20. ನಮ್ಮ ಅಧ್ಯಾಪಕರು


ಗುರು ಸ್ಮರಣೆ 

ಆತ್ಮೀಯ ಓದುಗರೇ,

ಎಲ್ಲರಿಗೂ ಐವತ್ತೇಳನೆಯ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಅಜ್ಜಂಪುರದ ಪ್ರೌಢಶಾಲೆಯ ಬಗ್ಗೆ ಕಳೆದ ತಿಂಗಳು ಒಂದು ಲೇಖನ ಪ್ರಕಟವಾಗಿದೆ. ಇದೇ ಸರಣಿಯಲ್ಲಿ ಮುಂದುವರೆಯುತ್ತ, ೧೯೬೭-೬೯ ಸುಮಾರಿನಲ್ಲಿ ಆ ಶಾಲೆಯಲ್ಲಿದ್ದ ಕೆಲ ಅಧ್ಯಾಪಕರು ಮತ್ತು ಅವರ ವಿಶೇಷತೆಗಳ ಬಗ್ಗೆ ಒಂದು ಚಿಕ್ಕ ನೆನಪು ಇಲ್ಲಿದೆ. 


ಅಜ್ಜಂಪುರದ ಪ್ರೌಢಶಾಲೆಗೆ ಆಗಿದ್ದ ಹೆಸರು ಶೆಟ್ರ ಸಿದ್ಧಪ್ಪ ತಾಲೂಕ್ ಬೋರ್ಡ್ ಹೈಸ್ಕೂಲ್. ಇದನ್ನು ಸಂಕ್ಷಿಪ್ತವಾಗಿ ಎಸ್.ಎಸ್.ಟಿ.ಬಿ. ಹೈಸ್ಕೂಲ್ ಎಂದು ಕರೆಯಲಾಗುತ್ತಿತ್ತು. ಈ ಶಾಲೆಗೆ ಆಧಾರವಾಗಿ ನಿಂತ ಶೆಟ್ರ ಸಿದ್ಧಪ್ಪನವರ ಬಗೆಗೂ ಈ ಹಿಂದೆ ಈ ಬ್ಲಾಗ್‌ನಲ್ಲಿ ಲೇಖನವೊಂದು ಪ್ರಕಟವಾಗಿದೆ. ಅಂತೆಯೇ ಶಾಲೆಯ ತಮ್ಮ ಸೇವಾವಧಿಯನ್ನು ಇಲ್ಲಿಯೇ ಪೂರ್ಣಗೊಳಿಸಿ ನಿವೃತ್ತರಾದ ಮುಖ್ಯೋಪಾಧ್ಯಾಯರಾಗಿದ್ದ ಎನ್. ಎಸ್. ಅನಂತರಾಯರ ಕುರಿತಾದ ಲೇಖನವೂ ಪ್ರಕಟಗೊಂಡಿದೆ. ಹಿಂದಿನ ಸಂಚಿಕೆಗಳನ್ನು ಗಮನಿಸಿರದ ಓದುಗರಿಗೆಂದು ಈ ಮಾಹಿತಿ. ಈ ಕಾಲಘಟ್ಟದಲ್ಲಿ ಅನಂತರಾಯರ ಸಹೋಪಾಧ್ಯಾಯ ರಾಗಿದ್ದವರ ಕುರಿತಾದ ನೆನಪುಗಳು ಇಲ್ಲಿದೆ. 



ಕನ್ನಡ ಪಂಡಿತರೆಂಬ ಪ್ರತ್ಯೇಕ ಭಾಷಾ ಅಧ್ಯಾಪಕರು ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಾಯವಾಗಿದ್ದಾರೆ . ಆಗ ಕನ್ನಡದ ಬೋಧನೆಗೆಂದು ಇದ್ದವರು ಎಂ.ಬಿ. ಪಾರ್ಥಸಾರಥಿ ಅಯ್ಯಂಗಾರ್ಯರು. ನಾವು ಈ ಶಾಲೆಯಲ್ಲಿ ಓದುತ್ತಿದ್ದಾಗ, ಬಿ.ಎಂ.ಶ್ರೀ. ಪ್ರೊ.ಹಿರಿಯಣ್ಣ, ಪ್ರೊ. ಎ.ಎನ್. ಮೂರ್ತಿರಾಯರು, ಜಿ.ಪಿ. ರಾಜರತ್ನಂ ಮುಂತಾದ ಮಹೋಪಾಧ್ಯಾಯರ ಹೆಸರುಗಳನ್ನೂ ಕೇಳಿರಲಿಲ್ಲ. ಆದರೆ ಸಾಹಿತ್ಯದಲ್ಲಿ ನಮಗೆ ಅಭಿರುಚಿ ಹುಟ್ಟುವಂತೆ ಮಾಡಿ, ಮೇಲೆ ಕಾಣಿಸಿದವರಷ್ಟೇ ಅಲ್ಲದೆ, ಇನ್ನೂ ಅನೇಕರನ್ನು ನಮಗೆ ಎಂ.ಬಿ.ಪಿ. ಪರಿಚಯಿಸಿದರು. ಅವರದು ಸಾಂಪ್ರದಾಯಿಕ ದಿರಿಸು. ಕಚ್ಚೆಪಂಚೆ, ಕಪ್ಪು ಕ್ಲೋಸ್ ಕಾಲರ್ ಕೋಟು, ತಲೆಯ ಮೇಲೆ ಕರಿಯ ಟೋಪಿ, ಹಣೆಯಲ್ಲಿ ನೀಳವಾದ ಕೆಂಪುನಾಮ. ಎಂ.ಬಿ.ಪಿ. ಪಾಠ ಮಾಡುವ ಶೈಲಿ ವಿಶಿಷ್ಟವಾಗಿತ್ತು. ಧೃಡವಾದ ಧ್ವನಿ, ಸ್ಪಷ್ಟ ಉಚ್ಚಾರಣೆ, ಮುದ್ದಾದ ಬರವಣಿಗೆ, ಹಳೆಗನ್ನಡದ ಪಾಠದಲ್ಲಿ ಅವರಿಗೆ ಅಪಾರ ಆಸಕ್ತಿ. ವ್ಯಾಕರಣದ ಅನೇಕ ಕ್ಲಿಷ್ಟ ಸಂಗತಿಗಳನ್ನು ಅವರು ಸ್ವಾರಸ್ಯಕರ ಉದಾಹರಣೆಗಳೊಂದಿಗೆ ತಿಳಿಸುತ್ತಿದ್ದ ಪರಿಯಿಂದಾಗಿ, ಅದು ವಿದ್ಯಾರ್ಥಿಗಳ ಮನದಲ್ಲಿ ಅಚ್ಚೊತ್ತಿ ನಿಲ್ಲುತ್ತಿತ್ತು. ಸಂದಿ ಮತ್ತು ಸಂಧಿ ಈ ಎರಡು ಶಬ್ದಗಳಿಗೆ ಅವರು ನೀಡಿದ ವಿವರಣೆಯಿಂದಾಗಿ, ಅದು ಎಂದಿಗೂ ಮರೆಯಲಾರದು. ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳೇ ಹೆಚ್ಚಿರುತ್ತಿದ್ದುದರಿಂದ ಅಕಾರ ಹಕಾರ ದೋಷಗಳು ಮಾತನಾಡುವಾಗ, ಬರೆಯುವಾಗ ಕಾಣಿಸಿಕೊಳ್ಳುವುದು ಸ್ವಾಭಾವಿಕವಾಗಿತ್ತು. ಅಂಥ ಸಂದರ್ಭಗಳಲ್ಲಿ ಅವರು ಪಾಂಡಿತ್ಯವನ್ನು ಮೆರೆಸದೇ, ವಿದ್ಯಾರ್ಥಿಗಳನ್ನು ಕೀಳರಿಮೆಗೆ ದೂಡದಂತೆ, ಆಯಾ ಶಬ್ದಗಳಿಗೆ ಸಂವಾದೀ ಪದಗಳನ್ನು ಉದಾಹರಿಸಿ, ಆ ಶಬ್ದದ ಸ್ಪಷ್ಟ ರೂಪ ನೆಲೆಗೊಳ್ಳುವಂತೆ ಮಾಡುತ್ತಿದ್ದರು. 



ನಾವು ನಾಲ್ಕಾರು ಗೆಳೆಯರು ಭೌತಶಾಸ್ತ್ರದ ಲೆಕ್ಕವೊಂದನ್ನು ಅವರ ಮನೆಯ ಜಗುಲಿಯಲ್ಲಿ ಕುಳಿತು ಬಿಡಿಸುವುದರಲ್ಲಿ ನಿರತರಾಗಿದ್ದೆವು. ಎಂ.ಬಿ.ಪಿ. ಮನೆಯಂಗಳದಲ್ಲಿ ಬೆಳೆದಿದ್ದ ಹೂಗಳನ್ನು ಕೀಳುತ್ತಿದ್ದರೂ, ಅವರ ಗಮನ ನಮ್ಮ ಚರ್ಚೆಯ ಬಗ್ಗೆ ಇದ್ದುದು ನಂತರ ತಿಳಿಯಿತು. ನಮ್ಮನ್ನು ಕುರಿತು ಅದೇನು ಲೆಕ್ಕ, ಅದಕ್ಕೇಕೆ ಕಷ್ಟಪಡುತ್ತಿರುವಿರಿ ಎಂದೆಲ್ಲ ಕೇಳಿದರು. ಕನ್ನಡ ಅಧ್ಯಾಪಕರಿಗೆ ಭೌತಶಾಸ್ತ್ರದ ಅರಿವೇನು ಇದ್ದೀತು ಎಂಬ ಭಾವ ನಮಗೊಮ್ಮೆ ಮೂಡಿದ್ದು ಸುಳ್ಳಲ್ಲ. ಆದರೂ ಅವರ ಪ್ರಶ್ನೆಗಳಿಗೆ ಉತ್ತರಿಸಿದೆವು. ಅವರು ಪ್ರಶ್ನೆಯ ಆರಂಭದಿಂದ ನಮ್ಮನ್ನೇ ಕೇಳುತ್ತ ಅದರ ಮುಂದಿನ ಹಂತಗಳೇನಿರಬಹುದು ಎಂದು ಕೇಳಿದರು. ನಾವು ನಮಗೆ ತಿಳಿದಂತೆ ಒಂದೊಂದು ವಿಧಾನಗಳನ್ನು ವಿವರಿಸಿದೆವು. ಅದು ವೇಗೋತ್ಕರ್ಷಕ್ಕೆ ಸಂಬಂಧಿಸಿದ ಪ್ರಶ್ನೆಯಾದ್ದರಿಂದ, ವಸ್ತುವಿನ ಚಲನೆಯು ಹೆಚ್ಚಾಗಲು ಕಾರಣವಾಗುವ ಬಲದ ಮೂಲತತ್ವಗಳನ್ನು ಕುರಿತಂತೆ, ನಮ್ಮನ್ನೇ ಪ್ರಶ್ನಿಸಿ, ಉತ್ತರ ಪಡೆದ ನಂತರ, ಈಗ ಇವುಗಳಲ್ಲಿ ಎಲ್ಲವನ್ನೂ ನಿಮ್ಮ ಲೆಕ್ಕಕ್ಕೆ ಅನ್ವಯಿಸಿ ನೋಡಿ ಎಂದರು. ನಮ್ಮ ಆಶ್ಚರ್ಯಕ್ಕೆ ಲೆಕ್ಕಕ್ಕೆ ಸರಿಯಾದ ಉತ್ತರ ಬಂದಿತ್ತು. ಅದನ್ನು ಉತ್ತರ ನೀಡಿರುವ ಪುಟದಲ್ಲಿ ತಾಳೆ ನೋಡಿಸಿ, ಈಗ ಸರಿಯಾಯಿತಲ್ಲವೇ ಎಂದು ಒಳನಡೆದರು. 


ಎಂ.ಬಿ.ಪಿ. ಪಂಡಿತರು. ಅವರದು ಶಿಷ್ಟ ಭಾಷೆ. ಎಸ್.ಆರ್. ಈಶ್ವರಪ್ಪನವರು ಭೌತಶಾಸ್ತ್ರದ ಅಧ್ಯಾಪಕರು. ಅವರು ಗ್ರಾಮೀಣ ಪ್ರದೇಶದವರು. ಭೌತಶಾಸ್ತ್ರವನ್ನು ಗ್ರಾಮೀಣ ಕನ್ನಡದಲ್ಲೇ ಹೇಳಿಕೊಟ್ಟವರು. ೮ನೇ ತರಗತಿಯಿಂದ ೧೦ರವರೆಗೆ ಅನೇಕ ತರಗತಿಗಳಲ್ಲಿ ಪಾಠ ಮಾಡುತ್ತಿದ್ದರು. ಯಾವ ತರಗತಿಯಲ್ಲಿ ಯಾವ ಪಾಠವನ್ನು ಎಲ್ಲಿಗೆ ನಿಲ್ಲಿಸಿದ್ದೆನೆಂಬುದನ್ನು ಯಾವ ಪುಸ್ತಕ, ಟಿಪ್ಪಣಿಗಳ ನೆರವಿಲ್ಲದೆ, ತಮ್ಮ ಅದ್ಭುತ ನೆನಪಿನ ಶಕ್ತಿಯಿಂದಲೇ ಮಾಡುತ್ತಿದ್ದರು. ಕಂಕ ನನ್ಮಕ್ಮಳಾ, ಬರ್ಕಳ್ಳ್ರಲಾ, ಎಂದು ಶುರು ಮಾಡಿದರೆ, ಪದ, ಶಬ್ದಗಳಿಗೆ ತಡಕಾಡದೆ ಆಯಾ ಪಾಠಗಳ ನೋಟ್ಸನ್ನು ಸರಾಗವಾಗಿ  ಬರೆಸುತ್ತಿದ್ದರು. ವಿದ್ಯಾರ್ಥಿಗಳನ್ನು ಬಯ್ಯುವುದಾಗಲೀ, ಶಿಕ್ಷಿಸುವುದಾಗಲೀ ಇಂದು ಗಣನೀಯ ಅಪರಾಧವಾಗಿರುವುದರಿಂದ ಅವರಂಥ ಅಧ್ಯಾಪಕರು ಇಂದಿನ ದಿನಮಾನಗಳಿಗೆ ಹೇಳಿಸಿದವರಲ್ಲ. ಅವರ  ಸಿಟ್ಟು, ಸೆಡವುಗಳ ಕಾರಣವೆಂದರೆ, ವಿದ್ಯಾರ್ಥಿಗಳಿಗೆ ತಮಗಿರುವಷ್ಟೇ ವಿಷಯದ ಕುರಿತಾಗಿ ಗೌರವ, ಶ್ರದ್ಧೆಗಳು ಇರಬೇಕೆಂ ಬಯಕೆ . 

ಎಂ.ಆರ್. ರಾಘವೇಂದ್ರ ರಾವ್
ಶಾಲೆಯ ಆ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೊಸ ಆಯಾಮ ನೀಡಿ, ವಿದ್ಯಾರ್ಥಿಗಳಲ್ಲಿ ಇರುವ ಕಲಾ ಪ್ರತಿಭೆಗಳನ್ನು ಹೆಕ್ಕಿ ತೆಗೆಯುವಲ್ಲಿ ಯಶಸ್ವಿಯಾದವರೆಂದರೆ ಎಂ.ಆರ್.ಆರ್. ಎಂದು ನಾವು ಕರೆಯುತ್ತಿದ್ದ ಎಂ.ಆರ್. ರಾಘವೇಂದ್ರ ರಾವ್. ತೆಳುವಾದ ನಿಲುವು, ತುಂಟತನ ಮತ್ತು ಉತ್ಸಾಹದ ಚಿಲುಮೆಯಂತಿದ್ದ ಎಂ.ಆರ್.ಆರ್. ವಾಸ್ತವದಲ್ಲಿ ಜೀವಶಾಸ್ತ್ರದ ಅಧ್ಯಾಪಕರು. ಪ್ರವೃತ್ತಿಯಿಂದ ಕಲಾವಿದರು. ಅವರು ಶಾಲೆಯ ವಾರ್ಷಿಕೋತ್ಸವದಲ್ಲಿ ಆಡಿಸುತ್ತಿದ್ದ ನಾಟಕಗಳಲ್ಲಿ ಅವರು ಪಾತ್ರ ಪರಿಚಯ ಮಾಡುತ್ತಿದ್ದ ವಿಧಾನ ಅಂದಿಗೆ ವಿಶಿಷ್ಟವಾಗಿ ಕಾಣುತ್ತಿತ್ತು. ನಾಟಕದ ಎಲ್ಲ ಪಾತ್ರಗಳೂ, ರಂಗಮಂಚದ ಮೇಲೆ ನಾಟಕ ಆರಂಭದ ಪರಿಚಯ ಮಾಡುವ ಸಂದರ್ಭದಲ್ಲಿ ಬಂದು, ಒಂದೆರಡು ಮುಖ್ಯ ಸಂಭಾಷಣೆಗಳನ್ನು ಹೇಳುವ ಮೂಲಕ ಪ್ರೇಕ್ಷಕರಿಗೆ ಆ ಪಾತ್ರ ಎಂಥದ್ದೆಂದು ತಿಳಿಸುವ ಜತೆಗೆ, ಅದನ್ನು ನಿರ್ವಹಿಸುವ ಕಲಾವಿದನ ಕ್ಷಮತೆಯನ್ನು ಆರಂಭದಲ್ಲೇ ಒರೆಹಚ್ಚುವ ತಂತ್ರ ಅದು. ಹಾಗೆ ಅವರು ಬೆಳೆಸಿದ ಕಲಾವಿದ ವಿದ್ಯಾರ್ಥಿಗಳಲ್ಲಿ ಇಂದಿಗೂ ನಮ್ಮ ನಡುವೆ ಇರುವ ಮಹಾವೀರ ಜೈನ್, ಉತ್ತಮ ಹಾಸ್ಯ ಕಲಾವಿದರಾಗಿ ರೂಪುಗೊಂಡರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಾಗಿದ್ದ ನಮಗೆ, ಷೇಕ್ಸ್‌ಪಿಯರ್ ನಂಥ ಮಹಾನ್ ನಾಟಕಕಾರನ ಪರಿಚಯವಾಗುವುದಂತೂ, ನಮ್ಮ ಇಂಗ್ಲಿಷ್ ಅಧ್ಯಾಪಕರಿಂದ ಶಕ್ಯವಿರಲಿಲ್ಲ. ಏಕೆಂದರೆ ಅವರಿಗೆ ತಮ್ಮ ಪಠ್ಯಭಾಗವನ್ನು ಮುಗಿಸಿದರೇ ಸಾಕಾಗುತ್ತಿತ್ತು. ಆದರೆ ಅದು ಹಾಗಾಗಲಿಲ್ಲ. ಜಬ್ಬಾರ್ ಎಂಬ ಅಧ್ಯಾಪಕರು ನಮಗೆ ಕ್ರಾಫ್ಟ್ ಟೀಚರ್ ಎಂದು ನಿಯಮಿತರಾಗಿದ್ದರು. ಅವರು ಕುಶಲಕಲೆಯ ಜತೆಗೆ ತೋಟಗಾರಿಕೆಯ ವಿಷಯಗಳನ್ನು ತಿಳಿಸುತ್ತಿದ್ದರು. ಬಹುತೇಕ ಅವರು ಅಂಥ ಚಟುವಟಿಕೆಗಳಲ್ಲಿ ತೊಡಗಿದ್ದು ಕಡಿಮೆಯೇ ಎನ್ನಬೇಕು. ಬಟ್ಟೆ ಬರೆಗಳಲ್ಲಿ ಅವರದು ತುಂಬಾ ಅಚ್ಚುಕಟ್ಟು. ಸ್ಫುರದ್ರೂಪಿ. ಯಾರಾದರೂ ವಿಷಯದ ಅಧ್ಯಾಪಕರು ರಜೆ ತೆಗೆದುಕೊಂಡಾಗ, ಅವರ ಬದಲಿಗೆ ಬರುತ್ತಿದ್ದ ಜಬ್ಬಾರ್ ಒಂದು ಗಂಟೆಯ ಅವಧಿ ಮೇಜಿಗೆ ಒರಗಿ ನಿಂತುಕೊಂಡು ನಮಗೆ ಷೇಕ್ಸ್‌ಪಿಯರ್‌ನ ಹ್ಯಾಮ್ಲೆಟ್, ಮರ್ಚೆಂಟ್ ಆಫ್ ವೆನಿಸ್, ಟೇಮಿಂಗ್ ಆಫ್ ದ ಷ್ರೂ ಇತ್ಯಾದಿ ನಾಟಕಗಳ ಕಥಾನಕಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದರು. ಅವರ ಈ ಪಾಠದ ಪ್ರಯೋಜನ ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಯಲು ಮುಂದೆ ಸಹಾಯಕವಾಯಿತು. ಕಥನ ಕಲೆಯ ಉತ್ತಮ ಕ್ರಾಫ್ಟಮನ್ ಜಬ್ಬಾರ್.



ಹಿಂದೀ ಭಾಷೆಯನ್ನು ಕಲಿಸಲೆಂದು ಸಿ. ಮಂಜುನಾಥ್ (ಸಿ.ಎಂ.) ಎಂಬ ಅಧ್ಯಾಪಕರಿದ್ದರು. ಅವರು ಅಜ್ಜಂಪುರದವರೇ. ಗ್ರಾಮೀಣ ಪ್ರದೇಶವಾದ್ದರಿಂದ ಹಿಂದೀ ಜನರಿಗೆ, ವಿದ್ಯಾರ್ಥಿಗಳಿಗೆ ಆ ದಿನಗಳಲ್ಲಿ ತೀರ ಅಪರಿಚಿತ ಭಾಷೆ. ಸರಕಾರದ ತ್ರಿಭಾಷಾ ಸೂತ್ರ ಅಂದು ಉಚ್ಛ್ರಾಯದಲ್ಲಿದ್ದ ಕಾಲ. ರಾಷ್ಟ್ರಭಾಷಾ, ಪ್ರವೀಣ ಮುಂತಾದ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿರುತ್ತಿದ್ದವು. ಅದನ್ನೇ ಅಭ್ಯಾಸ ಮಾಡಿ ಉದ್ಯೋಗ ದೊರಕಿಸಿಕೊಳ್ಳುತ್ತಿದ್ದ ಸಂದರ್ಭಗಳು ಆಗ ಇತ್ತು.  ಅವರ ತಂದೆ ಕಾಟಿಗನೆರೆ ತಿಮ್ಮಪ್ಪಯ್ಯನವರೂ ಅಧ್ಯಾಪಕ ರಾಗಿದ್ದು, ಅವರನ್ನು ಕುರಿತಾದ ಒಂದು ಲೇಖನ ಹಿಂದಿನ ಸಂಚಿಕೆಗಳಲ್ಲಿ ಪ್ರಕಟವಾಗಿದೆ. ಸಿ.ಎಂ.ರದು ಕುಳ್ಳ ನಿಲುವು. ಆದರೆ ಅಪಾರ ಆತ್ಮವಿಶ್ವಾಸ. ಪಾಠ ಪ್ರವಚನಗಳಲ್ಲಿ ಅವರು ತಮ್ಮ ದಿರಿಸಿನಂತೆಯೇ ಉತ್ತಮ ಶಿಸ್ತನ್ನು ರೂಢಿಸಿಕೊಂಡಿದ್ದರು. ಹಿಂದೀ ಸಾಹಿತ್ಯದ ಅನೇಕ ಕವಿಗಳನ್ನು, ಕಾದಂಬರಿಕಾರರನ್ನು ಅವರು, ತಮ್ಮ ಪಠ್ಯ ಕ್ರಮದ ಹೊರತಾಗಿಯೂ ಕಲಿಸಿದರು. 



ಹೀಗೆ, 60ರ ದಶಕದ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಸಾಹಿತ್ಯಾಭಿರುಚಿ ಮತ್ತು ಸಾಂಸ್ಕೃತಿಕ ಜ್ಞಾನ ಬೆಳೆಯಲು ಈ ಅಧ್ಯಾಪಕರೆಲ್ಲರೂ ನೆರವಾದರು. ಇವರಷ್ಟೇ ಅಲ್ಲದೆ, ನಿಂಗಪ್ಪ, ಚಿಕ್ಕಬಸಪ್ಪ, ಹಾಲಪ್ಪ, ಡಿ. ಮುದ್ದೇಗೌಡ, ಟಿ.ಎನ್. ಗುರುಸಿದ್ದಪ್ಪ (ಶಾರೀರಕ ಶಿಕ್ಷಕರು) ವಜೀರ್ ಅಹ್ಮದ್ ಮುಂತಾದ ಅಧ್ಯಾಪಕರು ಶಾಲೆಯ ಪ್ರಗತಿಯಲ್ಲಿ ಕೈಜೋಡಿಸಿ ದುಡಿದವರು. ಅವರ ಸ್ಮರಣೆ  ಸಂತಸ ತರುವಂಥದು. ದಶಕಗಳು ಕಳೆದಂತೆ ವಿವಿಧ ಕಾಲಘಟ್ಟಗಳಲ್ಲಿ ಈ ಶಾಲೆಯಲ್ಲಿ ಕೆಲಸಮಾಡಿದ ಅನೇಕ ಅಧ್ಯಾಪಕರು ನಿಶ್ಚಯವಾಗಿ ತಮ್ಮ ವಿದ್ಯಾರ್ಥಿಗಳ ಮೇಲೆ ತಮ್ಮ ಪ್ರಭಾವ ಬೀರುವಲ್ಲಿ ಇದೇ ರೀತಿ ಯಶಸ್ವಿಗಳಾಗಿರುತ್ತಾರೆ. ಅಂಥವರನ್ನು ಸ್ಮರಿಸಲು, ನೆನಪಿಸಿಕೊಳ್ಳಲು, ಇದೊಂದು ಉತ್ತಮ ವೇದಿಕೆ. ಎಸ್.ಎಸ್.ಟಿ.ಬಿ. ಶಾಲೆ ಅಥವಾ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಸ್ಮರಿಸಿಕೊಂಡು ಅವರ ಬಗ್ಗೆ ನಾಲ್ಕಾರು ವಾಕ್ಯ ಬರೆಯಲಿ, ಅವರ ಚಿತ್ರಗಳನ್ನು ಪ್ರಕಟಿಸುವಂತಾಗಲಿ ಎನ್ನುವುದು ಆಶಯ. 

  

ಅಂದು ಶಾಲೆಯಲ್ಲಿದ್ದ ಮಲೆಯಪ್ಪ, ಅಜ್ಜಪ್ಪ, ವಿಠಲರಾವ್, ಸುಬ್ರಹ್ಮಣ್ಯ ಶಾಸ್ತ್ರಿ ಮುಂತಾದ ಶಾಲಾ ಬೋಧಕೇತರ ಸಿಬ್ಬಂದಿಗಳ   ವರ್ತನೆ, ಅದೆಷ್ಟು ಸೌಜನ್ಯಯುತ ಮತ್ತು ಪ್ರೀತಿಪೂರ್ವಕವಾಗಿತ್ತೆನ್ನುವುದು, ಶಾಲೆ ಬಿಟ್ಟ  ಅನೇಕ ದಶಕಗಳ ನಂತರ ವಿದ್ಯಾರ್ಥಿಗಳ ಅರಿವಿಗೆ ಬಂದಿರುತ್ತದೆಯೆಂದರೆ ಅದಕ್ಕೆ ಬದಲಾದ ಕಾಲಮಾನ, ಮಾನವೀಯ ಮೌಲ್ಯಗಳಲ್ಲಾಗಿರುವ ವ್ಯತ್ಯಾಸಗಳೇ ಕಾರಣ. 



* * * * * * *


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.