91. ಅಜ್ಜಂಪುರದ ಹಿರಿಯ ಪತ್ರಕರ್ತ, ವರ್ತಕ ಜಿ.ಬಿ.ಮಲ್ಲಿಕಾರ್ಜುನಸ್ವಾಮಿ



ಕಿರಿಯರ ಮೇಲೆ ಹಿರಿಯರ ಪ್ರಭಾವವು ಅಪರೋಕ್ಷವಾಗಿಯಾದರೂ ಇರುತ್ತದೆನ್ನಲು ನಾನು ಕಂಡಂತೆ  ಜಿ.ಬಿ. ಮಲ್ಲಿಕಾರ್ಜುನ ಸ್ವಾಮಿಯವರೂ ಉತ್ತಮ ಉದಾಹರಣೆ ಎಂದರೆ ತಪ್ಪಾಗದು. ಸಾಂಘಿಕ ಚಟುವಟಿಕೆಗಳು, ಕಷ್ಟಗಳನ್ನು ಸಹಿಸಿಕೊಂಡು ನಗುತ್ತ ಬಾಳುವುದು, ವಿನೀತತೆಗಳೇ ಅವರ ಬಲವೆಂದು ಅವರನ್ನು ಹತ್ತಿರದಿಂದ ನೋಡಿ ತಿಳಿದಿದ್ದೇನೆ.  70ರ ಪ್ರಾಯದಲ್ಲಿರುವ ಅವರ ವೃತ್ತಿಪರ ಚಟುವಟಿಕೆ ಮತ್ತು ಕ್ರಿಯಾಶೀಲತೆಗಳು ಬೆರಗು ಹುಟ್ಟಿಸುತ್ತವೆ. ಜನರೊಂದಿಗಿನ ಸೌಹಾರ್ದದ ನಡವಳಿಕೆ, ಹೊಸ ಸಂಗತಿಗಳನ್ನು ತಿಳಿಯುವ ಕುತೂಹಲಗಳಿಂದಾಗಿ ಅವರು ಆಪ್ತರಾಗುತ್ತಾರೆ. 

ಮನಸ್ಸುಮಾಡಿದ್ದರೆ, ಸ್ಥಳೀಯ ರಾಜಕೀಯದಲ್ಲಿ ಮಿಂಚಬಹುದಾಗಿದ್ದ  ಎಲ್ಲ ಅವಕಾಶಗಳಿದ್ದರೂ, ಅದರಿಂದ ದೂರವುಳಿದು, ತಮ್ಮಿಂದಾದ ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ನಾನು ಇನ್ನೂ ಎರಡು ತಿಂಗಳು ಅಮೆರಿಕಾದಲ್ಲಿರಬೇಕಿದೆ. ಬ್ಲಾಗ್ ಪ್ರಕಟಣೆ ನಿಲ್ಲಬಾರದೆಂಬುದು ಆಶಯ. ಅದು ಈವರೆಗೂ ನಡೆದುಬಂದಿದೆ.  ಮಿತ್ರ ಅಪೂರ್ವ, ಆರ್ಯಮಿತ್ರ ಮುಂತಾದವರ ಸಹಕಾರದಿಂದ ಇದು ಸಾಧ್ಯವಾಗಿದೆ. ಮಲ್ಲಿಕಾರ್ಜುನ ಸ್ವಾಮಿಯವರನ್ನು ಕುರಿತಾಗಿ ಚಿಕ್ಕದೊಂದು ಟಿಪ್ಪಣಿಯನ್ನು ಅವರ ಸೋದರ, ನನ್ನ ಮಿತ್ರ ಅಪೂರ್ವ ಇಲ್ಲಿ ದಾಖಲಿಸಿದ್ದಾರೆ. ಅವರಿಗೆ ವಂದನೆಗಳು.  
ಶಂಕರ ಅಜ್ಜಂಪುರ 
ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ
ದೂರವಾಣಿ - 99866 72483
ಮಿಂಚಂಚೆ - shankarajp@gmail.com
==================================================================================================

ಒಂದು ಮನಮಿಡಿಯುವ ದೃಶ್ಯ. ಕರುಳು ಕತ್ತರಿಸುವ ಭಾವನಾತ್ಮಕ ಸನ್ನಿವೇಶ. ಖಾಸಗಿ ಸಂಸ್ಥೆಯೊಂದರಲ್ಲಿ ಗುಮಾಸ್ತನಾಗಿ ದುಡಿಯುವ ಶಾಮಣ್ಣ, ಭ್ರಷ್ಟ ವ್ಯವಸ್ಥೆಯ ಚಕ್ರಕ್ಕೆ ಸಿಲುಕಿ ಎಲ್ಲವನ್ನೂ ಕಳೆದುಕೊಂಡಿರುತ್ತಾನೆ. ಸಾಲ ತೀರಿಸಲು ತನ್ನ ಎಳೆಯ ವಯಸ್ಸಿನ ಮಗನನ್ನೇ ಮಾರುತ್ತಾನೆ. ನೋಡುವ  ಜನ ಕಣ್ಣೀರು ಹಾಕುತ್ತಾರೆ. ಆ ಹುಡುಗನನ್ನು ಕೊಂಡವರು ಶಾಮಣ್ಣನಿಂದ ದೂರಮಾಡಿ ಎಳೆದೊಯ್ಯುತ್ತಾರೆ. ಆ ಹುಡುಗ ಶಾಮಣ್ಣನ ಏಕಮಾತ್ರ ಪುತ್ರ ಕಿಟ್ಟು. ಕಿಟ್ಟುವಿನ ಆಕ್ರಂದನ ಮುಗಿಲು ಮುಟ್ಟುತ್ತದೆ. ಶಾಮಣ್ಣನಿಗೆ ಹುಚ್ಚು ಹಿಡಿಯುತ್ತದೆ. ಈ ದುರಂತಮಯ ದೃಶ್ಯ ಹುಚ್ಚ ಎಂಬ ನಾಟಕದ ಕೊನೆಯ ದೃಶ್ಯ. ಅಜ್ಜಂಪುರದ ಕಲಾಸೇವಾ ಸಂಘದ ಕಲಾವಿದರು ಈ ನಾಟಕವನ್ನು ಅಭಿನಯಿಸುತ್ತಿದ್ದರು. ಈ ನಾಟಕದ ನಾಯಕನ ಮಗ ಕಿಟ್ಟು ಪಾತ್ರದಲ್ಲಿ ಅಭಿನಯಿಸುತ್ತಿದ್ದವರು ಜಿ.ಬಿ. ಮಲ್ಲಿಕಾರ್ಜುನ ಸ್ವಾಮಿ. ಆಗ ಐದನೇ ತರಗತಿಯಲ್ಲಿ ಓದುತ್ತಿದ್ದರು. ಈಗ ಅವರಿಗೆ 70ರ ಹರೆಯ. ಹಿರಿಯ ಪತ್ರಕರ್ತರಾಗಿ, ಪುಸ್ತಕ ವ್ಯಾಪಾರಿಯಾಗಿ ಅಜ್ಜಂಪುರದ ಜನತೆಗೆ ಚಿರಪರಿಚಿತರು.

ಚಿಕ್ಕ ವಯಸ್ಸಿನಲ್ಲೇ ಕಲಾಸೇವಾ ಸಂಘದ ಮೂಲಕ ರಂಗಪ್ರವೇಶ ಮಾಡಿದ್ದ ಜಿ.ಬಿ.ಎಂ. ಸ್ವಾಮಿ ಯುವಕನಾಗಿದ್ದಾಗ ಒಂದು ವಿಡಂಬನಾತ್ಮಕ ನಾಟಕ ಬೀಗ ಶಕಾರದಲ್ಲಿ ಶಕಾರನಾಗಿ ಅಭಿನಯಿಸಿದ್ದು, ಆ ನಾಟಕ ಒಂದು ಯಶಸ್ವೀ ಪ್ರಯೋಗವೆನಿಸಿತ್ತು. ಸಂಘದ ಅತ್ಯಂತ ಜನಪ್ರಿಯ ನಾಟಕ ಶ್ರೀರಾಮ ಪಾದುಕಾ ಪಟ್ಟಾಭಿಷೇಕದಲ್ಲಿ ಯುವರಾಜ ದಶರಥನ ಪಾತ್ರ, ರಣಧೀರ ಕಂಠೀರವ ನಾಟಕದಲ್ಲಿ ಬೊಮ್ಮರಸ ಪಂಡಿತನ ಪಾತ್ರದಲ್ಲಿ ಕೂಡ ಸ್ವಾಮಿ ಮಿಂಚಿದ್ದರು.

ಜಿ.ಬಿ. ಮಲ್ಲಿಕಾರ್ಜನ ಸ್ವಾಮಿಯವರು ಅಜ್ಜಂಪುರದ ಒಂದು ಕಾಲದ ಹೆಸರಾಂತ ವರ್ತಕ ಜಿ.ಎಂ. ಬಸಪ್ಪನವರ ಜ್ಯೇಷ್ಠಪುತ್ರ­­­. ಜಿ.ಎಂ. ಬಸಪ್ಪನವರು ತಮ್ಮ 56ನೇ ವಯಸ್ಸಿನಲ್ಲಿ ಅನಿರೀಕ್ಷಿತವಾಗಿ ತೀರಿಕೊಂಡರು. ಜ್ಯೇಷ್ಠಪುತ್ರನಾದ ಸ್ವಾಮಿಯವರು ಹತ್ತು ಮಂದಿಯ ಸಂಸಾರವನ್ನು ನಿಭಾಯಿಸಬೇಕಾಯಿತು. ಜಿ.ಎಂ. ಬಸಪ್ಪನವರ ಒಳ್ಳೆಯ ಹೆಸರನ್ನು ಉಳಿಸುವಲ್ಲಿ ಸಫಲರೂ ಆದರು. ಸ್ವಾಮಿ ಅಣ್ಣ ಎಂದೇ ಕರೆಯಲ್ಪಡುವ ಅವರು ಮನೆಯ ಹಿರಿಯನಾಗಿ ದಿನಸಿ ವ್ಯಾಪಾರ, ಪುಸ್ತಕ ವ್ಯಾಪಾರ ಕೈಗೊಂಡರು. ಪುಸ್ತಕ ವ್ಯಾಪಾರವನ್ನು ಇಂದಿಗೂ ಉಳಿಸಿಕೊಂಡಿದ್ದಾರೆ.

ರಂಗ ಚಟುವಟಿಕೆ, ವ್ಯಾಪಾರ ಇಷ್ಟಕ್ಕೇ ಅವರು ಜೀವನದಲ್ಲಿ ಮಿತಿ ಹಾಕಿಕೊಂಡಿರಲಿಲ್ಲ. ವಿದ್ಯಾರ್ಥಿ ದೆಸೆಯಲ್ಲೇ ಸೇವಾದಳ, ಎ.ಸಿ.ಸಿ.ಗಳ ನಂಟು. ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರಣೆ. ಗೃಹರಕ್ಷಕದಳ ಅಜ್ಜಂಪುರದಲ್ಲಿ ಪ್ರಾರಂಭವಾದ ಹೊಸತರಲ್ಲಿ ಗೃಹರಕ್ಷಕರಾಗಿ ಸೇವೆ ಸಲ್ಲಿಸಿದರು. ಕನ್ನಡ ಪ್ರಭ ದಿನಪತ್ರಿಕೆಯ ವಿತರಕರಾಗಿ, ವರದಿಗಾರರಾಗಿ ನಾಲ್ಕು ದಶಕಗಳ ಕಾಲ ದುಡಿದರು.

ಸ್ವಾಮಿಯವರು ಸದಾ ಸ್ಮರಿಸುವ ಎರಡು ಹಿರಿಯ ಜೀವಗಳೆಂದರೆ ಪತ್ರಕರ್ತ, ಕಲಾಸೇವಾ ಸಂಘದ ರಂಗ ನಿರ್ದೇಶಕ ಎ.ಪಿ. ನಾಗರಾಜ ಶ್ರೇಷ್ಠಿಯವರು ಮತ್ತು ಗುರುಗಳಾದ ಎ. ಕ್ಷೇತ್ರಪಾಲಯ್ಯನವರು. ವಿದ್ಯಾರ್ಥಿ ದೆಸೆಯ ಗುರುಗಳಾಗದಿದ್ದರೂ ಎ. ಕ್ಷೇತ್ರಪಾಲಯ್ಯ ಮೇಷ್ಟ್ರು ನನ್ನ ಜೀವನದ ಮಾರ್ಗದರ್ಶಿ ಗುರುಗಳಾಗಿದ್ದರು ಎನ್ನುತ್ತಾರೆ ಸ್ವಾಮಿ. ಜೀವನದ ಸಂಕಷ್ಟದ ಪರಿಸ್ಥಿತಿಗಳಲ್ಲಿ ಮೇಷ್ಟ್ರು ಮಾರ್ಗದರ್ಶನ ಮಾಡಿ ಧೈರ್ಯ ತುಂಬುತ್ತಿದ್ದರು. ಒಳ್ಳೆಯ ಕೆಲಸ ಮಾಡಿದಾಗ ಹುರಿದುಂಬಿಸುತ್ತಿದ್ದರು.

ಶೆಟ್ರು ಸಿದ್ದಪ್ಪ ಹೈಸ್ಕೂಲಿನ ಬೆಳ್ಳಿಹಬ್ಬದ ಸ್ಮರಣ ಸಂಚಿಕೆ ವಿಹಂಗಮ ಸಂಪಾದಕೀಯ ಮಂಡಳಿಯ ಸದಸ್ಯರಾಗಿ, ಬಸವೇಶ್ವರ ಸಮುದಾಯ ಭವನದ ಸಹಕಾರ್ಯದರ್ಶಿಯಾಗಿ, ಪೇಟೆ ವೀರಶೈವ ಮಂಡಳಿಯಲ್ಲಿ ಕ್ರಿಯಾಶೀಲರಾಗಿ ದುಡಿದದ್ದನ್ನು ಸ್ಮರಿಸುತ್ತಾರೆ. ಇಂದು ವೀರಶೈವ-ಲಿಂಗಾಯತ ಅಲ್ಪಸಂಖ್ಯಾತ ಮತ ಘೋಷಣೆಯ ರಾಜಕೀಯ ಅರ್ಥವಿಲ್ಲದ್ದು ಎನ್ನುತ್ತಾರೆ. ಹಿಂದವಃ ಸೋದರಾಃ ಸರ್ವೇ ಎಂದು ಪೇಜಾವರ ಸ್ವಾಮಿಗಳು ಘೋಷಿಸಿದ ಉಡುಪಿಯ ಹಿಂದೂ ಮಹಾ ಸಮ್ಮೇಳನದ ಭಾಗಿಯಾದ ಹಿನ್ನೆಲೆಯುಳ್ಳ ನಮ್ಮಂಥವರಿಗೆ ಈ ದೊಂಬರಾಟ ನೋಡಿ ವಿಷಾದವೆನಿಸುತ್ತದೆ ಎನ್ನುತ್ತಾರೆ. ವಿಕ್ರಮ, ಉತ್ಥಾನ ಪತ್ರಿಕೆಗಳನ್ನು ತರಿಸಿ ವಿತರಿಸಿದ್ದನ್ನು ನೆನಪು ಮಾಡಿಕೊಳ್ಳುತ್ತಾರೆ. ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಾಶನದ ಪ್ರಕಟಣೆಯ ಕೃತಿಗಳ ಮಾರಾಟ, ಭಾರತ-ಭಾರತಿ ಪುಸ್ತಕ ಸಂಪದದ ಮಕ್ಕಳ ಪುಸ್ತಕಗಳ ವಿತರಣೆಗಳ ಬಗೆಗೆ ಸ್ವಾಮಿಯವರಲ್ಲಿ ಒಂದು ಬಗೆಯ ಧನ್ಯತೆಯಿದೆ. ರಾಷ್ಟ್ರೀಯ ವಿಚಾರಧಾರೆಯ ಸಾಹಿತ್ಯಕೃತಿಗಳನ್ನು ಅಜ್ಜಂಪುರದ ಅಂದಿನ ಯುವಕರಿಗೆ, ಮಕ್ಕಳಿಗೆ ಪರಿಚಯಿಸಿದ ಸಾರ್ಥಕತೆಯ ಭಾವ ಅವರಲ್ಲಿದೆ. ಕಲಾ ಸೇವಾ ಸಂಘ ಪ್ರೌಢಶಾಲೆಯ ಶರ್ಮಾ ಮೇಷ್ಟ್ರು ಸರಸ್ವತೀ ಪೂಜೆಗೆ ಭಾರತ-ಭಾರತಿ ಸಂಪದದ ಪುಸ್ತಕಗಳನ್ನು ಇವರ ಪುಸ್ತಕದ ಅಂಗಡಿಯಲ್ಲಿ ಕೊಂಡು ಶಾಲೆಯ ಗ್ರಂಥಾಲಯದಲ್ಲಿ ಮಕ್ಕಳು ಓದುವಂತೆ ಪ್ರೇರೇಪಿಸುತ್ತಿದ್ದರು ಎಂದು ನೆನೆಯುತ್ತಾರೆ.

ಜೀವನ ಸಂಗಾತಿ, ಸಹಧರ್ಮಿಣಿ ಶ್ರೀಮತಿ ಶಾಂತಲಾ, ಮೂವರು ಪುತ್ರಿಯರು, ಅಳಿಯಂದಿರು ಹಾಗೂ ಮೊಮ್ಮಕ್ಕಳು ಬದುಕಿನಲ್ಲಿ ಸಾರ್ಥಕತೆ ತುಂಬಿದ್ದಾರೆ. ಬಾಲ್ಯ, ಯೌವನ ಕಾಲದ ರಂಗ ಚಟವಟಿಕೆಗಳು, ಪ್ರೌಢವಯಸ್ಸಿನಲ್ಲಿ ಸಾಮಾಜಿಕ ಚಟವಟಿಕೆಗಳು, ವ್ಯಾಪಾರ-ವಹಿವಾಟಿನ ವೃತ್ತಿಧರ್ಮದ ಘಟನೆಗಳು, ಜೀವನೋತ್ಸಾಹ ತುಂಬಿದ ಬಂಧು-ಮಿತ್ರರು, ಬದುಕಿನ ಮಾರ್ಗದರ್ಶಿಗಳಾಗಿದ್ದ ಹಿರಿಯರು-ಹೀಗೆ ಎಲ್ಲವೂ ನನಗೆ ಸವಿನೆನಪುಗಳು. ಮೊದಲೇ ದುರ್ಭರವೆನಿಸಿದ್ದ ಕಹಿನೆನಪುಗಳು ಬೇಡವೇ ಬೇಡ! ಸವಿನೆನಪುಗಳನ್ನು ಮಾತ್ರ ನೆನೆಯುವ ಸ್ವಾಮಿ ಸವಿ ನೆನಪುಗಳು ಬೇಕು ಸವಿಯಲೀ ಬದುಕು ಎನ್ನುತ್ತಾರೆ. ವರ್ತಮಾನ ಸುಂದರವಾಗಿಯೇ ಇದೆ. ಎಲ್ಲವೂ ನಾವು ಸ್ವೀಕರಿಸುವ ಮನೋಧರ್ಮದಲ್ಲಿದೆ ಎಂಬ ಮನೋಭಾವ ಅವರದ್ದು.


-0-0-0-0-0-0-0-0-0-0-0-0-0-

ಕಾಮೆಂಟ್‌ಗಳು

  1. B S Laxminarayana Rao ನಮ್ಮ ಪ್ರೀತಿಯ ಸ್ವಾಮಣ್ಣ, ವಯಸ್ಸಿನಲ್ಲಿ ಸಾಕಷ್ಟು ಹಿರಿಯರಾಗಿದ್ದರೂ, ಆತ್ಮೀಯ ಗೆಳೆಯರಾಗಿ ಸಂಘ ಕಾರ್ಯದಲ್ಲಿ ಕೈ ಜೋಡಿಸಿ ಹೆಗಲು ನೀಡಿ ದವರು.ಭಗವಂತ ನೂರ್ಕಾಲ ಹೆಚ್ಚಿನ ಆಯುರಾರೋಗ್ಯಗಳನ್ನು, ಸುಖ ಶಾಂತಿ ನೆಮ್ಮದಿಗಳನ್ನು ನೀಡಿ ಕಾಪಾಡಲಿ.

    Belavadi Rajarao Krishnamurthy
    Belavadi Rajarao Krishnamurthy Simplicity andre g b m Swamy avaru

    Srinivasa Krishnamurty
    Srinivasa Krishnamurty Nannurina swamiyanna navaru nuru varsha naguta balali

    ಪ್ರತ್ಯುತ್ತರಅಳಿಸಿ
  2. ಸ್ವಾಮಣ್ಣ ಅವರ ಚಿತ್ರ, ಚೊಕ್ಕ ಪರಿಚಯ ಚನ್ನಾಗಿ ಬಂದಿದೆ. ಅವರ RSSನ ಒಡನಾಟ, ಹಿಂದಿನ ಜನಸಂಘದ ಕಾರ್ಯ ಚಟುವಟಿಕೆಗಳನ್ನು, ನೆನೆಯದಿದ್ದಲ್ಲಿ ಅಪೂರ್ಣವೆನಿಸೀತು. ಪದ್ಮಾವತಿ ವಿಠಲ್ ರಾವ್, ಕರಂಬಳ್ಳಿ ಸಂಜೀವಣ್ಣ, ಮಲ್ಲಿಕಾರ್ಜುನಯ್ಯ, ಮಳ್ಳೂರು ಆನಂದರಾವ್ ಇವರೆಲ್ಲರ ಎಂಎಲ್ ಸಿ, ಚುನಾವಣೆಗಳಲ್ಲಿ , ಅಜ್ಜಂಪುರದ ಸುತ್ತಮುತ್ತಲಿನ ಜವಾಬ್ದಾರಿಯನ್ನು, ಬೆರಳೆನಿಕೆಯ ಗೆಳೆರರೊಡನೆ ನಿರ್ವಹಿಸಿದ ಪರಿ, ಈಗಿನ ಬಿಜೆಪಿ ಧುರೀಣರಿಗೆ ತಿಳಿದಿರಲಿಕ್ಕಿಲ್ಲ. ದಶಕಗಳ ಕಾಲ ಸಸಿ ನೆಟ್ಟು , ಪೋಷಿಸಿ ಬೆಳಸಿದ ತೆಂಗಿನ ತೋಟದ ಫಲ ಈಗ ಬೇರೆಯವರು ಅನುಭವಿಸುವಾಗಲೂ, ಸಂತಸ, ಆನಂದ ಪಡುವ ಹಿರಿಯ ಚೇತನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯವರು.ಹಾಗೆ ಹೆಸರಿಟ್ಟು ಹೇಳಿದರೆ ಹೃದಯಕ್ಕೆ ದೂರವಾದಾರು.ನಮ್ಮ ಸ್ವಾಮಣ್ಣ ನೂರ್ಕಾಲ ಸುಖವಾಗಿ ಬಾಳಲಿ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.