84. ರಾಜಕಾರಣಿ, ಕ್ರೀಡಾಪಟು ಶ್ರೀ ಬಿ.ವಿ. ಗುರುಶಾಂತಪ್ಪ

ಆತ್ಮೀಯ ಓದುಗರೇ,

ಮಾರ್ಚ್ ತಿಂಗಳ ಈ ಸಂಚಿಕೆಯಲ್ಲಿ ಅಜ್ಜಂಪುರದ ಹಿರಿಯರಾದ ಮಾಜಿ ಪುರಸಭಾಧ್ಯಕ್ಷ ಬಿ.ವಿ. ಗುರುಶಾಂತಪ್ಪನವರನ್ನು ಕುರಿತಂತೆ ಕಿರುಲೇಖನವಿದೆ. ಇದನ್ನು ಅಲ್ಪಸಮಯದಲ್ಲಿ ಆಸ್ಥೆಯಿಂದ ಸಿದ್ಧಪಡಿಸಿ, ಛಾಯಾಚಿತ್ರಗಳನ್ನು ಮಿತ್ರ ಅಪೂರ್ವ  ಒದಗಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ನಿಮ್ಮ ಅಭಿಪ್ರಾಯಗಳನ್ನು ನಮೂದಿಸಲು ವಿನಂತಿ. ಅಜ್ಜಂಪುರದ ದೇವಾಲಯಗಳ ಬಗ್ಗೆ, ಸಾರ್ವಜನಿಕ ಸಂಸ್ಥೆಗಳು, ವ್ಯಕ್ತಿಗಳ ಬಗ್ಗೆ ಚಿತ್ರ-ಬರಹಗಳನ್ನು shankarajp@gmail.com ಈ ವಿಳಾಸಕ್ಕೆ ಕಳಿಸಲು ಕೋರುತ್ತೇನೆ.


ಶಂಕರ ಅಜ್ಜಂಪುರ
ಸಂಪಾದಕ
ಅಂತರಜಾಲದಲ್ಲಿ ಅಜ್ಜಂಪುರ
ದೂರವಾಣಿ – 99866 72483


ಶ್ರೀ ಬಿ.ವಿ. ಗುರುಶಾಂತಪ್ಪ

ಶ್ರೀ ಬಿ.ವಿ. ಗುರುಶಾಂತಪ್ಪನವರದು ಎತ್ತರದ ನಿಲುವು, 80ರ ಮೇಲ್ಪಟ್ಟ ವಯಸ್ಸಿನಲ್ಲಿಯೂ ದಟ್ಟ ತಲೆಗೂದಲು ಹೊಂದಿರುವ, ಹೆಸರಿಗೆ ತಕ್ಕಂತೆ ಶಾಂತ ಸ್ವಭಾವದ ಅಜ್ಜಂಪುರದ ರಾಜಕೀಯ ಹಾಗೂ ಕಲಾ ರಂಗಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಇವರನ್ನು ಇತ್ತೀಚೆಗೆ ಅಜ್ಜಂಪುರದಲ್ಲಿ ಸನ್ಮಾನಿಸಲಾಯಿತು.

ಶ್ರೀ ಜೋಗಿ ತಿಮ್ಮಯ್ಯ ರಂಗಪ್ರಶಸ್ತಿ ಪ್ರದಾನ ಸಮಾರಂಭ

1948ರಲ್ಲಿ ಕೆಲವು ಸಂಸ್ಥಾನಗಳು ಭಾರತದಲ್ಲಿ ವಿಲೀನವಾಗಿರಲಿಲ್ಲ. ನಮ್ಮ ಮೈಸೂರು ಸಂಸ್ಥಾನವೂ ಅವುಗಳಲ್ಲಿ ಒಂದು. ಆಗ ನಾಡಿನ ಸ್ವಾತಂತ್ರ್ಯ ಹೋರಾಟಗಾರರು ಮೈಸೂರು ಚಲೋ ಎಂಬ ಚಳುವಳಿಯನ್ನು ಹಮ್ಮಿಕೊಂಡರು. ಆ ಹೋರಾಟದಲ್ಲಿ ಗುರುಶಾಂತಪ್ಪನವರೂ ಭಾಗವಹಿಸಿದ್ದರು. ಕಳೆದ ಶತಮಾನದ ಎಪ್ಪತ್ತರ ದಶಕದ ಪೂರ್ವಾರ್ಧದಲ್ಲಿ ಅಜ್ಜಂಪುರದ ಪುರಸಭೆಯ  ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ತಮ್ಮ ಯೌವನದ ಕಾಲದಲ್ಲಿ ಅತ್ಯುತ್ತಮ ಬ್ಯಾಡ್ಮಿಂಟನ್ ಆಟದಲ್ಲಿ ಸೆಂಟರ್ ಆಟಗಾರರಾಗಿ ಹೊರಹೊಮ್ಮಿದ್ದರು. 

ಅವರ ಪತ್ನಿ ಶ್ರೀಮತಿ ಸರೋಜಮ್ಮನವರು ತಿಪಟೂರು ತಾಲೂಕಿನ ಈಚನೂರಿನವರು. ಕರ್ನಾಟಕ ಸಂಗೀತದ ಗಾಯಕಿ. ಪತಿಯ ಸಾರ್ವಜನಿಕ ರಂಗದ ಪಾಲ್ಗೊಳ್ಳುವಿಕೆಗೆ ಒಂದಿಷ್ಟು ತೊಂದರೆಯಾಗದಂತೆ ಮನೆವಾರ್ತೆ ನಡೆಸಿಕೊಂಡುಬಂದ ಹೆಗ್ಗಳಿಕೆ ಅವರದು. ಓರ್ವ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆಯಿರುತ್ತಾಳೆ ಎಂಬ ನಾಣ್ಣುಡಿಯು ಸರೋಜಮ್ಮನವರಿಗೆ ಅನ್ವಯವಾಗುವಂತಿದೆ. 

ಅಜ್ಜಂಪುರಕ್ಕೆ ಅವರ ಕೊಡುಗೆಯನ್ನು ಗಮನಿಸಿ, ದಿನಾಂಕ ಕಳೆದ ತಿಂಗಳ 13ರಂದು ಗೆಳೆಯರ ಬಳಗ ರಂಗತಂಡವು ಅಜ್ಜಂಪುರದ ಕಲಾಸೇವಾ ಸಂಘದ ಹಿರಿಯ ಕಲಾವಿದ ಶ್ರೀ ಬಿ.ವಿ. ಗುರುಶಾಂತಪ್ಪನವರಿಗೆ ಶ್ರೀ ಜೋಗಿ ತಿಮ್ಮಯ್ಯ ರಂಗ ಪ್ರಶಸ್ತಿಯನ್ನು ಕೈಲಾಸಂ ಕಲಾಕ್ಷೇತ್ರದಲ್ಲಿ ನೀಡಿ, ಗೌರವಿಸಿತು. ಕಳೆದ ಬಾರಿ ಶ್ರೀ ಎಸ್. ಸತ್ಯನಾರಾಯಣ ಶ್ರೇಷ್ಠಿಯವರಿಗೆ ಶೆಟ್ರು ಸಿದ್ದಪ್ಪ ರಂಗ ಪ್ರಶಸ್ತಿಯನ್ನು ನೀಡಲಾಗಿತ್ತು. ಪ್ರಶಸ್ತಿಯನ್ನು ಯಾರ ಹೆಸರಲ್ಲಿ ಕೊಡಲಾಗುತ್ತದೆಯೋ ಅವರ ವಂಶಸ್ಥರು ಪ್ರಶಸ್ತಿಯ ಪ್ರಾಯೋಜಕರಾಗಿತ್ತಾರೆ. 

ವಿಶೇಷವೆಂದರೆ ಈ ಸಲ ಪ್ರಶಸ್ತಿ ಪಡೆದ ಗುರುಶಾಂತಪ್ಪನವರು ಹೇಳಿದ ಮಾತುಗಳು ಅತ್ಯಂತ ವಿನಯದಿಂದ ಕೂಡಿದ್ದವು. “ನಾನೇನು ಅಂತಹ ದೊಡ್ಡ ಕಲಾವಿದನಲ್ಲ. ಕಲಾಸೇವಾ ಸಂಘದ ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದೆ. ನಾನು ಅಂದಿನ ಹಿರಿಯರ ಜೊತೆ ಸಂಘದಲ್ಲಿ ಇದ್ದೆ ಎನ್ನುವುದೇ ನನ್ನ ಭಾಗ್ಯ” ಎಂದರು.

ಈ ಕೆಳಗಿನ ಚಿತ್ರ ಅಪರೂಪದ್ದು ಎನ್ನಬಹುದು. ಇದರಲ್ಲಿ ಅಜ್ಜಂಪುರದ ಸಾರ್ವಜನಿಕ ಜೀವನದಲ್ಲಿದ್ದ ಅನೇಕ ಹಿರಿಯರಿದ್ದಾರೆ. ಈ ಚಿತ್ರಕ್ಕೆ ಲಕ್ಕವಳ್ಳಿ ಸಮೀಪದ ಸೋಮಪುರದ ನದಿಯ ಹಿನ್ನೆಲೆಯಿದ್ದು, ತಂತ್ರಜ್ಞಾನವಿನ್ನೂ ಹೆಚ್ಚು ಅಭಿವೃದ್ಧಿಯಾಗಿರದ ಕಾಲಕ್ಕೆ ಇಷ್ಟು ವಿಸ್ತಾರವನ್ನು ಒಳಗೊಳ್ಳುವಂತೆ ಸೆರೆಹಿಡಿಯಲಾಗಿದೆ. ರಂಗಕಲಾವಿದ  ಶ್ರೀ ಶಿವಾಜಿ ರಾವ್ ಜಾಧವ್ ಅವರ ಸಂಗ್ರಹದಿಂದ ಇದನ್ನು ಆಯ್ದುಕೊಳ್ಳಲಾಗಿದೆ.



ಚಿತ್ರ-ಬರಹ : ಅಪೂರ್ವ ಅಜ್ಜಂಪುರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ