ಪೂರ್ಣ ಬೆಳಗುವ ಮುನ್ನ ಆರಿತೇ ಜ್ಯೋತಿ !

ಆತ್ಮೀಯ ಓದುಗರೇ
"ಎಲ್ಲರಿಗೂ ಜಯ ನಾಮ ಸಂವತ್ಸರದ ಶುಭಾಶಯಗಳು"
ಅಜ್ಜಂಪುರದ ಪುರಪ್ರಮುಖರಲ್ಲಿ ಓರ್ವರಾದ  ಶ್ರೀ ಸುಬ್ರಹ್ಮಣ್ಯ ಶೆಟ್ಟರ ಪುತ್ರ ಶ್ರೀ ರಾಜಗೋಪಾಲ ಗುಪ್ತ ಇತ್ತೀಚೆಗೆ ಎಂದರೆ ದಿನಾಂಕ   19-12-2013ರಂದು ತಮ್ಮ 66ನೇ ವಯಸ್ಸಿನಲ್ಲಿ ನಿಧನರಾದರು. ಅವರು ಅಜ್ಜಂಪುರದ ಸಾಮಾಜಿಕ ವಲಯದಲ್ಲಿ ತಮ್ಮ ತಂದೆಯವರ ಹೆಸರಿನ ಬಲಕ್ಕಿಂತ ಹೆಚ್ಚಾಗಿ, ತಮ್ಮ ಸೌಮ್ಯ ಸ್ವಭಾವ ಮತ್ತು ತೋರುತ್ತಿದ್ದ ಸಾಮಾಜಿಕ ಕಾಳಜಿಗಳಿಂದಾಗಿ ಗಮನಾರ್ಹ ವ್ಯಕ್ತಿಯಾಗಿದ್ದರು. ಅವರನ್ನು ಸಮೀಪದಿಂದ ನೋಡಿಬಲ್ಲ, ಒಡನಾಡಿಯಾಗಿದ್ದ ಗೆಳೆಯ ಶ್ರೀ ಅಜ್ಜಂಪುರ ಮಂಜುನಾಥ ಹಾಗೂ ಅಜ್ಜಂಪುರದ ಪವಿತ್ರ ಪ್ರಿಂಟರ್ಸ್ ಮಾಲಕ ಮತ್ತು ಪತ್ರಕರ್ತರಾದ ಶ್ರೀ ಎನ್. ವೆಂಕಟೇಶ್ ಇವರೀರ್ವರೂ ತಮ್ಮ ಪದಶ್ರದ್ಧಾಂಜಲಿಯನ್ನು ಈ ಲೇಖನಗಳಲ್ಲಿ ದಾಖಲಿಸಿದ್ದಾರೆ. 

-ಶಂಕರ ಅಜ್ಜಂಪುರ

ನಮ್ಮೆಲ್ಲರ ಪ್ರೀತಿಯ ಅಣ್ಣ ರಾಜಗೋಪಾಲ ಇನ್ನಿಲ್ಲ, ಎನ್ನುವುದನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಹಾಗೆ ನೋಡಿದರೆ, ಅವನ ಜೀವನವೇ ಒಂದು ಸವಾಲು. ತುಂಬ ಪ್ರತಿಭಾವಂತರಾದ -ಕ್ರಿಯಾಶೀಲರಾದ - ಚೈತನ್ಯಶೀಲರಾದ,  ತಂದೆ-ತಾಯಿಯ ಏಕೈಕ ಪುತ್ರ ಎನ್ನುವುದು ಸಹ ಸವಾಲೇ. ಉದ್ಯಮಶೀಲತೆಯ - ಚಟುವಟಿಕೆಯ - ಕಲಾಪೋಷಕರಾದ - ರಾಜಕಾರಣಿಯೂ ಆದ ಸುಬ್ರಹ್ಮಣ್ಯ ಶೆಟ್ಟರ ಮಗ ಎಂದರೆ ಸಹಜವಾಗಿ ನಿರೀಕ್ಷೆ ಹೆಚ್ಚಾಗಿಯೇ ಇರುತ್ತದೆ. ಇನ್ನು ತಾಯಿ ರುಕ್ಮಿಣಮ್ಮನವರು ಸಹ ಸಂಘಟಕಿ, ರಾಜಕಾರಣಿ, ಸೇವಾಭಿಲಾಷಿ, ನಾಯಕತ್ವದ ಗುಣಗಳುಳ್ಳ ವಿಶಿಷ್ಟ ವ್ಯಕ್ತಿ ಎಂದಾಗ ನಿರೀಕ್ಷೆ -ಅಪೇಕ್ಷೆಗಳು ಮುಗಿಲು ಮುಟ್ಟುತ್ತವೆ. ಪ್ರಾಯಶಃ ಅಣ್ಣನ ಜೀವನದ ಪ್ರಾರಂಭಿಕ ಕಷ್ಟವೂ ಅದೇ ಆಗಿತ್ತೋ ಏನೋ!

ನಾನು 1967ರಲ್ಲಿ ಎಸ್ಎಸ್ಎಲ್ಸಿ ಮುಗಿಸಿ, ದಾವಣಗೆರೆಯ ಕಾಲೇಜಿಗೆ ಹಾಸ್ಟೆಲ್ ಗೆ ಎಂದು ಹೊರಟುನಿಂತಾಗ, ಮಾರ್ಗದರ್ಶನ ನೀಡಿದವನು ಅಣ್ಣ ರಾಜಗೋಪಾಲ. ಅವನು ಆಗಲೇ ಬಿ.ಕಾಮ್.ನ ಅಂತಿಮ ವರ್ಷದಲ್ಲಿದ್ದ. ಅಲ್ಲಿ ಒಂದು ವರ್ಷ ನಾನು ಅಣ್ಣನ ರೂಮ್ ಮೇಟ್ ಸಹ ಆಗಿದ್ದೆ. ನಮ್ಮ ಹಾಸ್ಟೆಲಿನಲ್ಲಿ ಅಣ್ಣ ತುಂಬ ಫೇಮಸ್. ಅವನು ವಿದ್ಯಾರ್ಥಿ ಸಂಘದ ಸಂಘಟನಾ ಕಾರ್ಯದರ್ಶಿಯೂ ಆಗಿದ್ದ. ಅಜ್ಜಂಪುರ ಎಂದರೆ ಸಾಕು, ಭಗವದ್ಗೀತೆ - 'ಗೀತಾಮಿತ್ರ' ಪತ್ರಿಕೆ ಎಲ್ಲವನ್ನೂ ಜನರು ನಮ್ಮಲ್ಲಿ ನಿರೀಕ್ಷಿಸುತ್ತಿದ್ದರು. ಅಂತಹ ನಿರೀಕ್ಷೆಯ ನಿರ್ಮಿತಿಗೆ ಅಣ್ಣನೇ ಕಾರಣ. ನಮ್ಮ ಹಾಸ್ಟೆಲಿನ ಗೌರವ ಕಾರ್ಯದರ್ಶಿಗಳಿಗೂ ರಾಜಗೋಪಾಲನೆಂದರೆ ಅಕ್ಕರೆ ಜಾಸ್ತಿ.  ನಮ್ಮ ಹಾಸ್ಟೆಲಿನ ಪ್ರಬಂಧ ಸ್ಪರ್ಧೆ , ಚರ್ಚಾ ಸ್ಪರ್ಧೆ , ಇನ್ನಿತರ ಸ್ಪರ್ಧೆಗಳಲ್ಲಿಯೂ ಪ್ರತಿವರ್ಷ ಅಣ್ಣನಿಗೆ ಬಹುಮಾನ ಸುನಿಶ್ಚಿತವಾಗಿರುತ್ತಿತ್ತು. ಭಗವದ್ಗೀತೆಯ ಧ್ಯಾನಶ್ಲೋಕ 'ಓಂ ಪಾರ್ಥಾಯ  ಪ್ರತಿಬೋಧಿತಾಂ....' ನಮ್ಮ ಹಾಸ್ಟೆಲಿನ ಪ್ರಾರ್ಥನೆಯಾಗಲು, ಅಣ್ಣನೇ ಕಾರಣ. ಬಹಳ ವರ್ಷ ಅದೇ ನಮ್ಮ ಹಾಸ್ಟೆಲಿನ 'ಪ್ರಾರ್ಥನೆ'ಯಾಗಿತ್ತು. ಮುಂದೆ, ಬದಲಾವಣೆ ಬೇಕೆಂದು ನಮ್ಮ ಗೌರವ ಕಾರ್ಯದದರ್ಶಿಯವರು ನನಗೆ, ಭಗವದ್ಗೀತೆಯ ಶ್ಲೋಕಗಳನ್ನು ಹೇಳಿಕೊಡಲು ಆದೇಶಿಸಿದರು.

ವಿದ್ಯಾಭ್ಯಾಸದಲ್ಲಿ ಅಣ್ಣ ತುಂಬ ಪ್ರತಿಭಾವಂತನಲ್ಲದಿದ್ದರೂ ಪರಿಶ್ರಮಕ್ಕೆ ಹೆಸರಾಗಿದ್ದ. 1968ರಲ್ಲಿ, ನಮ್ಮ ಕಾಲೇಜಿನ ಬಿ.ಕಾಮ್. ವಿದ್ಯಾರ್ಥಿಗಳಲ್ಲಿ ತೇರ್ಗಡೆಯಾದವನು ನಮ್ಮ ರಾಜಗೋಪಾಲ ಮಾತ್ರ. ಕಳಪೆ ಶಿಕ್ಷಕರು, ಗುಣಮಟ್ಟವಿಲ್ಲದ ವ್ಯವಸ್ಥೆಯ ಕಾರಣದಿಂದ ಎಲ್ಲರೂ ಫೇಲಾಗಿ ಹೋಗಿದ್ದರು. ಅಂತಹ ಸ್ಥಿತಿಯಲ್ಲಿಯೂ ಕೇವಲ ಪರಿಶ್ರಮದಿಂದ ಯಶಸ್ಸು ಗಳಿಸಿದವನು ಅಣ್ಣ ಮಾತ್ರ.

ಓದು ಮುಗಿಸಿ, ಊರಿಗೆ ಬಂದಾಗ ಹೆಚ್ಚಿನ ವಿದ್ಯಾಭ್ಯಾಸ ಮಾಡುವುದೋ, ಕುಟುಂಬದ ವ್ಯಾಪಾರ - ವ್ಯವಹಾರಗಳನ್ನು ಮುಂದುವರಿಸುವುದೋ ಎಂಬ ಇಬ್ಬಂದಿ ಅವನಿಗಿದ್ದುದು ಸಹಜವೇ. ಅಣ್ಣ ಸ್ವಲ್ಪ ದಿನ ಐ.ಎ.ಎಸ್. ಪರೀಕ್ಷೆಗೆ ಕೂತು ಓದುತ್ತಿದ್ದ. ಅವೆಲ್ಲಾ ನೆನಪಾದರೆ ಈಗ ಸಂತೋಷ ಪಡಬೇಕೋ, ದುಃಖಪಡಬೇಕೋ ತಿಳಿಯುವುದಿಲ್ಲ. ನಮ್ಮ ಹತ್ತಾರು ಕುಟುಂಬಗಳು ಸುಬ್ರಹ್ಮಣ್ಯ ಶೆಟ್ಟರ ಸೋದರರ ಕುಟುಂಬಗಳೆಂದೇ ಖ್ಯಾತಿವೆತ್ತಂತಹುವು. ನಾವೆಲ್ಲ ತುಂಬ ಸೇರುತ್ತಿದ್ದೆವು. ತುಂಬ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಭಜನೆ - ಭಕ್ತಿಗೀತೆಗಳೆಂದರೆ ನಮ್ಮ ದಾಯಾದಿಗಳಲ್ಲಿ ನಿರುತ್ಸಾಹವಿದ್ದರೂ, ಎಲ್ಲ ಸೇರಿ ತಮಾಷೆ ಮಾಡಿದರೂ, ಒಂದಿಷ್ಟೂ ಉತ್ಸಾಹ ಕಳೆದುಕೊಳ್ಳದೇ ಇರುತ್ತಿದ್ದುದು ಅವನ ವೈಶಿಷ್ಟ್ಯ. ಯಾವುದೇ ಹೊಸ ಆಲೋಚನೆ, ಚಿಂತನೆ ಮೂಡಿ ಬರಲಿ, ಅವನ ಐಎಎಸ್ ಪರೀಕ್ಷಾ ಸಿದ್ಧತೆಯಿರಲಿ, ನಮ್ಮೆಲ್ಲಾ ದಾಯಾದಿಗಳೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿದ್ದ.

ಮುಂದೆ ಜೀವನದ ತಿರುವಿನಲ್ಲಿ, ಅಣ್ಣನ ನಾವೆಯು ಪ್ರವಾಹದೊಂದಿಗೆ ಕೊಚ್ಚಿಕೊಂಡು ಹೋದ ಮೇಲೆ ಅವನೊಂದಿಗೆ ಸಂಪರ್ಕ-ಸಂವಾದ ಕಡಿಮೆಯಾಯಿತು. ಆದರೂ ಅವನ ನಿಷ್ಕಳಂಕ ನಗು, ಎಲ್ಲರೊಂದಿಗೆ ಬೆರೆಯುವ ಸಮಾಜಮುಖೀ ಮನಸ್ಸು, ಅಧ್ಯಾತ್ಮದ ಬಗೆಗಿನ ಆಸಕ್ತಿಗಳು ತುಂಬ ನೆನಪಾಗುತ್ತವೆ. ಅನಾರೋಗ್ಯದಿಂದ 66ರ ವಯಸ್ಸಿಗೇ ಇನ್ನಿಲ್ಲವಾದುದು ಕಣ್ಮುಂದೆ ಬಂದರೆ, 'ಏನಿದು ವಿಧಿ' ಎಂಬ ಉತ್ತರವಿಲ್ಲದ ಪ್ರಶ್ನೆ ಎದುರಾಗುತ್ತದೆ!

* * * * * * *
ಅಜ್ಜಂಪುರದ ಗಾಂಧೀವಾದಿ ಎಸ್. ಸುಬ್ರಹ್ಮಣ್ಯಶೆಟ್ಟರ ಏಕಮಾತ್ರ ಪುತ್ರ ಎಸ್. ರಾಜಗೋಪಾಲ ಗುಪ್ತ (66) ಗುರುವಾರ (19-12-2013) ಬೆಳಿಗ್ಗೆ ಬೆಂಗಳೂರಿನ ತನ್ನ ಮಗ ಪವನ್ ವಾಸಿಸುವ ಬಾಡಿಗೆ ಮನೆಯಲ್ಲಿ ನಮ್ಮನ್ನು ಅಗಲಿದರು. ಬಾಡಿಗೆ ಮನೆ ಅಂತ ಯಾಕೇಳಿದೆ ಎಂದರೆ, ಶೆಟ್ಟರು ಅಜ್ಜಂಪುರದಲ್ಲಿದ್ದಾಗ ಹಲವು ಬಡವರಿಗೆ ನೆರಳು ನೀಡಲು ಮನೆ ಕಟ್ಟಿಸಿಕೊಟ್ಟಿದ್ದರು. ಹಸಿವಿನಿಂದ ಯಾರೂ ಇರಬಾರದೆಂದು ಪ್ರತಿದಿನ ನೂರಾರು ಜನರಿಗೆ ಅನ್ನ ಹಾಕಿದ್ದರು. ಅದರಲ್ಲೂ ದಲಿತರೆಂದರೆ ಅವರಿಗೆ ಪಂಚ ಪ್ರಾಣ. ಹೀಗಿದ್ದಾಗ ಅವರು ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ಪ್ರಾಣ ಬಿಟ್ಟರು ಎನ್ನುವುದು ನನಗಂತೂ ನಿಜವಾಗಿಯೂ ತುಂಬಾ ನೋವಿನ ಸಂಗತಿ.

ರಾಜಗೋಪಾಲಗುಪ್ತರು ಅಪ್ಪ ನಡೆಸುತ್ತಿದ್ದ ಗೀತಾಮಿತ್ರ ಮಾಸಿಕವನ್ನು ಮುನ್ನಡೆಸಿದರು. ಇದೀಗ ಅದಕ್ಕೆ 50 ವರುಷಗಳೇ ಸಂದಿವೆ. ಗೀತಾಮಿತ್ರ ಪತ್ರಿಕೆಯನ್ನು ಅವರ ತಂಗಿ ಶಾರದ ಗೋಪಾಲ್ ನೋಡಿಕೊಳ್ಳುತ್ತಿದ್ದಾರೆ. ಅದರ ಬೆಳವಣಿಗೆಗೆ ಓದುಗರೇ ಸಹಕಾರಿ. ಅಜಾತ ಶತ್ರು ಆಗಿದ್ದ ಅವರು ಯಾರಿಗೂ ನೋವುಂಟು ಮಾಡಿದವರಲ್ಲ. ಯಾವಾಗಲೂ ನಗುನಗುತ್ತಾ ಹಸನ್ಮುಖಿಯಾಗಿ ಇರುತ್ತಿದ್ದರು. ಕ್ರಿಯಾಶೀಲರಾಗಿದ್ದ ಅವರು ಅಜ್ಜಂಪುರದಲ್ಲಿದ್ದ ತೆಂಗು ತೋಟ, ಜಮೀನು, ಗದ್ದೆ, ಪ್ರಿಂಟಿಂಗ್ ಪ್ರೆಸ್, ಬೃಹತ್ ಮನೆ, ನಿವೇಶನ, ಅಂಗಡಿ, ವಾಣಿಜ್ಯ ಮಳಿಗೆಗಳು, ವಾಣಿಜ್ಯ ಶಾಲೆ, ಹಾಗೂ ಮೇಲಾಗಿ ಕರುಳಬಳ್ಳಿಗಳಂತಿದ್ದ ನಮ್ಮನ್ನೆಲ್ಲಾ ಸಾರಾಸಗಟಾಗಿ ತಿರಸ್ಕರಿಸಿ ಮಾರಿ ಶಿವಮೊಗ್ಗದಲ್ಲಿ ವಾಸಿಸಿದರು. ಅಲ್ಲಿ ಅವರು ಕೆಲಸವಿಲ್ಲದೆ ಜಡಗಟ್ಟಿದರು. 

ಸ್ವಲ್ಪ ದಿನ ಶಿವಮೊಗ್ಗದಲ್ಲಿದ್ದು ನಂತರ ಮಹಾಮಾರಿ ಬೆಂಗಳೂರಿಗೆ ಹೋದರು. ಅಲ್ಲಿ ಸಂಪೂರ್ಣವಾಗಿ ಮಂಕುಬಡಿದವರಂತೆ ಆದರು.  ಅವರು ಕ್ರಿಯಾಶೀಲರಾಗಿರುವಂತೆ ನೋಡಿಕೊಳ್ಳಬೇಕಾಗಿತ್ತು. ಅದಾಗಲಿಲ್ಲ. ದಿನದಿಂದ ದಿನಕ್ಕೆ ಕೃಶರಾಗುತ್ತಾ ಹೋದರು. ಅವರ ತೂಕ ಕೊನೆಗೆ 10 ಕೆ. ಜಿ ಆಗಿತ್ತು.  ರಾಜಗೋಪಾಲ ಗುಪ್ತರು ಅಜ್ಜಂಪುರ ಬಿಡಬಾರದಿತ್ತು. ಅವರಿಗೆ ಇಲ್ಲಿ ರಾಜ ಮರ್ಯಾದೆ ಇತ್ತು. ಮೇಲಾಗಿ ಅಪ್ಪ ಸುಬ್ರಹ್ಮಣ್ಯ ಶೆಟ್ಟರ ಕುಡಿ ಎನ್ನುವ ಹೆಸರಿತ್ತು. ಅವರು ಅಜ್ಜಂಪುರ ಬಿಟ್ಟರೂ ಸಂಪರ್ಕ ಕಡಿದುಕೊಂಡಿರಲಿಲ್ಲ. ಅವರ ಆರೋಗ್ಯ ಕೈ ಕೊಡುತ್ತಿದ್ದರಿಂದ ಸಂಪರ್ಕ ಕಡಿಮೆ ಆಯ್ತು. ಕೊನೆಗೆ ಕ್ರಮೇಣ ಅಜ್ಜಂಪುರ ಅವರಿಂದ ಮರೆಯಾಯಿತು. ಇನ್ನು ರಾಜಗೋಪಾಲಗುಪ್ತರು ನಮಗೆ ದೂರದ ಮಾಸಿದ ನೆನಪು ಅಷ್ಟೆ. ಶೆಟ್ಟರ ಮನೆಯಲ್ಲಿ ಅನ್ನ ತಿಂದ ಋಣ ನನ್ನ ಮೇಲಿದೆ. ಶೆಟ್ಟರ ಆತ್ಮಕ್ಕೆ ಶಾಂತಿ ದೊರಕಲಿ.
                                             * * * * * * *

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

87. ಬಂಗಾರದ ಭರವಸೆ ಹುಟ್ಟಿಸುವ ಹಣ್ಣೆ ಗುಡ್ಡ

82. "ಬಾರ್ನ್ ಹೆಡ್ ಮಾಸ್ಟರ್" ಅಜ್ಜಂಪುರ ವೆಂಕಟೇಶಮೂರ್ತಿ

ಮಹಾರಾಜರ ಕಟ್ಟೆ !