94. ಅಜ್ಜಂಪುರ ಕೋಟೆ ಶ್ರೀ ಆಂಜನೇಯ ದೇವಾಲಯದ ದ್ವಿತೀಯ ವಾರ್ಷಿಕ ಹನುಮ ಜಯಂತಿ

ಎಲ್ಲರಿಗೂ 2019ನೇ ವರ್ಷದ ಶುಭಾಶಯಗಳು
ಅಜ್ಜಂಪುರದಲ್ಲಿ ಕಳೆದ ವರ್ಷ ಹನುಮ ಜಯಂತಿಯು ನಡೆದ ಸಂಭ್ರಮವನ್ನು ನೆನಪಿಸಿಕೊಂಡರೆ, ನ ಭೂತೋ, ನ ಭವಿಷ್ಯತಿ ಎಂಬತಿತ್ತು. ನ ಭೂತೋ-ಇದನ್ನು ಒಪ್ಪಿಕೊಳ್ಳೋಣ, ಆದರೆ ನ ಭವಿಷ್ಯತಿ ಎಂಬಂತೆ ಆಗಲಿಲ್ಲ. ಈ ವರ್ಷವೂ ಅದೇ ಉತ್ಸಾಹದಿಂದ ನಡೆಸಲಾಗಿದೆ. ಈ ಸಂಬಂಧವಾಗಿ ನಾನು ಅವಧೂತ ಬಳಗದ ಕೆಲವರನ್ನು ಮಾತನಾಡಿಸಿದ್ದುಂಟು. "ಭಗವಂತನ ಸೇವೆ ನಡೆಯಲು ಒದಗಿದ ಪ್ರೇರಣೆಯನ್ನು ನಾವು ಮರೆಯಲಾರೆವು. ನಮ್ಮ ನಿರೀಕ್ಷೆಗೂ ಮೀರಿ ಈ ಉತ್ಸವ ನಡೆದದ್ದು ನಮ್ಮಲ್ಲಿ ಹುಮ್ಮಸ್ಸನ್ನು ತುಂಬಿದೆ" ಎಂದು ಹೇಳಿಕೊಂಡರು. 

ಊರಿನ ಸಂಭ್ರಮಕ್ಕೆ, ಜನಗಳ ಭಾಗವಹಿಸುವಿಕೆಗೆ ಇಂಥ ಉತ್ಸವಗಳು, ಜಾತ್ರೆಗಳು, ಮೆರವಣಿಗೆಗಳು ಎಲ್ಲವೂ ಅವಶ್ಯಕವೇ ಸರಿ. ಅದನ್ನು ಒಂದೇ ಕ್ರಮದಲ್ಲಿ ನಿರ್ವಹಿಸುವ ವ್ಯವಸ್ಥೆ ಇರುವಂತಾದರೆ, ಅದು ಸಾಂಸ್ಕೃತಿಕ, ಧಾರ್ಮಿಕ ಕಲಾಪಗಳಿಗೆ ನೀಡುವ ಮಹತ್ವದ ಕೊಡುಗೆಯಾದೀತು. ಇಂಥ ಉತ್ಸವ, ಆಚರಣೆಗಳು ಊರೊಟ್ಟಿನ ಜನರನ್ನು ಒಂದುಗೂಡಿಸಲು ನೆರವಾಗುತ್ತದೆ. ಅದನ್ನುಅಜ್ಜಂಪುರದ ಯುವಪೀಳಿಗೆ ಅರ್ಥೈಸಿಕೊಂಡು ಮುಂದುವರೆಸುವಂತಾಗಲಿ ಎನ್ನುವುದು ಆಶಯ.

ಚಿತ್ರ-ಲೇಖನಗಳನ್ನು ಗೆಳೆಯ ಅಪೂರ್ವ ಅಜ್ಜಂಪುರ ಸಿದ್ಧಪಡಿಸಿದ್ದಾರೆ. ಅವರಿಗೆ ವಂದನೆಗಳು.
ಶಂಕರ ಅಜ್ಜಂಪುರ 
ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ
ದೂರವಾಣಿ - 99866 72483
ಮಿಂಚಂಚೆ - shankarajp@gmail.com
-------------------------------------------------------------------------------------------------------------------------------------------------------------------------------------------------



 


 







ಅದೃಷ್ಟವು ಮನುಷ್ಯನನ್ನು ಮಾತ್ರ ಅರಸಿ ಬಾರದು. ಅದು ದೇವರಿಗೂ ಸಲ್ಲುತ್ತದೆ ಎನ್ನಲು ಕೋಟೆ ಆಂಜನೇಯ ದೇವಾಲಯವು ಇಂದು ತಲುಪಿರುವ ಉಚ್ಛ್ರಾಯದ ಸ್ಥಿತಿಯನ್ನು ನೋಡುವಾಗ ಮನದಟ್ಟಾಗುತ್ತದೆ.   ಅಜ್ಜಂಪುರದ ಕೋಟೆ ಆಂಜನೇಯ ದೇವಸ್ಥಾನದ ಕಟ್ಟಡ ಅಷ್ಟು ಪ್ರಾಚೀನವಿರಲಾರದು. ಆದರೆ ಇಲ್ಲಿರುವ ಭವ್ಯ ವಿಗ್ರಹದ ಇತಿಹಾಸ ಹಳೆಯದೇ ಸರಿ. 



ವಿಜಯನಗರ ಶೈಲಿಯಲ್ಲಿರುವ ಈ ವಿಗ್ರಹವನ್ನು ಸಾಗಿಸುವಾಗ, ಗಾಡಿಯ ಅಚ್ಚು ಮುರಿದು ಇದು ಇಲ್ಲೇ ನೆಲೆ ನಿಲ್ಲುವಂತಾಯಿತು ಎಂಬ ಮಾತನ್ನು ಹಿರಿಯರು ಹೇಳುತ್ತಿದ್ದರು. ಐತಿಹಾಸಿಕವಾಗಿ ನೋಡುವಾಗ ಇದು ಕೋಟೆಯ ಬಾಗಿಲಿನ ಹೊರಗಿದ್ದುದರಿಂದ, ಹಿಂದಿನಿಂದಲೂ ಪೂಜೆಗೊಳ್ಳುತ್ತಿದೆ. 


ಬ್ರಾಹ್ಮಣ ಸಮಾಜದ ನೇತೃತ್ವದಲ್ಲಿ ದೇಗುಲದ ಕಾರ್ಯಕಲಾಪಗಳು ಲಾಗಾಯ್ತಿನಿಂದಲೂ ನಡೆದು ಬಂದಿವೆ. ಊರೊಟ್ಟಿನ ದೇವಸ್ಥಾನದಂತೆ ಊರಿನ ಎಲ್ಲರೂ ಆಂಜನೇಯನ ಭಕ್ತರಾಗಿದ್ದಾರೆ. ಹಾಗಾಗಿ ಹನುಮಜ್ಜಯಂತಿಯನ್ನು ಕಳೆದ ಎರಡು ವರ್ಷಗಳಿಂದ ಊರಿನ ಎಲ್ಲರೂ ಸೇರಿ, ವೈಭವದಿಂದ ಆಚರಿಸುತ್ತಾ ಬಂದಿದ್ದಾರೆ. ಮುಖ್ಯವಾಗಿ ಯುವಕರು ಸ್ವಯಂಸೇವಕರಂತೆ ಭಾಗವಹಿಸುತ್ತಾರೆ. 

ಈ ವರ್ಷ ದೇವಾಲಯದ ಅರ್ಚಕರಾಗಿದ್ದ ಮಾಧವರಾವ್ (ಮಾಧು) ನಿಧನದಿಂದಾಗಿ ಮುಂದಾಳುಗಳು ಗೊಂದಲದಲ್ಲಿದ್ದರಂತೆ. ನಂತರ ನಿರಂತರತೆ ತಪ್ಪಿಹೋಗಬಾರದು ಎಂದು ಭಾವಿಸಿ, ಎಂದಿನಂತೆ ವೈಭವದಿಂದ ಆಚರಿಸಿದರು. ಬೆಲಗೂರಿನ ಶ್ರೀ ಬಿಂದುಮಾಧವ ಶರ್ಮಾ ಅವರ  ಸ್ಫೂರ್ತಿ ಈ ಯುವಕರಿಗೆ ಇರಬೇಕು. ಶ್ರೀ ಶರ್ಮರು 2008ರಲ್ಲಿ ನಡೆದ ಈ ದೇವಾಲಯದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮಾರ್ಗದರ್ಶನ ನೀಡಿದ್ದರು. ಅವರಿಂದಲೇ ದೇಗುಲದ ಮೇಲಿನ ಕಲಶದ ಸ್ಥಾಪನೆಯೂ ನಡೆದಿತ್ತು.  

ಹಾಗಾಗಿ ಈ ಅವಧೂತ ಅಭಿಮಾನಿಗಳು ಹನುಮಜ್ಜಯಂತಿ ಆಚರಣೆಯನ್ನು ವಿಧಿವತ್ತಾಗಿ ನಡೆಸಿಕೊಂಡು ಬಂದಿದ್ದಾರೆ. ಎಲ್ಲಿಯೂ ತಮ್ಮ ಹೆಸರು ಹಾಕಿಸುವುದಿಲ್ಲ! ಇಂದಿನ ಟ್ರೆಂಡ್ ಆದ ಫ್ಲೆಕ್ಸ್ ಚಿತ್ರಗಳಲ್ಲಿ ಈ ಯುವಕರು ತಮ್ಮ ಚಿತ್ರ ಛಾಪಿಸಿಕೊಂಡಿಲ್ಲ. ಒಂದು ಕಡೆ ಮಾತ್ರ ಬೆಲಗೂರಿನ ಶ್ರೀ ಶರ್ಮಾರ ಚಿತ್ರ ಛಾಪಿಸಿರುವುದು ಕಂಡುಬಂದಿದೆ. ಒಟ್ಟಾರೆ ನಿಜವಾದ ಭಕ್ತಿ-ಶ್ರದ್ಧೆಗಳಿಂದ ವೈಭವದ ಹನುಮಜ್ಜಯಂತಿ ಆಚರಿಸುತ್ತಿರುವುದು ಅಭಿನಂದನೀಯ.  
ಮೆರವಣಿಗೆಗೆಂದು ಶ್ರೀ ಆಂಜನೇಯನ ಉತ್ಸವಮೂರ್ತಿಯನ್ನು ಸಿದ್ಧಪಡಿಸಿರುವ ಕೆಲವು ಚಿತ್ರಗಳು ಇಲ್ಲಿವೆ.








     






ಚಿತ್ರ-ಲೇಖನ - ಅಪೂರ್ವ ಅಜ್ಜಂಪುರ

ಕಾಮೆಂಟ್‌ಗಳು


  1. ಹನುಮನೆ ಚಂದ ಅವದೂತ ಉತ್ಸವದಲ್ಲಿ...
    ..
    ಕನ್ನಡವನ್ನು ಆಯ್ಕೆ ಮಾಡಿ

    ಕನ್ನಡದ ಅರಮನೆಗೆ ಬರಲು ತಮಗೆ ಆದರದಿಂದ ಸ್ವಾಗತಿಸುತ್ತೇವೆ...
    ..
    ಕನ್ನಡವನ್ನು ಉಳಿಸಿ, ಬೆಳೆಸಿ..
    ..
    https://Www.spn3187.blogspot.in (already site viewed 1,31,131+)
    &
    https://T.me/spn3187 (already Joined 500+)
    ..
    & this groups Share your friends & family also subscribe (join)

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ