20. ನಮ್ಮ ಅಧ್ಯಾಪಕರು

ಗುರು ಸ್ಮರಣೆ ಆತ್ಮೀಯ ಓದುಗರೇ, ಎಲ್ಲರಿಗೂ ಐವತ್ತೇಳನೆಯ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಅಜ್ಜಂಪುರದ ಪ್ರೌಢಶಾಲೆಯ ಬಗ್ಗೆ ಕಳೆದ ತಿಂಗಳು ಒಂದು ಲೇಖನ ಪ್ರಕಟವಾಗಿದೆ. ಇದೇ ಸರಣಿಯಲ್ಲಿ ಮುಂದುವರೆಯುತ್ತ, ೧೯೬೭-೬೯ ಸುಮಾರಿನಲ್ಲಿ ಆ ಶಾಲೆಯಲ್ಲಿದ್ದ ಕೆಲ ಅಧ್ಯಾಪಕರು ಮತ್ತು ಅವರ ವಿಶೇಷತೆಗಳ ಬಗ್ಗೆ ಒಂದು ಚಿಕ್ಕ ನೆನಪು ಇಲ್ಲಿದೆ. ಅಜ್ಜಂಪುರದ ಪ್ರೌಢಶಾಲೆಗೆ ಆಗಿದ್ದ ಹೆಸರು ಶೆಟ್ರ ಸಿದ್ಧಪ್ಪ ತಾಲೂಕ್ ಬೋರ್ಡ್ ಹೈಸ್ಕೂಲ್. ಇದನ್ನು ಸಂಕ್ಷಿಪ್ತವಾಗಿ ಎಸ್.ಎಸ್.ಟಿ.ಬಿ. ಹೈಸ್ಕೂಲ್ ಎಂದು ಕರೆಯಲಾಗುತ್ತಿತ್ತು. ಈ ಶಾಲೆಗೆ ಆಧಾರವಾಗಿ ನಿಂತ ಶೆಟ್ರ ಸಿದ್ಧಪ್ಪನವರ ಬಗೆಗೂ ಈ ಹಿಂದೆ ಈ ಬ್ಲಾಗ್‌ನಲ್ಲಿ ಲೇಖನವೊಂದು ಪ್ರಕಟವಾಗಿದೆ. ಅಂತೆಯೇ ಶಾಲೆಯ ತಮ್ಮ ಸೇವಾವಧಿಯನ್ನು ಇಲ್ಲಿಯೇ ಪೂರ್ಣಗೊಳಿಸಿ ನಿವೃತ್ತರಾದ ಮುಖ್ಯೋಪಾಧ್ಯಾಯರಾಗಿದ್ದ ಎನ್. ಎಸ್. ಅನಂತರಾಯರ ಕುರಿತಾದ ಲೇಖನವೂ ಪ್ರಕಟಗೊಂಡಿದೆ. ಹಿಂದಿನ ಸಂಚಿಕೆಗಳನ್ನು ಗಮನಿಸಿರದ ಓದುಗರಿಗೆಂದು ಈ ಮಾಹಿತಿ. ಈ ಕಾಲಘಟ್ಟದಲ್ಲಿ ಅನಂತರಾಯರ ಸಹೋಪಾಧ್ಯಾಯ ರಾಗಿದ್ದವರ ಕುರಿತಾದ ನೆನಪುಗಳು ಇಲ್ಲಿದೆ. ಕನ್ನಡ ಪಂಡಿತರೆಂಬ ಪ್ರತ್ಯೇಕ ಭಾಷಾ ಅಧ್ಯಾಪಕರು ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಾಯವಾಗಿದ್ದಾರೆ . ಆಗ ಕನ್ನಡದ ಬೋಧನೆಗೆಂದು ಇದ್ದವರು ಎಂ.ಬಿ. ಪಾರ್ಥಸಾರಥಿ ಅಯ್ಯಂಗಾರ್ಯರು. ನಾವು ಈ ಶಾಲೆಯಲ್ಲಿ ಓದುತ್ತಿದ್ದಾಗ, ಬಿ.ಎಂ.ಶ್ರೀ. ಪ್ರೊ.ಹಿರಿಯ...