ಅಜ್ಜಂಪುರದಲ್ಲಿ ಕಾರ ಹಬ್ಬದ ಸಂಪ್ರದಾಯ

ಆತ್ಮೀಯರೇ,

ನಾನೀಗ ಅಮೆರಿಕೆಗೆ ಬಂದು ತಿಂಗಳಾಯಿತು. ಇನ್ನೂ ಆರು ತಿಂಗಳು ಇಲ್ಲಿಯೇ ಇರುತ್ತೇನೆ.  ಹೀಗೆ ಬರುವ ಮುನ್ನ ಅಜ್ಜಂಪುರಕ್ಕೆ ಸಂಬಂಧಿಸಿದ ಈ ಬ್ಲಾಗ್ ಮಾಹಿತಿಯ ಕೊರತೆಯಿಂದಾಗಿ ನಿಲ್ಲಬಾರದೆಂದು ಅಪೇಕ್ಷಿಸಿ, ಓದುಗರು ತಮ್ಮ ಅನುಭವಗಳನ್ನು, ಮಾಹಿತಿಗಳನ್ನು ಹಂಚಿಕೊಳ್ಳಲು ಆಗೀಗ ಕೋರುತ್ತಿರುತ್ತೇನೆ. ಕೆಲವರನ್ನು ವೈಯುಕ್ತಿಕವಾಗಿಯೂ ಕೋರಿದ್ದೇನೆ. ನನ್ನ ಉದ್ದೇಶವನ್ನು ಗಮನಿಸಿ, ಬ್ಲಾಗ್ ನಿಲ್ಲಬಾರದೆಂಬ ಪ್ರೀತಿಯೊಂದಿಗೆ ಗೆಳೆಯ ಅಪ್ಪಾಜಿ (ಅಪೂರ್ವ) ಅಜ್ಜಂಪುರದ ಮಿಡಲ್ ಸ್ಕೂಲ್ ಹಿಂಭಾಗದಲ್ಲಿರುವ ಕರಿ ಕಲ್ಲುಗಳ ಬಗ್ಗೆ ಲೇಖನವನ್ನು ಕಳಿಸಿದ್ದಾರೆ. ನಾನು ಬಾಲ್ಯದಲ್ಲಿ ಇವುಗಳನ್ನು ನೋಡಿದಾಗ, ಅವು ನೆಲದಿಂದ ನಾಲ್ಕು ಅಡಿಗಳ ಎತ್ತರವಿರುವಂತೆ ಕಾಣುತ್ತಿದ್ದವು. ಬಾಲ್ಯ ಸಹಜ ಕುತೂಹಲದಿಂದ ಈ ಕಲ್ಲುಗಳನ್ನು ಇಲ್ಲೇಕೆ ನಿಲ್ಲಿಸಿದ್ದಾರೆ ಎಂದು ಕೇಳಿದ್ದಕ್ಕೆ, ಕೆಲವು ಹಿರಿಯರು ಅವು ಊರ ಬಾಗಿಲಿನ ಸಂಕೇತವೆಂದೂ, ಕೋಟೆಯ ಆರಂಭದಲ್ಲೇ ಇರುವದರಿಂದ ಅವಗಳಿಗೆ ಬಲಿ ನೀಡುವ ಪದ್ಧತಿಯೂ ಇದ್ದಿರಬಹುದೆಂದು, ತಮಗೆ ತಿಳಿದ, ತಾವು ಊಹಿಸಿದ ಸಂಗತಿಗಳನ್ನು ತಿಳಿಸಿದ್ದು ನೆನಪಿದೆ. ಆದರೆ ಅವಾವೂ ಅಲ್ಲ, ಅವು ಕೃಷಿ ಚಟುವಟಿಕೆಯ ಆರಂಭಕ್ಕೆ ಪೂಜಿಸಲಾಗುವ ಸಾರ್ವಜನಿಕ ಕುರುಹು ಎಂದೂ, ಅವಕ್ಕೆ ಪ್ರತಿವರ್ಷ ನಡೆಯುವ ಪೂಜಾ ಸಂಪ್ರದಾಯಗಳ ವಿವರಗಳನ್ನು ಇಲ್ಲಿ ನೀಡಿದ್ದಾರೆ. 

ಈ ಆಚರಣೆ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಿಸಲಾಗುತ್ತಿದ್ದರೂ ಉದ್ದೇಶ ಮಾತ್ರ ಒಂದೇ. ಅದು ಮುಂಗಾರನ್ನು ಸ್ವಾಗತಿಸಿ, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು. ಮಲೆನಾಡಿನ ಭಾಗದಲ್ಲಿ ನಾನು ಬಾಲ್ಯದಲ್ಲಿ ಇದ್ದೆನಾದ ಕಾರಣ ಅಲ್ಲಿ ಕಂಡ ಆಚರಣೆಗಳ ಅನ್ವಯ, ಜ್ಯೇಷ್ಠಮಾಸದ ಅಮಾವಾಸ್ಯೆಗೆ ಮಣ್ಣೆತ್ತಿನ ಅಮಾವಾಸ್ಯೆಯೆಂದೇ ಹೆಸರು. ಈ ಹಬ್ಬಕ್ಕೆಂದೇ ಮನೆಗಳಲ್ಲಿ ಚಿಕ್ಕ ರಥಗಳ ಹಂದರ ಸಿದ್ಧವಿರುತ್ತಿತ್ತು, ಅವುಗಳಿಗೆ ಬಣ್ಣದ ಕಾಗದ ಹಚ್ಚಿ ಸಿಂಗಾರ ಮಾಡಲಾಗುತ್ತಿತ್ತು. ಮಣ್ಣಿನಲ್ಲಿ ಜೋಡು ಬಸವನ ಮೂರ್ತಿಗಳನ್ನು ರಚಿಸಿ, ಪೂಜಿಸಿದ ನಂತರ, ಅವುಗಳನ್ನು ಸಿಂಗರಿಸಿದ ಚಿಕ್ಕ ರಥಗಳಲ್ಲಿ ರಸ್ತೆಗಳಲ್ಲಿ ಮನೆ ಮನೆಗೆ ಕೊಂಡೊಯ್ಯುವ ಪರಿಪಾಠವಿತ್ತು. ಹೀಗೆ ಬಂದ ಬಸವಣ್ಣಗಳ ಕೋಡಿಗೆ  ಮನೆಯವರು ಚಕ್ಕುಲಿಗಳನ್ನು ಹಾಕಿ ಸತ್ಕರಿಸುತ್ತಿದ್ದರು. ಆ ಸಡಗರ, ಉತ್ಸಾಹಗಳನ್ನು ಕಂಡ ನನ್ನ ಸಮಕಾಲೀನರು ಇದನ್ನು ಖಂಡಿತಾ ಸ್ಮರಿಸುತ್ತಾರೆ. ಹಾಗೆಯೇ ಅಜ್ಜಂಪುರದ ಕಾರಹಬ್ಬವನ್ನು ಕೂಡ.
----------------------------------------------------------------------------------------------------------------------------------------

ಜಿ.ಬಿ. ಅಪ್ಪಾಜಿ (ಅಪೂರ್ವ)
apurvajp1954@gmail.com




ಕಾರ ಹಬ್ಬದ ಸಾಂಪ್ರದಾಯಿಕ ಪೂಜಾ ವಿಧಿ

ಕಾರ ಹಬ್ಬವೆನ್ನುವುದು ಅಜ್ಜಂಪುರಕ್ಕೆ ಮಾತ್ರ ಸೀಮಿತವಾದ ಸಂಪ್ರದಾಯವೇನಲ್ಲ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಹಾಗೂ ಕಡೂರು ತಾಲೂಕುಗಳಲ್ಲಿ ಮತ್ತು ಚಿಕ್ಕಮಗಳೂರು ತಾಲೂಕಿನ ಬಯಲು ಭಾಗದ ಹಳ್ಳಿಗಳಲ್ಲಿ ನಡೆಸಿಕೊಂಡು ಬಂದಿರುವ ಜಾನಪದ ಪರಂಪರೆಯ ಹಬ್ಬ. 

ಅಜ್ಜಂಪುರದಲ್ಲಿ ಈ ಹಬ್ಬವನ್ನು ಆಚರಿಸುತ್ತಿದ್ದ ಸ್ಥಳ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (ಮೊದಲಿಗೆ ಗೌರ್ನಮೆಂಟ್ ಕನ್ನಡ ಬಾಯ್ಸ್ ಸ್ಕೂಲ್ ಆಗಿತ್ತು) ಹಿಂಭಾಗ. ಇಲ್ಲಿ ಈ ಉದ್ದೇಶಕ್ಕೆಂದು ಸ್ಥಾಪಿಸಲಾದ ಎರಡು ಕರಿ ಕಲ್ಲುಗಳು ಇವೆ. ಕಳೆದ ಶತಮಾನದ ಅರವತ್ತು-ಎಪ್ಪತ್ತರ ದಶಕಗಳಲ್ಲಿ ಈ ಸ್ಥಳ ಶಾಲಾದಿನಗಳಲ್ಲಿ ಕಬಡ್ಡಿ, ಕಾಲ್ಚೆಂಡು ಇತ್ಯಾದಿ ಆಟಗಳು ಹಾಗೂ  ರಜಾದಿನಗಳಲ್ಲಿ ಚಿನ್ನಿ-ದಾಂಡು, ಸಾಲ್ ಚೆಂಡು, ಲಗೋರಿ, ಸಿಗ್ಗೋಲಿ ಇತ್ಯಾದಿ ಆಟಗಳ ಮೈದಾನವಾಗಿದ್ದಿತು.


ಮಳೆಯ ಆಶ್ರಯವನ್ನೇ ನಂಬಿರುವ ನಮ್ಮೂರಿನ ಕೃಷಿ ಪ್ರದೇಶ ವಿಸ್ತಾರವಾಗಿದೆಯೆನ್ನಬೇಕು. ಮುಂಗಾರು ಹಂಗಾಮನ್ನು ಸ್ವಾಗತಿಸುವ ಹಾಗೂ ಕೃಷಿ ಕಾರ್ಯವನ್ನು ಆರಂಭಿಸುವ ಖುಷಿ ಮಣ್ಣೆತ್ತಿನ ಅಮಾವಾಸ್ಯೆಯಿಂದ ಆರಂಭ. ಅಜ್ಜಂಪುರದ ರೈತಾಪಿ ವರ್ಗದ ಜನರು ಜ್ಯೇಷ್ಠ ಮಾಸಾಂತ್ಯದ ಅಮಾವಾಸ್ಯೆಯಂದು ಮನೆಯ ಕೊಟ್ಟಿಗೆ ಬೇಸಾಯದ ಮುಟ್ಟುಗಳಿಗೆ ಬೇವಿನ ಸೊಪ್ಪನ್ನು ಸಿಕ್ಕಿಸುವರು. ಮಾರನೆಯ ದಿನ ಅಂದರೆ ಆಷಾಢ ಮಾಸದ ಮೊದಲ ದಿನ ಸಂಜೆಯ ಹೊತ್ತಿಗೆ ಊರಿನ ಗೌಡರ ಮನೆಯಲ್ಲಿ ರೈತ ಮುಖಂಡರು ಸೇರಿ ಒಂದು ಎಡೆಕುಂಟೆಯನ್ನು ಹೊತ್ತು ಮೆರವಣಿಗೆ ಹೊರಡುವರು. 

ಮೆರವಣಿಗೆಯಲ್ಲಿ ಬುದ್ಧಿವಂತರು, ಗೌಡರು, ತಮ್ಮಟೆ ಬಾರಿಸುವವರು, ದೀವಟಿಗೆ ಹಿಡಿಯುವ ಮಡಿವಾಳರು, ತಳವಾರರು ಮತ್ತು ಊರಿನ ಇತರ ರೈತರು ಒಟ್ಟಾಗಿ ಪಾಲ್ಗೊಳ್ಳುವರು. ನೀರು ತುಂಬಿದ ಪುಟ್ಟ ಕುಡಿಕೆಯಲ್ಲಿ ಇಲ್ಲಿನ ವಾಡಿಕೆ ಬೆಳೆಗಳ ಬಿತ್ತನೆ ಬೀಜಗಳನ್ನು ಪ್ರಾತಿನಿಧಿಕವಾಗಿ ಹಾಕಿ ತರುತ್ತಾರೆ. ಉದಾ. ರಾಗಿ, ಜೋಳ, ಅವರೆ, ಕಡಲೆ, ಹುರುಳಿ, ಶೇಂಗಾ ಇತ್ಯಾದಿ. ಮೆರವಣಿಗೆ ಹೊರಟ ತಂಡವು ಈ ಕರೆಗಲ್ಲುಗಳ ಸ್ಥಳಕ್ಕೆಬರುವರು. ಕರೆಗಲ್ಲುಗಳಿಗೆ ಬೇವಿನ ತೋರಣ ಕಟ್ಟುವರು. ಕರೆಗಲ್ಲುಗಳ ಪಶ್ಚಿಮ ಭಾಗಕ್ಕೆ ಎಡೆ ಕುಂಟೆ, ಕಾಳಿನ ಕುಡಿಕೆಗಳನ್ನಿಟ್ಟು ಪೂಜಿಸುವರು. ಕರೆಗಲ್ಲುಗಳಿಗೂ ನೀರೆರದು ಪೂಜಿಸುವರು. ಹಣ್ಣಕಾಯಿಗಳ ನೈವೇದ್ಯ ಮಾಡಿ, ಕರ್ಪೂರದಾರತಿ ಬೆಳಗೆ ಪೂಜೆ ಮುಗಿಸುವರು. ಎಲ್ಲವನ್ನೂ ಗೌಡರ ಮನೆತನದವರೇ ಮಾಡುವುದು ವಾಡಿಕೆ. ಉಳಿದ ರೈತರು ಪೂಜಾಕಾರ್ಯಗಳಿಗೆ ನೆರವಾಗುವರು. ತಮ್ಮಟೆಯ ಸದ್ದು ನಿರಂತರ. ಮಡಿವಾಳರು ದೀವಟಿಗೆಯ ಸೇವೆ ಮಾಡುವರು. ಈ ಹಂತದಲ್ಲಿ ಗೌಡರು ಕುಂಟೆಯನ್ನು ಎರಡೂ ಕೈಗಳಿಂದ ಎತ್ತಿ, ನೀರು-ಬೀಜ ತುಂಬಿರುವ ಕುಡಿಕೆಯನ್ನು ಒಡೆಯುವರು. ಕುಡಿಕೆ ಒಡೆದಾಗ ನೀರು ಹರಿದು ಬರುವುದು. ನೀರಿನ ಜತೆ ಬಿತ್ತನೆ ಬೀಜಗಳೂ ನೆಲದ ಮೇಲೆ ಉರುಳಿಬರುತ್ತವೆ. ಯಾವ ಜಾತಿಯ ಬಿತ್ತನೆ ಬೀಜ ಮುಂದೆ ಬರುವುದೋ, ಆ ಬೆಳೆಯು ಸದರಿ ವರ್ಷದಲ್ಲಿ ಒಳ್ಳೆಯ ಫಸಲು ನೀಡುತ್ತದೆನ್ನುವುದು ಪ್ರತೀತಿ. ಅದನ್ನು ನೋಡಿದವರು ಈ ವರ್ಷದ ಸಮೃದ್ಧ ಬೆಳೆಯಾವುದೆಂದು ಘೋಷಿಸುತ್ತಾರೆ. 

ಈ ವರ್ಷ ನಡೆದ ಆಚರಣೆಯಲ್ಲಿ ಕಡಲೆ ಕಾಳು ಮುಂದಾಗಿ ಬಂದಿದ್ದರಿಂದ ಆ ಫಸಲು ಉತ್ತಮವೆಂದು ಘೋಷಿಸಿದರು. ನಂತರ ಕರೆಗಲ್ಲುಗಳಿಗೆ ಕಟ್ಟಿದ್ದ ಬೇವಿನ ಸೊಪ್ಪನ್ನು ನಾ ಮುಂದು, ತಾ ಮುಂದು ಎಂದು ಕಿತ್ತುಕೊಂಡು, ಅದನ್ನು ಹಿಡಿದು ಸಂಭ್ರಮಿಸುವರು. ಕೊನೆಯಲ್ಲಿ ಪ್ರಸಾದವನ್ನು ತಳವಾರರು, ತಮಟೆಯವರು, ದೀವಟಿಗೆಯವರು ಎಂದು ಆದ್ಯತೆಯ ಮೇರೆಗೆ ಕರೆದು ನೀಡಿ, ಉಳಿದುದನ್ನು ಪೂಜೆಗೆ ಬಂದ ಎಲ್ಲರಿಗೂ ನೀಡುವರು. ಕಾರು ಹಬ್ಬದ ರೈತರ ಮನೆಗಳಲ್ಲಿ ಸಿಹಿ ಅಡುಗೆ ಮಾಡುವರು. ರೈತರಲ್ಲದ ಕುಟುಂಬಗಳಲ್ಲೂ ಈ ದಿನದಂದು ಹಬ್ಬ ಆಚರಿಸುವ ಪರಿಪಾಠ ಬೆಳೆದುಬಂದಿದೆ. 

ಕಾರು ಹಬ್ಬದ ನಂತರ ಮದುವೆ, ಗೃಹಪ್ರವೇಶ ಮುಂತಾದ ಕಾರ್ಯಗಳನ್ನು ಆಯಾ ಗ್ರಾಮಗಳಲ್ಲಿ ಮಾಡುವುದಿಲ್ಲ. ನವವಿವಾಹಿತ ಅಳಿಯಂದರು ಅತ್ತೆಯ ಮನೆಗೆ ಬರುವಂತಿಲ್ಲ. ಬೀಗರ ಮನೆಯಲ್ಲಿ, ಹಾಗೂ ವರನ ಮನೆಯಲ್ಲಿ ನಡೆಯಬೇಕಾದ ಕೃಷಿ ಕಾರ್ಯಗಳಿಗೆ ತೊಂದರೆಯಾದೀತೆಂಬ ಕಾರಣಕ್ಕೆ ಈ ಸಂಪ್ರದಾಯ ಚಾಲ್ತಿಗೆ ಬಂದಿರಬೇಕು. ಒಟ್ಟಾರೆ ಕಾರು ಹಬ್ಬವು ಕೃಷಿಕರ ಹಬ್ಬ. ಕೃಷಿ ಕೆಲಸಗಳಿಗೆ ಹುರುಪು ನೀಡುವ ಹಬ್ಬ ಎಂದು ಹೇಳಬಹುದು.


* * * * * * *

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.