ಆ ಪರಿಮಳಕ್ಕೆ ಮರುಳಾಗದವರುಂಟೇ ? !

ನನಗೆ ಚೆನ್ನಾಗಿ ನೆನಪಿದೆ. ಅಜ್ಜಂಪುರದ ರೇಲ್ವೇ ಸ್ಟೇಷನ್ ನ ಎದುರಿಗಿರುವ ಶ್ರೀ ಶೆಟ್ಟರ ಸಿದ್ಧಪ್ಪನವರ ಮನೆಯ ಎದುರು ಬಂಗಾರ ಬಣ್ಣದ ಕೊತ್ತಂಬರಿಯ ರಾಶಿ ಬಿದ್ದಿರುತ್ತಿತ್ತು. ಅಲ್ಲಿ ಹಾದುಹೋಗುವಾಗ ಅದರ ಪರಿಮಳ ಹರಡಿರುತ್ತಿತ್ತು. ಸಮೃದ್ಧಿಯೆಂಬುದು ಮೈವೆತ್ತಿದ್ದಂಥ ದಿನಗಳವು. ಅಜ್ಜಂಪುರದ ಕೃಷಿ ಪದ್ಧತಿಯು ಕಾಲದಿಂದ ಕಾಲಕ್ಕೆ ಬದಲಾದ ಪರಿಯನ್ನು, ಅದರೊಂದಿಗೆ ತನ್ನ ಸ್ವಂತಿಕೆಯನ್ನು ಕಾಯ್ದಿಟ್ಟುಕೊಂಡಿರುವ ಸಂಗತಿಯನ್ನು ಅಪ್ಪಾಜಿ (ಅಪೂರ್ವ) ಇಲ್ಲಿ ದಾಖಲಿಸಿದ್ದಾರೆ. ಅವರ ಸಕ್ರಿಯ ಭಾಗವಹಿಸುವಿಕೆಯಿಂದ ಬ್ಲಾಗ್ ಗೆ ಅಪಾರ ಬೆಂಬಲ ದೊರಕಿದೆ. ಇದು ಹೀಗೇ ಮುಂದುವರೆಯಲೆಂದು ಆಶಿಸುತ್ತೇನೆ.

ಇಲ್ಲಿಯೇ ಇನ್ನೊಂದು ಮಾತು. ನಾನು ಪ್ರಕಟಪಡಿಸಿರುವ ನನ್ನ ಶಾಲೆಯ ಕುರಿತಾದ ಜಾಲಪುಟ ಎಸ್.ಎಸ್.ಟಿ.ಬಿ. ಹೈಸ್ಕೂಲ್ ವಾರದಿಂದ ವಾರಕ್ಕೆ ಮೆಚ್ಚುಗೆ ಗಳಿಸುತ್ತಿದೆ. ಇತ್ತೀಚಿನ ಬೆಳವಣಿಗೆಯೆಂದರೆ, ಈ ಶಾಲೆಗೆ ಸೇರಿದ ಹಲವು ವಿದ್ಯಾರ್ಥಿಗಳು ರಾಜ್ಯ, ದೇಶ, ಅಂತರರಾಷ್ಟ್ರೀಯ ಸ್ಥಳಗಳನ್ನು ತಲುಪಿದ್ದಾರೆ. ಅವರಿಂದ ಪ್ರತಿವಾರ ಮೆಚ್ಚುಗೆಯ ಪ್ರತಿಕ್ರಿಯೆಗಳು ಬರುತ್ತಿವೆ. ಅವರೆಲ್ಲರಿಗೆ ನನ್ನ ಮನವಿಯೆಂದರೆ, ಈ ಬ್ಲಾಗ್ ಕೂಡ ಅಜ್ಜಂಪುರಕ್ಕೆ ಸಂಬಂಧಿಸಿದ್ದಾಗಿರುವುದರಿಂದ, ನಿಮ್ಮ ನೆನಪುಗಳನ್ನು ಇಲ್ಲಿ ಚಿತ್ರಸಹಿತ ದಾಖಲಿಸಲು ಕೋರುತ್ತೇನೆ.- ಶಂಕರ ಅಜ್ಜಂಪುರಹಿಂಗಾರು ಕಡಲೆ ಬೆಳೆರಾತ್ರಿ 7-8ರ ಸಮಯ. ಮಾಗಿಯ ಕಾಲ. ನಮ್ಮೂರಿನ ಚೌಕದಲ್ಲಿ (ಈಗಿನ ನೆಹರೂ ಸರ್ಕಲ್) ಯಾವುದೋ ಸಣ್ಣ ಗಿಡಗಳ ರಾಶಿಯನ್ನು ದಪ್ಪಗೆ ನೆಲದ ಮೇಲೆ ಹರಡಿದ್ದರು. ಬಾಲ್ಯ ಕಾಲದ ಹುಡುಗರ ಕೇಕೆ, ಕೂಗಾಟಗಳು ಚೌಕದ ಮೌನವನ್ನು ಮುರಿದು ಒಂದು ಬಗೆಯ ಲವಲವಿಕೆಯನ್ನು ತಂದಿದ್ದವು. ನನಗಾಗ ಏಳೋ-ಎಂಟೋ ವರುಷಗಳಿರಬೇಕು. ಕೇಕೆ ಕೂಗಾಟ ಕೇಳಿ ಹರಡಿದ್ದ ಗಿಡಗಳ ರಾಶಿಯ ಹತ್ತಿರ ಹೋಗಿ ನೋಡುತ್ತಿದ್ದೆ. ಹುಡುಗರು ಓಡೋಡಿ ಬಂದು ಆ ಗಿಡಗಳ ರಾಶಿಯ ಮೇಲೆ ತಲೆಕೆಳಗಾಗಿ ದೊಪ್ಪನೆ ಬಿದ್ದು ಪಲ್ಟಿ ಹೊಡೆಯುತ್ತಿದ್ದರು. ದೊಡ್ಡವರು ನಿಂತು “ಹೊಡೀರೋ ಪಲ್ಟಿ, ಹಾಕ್ರೋ ಲಾಗ” ಎಂದು ಪ್ರೋತ್ಸಾಹಿಸುತ್ತಿದ್ದರು. ಕಪ್ಪು ಮಣ್ಣಿನ ವಾಸನೆ ಮಿಶ್ರಿತ ಆ ಗಿಡಗಳ ಕಂಪು, ಪರಿಮಳವನ್ನು ಆಸ್ವಾದಿಸುತ್ತಿದ್ದೆ. ಹುಡುಗರ ಕುಣಿದಾಟ, ಗಿಡಗಳ ಪರಿಮಳವನ್ನು ಗಾಢವಾಗಿ ಅನುಭವಿಸುತ್ತ ತದೇಕಚಿತ್ತನಾಗಿ ನಿಂತಿದ್ದೆ. ಯಾರೋ ಒಬ್ಬ ಹುಡುಗ ನನ್ನನ್ನು ಆ ಗಿಡಗಳ ರಾಶಿಗೆ ಜೋರಾಗಿ ತಳ್ಳಿದ. ಕ್ಷಣಾರ್ಧದಲ್ಲಿ ಗಿಡಗಳ ರಾಶಿಯಲ್ಲಿ ಬಿದ್ದು, ಹುಡುಗರೊಡನೆ ಒಂದಾಗಿ ಹೋಗಿದ್ದೆ.

ನಾನೂ ಅವರಂತೆ ಪಲ್ಟಿ ಹೊಡೆಯಲು ಆರಂಭಿಸಿದೆ. ಬೇರೆ ಬೇರೆ ವಿನ್ಯಾಸಗಳಲ್ಲಿ ಕುಣಿಯುತ್ತ, ಜಿಗಿಯುತ್ತ, ಹಾರುತ್ತಾ ಉರುಳಾಡುತ್ತಿದ್ದ ಹುಡುಗರನ್ನು ನಾನೂ ಅನುಕರಿಸಿದೆ. ಆ ಗಿಡಗಳು ಹಿತವಾಗಿ ಮೆದುವಾಗಿದ್ದವು. ಎಲ್ಲೇ ನೆಗೆದಾಡಿದರೂ ಪೆಟ್ಟಾಗುತ್ತಿರಲಿಲ್ಲ. ಇದೇನು ಗಿಡ ಎಂದು ಒಬ್ಬ ಬಲಿತ ಹುಡುಗನನ್ನು ಕೇಳಿದೆ. ಗಿಡ ಅಲ್ಲ ಕಣೋ ಮಂಗಾ, ಕೊತ್ತಂಬರಿ ಕಡ್ಡಿ ಎಂದ ಅವನು. ಮತ್ತೆ ಯಾಕೆ ನಮ್ಮನ್ನೆಲ್ಲ ಇಲ್ಲಿ ಪಲ್ಟಿ ಹೊಡೆಯೋಕೆ ಬಿಟ್ಟಿದ್ದಾರೆ ಅಣ್ಣಾ ಎಂದು ಕೇಳಿದೆ. ಕೊತ್ತಂಬರೀ ಕಡ್ಡೀಲಿರೋ ಕಾಳು ಉದರಿಸೋಕೆ ಹಿಂಗೆ ಆಡಾಕೆ ಬಿಟ್ಟಿದ್ದಾರೆ ಎಂದು ಅವನು ಪಲ್ಟಿ ಹೊಡೆಯಲು ಸುರುಮಾಡಿದ. ಇದೇ ರೀತಿ ಕಿರಾಳಮ್ಮನ ಗುಡಿಯ ಸರ್ಕಲ್, ಸಿದ್ಧರಾಮೇಶ್ವರ ಸರ್ಕಲ್ ಗಳಲ್ಲಿ ಸಹ ಕೊತ್ತಂಬರಿ ಕಡ್ಡಿ  ರಾಶಿ ಹರಡಿರುತ್ತಾರೆ ಎಂದು ಮತ್ತೊಬ್ಬನಿಂದ ತಿಳಿಯಿತು. ಕೊತ್ತಂಬರಿ ಸುಗ್ಗಿಯ ಕಾಲದಲ್ಲಿ ಹಾಗೆ ಆಡುವುದು ನಮ್ಮ ಬಾಲ್ಯಕಾಲದ ಅವಿಭಾಜ್ಯ ಅಂಗವಾಗಿತ್ತು. ಕಳೆದ ಶತಮಾನದ ಅರವತ್ತರ ದಶಕದಲ್ಲಿ ಇದೆಲ್ಲ ಸಾಮಾನ್ಯ ಚಟುವಟಿಕೆಯಾಗಿತ್ತು.


ಈರುಳ್ಳಿಯನ್ನು ಗಾತ್ರಕ್ಕನುಗುಣವಾಗಿ ಬೇರ್ಪಡಿಸುತ್ತಿರುವುದು
ಬೆಂಗಳೂರು ಪೇಟೆಯಲ್ಲಿ ಕೊತ್ತಂಬರಿಗೆ ಅಜ್ಜಂಪುರ ಫೇಮಸ್ಸು: ಅಂತ ಅಜ್ಜಂಪುರದ ಪ್ರಾತಃಸ್ಮರಣೀಯರಲ್ಲಿ ಓರ್ವರಾದ ಎಸ್. ಸುಬ್ರಹ್ಮಣ್ಯ ಶೆಟ್ಟರಿಂದ ಕತೆಯಂತೆ ಕೇಳಿದ ನೆನಪು. ಅಜ್ಜಂಪುರದ ಧನಿಯಾ ಎಂದು ಕೇಳಿ ಕೊಳ್ಳುತ್ತಾರೆ ಅಷ್ಟು ಫೇಮಸ್ಸು ಎಂದಿದ್ದರು. ನಮ್ಮೂರಿನಲ್ಲಿ ಆಗ ಮುಂಗಾರಿನಲ್ಲಿ ಜೋಳ, ಶೇಂಗಾ, ಕೊತ್ತಂಬರಿ, ಮೆಣಸಿನಕಾಯಿ ಮತ್ತು ರಾಗಿ ಈ ಬೆಳೆಗಳನ್ನು ವಾಡಿಕೆಯಂತೆ ಬೆಳೆಯುತ್ತಿದ್ದರು. ಹಿಂಗಾರಿನಲ್ಲಿ ಕಡಲೆ, ಜೋಳ, ಕೊತ್ತಂಬರಿಗಳ ಜತೆಗೆ ಕುಸುಮೆ ಮತ್ತು ಹರಳುಗಳ ಕೃಷಿಯೂ ನಡೆಯುತ್ತಿತ್ತು.

ಎಪ್ಪತ್ತರ ದಶಕದಲ್ಲಿ ಈರುಳ್ಳಿ ಬೆಳೆಯ ಕೃಷಿ ಶುರುವಾಯಿತು. ಅಜ್ಜಂಪುರದ ಧನಿಯಾ ಹೆಸರು ಮಾಡಿದ್ದಂತೆ ಮೆಣಸಿನಕಾಯಿ, ಈರುಳ್ಳಿ ಬೆಳೆಗಳಿಂದಾಗಿ ನಮ್ಮೂರಿನ ಮಾಲುಗಳಿಗೆ ಬೇಡಿಕೆ ಮತ್ತು ಹೆಸರುಗಳು ಬಂದವು. ಮನೆಗಳ ತಾರಸಿ, ಹಾರುಗಳ ಮೇಲೆ ಖಾಲಿ ಇರುವ ಗ್ರಾಮ ಠಾಣಗಳಲ್ಲಿ, ಮೈದಾನಗಳಲ್ಲಿ, ಕೆಂಪು ಮೆಣಸಿನಕಾಯಿಗಳು ಎದ್ದುಕಾಣುತ್ತಿದ್ದವು. ಅಜ್ಜಂಪುರದಿಂದ ತರೀಕೆರೆಗೆ ಹೋಗುವ ರಸ್ತೆಯ ಇಕ್ಕೆಲಗಳ ಖಾಲಿಜಾಗದಲ್ಲಿ ಕೆಂಪು ಬಣ್ಣವನ್ನು ಹಾಸಿ ಹೊದಿಸಿದ ಹಾಗೆ ಕಾಣುತ್ತಿತ್ತು.

ಈರುಳ್ಳಿ ಕಟಾವಿಗೆ ಬಂದಿರುವ ಕೃಷಿಕಾರ್ಮಿಕರು
ನಮ್ಮೂರಿನ ಮೆಣಸಿನಕಾಯಿಯ ಜನಪ್ರಿಯತೆಯ ಬಗ್ಗೆ ನಾನೇ ಕೇಳಿ ತಿಳಿದುಕೊಳ್ಳುವಂತಾದ ಪ್ರಸಂಗ ವಿಚಿತ್ರವಾಗಿದೆ. ಅಂದು ಸೋಮವಾರ ರಾತ್ರಿ ಬೆಂಗಳೂರು ಮೈಲ್ ಗೆ ಮಿತ್ರರನ್ನು ಕಳಿಸಲು ಹೋಗಿದ್ದೆ. ಅವರನ್ನು ರೈಲಿಗೆ ಹತ್ತಿಸಿ ಹಿಂತಿರುಗುತ್ತಿದ್ದೆ. ಉತ್ತರ ಕರ್ನಾಟಕದ ಕನ್ನಡ ಶೈಲಿಯಲ್ಲಿ ಮಾತನಾಡುತ್ತಿದ್ದ ಐದಾರು ಮಂದಿ ನನ್ನ ಜತೆಯಲ್ಲೇ ಊರಿನ ಕಡೆಗೆ ನಡೆದು ಬಂದರು. ನಾನು ಅವರನ್ನು ಯಾವ ಊರು, ಬಂದ ಉದ್ದೇಶ ಇತ್ಯಾದಿ ವಿಚಾರಿಸಿದೆ. ಮಂಗಳವಾರದ ಸಂತೀಗೆ ಬಂದೀವ್ರಿ, ಮೆಣಸಿನಕಾಯಿ ಖರೀದಿ ಮಾಡೋದಿತ್ತು ಎಂದರು. ಅಲ್ಲಾ ನಿಮ್ಮ ಬ್ಯಾಡಗಿ ಮೆಣಸಿನಕಾಯಿಗೆ ಹೆಸರುವಾಸಿ, ಅಂಥದರಲ್ಲಿ ಇಲ್ಲಿಂದ ಕೊಂಡು ಒಯ್ಯುತ್ತೀರೇನು?” ಎಂದೆ. ಹೌದರಿ, ಅದೇ ಬ್ಯಾಡಗೀಲಿ ನಿಮ್ಮಲ್ಲಿ ಖರೀದಿಸಿದ ಮೆಣಸಿನಕಾಯಿ ಅಲ್ಲಿ ಮಾರ್ತೀವ್ರಿ, ಬೇರೆ ಬೇರೆ ರಾಜ್ಯದೋರು ಅಲ್ಲಿಗೆ ಮೆಣಸಿನಕಾಯಿ ಸಲುವಾಗಿ ಬರ್ತಾರ್ರಿ. ಈ ಮಾಲು ತಗೋಳೋರು ರಗಡು ಮಂದಿ ಅದಾರ್ರೀ ಎಂದರು. ನನಗೆ ಖುಷಿಯಾಯಿತು. ಹೀಗೆ ಹಿಂದೆ ಬೆಂಗಳೂರಿನಲ್ಲಿ ಧನಿಯಾ, ಬ್ಯಾಡಗಿಯಲ್ಲಿ ಮೆಣಸಿನಕಾಯಿ, ಇದೀಗ ಬೆಂಗಳೂರು ಮಾರುಕಟ್ಟೆಯಲ್ಲಿ ಅಜ್ಜಂಪುರದ ಈರುಳ್ಳಿ ಪ್ರಸಿದ್ಧಿಯಾಗಿರುವುದೂ ಸಂತೋಷದ ಸಂಗತಿ. ಅದೇ ಹೊತ್ತಿಗೆ ನಮ್ಮ ರೈತರ ಪರಿಶ್ರಮ ಮತ್ತು ಸಾಮಯಿಕವಾಗಿ ಬೆಳೆ ಪದ್ಧತಿಯನ್ನು ಬದಲಾಯಿಸಿಕೊಂಡು ಲಾಭಪಡೆಯುವುದರ ಜತೆಗೆ, ಊರಿನ ಹೆಸರನ್ನೂ ಪ್ರಸಿದ್ಧಿಪಡಿಸಿರುವುದು ಕೂಡ ಇನ್ನಷ್ಟು ಸಂತಸದ ಸಂಗತಿಯೇ ಸರಿ.
ಜಿ.ಬಿ. ಅಪ್ಪಾಜಿ (ಅಪೂರ್ವ)

    apurvajp1954@gmail.com


* * * * * * *ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

87. ಬಂಗಾರದ ಭರವಸೆ ಹುಟ್ಟಿಸುವ ಹಣ್ಣೆ ಗುಡ್ಡ

82. "ಬಾರ್ನ್ ಹೆಡ್ ಮಾಸ್ಟರ್" ಅಜ್ಜಂಪುರ ವೆಂಕಟೇಶಮೂರ್ತಿ

ಮಹಾರಾಜರ ಕಟ್ಟೆ !