03. ಇವರು ನಮ್ಮ ಹಿರಿಯರು


ಆತ್ಮೀಯರೇ,
ಈ ಮಾಲಿಕೆಯಲ್ಲಿ ಎರಡನೇ ಕಂತಿನ ಲೇಖನ ಇಲ್ಲಿದೆ. ಇದೇ ರೀತಿ ನಿಮಗೆ ಪರಿಚಯವಿರುವ ಅಜ್ಜಂಪುರದ ಹಿರಿಯರ ಬಗೆಗೆ ಬರೆದು ಕಳಿಸಲು ಕೋರುತ್ತೇನೆ. ಇದರೊಂದಿಗೆ ಚಿತ್ರಗಳೂ ಇರಲಿ.


 ಶ್ರೀ ಆರ್. ಕೃಷ್ಣಭಟ್ಟರು

ಆರ್ಕೆ ಎಂದೇ ಜನಪ್ರಿಯರಾಗಿದ್ದ ಶ್ರೀ ಆರ್. ಕೃಷ್ಣಭಟ್ಟರು ಅಜ್ಜಂಪುರದ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ಅವರಿಗೆ ಕನ್ನಡದಂತೆಯೇ ಸಂಸ್ಕೃತದಲ್ಲೂ ಪ್ರೌಢಿಮೆಯಿತ್ತು. ಉತ್ತಮ ವೇದವಿದರಾಗಿದ್ದರು.  ತಲೆಯ ಮೇಲೆ ರುಮಾಲು, ಕಚ್ಚೆ ಪಂಚೆ, ಕೈಯಲ್ಲೊಂದು ಕೊಡೆ ಹಿಡಿದು ಗಂಭೀರವದನರಾಗಿ ಶಾಲೆಗೆ ಹೋಗುತ್ತಿದ್ದ ದೃಶ್ಯ ನೆನಪಿಗೆ ಬರುತ್ತದೆ. ತಲೆಗೆ ಪೇಟ ಧರಿಸುತ್ತಿದ್ದ ಸಂಪ್ರದಾಯಕ್ಕೆ ಬಹುಶಃ ಅಜ್ಜಂಪುರದ ಕೊನೆಯ ಪ್ರತಿನಿಧಿ ಎಂದುಕೊಳ್ಳುತ್ತೇನೆ. ದುರಾದೃಷ್ಟವೆಂದರೆ ಆಗೆಲ್ಲ ಕನ್ನಡಕ್ಕೆಂದೇ ಪರಿಣತರಾದವರು ಇರುತ್ತಿದ್ದರೂ, ಅವರ ಜ್ಞಾನವನ್ನು ಹಂಚಿಕೊಳ್ಳಲು , ಹರಡಲು ಬೇಕಿದ್ದ ವಾತಾವರಣ ಆಗ ಇರಲಿಲ್ಲ. ಈಗೆಲ್ಲ ಕನ್ನಡದ ಆಭಿಮಾನದ ಮಾತನಾಡುತ್ತೇವೆ. ಆದರೆ ಹಾಗೆ ಮಾಡದೆಯೂ ಕನ್ನಡದ ಬಗ್ಗೆ ಆಸಕ್ತಿ ಬೆಳೆಯುವಂತೆ ಮಾಡಿದವರಲ್ಲಿ ಆರ್ಕೆ ಕೂಡ ಒಬ್ಬರು.
 * * * * * * *




ಶ್ರೀ ಕೋಟೆ ಅನಂತರಾಯರು

ಕೋಟೆ ಆಂಜನೇಯ ದೇವಾಲಯದ ಅರ್ಚಕರಾಗಿದ್ದ ಶ್ರೀ ಕೋಟೆ ಅನಂತರಾಯರ ಹೆಸರಿನಲ್ಲಿ ಕೋಟೆಯಿದೆಯಾದರೂ ಅವರು ಇದ್ದದ್ದು ಪೇಟೆಯಲ್ಲಿ. ಬ್ರಾಹ್ಮಣ್ಯ, ಪೂಜೆ, ಆಚರಣೆಗಳಲ್ಲಿ ತುಂಬ ಶ್ರದ್ಧಾಳು. ಕೆಂಪು ಮೈಬಣ್ಣ, ೬೦ರ ವಯಸ್ಸಿನಲ್ಲೂ ಉದುರದ ಬಿಳಿಯ ತಲೆಗೂದಲು, ಶುಭ್ರ ಮಗುಟ, ಶಲ್ಯ, ಢಾಳಾದ ವಿಭೂತಿ, ಕೊರಳಲ್ಲಿ ಜಪಸರಗಳನ್ನು ಧರಿಸಿರುತ್ತಿದ್ದ ರಾಯರದು ಆಕರ್ಷಕ ವ್ಯಕ್ತಿತ್ವ. ಅವರು ಮಾತನಾಡುತ್ತಿದ್ದ ಶೈಲಿ ವಿಶಿಷ್ಟವಾಗಿತ್ತು. ಏಕೆಂದರೆ ಗೊಗ್ಗಲು ದನಿಯಲ್ಲಿ, ಒಮ್ಮೆ ಏರಿಸಿ, ಮತ್ತೊಮ್ಮೆ ಇಳಿಸಿದಂತೆ ಕೇಳಿಸುತ್ತಿದ್ದ ಮಂತ್ರೋಚ್ಛಾರಣೆ ಅವರದೇ ವಿಶಿಷ್ಟ ಶೈಲಿ. ಸ್ವಭಾವತಃ ಮುಂಗೋಪಿಯಾಗಿದ್ದರೂ, ಅವರ ಸಿಟ್ಟು ಹೆಚ್ಚು ಹೊತ್ತು ಇರುತ್ತಿರಲಿಲ್ಲ. ಪೂಜಾದಿಗಳ ವಿಷಯದಲ್ಲಿ ಏನಾದರೂ ಅಡಚಣೆಯಾದರೆ, ಅವರಿಗೆ ಒಪ್ಪಿತವಾಗದ ಸಲಹೆಗಳನ್ನೇನಾದರೂ ನೀಡಿದರೆ, ಮರುಕ್ಷಣವೇ ಸಂಘದ ಅಧ್ಯಕ್ಷರಾಗಿದ್ದ ಶ್ರೀ ಬಿ.ಆರ್. ನರಸಿಂಹಮೂರ್ತಿಗಳ ಮನೆಯ ಪಡಸಾಲೆಯಲ್ಲಿ ಬೀಗದ ಕೈಗೊಂಚಲನ್ನು ಒಗೆದು, ನಾನಿನ್ನು ಪೂಜೆ ಮಾಡುವುದಿಲ್ಲ ಎಂದು ಅಬ್ಬರಿಸುತ್ತಿದ್ದರು. ನರಸಿಂಹಮೂರ್ತಿಗಳೂ ಅಷ್ಟೇ ಸಮಾಧಾನದಿಂದ ಮಾತನಾಡಿ ಅವರನ್ನು ಒಪ್ಪಿಸಿ ಕಳಿಸುತ್ತಿದ್ದರು.
ಸದಾ ಸಂಪ್ರದಾಯ, ಪೂಜೆಯ ಆಚರಣೆಗಳಲ್ಲೇ ತೊಡಗಿಕೊಂಡಿದ್ದ ರಾಯರಲ್ಲೂ ಹುಡುಗಾಟದ ಉತ್ಸುಕತೆ, ಲವಲವಿಕೆಗಳಿದ್ದವು.  ಚೌಡಮ್ಮನ ಗುಡಿಯ ಎಡಭಾಗವು ೬೦ರ ದಶಕದಲ್ಲಿ ಖಾಲಿ ನಿವೇಶನವಾಗಿತ್ತು. ಅಲ್ಲಿ ಕಾಮನ ಹುಣ್ಣಿಮೆಯ ಏರ್ಪಾಡು ನಡೆಯಿತು. ಬಹುಶಃ ಅಷ್ಟು ದೊಡ್ಡ ಪ್ರಮಾಣದಲ್ಲಿ, ಕೋಟೆಯ ಹಿರಿಯರೂ ಸೇರಿದಂತೆ ಆಚರಿಸಿದ ಮೊದಲ ಮತ್ತು ಕೊನೆಯ ಕಾಮನ ಹುಣ್ಣಿಮೆ ಅದೇ ಇರಬೇಕು. ನೋಡನೋಡುತ್ತಿದ್ದಂತೆ ಕಟ್ಟಿಗೆಯ ರಾಶಿ ಏರಿತು. ದೊಡ್ಡ ದೊಡ್ಡ ಮರದ ದಿಮ್ಮಿಗಳನ್ನು ಸಂಗ್ರಹಿಸಲಾಯಿತು. ರಾತ್ರಿ ಸುಮಾರು ಎಂಟುಗಂಟೆಗೆ ಕಾಮದಹನದ ಉರಿ ಮುಗಿಲೆತ್ತರಕ್ಕೆ ಏರಿತು. ಚಿಕ್ಕವರು, ದೊಡ್ಡವರೆನ್ನದೆ ಎಲ್ಲರೂ ಬೆಂಕಿಯ ಸುತ್ತ ಕುಣಿದರು. ನಮ್ಮ ಮಡಿವಂತ, ಸಾಂಪ್ರದಾಯಿಕ ಹಿರಿಯರ ವಾಗ್ಭಂಡಾರದಲ್ಲಿ ಎಂಥೆಂಥ ಪದಗಳು ಹುದುಗಿದ್ದವು ಎನ್ನುವುದು ತಿಳಿದದ್ದು ಅಂದಿನ ದಿನವೇ ! ಅದರಲ್ಲಿ ಕೋಟೆ ಅನಂತರಾಯರ ಕೊಡುಗೆಯೂ ಕಡಿಮೆಯದೇನಲ್ಲ. ಅವರು ಹಾಡಿದ ಪದಗಳ ನೆನಪು ನನಗಿದೆ. ಅದು ಮೌಖಿಕ ಸಾಹಿತ್ಯವಾಗಿ ಉಳಿದಿದ್ದರಷ್ಟೇ ಚೆಂದವೇಕೆಂದು ಅಂದು ಕೋಟೆ ರಾಯರ ಕುಣಿತ, ಹಾಡುಗಳನ್ನು ಕಂಡು ಕೇಳಿದವರಿಗೆ ತಿಳಿದಿರುತ್ತದೆ !
* * * * * * *


ಶ್ರೀ ಬೆಳಗುತ್ತಿ ಸೀತಾರಾಮಯ್ಯ

ಶ್ರೀ ಸೀತಾರಾಮಯ್ಯನವರೂ ವೃತ್ತಿಯಲ್ಲಿ ಅಧ್ಯಾಪಕರಾಗಿದ್ದವರು. ನಿವೃತ್ತಿಯ ನಂತರ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಕುಳ್ಳಾದ ಆಕೃತಿ, ಮಿಂಚುತ್ತಿದ್ದ ಬೋಳುತಲೆ,  ಕಪ್ಪು ಬಣ್ಣ, ಪಟಾಪಟಿ ಚಡ್ಡಿ ಇಲ್ಲವೇ ಪಾಣಿಪಂಚೆ, ಮೇಲೊಂದು ಸ್ವೆಟರ್ ಅಥವಾ ಬನಿಯನ್ ಇದು ಅವರು ಸಾಧಾರಣವಾಗಿ ಕಂಡುಬರುತ್ತಿದ್ದ ರೀತಿ. ಇಂಗ್ಲಿಷ್‌ ಕನ್ನಡಗಳಲ್ಲಿ ಸುಂದರ ಕೈ ಬರವಣಿಗೆ. ಅವರಿಗೆ ದೊಡ್ಡವರಿಗಿಂತ ಮಕ್ಕಳನ್ನು ಕಂಡರೆ ತುಂಬ ಪ್ರೀತಿ.  ಭಾಷಾ ಶುದ್ಧಿಯತ್ತ ಸದಾ ಗಮನ. ಅದು ನಾವಾಡುವ ಮಾತಿಗೆ, ನಮ್ಮ ಅನೇಕ ಅಪಪ್ರಯೋಗಗಳನ್ನು ಯಾವ ಎಗ್ಗು ಇಲ್ಲದೆ ಬೈಗುಳಗಳಿಂದಲೇ ತಿದ್ದುತ್ತಿದ್ದರು. ಬರವಣಿಗೆಯಲ್ಲೂ ಅಷ್ಟೇ. ಗಣಿತದ ಸಂದರ್ಭಗಳಲ್ಲಿ ನಾವು ಯಾರೂ ಅಪ್ಪಿತಪ್ಪಿ ಕೂಡ ೪೨ ರೂ.ಗಳು ಎಂದು ಹೇಳುವಂತಿರಲಿಲ್ಲ. ೪೨ ರೂಪಾಯಿಗಳು ಎಂದೇ ಹೇಳಬೇಕಿತ್ತು. ತುಂಬ ಶಿಸ್ತಿನಿಂದ ಇರುತ್ತಿದ್ದರು ಮತ್ತು ನಮ್ಮಿಂದಲೂ ಅದನ್ನೇ ನಿರೀಕ್ಷಿಸುತ್ತಿದ್ದರು. ಅವರೆಂದೂ ಕಾಡುಹರಟೆಯಲ್ಲಿ ಭಾಗವಹಿಸಿದ್ದನ್ನು ನಾನು ಕಾಣೆ. ಸದಾ ಏನಾದರೂ ಕೆಲಸ ಮಾಡುತ್ತಲೇ ಇರುತ್ತಿದ್ದರು. ಅವರ ತೋಟ ಊರಿನಿಂದ ಒಂದೂವರೆ ಕಿ.ಮೀ. ದೂರದಲ್ಲಿದೆ. ಸೀತಾರಾಮಯ್ಯನವರ ಕೊನೆಯ ಮಗ ರಾಮನಾಥ ನನ್ನ ಓರಗೆಯವ. ಹಾಗಾಗಿ ಸೀತಾರಾಮಯ್ಯನವರಲ್ಲಿ ನನಗೆ ಕೊಂಚ ಸಲಿಗೆ ಕೂಡ. ತೋಟದಿಂದ ಬಂದವರೇ ಮನೆಯ ವಿಶಾಲವಾದ ಹಾಲ್‌ನಲ್ಲಿ ಕಾಲುಚಾಚಿ, ಗೋಡೆಗೆ ತಲೆಕೊಟ್ಟು ಮಲಗುತ್ತಿದ್ದರು. ದತ್ತರಾಜಾ... ಎಂದು ಅಬ್ಬರಿಸಿದರೆ ನಾನು ಹೋಗಿ ಅವರ ಕಾಲುಗಳನ್ನು ಒತ್ತುತ್ತಿದ್ದೆ. ಸ್ವಲ್ಪ ಹೊತ್ತು ಹೀಗೆ ಮಾಡಿದ ನಂತರ ಶಾಲೆಯ ಪಾಠದ ಬಗ್ಗೆ ಏನಾದರೂ ಕೇಳುತ್ತಿದ್ದರು. ಅದಕ್ಕೆ ಸರಿಯಾದ ಉತ್ತರ ಹೇಳಿದರೆ ಬಚಾವ್. ಇಲ್ಲದಿದ್ದರೆ ಅದರ ಬಗ್ಗೆ ವಿವರವಾಗಿ ಹೇಳಿ, ನನ್ನ ತಲೆಯೊಳಗೆ ಅದು ಇಳಿಯಿತೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳುವವರೆಗೂ ಬಿಡುತ್ತಿರಲಿಲ್ಲ. ಈಗೆಲ್ಲ ಅಂಥ ಅಕ್ಕರೆ ಯಾರಿಗಿದ್ದೀತು ?
ಒಮ್ಮೆ ಅವರ ತೋಟದ ಗುಡಿಸಿಲಿಗೆ ಹೋದಾಗ ಅಲ್ಲಿ ಪೇರಿಸಿಟ್ಟಿದ್ದ ತೆಂಗಿನ ಕಡ್ಡಿಗಳ ರಾಶಿಯನ್ನು ನೋಡಿ ಆಶ್ಚರ್ಯವಾಯಿತು. ಹತ್ತು ಘನ ಅಡಿಗಳಷ್ಟು ಕಡ್ಡಿಗಳನ್ನು ಅವರು, ರಬ್ಬರು ಹಾಳೆಯನ್ನು ತೊಡೆಯಮೇಲಿರಿಸಿಕೊಂಡು ಹೆರೆದು ಪೇರಿಸಿ ಇಟ್ಟಿದ್ದರು. ಆ ಗಾತ್ರವನ್ನು ನೋಡಿದ ನನಗೆ ಒಬ್ಬ ಮನುಷ್ಯ ಇಷ್ಟನ್ನು ಹೇಗೆ ತಾನೇ, ಬೇಜಾರಿಲ್ಲದೆ ಮಾಡಲು ಸಾದ್ಯವಾಯಿತು ಎಂದೆನಿಸಿತ್ತು.  ಹಬ್ಬಹರಿದಿನಗಳಲ್ಲಿ ಮಾವಿನ ಸೊಪ್ಪಿಗೆಂದು ಅವರ ತೋಟಕ್ಕೆ ಹೋಗುತ್ತಿದ್ದೆವು. ತೋಟದಲ್ಲೇ ಇರುತ್ತಿದ್ದ ಅವರು ಮಾವಿನ ಎಲೆಗಳನ್ನು ಹೇಗೆ ಮತ್ತು ಎಷ್ಟನ್ನು ಕೀಳಬೇಕು ಎಂಬುದರ ಬಗ್ಗೆ ಒಂದು ಪ್ರಾತ್ಯಕ್ಷಿಕೆ ನೀಡಿ, ಅದರಂತೆ ಮಾಡುತ್ತಿದ್ದೇವೆಯೇ ಇಲ್ಲವೇ ಎಂದು ಗಮನಿಸುತ್ತಿದ್ದರು. ಮನೆಯಲ್ಲಿ ಎಷ್ಟು ಬಾಗಿಲುಗಳಿವೆ, ಅಷ್ಟು ಬಾಗಿಲಿಗೆ ಪ್ರತಿ ಬಾಗಿಲಿಗೆ ೧೫ ರಿಂದ ೨೦ ರಂತೆ ಎಲೆಗಳು ಮತ್ತು ಬಾಗಿಲಿನ ಕೊನೆಗಳಲ್ಲಿ ಸಿಕ್ಕಿಸಲು ತಲಾ ಎರಡೆರಡರಂತೆ ಮಾವಿನ ಕೊನೆಗಳು, ಇದಿಷ್ಟನ್ನು ಮಾತ್ರವೇ ಕಿತ್ತುಕೊಳ್ಳಬೇಕಿತ್ತು. ಮಾವಿನ ಎಲೆಗಳಿಗೂ ಇಷ್ಟೊಂದು ಲೆಕ್ಕಾಚಾರದ ಅಗತ್ಯವಿದೆಯೇ ಎಂದೆನಿಸುತ್ತಿತ್ತು. ಆದರೆ ಆದರಂತೆ ಮಾಡಿದರೆ ಕೆಲಸ ಎಷ್ಟು ಅಚ್ಚುಕಟ್ಟಾಗಿ ಆಗುತ್ತಿತ್ತು ಮತ್ತು ಮರಕ್ಕೂ ಹಾನಿಯಾಗುತ್ತಿರಲಿಲ್ಲ. ಅವರ ಚಿಂತನೆಗಳಲ್ಲಿ ಪರಿಸರ ಪ್ರೇಮವಿದೆ, ಉಳಿತಾಯದ ಪಾಠವಿದೆ, ಎಲ್ಲಕ್ಕಿಂತ ಮುಖ್ಯವಾಗಿ ಶಿಸ್ತು ಇದೆಯೆನ್ನುವುದೆಲ್ಲ ಆಗ ತಿಳಿದಿರಲಿಲ್ಲ.
ಅವರು ಮಕ್ಕಳಿಗೆ ಸಾಹಸ ಪ್ರವೃತ್ತಿ ಬೆಳೆಸಿಕೊಳ್ಳುವಂತೆ ಹೇಳುತ್ತಿದ್ದರು. ಆರೆಂಟು ಮೈಲು ದೂರದ ಹಣ್ಣೆಗುಡ್ಡಕ್ಕೆ ಪ್ರವಾಸ ಹೊರೆಟೆವೆಂದರೆ ಅದಕ್ಕೆ ತಕ್ಕ ತಾಲೀಮು ಮಾಡಿಸುತ್ತಿದ್ದರು. ತೆಗೆದುಕೊಂಡು ಹೋಗಬೇಕಾದ ಪದಾರ್ಥಗಳು, ಕೆಲಸವನ್ನು ಹೇಗೆ ಗೆಳೆಯರು ಹಂಚಿಕೊಳ್ಳಬೇಕು ಮುಂತಾಗಿ ಎಲ್ಲವನ್ನೂ ವಿವರಿಸುತ್ತಿದ್ದರು. ಕೆರೆಯಲ್ಲಿ ಈಜಲು ಪ್ರೋತ್ಸಾಹಿಸುತ್ತಿದ್ದರು.  ಕಾಯಕವೇ ಕೈಲಾಸ ಎಂದು ಕೇಳಿದ್ದೆವು, ಅದನ್ನು ಶ್ರೀ ಸೀತಾರಾಮಯ್ಯನವರಲ್ಲಿ ನೋಡಿದೆವು.

* * * * * * *

ಕಾಮೆಂಟ್‌ಗಳು

  1. Bahushaha naanu nodiruvudu Krishna bhattarannobbaranne... Kannada panditaru ende avaranna kareyuttiddaru... igalu nenapide nannannu nodidagalella "baro ondu langa holisi kodtini ninge" anta helta idru...:) avarige makkala mele tumba akkare haagu abhimanavittu...:)

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ