ರಾಷ್ಟ್ರಪತಿ ಸ್ವರ್ಣಪದಕ ಪುರಸ್ಕೃತ - ಗೃಹ ರಕ್ಷಕ ದಳದ ಕಂಪೆನಿ ಕಮಾಂಡೆಂಟ್ ಹ. ಪುಟ್ಟಸ್ವಾಮಿ

ಅಜ್ಜಂಪುರದ ಸಾಧಕರ ಪರಿಚಯ ಬ್ಲಾಗ್ ನಲ್ಲಿ ಸತತವಾಗಿ ನಡೆಯುತ್ತಿದೆಯಷ್ಟೆ. ಅದಕ್ಕೆ ಇನ್ನೊಂದು ಗರಿಯಾಗಿ ರಾಷ್ಟ್ರಪತಿ ಸ್ವರ್ಣಪದಕ ಪುರಸ್ಕೃತ - ಗೃಹ ರಕ್ಷಕ ದಳದ ಕಂಪೆನಿ ಕಮಾಂಡೆಂಟ್ . ಪುಟ್ಟಸ್ವಾಮಿಯವರ ಸಾಧನೆ ಸ್ಮರಣಾರ್ಹ. ಹೀಗಾಗಿ ಅವರನ್ನು ಕುರಿತ ಪರಿಚಯ ಲೇಖನವನ್ನು ಆಸ್ಥೆಯಿಂದ ಸಿದ್ಧಪಡಿಸಿ ನನಗೆ ತಲುಪಿಸಿದವರು ಗೆಳೆಯ ಅಜ್ಜಂಪುರ ಮಲ್ಲಿಕಾರ್ಜುನ್. ಅವರಂತೆಯೇ ಇತರರೂ ಕೂಡ ತಮ್ಮ ಸಂಪರ್ಕದಲ್ಲಿ ಬರುವ ಅಜ್ಜಂಪುರದ ಸಾಧಕರನ್ನು ಹೀಗೆಯೇ ಪರಿಚಯಿಸಲು ಬ್ಲಾಗ್ ಮುಕ್ತವಾಗಿದೆ.

- ಶಂಕರ ಅಜ್ಜಂಪುರ
ಅಜ್ಜಂಪುರವು ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿ, ಕರ್ನಾಟಕದ ನಕ್ಷೆಯಲ್ಲಿ ಗುರುತಿಸಿಕೊಂಡಿದೆ. ಎಲ್ಲ ಊರುಗಳಂತೆ ಅಜ್ಜಂಪುರದಲ್ಲಿಯೂ ಗೃಹ ರಕ್ಷಕ ದಳ ಕಾರ್ಯನಿರ್ವಹಿಸಲು ಆರಂಭಿಸಿತು. ಸೇವೆಯ ಪರಿಚಯವಿರದ ಜನರೇ ಅಧಿಕವಾಗಿದ್ದ ಊರಿನಲ್ಲಿ, ಅದನ್ನು ತೀವ್ರವಾಗಿ ತೆಗೆದುಕೊಂಡು, ರಾಷ್ಟ್ರಪತಿಗಳ ಪದಕ ಪಡೆಯುವ ಮಟ್ಟಿಗಿನ ಸಾಧನೆಯನ್ನು ತೋರಿದವರು . ಪುಟ್ಟಸ್ವಾಮಿ. ಅಜ್ಜಂಪುರದ ಘಟಕವು ರಾಜ್ಯದಲ್ಲೇ ಶಿಸ್ತುಬದ್ಧ ಘಟಕವೆಂದು ಹೆಸರು ಪಡೆಯಲು ಶ್ರಮಿಸಿದ ಶಿಸ್ತಿನ ಸಿಪಾಯಿ . ಪುಟ್ಟಸ್ವಾಮಿಯವರ ಸೇವೆ ಮತ್ತು ಕಾರ್ಯಬದ್ಧತೆಗಳು ಶ್ಲಾಘನೀಯ.

. ಪುಟ್ಟಸ್ವಾಮಿಯವರ ತಂದೆ ದಿವಂಗತ ಶೆಟ್ರ ಹನುಮಯ್ಯ ಮತ್ತು ತಾಯಿ ದಿವಂಗತ ಶ್ರೀಮತಿ ರಾಮಕ್ಕನವರು. ತಾಯಿ ಶತಾಯುಷ್ಯದ ಜೀವನ ನಡೆಸಿದವರು. 13 ಸೆಪ್ಟೆಂಬರ್ 1950ರಲ್ಲಿ ಜನಿಸಿದ ಪುಟ್ಟಸ್ವಾಮಿಯವರು ತಮ್ಮ 18 ಎಳೆಯ ವಯಸ್ಸಿನಲ್ಲೇ ಗೃಹ ರಕ್ಷಕ ದಳವನ್ನು ಪ್ರವೇಶಿಸಿದ್ದರು. ಕಠಿಣ ಪರಿಶ್ರಮ ಮತ್ತು ದಳದ ಉದ್ದೇಶವನ್ನು ಮನವರಿಕೆ ಮಾಡಿಕೊಂಡು, ಅದರ ತತ್ವಗಳನ್ನು ಜನರಿಗೆ ಸಮರ್ಥವಾಗಿ ತಲುಪಿಸಿದ ಪುಟ್ಟಸ್ವಾಮಿ 39 ವರ್ಷಗಳ ದೀರ್ಘ ಸೇವೆಯನ್ನು ಮಾಡಿದ್ದಾರೆ. ಹಂತ ಹಂತವಾಗಿ ದಳದ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಕಂಪೆನಿ ಕಮಾಂಡೆಂಟ್ ನಂತಹ ಉನ್ನತ ಪದವಿಗೆ ಏರಿದರು

ಪುಟ್ಟಸ್ವಾಮಿಯವರು ಎಂ.. ಬಿ.ಎಡ್. ಪದವೀಧರರು.  ವೃತ್ತಿಯಿಂದ ಶಿಕ್ಷಕರು. ಅವರು ತಮ್ಮ ವೃತ್ತಿಜೀವನವನ್ನು 1970ರಲ್ಲಿ ಆರಂಭಿಸಿದರು. ಗ್ರಾಮೀಣ ಪರಿಸರದಿಂದ ಬಂದವರಾದ್ದರಿಂದ ಪ್ರಕೃತಿಯ ಬಗ್ಗೆ ಅಪಾರ ಪ್ರೀತಿಯುಳ್ಳವರು. ಹೀಗಾಗಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ, ತರಬೇತಿಗಳನ್ನು ನೀಡದ್ದಲ್ಲದೆ, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಶಾಲಾವನದ ನಿರ್ಮಾಣ, ತೋಟಗಾರಿಕೆಯ ಬಗ್ಗೆ ತರಬೇತಿ, ಕ್ರೀಡಾ ಕೌಶಲ, ಉಳಿತಾಯ ಯೋಜನೆಯ ಮಹತ್ವ, ಕನ್ನಡ ಭಾಷಾ ಸಾಹಿತ್ಯ ಮುಂತಾಗಿ ಹಲವು ಬಗೆಯ ರಚನಾತ್ಮಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು

ಅಜ್ಜಂಪುರದಲ್ಲಿ 70-80 ದಶಕಗಳಲ್ಲಿ ಹುಲ್ಲಿನ ಮನೆಗಳು ಹೆಚ್ಚಿಗೆ ಇದ್ದವು ಹಾಗೂ ಮೇವಿಗೆಂದು ಒಣಹುಲ್ಲನ್ನು ಬಣವೆಗಳಾಗಿ ಸಂಗ್ರಹಿಸುವುದು ಸಾಮಾನ್ಯವಾಗಿತ್ತು. ಬೇಸಿಗೆ ಕಾಲದಲ್ಲಿ ಬಣವೆಗಳು ಮತ್ತು ಮನೆಗಳು ಬೆಂಕಿಗೆ ಆಹುತಿಯಾಗುತ್ತಿದ್ದವು. 80 ದಶಕದಲ್ಲಿ ಅಜ್ಜಂಪುರದಲ್ಲಿದ್ದ ಎರಡು ಸಂಚಾರೀ ಚಿತ್ರಮಂದಿರಗಳಿಗೆ ಬೆಂಕಿ ಬಿದ್ದಿತ್ತು. ಸಂದರ್ಭದಲ್ಲಿ . ಪುಟ್ಟಸ್ವಾಮಿಯವರ ನೇತೃತ್ವದಲ್ಲಿ ಬೆಂಕಿಯನ್ನು ನಂದಿಸಲು ಶ್ರಮಿಸಿದ ಗೃಹ ರಕ್ಷಕ ದಳದ ತರಬೇತಿ ಹೊಂದಿದ ಸ್ವಯಂ ಸೇವಕರ ಸೇವೆಯನ್ನು ಇಂದಿಗೂ ಊರಿನ ಜನ ಕೃತಜ್ಞತೆಯಿಂದ ಸ್ಮರಿಸುತ್ತಾರೆ.

70 ದಶಕದಲ್ಲಿ ಬೀರೂರು ಅಜ್ಜಂಪುರದ ನಡುವಣ ರೈಲು ಮಾರ್ಗದಲ್ಲಿ ಡೆಕ್ಕನ್ ಎಕ್ಸ್ ಪ್ರೆಸ್ ಅಪಘಾತಕ್ಕೀಡಾಯಿತು. ವಿಷಯ ತಿಳಿದ ಪುಟ್ಟಸ್ವಾಮಿಯವರ ನಾಯಕತ್ವದ ತಂಡ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದಲ್ಲದೆ, ಅವರ ಸರಕು ಸರಂಜಾಮುಗಳನ್ನು ಅವರಿಗೆ ತಲುಪುವಂತೆ ಮಾಡುವಲ್ಲಿ ಶ್ರಮಿಸಿತು. ಘಟನೆ ಕೂಡ ಊರಿನ ಜನರ ಮನದಲ್ಲಿ ಹಸಿರಾಗಿದೆ. ತಮ್ಮ ನಿವೃತ್ತಿಯೊಂದಿಗೆ ಪಡೆಯ ಕೆಲಸ ನಿಲ್ಲಬಾರದೆಂಬ ದೂರದೃಷ್ಟಿಯಿಂದ, ಪುಟ್ಟಸ್ವಾಮಿಯವರು ನೂರಾರು ಶಿಸ್ತಿನ ಸಿಪಾಯಿಗಳನ್ನು ಅಜ್ಜಂಪುರದಲ್ಲಿ ತರಬೇತಿಗೊಳಿಸಿದರು. ಅಜ್ಜಂಪುರದಲ್ಲಿ ನಡೆಯುತ್ತಿದ್ದ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯಂಥ ರಾಷ್ಟ್ರೀಯ ಉತ್ಸವಗಳಲ್ಲಿ ಅವರು ನಡೆಸಿಕೊಡುತ್ತಿದ್ದ ಪಥ ಸಂಚಲನ ಮತ್ತು ಆದೇಶಗಳು ಇಲ್ಲಿನ ನಾಗರಿಕರ ಮನದಲ್ಲಿ ಅಚ್ಚೊತ್ತಿದಂತಿವೆ.

ಕರ್ನಾಟಕ ರಾಜ್ಯ ಪೊಲೀಸ್ ಡೈರೆಕ್ಟೋರೇಟ್ ಜನರಲ್ ರವರಿಂದ ವಿಶಿಷ್ಟ ಸೇವಾ ಪ್ರಶಂಸನಾ ಪತ್ರವಾದ "ಸಂಗ್ರಾಮ್" ಪದಕ ಹಾಗೂ ಭಾರತ ಸ್ವಾತಂತ್ರ್ಯೋತ್ಸವ ರಜತ ಪದಕ ಮತ್ತು ಸ್ವರ್ಣಜಯಂತಿ ಪದಕಗಳನ್ನು ಅವರು ತಮ್ಮ ಮುಡಿಗೇರಿಸಿಕೊಂಡಿದ್ದಾರೆ 

ಅಂದಿನ ರಾಜ್ಯಪಾಲ ಶ್ರೀ ಖುರ್ಷಿದ್ ಅಲಂ ಖಾನ್ ರವರು
ಹ. ಪುಟ್ಟಸ್ವಾಮಿಯವರಿಗೆ
ರಾಷ್ಟ್ರಪತಿಗಳ ಸ್ವರ್ಣಪದಕವನ್ನು ತೊಡಿಸುತ್ತಿರುವುದು
1992ರಲ್ಲಿ ಇವರ ಅನುಪಮ ಸೇವೆಯನ್ನು ಗುರುತಿಸಿ ಗೃಹ ರಕ್ಷಕ ದಳ ಹಾಗೂ ನಾಗರಿಕ ರಕ್ಷಣೆಯ ಸ್ವರ್ಣಪದಕವನ್ನು ರಾಷ್ಟ್ರಪತಿಗಳು ನೀಡಿರುವುದು ಅಜ್ಜಂಪುರದ ಗೃಹ ರಕ್ಷಕ ದಳದ ಹಿರಿಮೆಯನ್ನು ಸಾರುತ್ತದೆ.

ತಮ್ಮ ವೃತ್ತಿಯಲ್ಲಿ ಪರಿಣತಿ ಸಾಧಿಸಿರುವಂತೆಯೇ ಪುಟ್ಟಸ್ವಾಮಿಯವರು ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸಾಧನೆ ಮಾಡಿರುವರು. ಅವರ ಸಾಧನೆಯನ್ನು ಗುರುತಿಸಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಶ್ರೀ ಪ್ರಶಸ್ತಿ, ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ, ಲಯನ್ಸ್, ರೋಟರಿ, ಪುರಸಭೆ ಮುಂತಾದ ಪ್ರತಿಷ್ಠಿತ ನಾಗರಿಕ ಸಂಸ್ಥೆಗಳಿಂದ ಹಲವಾರು ಬಾರಿ ಪುರಸ್ಕಾರ, ಸನ್ಮಾನಗಳಿಗೆ ಭಾಜನರಾಗಿದ್ದಾರೆ

ಇವರ ಸೇವೆಗೆ ಬೆನ್ನೆಲುಬಾಗಿ ನಿಂತಿರುವ ಇವರ ಪತ್ನಿ ಶ್ರೀಮತಿ ಯಶೋದಾ, ಮಕ್ಕಳಾದ ರಶ್ಮಿ ಮತ್ತು ರಮ್ಯಾ ಹಾಗೂ ಗೆಳೆಯರಾದ ಶ್ರೀ ಚಂದ್ರೋಜಿರಾವ್ ಮತ್ತು ಶ್ರೀ ಲಕ್ಷ್ಮಣ್ ಇವರ ಸಹಕಾರವನ್ನು ಸದಾ ನೆನಪಿಸಿಕೊಳ್ಳುತ್ತಾರೆ. 2008ರಲ್ಲಿ ನಿವೃತ್ತರಾದ ನಂತರ ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಜ್ಜಂಪುರದಲ್ಲಿ ನೆಮ್ಮದಿಯ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ.


ಇಂಥ ಹಿರಿಯ ಸಾಧಕರನ್ನು ಅಭಿನಂದಿಸೋಣ. ಅವರ ದೂರವಾಣಿ ಸಂಖ್ಯೆ 94486 58016.


   ಚಿತ್ರ-ಲೇಖನ : ಅಜ್ಜಂಪುರ ಮಲ್ಲಿಕಾರ್ಜುನ
 ದೂರವಾಣಿ 9060304592

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

87. ಬಂಗಾರದ ಭರವಸೆ ಹುಟ್ಟಿಸುವ ಹಣ್ಣೆ ಗುಡ್ಡ

82. "ಬಾರ್ನ್ ಹೆಡ್ ಮಾಸ್ಟರ್" ಅಜ್ಜಂಪುರ ವೆಂಕಟೇಶಮೂರ್ತಿ

ಮಹಾರಾಜರ ಕಟ್ಟೆ !