ಶ್ರೀ ವಿಠಲ ರುಕ್ಮಾಯೀ ಮಂದಿರ, ಅಜ್ಜಂಪುರ

                                        ಎಲ್ಲರಿಗೂ 2017 ನೂತನ ವರ್ಷದ ಶುಭಾಶಯಗಳು


ಅಜ್ಜಂಪುರದ ದೇವಾಲಯಗಳ ಬಗ್ಗೆ ಲೇಖನಗಳು ಆಗೀಗ ಪ್ರಕಟವಾಗುತ್ತಿದೆಯಷ್ಟೆ. ನಾನು ಅಜ್ಜಂಪುರಕ್ಕೆ ಬಂದಾಗಲೆಲ್ಲ, ಒಂದಲ್ಲ ಒಂದು ದೇವಾಲಯಗಳ ಬಗ್ಗೆ ಮಾಹಿತಿ ಪಡೆದು ಲೇಖನಗಳನ್ನು ಪ್ರಕಟಿಸುವುದು ವಾಡಿಕೆ. ಇತ್ತೀಚಿನ ನನ್ನ ಭೇಟಿಯಲ್ಲಿ ಅಜ್ಜಂಪುರದಲ್ಲಿರುವ ನನ್ನ ಬಾಲ್ಯ ಮಿತ್ರ, ಬಟ್ಟೆಗಳ ವರ್ತಕ ಶ್ರೀ ಮೈಲಾರಿ ರಾವ್ ಅವರನ್ನು ಅವರ ಸಮುದಾಯದ ದೇವಾಲಯದ ಕುರಿತು ಮಾಹಿತಿಗಳಿಗೆಂದು ಕೇಳಿದಾಗ, ವಿವರಗಳನ್ನು ನೀಡಿದರು. ಇದನ್ನು ಆಧರಿಸಿದ ಲೇಖನ ಇಲ್ಲಿದೆ. ಇದಕ್ಕೆ ಚಿತ್ರಗಳ ಅವಶ್ಯಕತೆಯೆಂದಾಗ ಎಂದಿನಂತೆ ಮಿತ್ರ ಅಪೂರ್ವ ಬಸು ನೆರವಿಗೆ ಬಂದರು. ತಮ್ಮ ಸಂಗ್ರಹದಿಂದ ಚಿತ್ರಗಳನ್ನು ಕಳಿಸಿದರು. 

ಇನ್ನೂ ಹಲವು ಸಮುದಾಯಗಳ ದೇವಾಲಯ, ಕಲ್ಯಾಣ ಮಂಟಪ ಮುಂತಾದವುಗಳ ಬಗ್ಗೆ ಬರೆಯುವುದಿದೆ. ಕಂಪ್ಯೂಟರ್ ತಿಳುವಳಿಕೆಯುಳ್ಳ ನಮ್ಮೂರ ಯುವಜನರು ಈ ಲೇಖನಗಳನ್ನು ತಮ್ಮ ಬಿಡುವಿನ ವೇಳೆಯಲ್ಲಿ ಮನೆಯಲ್ಲಿನ ಹಿರಿಯರಿಗೆ ತೋರಿಸುವುದರಿಂದ, ಅವರ ತಮ್ಮ ನೆನಪುಗಳನ್ನು ಹಂಚಿಕೊಳ್ಳಲು ಸಹಾಯಕವಾಗುತ್ತದೆ. ಇಂಥದೊಂದು ಕೆಲಸವನ್ನು ನಮ್ಮ ಯುವಜನತೆ ಮಾಡಲಿ ಎನ್ನುವುದು ಆಶಯ.
-ಶಂಕರ ಅಜ್ಜಂಪುರ
ದೂರವಾಣಿ - 99866 72483

-----------------------------------------------------------------------------------------------------------------------------------------------

 
 ಕಲ್ಯಾಣ ಮಂಟಪ - ವಿಠಲ ಮಂದಿರ
     ದೀಪಾಲಂಕೃತ
   ಕಲ್ಯಾಣಮಂಟಪ

ಪಂಢರಾಪುರದ ವಿಠಲನ
ಮೂಲಮೂರ್ತಿಯ ಚಿತ್ರ
  

       
ಅಜ್ಜಂಪುರದಲ್ಲಿ ಹಲವು ಸಮುದಾಯಗಳ ಸಹಬಾಳ್ವೆ ಎಂದಿನಿಂದಲೂ ಆಬಾಧಿತವಾಗಿ ನಡೆದು ಬಂದಿದೆ. ಇದನ್ನು ಇತ್ತೀಚೆಗೆ ಮತೀಯ ಸಾಮರಸ್ಯ, ಕೋಮು ಸೌಹಾರ್ದ ಮುಂತಾದ ವಿಶೇಷಣಗಳಿಂದ ಹೆಸರಿಸುತ್ತ, ಅದೇನೋ ಒಂದು ವಿಶೇಷವೆಂಬಂತೆ ಬಿಂಬಿಸಲಾಗುತ್ತದೆ. ಅಜ್ಜಂಪುರದ ಮಟ್ಟಿಗೆ ಇವೆಲ್ಲ ಸರ್ವಸಾಧಾರಣ ಸಂಗತಿಗಳೇ ಸರಿ. ಈಗಾಗಲೇ ಹಿಂದಿನ ಕೆಲವು ಲೇಖನಗಳಲ್ಲಿ ಪ್ರಸ್ತಾಪಿಸಲಾಗಿರುವಂತೆ, ಕುರುಬರು, ಲಿಂಗಾಯತರು, ಮರಾಠೆಯವರು, ಜೈನರು, ಮುಸ್ಲಿಮರು, ವೈಶ್ಯರು, ಬ್ರಾಹ್ಮಣರು ಮುಂತಾಗಿ ಎಲ್ಲ ಸಮುದಾಯಗಳ ಜನ ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಅವರವರ ದೈವಾರಾಧನೆಗಳು, ಉತ್ಸವಗಳು ಕೇವಲ ಆಯಾ ಸಮುದಾಯಕ್ಕೆ ಸೀಮಿತವಾಗದೇ, ಊರೊಟ್ಟಿನ ಕಾರ್ಯವಾಗಿ ನೆರವೇರುತ್ತದೆ. ಎಲ್ಲರೂ ಭಾಗವಹಿಸುತ್ತಾರೆ, ಸಹಕಾರ ನೀಡುತ್ತಾರೆ. ನಗರ ಪ್ರದೇಶಗಳಲ್ಲಿ ಇಂಥ ವ್ಯವಸ್ಥೆ ನಿಧಾನವಾಗಿ ಮರೆಯಾಗುತ್ತಿರುವುದನ್ನು ಗಮನಿಸಿದರೆ, ಅಜ್ಜಂಪುರದಂಥ ಚಿಕ್ಕ-ಪುಟ್ಟ ಹೋಬಳಿಗಳಲ್ಲಿನ ಹೊಂದಾಣಿಕೆಯ ಮಹತ್ವ ಅರ್ಥವಾದೀತು.

ಗರ್ಭಗೃಹದಲ್ಲಿನ ಮೂಲ ವಿಗ್ರಹ
ಹಾಗೂ ಉತ್ಸವಮೂರ್ತಿ

ಅಜ್ಜಂಪುರದಲ್ಲಿನ ವಿವಿಧ ಸಮುದಾಯಗಳಲ್ಲಿ ಭಾವಸಾರ ಕ್ಷತ್ರಿಯ ಸಮಾಜವೂ ಇದೆ. ಬಟ್ಟೆ ವ್ಯಾಪಾರ, ಹೊಲಿಗೆ ಮುಂತಾದ ವೃತ್ತಿಗಳಲ್ಲಿ ಕುಶಲತೆಯಿರುವ ಈ ಸಮಾಜದ ಆರಾಧ್ಯದೈವ ಪಾಂಡುರಂಗ ವಿಠಲ. ಮಹಾರಾಷ್ಟ್ರದ ವಿಠಲ ಕನ್ನಡಿಗನೆನ್ನುವುದನ್ನು ಮಹಾರಾಷ್ಟ್ರೀಯರು ತುಂಬ ಗೌರವದಿಂದ ನೆನೆಯುತ್ತಾರೆ. ಆತನನ್ನು ಕಾನಡೀ ವಿಠಲ ಎಂದು ಸಂಬೋಧಿಸುವುದೂ ಇದೆ.


ಅಜ್ಜಂಪುರದಲ್ಲಿರುವ ವಿಠಲ ರುಕುಮಾಯೀ ಮಂದಿರವು ನಡೆಸಿಕೊಂಡು ಬರುತ್ತಿರುವ ದಿಂಡೀ ಉತ್ಸವಕ್ಕೆ ಸದ್ಯದಲ್ಲೇ ಶತಮಾನದ ಮೆರುಗು ಬರಲಿದೆ. 98 ವರ್ಷಗಳ ಇತಿಹಾಸ ಹೊಂದಿರುವ ಈ ಮಂದಿರ, ಈಗಿರುವ ಸ್ಥಳದಲ್ಲಿ ಬರುವುದಕ್ಕೆ ಮುಂಚೆ, ಊರಿನ ಪೇಟೆ ಭಾಗದಲ್ಲಿತ್ತು. ಆಗಿನಿಂದ ಅದರ ಚಟುವಟಿಕೆಗಳು, ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬಂದ ಕಾರಣದಿಂದಲೇ, ಇಂದಿನ ಹೊಸ ಕಟ್ಟಡ, ಕಲ್ಯಾಣಮಂಟಪ, ನಿತ್ಯ ಪೂಜಾರಾಧನೆ ಮುಂತಾದವು ಸಾಧ್ಯವಾಯಿತು.


ಭಾವಸಾರ ಕ್ಷತ್ರಿಯ ಸಮಾಜದ ಮೊದಲ ಅಧ್ಯಕ್ಷರು ಪುಠಾಣೆಕರ್ ಸಂತೋಜಿ ರಾವ್. ನಂತರ  ಜಿ. ಶಂಭೋಜಿ ರಾವ್, ಎನ್. ನಾರಾಯಣ ರಾವ್ (ಮಹದಳ್ಕರ್), ಪಿ.ಕೆ. ರಾಮಚಂದ್ರರಾವ್ ಮುಂತಾಗಿ ನಡೆದು ಬಂದು ಈಗ ಜನಾರ್ದನ ರಾವ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಿರಿಯರಾದ ಎನ್. ನಾಗರಾಜರಾವ್ (ಬ್ಯಾಂಕ್) ಪೂಜೆ, ಉತ್ಸವಗಳಲ್ಲಿ ಸಕ್ರಿಯವಾಗಿ ಇಂದೂ ಭಾಗವಹಿಸುತ್ತಾರೆ.

ಪೇಟೆ ಬೀದಿಯಲ್ಲಿ ದಿಂಡಿ ಉತ್ಸವದ ಮೆರವಣಿಗೆ ಪ್ರತಿವರ್ಷ ಆಷಾಢ ಶುದ್ಧ ಏಕಾದಶಿಯಂದು ದಿಂಡಿ ಮಹೋತ್ಸವ ಜರುಗುತ್ತದೆ. ವಿಶೇಷವೆಂದರೆ ಪಂಢರಾಪುರದಲ್ಲೂ ಅದೇ ದಿನ ದಿಂಡಿ ಉತ್ಸವ ನಡೆಯುತ್ತದೆ. ಹಾಗಾಗಿ ಅಜ್ಜಂಪುರದ ಭಕ್ತರಿಗೆ ಇದು ವಿಶೇಷದ ದಿನವೂ ಹೌದು. ಪ್ರತಿ ಶನಿವಾರ ರಾತ್ರಿ ಭಜನೆಯ ಮೂಲಕ ಪಾಂಡುರಂಗನ ಆರಾಧನೆಯನ್ನು ಭಾವಸಾರ ಕ್ಷತ್ರಿಯ ಮಂಡಲಿ ನಿರಂತರವಾಗಿ ನಡೆಸುತ್ತಬಂದಿದೆ. ಸಂತ ತುಕಾರಾಮ್, ಸಂತ ಜ್ಞಾನದೇವರ ಅಭಂಗಗಳನ್ನು ತಾಳ-ಮೃದಂಗಗಳೊಂದಿಗೆ ಹಾಡಿ ಕುಣಿಯುತ್ತಾರೆ. ದಿಂಡಿ ಉತ್ಸವದ ಸಂದರ್ಭದಲ್ಲಿ ಅನೇಕ ಸಾಧು-ಸಂತರು, ಕಥಾಕಾಲಕ್ಷೇಪ ವಿದ್ವಾಂಸರು, ಭಜನಾಮಂಡಲಿಗಳ ಸದಸ್ಯರು ಮುಂತಾಗಿ ದೊಡ್ಡ ನೆರವಿಯೇ ಸೇರಿರುತ್ತದೆ. ಮುಖ್ಯವಾಗಿ ಪೇಟೆಬೀದಿಯಲ್ಲಿ ಶೋಭಾಯಾತ್ರೆ ನಡೆಯುತ್ತದೆ. ಆಗ ಭಕ್ತರು ಸಂತರ ಪಾದತೊಳೆದು ಪೂಜಿಸುತ್ತಾರೆ. ನಂತರ ಮಂದಿರದಲ್ಲಿ ಅನ್ನಸಂತರ್ಪಣೆ ನಡೆಯುತ್ತದೆ. ಅರಸೀಕೆರೆ, ತಿಪಟೂರು, ತುಮಕೂರು, ಶಿವಮೊಗ್ಗ, ಭದ್ರಾವತಿ, ಹುಬ್ಬಳ್ಳಿ, ದಾವಣಗೆರೆ,ರಾಣಿಬೆನ್ನೂರು, ಹೊಸದುರ್ಗ, ಚಿತ್ರದುರ್ಗ ಮುಂತಾಗಿ ಕರ್ನಾಟಕದ ಎಲ್ಲ ಭಾಗಗಳಿಂದ ಭಕ್ತಾದಿಗಳು ಈ ಸಂದರ್ಭದಲ್ಲಿ ಅಜ್ಜಂಪುರಕ್ಕೆ ಆಗಮಿಸುತ್ತಾರೆ. ಹೀಗೆ ಬರುವ ಜನರ ಪ್ರಯಾಣದ ವೆಚ್ಚ ಸೇರಿದಂತೆ ಊಟೋಪಚಾರ ವ್ಯವಸ್ಥೆಗಳನ್ನು ಅಜ್ಜಂಪುರದ ವಿಠಲ ಮಂದಿರದ ಸಮಿತಿಯೇ ನಿರ್ವಹಿಸುತ್ತದೆ.  ಅಖಂಡ ಭಜನೆ, ಊರೊಳಗಿನ ಉತ್ಸವ, ಮೆರವಣಿಗೆಗಳು ಹಬ್ಬದ ವಾತಾವರಣವನ್ನು ನಿರ್ಮಿಸುತ್ತದೆ. 


ಇದಲ್ಲದೆ ಶ್ರೀಕೃಷ್ಣ ಜನ್ಮಾಷ್ಟಮಿ, ಕಾರ್ತೀಕ ಮಾಸದ ಪೂಜಾದಿಗಳು, ಧನುರ್ಮಾಸದ ಪ್ರಾತಃಕಾಲದ ಭಜನೆ, ಪೂಜೆಗಳು ನಡೆಯುತ್ತವೆ. ಸಂಕ್ರಾಂತಿಯಂದು ಈ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯುತ್ತದೆ. ಸಮಾಜದಲ್ಲಿನ ಸೌಹಾರ್ದತೆಯಿಂದಾಗಿ ಇದೆಲ್ಲ ಸಾಧ್ಯವಾಗಿದೆ. ಹಿಂದಿನ ಸಂಪ್ರದಾಯವನ್ನೇ ಮುಂದುವರೆಸಿಕೊಳ್ಳುತ್ತ ಬರುತ್ತಿರುವುದರಿಂದಲೇ, ದಿಂಡಿ ಉತ್ಸವದ ದಿನ ಸೇರುವ ಎರಡು-ಮೂರು ಸಾವಿರದ ಜನರಿಗೆ ಪ್ರಸಾದ ವಿತರಣೆ ನಡೆಯುತ್ತಿದೆ. 
-0-0-0-0-

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

87. ಬಂಗಾರದ ಭರವಸೆ ಹುಟ್ಟಿಸುವ ಹಣ್ಣೆ ಗುಡ್ಡ

82. "ಬಾರ್ನ್ ಹೆಡ್ ಮಾಸ್ಟರ್" ಅಜ್ಜಂಪುರ ವೆಂಕಟೇಶಮೂರ್ತಿ

ಮಹಾರಾಜರ ಕಟ್ಟೆ !