್ಪನವರು ತಮ್ಮ ಪತ್ನಿ ಮರಿಶಾಂತಮ್ಮನವರ ಹೆಸರಿನಲ್ಲಿ ಭೂಮಿ ನೀಡಿದರು.  ಮುಂದೆ ತಾಲ್ಲೂಕ್ ಬೋರ್ಡ್ ಪ್ರೌಢಶಾಲೆಯ ಪ್ರಸ್ತಾಪ ಬಂದಾಗಲೂ ಶೆಟ್ರು ಸಿದ್ದಪ್ಪನವರು ತಾವಾಗಿಯೇ ಮುಂದೆ ಬಂದು ಈಗಿರುವ ಭವ್ಯ ಕಟ್ಟಡದ ನಿರ್ಮಾಣಕ್ಕೆ ಕಾರಣರಾದರು. ಇವರು ಭೂಮಿಯನ್ನು ನೀಡುವ ಮೊದಲೇ ಶಿವಾನಂದಾಶ್ರಮದ ಶ್ರಿ ಶಂಕರಾನಂದ ಸ್ವಾಮಿಗಳು ತಮ್ಮಿಂದಾದ ಪ್ರಯತ್ನಮಾಡಿದ್ದರು. ಅದು ಕೈಗೂಡದಾದಾಗ ನೆರವಿಗೆ ಬಂದವರು ಶೆಟ್ರು ಸಿದ್ದಪ್ಪನವರು. 

ಇಷ್ಟೆಲ್ಲ ಸಾರ್ವಜನಿಕ ಕಾರ್ಯಗಳನ್ನು ಮಾಡಿದ್ದರೂ, ಅವರೂ ಆಡಳಿತದ, ಕಣ್ಣಿಲ್ಲದ ಕಾನೂನುಗಳ ಬಿಸಿ ಅನುಭವಿಸಬೇಕಾಯಿತು! ಊರಿಗೆಲ್ಲ ನೆರವಾದ ಶೆಟ್ರು ಸಿದ್ದಪ್ಪನವರ ಮನೆಗೆ ಕುಡಿಯುವ ನೀರಿನ ನಲ್ಲಿ ಬಂದದ್ದು ೨೦೦೦ದ ಇಸವಿಯಲ್ಲಿ ! ಇದಕ್ಕೆ ಇರುವ ಕಾರಣ ಆಡಳಿತಾತ್ಮಕ ವಿವಾದ. ಅವರ ಮನೆಯಿರುವುದು ಅಜ್ಜಂಪುರದ ಸಮೀಪದ ಗೌರಾಪುರದ ಗ್ರಾಮಪಂಚಾಯಿತಿಯ ವ್ಯಾಪ್ತಿಯಲ್ಲಿ. ಸ್ವತಃ ಶೆಟ್ರು ಸಿದ್ದಪ್ಪನವರೇ ಪುರಸಭೆಯ ಅಧ್ಯಕ್ಷರಾಗಿದ್ದರೂ, ಕಾನೂನು ಮುರಿದು ತಮಗೆ ಬೇಕಿರುವ ಸೌಲಭ್ಯಗಳಿಗೆ ಆಶಿಸದೇ ಇದ್ದುದು ಅವರ ಹೆಚ್ಚುಗಾರಿಕೆ.  ಅವರ  ಹೆಗ್ಗಳಿಕೆಯಾಗಿ ಸ್ಮರಿಸಬಹುದಾದ ಇನ್ನೊಂದು ಸಂಗತಿಯೆಂದರೆ, ಅವರು ನಮ್ಮ ಪ್ರದೇಶದ ಅತಿದೊಡ್ಡ ಕೃಷಿಕರೆಂದು ಹೇಳಿದಯಷ್ಟೆ. ಅವರ ಕೃಷಿ ಉತ್ಪನ್ನಗಳನ್ನು ಪರವೂರುಗಳಿಗೆ ಸಾಗಿಸಲೆಂದೇ ರೇಲ್ವೇ ಇಲಾಖೆಯ ಪ್ರತ್ಯೇಕ ಮಾರ್ಗವನ್ನು ನಿಲ್ದಾಣದ ಸಮೀಪ ನಿರ್ಮಿಸಿತು. ಅವರ ಆಗಮನಕ್ಕೆಂದು ರೈಲುಗಳು ಕೆಲವೊಮ್ಮೆ ನಿಗದಿತ ವೇಳೆಗಿಂತ ಸ್ವಲ್ಪ ತಡವಾಗಿ ಹೊರಡುತ್ತಿದ್ದುದೂ ಉಂಟು ಎಂದು ಶ್ರೀಕಂಠಯ್ಯನವರು ತಿಳಿಸಿದರು. ಇದು ಸಮಾಜಸೇವಕನೊಬ್ಬನಿಗೆ ಭಾರತದ ಬೃಹತ್ ಸಂಸ್ಥೆ ನೀಡಿದ ಗೌರವವೂ ಹೌದು. ಶರಣರ ಸಾವು ಮರಣದಲ್ಲಿ ಕಾಣುತ್ತದೆಂಬ ನಾಣ್ಣುಡಿಯಿದೆ.  ಶೆಟ್ರು ಸಿದ್ದಪ್ಪನವರ  ಮರಣದಲ್ಲಿ ಅದು ನಿಜವೇ ಆಯಿತು.  ಶಿವನ ಪರಮಭಕ್ತರಾಗಿದ್ದ, ೯೫ ವಯಸ್ಸಿನ ತುಂಬುಜೀವನ ನಡೆಸಿದ ಶೆಟ್ರು ಸಿದ್ದಪ್ಪನವರು ಶಿವಸಾಯುಜ್ಯ ಕಂಡದ್ದು ಶಿವರಾತ್ರಿಯಂದು!

ಇವರಂತೆಯೇ ಸಾರ್ವಜನಿಕ ಉದ್ದೇಶಗಳಿಗೆಂದು ನೆರವಾದ ಮತ್ತೊಬ್ಬ ಹಿರಿಯರು ಶ್ರೀ ಜೋಗಿ ತಿಮ್ಮಯ್ಯನವರು. ಅವರ ಬಗೆಗಿನ ವಿವರಗಳು ಹೆಚ್ಚು ದೊರೆತಿಲ್ಲವಾದ್ದರಿಂದ ಮುಂದೊಮ್ಮೆ ಪ್ರಕಟವಾಗಲಿದೆ.

* * * * * * *

ಕಾಮೆಂಟ್‌ಗಳು

  1. ಪ್ರೀತಿಯ ದತ್ತಣ್ಣಾ,
    ಇತ್ತೀಚಿನ ಎಲ್ಲ ಬರಹಗಳನ್ನೂ ನೋಡಿದೆ, ನಮ್ಮೂರ ಪ್ರಾತಃ ಸ್ಮರಣೀಯರ ಸಾರ್ಥಕ ಬದುಕಿನ ಬಗ್ಗೆ , ನಿನ್ನ ನುಡಿ ನಮನ ಕೂಡ ನಿಜಕ್ಕೂ ಸಾರ್ಥಕ ದಾಖಲೆ.ಅವರೆಲ್ಲರ ಬಾಳನ್ನು, ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ, ಜೊತಗೆ ನಾವೂ ಸಹ ನಮ್ಮ ಈ ಇಳಿ ವಯಸ್ಸಿನಲ್ಲಿ ನಮ್ಮ ಬದುಕಲ್ಲಿ ಕಂಡು ಕೇಳಿದ ಸ್ಪೂರ್ತಿದಾಯಕ ವ್ಯಕ್ತಿ ಚಿತ್ರಗಳನ್ನು ಸ್ಮರಿಸಿ ಕೊಳ್ಳುವಲ್ಲಿ ನೀನು ಮಾಡಿರುವ ಈ ಯಶಸ್ವೀ ಪ್ರಯತ್ನಕ್ಕೆ ನಮ್ಮಮ್ಮ,ತಮ್ಮ,ತಂಗೀ ಎಲ್ಲಾ ಎಷ್ಟು ಖುಷಿ ಪಟ್ಟರು ಗೊತ್ತಾ?.
    ನಮ್ಮ ಮನೆಯವರೆಲ್ಲರ ಪರವಾಗಿ ಧನ್ಯವಾದ.
    ನನ್ನ ಮನದ ತೋಟದಲ್ಲಿ ಅಜ್ಜಂಪುರದ ನೆನಪು ನಿತ್ಯ ಮಲ್ಲಿಗೆ. ಈ ಗಿಡಕ್ಕೆ ನೀರೆರದ ನಿನ್ನ ಉಪಕಾರಕ್ಕೆ ಋಣಿಯಾಗಿರುವೆ. ಮುಂಬರುವ ದಿನಗಳಲ್ಲಿ ಇನ್ನಸ್ಷ್ಟು ನೆನಪಿನ ಉತ್ಹ್ಖಲನ ನಡೆಯಲಿ.

    ಪ್ರೀತಿ ಇಂದಾ ,
    ಬಿ ಎಸ್ಸ್ ಲಕ್ಷ್ಮೀ ನಾರಾಯಣ ರಾವ್, ( ಪಾಪಣ್ಣಿ )

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ