ಮರೆಯಾದ ಗ್ರಾಮೀಣ ಕಸುಬು - ಹಲ್ಲೆ ಹೊಡೆಯುವವರು ಹೋದರೆಲ್ಲಿ ?

ಆತ್ಮೀಯ ಓದುಗರೇ,
ಬಾಲ್ಯದ ನೆನಪುಗಳು ಯಾವಾಗಲೂ ಗಾಢ ಮತ್ತು ತೀವ್ರ. ಅದು ನೆನಪಿನ ಸಂಗ್ರಹದಿಂದ ಸುಲಭವಾಗಿ ಮಸಳಿಹೋಗದು. ನನ್ನ ಬಾಲ್ಯದಲ್ಲಿ ಎತ್ತುಗಳ ಕಾಲಿಗೆ ಹಲ್ಲೆ ಹೊಡೆಯುವ ಕೆಲಸವನ್ನು ಗಂಟೆಗಟ್ಟಲೆ ನೋಡುತ್ತ ನಿಲ್ಲುತ್ತಿದ್ದೆ. ಆಧುನಿಕತೆಯ ಭರಾಟೆಯಲ್ಲಿ ಮರೆಯಾಗುತ್ತಿರುವ ಈ ಕಸುಬು ಕೊನೆಯುಸಿರು ಎಳೆಯುತ್ತಿರುವ ಈ ದಿನಗಳಲ್ಲಿ  ಸ್ಮರಣೆಗೆ ಬಂದಿತು.  ನನ್ನ ಸಮಕಾಲೀನರು, ಹಿರಿಯರಿಗೆ ಇದೊಂದು ನೆನಪು ಮಾತ್ರವಾದರೆ, ಹಿಂದೆ ಹೀಗಿತ್ತು ಎಂಬ ಮಾಹಿತಿಯಾದರೂ ಕಿರಿಯರಿಗೆ ದೊರಕಲಿ ಎಂಬ ಉದ್ದೇಶದ ಈ ಬರಹ ನಿಮಗೆ ಇಷ್ಟವಾಯಿತೇ, ಬರೆದು ತಿಳಿಸಿ. 
ವಂದನೆಗಳೊಡನೆ,  

ಶಂಕರ ಅಜ್ಜಂಪುರ
ಇ-ಮೇಲ್ - shankarajp@gmail.com
---------------------------------------------------------------------------------------------------------------------------------------------------------------------------------------------


ಹಲ್ಲೆ ಅಥವಾ ಲಾಳ - ಎತ್ತುಗಳ ಪಾದರಕ್ಷೆ

ಅಜ್ಜಂಪುರದಲ್ಲಿ ಮುಸಲ್ಮಾನರ ವಸತಿ ಪ್ರದೇಶವು ಹಿಂದೆ ಬ್ರಾಹ್ಮಣರು ಹೆಚ್ಚಾಗಿ ಇರುತ್ತಿದ್ದ ಪ್ರದೇಶಕ್ಕೆ ಹೊಂದಿಕೊಂಡಂತಿದೆ. ಪ್ರಗತಿಯ ದೃಷ್ಟಿಯಿಂದ ಹೇಳುವುದಾದರೆ, ಮುಸಲ್ಮಾನರದೇ ಹೆಚ್ಚು ಎನ್ನಬಹುದು. ಇದನ್ನೇನೂ ಅಸೂಯೆಯಿಂದ ಹೇಳುತ್ತಿಲ್ಲ. ತಮ್ಮ ಶ್ರಮ ಜೀವನ ಮತ್ತು ಸರಕಾರಗಳ ಬೆಂಬಲದ ಫಲವಾಗಿ ಅವರು ಹೊಂದಿರುವ ಅಭಿವೃದ್ಧಿ ಮೆಚ್ಚತಕ್ಕುದೇ ಸರಿ. ಇದನ್ನು ನನ್ನ ಬಾಲ್ಯದಲ್ಲಿ ಎಂದರೆ, 1960ರ ದಶಕದಲ್ಲಿ ನೋಡಿದ ನೆನಪು. ಆ ದಿನಗಳಲ್ಲಿ ಅವರದು ಮಣ್ಣಿನ ಗುಡಿಸಿಲುಗಳು. ಅವುಗಳಿಗೆ ಛಾವಣಿಗೆಂದು ಆಪು ಅಥವಾ ಜೊಂಡನ್ನು ಹೊದಿಸಿರುತ್ತಿದ್ದರು. ಕೆಲವು ದಶಕಗಳು ಕಳೆದವು. ಅದೇ ಜಾಗಗಳಲ್ಲಿ ಕರಿಹೆಂಚಿನ, ಇನ್ನೂ ಸ್ವಲ್ಪ ವರ್ಷಗಳ ನಂತರ, ಮಂಗಳೂರು ಹೆಂಚಿನ ಮನೆಗಳು ಅಸ್ತಿತ್ವಕ್ಕೆ ಬಂದವು. ಈಗ ಅದೂ ಹಳೆಯದಾಗಿ ತಾರಸಿ ಕಟ್ಟಡಗಳು ಬಂದಿವೆ. ವಿಶೇಷವೆಂದರೆ ಇವೇ ಮನೆಗಳ ಸಾಲಿನಲ್ಲಿ ಚಿಕ್ಕದಾದ ಒಂದು ಹಿಂದೂ ಗುಡಿ ಕೂಡ ಇತ್ತು. ಮುಸಲ್ಮಾನರ ರಸ್ತೆಯಲ್ಲಿದ್ದ, ಅವರ ಮಾಲಿಕತ್ವದಲ್ಲಿದ್ದ ಮನೆಯಲ್ಲಿ ಹಿಂದೂಗಳು ವಾಸಿಸುತ್ತಿದ್ದರು. ಕೋಮು ಸೌಹಾರ್ದತೆ, ಮತೀಯ ಸಾಮರಸ್ಯ ಮುಂತಾದ ಪದಪುಂಜಗಳ ಪ್ರಯೋಗವಿಲ್ಲದೆಯೂ ಹೊಂದಾಣಿಕೆಯ ವಾತಾವರಣ ಇರುತ್ತಿತ್ತು, ಈಗಲೂ ಇದೆ. ಮುಂದೆ ಅವರಲ್ಲಿ ಕೆಲವರು ಸ್ಥಳೀಯ ರಾಜಕೀಯದಲ್ಲೂ ಭಾಗವಹಿಸಿ, ಜನಪ್ರತಿನಿಧಿಗಳಾಗಿದ್ದೂ ಇದೆ.  ಅವರಲ್ಲಿ ಒಂದು ಕುಟುಂಬದವರು ಮಾತ್ರ ಎತ್ತುಗಳಿಗೆ ಹಲ್ಲೆ ಹೊಡೆಯುವ ಕೆಲಸವನ್ನು ಮಾಡುತ್ತಿದ್ದರು. ಉಳಿದವರು ಪಾತ್ರೆಗಳಿಗೆ ಕಲಾಯಿ ಮಾಡುವುದು, ಹಣ್ಣು ವ್ಯಾಪಾರ ಮಾಡುವುದು ಮುಂತಾದ ಹಲವು ವೃತ್ತಿಗಳಲ್ಲಿ ತೊಡಗಿಕೊಂಡವರಿದ್ದರು.

ಅಜ್ಜಂಪುರದ ಕೋಟೆರಸ್ತೆಯ ಮೂಲಕ ಮುಸಲ್ಮಾನರ ವಸತಿಗಳಿರುವ ರಸ್ತೆಯಲ್ಲಿ ಬಂದರೆ ಚಂದಮಾಮದ ಕಥೆಗಳಲ್ಲಿ ಕಾಣುವಂಥ ಅನೇಕ ಅಂಕುಡೊಂಕುಗಳಿಂದ, ಗಡ್ಡೆಗಳಿಂದ ಕೂಡಿದ ಒಂದು ಬುಗುರಿ ಮರ. ಅದರ ಎದುರಿನ ರಸ್ತೆಯಲ್ಲಿ ಒಂದು ಅರಳಿ ಮರ, ಅದರ ಹಿಂದೆ ರಾಮರಾಯನ ಗುಂಡಿ ಎಂದು ಕರೆಯಲಾಗುತ್ತಿದ್ದ ತಗ್ಗು ಪ್ರದೇಶ. ಈ ಬುಗುರಿ ಮರದಡಿಯಲ್ಲಿ ಪ್ರತಿದಿನವೂ ಬೆಳಗಿನ ಇಲ್ಲವೇ ಸಂಜೆಯ ತಂಪುಹೊತ್ತಿನಲ್ಲಿ ರೈತರ ಎತ್ತುಗಳ ಕಾಲಿಗೆ ಹಲ್ಲೆ ಹೊಡೆಯುವ ಕಾರ್ಯ ನಿರಂತರವಾಗಿ ನೆಡೆಯುತ್ತಿತ್ತು. ಅದನ್ನು ತುಂಬ ಆಸ್ಥೆಯಿಂದ, ಕುತೂಹಲದಿಂದ ನಾನು ನಿಂತು ಗಮನಿಸುತ್ತಿದ್ದೆನಾದ್ದರಿಂದ, ಅದರ ನೆನಪುಗಳು ಹಾಗೆಯೇ ಉಳಿದಿವೆ.
ಹಲ್ಲೆಗಳನ್ನು ಎತ್ತುಗಳ ಕಾಲಿಗೆ ಹೊಡೆಯುವ ಮೊದಲು ನಡೆಸಲಾಗುವ ಸಿದ್ಧತೆ
ರೈತರು ಬೆಳಿಗ್ಗೆಯೇ ಬಂದು ತಮ್ಮ ಎತ್ತುಗಳಿಗೆ ಹಲ್ಲೆ ಹೊಡೆಸಲು ಕಾಯುತ್ತಿದ್ದರು. ಕುದುರೆಗಳ ಕಾಲಿಗೆ ತೊಡಿಸುವ ಕಬ್ಬಿಣದ ವಸ್ತುವನ್ನು ಲಾಳ ಎಂದು ಕರೆಯುವಂತೆ, ಎತ್ತುಗಳ ಕಾಲಿಗೆ ತೊಡಿಸುವುದನ್ನು ನಮ್ಮ ಕಡೆ ಹಲ್ಲೆ ಎಂದು ಕರೆಯುತ್ತಿದ್ದರು. ಅದನ್ನು ಲಾಳ ಎಂದೂ ಕರೆಯುವುದಿದೆ. ಕುದುರೆಗಳ ಕಾಲಿನ ಗೊರಸಿನಲ್ಲಿ ಸೀಳು ಇರುವುದಿಲ್ಲವಾಗಿ, ಅದು ಅರೆ ವೃತ್ತಾಕಾರದಲ್ಲಿರುತ್ತದೆ. ಎತ್ತಿನ ಗೊರಸುಗಳು ಸೀಳಾಗಿರುವುದರಿಂದ ನಾಲ್ಕು ಕಾಲಿಗೆ ಎಂಟು ತುಂಡು ಹಲ್ಲೆಗಳನ್ನು ಕೂಡಿಸಬೇಕಾಗುತ್ತದೆ. ನಮಗೆ ಕಾಲಿಗೆ ಚಪ್ಪಲಿಯಿದ್ದಂತೆ ಅವುಗಳಿಗೆ ಹಲ್ಲೆಗಳು. ಗೊರಸುಗಳು ನಮ್ಮ ಉಗುರಿನಂಥ ವಸ್ತುವಾದ್ದರಿಂದ ಅದಕ್ಕೆ ಮೊಳೆ ಹೊಡೆದು ಹಲ್ಲೆಗಳನ್ನು ಭದ್ರಪಡಿಸಲಾಗುತ್ತದೆ. ಅವುಗಳಿಗೆ ಬಳಸುವ ಮೊಳೆಗಳ ತಲೆ ಚೌಕಾಕಾರಕ್ಕೆ ಇದ್ದು ದಪ್ಪವಾಗಿರುತ್ತದೆ ಹಾಗೂ ಕಾಂಡವು ಸಪೂರವಾಗಿರುತ್ತದೆ. ಅದು ಇತರ ಕಬ್ಬಿಣದ ಮೊಳೆಗಳಂತೆ ತೀರ ಗಟ್ಟಿಯಾಗಿರದೇ, ಕತ್ತರಿಸಲು, ಮಡಿಸಲು ಸುಲಭವಾಗುವಂತೆ ಮೆದು ಕಬ್ಬಿಣದಿಂದ ತಯಾರಿಸಿರುತ್ತಾರೆ. ಹಲ್ಲೆಗಳಲ್ಲಿ ನಾಲ್ಕು ಅಥವಾ ಐದು ಚೌಕಾಕಾರದ ತೂತುಗಳಿರುತ್ತವೆ. ಮೊದಲು ಅವುಗಳನ್ನು ಎತ್ತುಗಳ ಕಾಲಿಗೆ ಸೂಕ್ತವಾಗಿ ಹೊಂದಿಕೊಳ್ಳುವಂತೆ ಬಡಿದು, ಅವುಗಳಲ್ಲಿನ ತೂತುಗಳು ಸರಿಯಾಗಿರುವಂತೆ ಮಾಡಲಾಗುತ್ತದೆ.
ಹಲ್ಲೆ ಹೊಡೆಯಲು ಅಗತ್ಯವಾದ ಹತಾರಗಳು

ಹಲ್ಲೆಯನ್ನು ಹೊಡೆಯುವ ಎತ್ತನ್ನು ವಿಶಿಷ್ಟ ಭಂಗಿಯಲ್ಲಿ ಮಲಗಿಸುತ್ತಾರೆ. ಅದನ್ನು ಮಲಗಿಸುವ ವಿಧಾನವೂ ರೋಚಕವಾಗಿರುತ್ತದೆ. ಏಕೆಂದರೆ, ಸ್ವಲ್ಪ ರೇಗಿಸಿದರೆ, ಎದುರಿಗಿರುವವರನ್ನು ತಿವಿಯಲು ಮುಂದಾಗುವಷ್ಟು ರೋಷ ಹೊಂದಿರುವ ಎತ್ತುಗಳ ಸೊಂಟಕ್ಕೆ ದಪ್ಪ ಹಗ್ಗವನ್ನು ಸುತ್ತಿ, ಅದನ್ನು ಬಿಗಿಗೊಳಿಸಿದಾಗ, ನಿರ್ವೀರ್ಯವಾಗಿ ಬಗ್ಗುತ್ತವೆ. ಆಗ ಅದನ್ನು ನಿಧಾನವಾಗಿ, ಗಾಯ ಅಥವಾ ಏಟುಗಳಾಗದಂತೆ ಬೀಳಿಸಿ, ಅದರ ನಾಲ್ಕುಕಾಲುಗಳಿಗೆ ಸೊಂಟಕ್ಕೆ ಸುತ್ತಿದ ಹಗ್ಗವನ್ನೇ ಬಿಚ್ಚಿ, ನಾಲ್ಕು ಕಾಲುಗಳು ಒಂದೆಡೆ ಸೇರುವಂತೆ ಕಟ್ಟಲಾಗುವುದು. ನಂತರ ಕೆಲವೊಮ್ಮೆ ಎತ್ತು ತಕರಾರು ಮಾಡುತ್ತದೆಯೆನಿಸಿದರೆ, ಅದರ ಕುತ್ತಿಗೆಯನ್ನು ಒಂದೆಡೆಗೆ ತಿರುಚಿ ಹಿಡಿದು, ಅಲ್ಲೊಬ್ಬರು ಅದರ ಕೋಡನ್ನು ಹಿಡಿದು ಕೂಡುತ್ತಾರೆ. ಹಳೆಯ ಹಲ್ಲೆಗಳನ್ನು ಬಿಚ್ಚುವುದು ಮೊದಲ ಕೆಲಸ. ನಂತರ ಅದರ ನಾಲ್ಕೂ ಗೊರಸುಗಳನ್ನು ಅರದಿಂದ ಉಜ್ಜಿ, ಅವು ಮಟ್ಟವಿಲ್ಲದಿದ್ದರೆ, ಉಳಿಯಿಂದ ಕತ್ತರಿಸಿ ಮಟ್ಟ ಮಾಡಿಕೊಳ್ಳುತ್ತಾರೆ. ನಂತರ ಹಲ್ಲೆಗಳನ್ನು, ಆಯಾ ಗೊರಸಿನ ಆಕಾರಕ್ಕೆ ತಟ್ಟಿಕೊಂಡು, ಕಬ್ಬಿಣದ ಮೊಳೆಗಳನ್ನು ಇಟ್ಟು ಬಡಿಯುವರು. ಫಳ ಫಳ ಹೊಳೆಯುತ್ತಿದ್ದ ಆ ಮೊಳೆಗಳ ತುದಿಗಳನ್ನು ಕೆಲವೊಮ್ಮೆ ಸುರಳಿಯಾಕಾರದಲ್ಲಿ ಸುತ್ತಿ ಬಡಿಯುವರು. ಹೀಗೆ ಬಡಿದ ಸುರಳಿಗಳು ಒಂದು ವಿನ್ಯಾಸದಂತೆ ಕಾಣುತ್ತಿತ್ತು. ಕೆಲವೊಮ್ಮೆ ಮಟ್ಟವಾಗಿ ಕತ್ತರಿಸಿ, ಅರದಲ್ಲಿ ಉಜ್ಜಿ ಗೊರಸಿನ ಮೇಲ್ಮೈಗೆ ಸರಿಹೊಂದುವಂತೆ ಮಟ್ಟ ಮಾಡುವರು. ನಾಲ್ಕು ಕಾಲುಗಳಿಗೆ ಹಲ್ಲೆ ತೊಡಿಸಲು ಕನಿಷ್ಟ ಅರ್ಧ, ಮುಕ್ಕಾಲು ಗಂಟೆಯಾದರೂ ತಗುಲುತ್ತಿತ್ತು. ಇದನ್ನು ಮಾಡುವಾಗ ಅವರ ಕುಶಲತೆ, ಎತ್ತುಗಳ ಕಾಲಿಗೆ ಗಾಯವಾಗದಂತೆ ನೋಡಿಕೊಳ್ಳುವುದರಲ್ಲಿ ಇರುತ್ತಿತ್ತು. ಎತ್ತುಗಳನ್ನು ಒಂದು ಮಗ್ಗುಲಿನಿಂದ ಇನ್ನೊಂದು ಮಗ್ಗುಲು ಹೊರಳಿಸುವಾಗಲೂ ತುಂಬ ಎಚ್ಚರಿಕೆ ವಹಿಸುತ್ತಿದ್ದರು.  ಏಕೆಂದರೆ ಕಾಲು ಊನವಾದರೆ, ಎತ್ತಿನ ಮೌಲ್ಯವೇ ನಾಶವಾಗುತ್ತಿತ್ತು. ಹಲ್ಲೆಯ ಕೆಲಸ ಮುಗಿದೊಡನೆ, ಕಾಲಿನ ಹಗ್ಗಗಳನ್ನು ಬಿಚ್ಚುತ್ತಿದ್ದರು. ಬಂಧನದಿಂದ ಬಿಡುಗಡೆಯಾದ ಸಂತಸದಲ್ಲಿ ಎತ್ತು ಏಳಲು ಶ್ರಮಪಡುತ್ತಿತ್ತು. ಅದರ ಮೈ-ಬೆನ್ನುಗಳನ್ನು ಚಪ್ಪರಿಸಿ, ಏಳಲು ಹುರುಪು ನೀಡುತ್ತಿದ್ದರು. ಎತ್ತು ತನ್ನ ನಾಲ್ಕು ಕಾಲುಗಳ ಮೇಲೆ ನಿಂತು ನಾಲ್ಕಾರು ಹೆಜ್ಜೆ ನಡೆದಾಡಿದಾಗ, ಹಲ್ಲೆ ತೊಡಿಸಿದ ಸಾರ್ಥಕತೆಯನ್ನು ರೈತರು, ಹೊಡೆದವರು ಇಬ್ಬರೂ ಆನಂದಿಸುತ್ತಿದ್ದರು. ರೈತರೊಡನೆ ತಮ್ಮ ವಿಶಿಷ್ಟ ಕನ್ನಡದಲ್ಲಿ ಸಂಭಾಷಿಸುತ್ತ, ಅವರೊಡನೆ ಬೀಡಿ, ಕಷ್ಟ ಸುಖಗಳನ್ನು ಹಂಚಿಕೊಂಡು, ನಡೆಸುತ್ತಿದ್ದ ವೃತ್ತಿಯಲ್ಲಿ ಹೊಂದಾಣಿಕೆಯ ಭಾವವಿರುತ್ತಿತ್ತು. ಪರಸ್ಪರ ಅವಲಂಬನೆ ಅನಿವಾರ್ಯವಾಗಿದ್ದುದರಿಂದ, ಅದು ಸಾಮಾಜಿಕ  ಸ್ವಾಸ್ಥ್ಯಕ್ಕೆ ದಾರಿಯಾಗಿತ್ತು. ತಿಂಗಳು, ಎರಡು ತಿಂಗಳಿಗೊಮ್ಮೆ ಹಲ್ಲೆ ಬದಲಾಯಿಸುವ ಕೆಲಸ ನಡೆಯುತ್ತಿತ್ತು. ವಿಶೇಷವಾಗಿ ಪ್ರತಿವರ್ಷ ನಡೆಯುತ್ತಿದ್ದ ದನಗಳ ಜಾತ್ರೆಯಲ್ಲಿ ಹಲ್ಲೆ ಹೊಡೆಯುವ ಕೆಲಸದ ಸುಗ್ಗಿ ಎನ್ನುವಂಥ ದಿನಗಳಿದ್ದವು.

ಬದಲಾದ ಈ ದಿನಮಾನಗಳಲ್ಲಿ ರೈತರ ಬಳಿ ಎತ್ತುಗಳೂ ಕಡಿಮೆಯಾಗಿವೆ. ಅವುಗಳಿಗೆ ಹಲ್ಲೆ ತೊಡಿಸುವುದೂ ಕಷ್ಟಕರವಾಗುತ್ತಿದೆ. ಇಂದು ವ್ಯವಸಾಯದ ಕೆಲಸಗಳಿಗೆ ಟ್ರಾಕ್ಟರುಗಳನ್ನು ಬಾಡಿಗೆಗೆ ತಂದು ಉಳುಮೆ ಮಾಡುವ ಪದ್ಧತಿ ಬಂದಿರುವುದರಿಂದ ಎತ್ತುಗಳ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಗ್ರಾಮೀಣ ಬದುಕಿನ ಹಲವಾರು ವೃತ್ತಿಗಳು ಮರೆಯಾದಂತೆ ಇದೂ ಕ್ಷೀಣವಾಗುತ್ತಿರುವುದು ಸ್ವಾಭಾವಿಕವೇ ಸರಿ. ಆದರೆ ನೆನಪಿನ ಉಗ್ರಾಣದಲ್ಲಾದರೂ ಇರಲೆಂಬ ಆಶಯದಿಂದ ಇದನ್ನು ದಾಖಲಿಸಿದ್ದೇನೆ.

ಆ ಕಾಲದಲ್ಲಿ ಇವೆಲ್ಲ ಚಿತ್ರ ತೆಗೆಯುವ ವಿಶೇಷಗಳೇನೂ ಆಗಿರಲಿಲ್ಲವಾದ ಕಾರಣ, ಚಿತ್ರಗಳು ನನಗೆ ಲಭ್ಯವಾಗಲಿಲ್ಲ. ಆದರೆ ಅಂತರಜಾಲದಲ್ಲಿ ಶ್ರೀ ಡಿ.ಕೆ. ಮಲ್ಲಿಕಾರ್ಜುನ ಎಂಬುವವರು ತೆಗೆದ ಚಿತ್ರಗಳನ್ನೇ ಇಲ್ಲಿ ಬಳಸಿದ್ದೇನೆ. ಅವರಿಗೆ ನನ್ನ ಕೃತಜ್ಞತೆಗಳು. ಅವರ ಅನುಮತಿ ಪಡೆದು ಇದನ್ನು ಮಾಡಬೇಕಿದ್ದರೂ, ಸಂಪರ್ಕಿಸಲು ಅವರ ಈ-ಮೇಲ್ ವಿಳಾಸ ಲಭ್ಯವಿಲ್ಲವಾಗಿ ಹೀಗೆ ಮಾಡಬೇಕಾಯಿತು. ಅವರು ಅನ್ಯಥಾ ಭಾವಿಸಲಾರರೆಂದು ತಿಳಿಯುವೆ.


* * * * * *  

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

87. ಬಂಗಾರದ ಭರವಸೆ ಹುಟ್ಟಿಸುವ ಹಣ್ಣೆ ಗುಡ್ಡ

82. "ಬಾರ್ನ್ ಹೆಡ್ ಮಾಸ್ಟರ್" ಅಜ್ಜಂಪುರ ವೆಂಕಟೇಶಮೂರ್ತಿ

ಮಹಾರಾಜರ ಕಟ್ಟೆ !