ಈರ್ವರು ಹಿರಿಯರು


ಜೋಗಿ ತಿಮ್ಮಯ್ಯ

೧೯೩೦-೪೦ರ ದಶಕದಲ್ಲಿ ಅಜ್ಜಂಪುರ ಜೋಗಿ ತಿಮ್ಮಯ್ಯನವರು ಧನಿಕರು. ಲೇವಾದೇವಿಯ ವ್ಯವಹಾರ ಇಟ್ಟಕೊಂಡಿದ್ದರು. ಪ್ರತಿ ವಾರಕ್ಕೆ ನೂರು ರೂಪಾಯಿಗಳಿಗೆ ಹತ್ತು ರೂಪಾಯಿ ಬಡ್ಡಿ ಪಡೆಯುತ್ತಿದ್ದರು. ಆದರೆ ಅದೆಲ್ಲಕ್ಕೂ ಕಾಗದ ಪತ್ರಗಳ ಜಂಜಾಟವಿರುತ್ತಿರಲಿಲ್ಲ. ಕೇವಲ ನಂಬಿಕೆ, ವಿಶ್ವಾಸಗಳೇ ಆಧಾರ. ವ್ಯಕ್ತಿಯ ಪ್ರಾಮಾಣಿಕತೆಯನ್ನು ಸರಿಯಾಗಿ ಗುರುತಿಸಿ ಅವರೊಡನೆ ವ್ಯವಹರಿಸುತ್ತಿದ್ದರು.  ಅವರನ್ನು ರಾಮೇ ತಿಮ್ಮಣ್ಣನೆಂದೂ ಕರೆಯುತ್ತಿದ್ದರು. ಹೆಚ್ಚು ವಿದ್ಯಾಭ್ಯಾಸ ಮಾಡಿರದ ತಿಮ್ಮಯ್ಯನವರಲ್ಲಿ ಜೀವಕಾರುಣ್ಯ ಹೆಚ್ಚಾಗಿತ್ತು. ಎತ್ತುಗಳು, ಹಸುಗಳು ರೈತರ ಜೀವನಾಡಿಯೆಂದು ತಿಳಿದಿದ್ದರು. ಅವುಗಳ ಆರೋಗ್ಯ ಚೆನ್ನಾಗಿದ್ದರೆ, ರೈತನ ಜೀವನವೂ ಹಸನಾಗಿರುತ್ತದೆಂಬುದು ಅವರ ನಂಬಿಕೆ. ಇದಕ್ಕೆಂದೇ ಅಜ್ಜಂಪುರದಲ್ಲಿ ಪಶುವೈದ್ಯ ಶಾಲೆಯನ್ನು ನಿರ್ಮಿಸಲು ಮುಂದಾಗಿ, ಅದರಲ್ಲಿ ಯಶಸ್ವಿಯಾದರು. ಇತ್ತೀಚೆಗೆ ಒಂದು ಚಿತ್ರವನ್ನು ನೋಡಿದೆ. ಅದರಲ್ಲಿ ಜೋಗಿ ತಿಮ್ಮಯ್ಯನವರುಸುಬ್ರಹ್ಮಣ್ಯಶೆಟ್ಟರು ಮತ್ತು  ಶೆಟ್ರು ಸಿದ್ದಪ್ಪನವರ ಭಾವಚಿತ್ರಗಳನ್ನು ಒಟ್ಟಾಗಿ ಜೋಡಿಸಿಟ್ಟಿರುವ ಅರ್ಥಪೂರ್ಣ ಚಿತ್ರವದು. ಅಜ್ಜಂಪುರದ ಬೆಳವಣಿಗೆಗೆ ಪ್ರತ್ಯಕ್ಷ-ಪರೋಕ್ಷವಾಗಿ ನೆರವಾದ ಈ ಮಹನೀಯರನ್ನು ಇಂದಿನ ಪೀಳಿಗೆ ಸ್ಮರಿಸಿಕೊಂಡಿರುವುದು ಔಚಿತ್ಯಪೂರ್ಣವಾಗಿದೆ.

ಚಿತ್ರ ಕೃಪೆ :  ವೆಂಕಟೇಶ್, ಪವಿತ್ರ ಪ್ರಿಂಟರ್ಸ್, ಅಜ್ಜಂಪುರ.
                                   * * * * * *


ಪಂಡಿತ್  ಕರೀಂ ಖಾನ್

ಇವರು ಅಜ್ಜಂಪುರದ ಏಕಮಾತ್ರ ಹೋಮಿಯೋಪಥಿ ವೈದ್ಯರು. ಸಮೀಪದ ಬೇಗೂರಿನವರು.  ಸ್ಥೂಲ ಶರೀರ, ಗುಂಡು ಮುಖ, ಕಪ್ಪು ಬಣ್ಣ. ಅರುವತ್ತರ ದಶಕದಲ್ಲಿ ಅವರ ದವಾಖಾನೆಯಿದ್ದುದು ಊರಿನ ಪೇಟೆ ಬೀದಿಯಲ್ಲಿ. ಶಿಸ್ತು ಮತ್ತು ಸ್ವಚ್ಛತೆಗಳಿಗೆ ಅವರಲ್ಲಿ ತುಂಬ ಆದ್ಯತೆ. ಉತ್ತರ ಭಾರತದಲ್ಲಿ ಅವರು ಹೋಮಿಯೋಪಥಿಯನ್ನು ಕಲಿತು ಬಂದಿದ್ದರು. ಉರ್ದು ರಹಿತ ಹಿಂದೀ ಅವರಿಗೆ ಕರಗತವಾಗಿತ್ತು. ಯೌವನದ ದಿನಗಳಲ್ಲಿ ಸ್ವತಂತ್ರ ಸಂಗ್ರಾಮದಲ್ಲಿ ಭಾಗವಹಿಸಿದ್ದರು. 

ಅವರು ಹೆಸರಿಗಷ್ಟೇ ಮುಸಲ್ಮಾನರು. ಅವರ ಗೆಳೆತನ, ಒಡನಾಟಗಳೆಲ್ಲ ಹಿಂದೂಗಳ ಜತೆ. ಉತ್ತಮ ಧ್ವನಿ ಹೊಂದಿದ್ದ ಅವರು ಪೇಟೆ ಬೀದಿಯಲ್ಲಿದ್ದ ರಾಮ ಮಂದಿರದಲ್ಲಿ ಪುರಂದರ ದಾಸರ ಪದಗಳನ್ನು ಭಕ್ತಿಯಿಂದ ಹಾಡುತ್ತಿದ್ದರು. ನಾಟಕಗಳಲ್ಲಿ ಭಾಗವಹಿಸುತ್ತಿದ್ದರು.  ಇಂದಿಗೂ ಅವರ ಮನೆ ಹಿಂದೂಗಳ ವಸತಿ ಪ್ರದೇಶದಲ್ಲೇ ಇದೆ. ತಮ್ಮ ಈ ಜಾತ್ಯತೀತ ಸ್ವಭಾವದಿಂದಾಗಿ ಅವರು ಎಲ್ಲರಿಗೂ ಆತ್ಮೀಯರಾಗಿದ್ದರು.

ಹೋಮಿಯೋಪಥಿಯ ನಿದಾನದ ವಿಧಾನದಲ್ಲಿ ರೋಗಿಯನ್ನು ಪ್ರಶ್ನಿಸಿ, ಅವನಿಂದ ವಿವರಗಳನ್ನು ತಿಳಿದ ನಂತರವೇ ಸೂಕ್ತವಾದ ಔಷಧ ನೀಡುವುದು ವಾಡಿಕೆ. ಅದನ್ನು ಅವರು ತುಂಬ ಶ್ರದ್ಧೆಯಿಂದ ಅನುಸರಿಸುತ್ತಿದ್ದರು. ಓರ್ವನು ಜೀರ್ಣದ ಸಮಸ್ಯೆಗಳಿಗೆಂದು ಅವರ ಬಳಿ ಹೋದರೆ, ರೋಗಿಗೆ ಭೇದಿ ಹೇಗೆ ಆಗುತ್ತದೆ, ಅದರ ಬಣ್ಣ, ಸಾಂದ್ರತೆ, ಅದರಲ್ಲಿ ಲೋಳೆಯ ಅಂಶಗಳಿದ್ದವೇ ಎಂದೆಲ್ಲ ಕೇಳುತ್ತಿದ್ದರು.  ಅಲೋಪತಿಯ ವಿಧಾನಗಳಿಗೆ ಒಗ್ಗಿ ಹೋದ ಜನರಿಗೆ ಅವರ ಪ್ರಶ್ನಗಳು ಇರುಸು-ಮುರುಸು ಉಂಟುಮಾಡುತ್ತಿದ್ದವೆಂದು ಕಾಣುತ್ತದೆ. ಹಳ್ಳಿಯ ಜನರಿಗೆ ಅದೇನೂ ಮುಖ್ಯವೆನಿಸುತ್ತಿರಲಿಲ್ಲ. ಹೀಗಾಗಿ ತಮಗೆ ತೋಚಿದಂತೆ, ಇಲ್ಲವೇ ಉಪೇಕ್ಷೆಯ ಉತ್ತರಗಳನ್ನು ನೀಡುತ್ತಿದ್ದರು. ಅವರದು ತುಂಬ ಮೆಲುವಾದ ದನಿ. ಸೊಗಸಾದ ಕನ್ನಡ. ಸಂಭಾಷಣೆಯ ನಡುವೆ ಸಂಸ್ಕೃತ ಶಬ್ದಗಳೂ ಇರುತ್ತಿದ್ದವು. ಅದು ಅವರ ಅಧ್ಯಯನದ ಆಸಕ್ತಿಯನ್ನು ತೋರಿಸುತ್ತಿತ್ತು. 

ಅವರಲ್ಲಿ ಉತ್ತಮ ಗ್ರಂಥಾಲಯವಿತ್ತು. ಬೀಟೆ ಮರದ ಎತ್ತರದ ಅಲಮಾರುಗಳಲ್ಲಿ ಅವನ್ನು ಜೋಪಾನಮಾಡಿದ್ದರು. ರೋಗಿಗಳು ಇಲ್ಲದ ವಿರಾಮವೇಳೆಯಲ್ಲಿ ಆ ಗ್ರಂಥಗಳನ್ನು ಓದುತ್ತ ಕುಳಿತಿರುತ್ತಿದ್ದರು.  ವೈದ್ಯೋ ನಾರಾಯಣೋ ಹರಿಃ ಎಂದು ನಂಬಿದ್ದ, ತುಂಬ ಸಂಪ್ರದಾಯಶೀಲರಾಗಿರುತ್ತಿದ್ದ ಬ್ರಾಹ್ಮಣರೂ ಅವರಿಂದ ಔಷಧ ತೆಗೆದುಕೊಳ್ಳುತ್ತಿದ್ದರು. ಇದು ಆ ಕಾಲಕ್ಕೆ ವಿಶೇಷ ಸಂಗತಿ. 

ಕಳೆದ ವರ್ಷ ಅವರದೊಂದು ಭಾವಚಿತ್ರವನ್ನು ಅರಸಿ ನಾನೂ, ಗೆಳೆಯ ಅಪೂರ್ವ ತುಂಬ ಪ್ರಯತ್ನಿಸಿದವು. ಆದರೆ  ದೊರಕಲಿಲ್ಲ. ಅವರ ಪತ್ನಿಗೆ ಕರೀಂಖಾನರನ್ನು ನೆನಪಿಸಿಕೊಂಡಿದ್ದಕ್ಕೆ ತುಂಬ ಸಂತೋಷವಾಯಿತು. ಅವರ ಪುತ್ರಿ ಕೂಡ ತಮ್ಮ ತಂದೆಯನ್ನು ನೆನೆದು ಹನಿಗಣ್ಣಾದರು. ಓರ್ವ ಸಂಭಾವಿತ, ಸಜ್ಜನ ವೈದ್ಯರಾಗಿದ್ದ ಕರೀಂಖಾನರು ಜನರ ನಡುವೆ ಬೆರೆತು ಅವರ ಕಷ್ಟ-ಸುಖಗಳಿಗೆ ಸ್ಪಂದಿಸಿದ ರೀತಿ ಸ್ಮರಣಾರ್ಹವಾದುದು.

* * * * * *

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

87. ಬಂಗಾರದ ಭರವಸೆ ಹುಟ್ಟಿಸುವ ಹಣ್ಣೆ ಗುಡ್ಡ

82. "ಬಾರ್ನ್ ಹೆಡ್ ಮಾಸ್ಟರ್" ಅಜ್ಜಂಪುರ ವೆಂಕಟೇಶಮೂರ್ತಿ

ಮಹಾರಾಜರ ಕಟ್ಟೆ !