14. ಹವ್ಯಾಸಿ ರಂಗಭೂಮಿ ಕಲಾವಿದ



ಬಿ. ಎಸ್.ರಾಜಾರಾವ್


ಈ ಬ್ಲಾಗ್‌ನ್ನು ಆರಂಭಿಸುವಾಗ ಮನಸ್ಸಿನಲ್ಲಿದ್ದುದು, ಇದು ಅಜ್ಜಂಪುರದವರನ್ನು ಕುರಿತಾಗಿ ಮಾತ್ರ ಇರಬೇಕು. ಈ ನಿಲುವು ಸಂಸ್ಥೆಗಳ ಮಟ್ಟಿಗೆ ಅನ್ವಯವಾದೀತೇ ವಿನಾ ವ್ಯಕ್ತಿಗಳಿಗಲ್ಲವೆನ್ನುವುದು, ಬ್ಲಾಗ್ ಆರಂಭವಾದ  ಸ್ವಲ್ಪ ದಿನಗಳಲ್ಲೇ ಮನವರಿಕೆಯಾಯಿತು. ಏಕೆಂದರೆ, ಕೇವಲ ಸ್ಥಳೀಕರನ್ನು ಮಾತ್ರ ಪ್ರಸ್ತಾಪಿಸುತ್ತೇನೆಂದುಕೊಂಡರೆ, ಅದು ತೀರ ಪರಿಮಿತಿಗೆ ಒಳಪಟ್ಟೀತು.  ಸರ್ಕಾರಿ ನೌಕರಿ, ಉದ್ಯಮಗಳಿಗೆಂದು ಬಂದು ಸೇರಿದವರು ಕಾಲಾಂತರದಲ್ಲಿ ಸ್ಥಳೀಕರೇ ಆಗಿಹೋಗುತ್ತಾರೆ. ಇದು ಎಲ್ಲ ಊರುಗಳಲ್ಲೂ ನಡೆಯುವ ವಾಸ್ತವ. ಇದು ಈ ಕೆಳಗೆ ಪ್ರಸ್ತಾಪಿಸಿರುವ ಶ್ರೀ ರಾಜಾರಾಯರ ವಿಷಯಕ್ಕೂ ಅನ್ವಯಿಸುತ್ತದೆ. ಅವರು ಅಜ್ಜಂಪುರದ ಕೋಟೆಯ ನಿವಾಸಿಯಾಗಿದ್ದರು. ವೃತ್ತಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಮೇಸ್ತ್ರಿಯಾಗಿದ್ದರು. ನಿವೃತ್ತಿಯ ನಂತರ ಬೆಂಗಳೂರು ಸೇರಿ, ಅಲ್ಲಿಯೂ ಕೆಲಸಮಾಡುತ್ತಿದ್ದರು.

ರಾಜಾರಾಯರದು ಎತ್ತರದ ತೆಳುವಾದ ನಿಲುವು, ಆಕಾರಕ್ಕೂ ಧ್ವನಿಗೂ ಸಂಬಂಧವೇ ಇಲ್ಲದಂಥ ದಪ್ಪವಾದ ಗಂಡು ದನಿ, ಗುಳಿಬಿದ್ದ ಕಣ್ಣುಗಳು , ಬಡತನವೇ ಮೂರ್ತಿವೆತ್ತಂತಿದ್ದರೂ, ಉತ್ಸಾಹದಲ್ಲಿ ಕೊರತೆಯಿರಲಿಲ್ಲ. ಅದೇ ರೀತಿ ಪರೋಪಕಾರದ ಗುಣ ಕೂಡ. ೧೯೬೦ರ ದಶಕದ ಕೊನೆಯಲ್ಲಿ ನಾವು ನಾಲ್ಕಾರು ಗೆಳೆಯರು ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಗಿಸಿದ್ದೆವು. ಅದು ಡಿಸೆಂಬರ್ ತಿಂಗಳು. ಅದೇ ಸಮಯದಲ್ಲಿ ಅವರ ಇಲಾಖೆಯು ರಸ್ತೆಯನ್ನು ಉಪಯೋಗಿಸುವ ವಾಹನಗಳನ್ನು ಗಣತಿಮಾಡುವ ಯೋಜನೆಯನ್ನು ಹಮ್ಮಿಕೊಂಡಿತ್ತು. ಅದಕ್ಕೆಂದು ಅಕ್ಷರ ಬಲ್ಲ ನಾಲ್ಕಾರು ಜನರ ಆವಶ್ಯಕತೆಯಿತ್ತು. ರಾಜಾರಾಯರು ಕೋಟೆಯಲ್ಲಿದ್ದ ಹುಡುಗರಿಗೆ ಈ ವಿಷಯ ತಿಳಿಸಿದರು. ಕೆಲಸ ತೀರ ಸರಳವಾಗಿತ್ತು. ಅಜ್ಜಂಪುರ ಬೀರೂರು ರಸ್ತೆಯಲ್ಲಿ, ಪ್ರೌಢಶಾಲೆಯ ಸಮೀಪದಲ್ಲಿದ್ದ ಬೃಹತ್ ಆಲದ ಮರದ ಕೆಳಗೆ ವಾಹನ ಗಣತಿಯ ಟೆಂಟ್ ಹಾಕಿದೆವು. ಚಿಕ್ಕದೊಂದು ಟೋಲ್ ಗೇಟನ್ನು ನಾವೇ ನಿರ್ಮಿಸಿಕೊಂಡೆವು. ಆ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ತಡೆದು ನಿಲ್ಲಿಸಿ, ಅದು ಎಲ್ಲಿಂದ ಬರುತ್ತಿದೆ, ಯಾವ ಮಾರ್ಗವಾಗಿ ಎಲ್ಲಿಗೆ ಹೋಗುತ್ತದೆ ಇತ್ಯಾದಿ ವಿವರಗಳನ್ನು ನಮೂದಿಸಿಕೊಂಡು ಹೊರಬಿಡಲಾಗುತ್ತಿತ್ತು. ನಾವು ಕೈಬೀಸಿ, ದುಡ್ಡುಕೊಡುತ್ತೇವೆಂದರೂ ನಿಲ್ಲಿಸದ ಬಸ್‌ಗಳು ಇರುವಾಗ, ನಾವು ಬೀಸುತ್ತಿದ್ದ ಕೆಂಪು ಬಾವುಟಕ್ಕೆ ಆ ಶಕ್ತಿ ಇರುವುದು ಮನವರಿಕೆಯಾಯಿತು. ರಸ್ತೆಯ ಮಧ್ಯಕ್ಕೆ ಹೋಗಿ ವಾಹನಗಳನ್ನು ನಿಲ್ಲಿಸುವ ಸಾಹಸಕ್ಕೆ ಹುಡುಗರು ಹೋಗಬಹುದೆಂಬ ಆತಂಕದಿಂದ ರಾತ್ರಿ ವೇಳೆ ಆಗೀಗ ಬಂದು ಎಚ್ಚರಿಸುತ್ತಿದ್ದರು. ಅವರ ಮಾನವೀಯ ಕಳಕಳಿ, ಪರೋಕ್ಷ ಸಹಾಯಗುಣಗಳು ಮುಂದೆ ನಮಗೆ ಮನವರಿಕೆಯಾದವು. ಆ ಸಂದರ್ಭದಲ್ಲಿ ನಾವು ಸ್ವಲ್ಪ ಹಣ ಗಳಿಸಿದೆವೆಂದು ಈಗ ಹೇಳಿಕೊಳ್ಳುವುದು  ಸುಲಭ, ಆದರೆ ಆ ದಿನಗಳಲ್ಲಿ ಆ "ಸ್ವಲ್ಪ" ಹಣಕ್ಕೆ "ತುಂಬ" ಮೌಲ್ಯವಿತ್ತೆನ್ನುವುದನ್ನು ಅದರಲ್ಲಿ ಭಾಗವಹಿಸಿದ್ದ  ಗೆಳೆಯರು ಈಗಲೂ ಒಪ್ಪುತ್ತಾರೆಂದು ತಿಳಿಯುತ್ತೇನೆ. ಈ ಬ್ಲಾಗ್‌ನ್ನು ಓದಿದ ಅವರ ಮೊಮ್ಮಗ ಪ್ರದೀಪ್‌ ಕಶ್ಯಪ್ ತನ್ನ ಅಜ್ಜನ ಬಗ್ಗೆ ಬರೆದಿರುವ ಚಿತ್ರ-ವಿವರಗಳು ಇಲ್ಲಿವೆ :

"ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿಯವರು. ಇವರ ತಂದೆ ಕ೦ದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರಿಂದ ಬಾಲ್ಯಾವಸ್ಥೆಯಲ್ಲಿಯೇ ಸಾ೦ಸ್ಕೃತಿಕ  ನಗರಿ ಮೈಸೂರಿಗೆ ಹೋಗಿ ನೆಲೆಸಿದರು. ಕಾಲಚಕ್ರ ತಿರುಗಿದ೦ತೆ ರಾಜಾರಾಯರು ತಮ್ಮ ಸಹೋದರಿ ಶ್ರೀಮತಿ ರುಕ್ಮಿಣಿಯಮ್ಮನವರ ನಂಟಿನಿಂದ ಆಗಿನ ಕಾಲದ ಪ್ರಸಿದ್ದ ನಾಟಕ ಕಲಾವಿದ ಶ್ರೀ  ಗರೂಡ ಸದಾಶಿವರಾಯರ ನಾಟಕಮಂಡಳಿ ಸೇರಿಕೊಂಡು ಕಲಾಸೇವೆಯನ್ನು ಪ್ರಾರಂಭಿಸಿದರು. ತರುವಾಯ ಲೋಕೋಪಯೋಗಿ ಇಲಾಖೆಯಲ್ಲಿ ನೌಕರಿಗೆ ಸೇರಿಕೊಂಡು ತಮ್ಮ ಕಾರ್ಯಕ್ಷೇತ್ರವನ್ನು ಅಜ್ಜಂಪುರಕ್ಕೆ ಬದಲಾಯಿಸಿದರು. ಅಲ್ಲಿನ ಕಲಾ ಸೇವಾ ಸಂಘದ ಖಾಯಂ ಕಲಾವಿದರಾಗಿ,ವಿಶೇಷವಾಗಿ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸಿ ಜನರ ಮನಸ್ಸನ್ನು ಗೆದ್ದರು. ೧೯೬೨ರಲ್ಲಿ ಈ ಸಂಘದವರು ಅಭಿನಯಿಸಿದ "ಶ್ರೀರಾಮ ಪಾದುಕಾ ಪಟ್ಟಾಭಿಷೇಕ" ನಾಟಕದ ವೀಕ್ಷಣೆಗೆ ಕನ್ನಡಿಗರ ಕಣ್ಮಣಿಗಳಾದ ರಾಜ್‍ಕುಮಾರ್ ಮತ್ತು ನರಸಿಂಹರಾಜುರವರು ಆಗಮಿಸಿ, ರಾಯರ ಅಭಿನಯ ನೋಡಿ "ಇವರು ರಂಗಭೂಮಿಯ ಹಿನ್ನಲೆ ಉಳ್ಳವರಾಗಿದ್ದವರಂತೆ ಕಾಣುತ್ತಾರೆ " ಎಂದು ಅವರ ಪ್ರತಿಭೆಯನ್ನು ಗುರುತಿಸಿದ್ದರು.

ಮಹಾತ್ಮ ಗಾಂಧಿ ಅವರ ಜನ್ಮ ಶತಾಬ್ದಿ ವರ್ಷದಲ್ಲಿ ಕಲಾ ಸೇವಾ ಸಂಘದವರು "ಪರಿವರ್ತನ" ಎಂಬ ನಾಟಕವನ್ನು ಬೆಂಗಳೂರಿನ ಪುರಭವನದಲ್ಲಿ ಪ್ರದರ್ಶಿಸಿದಾಗ ರಾಯರು ಗಾಂಧಿ ಪಾತ್ರವನ್ನು ನಿರ್ವಹಿಸಿದರು. ರಾಜ್ಯ ಸರ್ಕಾರವು ಕಲಾವಿದರಿಗೆ  ನೀಡುವ ಗೌರವ ಧನವನ್ನು ರಾಯರಿಗೂ ಮಂಜೂರು ಮಾಡಿತ್ತು. ಬಡತನವಿದ್ದರು ತಮ್ಮ ಅಭಿನಯದ ಮೂಲಕ ಜನರನ್ನು ರಂಜಿಸಿದ ರಾಯರು ೧೯೮೬ರಲ್ಲಿ ತಮ್ಮ ಜೀವನದ ಕೊನೆಯ ಪರದೆಯನ್ನು ಎಳೆದರು. ಇವರು ಅಜ್ಜಂಪುರದ ಮುಖ್ಯವಾಹಿನಿಯಲ್ಲಿ ಸುಮಾರು ೫೦ ವರ್ಷಗಳ ಸಂಬಂಧವನ್ನು ಇಟ್ಟುಕೊಂಡಿದ್ದರು ಎನ್ನುವುದು ಹೆಮ್ಮೆಯ ವಿಷಯ. ಇವರಿಗೆ ನಮ್ಮ ನಮನಗಳು".

* * * * * * *

ಕಾಮೆಂಟ್‌ಗಳು

  1. ಪ್ರೀತಿಯ ಶಂಕ್ರು,
    ಶ್ರೀ ರಾಜಾರಾಯರ ಕುರಿತ ನಿನ್ನ ಲೇಖನ , ಊಹಿಸಲಾಗದ್ದು. ಊರಿನ ದಡ್ಹೂತಿ ಗಣ್ಯರು,ಮುಂದಾಳುಗಳ ಪೈಕಿ, ರಾಜಾರಾಯರ ಬಗ್ಗೆ - ಲೇಖನ ಬರಬಹುದೆಂಬ ಕಲ್ಪನೆ ಕೂಡ ಇತ್ತಿಲ್ಲ. most unexpected , but realy ನಮ್ಮ ನೆನೆಪಿನ ಪಡಸಾಲೆಯಲ್ಲಿ , ಹಿಂದಿನ ಆ ಎಲ್ಲ ಚಿತ್ರಪಟಗಳ ಸಾಲಲ್ಲಿ ಹಾಕುವಂತಹದ್ದೆ. ನಮ್ಮೊಡನಿದ್ದ , ಅತಿ ಸಾಮಾನ್ಯರಲ್ಲಿ ಒಬ್ಬರಾದ ,ಇವರ ಒಡನಾಟ ಅದೆಷ್ಟು ಬೇಗ,ಮರೆತೇ ಹೋಗಿತ್ತು ನೋಡು.ಉಳಿದ ಹಿರಿಯರು ಚಿಕ್ಕ ಬಾಲಕರಾದ ನಮ್ಮೊಡನೆ
    ವ್ಯವಹರಿಸುತ್ತಿದ್ದ ಧೋರಣೆಗೂ, ರಾಜಾರಾಯರು ಪ್ರೀತಿಯಿಂದ, ಬೆರೆಯುತ್ತಿದ್ದ, ಮಾತನಾಡುತ್ತಿದ್ದ ರೀತಿಗೂ ಅದೆಷ್ಟು ಅಂತರ- ಹಾಗಾಗೇ ನಮಗೆ ಈಗಲೂ ಅವರ ನೆನೆಪು ಖುಷಿ ಯಾಗುವಂತಹದ್ದು.
    ನೀನು ತಿಳಿಸಿದ ವಾಹನ ಗಣತಿಯಲ್ಲಿ ನಾನೂ ಇದ್ದೆ , ಆಗ ನನಗೆ ೧೩ ರ ವಯಸ್ಸು, ದಿನಕ್ಕೆ ೨ ರುಪಾಯಿ ೬೨ ಪೈಸೆ ಯಂತೆ, ಒಂದು ವಾರದಲ್ಲಿ ಬಂದ ೧೮ ರೂಪಾಯಲ್ಲಿ, ನಮ್ಮ ಅಪ್ಪ ಒಂದು ಕಬ್ಬಿಣದ ಟ್ರಂಕ್ ತೆಗಿಸಿ ಕೊಟ್ರು, ಅದು ನನ್ನ ಜೀವನದ ಮೊದಲ ದುಡಿಮೆ. ರಾತ್ರಿ ಆ ಚಳಿಯಲ್ಲಿ, ನಮ್ಮೊಡನೆ ಕಾವಲಿಗೆ ಕ ಳುಹಿದ್ದ PWD ಜವಾನ , ಅಲ್ಲೇ ಹುಲ್ಲ ಮೇಲೆ, ಎಣ್ಣೆ ಹಾಕಿ ಮಲಗಿದ್ದ. ಆ ವಾಸನೆ - ಹತ್ತಿರವಿದ್ದ ಹೆಣ ಕೊಯ್ಯುವ ಮನೆ, ಸಾಬರ ಸ್ಮಶಾನ, ಲಾಟೀನು ದೀಪ - ಇವೆಲ್ಲ ಆ ವಯಸ್ಸಲ್ಲಿ ಬಂದ ಜೀವಾನುಭವ. ರಾಜಾರಾಯರು ಏಯ್ ನೀನು ಗಂಡು ಹುಡಗ ಕಣೊ, ಹೆದ್ರಿಕೂ ಬೇಡಾ, ಅಂತ ಹೇಳಿ ಹೋದ ಮೇಲೆ ಸಣ್ಣಗೆ ನಡುಕ. ಅಂತೂ ಒಂದೆರಡು ದಿನದ ನಂತರ ನಿಧಾನವಾಗಿ ಅಭ್ಯಾಸವಾಯ್ತು. ಅಪ್ಪ ಅಮ್ಮನ ಒಡನಾಟದ comfort zone ನಿಂದ ಹೊರಬಿದ್ದ ಆ ದಿನಗಳು ಮರೆಯುವಂತಹದಲ್ಲ.
    Thank you.......a lot.
    ಬಿ ಎಸ್ಸ್ ಲಕ್ಷ್ಮೀ ನಾರಾಯಣರಾವ್

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು, ಲೇಖನ ಸೊಗಸಾಗಿ ಮೂಡಿ ಬಂದಿದೆ . ನಾನು ನನ್ನ ಅಜ್ಜನನ್ನು ನೋಡಿಲ್ಲವಾದರೂ ನಿಮ್ಮ ಲೇಖನದಿಂದ ಅವರ ವ್ಯಕ್ತಿತ್ವ ಸಂಪೂರ್ಣ ಮನವರಿಕೆ ಆಗಿ ಗೌರವ ಹೆಚ್ಚಿದೆ .
    Regards,
    Pradeep Kashyap

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.