25. ಕೋಟೆಯ ಶ್ರೀ ಪ್ರಸನ್ನ ಸೋಮೇಶ್ವರ ದೇವಾಲಯ
ದೇವಾಲಯದ ಹೊರನೋಟ |
ನಮ್ಮ ಊರಿನಲ್ಲಿ ಸುಮಾರು ಇಪ್ಪತ್ತಾರು ದೇವಾಲಯಗಳಿವೆಯೆಂದು ಒಮ್ಮೆ ಲೆಕ್ಕ ಹಾಕಿದ ಅಂದಾಜು. ಈ ಮೊದಲು ಅಜ್ಜಂಪುರದ ಗ್ರಾಮದೇವತೆ ಕಿರಾಳಮ್ಮ ದೇವಾಲಯದ ಬಗ್ಗೆ ಒಂದು ಲೇಖನ ಪ್ರಕಟವಾಗಿದೆ.
ಅಜ್ಜಂಪುರದ ಕೋಟೆಯಲ್ಲಿ ಶ್ರೀ ಪ್ರಸನ್ನ ಸೋಮೇಶ್ವರ ದೇವಾಲಯವಿದೆ. ಅದು ಹೊರಗಿನಿಂದಲೇ ಏಕೆ, ಒಳಗಿನಿಂದಲೂ ಆಕರ್ಷಕವಾಗಿ ಕಾಣುವುದಿಲ್ಲ. ಹಿಂದೊಂದು ಕಾಲಕ್ಕೆ ಅಲ್ಲೊಂದು ಹಳೇ ಮಾದರಿಯ ಶಿವಮಂದಿರವಿದ್ದಿರಬೇಕು. ಏಕೆಂದರೆ ಈಗಿರುವ ರಚನೆಯಷ್ಟನ್ನೇ ನೋಡಿದರೆ, ಅದು ಪುನರ್ನಿರ್ಮಿತವಾದುದೆಂದು ಸ್ಪಷ್ಟವಾಗಿ ತಿಳಿಯುತ್ತದೆ.ಆರೆಂಟು ದಶಕಗಳ ಹಿಂದೆ ಕೋಟೆಯಲ್ಲಿ ಬ್ರಾಹ್ಮಣ್ಯವು ಚೆನ್ನಾಗಿಯೇ ಇತ್ತು. ಸಾಂಪ್ರದಾಯಿಕ ಪೂಜೆ-ಪುರಸ್ಕಾರಗಳು ಧಾರಾಳವಾಗಿ ನಡೆ ಯುತ್ತಿತ್ತು. ಮಳೆ ಬಾರದ ಬರಗಾಲದ ದಿನಗಳಲ್ಲಿ ಗರ್ಭಗುಡಿಯಲ್ಲಿನ ಶಿವ ಲಿಂಗಕ್ಕೆ ಕಟ್ಟೆ ಕಟ್ಚಿ ದೂರದ ಬಾವಿಗಳಿಂದ ನೀರು ತಂದು ರುದ್ರಾಭಿಷೇಕ ಮಾಡುತ್ತಿದ್ದರು. ಹಾಗೆಯೇ ನಂತರ ಸಮೃದ್ಧ ಮಳೆಯಾದ ಬಗ್ಗೆ ಹಿರಿಯರು ಮಾತನಾಡುತ್ತಿದ್ದುದನ್ನು ಕೇಳಿದ್ದೇನೆ.
ದೇವಾಲಯಕ್ಕೆ ಮುಖಮಂಟಪ ಮತ್ತು ಗರ್ಭಗುಡಿಗಳು ಮಾತ್ರವೇ ಇತ್ತು. ನಂತರ ಅದಕ್ಕೊಂದು ಮಂಗಳೂರು ಹೆಂಚಿನ ಮಾಡನ್ನು ಮುಂಭಾಗಕ್ಕೆ ಸಿದ್ಧಪಡಿಸಿದರು. ಮುಖ ಮಂಟಪದಲ್ಲಿ ನಂದಿಯಿದ್ದು ಅದರ ಸುತ್ತಣ ಚೌಕಾಕಾರದ ಕಂಬಗಳಲ್ಲಿ ನಕಾಶೆಗಳೇನೂ ಇಲ್ಲ. ಆದರೆ ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು ನೋಡಿದರೆ, ಹೊಯ್ಸಳರ ರಚನೆಯೆನ್ನುವಂತೆ ಕಾಣುತ್ತದೆ. ಅಜ್ಜಂಪುರದ ಪರಿಸರದಲ್ಲಿ ಉತ್ಖತನ ನಡೆಸಿದೆರೆ ಹೊಯ್ಸಳ ಕಾಲದ ದೇವಾಲಯ
ಕಾಣಿಸಬಹುದು.
ಇದೇ ಪ್ರದೇಶದಲ್ಲಿ ದೊರಕಿದ ಸುಂದರ ಗಣಪತಿಯ ವಿಗ್ರಹವನ್ನು ಈಶ್ವರ ದೇವಾಲಯದ ಒಂದು ಗೂಡಿನಲ್ಲಿ ಕೂರಿಸಲಾಗಿದೆ.
ಮದ್ದೂರು ಶ್ರೀ ಅಪ್ರಮೇಯ ಅಯ್ಯಂಗಾರ್ಯರು ನೀಡಿರುವ ನಾಗಾಭರಣ
|
ಈಶ್ವರನಿಗೆ ಹಿತ್ತಾಳೆಯಲ್ಲಿ ರಚಿಸಿದ ಒಂದು ಮುಖವಾಡವಿದೆ. ಅದರ ಹಿಂದೆ ಅಳವಡುವಂತೆ ಹಾವಿನ ಹೆಡೆಯ ರಚನೆಯೂ ಇದೆ. ಇವುಗಳನ್ನು ವಿಶೇಷ ಸಂದರ್ಭಗಳಲ್ಲಿ ಶಿವನಿಗೆ ತೊಡಿಸುವರು. ಇದನ್ನು ಮೀರಿದ, ಸುಂದರವಾದ ಮುಖವಾಡಗಳು, ಕವಚಗಳು ನಮ್ಮ ಎಲ್ಲ ದೇವಾಲಯಗಳಲ್ಲೂ ಕಾಣಸಿಗುತ್ತದೆ. ಆದರೆ ಇಲ್ಲಿನ ವಿಶೇಷವೆಂದರೆ, ಈ ನಾಗಾಭರಣ ಮತ್ತು ಮುಖವಾಡಗಳನ್ನು ಶಿವನಿಗೆ ಅರ್ಪಿಸಿದವರು ವೈಷ್ಣವ ಸಂಪ್ರದಾಯಕ್ಕೆ ಸೇರಿದ, ಮಂಡ್ಯ ಜಿಲ್ಲೆಯ ಮದ್ದೂರಿನ ಶ್ರೀ ಅಪ್ರಮೇಯ ಅಯ್ಯಂಗಾರ್ ಎಂಬುವವರು. ಇಂದಿಗೂ ಅವರ ವಂಶಜರು ಮದ್ದೂರು ಸಮೀಪದ ದೇವಾಲಯಗಳಲ್ಲಿ ಅರ್ಚಕ ವೃತ್ತಿಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆಂದು ಬಿ.ಎನ್. ಮಾಧವ ರಾವ್ ಇವರಿಂದ ತಿಳಿಯಿತು. ೧೮೯೪ರಲ್ಲಿ ಕೊಡುಗೆಯಾಗಿ ನೀಡಲ್ಪಟ್ಟಿರುವ ಈ ನಾಗಾಭರಣವು ಶೈವ-ವೈಷ್ಣವ ಪಂಥಗಳ ನಡುವೆ ಇದ್ದ ಸಾಮರಸ್ಯವನ್ನು ಸೂಚಿಸುವಂತಿದೆ. ದೇವಾಲಯವು ಮುಜರಾಯಿ ಇಲಾಖೆಗೆ ಸೇರಿಲ್ಲವಾಗಿ, ಯಾವ ಆದಾಯದ ಮೂಲಗಳು ಇಲ್ಲದಿದ್ದರೂ, ದಿನನಿತ್ಯದ ಪೂಜೆ, ವಿಶೇಷದಿನಗಳಲ್ಲಿ ದೀಪಾರಾಧನೆ ಮುಂತಾಗಿ ಇನ್ನೂ ನಡೆಯುತ್ತಿದೆ.
ಮುಖ ಮಂಟಪ |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ