ಅಜ್ಜಂಪುರ - ಪಟ್ಟಣದಿಂದ ಗ್ರಾಮವಾದ ಪರಿ !



ಆತ್ಮೀಯರೇ,

ಬೆಳವಣಿಗೆಯೆನ್ನುವುದು ಯಾವಾಗಲೂ ಊರ್ಧ್ವಮುಖವಾಗಿದ್ದು, ಅವನತಿಯೆನ್ನುವುದ ಕೆಳಮುಖವೆಂದು ವಾಡಿಕೆಯಲ್ಲಿದ್ದರೆ, ಅಜ್ಜಂಪುರದ ಪುರಸಭೆಯ ಪರಿಸ್ಥಿತಿಯನ್ನು ಹೀಗೆ ವಿವೇಚಿಸಲಾಗದಂಥ ವಿಚಿತ್ರ ಸಂದರ್ಭವಿದೆ. ಇದಕ್ಕೆ ಉದಾಹರಣೆಯಾಗಿ ಈ ಸಂಚಿಕೆಯಲ್ಲಿ ಅಜ್ಜಂಪುರದ ಪುರಸಭೆಯು ಗ್ರಾಮಪಂಚಾಯಿತಿಯಾಗಿ ಪರಿವರ್ತಿತವಾದ ವಿಚಿತ್ರ ಆದರೂ ಸತ್ಯವಾದ ಸಂಗತಿಯ ಬಗ್ಗೆ ಮಿತ್ರ ಜಿ.ಬಿ. ಅಪ್ಪಾಜಿ (ಅಪೂರ್ವ) ಇವರು ಬರೆದ ಲೇಖನವಿದೆ. ಇಂಥ ಪರಿಸ್ಥಿತಿಗೆ ಬದಲಾದ ಸರಕಾರದ ನೀತಿಯೇ ಕಾರಣವೆನ್ನಬಹುದಾದರೂ, ಅದು ಪ್ರಗತಿಗೆ ಮಾರಕವೆನ್ನುವಂತಾದರೆ ಒಪ್ಪುವುದಾದರೂ ಹೇಗೆ. ಇದನ್ನು ವಿರೋಧಿಸುವ ಇಚ್ಛಾಶಕ್ತಿ, ಕ್ರಿಯಾಶಕ್ತಿಗಳು ಇನ್ನಾದರೂ ಮೂಡಿಬರಲೆನ್ನುವ ಆಶಯ ಇಲ್ಲಿದೆ.
- ಶಂಕರ ಅಜ್ಜಂಪುರ 
----------------------------------------------------------------------------------------------------------------------------------------------------------------------------------------------------------------------------------------------------



ಅಜ್ಜಂಪುರ ಪುರಸಭೆಯು ಪೌರಸಭಾ ಆಡಳಿತ ವ್ಯವಸ್ಥೆಯಿಂದ ಗ್ರಾಮ ಪಂಚಾಯಿತಿಯಾಗಿ ಮಾರ್ಪಾಟು ಹೊಂದಿದ್ದು ವಿಚಿತ್ರವೇ ಆದರೂ ವಾಸ್ತವ ಸಂಗತಿಯಾಗಿದೆ. ಇದನ್ನು ಆಡಳಿತಾತ್ಮಕ ತೊಡಕು ಎಂದು ಸುಲಭವಾಗಿ ತಳ್ಳಿಹಾಕುವಂಥದಲ್ಲ. ಏಕೆಂದರೆ ಗ್ರಾಮ ಪಂಚಾಯಿತಿ ವ್ಯವಸ್ಥೆಯೆನ್ನುವುದು, ಹೆಸರೇ ಸೂಚಿಸುವಂತೆ ಗ್ರಾಮೀಣ ಪ್ರದೇಶಗಳಿಗೆ ಮಾತ್ರ ಸರಿಹೊಂದಬಹುದುದು. ಆದರೆ ಸ್ವಾತಂತ್ರ್ಯಪೂರ್ವದಲ್ಲೇ ಪುರಸಭೆಯನ್ನು ಹೊಂದಿದ್ದ ಒಂದು ಪಟ್ಟಣವು, ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್ ಪೂರೈಕೆ, ರಸ್ತೆಗಳ ನಿರ್ವಹಣೆ, ಬಡಾವಣೆಗಳ ಯೋಜನೆ-ನಿರ್ಮಾಣ-ನಿರ್ವಹಣೆ, ಅಭಿವೃದ್ಧಿ ಕಾಮಗಾರಿ ಇತ್ಯಾದಿ ವಿಷಯಗಳಲ್ಲಿ  ಗ್ರಾಮ ಪಂಚಾಯತಿ ಆಡಳಿತ ವ್ಯವಸ್ಥೆಯನ್ನು ಅವಲಂಬಿಸಿ ಯಾವುದೇ ಮೂಲಸೌಕರ್ಯಗಳನ್ನು ಪಡೆಯಲು ಸಾಧ್ಯವಿಲ್ಲ.

ಅಜ್ಜಂಪುರವನ್ನು ಗ್ರಾಮವೆಂದು ಎಂದೂ ಪರಿಗಣಿಸಲಾಗಿರಲಿಲ್ಲ. 1918ರಷ್ಟು ಹಿಂದೆಯೇ ಮೈಸೂರು ಸರಕಾರವು ಅಜ್ಜಂಪುರ ಪಟ್ಟಣವನ್ನು ಮೈನರ್ ಮುನ್ಸಿಪಾಲಿಟಿ ಎಂದು ಆದೇಶ ಹೊರಡಿಸಿತ್ತು. (ಆದೇಶ ಸಂಖ್ಯೆ. ಎಂ.ಎಲ್. 8617-108, ತಾ.1-7-1918) ಈ ಮುನ್ಸಿಪಾಲಿಟಿಗೆ ಅಂದಿನ ಅಮಲ್ದಾರರು ಅಧ್ಯಕ್ಷರಾಗಿ, ಖಾಸಗಿ ವ್ಯಕ್ತಿಯು ಉಪಾಧ್ಯಕ್ಷರಾಗಿ, 9 ಜನ ಸದಸ್ಯರನ್ನು ಸರಕಾರವೇ ನೇಮಿಸಿತು. ಈ ನಾಮನಿರ್ದೇಶಿತ ಸದಸ್ಯರ ಮೈನರ್ ಮುನ್ಸಿಪಾಲಿಟಿಯ ವ್ಯವಸ್ಥೆಯು ಸ್ವಾತಂತ್ರ್ಯಾನಂತರ ಒಂದು ವರ್ಷಕಾಲ, ಎಂದರೆ 1949ರ ವರೆಗೂ ಇತ್ತು. ಅಂದಿನ ರಾಜ್ಯ ಸರಕಾರವು ಆದೇಶ ಸಂಖ್ಯೆ. 13474 ಎಂ.ಎಲ್.97-48-28, ತಾ. 18-5-1949ರಲ್ಲಿ ಅಜ್ಜಂಪುರದ  ಮೈನರ ಮುನ್ಸಿಪಾಲಿಟಿಯನ್ನು ಟೌನ್ ಮುನ್ಸಿಪಾಲಿಟಿಯಾಗಿ ಪರಿವರ್ತನೆ ಮಾಡಿತು. ಪಟ್ಟಣದ ಜನರು ಚುನಾವಣೆಯ ಮೂಲಕ 15 ಜನ ಸದಸ್ಯರನ್ನು ಆಯ್ಕೆ ಮಾಡುವುದು, ತದನಂತರ ಚುನಾಯಿತ ಸದಸ್ಯರು ಸೇರಿ ತಮ್ಮಲ್ಲಿಯೇ ಒಬ್ಬರನ್ನು ಅಧ್ಯಕ್ಷರನ್ನಾಗಿ ಹಾಗೂ ಇನ್ನೊಬ್ಬರನ್ನು ಉಪಾಧ್ಯಕ್ಷರಾಗಿ ಚುನಾಯಿಸಿಕೊಳ್ಳಲು ಈ ಆದೇಶದಿಂದ ಸಾಧ್ಯವಾಯಿತು. 
ಈಗ ಇರುವ ಭವ್ಯ ಪುರಸಭಾ ಭವನವನ್ನು ಕೀರ್ತಿಶೇಷ ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನಿರ್ಮಿಸಲಾಯಿತು. ಅಜ್ಜಂಪುರವು ಪ್ರಗತಿ ಹಾಗೂ ಅಭಿವೃದ್ಧಿಯಲ್ಲಿ ಎಂದಿನಿಂದಲೂ ಮುಂಚೂಣಿಯಲ್ಲಿ ಇದ್ದುದರಿಂದ, ರಾಜ್ಯ ಸರಕಾರಗಳು ನಲವತ್ತರ ದಶಕದಲ್ಲೇ ವಿದ್ಯುತ್ ಪೂರೈಕೆ, ಅರುವತ್ತರ ದಶಕದಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯಂಥ ಮೂಲಭೂತ ಸೌಲಭ್ಯಗಳನ್ನು ಒದಗಿಸಿದವು.

1967ರಲ್ಲಿ ಅಜ್ಜಂಪುರ ಟೌನ್ ಮುನ್ಸಿಪಾಲಿಟಿಯು ಐವತ್ತನೇ ವರ್ಷಕ್ಕೆ ಕಾಲಿಟ್ಟ ನೆನಪಿಗಾಗಿ ಸುವರ್ಣ ಮಹೋತ್ಸವವನ್ನು ಆಚರಿಸಿತು. ಇದು ಸ್ಮರಣೀಯವಾಗಿರಲೆಂಬ ಉದ್ದೇಶದಿಂದ ಇದನ್ನು ಮಲೆನಾಡು ಪುರಸಭೆಗಳ ಸಮ್ಮೇಳನವೆಂದು ಆಚರಿಸಲಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ 33 ಪುರಸಭೆಗಳು ಪಾಲ್ಗೊಳ್ಳುವಂತಾದುದು ವಿಶೇಷವೇ ಸರಿ. ಇದರ ಅಧ್ಯಕ್ಷತೆಯನ್ನು ಅಂದಿನ ರಾಜ್ಯ ಪೌರಾಡಳಿತ ಸಚಿವರಾದ ಆರ್.ಎಂ. ಪಾಟೀಲರು ವಹಿಸಿದ್ದರು. 

ವಿಶೇಷವೆಂದರೆ, ಮುಂದೆ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಆರ್. ಗುಂಡೂರಾವ್, ಈ ಸಮಯದಲ್ಲಿ ಕುಶಾಲನಗರದ ಪುರಸಭಾಧ್ಯಕ್ಷರಾಗಿದ್ದರು ಹಾಗೂ ಅವರು ಅತ್ಯುತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮುಂದೆ 1983ರಲ್ಲಿ ಅವರು ಕರ್ನಾಟಕದ ಮುಖ್ಯಮಂತ್ರಿಯಾದಾಗ ಅಜ್ಜಂಪುರವನ್ನು ಮರೆಯದೇ ಇರಲು,1967ರಲ್ಲಿ ನಡೆದ ಸುವರ್ಣಮಹೋತ್ಸವದ ನೇತೃತ್ವವನ್ನು ವಹಿಸಿದ್ದ ಅಂದಿನ ಪುರಸಭಾಧ್ಯಕ್ಷರಾದ ಬಿ.ಎಂ. ಏಕೋರಾಮಸ್ವಾಮಿಯವರ ಮೇಲೆ ತಳೆದ ವಿಶ್ವಾಸವೇ ಇದಕ್ಕೆ ಕಾರಣವೆನ್ನಬೇಕು. ಇದರ ಫಲವಾಗಿ ಅಜ್ಜಂಪುರಕ್ಕೆ ಕುಡಿಯುವ ನೀರಿನ ಯೋಜನೆಯ ಎರಡನೇ ಹಂತಕ್ಕೆ ಮಂಜೂರಾತಿ ದೊರೆಯಿತು. 

ಇಷ್ಟೆಲ್ಲ ಐತಿಹಾಸಿಕ ಹಿನ್ನೆಲೆಯುಳ್ಳ ಅಜ್ಜಂಪುರವು ಏಕಾಏಕಿ ಗ್ರಾಮ ಪಂಚಾಯಿತಿಯ ಮಟ್ಟಕ್ಕೆ ಕುಸಿಯಲು,  ಎಂಭತ್ತರ ದಶಕದಲ್ಲಿ  ಇದು ಪ್ರಥಮ ದರ್ಜೆ ಮಂಡಲ ಪಂಚಾಯಿತಿಯಾಗಿ ಪರಿವರ್ತಿತವಾದದ್ದೇ ಇದಕ್ಕೆ ಕಾರಣ. ಜನಸಂಖ್ಯೆ ಅತಿ ಕಡಿಮೆಯಿರುವ ಶೃಂಗೇರಿ, ಹಾಸನದ ಆಲೂರಿನಂಥ ಚಿಕ್ಕ ಸ್ಥಳಗಳು ತಾಲೂಕು ಕೇಂದ್ರಗಳಾಗಿ ಪರಿವರ್ತಿತವಾದರೆ, ಎಲ್ಲ ಅರ್ಹತೆಗಳನ್ನು ಹೊಂದಿದ್ದ ಅಜ್ಜಂಪುರ ಗ್ರಾಮ ಪಂಚಾಯಿತಿಯಾಗಬೇಕಾಯಿತು. ಸಾರ್ವಜನಿಕ ಆಡಳಿತ ವ್ಯವಸ್ಥೆಯ ಪುನರ್ ನವೀಕರಣದ ಸಂದರ್ಭದಲ್ಲಿ ಇಂಥದೆಲ್ಲ ಸಂಭವಿಸುವುದು ಸಾಮಾನ್ಯವೆಂದು ಸಮಾಧಾನ ಪಟ್ಟುಕೊಳ್ಳಲು ಸೂಕ್ತ ಕಾರಣಗಳು ಅಜ್ಜಂಪುರದ ಮಟ್ಟಿಗಂತೂ ಎಂದೂ ಇರಲಿಲ್ಲ, ಇಂದೂ ಇಲ್ಲ ಕೂಡ. ಪಟ್ಟಣ ಪಂಚಾಯಿತಿಯ ವ್ಯವಸ್ಥೆಯು ದೇಶದಲ್ಲಿ ಮೊದಲ ಬಾರಿಗೆ ತಮಿಳುನಾಡಿನಲ್ಲಿ ಜಾರಿಗೊಂಡಿತು. ಈ ಸಂದರ್ಭದಲ್ಲಿ ಜನಸಂಖ್ಯೆಯನ್ನೂ, ಹಿಂದಿನ ವ್ಯವಸ್ಥೆಯನ್ನೂ ಪರಿಗಣಿಸದೇ, ತಾಲೂಕು ಕೇಂದ್ರಗಳು, ಪ್ರವಾಸಿ ಕೇಂದ್ರಗಳು, ಕೈಗಾರಿಕಾ ಮತ್ತು ವಾಣಿಜ್ಯ ಕೇಂದ್ರಗಳನ್ನು ಪಟ್ಟಣ ಪಂಚಾಯಿತಿಗಳೆಂದು ಪರಿಗಣಿಸುವ ಹೊಸ ನೀತಿಯನ್ನು ಅನುಸರಿಸಲಾಯಿತು. ಹೀಗಾಗಿ, ನಗರಗಳಿಗೆ ಸಲ್ಲುವ ಎಲ್ಲ  ಮೂಲಸೌಲಭ್ಯಗಳನ್ನು ಅಂಥ ಸ್ಥಳಗಳಿಗೆ ನೀಡುವುದು ಅನಿವಾರ್ಯವಾಗಿ, ಅಜ್ಜಂಪುರಕ್ಕೆ ಹಿಂದಿದ್ದ ಹಿರಿಮೆಯನ್ನು ಕಡೆಗಣಿಸಿದಂತಾಯಿತು. 

ಹಾಗೆ ನೋಡಿದರೆ ಈಗಿರುವ ವ್ಯವಸ್ಥೆಯಂತೆ ಕೂಡ ಪಟ್ಟಣ ಪಂಚಾಯಿತಿಯಾಗಲು ಬೇಕಿರುವ ಎಲ್ಲ ಅರ್ಹತೆಗಳನ್ನು ಅಜ್ಜಂಪುರ ಹೊಂದಿದೆ. ಹೇಗೆಂದರೆ  :
          *  ಇಲ್ಲಿನ ಜನಸಂಖ್ಯೆ ಈಗ 16,000ಕ್ಕೂ ಹೆಚ್ಚಿದೆ. 

         *   ಇಲ್ಲಿ ಸರಕಾರೀ ಪ್ರಥಮದರ್ಜೆ ಕಾಲೇಜು, ಜೂನಿಯರ್ ಕಾಲೇಜು, 4     ಪ್ರೌಢಶಾಲೆಗಳು, 8 ಪ್ರಾಥಮಿಕ ಶಾಲೆಗಳಿವೆ.

          * ಉನ್ನತೀಕರಣಗೊಂಡ ಸರಕಾರೀ ಆಸ್ಪತ್ರೆಯಿದೆ.

          * ಉನ್ನತೀಕರಣಗೊಂಡ ಪಶುವೈದ್ಯಶಾಲೆಯಿದೆ.

        * ಮೂರು ರಾಷ್ಟ್ರೀಕೃತ ಬ್ಯಾಂಕ್ ಗಳು, ಆರು ಇತರ ವಾಣಿಜ್ಯ ಬ್ಯಾಂಕ್          ಗಳು ಕಾರ್ಯ ನಿರ್ವಹಿಸುತ್ತಿವೆ. 

         * ವಾಣಿಜ್ಯಕವಾಗಿ ಅಜ್ಜಂಪುರವು ಹಿಂದಿನಿಂದಲೂ ಹೆಸರು ಮಾಡಿದೆ.        ತತ್ಪರಿಣಾಮವಾಗಿಯೇ ಯಾವುದೇ ನಗರಕ್ಕೆ ಕಡಿಮೆಯಿಲ್ಲದಂಥ ವ್ಯಾಪಾರ ವಹಿವಾಟುಗಳು, ಮಂಗಳವಾರದ ಸಾಮಾನ್ಯ ಸಂತೆ ನಡೆಯುತ್ತದೆ. ಅಜ್ಜಂಪುರದ ಭಾರೀ ದನಗಳ ಜಾತ್ರೆಗೆ ಕನಿಷ್ಟ ಕಾಲು ಶತಮಾನದ ಇತಿಹಾಸವೇ ಇದೆ. ಈ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ ಪ್ರಸ್ತಾಪಿಸಲಾಗುತ್ತದೆ.  ರಾಸುಗಳ ವ್ಯಾಪಾರ ವಹಿವಾಟುಗಳು ಹೆಚ್ಚಿದ ಕಾರಣವಾಗಿ ಈ ವಾರ್ಷಿಕ ಜಾತ್ರೆಯನ್ನು ವಾರದ ಸಂತೆಯಾಗಿ ಪರಿವರ್ತಿಸಲಾಗಿದೆ. ಉನ್ನತೀಕರಿಸಲಾದ ಪಶುವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯಿದೆ.


 - ಐತಿಹಾಸಿಕವಾಗಿಯೂ ಅಜ್ಜಂಪುರದ ಹಿರಿಮೆ ಕಡಿಮೆಯದಲ್ಲ. ಇಲ್ಲಿರುವ ರಾಜ್ಯ ಮಟ್ಟದ ಅಮೃತ ಮಹಲ್ ಪಶು ಸಂವರ್ಧನಾ ಕೇಂದ್ರವನ್ನು ಸಿ. ಇ. ೧೫೧೨ರಲ್ಲಿ  ಸ್ಥಾಪಿಸಲಾಯಿತು. 

ವಾಸ್ತವವಾಗಿ ಪಟ್ಟಣವೇ ಆಗಿ ರೂಪುಗೊಂಡಿರುವ ಅಜ್ಜಂಪುರಕ್ಕೆ ಗ್ರಾಮಪಂಚಾಯಿತಿಯ ಆಡಳಿತ ಶೈಲಿ ಯಾವ ರೀತಿಯಲ್ಲೂ ಹೊಂದಿಕೆಯಾಗದೇ, ನಿಜವಾಗಿ ದೊರಕಬೇಕಿರುವ ಸೌಲಭ್ಯಗಳಿಂದ ವಂಚಿತವಾಗಿರುವುದು ದುರ್ದೈವವೆನ್ನಬೇಕು. ಪರಸ್ಥಳಗಳಿಂದ ಬಂದ ಜನರಿಗೆ ಸೂಕ್ತ ಸೌಕರ್ಯಗಳಿಲ್ಲ. ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಬಡಾವಣೆಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳಿಲ್ಲದಂತಾಗಿರುವುದು, ಕುಡಿಯುವ ನೀರು, ವಿದ್ಯುದೀಕರಣ, ಸಾರ್ವಜನಿಕ ಉದ್ಯಾನ, ಶೌಚಾಲಯ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ಮುಂತಾದ ಅಗತ್ಯಗಳನ್ನು ಗ್ರಾಮಪಂಚಾಯಿತಿ ಆಡಳಿತವನ್ನಿಟ್ಟುಕೊಂಡು ನಿರ್ವಹಿಸುವುದು ಸಾಧ್ಯವಾಗದ ಕೆಲಸ. ಏಕೆಂದರೆ ಗ್ರಾಮಪಂಚಾಯಿತಿಗಳು ತಮ್ಮ ಮಿತಿಯಲ್ಲೇ ಕೆಲಸಮಾಡಬೇಕಾಗುತ್ತದೆ. 

ಅಜ್ಜಂಪುರವನ್ನು ಪಟ್ಟಣ ಪಂಚಾಯಿತಿಯನ್ನಾಗಿ ಪರಿವರ್ತಿಸಲು ತಾಂತ್ರಿಕ ಕಾರಣಗಳ ನೆಪ ಹೇಳದೇ, ಅದಕ್ಕೆ ಇರುವ ನೈಜ ಅರ್ಹತೆಯನ್ನು ಮಾತ್ರ ಗುರುತಿಸಿ, ಮೇಲ್ದರ್ಜೆಗೆ ಏರಿಸಲು ಸರಕಾರ ಗಮನ ನೀಡುವುದು ಅತ್ಯವಶ್ಯ. ಅದೇ ರೀತಿ ಊರಿನ ಇತಿಹಾಸವನ್ನು ಅರಿತು, ಅದಕ್ಕೆ ಸಲ್ಲಬೇಕಿರುವ ಹಂತವನ್ನು ದೊರಕಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಲು, ಪಕ್ಷಭೇದವಿಲ್ಲದೆ ಬೆಂಬಲ ಸೂಚಿಸಲೂ ಇದು ಸಕಾಲವೇ ಸರಿ. ಹಾಗೆ ಮಾಡುವುದರಿಂದ ಅಜ್ಜಂಪುರದ ಗತವೈಭವದ ಇತಿಹಾಸಕ್ಕೂ, ಪಟ್ಟಣದ ಪುರಜನರಿಗೂ ನ್ಯಾಯ ಒದಗಿಸಿದಂತಾಗುತ್ತದೆ.

ಜಿ.ಬಿ. ಅಪ್ಪಾಜಿ (ಅಪೂರ್ವ)
apurvajp1954@gmail.com


* * * * * * *

ಕಾಮೆಂಟ್‌ಗಳು

  1. ೧೦೦% ಸತ್ಯ ಆರಂಭದಲ್ಲೇ ಪುರಸಭೆ ಯಿಂದ ಮಂಡಲ ಪಂಚಾಯತ್ ಮಾಡುವಾಗಲೇ ಸ್ವಲ್ಪಮಟ್ಟಿಗೆ ಪ್ರಯತ್ನ ಹಾಕಿದ್ದರೆ ಈಗಾಗುತ್ತಿರಲಿಲ್ಲ ಈಗ ೧೦೦ ವರ್ಷ ತಂಬಿದ್ದು ಶತಮಾನೊತ್ಸವಕ್ಕಾದರು ಅಂಜ್ಜಂಪುರ ಕನಿಷ್ಟ ಪಟ್ಟಣ ಪಂಚಾಯತ್ ಆಗಲಿ. ಅಮೃತ ಮಹಲ್ ಉಳಿವಿಗಾಗಿ ಹೋರಾಡುತ್ತಿರುವ ಎಲ್ಲರಿಗೂ ಅಭಿನಂದನೆಗಳು ನಮ್ಮ ಊರು ಬೆಳಗಲಿ ಎನ್ನುವುದು ನನ್ನ ಆಸೆ

    ಪ್ರತ್ಯುತ್ತರಅಳಿಸಿ
  2. ೧೦೦% ಸತ್ಯ ಆರಂಭದಲ್ಲೇ ಪುರಸಭೆ ಯಿಂದ ಮಂಡಲ ಪಂಚಾಯತ್ ಮಾಡುವಾಗಲೇ ಸ್ವಲ್ಪಮಟ್ಟಿಗೆ ಪ್ರಯತ್ನ ಹಾಕಿದ್ದರೆ ಈಗಾಗುತ್ತಿರಲಿಲ್ಲ ಈಗ ೧೦೦ ವರ್ಷ ತಂಬಿದ್ದು ಶತಮಾನೊತ್ಸವಕ್ಕಾದರು ಅಂಜ್ಜಂಪುರ ಕನಿಷ್ಟ ಪಟ್ಟಣ ಪಂಚಾಯತ್ ಆಗಲಿ. ಅಮೃತ ಮಹಲ್ ಉಳಿವಿಗಾಗಿ ಹೋರಾಡುತ್ತಿರುವ ಎಲ್ಲರಿಗೂ ಅಭಿನಂದನೆಗಳು ನಮ್ಮ ಊರು ಬೆಳಗಲಿ ಎನ್ನುವುದು ನನ್ನ ಆಸೆ

    ಪ್ರತ್ಯುತ್ತರಅಳಿಸಿ
  3. ಆರು ವರ್ಷಕ್ಕೆ ಈ ಬಾರಿಯೇ ಇಷ್ಟೊಂದು ಪ್ರತಿಕ್ರಿಯೆಗಳು ಮೂಡಿ ಬಂದಿರುವುದು ! ತುಂಬ ಸಂತೋಷದ ಸಂಗತಿ. ಮಾಹಿತಿಗಳು ಜನರಿಗೆ ತಲುಪಿ ಅವರಿಂದ ಪ್ರತಿಕ್ರಿಯೆ ದೊರೆಯುವಂತಾದರೆ ಕೆಲಸಮಾಡಲು ಇನ್ನಷ್ಟು ಉತ್ಸಾಹ ದೊರೆಯುತ್ತದೆ. ವಂದನೆಗಳು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ