81. ಅಜ್ಜಂಪುರ ಬಸವಣ್ಣ ದೇವರ ಗುಡಿಯ ಶತಮಾನೋತ್ಸವ







ಅಜ್ಜಂಪುರದಲ್ಲಿ ಕೋಟೆಯ ಆಂಜನೇಯ ದೇವಾಲಯವಿರುವಂತೆ, ಪೇಟೆಯಲ್ಲಿನ ಬಸವಣ್ಣದೇವರ ಗುಡಿ ಕೂಡ ಪ್ರಾಚೀನವಾದುದು. ಈ ದೇವಾಲಯದ ಬಗ್ಗೆ ಹಿಂದೆ ಒಂದು ಲೇಖನವನ್ನು ಪ್ರಕಟಿಸಲಾಗಿದೆ. ಈ ಬಸವಣ್ಣ ದೇವರ ಗುಡಿಯ ಶತಮಾನೋತ್ಸವವನ್ನು ಕಳೆದ ತಿಂಗಳ 23ರಂದು ಆಚರಿಸಿದ್ದನ್ನು ದಾಖಲಿಸಲು ಇಲ್ಲಿ  ಪುನರ್ ಪ್ರಸ್ತಾಪಿಸಲಾಗಿದೆ.  

ದೇವಾಲಯವು ಪ್ರಾಚೀನವೆನ್ನಲು ಅದರ ಸಂರಚನೆಯನ್ನು ನೋಡಿದರೆ ತಿಳಿಯುವಂತಿದೆ. ವಿಜಯನಗರೋತ್ತರ ಕಾಲದಲ್ಲಿ ರಚನೆಯಾದ ಈ ಮಂದಿರವನ್ನು ಶುದ್ಧ ಗ್ರಾನೈಟ್ ಶಿಲೆಯನ್ನು ಬಳಸಿ ಕಟ್ಟಲಾಗಿದೆ.  ಇಲ್ಲಿರುವ ಬಸವಣ್ಣ ದೇವರ ವಿಗ್ರಹ, ರುದ್ರ ಹಾಗೂ ವೀರಭದ್ರ ಶಿಲ್ಪಗಳನ್ನು 1932ರಲ್ಲಿ ಸ್ಥಾಪಿಸಲಾಯಿತಾದರೂ, ಮಂದಿರ ಮಾತ್ರ ಅದಕ್ಕೂ ಹಿಂದಿನದೇ ಆಗಿದೆ. ರುದ್ರ ಹಾಗೂ ವೀರಭದ್ರ ವಿಗ್ರಹಗಳಿಗೆ ಆರುನೂರು ವರ್ಷಗಳ ಇತಿಹಾಸವಿದೆಯೆಂದು ತಿಳುವಳಿಕೆ.


ಕೋಟೆಯಲ್ಲಿ ನೆಲೆಗೊಂಡಿದ್ದ ವೀರಭದ್ರ ಮತ್ತು ರುದ್ರ ದೇವರ ವಿಗ್ರಹಗಳು, ಕಾಲಾಂತರದಲ್ಲಿ ಪೂಜಾದಿಗಳಿಲ್ಲದೆ, ಸೊರಗಿದವು. ಇದನ್ನು ಗಮನಿಸಿದ ಊರ ಹಿರಿಯರಾದ ಶೆಟ್ರ ಸಿದ್ದಪ್ಪನವರು, ಕುಪ್ಪಾಳು ಸಿದ್ದರಾಮಣ್ಣ, ಗಂಗಣ್ಣ, ನಿರ್ವಾಣಶೆಟ್ಟರ ಹಾಲಪ್ಪ, ಜವಳಿ ನಾಗಪ್ಪ, ಗುರುಪಾದಪ್ಪರ ಮಲ್ಲಯ್ಯ, ಭಂಗಿ ಮರುಳಪ್ಪ ಮುಂತಾದವರು, ಈ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಆರಂಭಿಸಿದರು. ತತ್ಪರಿಣಾಮವಾಗಿ, ಕೋಟೆಯಲ್ಲಿದ್ದ ಈ ಎರಡು ವಿಗ್ರಹಗಳನ್ನು ತಂದು ೧೯೩೨ರಲ್ಲಿ ಚಿತ್ರದುರ್ಗ ಬೃಹನ್ಮಠದ ಜಯದೇವ ಸ್ವಾಮಿಗಳಿಂದ ಉದ್ಘಾಟಿಸಲ್ಪಟ್ಟಿತು.
ಸಾಮಾನ್ಯವಾಗಿ ಎಲ್ಲ ದೇಗುಲಗಳು ಪೂರ್ವಾಭಿಮುಖವಾಗಿರುವುದು ವಾಡಿಕೆ. ಇಲ್ಲಿನ ಬಸವಣ್ಣನ ದೇಗುಲ ಮಾತ್ರ ಉತ್ತರಾಭಿಮುಖವಾಗಿದೆ. ಇಡೀ ದೇವಾಲಯವನ್ನು ಬಿಳಿಯ ಗ್ರಾನೈಟ್ ಶಿಲೆಯಿಂದ ನಿರ್ಮಿಸಲಾಗಿದೆ. ಹೆಚ್ಚಿನ ಶಿಲ್ಪಕಲೆಯ ಅಂಶಗಳೇನೂ ಗೋಚರಿಸುವುದಿಲ್ಲ. ಆದರೆ ಇದನ್ನು ನಿರ್ಮಿಸಲು ಬಳಸಿರುವ ತಂತ್ರಜ್ಞಾನ ಮಾತ್ರ ಪುರಾತನವಾದುದೇ. ಏಕೆಂದರೆ ಸಿಮೆಂಟ್, ಗಾರೆ ಮುಂತಾದ ಪದಾರ್ಥಗಳನ್ನು ಬಳಸದೇ, ಮೇಲಿನ ಮುಚ್ಚಿಗೆಯೂ ಸೇರಿದಂತೆ ಎಲ್ಲವನ್ನೂ ಕಲ್ಲಿನಿಂದಲೇ ನಿರ್ಮಿಸಲಾಗಿದೆ. 



ಈ ದೇವಾಲಯದಲ್ಲಿ ಮೂರು ಗರ್ಭಗುಡಿಗಳಿವೆ. ಮಧ್ಯದಲ್ಲಿ ಬಸವಣ್ಣನಿದ್ದರೆ, ಎಡಭಾಗದಲ್ಲಿ ಗಣಪತಿಯ ವಿಗ್ರಹವಿದೆ. ಇತ್ತೀಚಿನ ವರ್ಷಗಳಲ್ಲಿ ಅದನ್ನು ಪೂರ್ವಭಾಗದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಯಿತು. ೧೮-೨೦ ಅಂಗುಲಗಳ ಎತ್ತರದ ಈ ಶಿಲ್ಪದ ರಚನೆಯು ಹೊಯ್ಸಳ ಶೈಲಿಯನ್ನು ಹೋಲುವಂತಿದೆ.

ಈ ದೇವಾಲಯದ ಶತಮಾನೋತ್ಸವವನ್ನು ಬಾಳೆಹೊನ್ನೂರು  ಶ್ರೀಮದ್ ರಂಭಾಪುರೀ ಜಗದ್ಗುರು ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ನೆರವೇರಿತು. ಉತ್ಸವಗಳ ಸಮಿತಿಯ ಅಧ್ಯಕ್ಷ ಬಿ.ಎಂ. ಏಕೋರಾಮಸ್ವಾಮಿ ನೇತೃತ್ವ ವಹಿಸಿದ್ದರು. ಕಾರ್ಯದರ್ಶಿ ಕೆ.ಸಿ. ಜಯಕುಮಾರ್, ಸಹ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಜಿ.ಬಿ. ಮಲ್ಲಿಕಾರ್ಜುನ ಸ್ವಾಮಿ, ಖಜಾಂಚಿ ಎಸ್. ಸದಾಶಿವಪ್ಪ, ದೇಗುಲ ನವೀಕರಣದ ರೂವಾರಿ ಎ.ಸಿ. ಲೋಕೇಶ್, ಸಮುದಾಯಭವನದ ನವೀಕರಣದ ರೂವಾರಿ ಬಿ.ಎ. ರಾಜಕುಮಾರ್, ಪೇಟೆ ವೀರಶೈವ ಮಂಡಲಿ ಅಧ್ಯಕ್ಷ ಸತೀಶ್ ಮತ್ತಿತರರು ಶ್ರಮವಹಿಸಿ ಉತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದರು. ಈ ಕಾರ್ಯಕ್ರಮದ ಕೆಲ ಚಿತ್ರಗಳು ಇಲ್ಲಿವೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ