ಅಜ್ಜಂಪುರದ ಅಧಿದೇವತೆ ಕಿರಾಳಮ್ಮ – ಐತಿಹ್ಯ ಮತ್ತು ಆಚರಣೆಗಳ ಪಕ್ಷಿನೋಟ

ಆತ್ಮೀಯ ಓದುಗರೇ,
ಕಳೆದ ಶುಕ್ರವಾರ ದಿನಾಂಕ 22-04-2016ರಂದು ಅಜ್ಜಂಪುರದ ಕಿರಾಳಮ್ಮನ ಜಾತ್ರೆ, ರಥೋತ್ಸವಗಳು ಸಂಪನ್ನಗೊಂಡವು. ನಮ್ಮ ಗ್ರಾಮದೇವತೆಯ ಉತ್ಸವದ ಹಿನ್ನೆಲೆ, ಆಚರಣೆಗಳು ಮತ್ತು ಅದಕ್ಕಿರುವ ಪರಂಪರಾಗತ ಅಂಶಗಳನ್ನು ಗೆಳೆಯ ಅಪೂರ್ವ (ಅಪ್ಪಾಜಿ ಜಿ.ಬಿ.) ಇವರು ಈ ಲೇಖನದಲ್ಲಿ ದಾಖಲಿಸಿದ್ದಾರೆ.
ಗ್ರಾಮದೇವತೆಯ ಪರಂಪರೆಯೆನ್ನುವುದು ಪ್ರಾಚೀನವಾದುದು. ಅಂಥ ವಿಷಯದಲ್ಲಿ ತಮಿಳು ಪರಂಪರೆಯ ಸ್ವಾಮೀಜಿಯೋರ್ವರು ತಮ್ಮ ಪ್ರತಿಷ್ಠೆಯನ್ನೋ, ನಂಬಿಕೆಯನ್ನೋ ಊರ ಜನರ ಮೇಲೆ ಹೇರಲು ಹೊರಟು ಅದು ವಿಫಲವಾದ ಪ್ರಸಂಗ ಹೇಗೆ ಪರ್ಯವಸಾನವಾಯಿತೆಂಬುದರ ವಿವರಗಳನ್ನು ಕಾಣಬಹುದು. ಅದೇ ಹೊತ್ತಿಗೆ ನಾಯಕರೆನಿಸಿಕೊಂಡವರು ತಮ್ಮ ಊರ ದೇವತೆಯ ಬಗ್ಗೆ ತಳೆದ ನಿರಭಿಮಾನದಿಂದಾಗಿ ಪೇಚಿಗೆ ಸಿಲುಕಿದ ಘಟನೆಯೂ ನಡೆಯಿತು. ಇದಕ್ಕೆ ಪೂರಕವಾಗಿ, ಈ ಬ್ಲಾಗ್ ನ ಹಿಂದಿನ ಸಂಚಿಕೆಯೊಂದರಲ್ಲಿ ಪ್ರಕಟವಾಗಿರುವ ಶ್ರೀ ಶೆಟ್ಟರ ಸಿದ್ಧಪ್ಪನವರ ಪತ್ರವನ್ನೂ ನೆನಪಿಸಿಕೊಳ್ಳಬಹುದು. ಅಲ್ಲಿ ಅವರ ಹಠ ಮತ್ತು ಸ್ವಾಭಿಮಾನಗಳು ಪ್ರಕಟವಾಗಿವೆಯಾದರೆ, ಈ ಪ್ರಸಂಗದಲ್ಲಿ ಪರಂಪರೆಯನ್ನು ಕೆದಕಲು ಹೋಗಿದ್ದಕ್ಕೆ ಉಂಟಾದ ಪರಿಣಾಮಗಳು ಗೋಚರಿಸುತ್ತವೆ. ಇವೆಲ್ಲ ಚಿಕ್ಕ ಸಂಗತಿಗಳೇ ಇರಬಹುದು. ಆದರೆ ಒಂದು ಊರಿನ ದೈವದ ವಿಷಯದಲ್ಲಿ ತಳೆಯುವ ಸಾರ್ವಜನಿಕ ನಿಲುವುಗಳು, ಜನರ ಹಿತಾಸಕ್ತಿಗೆ ಪೂರಕವಾಗಿರುವುದು ಅತ್ಯವಶ್ಯ ಎನ್ನುವುದನ್ನಂತೂ ಈ ಘಟನಾವಳಿಗಳು ತಿಳಿಸುತ್ತವೆ.
ಜಾತ್ರೆಯ ದೃಶ್ಯಗಳು, ಸಿಡಿ ಆಚರಣೆ, ರಥೋತ್ಸವ ಮುಂತಾದ ದೃಶ್ಯಗಳ ಚಿತ್ರಗಳನ್ನು ಸಕಾಲಕ್ಕೆ ಒದಗಿಸಿದ ಯುವ ಮಿತ್ರ ಅರುಣ್ ಶಿವಾನಂದ್ ಇವರಿಗೂ ಅಭಿನಂದನೆಗಳು.
- ಶಂಕರ ಅಜ್ಜಂಪುರ 
==============================================================================================================================


ಕಿರಾಳಮ್ಮ ದೇವಾಲಯದ ಪ್ರವೇಶದ್ವಾರ

                                                                                                  ಕಿರಾಳಮ್ಮ ದೇವಿಯ ಉತ್ಸವಮೂರ್ತಿ

ಕಿರಾಳಮ್ಮ ದೇವಸ್ಥಾನಕ್ಕೆ ಮೊದಲು ಕಿರಾಳಮ್ಮನ ಗುಡಿ ಎಂದು ಕರೆಯುತ್ತಿದ್ದರು. ಗುಡಿಯು ದೇವಸ್ಥಾನದ ವಿಸ್ತಾರ ಪಡೆಯುವಲ್ಲಿ ಸುಮಾರು ಇನ್ನೂರು ವರ್ಷಗಳಾದರೂ ಸಂದಿರಬೇಕು. ಆದರೂ ನಮ್ಮ ತಲೆಮಾರಿನವರು ಚಿಕ್ಕಂದಿನಲ್ಲಿ ಗುಡಿ ಎಂದು ಕರೆಯುತ್ತಿದ್ದುದನ್ನು ಕೇಳಿದ್ದ ನೆನಪಿದೆ. ದೇವರ ಪೂಜಾ ಕೈಂಕರ್ಯವನ್ನು ನಿರ್ವಹಿಸುವ ಪೂಜಾರಿಯಲ್ಲದೆ, ದೇವರ ದೇಖರೇಖಿಗಳನ್ನು, ಐತಿಹಾಸಿಕ ಮಹತ್ವಗಳನ್ನು ನೆನಪಿಟ್ಟುಕೊಂಡು, ಉತ್ಸವಗಳ ಕಾಲದಲ್ಲಿ ಅದನ್ನು ಮೆರೆಸುವ ವ್ಯಕ್ತಿಯನ್ನು ಅಸಾದಿ ಎಂದು ಕರೆಯುವುದು ವಾಡಿಕೆ. ಅಜ್ಜಂಪುರದ ಸಮೀಪದ ಗ್ರಾಮ ಆಸಂದಿಯ ಅಸಾದಿಯ ವಿವರಣೆಯಂತೆ, ಮಾರೀಕಣಿವೆಯಿಂದ ನಮ್ಮ ಸೀಮೆಗೆ ಬಂದ ಏಳು ಜನ ಮಾರಿಯರಲ್ಲಿ ನಮ್ಮ ಕಿರಾಳಮ್ಮ ಕೂಡ ಒಬ್ಬಳಂತೆ. ಜಾನಪದದ ವೈಶಿಷ್ಟ್ಯವೆಂದರೆ, ಕಥೆಗಳಲ್ಲಿ ವಾಸ್ತವತೆಯಿರುವಂತೆಯೆ ಉತ್ಪ್ರೇಕ್ಷೆಗೂ  ಹೆಚ್ಚು ಅವಕಾಶಗಳಿರುತ್ತವೆ. ನಮ್ಮ ಬಹುತೇಕ ಗ್ರಾಮೀಣ ದೇವ-ದೇವಿಯರ ಕಥಾನಕಗಳಲ್ಲಿ ಅವರು ಒಡಮೂಡಿರುವುದು, ಹುತ್ತ ಇಲ್ಲವೇ ನದಿಗಳಲ್ಲಿ ಕಂಡುಬಂದಿರುವುದು, ಅಥವಾ ಬೇಟೆಗೆಂದು ರಾಜನೋ, ಪಾಳೆಯಗಾರನೋ ಹೋದಾಗ, ಅವನ ನಾಯಿಗಳನ್ನು ಮೊಲಗಳು ಬೆದರಿಸಿ ಅಟ್ಟಿಸಿಕೊಂಡು ಬಂದ ಘಟನೆಗಳಿಂದಾಗಿ, ಆತನು ಈ ನೆಲವನ್ನು ಗಂಡುಮೆಟ್ಟಿನ ಸ್ಥಳವೆಂದು ಗ್ರಹಿಸಿ ನಗರ ನಿರ್ಮಾಣ ಮಾಡಿದನೆಂಬಂಥ ಅನೇಕ ಪ್ರತೀತಿಗಳು ಅನೇಕ ಜಾನಪದ ಕಥಾನಕಗಳಲ್ಲಿ ದಾಖಲಾಗಿವೆ.

ಕಿರಾಳಮ್ಮನ ಐತಿಹ್ಯದಲ್ಲೂ ಇಂಥ ಸಂಗತಿ ಕಂಡುಬರುತ್ತದೆ. ಆಕೆಯನ್ನು ಮೊದಲು ಹಾಲುಗರೆಯಮ್ಮ ಎಂದು ಕರೆಯುತ್ತಿದ್ದುದು ಇತ್ತೀಚಿನ ಜನರಿಗೂ ಗೊತ್ತಿರುವ ಸಂಗತಿ. ಹುತ್ತದ ಕೋವಿಗಳ ಮೇಲೆ ನಿಂತು, ಹಸುವೊಂದು ಹಾಲುಗರೆಯುತ್ತಿದ್ದುದರಿಂದ, ಅದನ್ನು ಜನರು ಪರಿಶೀಲಿಸಿ ಅಲ್ಲಿ ಕಂಡುಬಂದ ವಿಗ್ರಹವನ್ನು ಕಿರಾಳಮ್ಮನೆಂದು ಸ್ಥಾಪನೆ ಮಾಡಿ ಪೂಜಿಸಿದ ಸಂಗತಿ ಕಿರಾಳಮ್ಮನ ಇತಿಹಾಸದಲ್ಲಿ ಗೋಚರಿಸುತ್ತದೆ.

ಇದೆಲ್ಲ ಏನಿದ್ದರೂ, ವಿಜಯನಗರದ ದೊರೆಗಳ ಕಾಲಕ್ಕೆ ಕಿರಾಳಮ್ಮನ ಗುಡಿ ಅಸ್ತಿತ್ವಕ್ಕೆ ಬಂದಿರಬೇಕು. ಪೂರ್ವಾಭಿಮುಖವಾದ ಗರ್ಭಗುಡಿಯುಳ್ಳ ಈ ಮಂದಿರದ ಆಧಾರ ಶಿಲೆಗಳಲ್ಲಿ ಕನ್ನಡ ಲಿಪಿಯ ಶಾಸನದ ಬರಹಗಳು ಕಂಡುಬರುತ್ತವೆ. ಇವುಗಳನ್ನು ಯಾರಾದರೂ ಓದಿ ದಾಖಲಿಸಿರುವರೋ ಎಂದು ತಿಳಿಯದು.

        ಪರಿತ್ಯಕ್ತಗೊಂಡ ರಾಜರಾಜೇಶ್ವರಿಯ ವಿಗ್ರಹ
ಕಳೆದ ಶತಮಾನ ಅಂತ್ಯಭಾಗದಲ್ಲಿ (1993-94) ತಿರುಚ್ಚಿಯ ಕೈಲಾಸಾಶ್ರಮದ ಸ್ವಾಮಿಗಳು ಅಜ್ಜಂಪುರದ ಶಿವಾನಂದಾಶ್ರಮಕ್ಕೆ ಬಂದಿದ್ದರು. ಊರಿನ ಕೆಲವು ನಾಯಕರು ಅವರನ್ನು ಅಜ್ಜಂಪುರದ ಗ್ರಾಮದೇವತೆಯ ದರ್ಶನಪಡೆಯಲೆಂದು ಆಹ್ವಾನಿಸಿದರು. ಅದೇ ಸಮಯದಲ್ಲಿ ಇವರ ಆಗಮನಕ್ಕೆ ಕೆಲವು ತಿಂಗಳ ಹಿಂದೆ ನಡೆದ ಕಳ್ಳತನದಲ್ಲಿ ಕಿರಾಳಮ್ಮನ ಒಡವೆಗಳು ಕಳುವಾಗಿರುವುದನ್ನು ಅವರ ಗಮನಕ್ಕೆ ತಂದರು. ಸ್ವಾಮಿಗಳು ದೇವೀ ವಿಗ್ರಹವನ್ನು ಪರಿಶೀಲಿಸಿ, ಇದರಲ್ಲಿ ದೈವಾಂಶ ದುರ್ಬಲವಾಗಿ, ಈಗ ಯಾವ ದೈವೀ ಶಕ್ತಿಯೂ ಉಳಿದಿಲ್ಲ ಎಂದಾಗ ನಮ್ಮ ನಾಯಕರು ಹೌಹಾರಿದರು. ಇದಕ್ಕೆ ಪರಿಹಾರವನ್ನೂ ತಾವೇ ಸೂಚಿಸಬೇಕೆಂದು ಸ್ವಾಮಿಗಳನ್ನು ಕೋರಿದರು. ಶಕ್ತಿದೇವತೆಯ ಆರಾಧಕರಾದ ಆ ಸ್ವಾಮಿಗಳು ಕಿರಾಳಮ್ಮನ ಹಳೆಯ ವಿಗ್ರಹದಲ್ಲಿ ಶಕ್ತಿಯು ಕುಂದಿಹೋಗಿದೆಯೆಂದೂ, ಅದನ್ನು ಬದಲಿಸಿ, ರಾಜರಾಜೇಶ್ವರಿಯೆಂಬ ದೇವತೆಯನ್ನು ಆ ಸ್ಥಳದಲ್ಲಿ ಸ್ಥಾಪಿಸಲು ಸೂಚಿಸಿದರು. ಮುಂದೆ ದೇವಾಲಯದ ನವೀಕರಣ ನಡೆಯಿತು. ಜೋಗಿ ತಿಮ್ಮಯ್ಯನವರ ವಂಶದ ಶ್ರೀಮತಿ ಎಲ್. ನಾಗರತ್ನಮ್ಮನವರು ಗೋಪುರದ ನಿರ್ಮಾಣ ಮಾಡಿಸಿಕೊಟ್ಟರು. ದಿನಾಂಕ 15-06-1995, ಗುರುವಾರದ ದಿನ, ಕಿರಾಳಮ್ಮನ ಪುರಾತನ ವಿಗ್ರಹ ಭೂಗರ್ಭ ಸೇರಿ, ರಾಜರಾಜೇಶ್ವರಿಯ ನೂತನ ವಿಗ್ರಹವು ತಿರುಚ್ಚಿಯ ಸ್ವಾಮಿಗಳ ನೇತೃತ್ವದಲ್ಲಿ ಸ್ಥಾಪನೆಯಾಯಿತು. ಕಾಕತಾಳೀಯವೆಂಬಂತೆ ಈ ಪ್ರತಿಷ್ಠಾಪನೆ ನಡೆದ ನಂತರದ ಮೂರು ವರ್ಷಗಳ ಕಾಲ ಅಜ್ಜಂಪುರದ ಸುತ್ತಮುತ್ತ ಮಳೆ-ಬೆಳೆ ಸರಿಯಾಗಿ ಆಗಲಿಲ್ಲ. ಇದರಿಂದ ಕಂಗಾಲಾದ ಭಕ್ತಜನರು ರಾಜರಾಜೇಶ್ವರಿಯ ಅನುಗ್ರಹ ಕೋರಿದರು. ಆದರೆ ಯಾವುದೇ 'ಅಪ್ಪಣೆ' ಆಗಲಿಲ್ಲ. ಕಿರಾಳಮ್ಮನ ಮೂಲವಿಗ್ರಹ ಭೂಗತವಾಗಿದ್ದರೂ, ಉತ್ಸವ ಮೂರ್ತಿ, ಅಂದರೆ ಹೊರಡುವ ಮೂರ್ತಿಯನ್ನು ಹಾಗೇ ಉಳಿಸಿಕೊಂಡಿದ್ದರು. ಭಕ್ತರು ಈ ಬಾರಿ ಉತ್ಸವಮೂರ್ತಿಯ ಮೊರೆಹೊಕ್ಕರು. ಗ್ರಾಮದ ಮೂಲದೇವತೆಯಾದ ನನ್ನ ವಿಗ್ರಹವನ್ನು ಭೂಗತಗೊಳಿಸಿರುವುದೇ ಈಗಿನ ಅನಾಹುತಗಳಿಗೆ ಕಾರಣ. ಮೂಲದೇವತೆಯನ್ನೇ ಮರು ಪ್ರತಿಷ್ಠಾಪಿಸಿದರೆ ಒಳಿತಾಗುತ್ತದೆಯೆಂಬ ಅಪ್ಪಣೆಯಾಯಿತು.

ಅದರಂತೆ ಭೂಗತ ವಿಗ್ರಹವನ್ನು ಮೇಲೆ ತೆಗೆಯಲಾಯಿತು. ದುರ್ದೈವದಿಂದ ಈ ವಿಗ್ರಹವು ಮುಕ್ಕಾಗಿದ್ದುದರಿಂದ ಪೂಜಾರ್ಹವಾಗಿರಲಿಲ್ಲ. ಹೊಸ ವಿಗ್ರಹವನ್ನು ಸಿದ್ಧಪಡಿಸಲು ಖರ್ಚುವೆಚ್ಚಗಳು ಹೆಚ್ಚಾದರೂ, ಕಿರಾಳಮ್ಮನು ಗ್ರಾಮದೇವತೆಯಾದ್ದರಿಂದ ಯಾರೂ ಬೇಸರಿಸಲಿಲ್ಲ. ಹಿಂದೆ ಸ್ಥಾಪಿಸಲಾಗಿದ್ದ ರಾಜರಾಜೇಶ್ವರಿಯ ವಿಗ್ರಹವನ್ನು ಗರ್ಭಗುಡಿಯ ಬಲಬದಿಯಲ್ಲಿಡಲಾಯಿತು. ಭಗ್ನಗೊಂಡ ಕಿರಾಳಮ್ಮನ ಮೂಲ ವಿಗ್ರಹವನ್ನು ಸಮೀಪದಲ್ಲೇ ಇರುವ ಬೇವಿನಮರದಮ್ಮನ ಗುಡಿಯಲ್ಲಿ ಇಡಲಾಗಿದೆ.
ಕಿರಾಳಮ್ಮ ದೇವಿಯ ಗರ್ಭಗುಡಿ
ಊರಿನಲ್ಲಿ ಇತರ ದೇವರ ದೇವಾಲಯಗಳೂ ಇವೆ. ಅವೆಲ್ಲವೂ ಆಯಾ ಸಮುದಾಯ, ಜಾತಿ, ಗುಂಪುಗಳಿಗೆ ಸೀಮಿತವಾಗಿದ್ದರೆ, ಕಿರಾಳಮ್ಮ ಊರೊಟ್ಟಿನ ಗ್ರಾಮದೇವತೆ. ಹೀಗಾಗಿ ಈ ದೇವಿಯ ಪೂಜೆ, ಉತ್ಸವ, ಜಾತ್ರೆ, ಆಚರಣೆಗಳು ಎಲ್ಲರಿಗೂ ಸೇರಿದ್ದು. ಪರ ಊರುಗಳಲ್ಲಿ ನೆಲೆಸಿದ್ದರೂ, ಜಾತ್ರೆ, ಸಿಡಿ ಮೊದಲಾದ ಕಲಾಪಗಳಿಗೆ ಜನರು ಬಂದು ಭಾಗವಹಿಸುತ್ತಾರೆ.

ಸಿಡಿ ಆಡುತ್ತಿರುವ ದೃಶ್ಯ                           
ಕಿರಾಳಮ್ಮನ ಜಾತ್ರೆಯು ಪ್ರತಿವರ್ಷ ಚೈತ್ರಮಾಸದಲ್ಲಿ ಜರುಗುತ್ತದೆ. ಈ ಉತ್ಸವದ ಅಂಗವಾಗಿ ಒಂದು ವಾರ ಕಾಲ ವಿವಿಧ ಆಚರಣೆಗಳು ಜಾರಿಯಲ್ಲಿರುತ್ತವೆ. ಜಾತ್ರೆ ನಡೆಸಲು ದೇವಿಯ ಅಪ್ಪಣೆ ಕೇಳುವುದು, ಅದಕ್ಕೆ ಬೇಕಿರುವ ಸಿದ್ಧತೆಗಳು ನಡೆಯುತ್ತವೆ. ಗುರುವಾರದಂದು ದೇವಿಗೆ ಬಾನ ಸಮರ್ಪಣೆ, ಶುಕ್ರವಾರದಂದು ತೇರು, ಶನಿವಾರ ಬೇವಿನಸೀರೆಯ ಸೇವೆ ಮತ್ತು ಮಾತಂಗಮ್ಮನಿಗೆ ಎಡೆ ಸಮರ್ಪಣೆಗಳು ನಡೆಯುತ್ತವೆ. ಭಾನುವಾರದಂದು ಸಿಡಿ ಆಡುವವರನ್ನು ಆಯ್ಕೆಮಾಡಲಾಗುತ್ತದೆ. ಅದೇ ದಿನ ಸಂಜೆ ಸಿಡಿ ಆಡಿಸಲಾಗುತ್ತದೆ. ಸಿಡಿ ಎಂದರೆ, ದೊಡ್ಡ ಮರದ ಕಂಬವನ್ನು ಅಕ್ಷದ ಮೇಲೆ ತಿರುಗುವಂತೆ ಹೊಂದಿಸಿ, ಅದರ ತುದಿಗೆ, ಹರಕೆ ಕಟ್ಟಿಕೊಂಡ ವ್ಯಕ್ತಿಯನ್ನು ಕಟ್ಟಿ ತಿರುಗಿಸುವರು. ರಥೋತ್ಸವದ ನಂತರ ದೇವಿಯ ಮೆರವಣಿಗೆ ಇತ್ಯಾದಿಗಳು ಇರುತ್ತವೆ.

ಹೊನಲು ಬೆಳಕಿನ ಕುಸ್ತಿಪಂದ್ಯಗಳು                     
ಜಾತ್ರೆಯನ್ನು ಆಕರ್ಷಣೀಯವನ್ನಾಗಿಸಲು ಕುಸ್ತಿ ಪಂದ್ಯಗಳನ್ನು ಏರ್ಪಡಿಸುವ ಸಂಪ್ರದಾಯ ಹಿಂದಿನಿಂದಲೂ ಇದೆ. ಹಿಂದೆಲ್ಲ ಸಾಧಾರಣವಾಗಿ ಭಾನುವಾರ, ಸೋಮವಾರ ಬೆಳಗ್ಗೆ ಮತ್ತು ಸಂಜೆ ಕುಸ್ತಿಪಂದ್ಯಗಳು ನಡೆಯುತ್ತಿದ್ದವು. ಇತ್ತೀಚೆಗೆ ಹೊನಲು ಬೆಳಕಿನಲ್ಲಿ ನಡೆಸುವ ಪಂದ್ಯಾವಳಿಗಳು ಜನರನ್ನು ಆಕರ್ಷಿಸಿದ ಕಾರಣದಿಂದ, ಸಂತೆ ಮೈದಾನದಲ್ಲಿ ಹೊಸ ಆಖಾಡವನ್ನು ನಿರ್ಮಿಸಿ ಪಂದ್ಯಗಳನ್ನು ನಡೆಸಲಾಯಿತು.

ಈ ವರ್ಷ ಸೋಮವಾರ, ಮಂಗಳವಾರ ನಡೆದ ಪಂದ್ಯಗಳಿಗೆ ದೂರದ ಬೆಳಗಾವಿ, ಧಾರವಾಡ, ಬ್ಯಾಡಗಿ, ಹರಪನಹಳ್ಳಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಹೊಳೆಹೊನ್ನೂರು, ಶಿವಮೊಗ್ಗ, ಭದ್ರಾವತಿಗಳಿಂದ ಪೈಲ್ವಾನರು ಬಂದಿದ್ದರು. ಹತ್ತಿರದ ಚನ್ನಗಿರಿ, ಶಿವನಿ, ತರೀಕೆರೆ, ಬೀರೂರು,ಜಾವೂರು ಮುಂತಾದ ಸ್ಥಳಗಳಿಂದಲೂ ಕುಸ್ತಿಪಟುಗಳು ಬಂದಿದ್ದರು. ಈ ವರ್ಷದ ಪಂದ್ಯಗಳು ಮೈ ನವಿರೇಳಿಸುವಂತಿದ್ದವು.
ದೇವಾಲಯದ ಹೊರ ಆವರಣ
ಬೇವಿನ ಸೀರೆ ಉಡುಗೆ ಸೇವೆ 
           
ಕೆಲವು ವರ್ಷಗಳಿಂದ ಜೋಡೆತ್ತಿನ ಗಾಡಿ ಸ್ಪರ್ಧೆ ಕೂಡ ಆಕರ್ಷಕವಾಗುತ್ತ ನಡೆದಿದೆ. ಶನಿವಾರ, ದಿನಾಂಕ 23-04-2016ರಂದು ಹೊನಲು ಬೆಳಕಿನಲ್ಲಿ ಜೋಡೆತ್ತಿನ ಟಯರ್ ಚಕ್ರದ ಗಾಡಿಗಳ ಓಟದ ಸ್ಪರ್ಧೆಯೂ ನಡೆಯಿತು. ಪ್ರತಿವರ್ಷ ನಡೆಯುವ ಈ ಸ್ಪರ್ಧೆಗೆ ಮೈಸೂರು, ಚಾಮರಾಜನಗರ, ಮಂಡ್ಯ, ಚಿಕ್ಕಮಗಳೂರು ಮುಂತಾದ ಎಡೆಗಳಿಂದ ಸ್ಪರ್ಧಿಗಳು ಬರುತ್ತಾರೆ. ಒಟ್ಟಾರೆ ಕಿರಾಳಮ್ಮನ ಜಾತ್ರೆ ವರ್ಷದಿಂದ ವರ್ಷಕ್ಕೆ ತನ್ನ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳುತ್ತ, ಮನೋರಂಜಕವಾಗಿ ಪರಿವರ್ತನೆಯಾಗುತ್ತಿದೆ. ಗ್ರಾಮೀಣ ಸಂಸ್ಕೃತಿ, ಕ್ರೀಡೆಗಳು ಮರೆಯಾಗದಂತೆ ಕಾಪಾಡುವಲ್ಲಿ ಯಶಸ್ವಿಯಾಗಿದೆ.


* * * * * *
ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

87. ಬಂಗಾರದ ಭರವಸೆ ಹುಟ್ಟಿಸುವ ಹಣ್ಣೆ ಗುಡ್ಡ

82. "ಬಾರ್ನ್ ಹೆಡ್ ಮಾಸ್ಟರ್" ಅಜ್ಜಂಪುರ ವೆಂಕಟೇಶಮೂರ್ತಿ

ಮಹಾರಾಜರ ಕಟ್ಟೆ !