70. ಅಜ್ಜಂಪುರದ ಶ್ರೀ ಕೋಟೆ ಆಂಜನೇಯ ದೇವಾಲಯ


ಆತ್ಮೀಯರೇ,
ಅಜ್ಜಂಪುರದ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕಗಳು ಜರುಗಿ ಸರಿಯಾಗಿ ಒಂದು ದಶಕದ ನಂತರ ಈ ಲೇಖನ ಪ್ರಕಟವಾಗುತ್ತಿದೆ. , ನಾನು ಮತ್ತು ನನ್ನ ಪರಿವಾರ ನನ್ನ ಸ್ವಗ್ರಾಮದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸದವಕಾಶ ದೊರೆತಿತ್ತು. ದಶಕದ ನಂತರವೂ ದೇವಾಲಯಕ್ಕೆ ಆಗಮಿಸುವ ಭಕ್ತರು, ನಡೆಯುವ ಕಾರ್ಯಕ್ರಮಗಳಲ್ಲಿ ವೃದ್ಧಿಯಾಗಿರುವುದು ಸಂತೋಷದ ಸಂಗತಿ. 

ಕುಂಭಾಭಿಷೇಕದ ಸಂದರ್ಭದಲ್ಲಿ ಎಲ್ಲ ಚಿತ್ರಗಳನ್ನೂ ನನ್ನ ಮಗಳು ಚಿ.ಸೌ. ರಮ್ಯಾ ನವೀನ್ ಸೆರೆಹಿಡಿದಿದ್ದಳು. ಅದನ್ನು ಸಂಗ್ರಹಿಸಿದ್ದರಿಂದ ಆ ನೆನಪುಗಳನ್ನು ಇಲ್ಲಿ ಹಂಚಿಕೊಳ್ಳಲು ಸಾಧ್ಯವಾಗಿದೆ. ಇದಲ್ಲದೆ ಹಳೆಯ ಚಿತ್ರಗಳೂ ಈ ಸಂಕಲನದಲ್ಲಿವೆ. 

ಇದೇ ಸಂದರ್ಭದಲ್ಲಿ ಆಗಮಿಸಿದ್ದ ತರೀಕೆರೆಯ ಹಿರಿಯ ಖ್ಯಾತ ಪತ್ರಕರ್ತ ಶ್ರೀ ಅಂಚೆ ನಾಗಭೂಷಣರು ಅಜ್ಜಂಪುರದ ಬಗ್ಗೆ ದಾಖಲಾತಿಯ ಕಾರ್ಯವನ್ನು ಯಾರಾದರೂ ಕೈಗೊಳ್ಳಬೇಕಾಗಿದೆ ಎಂದು ಸೂಚಿಸಿದ್ದರು. ಅದಕ್ಕೆ ನಾನು ಪ್ರತಿಕ್ರಿಯಿಸಿ, ಅದನ್ನು ಮಾಡುತ್ತೇನೆ ಎಂದು ಹೇಳಿದ್ದೆ. ಮುದ್ರಣ ಮಾಧ್ಯಮವು ತುಂಬ ದುಬಾರಿ ಹಾಗೂ ನಿರ್ವಹಿಸಲಾಗದ್ದು ಎಂದು ಭಾವಿಸಿದ್ದರಿಂದ, ಇಲೆಕ್ಟ್ರಾನಿಕ್ ಮಾಧ್ಯಮವನ್ನು ಅವಲಂಬಿಸುವುದು ಅನಿವಾರ್ಯವಾಯಿತು. ತತ್ಫಲವಾಗಿ  ಈ ಬ್ಲಾಗ್ ಅಂತರಜಾಲದಲ್ಲಿ ಅಜ್ಜಂಪುರ ಮೂಡಿಬರಲು ಸಾಧ್ಯವಾಯಿತು. 

70ನೇ ಸಂಚಿಕೆಯಾಗಿ ಬಂದಿರುವ ಈ ಲೇಖನವು ಸ್ಥಳೀಯ ಹಾಗೂ ಹೊರ ಊರು, ದೇಶಗಳಲ್ಲಿರುವ ಅಜ್ಜಂಪುರದ ನಿವಾಸಿಗಳಿಗೆ ಕಳೆದ ದಿನಗಳನ್ನು ಸ್ಮರಿಸಲು ಪ್ರೇರಣೆ ನೀಡುತ್ತದೆಯೆಂದು ತಿಳಿಯುತ್ತೇನೆ. ಈಗ ಓದುಗರ ಸಂಖ್ಯೆಯೇನೋ ಬೆಳೆದಿದೆ. ನಿಮ್ಮ ಪ್ರತಿಕ್ರಿಯೆಗಳು, ಈ ದಿಸೆಯಲ್ಲಿ ಇನ್ನಷ್ಟು ಕೆಲಸಮಾಡಲು ಉತ್ತೇಜನ ನೀಡುತ್ತದೆ.  ನಿಮ್ಮ ಅನಿಸಿಕೆಗಳನ್ನು ಫೇಸ್ ಬುಕ್ ನಲ್ಲಿ ಕೂಡ ಹಂಚಿಕೊಳ್ಳಲು ಅವಕಾಶವಿದೆ. 

ವಂದನೆಗಳೊಡನೆ,

ಶಂಕರ ಅಜ್ಜಂಪುರ
ದೂರವಾಣಿ - 99866 72483
ಈ-ಮೇಲ್ shankarajp@gmail.com



ಅದೃಷ್ಟದ ಆಟ ಕೇವಲ ಮನುಷ್ಯರಿಗಷ್ಟೇ ಸೀಮಿತವಲ್ಲ, ದೇವರಿಗೂ ಅನ್ವಯಿಸುತ್ತದೆ ಎಂಬುದನ್ನು ನಂಬಬೇಕಿದ್ದರೆ ಅಜ್ಜಂಪುರದ ಕೋಟೆ ಆಂಜನೇಯ ದೇವಾಲಯದ ಇತಿಹಾಸ ಮತ್ತು ಅದರ ಅದ್ಭುತ ಬೆಳವಣಿಗೆಗಳನ್ನಿಷ್ಟು ನೋಡಬೇಕಾಗುತ್ತದೆ. ಒಂದು ಐತಿಹ್ಯದ ಪ್ರಕಾರ, ಈಗಿರುವ ಶ್ರೀ ಆಂಜನೇಯಸ್ವಾಮಿಯ ವಿಗ್ರಹವನ್ನು ಎತ್ತಿನ ಗಾಡಿಯಲ್ಲಿಟ್ಟುಕೊಂಡು ಸಾಗಿಸುತ್ತಿರುವಾಗ, ಗಾಡಿಯ ಅಚ್ಚು ಮುರಿದಿದ್ದರಿಂದ ಇದನ್ನು ಇಲ್ಲಿಯೇ ಸ್ಥಾಪಿಸುವ ಪ್ರಸಂಗ ಬಂದಿತೆಂದು ಹೇಳಲಾಗುತ್ತದೆ. ಆಳೆತ್ತರದ ಈ ಭವ್ಯ ಪ್ರತಿಮೆ ವಿಜಯನಗರದ ಶೈಲಿಯನ್ನು ಹೋಲುವಂತಿದೆ.

ಇಲ್ಲೇ ಸಮೀಪದಲ್ಲಿರುವ ಸೋಮೇಶ್ವರ ದೇವಾಲಯ ಮತ್ತು ಆಂಜನೇಯ ದೇವಾಲಯಗಳು ಪುರಾತನವೆಂಬ ಕಾರಣಕ್ಕೆ ಐತಿಹಾಸಿಕ ಮಹತ್ವ ಪಡೆದಿದ್ದವು. ಈ ಎರಡು ದೇಗುಲಗಳಲ್ಲೂ ದೈನಂದಿನ ಪೂಜಾಕಾರ್ಯಗಳಲ್ಲದೆ, ರಾಮನವಮಿ, ಯುಗಾದಿ, ಶಿವರಾತ್ರಿ ಮುಂತಾದ ಪರ್ವಗಳಲ್ಲಿ ವಿಶೇಷ ದೇವತಾರಾಧನೆಗಳು ನಡೆಯುತ್ತಿದ್ದವು. ಒಂದು ದೇಗುಲವು ಶ್ರದ್ಧಾಕೇಂದ್ರವಾಗಿ ಮಾಡಬೇಕಿದ್ದ ಕೆಲಸವನ್ನು ಅದು ಚೆನ್ನಾಗಿಯೇ ನಿರ್ವಹಿಸಿತು. ಕಲೆ ಮತ್ತು ಸಂಸ್ಕೃತಿ, ಧರ್ಮ ಪ್ರಚಾರ ಕಾರ್ಯಗಳಲ್ಲಿ ಈ ಆಂಜನೇಯ ದೇವಾಲಯವು ಉಚ್ಛ್ರಾಯ ಸ್ಥಿತಿಯಲ್ಲಿ ಮೆರೆದದ್ದುಂಟು.  ಪ್ರತಿ ಶನಿವಾರ ಆಂಜನೇಯ ದೇವಾಲಯದಲ್ಲಿ ಭಜನಾ ಕಾರ್ಯಕ್ರಮವಲ್ಲದೆ, ವಿಶೇಷ ದಿನಗಳಲ್ಲಿ ಕಥಾಕಾಲಕ್ಷೇಪ, ಉಪನ್ಯಾಸಗಳು, ಕಾವ್ಯವಾಚನ-ವ್ಯಾಖ್ಯಾನಗಳಂಥ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಇವು ನಾಲ್ಕಾರು ದಶಕಗಳ ಪೀಳಿಗೆಗೆ ಪ್ರೇರಕವಾಗಿ ನಡೆದುಬಂದವು. ಮುಂದೆ ಇವೆಲ್ಲ ಕಾಲಧರ್ಮವಶದಿಂದ ಕುಂಠಿತವಾದದ್ದೂ ಸಹಜವೇ ಸರಿ. ಕೋಟೆಯಲ್ಲಿದ್ದ ಬ್ರಾಹ್ಮಣ್ಯವು ನಶಿಸಿ, ಜೀವನೋಪಾಯಕ್ಕೆಂದು ಇಲ್ಲಿನ ಜನ ಬೇರೆ ಬೇರೆ ನಗರಗಳಿಗೆ ತೆರಳಿದ ನಂತರ, ದಿನನಿತ್ಯದ ಪೂಜೆ ಕೈಗೊಳ್ಳಲೂ ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಯಿತು. ಇದು ನಮ್ಮ ಬಹುತೇಕ ಗ್ರಾಮಗಳು, ಪಟ್ಟಣಗಳಿಗೆ ಹೊಂದಿಕೆಯಾಗುವಂಥ ಬೆಳವಣಿಗೆಯೇ ಸರಿ.

ಊರು ಸುಟ್ಟರೂ ಹನುಮಪ್ಪ ಹೊರಗೆ ಎಂದು ಗಾದೆಯಿದೆಯಲ್ಲವೆ. ಅಜ್ಜಂಪುರದ ಭೌಗೋಳಿಕ ಸ್ವರೂಪ ತುಂಬ ಬದಲಾಗಿ ಹೋಗಿದೆಯಾದರೂ, ಸ್ಥೂಲ ನೋಟದಿಂದ ಊಹಿಸುವುದಾದರೆ, ಈ ದೇವಾಲಯವು ಕೋಟೆಯ ಆರಂಭದಲ್ಲೇ ಇದ್ದಿತೆನ್ನುವುದು ಸ್ಪಷ್ಟ. ಆದರೆ ಕೋಟೆಯಿದ್ದ ಕಾಲಕ್ಕೆ ನಿರ್ಮಿಸಲಾದ ದೇಗುಲದ ಕುರುಹು ಈಗ ಕಾಣಸಿಗುವುದಿಲ್ಲ. 

ಹಿಂದಿದ್ದ ಒಂದು ಅಂಕಣದ ಗರ್ಭಗುಡಿಯನ್ನು ಶ್ರೀ ಶ್ರೀ ಕೂಡಲೀ ಶೃಂಗೇರಿ ಮಠದ ಸಚ್ಚಿದಾನಂದ ಸ್ವಾಮಿಗಳ ಪ್ರೇರಣೆಯಿಂದ ಈ ದೇವಾಲಯದ ಪುನರ್ ನಿರ್ಮಾಣ ಕಾರ್ಯ ಆರಂಭವಾಯಿತು. ಮೇಲ್ಛಾವಣಿಯ ಹಂತದವರೆಗೆ ನಡೆದ ಮುಂದುವರೆದ ಕಾರ್ಯಗಳು ಆರ್ಥಿಕ ಅಡಚಣೆಯಿಂದ ಸ್ಥಗಿತಗೊಂಡಿತು. 1950ರಲ್ಲಿ ವಿಶಾಲ ಮೈಸೂರಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಅಜ್ಜಂಪುರಕ್ಕೆ ಆಗಮಿಸಿದಾಗ ಅಜ್ಜಂಪುರದ ಮುಖಂಡರ ಶ್ರೀ ಸೀತಾರಾಮಭಟ್ಟರ ನೇತೃತ್ವದಲ್ಲಿ ಭೇಟಿಮಾಡಿದರು. ಆಂಜನೇಯನ ಪರಮಭಕ್ತರಾದ ಕೆಂಗಲ್ಲರು ಒದಗಿಸಿದ ಧನಸಹಾಯದಿಂದ ಮೇಲ್ಛಾವಣಿಯನ್ನುಳ್ಳ ಕಲ್ಲಿನ ಸುಭದ್ರ ಕಟ್ಟಡ ನಿರ್ಮಾಣವಾಯಿತು. 1980ರಲ್ಲಿ ಅಂದಿನ ಮುಖ್ಯಮಂತ್ರಿ ಶ್ರೀ ಆರ್. ಗುಂಡೂರಾವ್ ಕೂಡ ನೆರವನ್ನು ನೀಡಿದರು. ಅಂದಿನ ಸಂಸದ ಶ್ರೀ ಡಿ.ಸಿ. ಶ್ರೀಕಂಠಯ್ಯನವರ  ಸಂಸದ ನಿಧಿಯಿಂದಲೂ ಆರ್ಥಿಕ ನೆರವು ಹರಿದುಬಂದಿತು.

ಈ ಶತಮಾನದ ಮೊದಲ ದಶಕದ ಆರಂಭದಲ್ಲಿ, ಎಂದರೆ 05-02-2007, ಸೋಮವಾರದಿಂದ 09-02-2007ರ ಶುಕ್ರವಾರದ ವರೆಗೆ ಐದು ದಿನಗಳ ಕಾಲ ಈ ದೇವಾಲಯದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವಗಳು ನಡೆದವು. ದೇವಾಲಯದ ಬಾಹ್ಯ ಮತ್ತು ಅಂತರ್ ಸ್ವರೂಪವು ಗಣನೀಯವಾಗಿ ಬದಲಾವಣೆಯಾಯಿತು. ಇದಕ್ಕೆಂದು ಆಯೋಜಿಸಲಾದ ಜೀರ್ಣೋದ್ಧಾರ ಸಮಿತಿಯ ಕಾರ್ಯದಕ್ಷತೆಯನ್ನೂ, ಬದ್ಧತೆಯನ್ನೂ ಮೆಚ್ಚಬೇಕಾಗುತ್ತದೆ. 

ಈ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕಗಳಲ್ಲಿ ಭಾಗವಹಿಸಿದ್ದರಿಂದ, ಈ ಸಮಿತಿಯ ಕಾರ್ಯಸಾಮರ್ಥ್ಯವನ್ನೂ, ಅದು ಮಾಡಿದ ಕೆಲಸವನ್ನೂ ನಾನು ಸ್ವತಃ ನೋಡಿದ್ದೇನೆ. ದೇವಾಲಯಕ್ಕೆ ಗೋಪುರವಿರಲಿಲ್ಲ. ಅದರ ನಿರ್ಮಾಣದ ಜತೆಗೆ ಸೀತಾ ರಾಮಾಂಜನೇಯರ ವಿಗ್ರಹಗಳು, ಅಶ್ವತ್ಥಕಟ್ಟೆಗಳನ್ನು ಹೊಸದಾಗಿ ನಿರ್ಮಿಸಲಾಯಿತು. ಒಳಭಾಗದಲ್ಲಿ ನೆಲಕ್ಕೆ ಹಾಸಿದ್ದ ಕಲ್ಲುಗಳನ್ನು ತೆಗೆದು, ಗ್ರಾನೈಟ್ ನ್ನು ಅಳವಡಿಸಲಾಯಿತು. ಒಳಗೋಡೆಗಳೂ ನವೀಕೃತಗೊಂಡು ದೇವಾಲಯವು ತನ್ನ ಹಿಂದಿನ ಸ್ವರೂಪಕ್ಕಿಂತ ಸಂಪೂರ್ಣ ಭಿನ್ನವಾಗಿ ಕಂಗೊಳಿಸುವಂತೆ ಮಾಡಲಾಯಿತು.

ನವೀಕರಣಕ್ಕೆ ಮುನ್ನ





      

   
ವಿವಿಧ ಅಲಂಕಾರಗಳಲ್ಲಿ ಆಂಜನೇಯ





 
ನೂತನ ಮಹಾದ್ವಾರ

ಪುಣ್ಯಾಹ, ನಾಂದೀ ಇಳಾವಾಚನ


ಪೂರ್ಣಾಹುತಿ ಹವನ






ತರೀಕೆರೆಯ ಹಿರಿಯ ಕಲಾವಿದ ಶ್ರೀ ಬಿ.ಎಸ್. ಕೃಷ್ಣಮೂರ್ತಿ

ದೇವಾಲಯದ ಬಗ್ಗೆ ಪ್ರಾತ್ಯಕ್ಷಿಕೆ - ಶಂಕರಅಜ್ಜಂಪುರ

ಕಾರ್ಯಕ್ರಮದ ವಿವರಣೆ

ಬೆಲಗೂರು ಬಿಂದುಮಾಧವ ಶರ್ಮರಿಂದ ಕಲಶಾರೋಪಣ


ಹಣ್ಣೆ ಗ್ರಾಮದ ಸ್ವಾಮಿಗಳಿಂದ ಶ್ರೀ ವೆಂಕಟೇಶಯ್ಯನವರಿಗೆ ಸನ್ಮಾನ






ಈ ಐದು ದಿನಗಳಲ್ಲಿ ನಡೆದ ಕಾರ್ಯಗಳನ್ನು ಬುಕ್ಕಾಂಬುಧಿಯ ಶ್ರೀ ರಾಮಕೃಷ್ಣಶಾಸ್ತ್ರಿಗಳ ನೇತೃತ್ವದಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಹೊರಡಿಸಲಾದ ಪತ್ರಿಕೆಯ ರಚನೆ ಮತ್ತು ವಿನ್ಯಾಸಗಳನ್ನು ನಾನು ತಯಾರಿಸುವ ಅವಕಾಶ ದೊರೆತಿದ್ದನ್ನು ಸ್ಮರಿಸಿಕೊಳ್ಳುತ್ತೇನೆ.


ಕೋಟೆ ಶ್ರೀ ಆಂಜನೇಯಸ್ವಾಮಿ ದೇವಾಲಯವು ಹಿಂದೆ ಇದ್ದ ಹಾಗೂ ಈಗ ನವೀಕೃತಗೊಂಡ ನಂತರದ ಕೆಲವು ಚಿತ್ರಗಳನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. 
-0-0-0-0-0-

ಕಾಮೆಂಟ್‌ಗಳು

  1. ಪ್ರಕಟವಾದ 3 ದಿನಗಳಲ್ಲಿ 510ಜನರನ್ನು ತಲುಪಿರುವುದು ಕೂಡ ಬ್ಲಾಗ್ ನ ಮಟ್ಟಿಗೆ ದಾಖಲೆಯ ಸಂಗತಿಯೇ ಸರಿ. ನಿಮ್ಮೆಲ್ಲರಿಗೂ ಅಭಿನಂದನೆಗಳು. ನಿಮ್ಮ ಪ್ರತಿಕ್ರಿಯೆಗಳೇ ಮುಂದಿನ ಬರವಣಿಗೆಗೆ ಸ್ಫೂರ್ತಿ. ವಂದನೆಗಳು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ