ಅಜ್ಜಂಪುರದ ಒಂದು ಕೌಟುಂಬಿಕ ಸಮಾವೇಶ


ಆತ್ಮೀಯ ಓದುಗರೆಲ್ಲರಿಗೂ ನೂತನ ವರ್ಷದ ಶುಭಾಶಯಗಳು ಸರಿಯಾಗಿ ವರ್ಷದ ಹಿಂದೆ ಬೆಂಗಳೂರಿನ ಯಶವಂತಪುರದಲ್ಲಿರುವ ಗಾಯತ್ರೀ ದೇವಾಲಯದಲ್ಲಿ ಅಜ್ಜಂಪುರಕ್ಕೆ ಸೇರಿದ ಹಿರಿಯ ದಂಪತಿಗಳ ಸ್ಮರಣಾರ್ಥ ಕಾರ್ಯಕ್ರಮವೊಂದು ನಡೆಯಿತು. ಅಜ್ಜಂಪುರಕ್ಕೆಂದೇ ಮೀಸಲಾದ ಈ ಬ್ಲಾಗ್‌ನಲ್ಲಿ ಇದರಲ್ಲಿ ಭಾಗವಹಿಸಿದ ಯಾರೂ ಬರೆಯಬಹುದಿತ್ತು. ಅದು ನಡೆದ ಅಲ್ಪಕಾಲದಲ್ಲೇ ಇದರ ವರದಿಯನ್ನು ಪ್ರಕಟಿಸಬಹುದಿತ್ತು. ಆದರೆ ಆ ಕೆಲಸ ನಡೆಯಲಿಲ್ಲವಾಗಿ, ಅದನ್ನಿಲ್ಲಿ ಈಗ ಪ್ರಸ್ತಾಪಿಸುತ್ತಿರುವೆ.  ಇದನ್ನೊಂದು ಆಕ್ಷೇಪವೆಂದು ತಿಳಿಯುವ ಅಗತ್ಯವಿಲ್ಲ. ಊರಿಗೆ ಸಂಬಂಧಿಸಿದಂತೆ, ಇಂಥ ಅನೇಕ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಅವುಗಳ ಕಿರುವರದಿಗಳು ಬ್ಲಾಗ್‌ನಲ್ಲಿ ಪ್ರಕಟವಾಗುವಂತಾದರೆ, ಬಾಂಧವ್ಯ ವೃದ್ಧಿಯಾಗಲು ಸಹಕಾರಿಯಾಗುತ್ತದೆ ಎನ್ನುವುದಷ್ಟೇ ಆಶಯ. 

ಈ ಕಾರ್ಯಕ್ರಮವನ್ನು ಆಯೋಜಿಸಿದವರು, ಅಜ್ಜಂಪುರದ ಶ್ರೀಮತಿ ಪುಟ್ಟಮ್ಮ ಮತ್ತು ಶ್ರೀ ಶಂಕರಭಟ್ಟರ ಕುಟುಂಬದವರು. ಇವರು ಅಜ್ಜಂಪುರದ ಮಾಜಿ ಪುರಸಭಾಧ್ಯಕ್ಷ ಶ್ರೀ ಸೀತಾರಾಮಭಟ್ಟರ ತಂದೆ ತಾಯಿಗಳು.  ಬೆಂಗಳೂರಿನ ಖ್ಯಾತ ಮುದ್ರಣ ಉದ್ಯಮಿ  ಪಯೋನಿಧಿ ಪ್ರಿಂಟರ್ಸ್‌ನ ಮಾಲಿಕರಾದ ಶ್ರೀ ವೆಂಕಟರಾಮಯ್ಯನವರು ಇವರನ್ನು ಕುರಿತಂತೆ ಕಿರುಪುಸ್ತಕವನ್ನು ಈ ಸಂದರ್ಭದಲ್ಲಿ ಬಿಡುಗಡೆಮಾಡಿದರು. ಇದರ ಆಯ್ದ ಭಾಗಗಳನ್ನು ಮುಂದೆ ಪ್ರಕಟಿಸುವ ಉದ್ದೇಶವಿದೆ.


ಅತ್ಯಂತ ಸುಂದರವಾಗಿ ಆಯೋಜಿತವಾಗಿದ್ದ ಈ ಕುಟುಂಬದ ಸಮಾವೇಶಕ್ಕೆ ಅನೇಕ ಸದಸ್ಯರು ಬಂದಿದ್ದರು. ಶ್ರೀ ಸೀತಾರಾಮಭಟ್ಟರ ಮೊಮ್ಮಗ ಕ್ಷೇತ್ರ ಪ್ರಸಾದ್, ಖ್ಯಾತ ಸಂಸ್ಕೃತ ವಿದ್ವಾಂಸರಾದ ಶ್ರೀ ಎಸ್. ವಿ. ಶಾಮಭಟ್ಟರ ಪುತ್ರ ಶಂಕರ್ (ಪುಷ್ಪಕ್ ಟ್ರಾವೆಲ್ಸ್‌ನ ಮಾಲಿಕರು), ಸೌ. ಅನುಪಮಾ, ಕುಟುಂಬಗಳಲ್ಲಿ ನಡೆಯುವ ಮದುವೆ, ಮುಂಜಿ ಮುಂತಾದ ಎಲ್ಲ ಶುಭ ಸಮಾರಂಭಗಳ ಛಾಯಾಚಿತ್ರಗಳ ಸಂಗ್ರಹಿಸಿ, ದೊಡ್ಡ ಸಂಕಲನವನ್ನು ರಚಿಸಿರುವ ಶ್ರೀ ರಾಮು ಮುಂತಾದ ಅನೇಕರು ಆಸಕ್ತಿ ವಹಿಸಿ ಈ ಕಾರ್ಯಕ್ರಮವನ್ನು ಅತ್ಯಂತ ಸುಂದರವಾಗಿ ನಿರೂಪಿಸಿದರು. ಶ್ರೀ ವೆಂಕಟರಾಮಯ್ಯನವರು ಅಜ್ಜಂಪುರದಲ್ಲಿ ಕಳೆದ ತಮ್ಮ ಬಾಲ್ಯವನ್ನು ನೆನಪಿಸಿಕೊಂಡರೆ, ಎಸ್. ವಿ. ಶಾಮಭಟ್ಟರು ಅಜ್ಜಂಪುರದಲ್ಲಿದ್ದ ಬ್ರಾಹ್ಮಣ್ಯ ಮತ್ತು ಸಂಸ್ಕೃತಿಯ ಪೋಷಣೆಗೆ ಅದರ ಕೊಡುಗೆಗಳನ್ನು ಪ್ರಸ್ತಾಪಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಗ್ಗದ ಭಟ್ಟರೆಂದೇ ಖ್ಯಾತರಾದ ಪ್ರೊ. ಎಚ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಅಜ್ಜಂಪುರದಲ್ಲಿ ಕಳೆದ ತಮ್ಮ ಬಾಲ್ಯ ಮತ್ತು ಅಜ್ಜಂಪುರದ ಪರಿಸರದಲ್ಲಿದ್ದ ಜನಸಾಮಾನ್ಯರ ಹೃದಯವಂತಿಕೆಯನ್ನು ಸ್ಮರಿಸಿದರು.

ಕಾರ್ಯಕ್ರಮದುದ್ದಕ್ಕೂ ಪ್ರಸ್ತಾಪಿತವಾದ ಪುಟ್ಟಮ್ಮಜ್ಜಿ (ಶಾರದಮ್ಮ) ಯ ಸ್ಮರಣೆಯಲ್ಲಿ, ಅಜ್ಜಿಗೆ ಚಲನಚಿತ್ರಗಳಲ್ಲಿದ್ದ ಆಸಕ್ತಿಯೂ ಪ್ರಸ್ತಾಪಿತವಾಯಿತು. ತುಂಬು ಕುಟುಂಬದಿಂದ ಬಂದ ಅಜ್ಜಿಗೆ ಅಂದಿನ ಕೌಟುಂಬಿಕ ಸಮಸ್ಯೆಗಳು, ಚಿತ್ರಗಳಲ್ಲಿ ನಿರೂಪಿತವಾಗುತ್ತಿದ್ದ ಪರಿ ತುಂಬ ಇಷ್ಟವಾಗುತ್ತಿತ್ತು ಕನ್ನಡದ ವರನಟ ಡಾ. ರಾಜಕುಮಾರರ ಚಿತ್ರವೊಂದರ ಚಿತ್ರೀಕರಣವು ಅಜ್ಜಂಪುರಕ್ಕೆ ಸಮೀಪದಲ್ಲಿ ನಡೆಯುತ್ತಿದ್ದಾಗ ಅಜ್ಜಿ ಅಲ್ಲಿಗೆ ತೆರಳಿ, ಭೇಟಿಮಾಡಿ ಹರಸಿದ್ದರು. ಶ್ರೀ ಶಂಕರಭಟ್ಟರ ಸರಳ ಜೀವನ ಮತ್ತು ತುಂಬು ಔದಾರ್ಯಗಳನ್ನು ಶ್ರೀ ವೆಂಕಟರಾಮಯ್ಯನವರು ತಮ್ಮ ಕಿರುಹೊತ್ತಿಗೆಯಲ್ಲಿ ಸ್ಮರಿಸಿಕೊಂಡಿದ್ದಾರೆ. ಅಜ್ಜಂಪುರ ತಮ್ಮ ಮಟ್ಟಿಗೆ ಕಳೆದುಹೋಯಿತೆಂಬ ಭಾವ ಬಹಳ ದಿನಗಳವರೆಗೆ ಕಾಡುತ್ತಿತ್ತಂತೆ. ಆದರೆ ಅಜ್ಜಂಪುರದ ಅನೇಕರು ಬೆಂಗಳೂರಿನಲ್ಲಿ ನೆಲೆಸಿರುವಾಗ, ತಮ್ಮ ಊರೇ ಇಲ್ಲಿಗೆ ಬಂದಂತಾಗಿದೆಯೆಂದು ಎನ್ನಿಸಿತಂತೆ. 


ಶ್ರೀ ಶ್ಯಾಮಭಟ್ಟರು, ಶ್ರೀ ವೆಂಕಟರಾಮಯ್ಯ ಮತ್ತು ಶ್ರೀ ಎಚ್. ಎಸ್. ಲಕ್ಷ್ಮಿನಾರಾಯಣ ಭಟ್ಟರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದ ಚಿತ್ರಗಳಲ್ಲಿ ಕೆಲವು ಇಲ್ಲಿವೆ. ಇದರಲ್ಲಿ ನಿಮ್ಮ ಪರಿಚಿತರು, ಬಂಧುಗಳು, ಮಿತ್ರರು ಮುಂತಾಗಿ ಹಲವರಿರಬಹುದು.
ಅಜ್ಜಂಪುರದ ನೆನಪು ಮತ್ತೆ ನಿಮ್ಮಲ್ಲಿ ಮರುಕಳಿಸುವಂತಾದರೆ, ಅದಕ್ಕೆ ಕಾರಣಕರ್ತರಾದ ಅಜ್ಜಂಪುರದ ಈ ಕುಟುಂಬವನ್ನು ಅಭಿನಂದಿಸೋಣ.ನಾನು ಭಾಗವಹಿಸಿದ ಕಾರ್ಯಕ್ರಮಗಳ ವರದಿಗಳನ್ನು ಇಲ್ಲಿ ಪ್ರಕಟಿಸುತ್ತೇನೆ ಊರಿಗೆ ಸಂಬಂಧಿಸಿದಂತೆ ನಿಮ್ಮಲ್ಲಿಯೂ ಚಿತ್ರ-ವರದಿಗಳಿದ್ದರೆ ನನ್ನ ಈ-ಮೇಲ್ ವಿಳಾಸಕ್ಕೆ ಕಳಿಸಿಕೊಡಿ. ಪ್ರಕಟಿಸುವ ಕೆಲಸ ನನ್ನದು. 

* * * * * * *

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

87. ಬಂಗಾರದ ಭರವಸೆ ಹುಟ್ಟಿಸುವ ಹಣ್ಣೆ ಗುಡ್ಡ

82. "ಬಾರ್ನ್ ಹೆಡ್ ಮಾಸ್ಟರ್" ಅಜ್ಜಂಪುರ ವೆಂಕಟೇಶಮೂರ್ತಿ

ಮಹಾರಾಜರ ಕಟ್ಟೆ !