85. ಅಜ್ಜಂಪುರ ರಾಮರಾವ್


ಶ್ರೀ ಎ. ರಾಮರಾವ್ ರೊಂದಿಗೆ ಶಂಕರ ಅಜ್ಜಂಪುರ


ಇವರನ್ನು ಅಜ್ಜಂಪುರದ ಪ್ರೌಢಶಾಲೆಯ ಬಗ್ಗೆ ಬರೆದಿರುವ ಲೇಖನ ನಮ್ಮ ಅಧ್ಯಾಪಕರು ಮಾಲಿಕೆಯಲ್ಲೇ ಸ್ಮರಿಸಬೇಕಿತ್ತಾದರೂ, ಮಾಹಿತಿಗಳ ಕೊರತೆಯಿಂದ ಅದು ಸಾಧ್ಯವಾಗಿರಲಿಲ್ಲ. 1960ರ ರಾಮರಾಯರಿಗೂ, ಈಗಿರುವ ಅವರ ಚಹರೆಗೂ ಅಜಗಜಾಂತರ ವ್ಯತ್ಯಾಸವಾದರೂ, ಆಗಿನ ವಿದ್ಯಾರ್ಥಿಗಳಾದ ನಮ್ಮ ಕಣ್ಣಲ್ಲಿ ಅವರ ದೊಡ್ಡ ಮೀಸೆ, ಎತ್ತರದ ನಿಲುವುಗಳೇ ಸ್ಥಾಯಿಯಾಗಿ ನಿಂತಿವೆ. ನಾನು ಅಜ್ಜಂಪುರವನ್ನು 1968-69ರಲ್ಲಿ ಬಿಟ್ಟ ನಂತರ ಅವರನ್ನು ಭೇಟಿಯಾಗುವುದು ಸಾಧ್ಯವಾಗಲೇ ಇಲ್ಲ. ಇಷ್ಟಾಗಿ ಅವರು ಬೆಂಗಳೂರಿನಲ್ಲೇ ಇರುತ್ತಿದ್ದರೂ, ಹೆಚ್ಚಿನ ವಿವರಗಳಾಗಲೀ, ಸಂದರ್ಭಗಳಾಗಲೀ ಒದಗದ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲ. ಒಂದೊಮ್ಮೆ ಫೇಸ್ ಬುಕ್ ನೋಡುತ್ತಿರುವಾಗ ಅಲ್ಲಿ ಕಂಡು ಬಂದ ಹೆಸರು ಮೇಘನಾ ಅಜ್ಜಂಪುರ ಎಂದಿತ್ತು. ಅಜ್ಜಂಪುರವೆಂಬ ಉಲ್ಲೇಖ ಎಲ್ಲಿ ಕಂಡುಬಂದರೂ ಅದನ್ನು ಅನುಸರಿಸಿ ಹೋಗಿ, ಅವರು ಯಾರೆಂಬುದನ್ನು ತಿಳಿಯುವ ಉಮೇದಿನಿಂದಾಗಿಯೇ ಇಷ್ಟು ಲೇಖನಗಳನ್ನು ಬರೆಯಲು, ಬರೆಸಲು ಸಾಧ್ಯವಾಯಿತು. ಅದರಂತೆ ನಾನು ಆ ಹೆಸರನ್ನು ಅನುಸರಿಸಿ ಹೋದಾಗ ಅಮೆರಿಕಾದಲ್ಲಿರುವ ಮೇಘನಾ ಎ.ಆರ್.ಆರ್. ಎಂದೇ ವಿದ್ಯಾರ್ಥಿವೃಂದದಲ್ಲಿ ಖ್ಯಾತರಾಗಿದ್ದ ನಮ್ಮ ಉಪಾಧ್ಯಾಯರಾಗಿದ್ದ ಎ. ರಾಮರಾಯರ ಪುತ್ರಿ ಎಂದು ತಿಳಿಯಿತು.  ನಂತರ ಅವರಿಂದ ಫೋನ್ ನಂಬರು ತಿಳಿದು ರಾಮರಾಯರೊಂದಿಗೆ ಸಾಧಿಸಿದ ಸಂಪರ್ಕ ಅವರನ್ನು ಇನ್ನಷ್ಟು ಹತ್ತಿರ ತಂದಿತು. ಕಳೆದ ವರ್ಷ ಅವರು ಶಿವಮೊಗ್ಗದಲ್ಲಿ ಮದುವೆಯೊಂದಕ್ಕೆ ಬಂದಿದ್ದರು. ನನ್ನನ್ನು ಕಲ್ಯಾಣಮಂಟಪಕ್ಕೆ ಬರಹೇಳಿದರು ಸಮೀಪದಲ್ಲೇ ಕುಳಿತು ಮಾತನಾಡುತ್ತಾ ಇಡೀ ದಿನ ಕಳೆದೆವು. ಆಗ ನನ್ನೊಡನೆ ಅವರು ಹಂಚಿಕೊಂಡ ಅವರ ವೃತ್ತಿ ಜೀವನದ, ಅಜ್ಜಂಪುರದ ಅಂದಿನ ದಿನಗಳ ನೆನಪುಗಳ ಸಂಗ್ರಹ ಇಲ್ಲಿದೆ.
1965ರಲ್ಲಿ ಶ್ರೀ ಎ. ರಾಮರಾವ್
ಈ ಹಿಂದೆ ರಾಮರಾಯರ ಹಿರಿಯ ಸಹೋದರ ವೆಂಕಟೇಶಮೂರ್ತಿಗಳ ಬಗ್ಗೆ ಅವರ ಪುತ್ರಿ ಬರೆದ ಲೇಖನ ಪ್ರಕಟವಾಗಿತ್ತು. 1940ರಲ್ಲಿ ಜನಿಸಿದ ರಾಮರಾವ್, ಅಜ್ಜಂಪುರದ ಆರ್.ಇ.ಎ. (ರೂರಲ್ ಎಜುಕೇಷನ್ ಸೊಸೈಟಿ) ಶಾಲೆಯ ಆರಂಭಿಕ ವಿದ್ಯಾರ್ಥಿಗಳಲ್ಲಿ ಒಬ್ಬರು. ಅವರು ಅಧ್ಯಾಪಕರಾದದ್ದು ಒಂದು ವಿಶೇಷವೇ ಸರಿ. ಏಕೆಂದರೆ 1960-65ರವರೆಗೆ ಅವರು ಭಾರತದ ರಕ್ಷಣಾ ಇಲಾಖೆಯ ಸರ್ವೇ ವಿಭಾಗದಲ್ಲ ಅಧಿಕಾರಿಗಳಾಗಿ ಕೆಲಸಮಾಡಿದ್ದರು. ಗೋವಾ, ಬೆಂಗಳೂರುಗಳಲ್ಲಿ ಕೆಲಸಮಾಡಿ, ಡಾರ್ಜಿಲಿಂಗ್ ನ ಹಿಮಾಲಯ ಪರ್ವತಾರೋಹಣ ಸಂಸ್ಥೆಯಲ್ಲಿ, ಹಿಲ್ ಕ್ಲೈಂಬಿಂಗ್ ತರಬೇತಿ ಪಡೆದು ಚಾರಣ, ಸಾಹಸ ಕ್ರೀಡಾ ಚಟವಟಿಕೆಗಳಲ್ಲಿ ಭಾಗವಹಿಸಿದರು. ಮೂಲತಃ ವಿಜ್ಞಾನದ ವಿದ್ಯಾರ್ಥಿಯಾಗಿ ಬಿ.ಎಸ್ಸಿ. ಮುಗಿಸಿದ ನಂತರ ಅವರು ಡಿ.ಕಾಂ. ಹಾಗೂ ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿಗಳನ್ನು ಪಡೆದರು. ಅಜ್ಜಂಪುರದ ಎಸ್.ಎಸ್.ಟಿ.ಬಿ. ಪ್ರೌಢಶಾಲೆಯಲ್ಲಿ ಅಲ್ಪಕಾಲದ ಸೇವೆಯ ನಂತರ ಬೆಂಗಳೂರು ಸಮೀಪದ ನೆಲಮಂಗಲದಲ್ಲಿ ತಮ್ಮ ವೃತ್ತಿಜೀವನದ ಬಹುಭಾಗವನ್ನು ಕಳೆದರು. ನಂತರ ಬೆಂಗಳೂರಿನಲ್ಲಿ ಬಸವನಗುಡಿಯಲ್ಲಿ ಸರ್ಕಾರೀ ಜೂನಿಯರ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರದ ಹಿರಿಯ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. 2008ರಲ್ಲಿ ಕುವೆಂಪು ವಿವಿಯಿಂದ ಪಿ.ಎಚ್.ಡಿ. ಪದವಿಯನ್ನು ಪಡೆದ ರಾಮರಾವ್ ಬೆಂಗಳೂರಿಗೆ ಬಂದು ನೆಲೆಸಿದ ನಂತರ ತಮ್ಮನ್ನು ಅನೇಕ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನೆಮ್ಮದಿಯ ನಿವೃತ್ತ ಜೀವನ ಕಳೆಯುತ್ತಿದ್ದಾರೆ. 77ರ ಈ ವಯಸ್ಸಿನಲ್ಲಿಯೂ ತುಂಬ ಚಟುವಟಿಕೆಯಿಂದಿದ್ದು, ಲವಲವಿಕೆಯ ಮಾತುಗಾರಿಕೆ ಅವರದು.

ಶ್ರೀ ಎ. ರಾಮರಾವ್ ಮತ್ತು ಶ್ರೀಮತಿ ಸೀತಾ ರಾವ್
ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ರಾಮರಾಯರು ಜೆ.ಪಿ. ನಗರದಲ್ಲಿ ನೆಲೆಸಿರುವರು. ಅವರು ಅಲ್ಲಿನ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷರು, ಅಲ್ಲಿನ ರೋಟರಿ ಸಂಸ್ಥೆಯ ನಿರ್ದೇಶಕರು. ಪತ್ರಿಕಾ ವ್ಯವಸಾಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ರಾಮರಾವ್ ಪುಣೆಯ ಮಹಾರಾಷ್ಟ್ರ ಹೆರಾಲ್ಡ್ ಪತ್ರಿಕೆಯ ಮುಖ್ಯ ವರದಿಗಾರರು, ಬೆಂಗಳೂರಿನ ಡಿ.ಎನ್.ಎ. ಪತ್ರಿಕೆಗೆ ಅಂಕಣಕಾರರಾಗಿಯೂ ಕಾರ್ಯನಿರ್ವಹಿಸುತ್ತಿರುವರು.
ಅವರ ಸೇವೆಯನ್ನು ಗೌರವಿಸಿ ಬೆಂಗಳೂರಿನ ಕೆಂಪೇಗೌಡ ರಾಜ್ಯ ಪ್ರಶಸ್ತಿಯಿಂದ ಪುರಸ್ಕರಿಸಲಾಗಿದೆ. ಅತ್ಯುತ್ತಮ ಅಧ್ಯಾಪಕರೆಂದು ಗೌರವಿಸಲಾಗಿದೆ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಸಲಹಾತಜ್ಞರಾಗಿ, ಸಾಮಾಜಿಕ ಕಾರ್ಯಕರ್ತ, ಲೇಖಕ ಹಾಗೂ ಪ್ರಕಾಶಕರಾಗಿರುವ ಬಹುಮುಖ ಪ್ರತಿಭೆಯ ಅಜ್ಜಂಪುರ ರಾಮರಾವ್ ಕನ್ನಡ ಇಂಗ್ಲಿಷ್ ಗಳಲ್ಲಿ ಅಪಾರ ಪ್ರತಿಭೆ ಹೊಂದಿರುವ ಉತ್ಸಾಹೀ ವ್ಯಕ್ತಿ. ಅಜ್ಜಂಪುರದಲ್ಲಿನ ಅವರ ಸೇವಾವಧಿ ಕಡಿಮೆಯದಾಗಿದ್ದರೂ, ಉಳಿದಂತೆ ಅವರು ರಾಜಧಾನಿ ಬೆಂಗಳೂರಿನಲ್ಲಿ ಅಜ್ಜಂಪುರದ ಹೆಸರನ್ನು ಸ್ಥಾಯಿಗೊಳಿಸುವ ದೇಣಿಗೆಯನ್ನು ನೀಡಿದ್ದಾರೆ. ವಿದ್ಯಾರ್ಥಿಗಳ ಉಪಯೋಗಕ್ಕೆಂದು ರಾಜ್ಯಶಾಸ್ತ್ರವನ್ನು ಕುರಿತು ಕನ್ನಡದಲ್ಲಿ ಪುಸ್ತಕಗಳನ್ನು ರಚಿಸಿದ್ದಾರೆ, ಭಾರತದ ಸಂವಿಧಾನ ಒಂದು ಸಮೀಕ್ಷೆ, ಭಾರತದ ವಿದೇಶಾಂಗ ನೀತಿ, ಉಪವಾಸ ಮತ್ತು ನಿದ್ರೆ, ಆದರ್ಶ ವಿವಾಹ ದೀಪಿಕಾ, ಮಾರಕ ರೋಗ ಜಾಂಡಿಸ್ ಮುಂತಾದ ಅನೇಕ ಕೃತಿಗಳನ್ನು ರಚಿಸಿದ್ದಾರೆ.
-0-0-0-0-0-0-0-0-0-0-0-0-0-0-0-0-

ಕಾಮೆಂಟ್‌ಗಳು

  1. ಆ ಮಿಲಿಟರಿ ಶಿಸ್ತು, ನೆಡಗೆ,ನೋಟ ಆದರೆ ಹೃದಯತುಂಬಿ ಆಡುತ್ತಿದ್ದ ಪ್ರೀತಿಯ ಮೃದು ಮಾತು, ಹೈಸ್ಕೂಲ್ ನಲ್ಲಿ ಅವರು ನಮಗೆ ಮಾಡಿದ ಪಾಠ, ಆಗಾಗ ಅವರು ಉಪಯೋಗಿಸುತ್ತಿದ್ದ ಶಿವಾಯಿ ಪದ ಎಲ್ಲಾ ನೆನಪಾಗುತ್ತಿದೆ. ಆ ನಗು ಮೊಗದಲ್ಲಿದ್ದ ವೀರ ಮೀಸೆ ಇವೆಲ್ಲಾ ಅವರ ಚಿತ್ರವನ್ನು ನಮ್ಮ ಮನದಲ್ಲಿ ಶಾಶ್ವತವಾಗಿ ನೆಲೆಗೊಂಡಿದೆ. ಮೆಚ್ಚಿನ ಎ ಆರ್ ಆರ್ ಮಾಸ್ಟರ್ ಗೆ ಪ್ರೀತಿಯ,ಶ್ರದ್ಧಾಪೂರ್ವಕ ನಮನಗಳು. ಈಗ ಅವರ ಚಿತ್ರ, ಚಿತ್ರಣ ನೀಡಿ ಮುದ ನೀಡಿದ ದತ್ತಣ್ಣನಿಗೂ ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.