72. ಅಜ್ಜಂಪುರದ ವರ್ಣರಂಜಿತ ರಾಜಕಾರಣಿ ಬಿ.ಎಂ. ಏಕೋರಾಮಸ್ವಾಮಿ

ಆತ್ಮೀಯರೇ,



 ಈ ಬ್ಲಾಗ್ ಆರಂಭವಾಗಿ ಈ ತಿಂಗಳಿಗೆ 6 ವರ್ಷಗಳಾಯಿತು. ನಿಮ್ಮೆಲ್ಲರ ಪ್ರೋತ್ಸಾಹ, ಬೆಂಬಲಗಳೇ ಇದನ್ನು ಮುನ್ನಡೆಸುತ್ತಿವೆ. 

ಅಜ್ಜಂಪುರದ ಬೆಳವಣಿಗೆಯಲ್ಲಿ ತಮ್ಮನ್ನು ಸಕ್ರಿಯವಾಗಿ ಹಿಂದಿನಿಂದಲೂ ತೊಡಗಿಸಿಕೊಂಡು ಬಂದ ಹಿರಿಯರಲ್ಲಿ ಬಿ.ಎಂ. ಏಕೋರಾಮಸ್ವಾಮಿಯವರೂ ಒಬ್ಬರು. ಅವರನ್ನು ಈ ಸಂಚಿಕೆಗೆಂದು ಅವರ ಮನೆಯಲ್ಲಿ ಸಂದರ್ಶಿಸಿದೆ. ಅವರೊಡನೆ ನಡೆಸಿದ ಅರ್ಧ ಘಂಟೆಯ ಮಾತುಕತೆಯಲ್ಲಿ ಅವರು ಒಮ್ಮೆಯಾದರೂ ತಾನು ಇಂಥದನ್ನು ಮಾಡಿದೆ ಎಂದು ಹೇಳಿಕೊಳ್ಳಲಿಲ್ಲ. ಇಡೀ ಊರಿನ ಒಗ್ಗಟ್ಟನ್ನು ನಾವು ಕಾಪಾಡಿಕೊಳ್ಳುತ್ತಲೇ, ಸಂಘಟನಾತ್ಮಕ ಕೆಲಸಗಳನ್ನು ಮಾಡಿದೆವು. ಆಗ ಕೂಡ ಪೈಪೋಟಿ, ಮನಸ್ತಾಪಗಳು ಇರಲಿಲ್ಲವೆಂದೇನಿಲ್ಲ. ಅವೆಲ್ಲದರ ಹೊರತಾಗಿಯೂ, ಊರಿನ ಹಿತಾಸಕ್ತಿಗೆ ಧಕ್ಕೆ ತರುವಂಥ ಯಾವ ಕಾರ್ಯಗಳಿಗೂ, ಯಾರೂ ಬೆಂಬಲಿಸಿ, ತಮ್ಮ ಪ್ರಾಬಲ್ಯವನ್ನು ಮೆರೆಯಬೇಕೆಂಬ ದುಷ್ಟಬುದ್ಧಿಯನ್ನು ತೋರುತ್ತಿರಲಿಲ್ಲ. ಅದೀಗ ಮರೆಯಾಗುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು.  ಅವರಿಗೀಗ 84 ವಯಸ್ಸು. ಆದರೂ ಅವರ ನೆನಪಿನ ಶಕ್ತಿ ಕುಂದಿಲ್ಲ. ತಮ್ಮ ಕಾಲದ ರಾಜಕಾರಣವನ್ನು ವಿವರಿಸುವಾಗ ಅವರು ತೋರಿದ ಉತ್ಸಾಹ, ಆಸ್ಥೆಗಳು ಮೆಚ್ಚುವಂತಿದ್ದವು. ಅವರನ್ನು ಕುರಿತು ಮಿತ್ರ ಅಪೂರ್ವ ಬಸು ಸಂಗ್ರಹಿಸಿರುವ ಮಾಹಿತಿಯುಕ್ತ ಬರಹ ನಿಮಗಾಗಿ  ಇಲ್ಲಿದೆ. 
  - ಶಂಕರ ಅಜ್ಜಂಪುರ
ದೂರವಾಣಿ ಃ 99866 72483
----------------------------------------------------------------------------------------------------------------------------------------------


ಬಿ.ಎಂ. ಏಕೋರಾಮಸ್ವಾಮಿ


1942, ಕ್ವಿಟ್ ಇಂಡಿಯಾ ಚಳವಳಿಯ ಕಾಲ.ಅಜ್ಜಂಪುರದ ಒಬ್ಬ ಹುಡುಗ ಊರಿನ ಹಿರಿಯರ ಜತೆ ಈ ಚಳವಳಿಯಲ್ಲಿ ಭಾಗಿಯಾದ. ಬ್ರಿಟಿಷ್ ಆಧಿಪತ್ಯದ ಪೊಲೀಸರು ಎಲ್ಲರ ಜತೆ ಈ ಹುಡುಗನನ್ನೂ ಬಂಧಿಸಿದರು. ನರಸಿಂಹರಾಜಪುರದ ಜೈಲಿನಲ್ಲಿ ಮೂರು ದಿನ ಇಟ್ಟುಕೊಂಡು, ವಿಚಾರಣೆಯಾಗಿ, ಈತ ಕೇವಲ ಹತ್ತು ವರ್ಷದ ಹುಡುಗನೆಂದು ಗೊತ್ತಾದಾಗ ಇವನನ್ನು ಬಿಡುಗಡೆ ಮಾಡಿದರು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಿತು. ಮೈಸೂರು ಅರಸರಿಗೆ ಅಂದಿನ ದಿವಾನರು ತಪ್ಪು ಮಾಹಿತಿ ಕೊಟ್ಟು ಅಧಿಕಾರ ಬಿಟ್ಟುಕೊಡದಂತೆ ತಡೆಹಿಡಿದಿದ್ದರು. ಈ ಕಾರಣಕ್ಕೆ ಮೈಸೂರು ಚಲೋ ಎಂಬ ಚಳವಳಿ ಸ್ವಾತಂತ್ರ್ಯಾನಂತರ ಆರಂಭವಾಯಿತು. ರಾಜ್ಯದ ವಿವಿಧೆಡೆಗಳಿಂದ ಕನ್ನಡಿಗರು ಮೈಸೂರಿನತ್ತ ಧಾವಿಸಿದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ ಹುಡುಗ ಮೈಸೂರು ಚಲೋ ಚಳವಳಿಯಲ್ಲೂ ಭಾಗವಹಿಸಿದ. ಆಗ ಆತ ಹದಿನೇಳರ ತರುಣ. ಈ ಎರಡೂ ಚಳವಳಿಗಳಲ್ಲಿ ಭಾಗವಹಿಸಿದ್ದ ಈ ಅಪ್ರಾಪ್ತ ಹುಡುಗನೇ ಅಜ್ಜಂಪುರದ ಬಿ.ಎಂ. ಏಕೋರಾಮಸ್ವಾಮಿ. ಅವರೀಗ 84ರ ವಯಸ್ಸಿನ ತರುಣರು.
ಶಿವಮೊಗ್ಗದ ನ್ಯಾಷನಲ್ ಹೈಸ್ಕೂಲಿನಲ್ಲಿ ಓದು ಮುಗಿಸಿ ಊರಿಗೆ ಮರಳಿದ ನಂತರ ಸ್ವಾತಂತ್ರ್ಯೋತ್ತರ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಜ್ಜಂಪುರದ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರಾಗಿ 13ವರ್ಷ, ಪುರಸಭೆ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಅಧ್ಯಕ್ಷರಾಗಿ 26 ವರ್ಷ..... ಹೀಗೆ ವೃತ್ತಿ ರಾಜಕಾರಣಿಯೇ ಆಗಿಹೋದರು. 



ಕಲಾ ಸೇವಾ ಸಂಘ
ಅಜ್ಜಂಪುರದ ಮತ್ತೊಬ್ಬ ವರ್ಚಸ್ವೀ ರಾಜಕಾರಣಿ ಟಿ.  ಕೃಷ್ಣೋಜಿರಾಯರ ಸರಿಜೋಡಿಯಾಗಿ ರಾಜಕೀಯ ಮಾಡಿದರು. ಕಲಾಸೇವಾ ಸಂಘದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ ಮುಂದೆ ಅದರ ಉಪಾಧ್ಯಕ್ಷರೂ ಆದರು. ಈ ಇಬ್ಬರು ನಾಯಕರು ಸೇರಿ ಅಜ್ಜಂಪುರಕ್ಕೆ ಬಾಲಕಿಯರ ಪ್ರೌಢಶಾಲೆಯನ್ನು ಕಲಾಸೇವಾ ಸಂಘದ ಅಂಗಸಂಸ್ಥೆಯಾಗಿ ಸ್ಥಾಪಿಸಿದರು. 

ಅಂದು ಪುರಸಭೆ, ಇಂದು ಗ್ರಾಮ ಪಂಟಾಯತಿ 
1967ರಲ್ಲಿ ಏಕೋರಾಮಸ್ವಾಮಿ ಪುರಸಭೆಯ ಅಧ್ಯಕ್ಷರಾಗಿದ್ದಾಗ ಮಲೆನಾಡು ಪುರಸಭೆಗಳ ಮಹಾಸಮ್ಮೇಳನವನ್ನು ಅಜ್ಜಂಪುರದಲ್ಲಿ ಆಯೋಜಿಸಿದರು. ವಿಶೇಷವೆಂದರೆ ಕುಶಾಲನಗರದಅಂದಿನ ಪುರಸಭೆಯ ಅಧ್ಯಕ್ಷ ಆರ್. ಗುಂಡೂರಾವ್ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಮುಂದೆ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗಲೂ ಏಕೋರಾಮಸ್ವಾಮಿಯವರೊಂದಿಗೆ ವಿಶ್ವಾಸದಿಂದ ಇದ್ದರು. 

1983ರಲ್ಲಿ ಪುರಸಭಾಧ್ಯಕ್ಷರಾದಾಗ ದುರ್ಬಲ ವರ್ಗದವರಿಗೆಂದು ಅಂಬೇಡ್ಕರ್ ಬಡಾವಣೆಯನ್ನು ರಚಿಸಿ, 423 ನಿವೇಶನಗಳನ್ನು ಹಂಚಿದರು. ಕಳೆದ 28 ವರ್ಷಗಳಿಂದ ಪೇಟೆಯ ವೀರಶೈವ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1991ರಲ್ಲಿ ಸ್ವಾಮಿಯವರ ನೇತೃತ್ವದಲ್ಲಿ ಬಸವೇಶ್ವರ ಕಲ್ಯಾಣ ಮಂಟಪ ಪ್ರಾರಂಭವಾಯಿತು. 

ಇಂದಿಗೂ ಶುಭ್ರ ಶ್ವೇತ ಖಾದಿವಸ್ತ್ರಧಾರಿಯಾಗಿರುವ ಏಕೋರಾಮಸ್ವಾಮಿಯವರಿಗೆ ಈಗಲೂ ರಾಜಕೀಯವೆಂದರೆ ಪ್ರತಿಕ್ಷಣದ ಉಸಿರಾಟವಿದ್ದಂತೆ !


 ಅಪೂರ್ವ ಬಸು
ದೂರವಾಣಿ - 94810 75410

-0-0-0-0-0-0-0-0-0-0-0-

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.