99. ಗೀತಾಮಿತ್ರ – ಸುವರ್ಣ ಸಂಭ್ರಮ




ಅಜ್ಜಂಪುರಕ್ಕೆ ಸಂಬಂಧಿಸಿದಂತೆ ಗೀತಾಮಿತ್ರ ಆಧ್ಯಾತ್ಮಿಕ ಮಾಸ ಪತ್ರಿಕೆಯನ್ನು ಪ್ರಸ್ತಾಪಿಸದಿದ್ದರೆ ಅದು ಅಪೂರ್ಣವೇ ಸರಿ. 1963ರಲ್ಲಿ ಆರಂಭವಾಗಿ 2012ಕ್ಕೆ ಐವತ್ತು ವರ್ಷ ತುಂಬಿದ, ಭಗವದ್ಗೀತೆಯ ಪ್ರಸಾರಕ್ಕೆಂದೇ ಮೀಸಲಾದ ಈ ಪತ್ರಿಕೆಯ ಉಲ್ಲೇಖ 2012ರಲ್ಲೇ ಈ ಬ್ಲಾಗ್ ನಲ್ಲಿ ಪ್ರಸ್ತಾಪವಾಗಬೇಕಿತ್ತು. ಆದರೆ ಸೂಕ್ತ ಸಂವಹನದ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ. ಆದರೆ ಇದಕ್ಕೆ ಪೂರಕವಾಗಿ ಈ ಬ್ಲಾಗ್ ನಲ್ಲಿ, ಈ ಪತ್ರಿಕೆಯ ಸಂಪಾದಕ ಶ್ರೀ ಸುಬ್ರಹ್ಮಣ್ಯಶೆಟ್ಟರು, ಅಜ್ಜಂಪುರದಲ್ಲಿ ಗೀತೆಯ ಮೂಲಸ್ರೋತವಾದ ಶ್ರೀ ಶಿವಾನಂದಾಶ್ರಮ, ಇನ್ನೋರ್ವ ಸಂಪಾದಕ ಶ್ರೀ ರಾಜಗೋಪಾಲ ಗುಪ್ತರು ಮುಂತಾಗಿ ಹಲವಾರು ಲೇಖನಗಳು ಪ್ರಕಟವಾಗಿರುವುದುಂಟು. ಸುವರ್ಣ ಸಂಚಿಕೆಯ ಸಂಭ್ರಮದ ವರದಿ ಆಗ ಸಾಧ್ಯವಾಗದ್ದು, ಈಗ ಇಲ್ಲಿದೆ.


ಗೀತಾಮಿತ್ರದ ಮೊದಲ ಸಂಪಾದಕ ಶ್ರೀ ಎಸ್. ಸುಬ್ರಹ್ಮಣ್ಯಶೆಟ್ಟರು
 ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಅಜ್ಜಂಪುರದಲ್ಲಿ ಶ್ರೀ ಶಂಕರಾನಂದ ಸ್ವಾಮಿಗಳು ಬಂದು ನೆಲೆಸಿದಾಗ, ಶ್ರೀ ಸುಬ್ರಹ್ಮಣ್ಯ ಶೆಟ್ಟರಿಗೆ ಅವರ ಬಗ್ಗೆ ಒಂದು ವಿಶೇಷವಾದ ಆಕರ್ಷಣೆ.  ಅವರ ಪ್ರವಚನಗಳಿಂದ ಪ್ರಭಾವಿತರಾಗಿ, ಇದನ್ನು ಗ್ರಂಥಸ್ಥಗೊಳಿಸಬೇಕೆಂಬ ನಿರ್ಧಾರದಿಂದ ಒಂದು ಪತ್ರಿಕೆಯನ್ನು ಆರಂಭಿಸಿದರು. ಆಗ ಮುದ್ರಣ ಸೌಲಭ್ಯವೂ ಸುಲಭವಾಗಿರಲಿಲ್ಲ. ಇಂದು ಬಹುವರ್ಣದ ಮುದ್ರಣ ತುಂಬ ಸುಲಭವಾಗಿದೆ. ಆದರೆ ಕಳೆದ ಶತಮಾನದ 60ರ ದಶಕದಲ್ಲಿ ಇದು ಸುಲಭ ಸಾಧ್ಯವಿರಲಿಲ್ಲ ಹಾಗೂ ಹೆಚ್ಚಿನ ಖರ್ಚನ್ನೂ ಒಳಗೊಂಡಿರುತ್ತಿತ್ತು. 

ಮೂರು ವರ್ಣಗಳಲ್ಲಿ ಮುದ್ರಣ ಮಾಡಬೇಕಿದ್ದಾಗ, ಮೂರು ವಿಭಜನೆಗಳಿರುವ ಬ್ಲಾಕ್ ಗಳನ್ನು ಬೆಂಗಳೂರಿನಲ್ಲಿ ತಯಾರಿಸಿ, ತರಿಸಿ, ಒಂದರ ಮೇಲೆ ಒಂದರಂತೆ ಬೇರೆ ಬೇರೆ ಬಣ್ಣಗಳಲ್ಲಿ ಮುದ್ರಿಸಬೇಕಿತ್ತು. ಈ ಉದ್ದೇಶಕ್ಕೆಂದು ಅಜ್ಜಂಪುರದಲ್ಲಿ ಮೊದಲ ಬಾರಿಗೆ ಮುದ್ರಣಾಲಯವನ್ನು ಶ್ರೀ ಎ.ಪಿ.ನಾಗರಾಜಶೆಟ್ಟರು ಸ್ಥಾಪಿಸಿ, ಗೀತಾಮಿತ್ರದ ಅಧಿಕೃತ ಮುದ್ರಕರಾಗಿದ್ದರು.  ಪತ್ರಿಕೆಯ ವಿವರಗಳನ್ನು ಪ್ರತಿ ಮಾರ್ಚಿ ತಿಂಗಳಿನಲ್ಲಿ ಘೋಷಿಸಬೇಕಿದ್ದ ಕ್ರಮದಂತೆ, ಪ್ರಕಟಿಸಿರುವ ಪುಟದ ಚಿತ್ರ ಇದೆ ಹಾಗೂ ಅದರಲ್ಲಿ ಸಂಪಾದಕ ಶ್ರೀ ಸುಬ್ರಹ್ಮಣ್ಯಶೆಟ್ಟರ ಹಸ್ತಾಕ್ಷರವೂ ಇದೆ.


ಪತ್ರಿಕೆಯನ್ನು ನಡೆಸುವುದು ಇಂದೂ, ಹಿಂದೂ,ಎಂದೆಂದಿಗೂ ಕಷ್ಟಕರವಾಗಿಯೇ ಇರುತ್ತದೆ. ಜನಪ್ರಿಯ ಪತ್ರಿಕೆಗಳ ಪಾಡೇ ಆ ರೀತಿ ಇರಬೇಕಾದರೆ, ಆಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿದ ಪತ್ರಿಕೆಯನ್ನು ಬೆಳೆಸಿ, ಉಳಿಸಿಕೊಳ್ಳುವ ಕಷ್ಟಗಳು ಹೆಚ್ಚಿಗೆ ಇರುತ್ತವೆ. ಆರಂಭದಲ್ಲಿ ವಾರ್ಷಿಕ ಚಂದಾ ರೂ. ನಾಲ್ಕು, ಹಾಗೂ ಬಿಡಿ ಪ್ರತಿಗೆ ಇಪ್ಪತ್ತೈದು ಪೈಸೆಗಳಿತ್ತು. ಪತ್ರಿಕೆಗೆ ಆಗಲೂ, ಈಗಲೂ ಜಾಹೀರಾತುಗಳೇ ಆಧಾರ. ಅವುಗಳನ್ನು ಸಂಗ್ರಹಿಸಲು, ಪ್ರಕಟಿಸುವಂತೆ ಪ್ರೇರೇಪಿಸಲು ಸುಬ್ರಹ್ಮಣ್ಯ ಶೆಟ್ಟರು, ಯುವಕರ ತಂಡಗಳನ್ನು ರಚಿಸಿ ಕಾರ್ಯೋನ್ಮುಖವಾಗುವಂತೆ ನೋಡಿಕೊಳ್ಳುತ್ತಿದ್ದರು. 

ಶ್ರೀ ಬಿ.ಎಸ್. ರಮಾನಂದ್ ಸುವರ್ಣ ಸಂಭ್ರಮದಲ್ಲಿ
ಅಂಥ ಒಂದು ಯತ್ನದಲ್ಲಿ ನನ್ನ ಮಿತ್ರ ಬಿ.ಎಸ್. ರಮಾನಂದ್ ತಮ್ಮ ಅನುಭವಗಳನ್ನು ಹಂಚಿಕೊಂಡ ಒಂದು ಲೇಖನ ಪ್ರಕಟವಾಗಿತ್ತು. ಅದರಲ್ಲಿ ಪತ್ರಿಕೆಯ ಜಾಹೀರಾತು ಸಂಗ್ರಹಣ ಕಾರ್ಯದಿಂದ, ತನಗೆ ಒದಗಿದ ಪ್ರಾಪಂಚಿಕ ಜ್ಞಾನ, ಹಣ ಮತ್ತು ಶ್ರಮಗಳ ಮಹತ್ವವನ್ನು ನೆನಪಿಸಿಕೊಂಡಿದ್ದಾರೆ.  ಈಗಿನಷ್ಟು ಸಂವಹನದ ಸೌಕರ್ಯಗಳಿರದ ಕಾರಣಕ್ಕೆ, ವೈಯುಕ್ತಿಕವಾಗಿ ಭೇಟಿ ಮಾಡಿ, ಜನರ ಮನವೊಲಿಸಿ, ಜಾಹೀರಾತುಗಳನ್ನು ಸಂಪಾದಿಸಬೇಕಿತ್ತು. ಅಂಥ ಕೆಲವು ಜಾಹೀರಾತುಗಳ ಚಿತ್ರಗಳನ್ನೂ ನೀಡಲಾಗಿದೆ. ಅದರಿಂದ ತಿಳಿಯುವಂತೆ ಅಜ್ಜಂಪುರದಲ್ಲಿ ಬೆಳೆಯುತ್ತಿದ್ದ ಧನಿಯಾಕ್ಕೆ, ಅದರ ಪರಿಮಳ ಮತ್ತು ಗುಣಮಟ್ಟದಿಂದಾಗಿ ಒಂದು ಬ್ರಾಂಡ್ ತಾನಾಗಿಯೇ ಸೃಷ್ಟಿಯಾಗಿತ್ತು. ಅದು ಅಜ್ಜಂಪುರವನ್ನು ಪ್ರತಿನಿಧಿಸುತ್ತಿತ್ತು.

2012ರಏಪ್ರಿಲ್ 22ರಂದು, ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಈ ಪತ್ರಿಕೆಯ ಸುವರ್ಣ ಸಂಭ್ರಮ ಕಾರ್ಯಕ್ರಮ ಜರುಗಿತು. ಈಗಿನ ಸಂಪಾದಕಿ ಶ್ರೀಮತಿ ಶಾರದಾ ಗೋಪಾಲ್, ಪತ್ರಿಕೆ ಸಾಗಿ ಬಂದ ಹಾದಿಯ ಬಗ್ಗೆ ವಿವರವಾದ ಮಾಹಿತಿಗಳನ್ನು ಒದಗಿಸಿದ್ದಾರೆ. ಪತ್ರಿಕೆಯ ಹಳೆಯ ಸಂಚಿಕೆಗಳ ಮುಖಪುಟಕ್ಕೆಂದು ಕೋರಿದಾಗ, ಅವುಗಳನ್ನೂ ಒದಗಿಸಿ, ಈ ಲೇಖನದ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಗೀತಾ ಅಧ್ಯಯನ, ಪ್ರಚಾರ, ಪ್ರಸಾರಕ್ಕೆ ನಡೆಸಿದ ಅರ್ಧ ಶತಮಾನದ ದುಡಿಮೆ ಸಾರ್ಥಕವಾಗಿದೆ. ಹೆಚ್ಚು ಸದಸ್ಯರೊಂದಿಗೆ ಗೀತಾಯಾತ್ರೆ ಮುಂದುವರೆದಿದೆ.
ಬಹುವರ್ಣದ ಆಫ್ಸೆಟ್ ಮುದ್ರಣದ ಮುಖಪುಟ
ಆ ಹಂತದಿಂದ ಸುವರ್ಣ ಸಂಭ್ರಮ ಆಚರಿಸಿಕೊಳ್ಳುವವರೆಗಿನ ಹಂತದ ಬೆಳವಣಿಗೆಗಳು, ಕಷ್ಟಗಳು ಈಗ ಇತಿಹಾಸದ ಭಾಗ. ಈಗಿನ ಸಂಪಾದಕಿ ಶ್ರೀಮತಿ ಶಾರದಾ ಗೋಪಾಲ್, ಪತ್ರಿಕೆಗೆ ಹೊಸರೂಪ ನೀಡಿ, ಆಫ್ ಸೆಟ್ ಮುದ್ರಣದ ಮೂಲಕ ಆಕರ್ಷಣೀಯವಾಗಿಸಿದ್ದಾರೆ. ಚಿಕ್ಕ ಗಾತ್ರವಿದ್ದ ಪತ್ರಿಕೆಯೀಗ ದೊಡ್ಡದಾಗಿದೆ. ಬಣ್ಣದ ಮುದ್ರಣವಿದೆ. ಲೇಖನಗಳಲ್ಲಿ ವೈವಿಧ್ಯತೆ ತಂದಿದ್ದಾರೆ. ಜನರು ಸಕ್ರಿಯವಾಗಿ ಭಾಗವಹಿಸಲೆಂದು ಆಗಾಗ ರಸಪ್ರಶ್ನೆ ಕಾರ್ಯಕ್ರಮಗಳು, ಪದಬಂಧ ಮುಂತಾದ ಪ್ರಯೋಗಗಳನ್ನು ನಡೆಸಿ ಯಶಸ್ವಿಯಾಗಿದ್ದಾರೆ.

ಭಗವದ್ಗೀತೆಯೇ ಮುಖ್ಯವಸ್ತುವಾಗಿರುವ ಈ ಪತ್ರಿಕೆಯಲ್ಲಿ, ಗೀತೆಯನ್ನು ಕುರಿತಾದ ವಿವಿಧ ವಿಶ್ಲೇಷಣೆಗಳು, ಚರ್ಚೆಗಳು ವಿದ್ವಾಂಸರಿಂದ ಬರೆಸುವುದು ಕೂಡ ಗಮನಾರ್ಹ ಕಾರ್ಯವೇ ಸರಿ. ಜನಸಾಮಾನ್ಯರಲ್ಲಿ ಗೀತೆಯ ಬಗ್ಗೆ ಆಸಕ್ತಿ ಹುಟ್ಟಿಸಿ, ಸಂಸ್ಕೃತಿಯ ಪ್ರಚಾರದ ಅಭಿರುಚಿಯನ್ನು ಬೆಳೆಸುವ ಕಾರ್ಯ ನಿರಂತರವಾಗಿ ಅರ್ಧ ಶತಮಾನ ಸಾಗಿಬಂದಿದೆ. ತತ್ಪರಿಣಾಮವಾಗಿ ಸ್ವದೇಶವಲ್ಲದೆ, ವಿದೇಶಗಳಲ್ಲಿ ನೆಲೆಸಿರುವ ಕನ್ನಡದ ಜನರನ್ನೂ ತಲುಪುವಂತಾಗಿರುವುದು, ಕನ್ನಡ ಭಾಷೆಯ, ಭಗವದ್ಗೀತೆಯ ಪ್ರಸರಣಕ್ಕೆ ಸಹಾಯಕವಾಗಿದೆ. ಇಂಥದೊಂದು ಪತ್ರಿಕೆ ನಮ್ಮೂರಿನದ್ದು ಎಂದು ಹೇಳಿಕೊಳ್ಳುವುದೇ ಒಂದು ಹೆಮ್ಮೆ.  ಇದು ಇತೋಪ್ಯತಿಶಯವಾಗಿ ಮುಂದುವರೆಯಲಿ, ಸಂಸ್ಕೃತಿಯ ಪರಿಮಳ, ಗೀತಾಚಾರ್ಯನ ಸಂದೇಶ ಅನವರತ ಹರಡುತ್ತಿರಲಿ ಎಂದು ಆಶಿಸೋಣ.

ಗೀತಾಮಿತ್ರ ಪತ್ರಿಕೆಯ ಆರಂಭಿಕ ಸಂಚಿಕೆಗಳ ಹಾಗೂ ಅದರಲ್ಲಿ  ಪ್ರಕಟವಾಗುತ್ತಿದ್ದ ಜಾಹೀರಾತುಗಳ ಕೆಲವು ಚಿತ್ರಗಳು ಹಿಂದಿನ ಸವಿನೆನಪುಗಳನ್ನು ತಂದುಕೊಡುತ್ತವೆ ಎಂಬ ಕಾರಣಕ್ಕಾಗಿ ಈ ಕೆಳಗೆ ನೀಡಲಾಗಿದೆ. ಅವುಗಳಲ್ಲಿ ಗಮನಿಸತಕ್ಕ ಅಂಶವೆಂದರೆ, ಇಂಗ್ಲಿಷಿನ ಬಳಕೆ ತೀರ ಕಡಿಮೆ ಇದೆ. ದಿನನಿತ್ಯದ ಅಗತ್ಯ ವಸ್ತುಗಳಾದ ದಿನಸಿ, ಧನಿಯಾ, ಅಗರಬತ್ತಿ ಮುಂತಾದವುಗಳನ್ನು ಪ್ರಚುರಪಡಿಸಲೆಂದು ಜಾಹೀರಾತು ಬಳಕೆಯಾಗುತ್ತಿತ್ತು. ನ್ಯಾಯ, ನಂಬಿಕೆ, ಇತ್ಯಾದಿ ಪದಗಳಿವೆ. ಭಗವದ್ಗೀತೆಗೆ ಸಂಬಂಧಿಸಿದ ಪತ್ರಿಕೆಯಲ್ಲಿ ಖುರಾನ್ ಗೇಕೆ ಸ್ಥಾನವಿರಬೇಕು ಎಂಬ ಪ್ರಶ್ನೆ ಈ ದಿನಗಳಲ್ಲಿ ಸ್ವಾಭಾವಿಕ. ಆದರೆ ಗೀತಾಮಿತ್ರದ ಆರಂಭದ ಸಂಚಿಕೆಗಳಲ್ಲಿ ಅದಕ್ಕೂ ಸ್ಥಾನವಿತ್ತೆನ್ನಲು ಅದರ ಅನುವಾದ ಪ್ರಕಟವಾಗಿದೆ. ಸಂಪಾದಕೀಯದ ಒಂದು ಪುಟದಲ್ಲಿ ಚೀಣಾದೊಡನೆ ಯುದ್ಧ ನಡೆಯುತ್ತಿದ್ದಾಗಿನ ಮಾಹಿತಿಗಳಿವೆ. ಸೈನ್ಯವನ್ನು ಬೆಂಬಲಿಸುವ, ಆರ್ಥಿಕ ಸಹಾಯಕ್ಕೆಂದು ಧನ-ಧಾನ್ಯಗಳನ್ನು ನೀಡುವಂತೆ ಕೋರಲಾಗಿದೆ.
ಖುರಾನಿನ ಅನುವಾದಿತ ಲೇಖನ
ಸಂಪಾದಕ ಶ್ರೀ ಸುಬ್ರಹ್ಮಣ್ಯಶೆಟ್ಟರ ಸಹಿ



ಇಂದೂ ಸಕ್ರಿಯರಾಗಿರುವ ಶಿಕ್ಷಕ ಶ್ರೀ ಗೌ.ರು.ಓಂಕಾರಯ್ಯ ನವರ ಲೇಖನ
Add caption


ಜಾಹೀರಾತುಗಳ ವೈವಿಧ್ಯ
ಅಜ್ಜಂಪುರದಲ್ಲಿ ಕರ್ನಾಟಕ ಬ್ಯಾಂಕ್ ಸ್ಥಾಪನೆಯಾದ ಮಾಹಿತಿ

ದಿನಸಿ ಪದಾರ್ಥಗಳ ಜಾಹೀರಾತು
ಶ್ರೀಮತಿ ರುಕ್ಮಣಮ್ಮನವರ ಅಂಕಣ
ಇತಿಹಾಸಕ್ಕೆ ಸೇರಿದ ನೆನಪುಗಳನ್ನು ಮರುಕಳಿಸುವಂತೆ ಮಾಡುವ ಅನೇಕ ಅಂಶಗಳನ್ನು ಈ ಹಳೆಯ ಸಂಚಿಕೆಗಳಲ್ಲಿ ಕಾಣಬಹುದು. ಹಾಗಾಗಿ  ಅಂಥ ಪುಟಗಳ ಚಿತ್ರಗಳನ್ನು ಇಲ್ಲಿ ತೋರಿಸಲಾಗಿದೆ.


















ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.