100. ಅಜ್ಜಂಪುರ ಕ್ಷೇತ್ರಪಾಲಯ್ಯ ಮೇಷ್ಟ್ರು – ಕೆಲವು ನೆನಪುಗಳು
ಈ ಲೇಖನವು ಈ ಮಾಲಿಕೆಯಲ್ಲಿ ನೂರನೆಯದು. 2011ರ ಅಗಸ್ಟ್ 8ರಂದು ಆರಂಭವಾದ ಈ ಮಾಲಿಕೆಗೆ ಇದೀಗ ಎಂಟು ವರ್ಷಗಳು. ಪ್ರತಿ ತಿಂಗಳ ಒಂದನೇ ದಿನಾಂಕದಂದು ಒಂದು ಲೇಖನ ಪ್ರಕಟಿಸುತ್ತ ಬಂದಿದ್ದಾಗಿದೆ. ನನ್ನೂರಿಗೆ ಸಂಬಂಧಿಸಿದಂತೆ ಇದೊಂದು ಕಾರ್ಯ ಸಾಧ್ಯವಾಗಿದ್ದಕ್ಕೆ ಹಲವರ ಬೆಂಬಲವೇ ಕಾರಣ. ಈ ಹಿಂದೆ ಹೇಳಿದಂತೆ ಮುಂದಿನ ಸಂಚಿಕೆಗಳಿಗೆ ನಿಗದಿಯಿರದು. ವಿಷಯ, ಅವಕಾಶಗಳು ದೊರೆತಂತೆ ಲೇಖನಗಳು ಪ್ರಕಟವಾಗುತ್ತವೆ. ಇದುವರೆಗಿನ ಎಲ್ಲ ಸಂಚಿಕೆಗಳಿಗೂ, ನಾನು ಕೋರಿದಾಗಲೆಲ್ಲ ಲೇಖನಗಳನ್ನು ಬರೆದುಕೊಟ್ಟು, ಈ ಮಾಲಿಕೆಯ ಸಾತತ್ಯವನ್ನು ಕಾಯ್ದುಕೊಂಡು ಬರಲು ನೆರವಾದ ಎಲ್ಲರಿಗೂ ನಾನು ಅತ್ಯಂತ ಕೃತಜ್ಞ. ಇನ್ನು ಮುಂದೆಯೂ ನಿಮ್ಮ ನೆರವಿನ ಅಗತ್ಯ ಇದ್ದೇ ಇರುತ್ತದೆ. ನೂರು ಎಂಬುದೊಂದು ಘಟ್ಟ ಎಂಬ ಕಾರಣಕ್ಕಾಗಿಯಷ್ಟೇ ಈ ಸ್ಮರಣೆ. ಅಂತೆಯೇ ಓದುಗರಿಗೂ ಸಹ. ನನ್ನ ತಂದೆ ಶ್ರೀ ಅಜ್ಜಂಪುರ ಕ್ಷೇತ್ರಪಾಲಯ್ಯನವರನ್ನು ಕುರಿತಂತೆ ಮಿತ್ರ ಅಪ್ಪಾಜಿಯವರ ಸ್ಮರಣೆ ಇಲ್ಲಿದೆ. ಅಂತೆಯೇ ನಿಮ್ಮಲ್ಲೂ ಅನೇಕರಿಗೆ ಅವರ ಪರಿಚಯ, ಸಹವಾಸಗಳು ದೊರಕಿದ್ದಿರಬಹುದು. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ನಮೂದಿಸಲು ಕೋರುವೆ.
-----------------------------------------------------------------------------------------------------------------------------------------------------------------
ನನ್ನ ತಂದೆಯ ನೆನಪಿನಲ್ಲಿ............
ಇಂದು ನನ್ನ ಪ್ರೀತಿಯ ತಂದೆ ಶ್ರೀ ಅಜ್ಜಂಪುರ ಕ್ಷೇತ್ರಪಾಲಯ್ಯನವರು ಬದುಕಿದ್ದರೆ 92 ವರ್ಷದವರಾಗಿರುತ್ತಿದ್ದರು.
1927ರಲ್ಲಿ ಜನಿಸಿ, ಒಂದು ವರ್ಷದ ವಯಸ್ಸಿನಲ್ಲೇ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಸ್ವಂತ
ಬಲ-ಛಲಗಳಿಂದ ಬದುಕನ್ನು ಕಟ್ಟಿಕೊಂಡ ಅವರು ಉಪಾಧ್ಯಾಯರಾಗಿ ಕೆಲಸ ಮಾಡಿದವರು. ಅಜ್ಜಂಪುರಕ್ಕೆ
1962ರ ಸುಮಾರಿನಲ್ಲಿ ಬಂದು ತಮ್ಮ ವೃತ್ತಿ ಜೀವನವನ್ನು ಸಮೀಪದ ಗ್ರಾಮಗಳಲ್ಲಿ ನಡೆಸಿ, ಅಂತಿಮವಾಗಿ
ಮಲೆನಾಡಿಗೆ ವರ್ಗವಾಗಿ, ನಂತರ ನಿವೃತ್ತಿ ಹೊಂದಿದರು. ಅವರು ತಮ್ಮ ವೃತ್ತಿಯಲ್ಲಿ ಅಧ್ಯಾಪನ
ಮಾಡಿದ್ದಕ್ಕಿಂತ ಹೆಚ್ಚಾಗಿ, ಶಾಲೆಯ ಕಛೇರಿಯ ಕಾರ್ಯಗಳನ್ನೇ ಹೆಚ್ಚಾಗಿ ನಿರ್ವಹಿಸಬೇಕಾಯಿತೆಂದು
ಹೇಳಿಕೊಳ್ಳುತ್ತಿದ್ದರು. ಅದಕ್ಕೆ ಅವರಿಗಿದ್ದ ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತ ಮತ್ತು ಬರವಣಿಗೆಯ
ಕುಶಲತೆಗಳೇ ಕಾರಣವಾಗಿತ್ತು.

ಇನ್ನಾವ ಕ್ಷೇತ್ರದಲ್ಲಿ ಕೆಲಸಮಾಡಿದರೆ, ನಿವೃತ್ತಿಯ ನಂತರ ಅದರ
ಸಂಬಂಧ ಕಳಚಿಹೋಗುವುದು ಸ್ವಾಭಾವಿಕ, ಆದರೆ ಶಿಕ್ಷಕ ವೃತ್ತಿಯು ಹಾಗಲ್ಲ. ಎಲ್ಲೋ, ಯಾರೋ ತಮ್ಮ
ಎಳವೆಯಲ್ಲಿ ಕಲಿಸಿದ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತಾರೆ ಎಂದವರು ಹೇಳುತ್ತಿದ್ದರು. ಅದಕ್ಕೆ
ನಿದರ್ಶನವಾಗಿ, ನಾನು ರಕ್ಷಣಾ ಇಲಾಖೆಯಲ್ಲಿದ್ದು ನಿವೃತ್ತನಾಗಿರುವೆನಾದರೂ, ಆಗೀಗ ನನ್ನ ತಂದೆಯವರ
ಶಿಷ್ಯರ ಭೇಟಿಯಾದಾಗ ಅವರನ್ನು ಎರಡು ಕಾರಣಗಳಿಗಾಗಿ ಹೆಚ್ಚು ನೆನಪಿಸಿಕೊಳ್ಳುವುದನ್ನು ಸಾಮಾನ್ಯ
ಎಂಬಂತೆ ಕೇಳಿದ್ದೇನೆ. ಒಂದು – ಅವರ ಶಿಸ್ತು, ಎರಡು – ಅಶಿಸ್ತನ್ನು ಸಹಿಸದಾದಾಗ ಅವರು
ನೀಡುತ್ತಿದ್ದ ಶಿಕ್ಷೆ. ಹಾಗೂ ತಾವೀಗ ಬಂದು ನಿಂತಿರುವ ನೆಲೆ ತಲುಪಲು ಅವರ ಕೊಡುಗೆ
ಇದೆಯೆಂಬುದನ್ನು ಸ್ಮರಿಸುವುದನ್ನು ಕೇಳಿದ್ದೇನೆ.
ಅಜ್ಜಂಪುರದ ಬ್ರಾಹ್ಮಣ ಸಂಘದ ಚಟುವಟಿಕೆಗಳಲ್ಲಿ
ಸಕ್ರಿಯರಾಗಿ ಭಾಗವಹಿಸಿದರು. ಸಾಮಾಜಿಕ ಕಾರ್ಯಗಳಲ್ಲಿ ತೊಡಗಲು ದೊರೆತ ಅವಕಾಶದ ಬಗ್ಗೆ ಅವರಿಗೆ
ಸಂತಸವಿತ್ತು. ಅಜ್ಜಂಪುರಕ್ಕೆ ಶೃಂಗೇರಿ ಸ್ವಾಮಿಗಳು ಬಂದಾಗಿನ ಕಾರ್ಯಕ್ರಮದಲ್ಲಿ ಅವರು ತೋರಿದ
ಉತ್ಸಾಹ, ಸಡಗರಗಳಲ್ಲಿ ಶ್ರದ್ಧೆ ತುಂಬಿತ್ತು. ಅವರಿಗೆ ಪೌರೋಹಿತ್ಯವು ಮನೆತನದ ಭಾಗವಾಗಿ
ಬಂದಿದ್ದರೂ, ವೃತ್ತಿ ನಿಮಿತ್ತ ಅದನ್ನು ಕ್ರಮವಾಗಿ ರೂಢಿಸಿಕೊಳ್ಳಲು ಆಗಿರಲಿಲ್ಲ.


-ಶಂಕರ ಅಜ್ಜಂಪುರ
ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ
ದೂರವಾಣಿ -91485 72483
-----------------------------------------------------------------------------------------------------------------------------------------------------------------
- ಅಪೂರ್ವ ಅಜ್ಜಂಪುರ

ಅಂದಿನ ನಮ್ಮ ಗುರುವೃಂದಕ್ಕೆ ಸೇರ್ಪಡೆಯಾದ ಶ್ರೀ ಎ.
ಕ್ಷೇತ್ರಪಾಲಯ್ಯನವರು ನನ್ನ ಮನಸ್ಸಿನಲ್ಲಿ ಅಚ್ಚಳಿಯದ ಆಪ್ತ ನೆನಪು ಉಳಿಸಿದ್ದಾರೆ.ನಮ್ಮೂರ
ಶಾಲೆಗೆ ಬಂದ ಹೊಸತರಲ್ಲಿ ಅವರು ಮಾಡಿದ ಕೆಲಸವೆಂದರೆ, ಶಾಲೆಯ ಗ್ರಂಥಾಲಯದ ಪುಸ್ತಕಗಳನ್ನು
ಹೊರತೆಗೆಸಿದ್ದು. ಅವುಗಳಲ್ಲಿ ಮಕ್ಕಳಿಗೆ ತಲಾ ಒಂದೊಂದು ಪುಸ್ತಕ ಕೊಟ್ಟು ತಪ್ಪದೇ ಓದಿ, ವಾಪಸು
ನೀಡಲು ಗಡುವು ನೀಡಿದರು. ಪಂಚತಂತ್ರದ ನಾಡೀಜಂಘನ ಕಥೆಯುಳ್ಳ ಪುಸ್ತಕ ನನಗೆ ಸಿಕ್ಕಿತು. ನಾನು
ಓದಿದ ಮೊದಲ ಕಥೆಯ ಪುಸ್ತಕವದು. ಮುಂದೆ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ, ಗೆಳೆಯ ಎ.ಎನ್.
ಮಂಜುನಾಥ ಕಥೆ ಪುಸ್ತಕ ಕೊಟ್ಟು ಓದಲು ಎಷ್ಟು ಪೀಡಿಸಿದರೂ ಓದಲಿಲ್ಲ. ಅವನಿಂದ ಕಥೆ ಕೇಳಲು ಮಾತ್ರ
ನನ್ನ ಆಸಕ್ತಿ ಸೀಮಿತವಾಗಿತ್ತು. ಕ್ಷೇತ್ರಪಾಲಯ್ಯ ಮೇಷ್ಟರಿಂದ ಮೊದಲ ಕಥೆ ಓದಿದಂತೆ ಅವರ ಪುತ್ರ
ಶಂಕರನಿಂದಾಗಿ ಮೊಟ್ಟಮೊದಲ ಕಾದಂಬರಿ ಓದಿದೆ, ಸಮೀಕ್ಷೆ ಎಂಬ ಕಾದಂಬರಿ. ಅದು ಕನ್ನಡದ ಪ್ರಸಿದ್ಧ
ಕಾದಂಬರಿಕಾರ ಡಾ. ಕೆ. ಶಿವರಾಮಕಾರಂತರ ಕೃತಿ.
ನಾವು ಇಂಗ್ಲಿಷ್ ಭಾಷೆಯ ಪದಗಳನ್ನು ಬರೆಯುವಾಗ,
ಅಕ್ಷರಗಳನ್ನು ಬಿಡಿ ಬಿಡಿಯಾಗಿ ಬರೆಯುತ್ತಿದ್ದೆವು. ಅದನ್ನು ಗಮನಿಸಿದ ಮೇಷ್ಟ್ರು ಒಂದು ಪದವನ್ನು
ಬರೆಯುವಾಗ ಇಂಗ್ಲಿಷ್ ಅಕ್ಷರಗಳನ್ನು ಕೂಡಿಸಿ ಬರೆಯುವುದನ್ನು ಹೇಳಿಕೊಟ್ಟರು. ಆಗ ಈಗಿನಂತೆ ಕರ್ಸಿವ್ ರೈಟಿಂಗ್ ಹೇಳಿಕೊಡುವ ವಿಧಾನವಿರಲಿಲ್ಲ. ಮೇಷ್ಟ್ರ ಈ ಒಂದು ಸೂಚನೆ ನಮಗೆ ವಿಶೇಷ ಎನಿಸಿತು.
ಇಂಗ್ಲಿಷ್ ವ್ಯಾಕರಣದ ಮೊದಲ ಪರಿಚಯವಾದುದೂ
ಅವರಿಂದಲೇ. ಶಾಲೆಗೆ ಬಂದು ಸೇರಿದ ಹೊಸತರಲ್ಲೇ, ನಮ್ಮ ಕಲಿಕೆಯ ನ್ಯೂನತೆಗಳನ್ನು ಗಮನಿಸಿ ಬದಲಾವಣೆ
ತಂದರು. ಇದು ನನ್ನ ಪಾಲಿಗೆ ಇಂದಿಗೂ ಅಮೂಲ್ಯ ಅನುಭವವಾಗಿದೆ. ಏಕೆಂದರೆ ಬಾಲ್ಯಕಾಲದ ಕಲಿಕೆಗೆ ಒಂದು ಹೊಸ ಆಯಾಮವನ್ನು
ಕಲ್ಪಿಸಿದಂತಾಗಿತ್ತು. ಬಹುಪಾಲು ನನ್ನ ಸಹಪಾಠಿ ಹುಡುಗರಿಗೆ ಕ್ಷೇತ್ರಪಾಲಯ್ಯ ಮೇಷ್ಟರೆಂದರೆ
ಭಯವಿತ್ತು. ಅವರ ಕೈಗೆ ಆಗಾಗ ಬರುತ್ತಿದ್ದ ಬೆತ್ತವೂ ಅದಕ್ಕೆ ಕಾರಣವೇನೋ. ಆದರೆ ಆ ಅನುಭವ
ನನಗಿರಲಿಲ್ಲ. ಮೇಷ್ಟರಲ್ಲಿದ್ದ ಮಾರ್ದವ ಭಾವವನ್ನು ಆಗಲೇ ನಾನು ಕಂಡುಕೊಂಡಿದ್ದೆ.
ಹಾಗಾಗಿ ನಾನು ಬೆಳೆದು ದೊಡ್ಡವನಾದ ಮೇಲೆ ಕೂಡ, ಅವರನ್ನು
ಕಂಡು ಮಾತನಾಡಿಸುವ ಪರಿಪಾಠ ಇಟ್ಟುಕೊಂಡಿದ್ದೆ. ಆತ್ಮೀಯತೆಯಿಂದ, ಪ್ರೀತಿಯಿಂದ, ಸಲುಗೆಯಿಂದ
ಸ್ಪಂದಿಸಿ ಮಾತನಾಡುವ ಗುಣ ಅವರಲ್ಲಿತ್ತು. ಕೆಲವೊಮ್ಮೆ ನನ್ನಂಥವರೊಡನೆ ತಮ್ಮ ಲೋಕಾನುಭವ
ಹಂಚಿಕೊಳ್ಳುವ ಹೃದಯ ವೈಶಾಲ್ಯತೆ ಅವರಿಗಿತ್ತು. ಅವರು ಬೆಂಗಳೂರಿನಲ್ಲಿ ಇರಲು ಪ್ರಾರಂಭಿಸಿದ ನಂತರ
ಅಜ್ಜಂಪುರಕ್ಕೆ ಆಗಾಗ್ಗೆ ಭೇಟಿಕೊಡುತ್ತಿದ್ದರು. ಆ ಸಂದರ್ಭಗಳಲ್ಲಿ ಅವರೊಡನೆ ಮಾತನಾಡಲು ಖುಷಿಯಾಗುತ್ತಿತ್ತು.
ಪ್ರತಿ ಸಲವೂ ಒಂದು ಹೊಸ ವಿಚಾರದ ಕುರಿತು ಹೇಳುತ್ತಿದ್ದರು. ಕಿರಿಯನೆಂಬ ಭೇದಭಾವ ಅವರಲ್ಲಿ ಇರಲಿಲ್ಲ. ಮೇಷ್ಟ್ರು ಬೆಂಗಳೂರಿನ ಜೀವನ ಕುರಿತು ಹೇಳುತ್ತ, ನಗರ ಜೀವನವೆಂದರೆ ಸೆರೆವಾಸ ಕಣಯ್ಯ,
ಮನೆಯಿಂದ ಹೊರಬಂದರೆ ಎಲ್ಲರೂ ಅಪರಿಚಿತರು. ನಮ್ಮೂರಿನಲ್ಲಾದರೆ ಒಂದು ಸುತ್ತು ತಿರುಗಾಡಿಕೊಂಡು
ಬಂದರೆ ನೀವೆಲ್ಲ ಸಿಕ್ಕುತ್ತೀರಿ. ಆಗ ಒಂದಷ್ಟು ಮಾತುಕತೆ ಆಗುತ್ತೆ. ಮನಸ್ಸು ನಿರಾಳವಾಗುತ್ತೆ.
ಇಲ್ಲಿರುವ ಜೀವನೋತ್ಸಾಹ ನನಗೆ ಅಲ್ಲಿ ಕಾಣಿಸುತ್ತಿಲ್ಲ ಎಂದರು. ದುರಂತವೆಂದರೆ ಕೆಲವೇ ದಿನಗಳ
ಅಂತರದಲ್ಲಿ ಮೇಷ್ಟ್ರು ಅಪಘಾತಕ್ಕೀಡಾಗಿ ಕೊನೆಯುಸಿರು ಎಳೆದ ಅತ್ಯಂತ ನೋವಿನ ಸುದ್ದಿ
ಕೇಳಬೇಕಾಯಿತು.
-0-0-0-0-0-0-0-0-0-
prathama smaraniyaru pranamagalu
B R Krishna Murthy
B R Krishna Murthy Middle School ನಲ್ಲಿ ನಮಗೆ gurugalaagidru
ನನ್ನ ಭಕ್ತಿಪೂರ್ವಕ ನಮನಗಳು
Ramachandra Chandra
Ramachandra Chandra ನನ್ನ ವೇದ ಪಾಠದ ಮೊದಲ ಗುರು ಹಾಗೂ ನಮ್ಮ ತಂದೆಯವರ ಆತ್ಮೀಯ ಸ್ನೇಹಿತರು ನಮ್ಮ.ಮನೆಯ ಹಿತ ಚಿಂತಕರು ಅವರು ನಮಗೆ ಸದಾ ಪ್ರಾಥ ಸ್ಕರಣೀಯರು
Sudarshan Mundadi
Sudarshan Mundadi Middle school Malli nanna gurugalagidru. Nanna tandeyavara Apara karma Karya avare madiddu avara athmakke shanti doreyali
Sandhya Murthy
Sandhya Murthy Mareyalarada haleya nenapugalu
Prabhu Anche
Prabhu Anche 1953ರ ಚಿತ್ರ ದ ಎಡ ತುದಿಯಲ್ಲಿರುವವರು ನಮ್ಮ ತಂದೆಯವರಿರಬಹುದೇ? 1952 ರ ಚಿತ್ರದ ಎಡ ಬಲ ಗಳಲ್ಲಿನ ತುದಿ ಗಳಲ್ಲಿ ಇರುವವರು ಕುಮಾರಯ್ಯ ಮತ್ತು ಡಿಸೋಜಾ ರವರು ಇರಬಹುದೆಂದು ಊಹಿಸಿರುತ್ತೇನೆ, ಸರಿಯೇ?
Jagadeesh H C
Jagadeesh H C Bhat Last year I saw your mother in Bangalore, she looks very good.
Gopal Anche Ramachandra Rao ಎಡ ಬದಿಯಲ್ಲಿರುವವರು ನಮ್ಮ ತಂದೆ ರಾಮಚಂದ್ರರಾವ್ , ಬಲ ಬದಿಯಲ್ಲಿರುವವರು ಲಾಯರ್ ಬೊಮ್ಮಪ್ಪ , ನಮ್ಮ ಊರಿನಲ್ಲಿ ಸಬ್ ಒವರ್ ಸಿಯರ್ ಆಗಿದ್ದ ಎಂ.ಆರ್.ರಂಗಪ್ಪ ನವರು ಇದ್ದಾರೆ , ಇದು ಈ ಸ್ನೇಹಿತರು ಸೇರಿ ಆಡಿದ. ದೇವದಾಸಿ ನಾಟಕದ ನಂತರ ತೆಗೆಸಿಕೊಂಡ ಚಿತ್ರ,
Gayathri ShivaswamyActive Now
Gayathri Shivaswamy ಕ್ಷೇತ್ರಪಾಲಯ್ಯನವರು ನಮಗೆಲ್ಲ ತುಂಬಾ ಪರಿಚಿತರು. ಆತ್ಮೀಯರು. ಅವರಿಗೆ ನನ್ನ ಪ್ರಣಾಮಗಳು
Narasimha Swamy Mn I am happy to see this photograph s and comments.
Nagaraju Bn ಬೆಂಗಳೂರಿನ ಲ್ಲಿ ನಮ್ಮೊಂದಿಗೆ ಬಹಳ ಒಡನಾಟ ವಿತ್ತು.ನಮ್ಮಮನೆಯ ಎಲ್ಲಾಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದರು.ಜನಾನುರಾಗಿ ಹಾಗು ಬಹಳ ಅಭಿಮಾನಿ ವ್ಯಕ್ತಿ.
ಚಿಕ್ಕ ಊರುಗಳಲ್ಲಿ, ಹಳ್ಳಿಗಳಲ್ಲಿ ಹುಟ್ಟಿ ಬೆಳೆದು, ಬಹಳ ವರ್ಷ ಅಲ್ಲೇ ಇದ್ದು, ವೃತ್ತಿ - ಉದ್ಯೋಗ ನಿಮಿತ್ತ "ಯಾವುಯಾವುದೋ" ಊರು-ಕೇರಿಗಳಲ್ಲಿ ಜೀವನಯಾತ್ರೆಯ ಪಯಣ ಸಾಗಿಸುವ ನಮ್ಮಂತಹವರ ಅನುಭವದ್ರವ್ಯದಲ್ಲಿ, ನಮ್ಮ ನಮ್ಮ ಊರಿನದ್ದೇ ಪ್ರಧಾನ ಪಾತ್ರ .
ಪ್ರತ್ಯುತ್ತರಅಳಿಸಿಅಷ್ಟೇ ಅಲ್ಲ, ಈಗ ಇಳಿವಯಸ್ಸಿನಲ್ಲಿ ಕನಸು - ನೆನಪುಗಳ ಜೋಡಿಹಳಿಗಳ ಬಂಡಿಯಲ್ಲಿಯೂ ನಮ್ಮೂರಿನ ಅನುಭವಗಳದ್ದೇ ಪಾರುಪತ್ಯ.
ನಮ್ಮದೆಲ್ಲಾ ಬಹು-ಆಯಾಮಗಳ ಸಂಬಂಧ. ನಮ್ಮ ಗೆಳೆಯರು ಸಹಪಾಠಿಗಳೂ ಹೌದು, ಕೆಲವೊಮ್ಮೆ ರಕ್ತ ಸಂಬಂಧಿಗಳೂ ಹೌದು. ಸಹಪಾಠಿಗಳ ಅಣ್ಣತಮ್ಮಂದಿರೂ ಸಹ ಗೆಳೆಯರೇ, ಓರಗೆಯವರೇ.
ನಮ್ಮ ತಂದೆಯವರ ಸ್ನೇಹಿತರ ಮಕ್ಕಳೂ ನಮಗೆ ಸ್ನೇಹಿತರೇ. ನಮ್ಮ ಸಹಪಾಠಿಗಳ ತಂದೆ, ಅಣ್ಣ, ತಮ್ಮ, ಅಕ್ಕ, ತಂಗಿ ಸಹ ಅದೇ ಕ್ರಮದಲ್ಲಿ ಗೆಳೆಯರ ಬಳಗವೇ. ಇದೆಲ್ಲಾ ಅದ್ಭುತವೂ ಹೌದು, ಸಂಕೀರ್ಣವೂ ಹೌದು.
ಮಹಾನಗರಜೀವನದಲ್ಲಿ ಇದು ಅಪರಿಚಿತ, ಅಸಂಭಾವ್ಯ, ಅನೂಹ್ಯ.
ಇಲ್ಲಿಯ ಉದಾಹರಣೆ ನೋಡಿ. ಶಂಕರ ನನ್ನ ಸಹಪಾಠಿಯೂ ಹೌದು, ನನ್ನ ಅಧ್ಯಾಪಕರ ಮಗನೂ ಹೌದು. ಸ್ವಾಮಿ, ಕೇಸರಿ ಸಹಾ ಅಷ್ಟೇ. ನನ್ನ ಗೆಳೆಯರೂ - ಸಹಪಾಠಿಗಳೂ ಹೌದು, ನನ್ನ ಅಧ್ಯಾಪಕರ ಮಕ್ಕಳೂ ಹೌದು. ಅದಕ್ಕೇ ಸಂಕೀರ್ಣ ಸಂಬಂಧ ನಮ್ಮದು ಎಂದದ್ದು. ಜೊತೆಗೆ, ನಮ್ಮ ತಂದೆಯವರು ೧೯೪೦ರ ದಶಕದಲ್ಲಿ ನರಸಿಂಹರಾಜಪುರದಲ್ಲಿ ಸರ್ಕಾರಿ ಸೇವೆಯಲ್ಲಿದ್ದಾಗ, ಈ ನಮ್ಮ ಕ್ಷೇತ್ರಪಾಲಯ್ಯನವರೂ ಅಲ್ಲಿಯೇ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಲೇಖಕ ಮಿತ್ರ ಅಪ್ಪಾಜಿ ಹೇಳಿರುವಂತೆ, ಕ್ಷೇತ್ರಪಾಲಯ್ಯನವರ ಬೆತ್ತ ನಮ್ಮೆಲ್ಲ ಸಹಪಾಠಿಗಳಲ್ಲಿ ಭಾರೀ ದಿಗಿಲು ಹುಟ್ಟಿಸಿತ್ತು. ಕ್ಷೇತ್ರಪಾಲಯ್ಯನವರಿಂದಾಗಲೀ - ಬೇರೆ ಅಧ್ಯಾಪಕರಿಂದಾಗಲೀ ನನಗೆ ಏಟು ತಿನ್ನುವ ಪ್ರಮೇಯ ಎಂದೂ ಬರಲೇಇಲ್ಲ. ಆದರೂ, ನೋಡಿಯೇ ನಾನು ಹೆದರಿಹೋಗಿದ್ದೆ.
ಅಷ್ಟೇಕೆ, ಶಂಕರ - ಸ್ವಾಮಿ ಅಂತಹವರು ಗೆಳೆಯರಾದರೂ, ಅಧ್ಯಾಪಕರ ಮಕ್ಕಳಾದುದರಿಂದ, ಇವರ ಬಗೆಗೇ ಕೆಲಕಾಲ ಒಂದಿಷ್ಟು ಹೆದರಿಕೆ ಇತ್ತು.
ನಾನು ಕ್ಷೇತ್ರಪಾಲಯ್ಯನವರನ್ನು ಮಾತನಾಡಿಸಿದ್ದೇ ಬಹಳ ಬಹಳ ವರ್ಷಗಳ ಅನಂತರ. ನನ್ನ ಮದುವೆಯ ಅನಂತರವೇ ಅವಕಾಶವಾದುದು. ಅವರ ಸ್ಪಷ್ಟತೆ, ಅವರ ಉಚ್ಚಾರಣೆ, ಸಂಸ್ಕೃತಭೂಯಿಷ್ಠವಾದ ಕನ್ನಡ ಭಾಷೆ, ವಾತ್ಸಲ್ಯಪೂರ್ಣವಾದ ಕಣ್ಣುಗಳು, ಯಾವುದೇ ವಿಷಯವನ್ನು ನಿರೂಪಿಸುವ ಪರಿ ನಿಜಕ್ಕೂ ವಿಶಿಷ್ಟ ಮತ್ತು ಸ್ಮರಣೀಯ. ಪ್ರತಿಬಾರಿಯೂ ಅವರೊಂದಿಗಿನ ಮಾತು ಚೇತೋಹಾರಿಯಾಗಿರುತ್ತಿತ್ತು.
ಕ್ಷೇತ್ರಪಾಲಯ್ಯನವರ ಆಕಸ್ಮಿಕ ಸಾವು ತೀರ ಅನ್ಯಾಯ. ವಿಷಯ ತಿಳಿದಾಗ, ಶಂಕರನೊಂದಿಗೆ, ಮಕ್ಕಳಿಗಿಂತ ಹೆಚ್ಚಾಗಿ ಅವರ ಸಾವು ನಮ್ಮಂತಹ ಹಳೆಯ ವಿದ್ಯಾರ್ಥಿಗಳಿಗಾಯಿತು, ಎಂದಿದ್ದೆ.
ನಾವೆಲ್ಲಾ ವಿದ್ಯಾರ್ಥಿಗಳಾಗಿದ್ದಾಗ ನಮ್ಮ ಅಧ್ಯಾಪಕರೊಂದಿಗೆ ಮುಕ್ತವಾಗಿ ಮಾತನಾಡುವಂತಹ (ಹರಟೆ ಹೊಡೆಯುವುದಿರಲಿ) ವಾತಾವರಣವೇ ಇರಲಿಲ್ಲ. ಕ್ಷೇತ್ರಪಾಲಯ್ಯನವರ ಅಪಾರವಾದ ಓದು, ಸಂಸ್ಕೃತ ಭಾಷಾಜ್ಞಾನ, ವಾದಮಂಡನೆಯ ಶೈಲಿ ನಮ್ಮಂತಹ ಹಳೆಯ ವಿದ್ಯಾರ್ಥಿಗಳ ಅರಿವಿನ ಪರಿಧಿಗೆ ಅರ್ಥಪೂರ್ಣವಾಗಿ ತೆರೆದುಕೊಳ್ಳುವ ಸಮಯಕ್ಕೇ ಗಕ್ಕನೆ ಎಲ್ಲ ತುಂಡಾಗಿಹೋಗಿಬಿಟ್ಟಿತು.
ಹಳ್ಳಿಯ ಸಿಹಿನೀರಿನ ಬಾವಿಯಲ್ಲಿ ಸೇದುವಾಗ ನಮ್ಮ ಹಗ್ಗ ತುಂಡಾಗಿ, ಬಿಂದಿಗೆಯೂ ಹಗ್ಗವೂ ಬಾವಿಯಲ್ಲಿಯೇ ಬಿದ್ದು ಹೋದಾಗ ಆವರಿಸುವಂತಹ ಶೂನ್ಯಭಾವ ಆವರಿಸಿಬಿಟ್ಟಿತು, ಮೇಷ್ಟರ ಸಾವಿನ ಸುದ್ದಿ ಕೇಳಿ.
ಜೀವನಯಾತ್ರೆಯೇ ಹಾಗೋ ಏನೋ. ಪ್ರಾಪ್ತಿ ಇದ್ದುದೇ ಅಷ್ಟು ಅನ್ನಿಸುತ್ತೆ.
ಮೇಷ್ಟರ ನೆನಪಿನೊಂದಿಗೇ ಮತ್ತೆ ಮತ್ತೆ ನೆನಪಾಗುವುದು, ಅಷ್ಟೇ ವಿಶಿಷ್ಟವಾದ ಅವರ ಕಂಠಶ್ರೀ.
ಈಗ ಎಲ್ಲ ಎಲ್ಲ ನೆನಪುಗಳು ಮಾತ್ರ.
(ಮಂಜುನಾಥ ಅಜ್ಜಂಪುರ)
೨.೭.೨೦೧೯