ಪರೇವು – ಉತ್ಸವಗಳ ಪರ್ವಕಾಲ

ಆತ್ಮೀಯ ಓದುಗರೇ,


ಈ ಸಂಚಿಕೆಯನ್ನು ಅಮೆರಿಕದಿಂದ ಪ್ರಕಟಿಸುತ್ತಿದ್ದೇನೆ.  ಪ್ರತಿ ತಿಂಗಳು ಒಂದನೇ ದಿನಾಂಕದಂದು ಅಜ್ಜಂಪುರವನ್ನು ಕುರಿತಂತೆ ಒಂದು ಲೇಖನವನ್ನು ಪ್ರಕಟಿಸುವುದು ಕಳೆದ ಐದು ವರ್ಷಗಳ ಪರಿಪಾಠ. ನಾನು ಇಲ್ಲಿಗೆ ಬಂದು ಕೆಲವೇ ದಿನಗಳಾಗಿವೆ. ಇಲ್ಲಿ ನನ್ನೂರನ್ನು ಕುರಿತಂತೆ ಬರವಣಿಗೆಯ ಸಾಮಗ್ರಿ ಇಲ್ಲಿ ಲಭ್ಯವಾಗುವುದು ಕಷ್ಟವೇ ಸರಿ. ಹಾಗಾಗಿ ಈ ಸಂಚಿಕೆ ಎರಡು ವಾರಗಳಷ್ಟು ತಡವಾಗಿ ಪ್ರಕಟವಾಗುತ್ತಿದೆ. ಇದರಿಂದ ವ್ಯತ್ಯಾಸವೇನೂ ಆಗದು.  ಆದರೆ  ಸಾಧ್ಯವಾದ ಮಟ್ಟಿಗೂ ನಾನು ಸಂಕಲ್ಪಿಸಿದಂತೆ ಮಾಡಿಕೊಂಡು ಬಂದಿರುವೆನೆಂಬ ಸಮಾಧಾನ ನನ್ನದು. ನನ್ನಂತೆಯೇ ಈ ವಿಷಯದಲ್ಲಿ ಆಸಕ್ತಿ ತಳೆದು, ನನ್ನೊಂದಿಗೆ ಸಹಕರಿಸುತ್ತಿರುವ ಅಜ್ಜಂಪುರದ ಗೆಳೆಯರು ತಮ್ಮ ಬರಹಗಳ ಮೂಲಕ ಸಹಕಾರ ನೀಡುತ್ತಿದ್ದಾರೆ. ಅವರಲ್ಲಿ ಅಜ್ಜಂಪುರದಲ್ಲೇ ನೆಲೆಸಿರುವ ಅಪೂರ್ವ ಬಸು ಅವರನ್ನು ನಾನು ತುಂಬ ಆಶ್ರಯಿಸಿದ್ದೇನೆ. ನನಗೆ ಲೇಖನ ಸಿದ್ಧಪಡಿಸುವುದು ಸಾಧ್ಯವಾಗದ ಸಂದರ್ಭಗಳಲ್ಲಿ  ನನ್ನ ಕೋರಿಕೆಯನ್ನು ಮನ್ನಿಸಿ, ಸಾಮಯಿಕ ಸುದ್ದಿಗಳನ್ನು, ವರದಿಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಅವರಿಗೆ ವಂದನೆಗಳನ್ನು ತಿಳಿಸುವುದು  ಔಪಚಾರಿಕ ಮಾತ್ರ. 

1960ರ ದಶಕದಲ್ಲಿ ನಡೆದ ಪರೇವಿನ ಚಿತ್ರ ನನ್ನ ಮನಃಪಟಲದಲ್ಲಿ ಮಾಸದಂತೆ ಉಳಿದಿದೆ. ಇದನ್ನು ಕುರಿತು ದಾಖಲಿಸಬೇಕೆಂಬ ಹಂಬಲ ತುಂಬ ದಿನಗಳಿಂದ ನನಗೆ ಇತ್ತು.  ಅದೀಗ ಪೂರೈಸಿದೆ. ಕೆಳಗಿನ ಸಚಿತ್ರ ವರದಿಯನ್ನು ಅಪೂರ್ವ ಬಸು ಒದಗಿಸಿದ್ದಾರೆ. ಅವರಿಗೆ ಧನ್ಯವಾದಗಳು. 

ನಾನು ನಮ್ಮೂರಿನ  ಎಸ್.ಎಸ್.ಟಿ.ಬಿ. ಪ್ರೌಢಶಾಲೆಯ ಬಗ್ಗೆ ಕೂಡ ಒಂದು ಪುಟವನ್ನು ಅಂತರಜಾಲದಲ್ಲಿ ನಿರ್ಮಿಸಿದ್ದೇನೆ. ಅದಕ್ಕೆ ಪ್ರತಿದಿನ ಕನಿಷ್ಟವೆಂದರೂ ನಾಲ್ಕಾರು ಜನರು ತಮ್ಮ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಂಥವರಲ್ಲಿ ನನ್ನ ಮನವಿಯೆಂದರೆ, ಊರನ್ನು ಕುರಿತಂತೆ, ಊರಿನ ಹಿರಿಯರು, ಸಂಘ-ಸಂಸ್ಥೆಗಳನ್ನು ಕುರಿತಂತೆ ಚಿತ್ರಸಹಿತ ನಾಲ್ಕಾರು ಸಾಲುಗಳನ್ನು ಬರೆಯುವಂತೆ ಕೋರುತ್ತೇನೆ. ಹೀಗೆ ಮಾಡುವುದರಿಂದ ಅಜ್ಜಂಪುರಕ್ಕೆ ಸಂಬಂಧಿಸಿದಂತೆ ಮಾಹಿತಿಗಳನ್ನು ಒಂದೆಡೆ ಕ್ರೋಡೀಕರಿಸಲು ಸಹಾಯಕವಾಗುತ್ತದೆ. ಗಮನಿಸುವಿರೆಂದು ಭಾವಿಸುವೆ. 
ವಂದನೆಗಳೊಡನೆ.
- ಶಂಕರ ಅಜ್ಜಂಪುರ
---------------------------------------------------------------------------------------------------------------------------------------------------------------

ಪರೇವು -ಉತ್ಸವಗಳ ಪರ್ವಕಾಲ
  
ಅಪೂರ್ವ ಬಸು
ದೂರವಾಣಿ - 94810 75410
ನಗಾರಿ ನಂದಿಯ ನೇತೃತ್ವ

ಪರೇವು ಘೋಷಣೆಯಾಯಿತೆಂದರೆ ಅಜ್ಜಂಪುರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿಶೇಷ ಸಡಗರ ಸಂಭ್ರಮಗಳು ತಾನಾಗಿಯೇ ಸೃಷ್ಟಿಯಾಗುತ್ತದೆ. ಇದೊಂದು ಸ್ವಾಂತಃ ಸುಖಾಯವಲ್ಲದ, ಆದರೆ ಬಹುಜನ ಹಿತಾಯವಾದ ಸಾಮೂಹಿಕ ಧಾರ್ಮಿಕ ಆಚರಣೆ. ತೇರು, ಜಾತ್ರೆಗಳೂ ಸಾಮೂಹಿಕವೇ ಸರಿ. ಆದರೆ ಅವುಗಳ ವ್ಯಾಪ್ತಿ ಪರೇವಿಗೆ ಬರಲಾರದು ಎನ್ನುವುದು ನಿಜ.  ಜಾತ್ರೆ, ಉತ್ಸವಗಳಲ್ಲಿ ಭಕ್ತಿಯ ಅಂಶವಿದ್ದರೂ, ಜನರ ಸಂಭ್ರಮಕ್ಕೆ ಮೊದಲ ಆದ್ಯತೆ. ಪರೇವು ಸಾಮೂಹಿಕ ಹಿತಗಳನ್ನು ಕಾಪಾಡುವಂಥ ಆಚರಣೆಯಾಗಿರುವುದರಿಂದ, ಒಂದೇ ಉದ್ದೇಶಕ್ಕೆಂದು ಜನರೆಲ್ಲರೂ ಏಕಚಿತ್ತದಿಂದ ದೈವವನ್ನು ಕುರಿತು ಪ್ರಾರ್ಥಿಸುವುದು, ಅದರ ಫಲಾಫಲಗಳಿಗೆ ಸಮಸ್ತರೂ ಹೊಣೆಯೆಂದು ಭಾವಿಸಿ ಭಾಗವಹಿಸುವುದು ಸಾಧ್ಯವಾಗುತ್ತದೆಯಾಗಿ, ಪರೇವಿಗೆ ತನ್ನದೇ ಆದ ವಿಶೇಷವಿದೆ. ಹೀಗಾಗಿ ಪರೇವು ಎನ್ನುವುದು ಊರಿಗೆ ಊರೇ ಭಾಗವಹಿಸುವ ಸ್ಥಳೀಯ ಹಬ್ಬ ಎನ್ನಬಹುದು. ಪರೇವುಗಳಲ್ಲಿ ದಾಸೋಹದಂತೆಯೇ, ಸಾಮಾಜಿಕ ಬೇಡಿಕೆ, ಪ್ರಾರ್ಥನೆಗಳು ಮುಖ್ಯವಾಗುತ್ತವೆ.

ಪರೇವು ಎನ್ನುವ ಶಬ್ದ ಸಂಸ್ಕೃತದ ಪರ್ವ ಎಂಬ ಶಬ್ದಕ್ಕೆ ಸಂವಾದಿಯಾದುದು ಎಂದು ಭಾವಿಸಬಹುದು. ಏಕೆಂದರೆ ಪರೇವಿನ ಆಚರಣೆಯಲ್ಲಿ ನಡೆಯುವ ಎಲ್ಲ ಕ್ರಿಯೆಗಳೂ ಪರ್ವ ಅಥವಾ ಹಬ್ಬ ಎನ್ನುವುದನ್ನೇ ಸೂಚಿಸುತ್ತವೆ. ಪರೇವನ್ನು ಹೆಚ್ಚಿನಂಶ ಮಳೆಯ ಕೊರತೆ ಇರುವ ಸಂದರ್ಭಗಳಲ್ಲಿ ಆಯೋಜಿಸಲಾಗುತ್ತದೆ. ಅದೇ ರೀತಿ ಅತಿವೃಷ್ಟಿಯಾಗಿ, ಮಳೆ ಜನರ ಬದುಕನ್ನು ಹದಗೆಡಿಸುವ ಲಕ್ಷಣಗಳಿದ್ದಾಗಲೂ ಅದನ್ನು ನಿಗ್ರಹಿಸುವಂತೆ ದೈವವನ್ನು ಬೇಡಿಕೊಳ್ಳುವ ಪರೇವು ಕೂಡ ನಡೆಯುವುದುಂಟು.  ನಮ್ಮ ಭಾಗದ ಮಳೆಯ ದೇವರೆಂದೇ ಬ್ರಿಟಿಷರಿಂದ ಬಿರುದು ಪಡೆದ ಸೊಲ್ಲಾಪುರದ ಶ್ರೀ ಗುರು ಸಿದ್ಧರಾಮೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ನಡೆಸಲಾಗುವ ಮುದ್ದೆ ಪರೇವು ಈ ಬಗೆಯದು.

ಕುಂಭ ಹೊತ್ತ ಸುಮಂಗಲಿಯರಿಂದ ನಡೆಮಡಿ ಸೇವೆ
ಅಜ್ಜಂಪುರದಲ್ಲಿ ಸಿಹಿನೀರಿನ ಒರತೆಯಿರುವ ಬೆರಳೆಣಿಕೆಯ ಬಾವಿಗಳಲ್ಲಿ, ಗೌಡನ ಬಾವಿಯೆಂಬುದು  ಪೂರ್ವಭಾಗದಲ್ಲಿದೆ. ಮುದ್ದೆ ಪರೇವಿನ ಮುಖ್ಯ ಅಂಗವಾಗಿರುವ ಕುಂಭಾಭಿಷೇಕಕ್ಕೆ ಈ ಬಾವಿಯಿಂದಲೇ ನೀರನ್ನು ಸಂಗ್ರಹಿಸಲಾಗುವುದು. ಮೊದಲೆಲ್ಲ ಜನರು ತಮ್ಮ ತಮ್ಮ ಮನೆಗಳಲ್ಲಿ ಲಭ್ಯವಿರುವ ಕುಂಭ ಅಥವಾ ಕೊಡಪಾನಗಳಲ್ಲಿ ನೀರನ್ನು ತರುವ ಪದ್ಧತಿಯಿತ್ತು. ಆದರೆ ಇತ್ತೀಚೆಗೆ ಗ್ರಾಮದೇವತೆ ಕಿರಾಳಮ್ಮ ದೇವಾಲಯದ ವಿಶ್ವಸ್ಥ ಸಮಿತಿಯೇ ಏಕರೂಪ, ಗಾತ್ರದ ಪುಟ್ಟ ಸ್ಟೀಲ್ ಕುಂಭಗಳನ್ನು ಒದಗಿಸುತ್ತದೆ. ನೂರ ಒಂದು ಕುಂಭಗಳಲ್ಲಿ ನೀರು ತುಂಬಿಸಿ, ಗಂಗಾಪೂಜೆ ಜರುಗಿದ ನಂತರ ಅವುಗಳನ್ನು ಮಹಿಳೆಯರು ತಲೆಯ ಮೇಲೆ ಹೊತ್ತು ದೇವಾಲಯಕ್ಕೆ ತರುವರು. ಕೆಲವೊಮ್ಮೆ ಮಹಿಳೆಯರು ಅಷ್ಟು ಸಂಖ್ಯೆಯಲ್ಲಿ ಭಾಗವಹಿಸಲಾಗದ ಸಂದರ್ಭಗಳಲ್ಲಿ, ಪುರುಷರೂ ಹೊತ್ತು ಸಂಖ್ಯೆಯನ್ನು ಸರಿದೂಗಿಸುವುದುಂಟು.  ನಂತರ ಊರಿನ ಗೌಡರು, ಬುದ್ಧಿವಂತರು ಕಿರಾಳಮ್ಮ ದೇವಾಲಯದ ಸಂಚಾಲನ ಸಮಿತಿಯ ಮುಂದಾಳತ್ವದಲ್ಲಿ ಪರೇವನ್ನು ಸಂಘಟಿಸಲಾಗುತ್ತದೆ. ಶ್ರೀ ಗುರು ಸಿದ್ಧರಾಮೇಶ್ವರ ದೇವರ ಜತೆಗೆ ಬೀರಲಿಂಗೇಶ್ವರ ದೇವರು, ಮಾಚಿದೇವರು, ಗ್ರಾಮದೇವತೆ ಕಿರಾಳಮ್ಮ ಹಾಗೂ ಚೌಡೇಶ್ವರಿ ದೇವಿಯರು ಪರೇವಿನಲ್ಲಿ ಪಾಲ್ಗೊಳ್ಳುವರು. ಮಂಗಳವಾದ್ಯ ಸಹಿತ, ಕುಂಭ ಹೊತ್ತ ಮಹಿಳೆಯರೊಂದಿಗೆ ನಡೆಮಡಿಯ ಮೆರವಣಿಗೆಯಲ್ಲಿ ಸಾಗುವ  ಈ ದೇವರುಗಳ ಉತ್ಸವವು ಈಶ್ವರನ ದೇವಸ್ಥಾನವನ್ನು ತಲುಪುವುದು.  ನಡೆಮಡಿಯೆಂದರೆ, ಉತ್ಸವದಲ್ಲಿ ಭಾಗವಹಿಸುವ ದೇವ-ದೇವಿಯರಿಗೆ  ರಸ್ತೆಯಲ್ಲಿನ ಕಲ್ಮಶಗಳು ಅವರ ಪಾದಗಳನ್ನು ಸೋಕಬಾರದೆಂದು, ಮೆರವಣಿಗೆಯ ಉದ್ದಕ್ಕೂ ಹತ್ತಿ ಬಟ್ಟೆಯನ್ನು ನೀರಿನಲ್ಲಿ ನೆನೆಸಿ ಹರಡಲಾಗುತ್ತದೆ. ಅದರ ಮೇಲೆಯೇ ದೇವರುಗಳು, ಕುಂಭ ಹೊತ್ತ ಸುಮಂಗಲಿಯರು ನಡೆಯುವರು. ಈ ಆಚರಣೆಯಲ್ಲಿ ಭಾಗವಹಿಸುವ ಎಲ್ಲರೂ ಪೂಜಾದಿಗಳು ಮುಗಿಯುವವರೆಗೂ ನಿರಾಹಾರವನ್ನು ಪಾಲಿಸುವರು.
ಡೊಳ್ಳು ಕುಣಿತದ ಸಂಭ್ರಮ
ಅಜ್ಜಂಪುರದ ಮುಖ್ಯರಸ್ತೆಗಳಲ್ಲಿ ಸಾಗುವ ಈ ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳುಕುಣಿತದ ಅನೇಕ ತಂಡಗಳು ಭಾಗಿಯಾಗಿ ಇಡೀ ಉತ್ಸವಕ್ಕೆ ಮೆರುಗು ತರುತ್ತಾರೆ. ಸೊಲ್ಲಾಪುರದ ಸ್ವಾಮಿಯ ನಗಾರಿ ನಂದಿಯ ಮೇಲೆ ನಗಾರಿ ಬಾರಿಸುವಾತ ಕುಳಿತಿರುತ್ತಾನೆ. ನಗಾರಿ ಬಾರಿಸುವುದು ಕೂಡ ವಂಶಪಾರಂಪರ್ಯವಾಗಿ ನಡೆದು ಬರುವ ಪದ್ಧತಿಯಾದ್ದರಿಂದ ಆ ಕುಟುಂಬದವರೇ ಆ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಹಿಂದೆ ಸನಾದಿ ವಾದ್ಯಮೇಳದ ಸಂಭ್ರಮವೂ ಇರುತ್ತಿತ್ತು. ಸನಾದಿ ವಾದ್ಯಕಾರರಾಗಿದ್ದ ಚೆಲುವಾದಿಗರ ದಾಸಪ್ಪನವರೊಂದಿಗೇ ಈ ವಾದನ ಕೊನೆಗೊಂಡಿತು. ಈಗ  ಈ ವಾದ್ಯದ ಪಕ್ಕವಾದ್ಯದ ಸಾಥಿ ಮಾತ್ರ ಉಳಿದುಕೊಂಡಿದ್ದಾರೆ. ಅವರೀಗ ಡೋಲು ಬಾರಿಸುತ್ತಾರೆ. ಎರೆಹೊಸೂರು ರಸ್ತೆಯ ಪಶ್ಚಿಮಕ್ಕಿರುವ ತೆಂಗಿನ ತೋಟದಲ್ಲಿ ಒಂದು ಈಶ್ವರನ ದೇವಸ್ಥಾನ ಹಾಗೂ ನವಗ್ರಹಗಳ ಗುಡಿಯಿದೆ. ಇಲ್ಲಿನ ಶಿವಲಿಂಗಕ್ಕೆ ಅಭಿಷೇಕ ಕುಂಭಾಭಿಷೇಕ ನಡೆಯುತ್ತದೆ. ಸೇರಿದ ಎಲ್ಲ ಜನರೂ ಊರಿನ ಗೌಡರ ಮೂಲಕ ಒಟ್ಟಾಗಿ ಅತಿವೃಷ್ಟಿ-ಅನಾವೃಷ್ಟಿಗಳ ಕಾರಣಕ್ಕೆ ಪ್ರಾರ್ಥನೆ ಸಲ್ಲಿಸುತ್ತಾರೆ. ಮಳೆ ಸಮೃದ್ಧಿಯಾಗಿ ಸುರಿದು ಫಸಲಿಗೆ ಅನುಕೂಲಕರವಾಗಿದ್ದರೆ ಕೃತಜ್ಞತಾಪೂರ್ವಕ ಪ್ರಾರ್ಥನೆ ಸಲ್ಲಿಸುತ್ತಾರೆ.

ಪೂಜಾ ಕಾರ್ಯಗಳು ನೆರವೇರಿದ ನಂತರ ಮೆರವಣಿಗೆಯಲ್ಲಿ ಭಾಗವಹಿಸಿದವರು, ದೇವರುಗಳು ಮಧ್ಯಾಹ್ನದ ವೇಳೆಗೆ ಕಿರಾಳಮ್ಮ ದೇವಿಯ ತೇರು ಬಯಲಿಗೆ ಬರುತ್ತಾರೆ. ಆಗ ತಾನೇ ತಯಾರಾದ ಬಿಸಿ ಬಿಸಿ ರಾಗಿಮುದ್ದೆ, ಅನ್ನಗಳನ್ನು ತರಕಾರಿ ಸಾಂಬಾರಿನೊಂದಿಗೆ ಸವಿಯುತ್ತಾರೆ. ಪರೇವು ಶುರುವಾಗುತ್ತಿದ್ದಂತೆ ಊರಿನ, ಅಕ್ಕಪಕ್ಕಗಳ ಹಳ್ಳಿಗಳ ಸಾವಿರಾರು ಜನರು ಸೇರಿ ರಾಗಿಮುದ್ದೆ ಪ್ರಸಾದ ಸ್ವೀಕರಿಸುತ್ತಾರೆ.  ಅಡಕೆ ಹಾಳೆ ತಟ್ಟೆಗಳಲ್ಲಿ ಬಫೆ ಮಾದರಿಯಲ್ಲಿ ಬಡಿಸಲಾಗುವ ಮುದ್ದೆ ಊಟವನ್ನು ಜನರು ವರ್ಗ-ಜಾತಿ ಭೇದಗಳಿಲ್ಲದೆ ಸ್ವೀಕರಿಸುತ್ತಾರೆ. ಈ ಬಗೆಯ ಸಾಮೂಹಿಕ ಪೂಜೆಗಳು ಮತ್ತು ಭೋಜನಗಳು ನಮ್ಮ ಸಮಾಜವನ್ನು ಒಂದಾಗಿ ಹಿಡಿದಿಡಲು ಸಹಕಾರಿಯಾಗಿದೆ ಎನ್ನುವದರಲ್ಲಿ ಸಂಶಯವಿಲ್ಲ.

ಮುದ್ದೆ ಪರೇವನ್ನು ಸಾಮಾಜಿಕ ಸಂಕಷ್ಟದ ಕಾಲದಲ್ಲಿ ಆಯೋಜಿಸುವ ಪರಿಪಾಠವಿದೆಯಾದರೆ, ವಾರ್ಷಿಕವಾಗಿ ಸೊಲ್ಲಾಪುರದ ಸಿದ್ಧರಾಮೇಶ್ವರ ಸನ್ನಿಧಿಯಲ್ಲಿ ವಿಜಯದಶಮಿಯಂದು ಹೋಳಿಗೆ ಪರೇವನ್ನು ಆಚರಿಸುವ ರೂಢಿಯೂ ಇದೆ. ಆ ದಿನ ಊರಿನ ಗೌಡರು ಸಂಜೆ ಬಯಲಿನಲ್ಲಿ ಅಂಬು ಹೊಡೆದ ನಂತರ, ಹೋಳಿಗೆ ಪರೇವಿನ ಔತಣಕೂಟವು ರಾತ್ರಿವೇಳೆ ನಡೆಯುತ್ತದೆ. ಆ ದಿನ ಸಂಜೆ ಊರಿನ ರೈತ ಕುಟುಂಬಗಳು ಅವರವರ ಮನೆಗಳಲ್ಲಿ ತಯಾರಿಸಿದ ಅನ್ನ, ಹೋಳಿಗೆ, ಕೋಸಂಬರಿ ಇತ್ಯಾದಿಗಳನ್ನು ಐದರಿಂದ ಹತ್ತು ಜನರಿಗೆ ಆಗುವಷ್ಟು ಮೀಸಲು ತೆಗೆದು ತಮ್ಮ ತಮ್ಮ ಸಮುದಾಯದ ದೇವಸ್ಥಾನಗಳಿಗೆ ನೀಡುತ್ತಾರೆ. ತೇರು ಬಯಲಿನಲ್ಲಿ ಕೂಡ ಈ ರೀತಿ ಮೀಸಲು ಎಡೆ ಅರ್ಪಿಸುವ ಸೌಲಭ್ಯವಿರುತ್ತದೆ.

ಹೋಳಿಗೆ ಪರೇವಿನ ಅನ್ನಸಂತರ್ಪಣೆಯಲ್ಲಿಯೂ ಜಾತಿಭೇದದ ಪ್ರಶ್ನೆಯೇ ಇರುವುದಿಲ್ಲ. ಮೀಸಲು ಎಡೆಗಳು ಸಂಗ್ರಹವಾಗಿರುವ ಎಲ್ಲಿಯೂ ತೆರಳಿ ಹೋಳಿಗೆ ಸವಿಯೂಟ ಸವಿಯಬಹುದು. ಪ್ರಸಾದ ರೂಪದ ಈ ಹೋಳಿಗೆ ಊಟವನ್ನು ತಾವೂ ಪಡೆಯಬೇಕೆಂದು ಅಜ್ಜಂಪುರದ ಸುತ್ತಮುತ್ತಲಿನ ಗ್ರಾಮಸ್ಥರು ಬರುವರು.

ಇಂಥ ಉತ್ಸವಗಳು ಯಾರದೋ ನೇತೃತ್ವ, ನಿರ್ದೇಶನದಲ್ಲಾಗಲೀ, ಆರ್ಥಿಕ ಸಹಕಾರದಿಂದಾಗಲೀ ನಡೆಯುವಂಥದಲ್ಲ. ಜನರು ಸ್ವಪ್ರೇರಣೆಯಿಂದ ಗ್ರಾಮದೇವತೆಯ ಸನ್ನಿಧಿಯಲ್ಲಿ ಕೈಗೊಳ್ಳಲಾದ ನಿರ್ಣಯಗಳಿಗೆ ಅನುಸಾರವಾಗಿ ಬದ್ಧರಾಗಿ ನಡೆದುಕೊಳ್ಳುತ್ತಾರೆ. ಈ ನಿರ್ಧಾರದ ಸುದ್ದಿಯು ತಮಟೆ ಬಾರಿಸುವ ವ್ಯಕ್ತಿಯಿಂದ ಇಡೀ ಊರಿಗೆ ಸಾರುವಂಥ ಏರ್ಪಾಡು ಮಾಡಲಾಗುತ್ತದೆ. ಇದೇ ಎಂದಿನ ಕಾಲದಿಂದಲೂ ನಡೆದು ಬಂದಿರುವ ಪರಿಣಾಮಕಾರೀ ಪಬ್ಲಿಕ್ ಕಮ್ಯೂನಿಕೇಷನ್ ಸಿಸ್ಟಮ್. ಇದಿಷ್ಟರಿಂದಲೇ ಪರೇವಿನ ಸುದ್ದಿ ಜನಜನಿತವಾಗುತ್ತದೆ. ಉತ್ಸವಕ್ಕೆ ಬೇಕಿರುವ ಹಣಕಾಸನ್ನು ದೈವಭಕ್ತರು, ಮುಖ್ಯವಾಗಿ ರೈತರು – ತಮಗೆ ನಿಗದಿಮಾಡಿದ ದೇಣಿಗೆಯನ್ನೋ ಪ್ರಾಮಾಣಿಕವಾಗಿ ನೀಡಿ, ದೈವದ ಆದೇಶವನ್ನು ಅಕ್ಷರಶಃ ಪಾಲಿಸುತ್ತಾರೆ. ಇಂಥದೊಂದು ಕಟ್ಟು-ಕಟ್ಟಲೆಯ ವ್ಯವಸ್ಥೆಯಿದೆ ಎನ್ನುವ ಕಾರಣಕ್ಕಾಗಿಯೇ ನಮ್ಮ ದೇಶದ ಗ್ರಾಮಾಂತರಗಳಲ್ಲಿ ನಡೆಯುವ ಉತ್ಸವಗಳು, ಕುಂದು ಬಾರದೇ ಶತಮಾನಗಳಿಂದ ಆಬಾಧಿತವಾಗಿ ನಡೆದುಬರಲು ಸಾಧ್ಯವಾಗಿದೆ.  ನಮ್ಮೂರು ಅಜ್ಜಂಪುರಕ್ಕೂ ಅಂಥ ಹಿನ್ನೆಲೆಯುಳ್ಳ ಆಚರಣೆಗಳು, ವಿಶೇಷಗಳು ಇವೆಯೆನ್ನುವುದು ಹೆಮ್ಮೆಯ ಸಂಗತಿ. 

ಕಾಮೆಂಟ್‌ಗಳು

  1. ನಿಮ್ಮ ಲೇಖನ ನೋಡಿ ತುಂಬಾ ಖುಷಿಯಾಯಿತು.ನಮ್ಮ ಅಜ್ಜಂಪುರದ ಬಗ್ಗೆ ಅಮೆರಿಕದಲ್ಲಿ ಕುಳಿತು ಮಾಹಿತಿ ಕಲೆ ಹಾಕಿ ಸಂಚಿಕೆ ಮಾಡಿರುವುದಕ್ಕೆ ತಮಗೆ ಅಜ್ಜಂಪುರದ ಎಲ್ಲರ ಪರವಾಗಿ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಲೇಖನ ಓದಿ ಸಂತೋಷವಾಯಿತು. ಪರೇವು ಶಬ್ದವನ್ನು ಪ್ರಥಮಬಾರಿಗೆ ಕೇಳಿದೆ. ಓಂದು ಗ್ರಾಮೀಣ ಸಂಭ್ರಮ ಸನ್ದರ್ಭವನ್ನು ಅರಿತಂತೆ ಆಯಿತು. ವಂದನೆಗಳು.ಚಿದಂಬರ ಸುಶೀಲ.

    ಪ್ರತ್ಯುತ್ತರಅಳಿಸಿ
  3. ನಿಮ್ಮ ಲೇಖನ ಓದಿ ಸಂತೋಷವಾಯಿತು. ಪರೇವು ಶಬ್ದವನ್ನು ಪ್ರಥಮಬಾರಿಗೆ ಕೇಳಿದೆ. ಓಂದು ಗ್ರಾಮೀಣ ಸಂಭ್ರಮ ಸನ್ದರ್ಭವನ್ನು ಅರಿತಂತೆ ಆಯಿತು. ವಂದನೆಗಳು.ಚಿದಂಬರ ಸುಶೀಲ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

87. ಬಂಗಾರದ ಭರವಸೆ ಹುಟ್ಟಿಸುವ ಹಣ್ಣೆ ಗುಡ್ಡ

82. "ಬಾರ್ನ್ ಹೆಡ್ ಮಾಸ್ಟರ್" ಅಜ್ಜಂಪುರ ವೆಂಕಟೇಶಮೂರ್ತಿ

ಮಹಾರಾಜರ ಕಟ್ಟೆ !