ಹೀಗೊಂದು ಕದನದ ಕಥೆ

ಓದುಗರೆಲ್ಲರಿಗೂ ನೂತನ  ವರ್ಷದ ಶುಭಾಶಯಗಳು 

ಶ್ರೀ ಎಮ್. ಚಂದ್ರಪ್ಪ 
     ಶ್ರೀ ಚಂದ್ರಪ್ಪ ಮಾಸ್ತರರು ಅಜ್ಜಂಪುರದವರು. ಮಾಧ್ಯಮಿಕ ಶಾಲೆಯ ಅಧ್ಯಾಪಕರಾಗಿ ನಿವೃತ್ತರಾಗಿರುವ ಅವರು ಕಲೆ, ಸಾಹಿತ್ಯ, ನಾಟಕ, ಇತಿಹಾಸಗಳಲ್ಲಿ ಅಭಿರುಚಿಯುಳ್ಳವರು. ಅವರೀಗ ಕೊಡಗಿನ ಕುಶಾಲನಗರದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದು, ಇಂದಿಗೂ ಬರವಣಿಗೆ, ಸಾಹಿತ್ಯದ ಅಧ್ಯಯನಗಳನ್ನು ಜೀವಂತವಾಗಿಟ್ಟುಕೊಂಡಿದ್ದಾರೆ. ಯೌವನದಲ್ಲಿ  ತುಂಬ ಸ್ಫುರದ್ರೂಪಿಯಾಗಿ, ಬಟ್ಟೆ-ಬರೆಗಳ ಬಗ್ಗೆ ವಿಶೇಷ ಆಸ್ಥೆ ಹೊಂದಿದ್ದ ಈ ಮಾಸ್ತರರು ಇಂದಿಗೂ ಅದೇ ಚೈತನ್ಯ, ಉತ್ಸಾಹಗಳಿಂದ ಇರುವರೆನ್ನುವುದು ಈ ಲೇಖನದೊಂದಿಗೆ ತಲುಪಿದ ಅವರ ಚಿತ್ರ ನೋಡಿದಾಗ ನನಗೆ ಅನ್ನಿಸಿತು. 
    ಅಜ್ಜಂಪುರ-ತರೀಕೆರೆಗಳ  ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಆರಂಭವಾಗಿದ್ದ ಕದನದ ನೆನಪುಗಳು ನನ್ನ ವಯಸ್ಸಿನ ಅಜ್ಜಂಪುರದ ಗೆಳೆಯರ ಮನದಲ್ಲಿ ಅಸ್ಪಷ್ಟವಾಗಿಯಾದರೂ ಉಳಿದಿರುತ್ತದೆಯೆಂದು ಭಾವಿಸುತ್ತೇನೆ. ಅಂಥದೊಂದು ಘಟನೆಯನ್ನು ಹತ್ತಿರದಿಂದ ನೋಡಿದ್ದ ಮಾಸ್ತರರು ತಮ್ಮ ನೆನಪಿನ ಖಜಾನೆಯಿಂದ ಹೆಕ್ಕಿ ತೆಗೆದು ಇಲ್ಲಿ ನೀಡಿದ್ದಾರೆ. ಇಂದು ಗುಂಪು ಘರ್ಷಣೆಯೆಂದು ಸಾಮಾನ್ಯೀಕರಿಸಬಹುದಾದ ಆ ಘಟನೆಗೆ "ಯುದ್ಧ"ವೆಂಬ ಪದ ಚಾಲ್ತಿಯಲ್ಲಿದ್ದುದಷ್ಟೇ ಅಲ್ಲ, ಯುದ್ಧದ ರೋಷಾವೇಶ, ದ್ವೇಷ, ಆತಂಕಗಳನ್ನು ನಮ್ಮ ೧೨-೧೩ರ ವಯೋಮಾನದಲ್ಲಿ ಅನುಭವಿಸಿದ್ದು ನೆನಪಿಗೆ ಬರುತ್ತಿದೆ. ಸಮಕಾಲೀನರಿಗೆ ಅಂದಿನ  ಭಯ-ಆತಂಕಗಳ ಮರುಕಳಿಕೆ ತಂದರೆ, ಇಂದಿನವರಿಗೆ ಹಿಂದೊಮ್ಮೆ ನಡೆದ ಘಟನೆಯ ವಿವರಣೆ ದೊರೆಯುತ್ತದೆ. ಚಂದ್ರಪ್ಪ ಮಾಸ್ತರರು, (ಅವರನ್ನು ಎಂ.ಸಿ. ಎಂದು ಕರೆಯುವುದು ರೂಢಿಯಲ್ಲಿತ್ತು) ನಮ್ಮನ್ನು ಐದು ದಶಕಗಳ ಹಿಂದಕ್ಕೆ ಕರೆದೊಯ್ದಿರುವ ಬರಹ ನಿಮಗಾಗಿ ಇಲ್ಲಿದೆ. ಅವರನ್ನು ಅಭಿನಂದಿಸಲು ದೂರವಾಣಿ : 9036011824
-ಶಂಕರ ಅಜ್ಜಂಪುರ
ದೂರವಾಣಿ : 99866 72483

======================================================================================================== 
   ಅದು ೧೯೬೮ನೇ ವರ್ಷ. ಅಜ್ಜಂಪುರ ಮತ್ತು ತರೀಕೆರೆಗಳ ಇತಿಹಾಸದಲ್ಲಿ ನಡೆದ ಚಿಕ್ಕದೊಂದು ಘಟನೆ ಆರಂಭವಾದದ್ದು ಕೆಲವೇ ತಿಳಿಗೇಡಿಗಳ ಆತುರದ ಕೃತ್ಯದಿಂದ. ಅಂದು ಆಕಾಶವಾಣಿಯಲ್ಲಿ ಈ ಸುದ್ದಿ ಪ್ರಮುಖವಾಗಿ ಬಿತ್ತರವಾಯಿತೆಂದರೆ, ಆದು ಸೃಷ್ಟಿಸಿದ ಭಯ, ತಲ್ಲಣಗಳನ್ನು ಗ್ರಹಿಸಬಹುದೆನ್ನಿಸುತ್ತದೆ.
  ಅಂತರಗಟ್ಟೆ ಅಜ್ಜಂಪುರದಿಂದ ೮ ಮೈಲು ದೂರದಲ್ಲಿರುವ ಪುಟ್ಟಗ್ರಾಮ. ಅಲ್ಲಿನ ಗ್ರಾಮದೇವತೆ ದುರ್ಗಾಂಬಾ ದೇವಿ. ಈ ದೇವಿಗೆ ವರ್ಷಕ್ಕೊಮ್ಮೆ ನಡೆಯುವ ರಥೋತ್ಸವಕ್ಕೆ ದೂರದೂರುಗಳಿಂದ ಸಾವಿರಾರು ಭಕ್ತರು ಬಂದು ತಮ್ಮ ಹರಕೆ ತೀರಿಸುವ ಸಂಪ್ರದಾಯ ಬಹಳ ಪುರಾತನವಾದುದು. ಜಾತ್ರೆಗೆ ಬರಲಾಗದವರು, ತಾವಿರುವ ಸ್ಥಳದಲ್ಲೇ ದೇವಿಯನ್ನು ಆರಾಧಿಸುವ ಪದ್ಧತಿ ಇಂದಿಗೂ ಮುಂದುವರೆದಿದೆ.
ಇಲ್ಲಿನ ಜಾತ್ರೆಗೆ ಐದು ದಶಕಗಳ ಹಿಂದೆ ಇದ್ದ ವಾತಾವರಣವೀಗ ಇರಲಾರದು. ಅಂದು ಸುತ್ತಲಿನ ಗ್ರಾಮಸ್ಥರು ಎತ್ತಿನ ಗಾಡಿಗಳಿಗೆ ಬಣ್ಣಬಣ್ಣದ  ಕಮಾನುಗಳನ್ನು ಸಿಂಗರಿಸಿ, ಎತ್ತಿನ ಕೋಡುಗಳಿಗೆ ವಿವಿಧ ಬಣ್ಣದ ಸಿಂಗಾರದ ಕಾಗದಗಳನ್ನು ಅಂಟಿಸಿ, ತಾವೂ ಹೊಸ ಬಟ್ಟೆಗಳನ್ನು ಧರಿಸಿ ಗಾಡಿ ಓಡಿಸುತ್ತಿದ್ದ ದೃಶ್ಯ ಈಗ ವಿರಳ. ನೂರಾರು ಗಾಡಿಗಳಲ್ಲಿ ಸಾಲಾಗಿ ಬರುವಾಗ ಎತ್ತುಗಳ ಘಂಟೆಯ ಝಣ್ ಝಣ್ ನಿನಾದ ಕರ್ಣಾನಂದಕರವಾಗಿರುತ್ತಿತ್ತು. ಅವನ್ನು ಪಾನಕದ ಗಾಡಿಗಳೆಂದೇ ಕರೆಯುತ್ತಿದ್ದರು. ಏಕೆಂದರೆ ಜಾತ್ರೆಗೆ ಬಂದ ಭಕ್ತಾದಿಗಳ ನೀರಡಿಕೆಯನ್ನು ತಣಿಸಲು ಬೆಲ್ಲದ ಪಾನಕ ತುಂಬಿದ ಬೃಹತ್ ಪಾತ್ರೆಗಳು ಆ ಗಾಡಿಗಳಲ್ಲಿ ಇರುತ್ತಿದ್ದವು.
   ಗ್ರಾಮೀಣ ಸೊಗಡು ತುಂಬಿತುಳುಕುತ್ತಿದ್ದ ಆ ದಿನಗಳಲ್ಲಿ ನಡೆದ ಪೈಪೋಟಿಯ ತುರುಸು ತರೀಕೆರೆ ಹಾಗೂ ಅಜ್ಜಂಪುರಗಳ ನಡುವೆ ಕದನಕ್ಕೆ ಕಾರಣವಾಗಿ, ಸೃಷ್ಟಿಸಿದ ಆತಂಕಗಳು ಅಂತಿಮವಾಗಿ ತಾಯಿ ದುರ್ಗಾಂಬೆಯ ಕೃಪೆಯಿಂದ ಶಾಂತಿ ಸ್ಥಾಪನೆಯಾದುದು ಒಂದು ಪವಾಡವೇ ಸರಿ.
ಶುಕ್ರವಾರದ ಪ್ರಾತಃಕಾಲವೇ ರಥೋತ್ಸವ ನಡೆಯುವುದಾದರೂ, ಗುರುವಾರವೇ ಅಂತರಗಟ್ಟೆಯನ್ನು ತಲುಪುದು ಪದ್ಧತಿ. ಹೀಗೆ ತಲುಪುವ ಆತುರದಲ್ಲಿ ಎತ್ತಿನ ಗಾಡಿಗಳನ್ನು ನಾ ಮುಂದು, ತಾ ಮುಂದು ಎಂದು ಎತ್ತುಗಳನ್ನು ಬಾರುಕೋಲಿನಿಂದ ಬಡಿಯುತ್ತಾ, ಗಾಡಿಗಳನ್ನು ಓಡಿಸುವ ಭರದಲ್ಲಿ, ಅಜ್ಜಂಪುರದ ಗಾಡಿಯವನು, ತರೀಕೆರೆಯ ರೈತನ ಗಾಡಿಯನ್ನು ದಾಟಿ ಮುಂದೆ ಹೋದನು. ಇದರಿಂದ ಸಿಟ್ಟುಗೊಂಡ ತರೀಕೆರೆಯ ಗಾಡಿಯಲ್ಲಿದ್ದವರು ಅಜ್ಜಂಪುರದಾತನನ್ನು ಮನಬಂದಂತೆ ಥಳಿಸಿದರು. ಪೆಟ್ಟುತಿಂದ ಅಜ್ಜಂಪುರದವ ಊರಿಗೆ ಸುದ್ದಿಮುಟ್ಟಿಸಿದ. ಜಾತ್ರೆ ಮುಗಿಯಿತು. ತರೀಕೆರೆಯವನು ಪುನಃ ವಾಪಸು ಹೋಗುವಾಗ ಅಜ್ಜಂಪುರದ ಜನ ಆತನನ್ನು ಹಿಡಿದು ಥಳಿಸಿ ಸೇಡು ತೀರಿಸಿಕೊಂಡರು. ಈ ಚಿಕ್ಕದೊಂದು ಘಟನೆ ಎರಡು ಊರುಗಳ ನಡುವಣ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿತು. ರಣರಂಗಕ್ಕೆ ನಾಂದಿಯೂ ಆಯಿತು.
   ಏಟು ತಿಂದ ತರೀಕೆರೆಯ ಮಂದಿ ಇಲಿ ಹೋದರೆ ಹುಲಿ ಹೋಯಿತು ಎನ್ನುವಂತೆ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹರಡಿ, ಅಜ್ಜಂಪುರದವರು ಓರ್ವನನ್ನು ಹೊಡೆದು ಸಾಯಿಸಿದ್ದಾರೆಂದು ಅಣಕು ಶವಯಾತ್ರೆಯನ್ನು ತಮ್ಮ ಊರಿನಲ್ಲಿ ಮಾಡಿದರು. ಇದರಿಂದ ಉದ್ರೇಕಿತರಾದ ತರೀಕೆರೆಯ ಜನತೆ ಅಜ್ಜಂಪುರದ ಆ ವ್ಯಕ್ತಿಯನ್ನು ಸುಟ್ಟುಹಾಕಬೇಕೆಂದು ವಿಷಬೀಜ ಬಿತ್ತಿದರು.
ರೋಷಕ್ಕೆ ಬಲಿಯಾಗಿದ್ದ ಜನರ ಮನಃಸ್ಥಿತಿ ಸತ್ಯಾಸತ್ಯತೆಗಳ ವಿವೇಚನೆಯನ್ನು ಅದಾಗಲೇ ಕಳೆದುಕೊಂಡಂತಾಗಿತ್ತು. ಹಿಂದೆಲ್ಲ ಪಾಳೇಗಾರರು ದಂಡೆತ್ತಿ ಬಂದಂತೆ, ಅಜ್ಜಂಪುರವನ್ನೇ ನಾಶಮಾಡಬೇಕೆಂದು ಸಂಕಲ್ಪಿಸಿ, ಅಜ್ಜಂಪುರದ ಗಾಂಧೀವೃತ್ತದ ಬಳಿ ಜಮಾಯಿಸಿದರು. ಎರಡು ಸೈನ್ಯಗಳು ಸೇರಿದಂತೆ ವಿದ್ಯುತ್ ಕಛೇರಿಯ ಬಳಿ ಎರಡು ಬಣಗಳೂ ಎದುರಾದವು.
   ಪರಿಸ್ಥಿತಿ ಹತೋಟಿ ಮೀರಿದ್ದನ್ನು ಗ್ರಹಿಸಿದ ಅಂದಿನ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಎರಡು ಪಕ್ಷಗಳ ನಡುವೆ ನಿಂತು, ಕಾನೂನನ್ನು ಕೈಗೆ ತೆಗೆದುಕೊಳ್ಳುವ ದುಸ್ಸಾಹಸಕ್ಕೆ ಮುಂದಾಗಬೇಡಿರೆಂದು ಎಚ್ಚರಿಸಿದರು. ಇಷ್ಟಾಗಿಯೂ ದ್ವೇಷದ ಬೆಂಕಿ ನಂದಲಿಲ್ಲ. ವೈರತ್ವ ಬಿಗಡಾಯಿಸಿ ತರೀಕೆರೆಯ ಜನ ಐದಾರು ಲಾರಿಗಳಲ್ಲಿ ಬಂದು , ಪೆಟ್ರೋಲ್ ನಲ್ಲಿ ಅದ್ದಿದ ಬಟ್ಟೆಗಳು, ಬಡಿಗೆಗಳೊಂದಿಗೆ ಅಜ್ಜಂಪುರಕ್ಕೆ ದಾಳಿಯಿಡುವ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಅಜ್ಜಂಪುರದ ಜನತೆ ಮಾತ್ರವಲ್ಲದೆ ಸುತ್ತಲಿನ ಐದಾರು ಗ್ರಾಮದ ಜನ ಮಾಡು ಇಲ್ಲವೇ ಮಡಿ ಎಂದು, ಮಚ್ಚು, ದೊಣ್ಣೆ, ಕಣಗೆ, ಹಾಗೂ ಖಾರದಪುಡಿಗಳನ್ನು ಜೊತೆಗಿರಿಸಿಕೊಂಡು ಸನ್ನದ್ಧರಾದರು. ಅಜ್ಜಂಪುರದ ಮನೆ ಮನೆಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಯಿತು. ಮಹಿಳೆಯರು ಕೂಡ ಉದ್ದದ ಬಡಿಗೆಗಳು, ಖಾರದಪುಡಿಗಳನ್ನು ಸಿದ್ಧಪಡಿಸಿಕೊಂಡು ಒನಕೆ ಓಬವ್ವಳಂತೆ ಕಾದಾಟಕ್ಕೆ ಅಣಿಯಾದದ್ದು ಇಂದಿಗೂ ಕಣ್ಮುಂದೆ ನಿಂತಿದೆ.
   ವಿಷಯ ವಿಕೋಪಕ್ಕೆ ಹೋಗುವುದನ್ನು ತಿಳಿದ ಪೊಲೀಸ್ ಇಲಾಖೆ, ತಕ್ಷಣ ನಾಲ್ಕು ಸಶಸ್ತ್ರ ಪಡೆಗಳೊಂದಿಗೆ ಅಜ್ಜಂಪುರಕ್ಕೆ ಬಂದಿಳಿದಾಗ, ಎರಡು ಬಣಗಳೂ ಕುರುಕ್ಷೇತ್ರವನ್ನು ನಿರ್ಮಿಸಿದಂಥ ವಾತಾವರಣವಿತ್ತು. ಪೊಲೀಸರ ವ್ಯಾನುಗಳು ಎರಡು ಬಣಗಳ ನಡುವೆ ನಿಂತಮೇಲೆ ಅಜ್ಜಂಪುರದ ಜನತೆಗೆ ಚೈತನ್ಯ ಬಂದಂತಾಯಿತು. ಸ್ಥಳೀಯ ಸಬ್ ಇನ್ಸ್ಪೆಕ್ಟರ್ ಹಾಗೂ ವರಿಷ್ಠ ಪೊಲೀಸ್ ಅಧಿಕಾರಿಗಳು ಎರಡು ಬಣಗಳನ್ನು ಉದ್ದೇಶಿಸಿ ಯಾರಾದರೂ ಒಂದು ಹೆಜ್ಜೆ ಮುಂದಿಟ್ಟಲ್ಲಿ ಗೋಲೀಬಾರ್ ಮಾಡಲು ಆಜ್ಞಾಪಿಸುತ್ತೇನೆ ಎಂದು ಒಂದು ಗುಂಡನ್ನು ಆಕಾಶಕ್ಕೆ ಹಾರಿಸಿದರು. ಎರಡೂ ಕಡೆಯವರು ಸ್ಥಂಭೀಭೂತರಾದರು. ಎರಡೂ ಕಡೆಯವರನ್ನು ಉದ್ದೇಶಿಸಿ ಮುಂದಿನ ವಾರ ತರೀಕೆರೆಯಲ್ಲಿ ನಡೆಯುವ ಶಾಂತಿಸಭೆಗೆ ಉಭಯತ್ರರೂ ಬರಬೇಕು, ಅಜ್ಜಂಪುರದ ರಾಜಕೀಯ ಧುರೀಣರು, ಪುರಪ್ರಮುಖರಾದ ಶ್ರೀ ಸುಬ್ರಹ್ಮಣ್ಯ ಶೆಟ್ಟರು, ಶ್ರೀ ಸೀತಾರಾಮ ಭಟ್ಟರು ಮುಂತಾದವರು  ಮುಂದಿದ್ದು ಶಾಂತಿ ವಾತಾವರಣವನ್ನು ಸೃಷ್ಟಿಸಲು ಹಿತವಚನಗಳನ್ನು ತಿಳಿಸಬೇಕು ಎಂದು ವಿನಂತಿಸಿದರು. ಸೀತಾರಾಮ ಭಟ್ಟರಂತೂ ಉಭಯ ಗ್ರಾಮಗಳ ಜನರ ಮುಂದೆ ಸಾಷ್ತಾಂಗ ನಮಸ್ಕಾರವನ್ನೇ ಮಾಡಿ ಪರಿಸ್ಥಿತಿಯನ್ನು ತಹಬಂದಿಗೆ ತರಲು ಸಹಕರಿಸಿದರು. ಮುಂದೆ ನಡೆದ ಶಾಂತಿಸಭೆಗಳು ಉತ್ತಮ ಫಲಿತಾಂಶವನ್ನೇ ನೀಡಿದವು. ಎರಡು ಊರುಗಳಲ್ಲಿ ಶಾಂತಿ ನೆಲೆಸಿ, ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
   ತಾಯಿ ದುರ್ಗಾಂಬಾ, ಅಜ್ಜಂಪುರದ ಗ್ರಾಮದೇವತೆ ಕಿರಾಳಮ್ಮ ಹಾಗೂ ಗೀತಾಶ್ರಮದ ಶಂಕರಾನಂದ ಸ್ವಾಮಿಗಳ ಕೃಪೆಯಿಂದ ಸಮಸ್ಯೆ ಸುಲಭವಾಗಿ ಬಗೆಹರಿದು ನೆಲೆಸಿದ ಶಾಂತಿ ಇಂದಿಗೂ ಹಾಗೆಯೇ ಮುಂದುವರೆದಿದೆ.
   ಇದಿಷ್ಟನ್ನು ಈಗ ಪ್ರಸ್ತಾಪಿಸಿದ ಉದ್ದೇಶವೆಂದರೆ, ನೆನಪು ಕಹಿಯಿರಬಹುದು. ಆದರೆ ಚಿಕ್ಕದೊಂದು ಘಟನೆ ಊರುಗಳ ಮಧ್ಯೆ ಸೃಷ್ಟಿಸಿದ ಆತಂಕ, ತಲ್ಲಣಗಳು ಇಂದಿನ ಪೀಳಿಗೆಗೊಂದು ಪಾಠ. ಇತಿಹಾಸವನ್ನು ಅವಲೋಕಿಸುವುದರಿಂದ ಉಂಟಾಗುವ ಲಾಭ ಇದೇ.
* * * * * *

ಕಾಮೆಂಟ್‌ಗಳು

  1. ಪ್ರೀತಿಯ ಚಂದ್ರಪ್ಪ ಮಾಸ್ಟರ್ ಅವರನ್ನು ಈ ಬ್ಲಾಗನಲ್ಲಿ ಕಂಡು ಖುಷಿಯಾಯಿತು . ನಮ್ಮೆಲ್ಲರಿಗೂ ಅವರು ಅತ್ಯಂತ ಪ್ರೀತಿ ಪಾತ್ರರು, ನಮ್ಮ ಮನದಂಗಳದಲ್ಲಿ ಸದಾ ಹಸಿರಾಗಿ ನಿಂತ ಅವರ ನೆನಪು ಅವರಷ್ಟೇ ಚಿರ ಯೌವ್ವನ - ನಿತ್ಯ ನೂತನ . ಇವರಂತೆ ಶ್ರೀ ಓಂಕಾರಪ್ಪ ಮಾಸ್ಟರು, ಶ್ರೀ ಮೃತ್ಯುಂಜಯ ಮಾಸ್ಟರ್,ಶ್ರೀ ಗವಿರಂಗಪ್ಪ ಮಾಸ್ಟರ್ ಇವರೆಲ್ಲಾ ನೀಡಿದ ಪ್ರೋತ್ಸಾಹ, ತೋರಿದ ಆದರ್ಶ ಸದಾ ಅವಿಸ್ಮರಣೀಯ.ನಮ್ಮೂರಿನ ಮಾದ್ಯಮಿಕಶಾಲೆಯ ಇವರೆಲ್ಲರ ನೆನೆಪು ಮನಸ್ಸಿಗೆ ಮುದ ನೀಡುತ್ತದೆ . ಹಳೇ ಕಥೆ ಓದಿ ' ಅಜ್ಜಂಪುರ - ತರೀಕೆರೆ ಯವರ ಮದ್ಯೆ ನೆಡೆದ ಗಲಾಟೆ - ಯುದ್ದ ಆ ರಣೋತ್ಸಾಹದ ನೆನಪು ಕಣ್ಣ ಮುಂದೆ ಬಂತು . ಅದರಲ್ಲೂ ವಾಟರ್ ಟ್ಯಾಂಕ್ ಹಿಂದೆಯೇ ಇದ್ದ ನಮ್ಮ ಮನೆಯಲ್ಲಿ, ಎಲ್ಲಾ ಹತ್ತಿರದಿಂದ ಕಣ್ಣಾರೆ ಕಂಡ ನಮಗೆ ಆದ ಆತಂಕ - ಕುತೂಹಲ ನೆನೆದು ನಗು ಬರುತ್ತಿದೆ . ನಮ್ಮ ತಂದೆ ಅಜ್ಜಂಪುರದವರೆಂಬ ಗುರುತಿಗೆ ನೀಲಿ ಬಟ್ಟೆ ತುಂಡು ಕೈಗೆ ಕಟ್ಟಿ , ಕಣಗೆ / ಬಡಿಗೆ ಹಿಡಿದು ಟ್ಯಾಂಕ್ ಹತ್ತಿರ ಹೋಗೀ ಬಂದೂ , ಮನೆಯ ಹತ್ತಿರ ನಿಂತು ಆಗಾಗ ' ಯುದ್ಧದ ವರದಿ ' ಮನೆಯವರಿಗೆಲ್ಲಾ ವರ್ಣಿಸುತ್ತಿದುದು ಒಳ್ಳೇ ಚಂದಮಾಮದ ಕಥೆಯಂತಿದೆ. ಮನೆಗೊಬ್ಬ ಗಂಡಸು ಬರಲೇಬೇಕೆಂಬ ಆಣತಿ ಹೊರಡಿಸಿ ತಮಟೆ 'ಸಾರ್ ' ಹಾಕಿದ್ದೂ ನೆನಪಿದೆ. ಇತಿಹಾಸದ ಪುಟದ ಚಿತ್ರವನ್ನು ಮತ್ತೆ ತೋರಿಸಿದ ಪ್ರೀತಿಯ ಚಂದ್ರಪ್ಪ ಮೇಸ್ಟ್ರುಗೆ , ಪ್ರೀತಿಪೂರ್ವಕ ನಮಸ್ಕಾರಗಳು.

    ಪ್ರತ್ಯುತ್ತರಅಳಿಸಿ
  2. ಮೇಲಿನ ಲೇಖನಕ್ಕೆ ಪ್ರತಿಕ್ರಿಯೆಯಾಗಿ ನಾರಣಪ್ಪ ಸೋಮಶೇಖರ್ ಎಂಬ ಗೆಳೆಯರು ನಮೂದಿಸಿದ್ದ ಪ್ರತಿಕ್ರಿಯೆಯನ್ನು ಇಲ್ಲಿ ನೀಡಿದ್ದೇನೆ. ಅವರು ಬರೆಯುತ್ತಾರೆ : "ನಮ್ಮದು ಬಯಲು ಸೀಮೆಯ ಒಂದು ಚಿಕ್ಕ ಹಳ್ಳಿ, ಹೆಸರು ದಿಂಡಗೂರು. ಪಕ್ಕದ ಇನ್ನೂ ಚಿಕ್ಕ ಹಳ್ಳಿ ಶೆಟ್ಟಿಹಳ್ಳಿ. ಇಲ್ಲಿ ಎಲ್ಲ ಊರಿನಂತೆ ಶೆಟ್ಟಿಹಳ್ಳಿ ಅಮ್ಮನೆಂಬ ಶಕ್ತಿದೇವಿಯ ಮೂಲಸ್ಥಾನವಿದೆ. ಅದಕ್ಕೆ ದೇವಿಯ ಉತ್ಸವಮೂರ್ತಿಯೂ ಇದೆ. ಇಷ್ಟೇ ಅಲ್ಲ ಈ ಉತ್ಸವಮೂರ್ತಿಯನ್ನು ನಮ್ಮ ಊರಿನವರು ಆ ಊರವರನ್ನು ಕದನದಲ್ಲಿ ಸೋಲಿಸಿ, ನಮ್ಮೂರಿಗೆ ತಂದರೆಂದೂ, ಅದು ಅಂದಿನಿಂದ ನಮ್ಮಲ್ಲೇ ಇದೆಯೆಂದು ನಮ್ಮ ಬಾಲ್ಯದಲ್ಲಿ ಶಾಲೆಗೆ ಹೋಗುವಾಗ, ಬರುವಾಗ ಹೆಮ್ಮೆಯಿಂದ ಹೇಳುತ್ತಿದ್ದರು. ಇದು ಎಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೂ ನಮಗೆ ಆ ಊರಿನ ಉತ್ಸವಮೂರ್ತಿಯನ್ನು ಬಲವಂತದಿಂದ ತಂದ ಬಗ್ಗೆ, ಸರಿ-ತಪ್ಪುಗಳ ಚರ್ಚೆ ನಡೆಯುತ್ತಿತ್ತು. ಬಹುಶಃ ಹೆದ್ದಾರಿಯ ಪಕ್ಕದಲ್ಲಿಯೇ ಇದ್ದ ಆ ಮೂರ್ತಿಯನ್ನು ನಮ್ಮ ಊರಲ್ಲಿ ಸುರಕ್ಷತೆಯ ಕಾರಣಕ್ಕಾಗಿ ಇಟ್ಟಿರಬಹುದು. ದಂತಕಥೆಗಳು ಹೇಗೆ ಹುಟ್ಟಬಹುದೆಂಬ ಬಗ್ಗೆ ಹಾಗೂ ಹಳ್ಳಿ-ಹಳ್ಳಿಗಳ ನಡುವೆ ಜಗಳಗಳಾಗಲೀ, ಒಪ್ಪಂದಗಳಾಗಲೀ ಹೇಗೆ ನಡೆಯಬಹುದು, ಅವಕ್ಕೆ ನಂತರ ಕಾಲಾನುಕ್ರಮದಲ್ಲಿ ರೆಕ್ಕೆಪುಕ್ಕಗಳು ಹುಟ್ಟಿರಬಹುದೆಂಬ ಬಗ್ಗೆ ತಿಳಿಸಿರುವೆ".

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.