ಜ್ಞಾನ ಭಂಡಾರಅಜ್ಜಂಪುರದ ಶ್ರೀ ಸತ್ಯನಾರಾಯಣ ಶೆಟ್ಟರ ಬಗೆಗೆ ಅನೇಕ ವಿವರಗಳು ಈ ಬ್ಲಾಗ್ ನಲ್ಲಿ ಪ್ರಕಟವಾಗಿವೆ. ಇಲ್ಲಿ ಅವರ ಕೃತಿ "ಜ್ಞಾನ ಭಂಡಾರ" ದ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದಕ್ಕೆ ಕಾರಣವೆಂದರೆ ಶ್ರೀ ಶೆಟ್ಟರು ಪುಸ್ತಕ ಪ್ರಕಾಶನದಲ್ಲಿ ಬಹುಶಃ ಹೆಚ್ಚು ಜನ ಯೋಚಿಸಿರಲಾರದ ಉಪಾಯವೊಂದನ್ನು ಕಾರ್ಯಗತಗೊಳಿಸುವುದಷ್ಟೇ ಅಲ್ಲದೆ, ಪ್ರಕಾಶನ ತಂತ್ರಕ್ಕೆ ಹೊಸ ಆಯಾಮವೊಂದನ್ನು ನೀಡಿದ್ದಾರೆ. ಅದೂ ಈ ಶತಮಾನದಲ್ಲಿ ಎನ್ನುವುದು ಆಶ್ಚರ್ಯಕಾರಿಯಾದುದು.

ಹಿಂದೆಲ್ಲ ಶಾಲಾ ಪತ್ರಿಕೆಗಳನ್ನು ಕೈಬರಹದಲ್ಲೇ ತರುವ ಪದ್ಧತಿಯಿತ್ತು. ಅಂಥ ಕೈ ಬರಹದ ಶಾಲಾ ವಾರ್ಷಿಕ ಪತ್ರವನ್ನು ಹಿಂದಿನ ಶತಮಾನದ 60ರ ದಶಕದಲ್ಲಿ ಅಜ್ಜಂಪುರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ಎನ್. ಎಸ್. ಅನಂತರಾವ್ ಸಂಪಾದಿಸಿದ್ದರು. ಅವರು ಹಾಗೆ ಮಾಡುವಲ್ಲಿ ಅನೇಕ ಅಂಶಗಳನ್ನು ಗಮನದಲ್ಲಿರಿಸಿಕೊಂಡಿರುತ್ತಿದ್ದರು. ಮೊದಲನೆಯದು ಮುದ್ರಣ ವೆಚ್ಚವನ್ನು ಭರಿಸುವುದು ಅಂದಿನ ದಿನಗಳಲ್ಲಿ ಕಷ್ಟಕರವಾಗಿರುತ್ತಿತ್ತು. ಎರಡನೆಯದು, ಶಾಲಾ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವಿಷಯವನ್ನು ಚೆನ್ನಾಗಿ ಅಧ್ಯಯನ ಮಾಡಿ ಬರೆಯಬೇಕಾದ ಜವಾಬ್ದಾರಿಯನ್ನು ಹೊರಬೇಕಾಗಿದಿದ್ದುದರಿಂದ, ಗುಣಮಟ್ಟದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವಂತೆ ಇರುತ್ತಿರಲಿಲ್ಲ. ಮೂರನೆಯದಾಗಿ ಉತ್ತಮ ಹಸ್ತಾಕ್ಷರ ಹೊಂದಿಲ್ಲದ ವಿದ್ಯಾರ್ಥಿಗಳು ಕೂಡ, ಈ ಕಾರಣಕ್ಕೆಂದು ತಮ್ಮ ಬರವಣಿಗೆಯನ್ನು ಸುಧಾರಿಸಿಕೊಳ್ಳುವ ಅಗತ್ಯವುಂಟುಮಾಡುವುದು.


ಶ್ರೀ ಶೆಟ್ಟರ ಗ್ರಂಥದ ವಿಷಯಕ್ಕೆ ಬಂದರೆ, ಅವರಿಗೆ ಪ್ರಕಟಣಾವೆಚ್ಚ ನಿರ್ವಹಿಸುವುದು ಕಷ್ಟದ್ದೇನಲ್ಲ. ಬರವಣಿಗೆಯ ಗುಣಮಟ್ಟ ಮತ್ತು ವಸ್ತು ವಿವೇಚನೆಯ ದೃಷ್ಠಿಯಲ್ಲಿ ವೈವಿಧ್ಯ ಸಾಧಿಸಲು ಸಾಧ್ಯವಾಗಿರುವುದಕ್ಕೆ ಕಾರಣ, ಅವರ ವಿಶಾಲ ಅಧ್ಯಯನದ ಹರಹು. ಮತ್ತೆ ಅಕ್ಷರಗಳ ಸುಂದರತೆಯ ಬಗ್ಗೆ ಕೇಳುವಂಥದ್ದೇನಿಲ್ಲ. 93ರ ಈ ವಯಸ್ಸಿನಲ್ಲೂ ಮುತ್ತು ಪೋಣಿಸಿದಂತಹ ಸುಂದರ ಬರವಣಿಗೆ ಮತ್ತು ಭಾಷಾ ಪ್ರೌಢಿಮೆಗಳಿಂದ ಶೆಟ್ಟರ ಜ್ಞಾನ ಭಂಡಾರ ಕಂಗೊಳಿಸುವಂತಿದೆ.

ಈ ಪುಸ್ತಕ ಒಂದು ನೆರಳಚ್ಚು ಎಂದರೆ ಜೆರಾಕ್ಸ್ ಪ್ರತಿ. ಇದರಲ್ಲಿರುವ ಪುಟಗಳ ಸಂಖ್ಯೆ 500. ವಿಷಯಗಳ ವ್ಯಾಪ್ತಿ 250ನ್ನೂ ಮಿಕ್ಕಿದೆ. ಎಲ್ಲ ಪುಟಗಳನ್ನೂ ಸತ್ಯನಾರಾಯಣ ಶೆಟ್ಟರು ವಿವಿಧ ಪತ್ರಿಕೆಗಳ ವರದಿಗಳನ್ನು ಆಧರಿಸಿ, ವಿವಿಧ ಪುಸ್ತಕಗಳು ಹಾಗೂ ಸ್ವಾನುಭವವನ್ನೂ ಮಿಶ್ರಮಾಡಿ ರಚಿಸಿದ್ದಾರೆ. ಕೆಲವು ಸ್ವರಚಿತ ನಾಟಕಗಳೂ ಇವೆ.  ಮುದ್ರಣ ತಂತ್ರಜ್ಞಾನದ ಎಲ್ಲ ವಿವರಗಳನ್ನೂ ನಿಖರವಾಗಿ ಬಲ್ಲ ಇವರು, ತಮ್ಮ ಪುಸ್ತಕವು ಮುದ್ರಿತ ಪ್ರತಿಗಿಂತ ಬೇರೆಯಾಗಿರದೆ, ಆದರೆ ಕೈಬರವಣಿಗೆಯ ಸೊಗಸನ್ನು ಬಿಂಬಿಸುವಂತೆ ನೋಡಿಕೊಂಡಿದ್ದಾರೆ.

ಸತ್ಯನಾರಾಯಣ ಶೆಟ್ಟರಿಗೆ ಅಧ್ಯಾತ್ಮದಲ್ಲಿ ಎಂದಿನಿಂದಲೂ ಒಲವು. ಎಲ್ಲ ವಸ್ತು ವಿಷಯಗಳನ್ನು ತಾತ್ತ್ವಿಕ ಹಿನ್ನೆಲೆಯಲ್ಲಿ ವಿವೇಚಿಸುತ್ತಲೇ, ಲೌಕಿಕ ಸಂಗತಿಗಳನ್ನೂ, ವಿಜ್ಞಾನದ ಇತ್ತೀಚಿನ ಆವಿಷ್ಕಾರಗಳನ್ನೂ, ಹಾಸ್ಯಪ್ರವೃತ್ತಿಯನ್ನೂ ತಮ್ಮ ಲೇಖನಗಳಲ್ಲಿ ಮೆರೆದಿದ್ದಾರೆ. ಸಾಹಿತ್ಯ, ಸಂಗೀತ, ಸಿನಿಮಾ, ಗಾದೆಗಳು, ಪೂಜನೀಯರು ಎಂಬ ವಿಭಾಗದಲ್ಲಿ ಕಾಣಿಸಿರುವ ಮಹನೀಯರ ಬಗ್ಗೆ ಎಲ್ಲ ವರ್ಗದ ಓದುಗರನ್ನು ಗಮನದಲ್ಲಿರಿಸಿಕೊಂಡು ಮಾಹಿತಿ ನೀಡಿದ್ದಾರೆ. 

ಭಾರತೀಯ ಸಂಸ್ಕೃತಿಯ ಆಂತರ್ಯದಲ್ಲಿ ಹರಿಯುತ್ತಿರುವ ಮಾನವೀಯತೆ, ವಿಶಾಲ ಚಿಂತನೆಯ ದೃಷ್ಟಿಕೋಣ, ಕಲೆ, ಇತಿಹಾಸಗಳ ಸಂಕ್ಷಿಪ್ತ ದರ್ಶನವಂತೂ ಎಲ್ಲ ಲೇಖನಗಳಲ್ಲಿ ಕಂಡುಬರುತ್ತದೆ.
93ರ ತುಂಬುವಯಸ್ಸಿನಲ್ಲಿ ಅವರ ಜೀವನೋತ್ಸಾಹ, ವಿಷಯಗಳನ್ನು ತಿಳಿಯುವ ಕುತೂಹಲ, ಸಂಭಾಷಣೆಗೆ ಇಳಿದರೆ ಎಲ್ಲಿಯೂ ತಡಬಡಿಸದ, ವಾಕ್ಯಗಳಿಗಾಗಿ ಹುಡುಕಾಡದ ಸ್ಪಷ್ಟ ನಿರೂಪಣೆಗಳಿಂದಾಗಿ ಸತ್ಯನಾರಾಯಣ ಶೆಟ್ಟರು ಎಲ್ಲರಿಗೂ ಆತ್ಮೀಯರೆನ್ನಿಸುವುದು ಇಂಥ ಕಾರಣಗಳಿಂದಾಗಿ. 

ನಾನು ಅವರನ್ನು ದೂರವಾಣಿಯ ಮೂಲಕ ಇಲ್ಲವೇ ವೈಯುಕ್ತಿಕವಾಗಿ ಸಂಪರ್ಕಿಸಿದಾಗಲೆಲ್ಲ, ತಮ್ಮ ನೆನಪಿನ ಖಜಾನೆಯಿಂದ ಅನೇಕ ಸ್ವಾರಸ್ಯಕರ ಸಂಗತಿಗಳನ್ನು ಪ್ರಸ್ತುತಪಡಿಸಿದ್ದಾರೆ. ಅವೆಲ್ಲವೂ ಬ್ಲಾಗ್ ನ ಅಂಕಣಗಳಲ್ಲಿ ದಾಖಲಾಗಿವೆ.  ಹೀಗಾಗಿ ಅಜ್ಜಂಪುರಕ್ಕೆ ಸಂಬಂಧಿಸಿದಂತೆ ಅವರೊಬ್ಬ ಅಪೂರ್ವ ಸಂಪನ್ಮೂಲ ಚೇತನ. 


ಆಸಕ್ತರು ರೂ. 500/- ಮುಖಬೆಲೆಯ "ಜ್ಞಾನ ಭಂಡಾರ" ಪುಸ್ತಕವನ್ನು ಅವರ ವಿಳಾಸ - ಲಕ್ಷ್ಮೀ ಭಂಡಾರ, ಬಸ್ ನಿಲ್ದಾಣದ ಸಮೀಪ, ಅಜ್ಜಂಪುರ-577 548, ದೂರವಾಣಿ : 9141111708 - ಈ ಮೂಲಕ ಪಡೆಯಬಹುದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

87. ಬಂಗಾರದ ಭರವಸೆ ಹುಟ್ಟಿಸುವ ಹಣ್ಣೆ ಗುಡ್ಡ

82. "ಬಾರ್ನ್ ಹೆಡ್ ಮಾಸ್ಟರ್" ಅಜ್ಜಂಪುರ ವೆಂಕಟೇಶಮೂರ್ತಿ

ಮಹಾರಾಜರ ಕಟ್ಟೆ !