ಭಗವದ್ಗೀತಾ ಅಧ್ವರ್ಯು


ಅಜ್ಜಂಪುರದ ಶಿವಾನಂದಾಶ್ರಮ 
ಮತ್ತು 
ಶ್ರೀ ಶಂಕರಾನಂದ ಸ್ವಾಮೀಜಿ  

ಅಜ್ಜಂಪುರದ ಶ್ರೀ ಸತ್ಯನಾರಾಯಣ ಶೆಟ್ಟರು ಅಜ್ಜಂಪುರದಲ್ಲಿ ಪ್ರಸಿದ್ಧ ವರ್ತಕರು. ಅವರ ಸಹೋದರ ಶ್ರೀ ಸುಬ್ರಹ್ಮಣ್ಯ ಶೆಟ್ಟರನ್ನು ಹಿಂದಿನ ಸಂಚಿಕೆಗಳಲ್ಲಿ ಪರಿಚಯಿಸಲಾಗಿದೆ.  ಇವರನ್ನು ಕಳೆದ ಡಿಸೆಂಬರ್‌ನಲ್ಲಿ ಅವರ ಅಳಿಯ ಹಾಗೂ ನನ್ನ ಗೆಳೆಯ ರಮಾನಂದರ ಮನೆಯಲ್ಲಿ ಸಂದರ್ಶಿಸಿದೆ. ಅವರಿಗೆ ಈಗ ವಯಸ್ಸು ೯೦. ಅವರ ಅದ್ಭುತ ನೆನಪಿನ ಶಕ್ತಿ ಮತ್ತು ಚಟವಟಿಕೆಗಳಿಗೆ ವಯಸ್ಸು ಅಡ್ಡಿಬಂದಿಲ್ಲ. 

ಅಜ್ಜಂಪುರ ಸತ್ಯನಾರಾಯಣ ಶೆಟ್ಟರು ಮತ್ತು ಶಂಕರ ಅಜ್ಜಂಪುರ 


ತಮ್ಮ ಅಗಾಧ ನೆನಪಿನ ಸಂಗ್ರಹದಿಂದ ಅಜ್ಜಂಪುರದ ಶಿವಾನಂದಾಶ್ರಮದ ಇತಿಹಾಸವನ್ನು ಕೆಲವೊಮ್ಮೆ ಉತ್ಸಾಹದಿಂದ, ಕೆಲವೊಮ್ಮೆ ಅದರ ಈಗಿನ ದುಸ್ಥಿತಿಗಾಗಿ ಮರುಗಿ ಹೇಳಿರುವ ವಿವರಗಳು ಇಲ್ಲಿವೆ. ಸತ್ಯನಾರಾಯಣ ಶೆಟ್ಟರ ನೆನಪುಗಳ ನಿರಂತರ ಹರಿವಿನೊಡನೆ, ಅವರ ಸೊಗಸಾದ ಮತ್ತು ಶುದ್ಧವಾದ ಕನ್ನಡದ ನಿರೂಪಣೆಯನ್ನು ಧ್ವನಿಮುದ್ರಿಸಿಕೊಂಡು, ಅದನ್ನು ಬರಹರೂಪಕ್ಕೆ ತಂದಿರುವುದಷ್ಟೇ ನಾನು ಮಾಡಿರುವ ಕೆಲಸ. 

"ಯಾರಾದರೂ ಈ ಕೆಲಸ ಮಾಡಬೇಕಿತ್ತು, ಅದನ್ನು ನೀವು ಮಾಡುತ್ತಿದ್ದೀರಿ, ಕಂಪ್ಯೂಟರಿನಲ್ಲಿ ದಾಖಲಿಸಿದ್ದು ಯಾವ ಕಾಲಕ್ಕೂ ಇರುತ್ತದೆ ಎಂದು ಹೇಳುವುದನ್ನು ಕೇಳಿದ್ದೇನೆ. ನಿಮ್ಮ ಪ್ರಯತ್ನ ಯಶಸ್ವಿಯಾಗಲಿ" ಎಂದು ತುಂಬುಹೃದಯದಿಂದ ಈ ಹಿರಿಯರು ಹರಸಿದ್ದಾರೆ. 

ಈ ಲೇಖನದೊಂದಿಗೆ ಇರುವ ಚಿತ್ರಗಳನ್ನು ಗೆಳೆಯ ಮಂಜುನಾಥ ಅಜ್ಜಂಪುರ ಸಂಗ್ರಹಿಸಿದ್ದಾರೆ. ೯೦ರ ವಯಸ್ಸಿನವರಿಗೆ ಇರುವ ಉತ್ಸಾಹ ನಮ್ಮ-ನಿಮ್ಮಲ್ಲರದಾಗಲಿ, ನಮ್ಮೂರಿನ ಬಗ್ಗೆ ದೊರೆಯುವ ಮಾಹಿತಿಗಳನ್ನು ಒಂದೆಡೆ ಸಂಗ್ರಹಿಸೋಣ, ಇದು ಕಿರಿಯರಿಗೆ ಉಪಯುಕ್ತವಾದೀತು ಎಂಬುದೇ ಆಶಯ. ದಯಮಾಡಿ ಪ್ರತಿಕ್ರಿಯಿಸಿ. 
- ಶಂಕರ ಅಜ್ಜಂಪುರ 


ಅಜ್ಜಂಪುರದ ಭಗವದ್ ಗೀತಾ ಅಧ್ವರ್ಯುಗಳ ಅಮೃತ ಶಿಲಾ ವಿಗ್ರಹ 

"ಶಂಕರಾನಂದರು ಉತ್ತರ ಕರ್ನಾಟಕದವರು. ಅವರು ಕನ್ನಡಿಗರೇ,ಅವರು ಕಾರಣಾಂತರಗಳಿಂದಾಗಿ ೧೮-೨೦ನೇ ವಯಸ್ಸಿನಲ್ಲಿ ಅವರಿಗೆ ವೈರಾಗ್ಯ ಬಂದಿತು. ನಾನು ಇಲ್ಲಿ ಇರುವುದಿಲ್ಲ, ಎಂದು ಬೇರೆ ಕಡೆ ಹೊರಟರು. ಅವರ ಜತೆಯಲ್ಲಿ ಅವರ ತಮ್ಮನೂ ಹೊರಟರು. ದೇಶಾದ್ಯಂತ ಸುತ್ತಿ ಇಬ್ಬರೂ ಹಿಮಾಲಯವನ್ನು ತಲುಪಿದರು.ಅಲ್ಲಿ ಸ್ವಾಮಿ ಶಿವಾನಂದರನ್ನು ಭೇಟಿಯಾದರು. ಅವರು ಭಗವದ್ಗೀತೆಯಲ್ಲಿ ಅದ್ವಿತೀಯ ಪಂಡಿತರು. ಅವರ ಆಶ್ರಯದಲ್ಲಿ ೧೨ ವರ್ಷಕಾಲ ಅಲ್ಲಿಯೇ ಇದ್ದು, ಅವರಿಂದ ಜ್ಞಾನ ಸಂಪಾದನೆ ಮಾಡಿದರು. ಅವರು 'ನೀನಿನ್ನು ಹೋಗಬಹುದು, ಸಾಕಷ್ಟು ವಿದ್ಯಾವಂತನಾಗಿರುವೆ, ಭಗವದ್ಗೀತೆಯನ್ನು ಎಲ್ಲೆಡೆ ಪ್ರಚಾರ ಮಾಡು' ಎಂದು ಆದೇಶವಿತ್ತರು. 'ನಾನೇನೋ ಅದನ್ನು ಮಾಡುತ್ತೇನೆ, ಆದರೆ ಅದರ ಮೊದಲು ಗುರುಕಾಣಿಕೆಯನ್ನು ಸಲ್ಲಿಸಬೇಕಾದುದು ನನ್ನ ಧರ್ಮ, ನಿಮಗೇನು ನೀಡಬೇಕು' ಎಂದು ಕೇಳಿದರು. ಶಿವಾನಂದರು 'ನನಗೇನೂ ಗುರುದಕ್ಷಿಣೆ ಬೇಡ, ನಾನು ನಿನಗೆ ತಿಳಿಸಿರುವುದನ್ನು ವ್ಯಾಪಕವಾಗಿ ಪ್ರಚಾರ ಮಾಡು, ಅದೇ ನೀನು ನನಗೆ ಸಲ್ಲಿಸಬಹುದಾದ ಗುರುದಕ್ಷಿಣೆ' ಎಂದರು. 

ಆಶ್ರಮ ಪ್ರವೇಶ ದ್ವಾರ 
ಅವರಿಂದ ಅನುಮತಿ ಪಡೆದು ಎಲ್ಲೆಡೆ ತಿರುಗಾಡುತ್ತ ಧರ್ಮ-ಕರ್ಮವಶಾತ್ ಅಜ್ಜಂಪುರಕ್ಕೆ ಬಂದರು. ಬಹಳ ಕಾಲ ಉತ್ತರದಲ್ಲೇ ಇದ್ದ ಶಂಕರಾನಂದರು ಸ್ವಾಭಾವಿಕವಾಗಿ ಹಿಂದಿಯಲ್ಲೇ ಮಾತನಾಡುತ್ತಿದ್ದರು. ಆಗ ನಮ್ಮ ಅಣ್ಣ ಶ್ರೀ ಸುಬ್ರಹ್ಮಣ್ಯಶೆಟ್ಟರು ಅಲ್ಪಸ್ವಲ್ಪ ಹಿಂದಿ ಕಲಿತಿದ್ದರು, ಹೀಗಾಗಿ, ಊರಿನ ಮಂದಿ ಅವರಲ್ಲಿಗೆ ಹೋಗಿ ಯಾರೋ ಬೈರಾಗಿಗಳು ಬಂದಿದ್ದಾರೆ, ಅವರು ಮಾತನಾಡುವ ಬಾಷೆ ನಮಗೆ ತಿಳಿಯುತ್ತಿಲ್ಲ, ಬಂದು ಅವರನ್ನೊಮ್ಮೆ ಮಾತನಾಡಿಸಿ, ಎಂದು ವಿನಂತಿಸಿದರು. ಅವರು ಅಜ್ಜಂಪುರದಿಂದ ಬೇರೆ ಊರಿಗೆ ಹೋಗುವ ಬಗ್ಗೆ ಕೇಳಿದರು. ಆಗ ಶೆಟ್ಟರು ನೀವು ಇಲ್ಲಿಯೇ ಇರಬಹುದು ಎಂದು ಹೇಳಿದರು. ಶಂಕರಾನಂದರು ತಮ್ಮೊಡನೆ ಕೆಲವು ಗಿಡಮೂಲಿಕೆಗಳನ್ನು, ಔಷಧಗಳನ್ನೂ ತಂದಿದ್ದರು. ಇದೇ ಸಂದರ್ಭದಲ್ಲಿ ನಮ್ಮೂರಿನಲ್ಲಿದ್ದ ಸಿದ್ಧರಾಮಣ್ಣ ಎಂಬುವವರು ತುಂಬ ಕಾಯಿಲೆಯಿಂದ ಬಳಲುತ್ತಿದ್ದರು, ಅವರು ನಿತ್ಯರೋಗಿ. ಅವರನ್ನು ದಯವಿಟ್ಟು ಗುಣಪಡಿಸಿ, ಎಂದು ವಿನಂತಿಸಿದಾಗ, ಶಂಕರಾನಂದರು ಅವರ ಮೇಲೆ ತಮ್ಮ ಔಷಧ ಪ್ರಯೋಗ ಮಾಡಿದರು. ಸಿದ್ಧರಾಮಣ್ಣ ಗುಣಮುಖರಾದರು. ಆನಂತರ ಶಂಕರಾನಂದರ ಮೇಲೆ ಜನರಿಗೆ ಹೆಚ್ಚು ವಿಶ್ವಾಸ ಬಂದಿತು. ಆಗ ಜನರು ದುಂಬಾಲು ಬಿದ್ದು, ಶಂಕರಾನಂದರನ್ನು ಅಜ್ಜಂಪುರದಲ್ಲೇ ಉಳಿಯುವಂತೆ ಕೋರಿದರು, ಅವರಿಗೆ ವಾಸಕ್ಕೆ ಸ್ಥಳ, ಆಶ್ರಮ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಕೋರಿಕೊಂಡರು. ಅವರನ್ನು ಮನವೊಲಿಸಿ ಯಶಸ್ವಿಯಾದಾಗ ಅಜ್ಜಂಪುರದ ಓರ್ವ ಮಹಿಳೆ, ಈಗ ಆಶ್ರಮವಿರುವ ಸ್ಥಳದಲ್ಲಿ ಒಂದು ಎಕರೆ ಭೂಮಿಯನ್ನು ದಾನಮಾಡಿದರು. ಆ ಪ್ರದೇಶವು ತುಂಬ ಉಸುಕಿನಿಂದ ಕೂಡಿದ ಸ್ಥಳ. ಅದರ ಮಗ್ಗುಲಲ್ಲೇ ಒಂದು ಹಳ್ಳ ಹರಿಯುತ್ತಿತ್ತು. ಅದನ್ನು ಕರ್ಲ ಹಳ್ಳ ಎಂದು ಕರೆಯುವರು. ಆಗ ಅಲ್ಲಿ ತೆಂಗಿನ ಸೋಗೆಯಿಂದ ಗುಡಿಸಿಲು ಕಟ್ಟಿಕೊಂಡರು. ತಮ್ಮ ಔಷಧಗಳಿಂದ ಪ್ರಖ್ಯಾತರಾಗಿ ನೆಲೆಸಿದರು. ಆಗ ಅವರಿಗೆ ಸಾಕಷ್ಟು ಜನ ಪರಿಚಿತರಾಗಿ, ನಿಧಾನವಾಗಿ ಆಶ್ರಮದತ್ತ ಬರಲಾರಂಭಿಸಿದರು. ಆದರೆ ಅವರಿಗೆ ಹಿಂದೀ ಪ್ರವಚನ ಅರ್ಥವಾಗುತ್ತಿರಲಿಲ್ಲ. ಆಗ ಸುಬ್ರಹ್ಮಣ್ಯಶೆಟ್ಟರು ಅದರ ಅನುವಾದ ಮಾಡುತ್ತಿದ್ದರು. 

ಹತ್ತಿರದ ಹಳ್ಳಿಗಳ ಜನರೂ ಬರಲಾರಂಭಿಸಿದರು. ಅಜ್ಜಂಪುರದ ಸಮೀಪದ ಸೊಕ್ಕೆ ಗ್ರಾಮದಲ್ಲಿ ಒಂದು ದೇವಾಲಯವಿತ್ತು. ಅಲ್ಲಿದ್ದ ಸಾಮಗ್ರಿಗಳನ್ನು ಗಾಡಿಯಲ್ಲಿ ತಂದು ಆಶ್ರಮಕ್ಕೆ ತಾತ್ಕಾಲಿಕ  ಕಟ್ಟಡದ ನಿರ್ಮಾಣಕ್ಕೆ ಮುಂದಾದರು. ನಂತರ ಸ್ವಾಮಿಗಳು ಅಲ್ಲಿದ್ದು ಪ್ರವಚನ ಆರಂಭಿಸಿದರು. ಇನ್ನೊಂದು ವಿಶೇಷವೆಂದರೆ ಅವರು ಬೀಡಿ ಸೇದುತ್ತಿದ್ದರು. ಉತ್ತರದಲ್ಲಿ ಆ ಪದ್ಧತಿಯಿತ್ತು. ಬಂದವರಿಗೆ ಚಹಾ ಮಾಡಿಕೊಡುತ್ತಿದ್ದರು. ಆ ಕಾಲಕ್ಕೆ ಅದು ಕೂಡ ಅಜ್ಜಂಪುರಕ್ಕೆ ಅಪರೂಪದ ಸಂಗತಿಯಾಗಿತ್ತು. ಅಲ್ಲಿಂದ ಮುಂದೆ ವ್ಯಾಪಕವಾಗಿ ಬೆಳೆಯುತ್ತ ಹೋಯಿತು. ಪ್ರಾರ್ಥನಾ ಮಂದಿರ, ಬಂದ ಜನರಿಗೆ ವಾಸಕ್ಕೆಂದು ನಾಲ್ಕಾರು ಕೋಣೆಗಳನ್ನು ಕಟ್ಟಲಾಯಿತು. ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಆಶ್ರಮ ಊರ್ಜಿತವಾಯಿತು, ಅದಕ್ಕೊಂದು ರೂಪವೂ ಬಂದಿತು. ಸ್ವಾಮಿಗಳೂ ಪ್ರಸಿದ್ಧರಾದರು. ಅವರು ಮೂಲತಃ ವೀರಶೈವ ಧರ್ಮಕ್ಕೆ ಸೇರಿದವರು. ಸನ್ಯಾಸಿಗಳಿಗೆ ಮತದ ಹಂಗು ಇರುವುದಿಲ್ಲ, ನಿಜ. ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ವೀರಶೈವರ ಸಂಖ್ಯೆ ಜಾಸ್ತಿ. ಗೀತೆಗೂ ಅವರಿಗೂ ಯಾವ ಸಂಬಂಧವೂ ಇರಲಿಲ್ಲ. ಅಂಥ ಗುಂಪಿನಲ್ಲಿಯೂ ಗೀತೆಯ ಬಗ್ಗೆ ಆಸಕ್ತಿ ಹುಟ್ಟಿಸಿ, ಅವರಿಂದ ಸೈ ಎನ್ನಿಸಿಕೊಂಡು, ಅಲ್ಲಲ್ಲಿ ಪ್ರವಚನಗಳನ್ನು ಏರ್ಪಡಿಸುತ್ತ, ಗೀತೆಯು ಈ ಪ್ರಾಂತದಲ್ಲಿ ಬೆಳೆಯಲು ಭದ್ರ ಬುನಾದಿ ಹಾಕಿದರು. ಕೆಲವು ವರ್ಷಗಳ ನಂತರ ಗೀತಾ ಜಯಂತಿಯನ್ನು ಆರಂಭಿಸಿದರು, ಹಳ್ಳಿಗಳಿಂದ ಜನರು ಬರಲಾರಂಭಿಸಿದರು. 

ಇದೇ ಸಮಯಕ್ಕೆ ಸರಿಯಾಗಿ ಚಿಕ್ಕಮಗಳೂರಿನಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದ ಸುಬ್ಬಯ್ಯನವರು ಆಶ್ರಮದ ಸಂಪರ್ಕಕ್ಕೆ ಬಂದರು. ಅವರಿಗೆ ಸಾಕಷ್ಟು ದುರಭ್ಯಾಸಗಳಿದ್ದವು. ಸ್ವಾಮಿಗಳ ಶಿಷ್ಯರಾದ ನಂತರ ಅವೆಲ್ಲವನ್ನೂ ತ್ಯಜಿಸಿ, ಉತ್ತಮ ನಡವಳಿಕೆಯ ಮನುಷ್ಯರಾದರು. ಅವರಿಗೆ ಸಾರ್ವಜನಿಕ ಸಂಪರ್ಕ ತುಂಬ ಇದ್ದುದು ಸ್ವಾಭಾವಿಕ. ತಮ್ಮ ವಶೀಲಿ, ಪ್ರಭಾವಗಳನ್ನು ಬಳಸಿ, ಶ್ರೀಮಂತರಿಂದ ದೇಣಿಗೆ ಕೊಡಿಸಿ ಆಶ್ರಮದ ಅಭಿವೃದ್ಧಿಗೆ ತುಂಬ ನೆರವಾದರು. ಈ ಆಶ್ರಮಕ್ಕೆ ಶಂಕರಾನಂದರ ಗುರುಗಳಾದ ಶಿವಾನಂದರ ಹೆಸರನ್ನೇ ಇಡಲಾಯಿತು. ಆಶ್ರಮದಲ್ಲಿ ಕಟ್ಟಡ ಕಾಮಗಾರಿಗಳು ಆರಂಭವಾದವು. ೧೯೬೬ರಲ್ಲಿ ಶಂಕರಾನಂದರ ಹೆಸರಿನ ಗುರುಮಂದಿರವನ್ನು ಕಟ್ಟಲಾಯಿತು. ಸ್ವಾಮಿ ಶಂಕರಾನಂದರ ಅಮೃತಶಿಲೆಯ ಸುಂದರಮೂರ್ತಿ ಅಲ್ಲಿ ವಿರಾಜಿಸುತ್ತಿದೆ.  ಕೋದಂಡರಾಮಶೆಟ್ಟರು ಎನ್ನುವವರಿಂದ ಸಾಕಷ್ಟು ಹಣದ ನೆರವು ಪಡೆದು ಆಶ್ರಮದ ಆವರಣದಲ್ಲಿ ಕೃಷ್ಣಮಂದಿರ ನಿರ್ಮಿಸಿದರು. ನಂತರ ಆಶ್ರಮವು ಬೆಳೆಯುತ್ತ ಹೋದಂತೆಲ್ಲ, ಅಜ್ಜಂಪುರವಲ್ಲದೆ ಹೊಸಪೇಟೆ, ಬಳ್ಳಾರಿ ಮುಂತಾದ ಹನ್ನೆರಡು ಸ್ಥಳಗಳಲ್ಲಿ ಆಶ್ರಮದ ಶಾಖೆಗಳನ್ನು ತೆರೆದರು. ಅವರಿಗೆ ಆಂಧ್ರಪ್ರದೇಶದ ಸಂಪರ್ಕ ಹೆಚ್ಚು ಬಂದಿದ್ದರಿಂದ ತೆಲುಗು ಭಾಷಿಕ ಸ್ವಾಮಿಗಳ ಪರಿಚಯ ಜಾಸ್ತಿ. ಅವರಿಗೆ ಇನ್ನೊಬ್ಬ ರಾಮಕೃಷ್ಣ ಎಂಬ ಸ್ವಾಮಿಗಳ ಪರಿಚಯವಾಯಿತು. ಇವರು ಆಂಧ್ರಕ್ಕೆ ಹೋದಾಗ ಇವರು ಕೃಷ್ಣ, ಅವರು ಅರ್ಜುನ, ಹೀಗಿರುತ್ತಿತ್ತು, ಗುರುಶಿಷ್ಯರ ಸಂಬಂಧ. ಶಂಕರಾನಂದರು ಹಿಂದಿಯಲ್ಲಿ ಮಾಡಿದ ಪ್ರವಚನವನ್ನು ಅವರು ತೆಲುಗಿಗೆ ಭಾಷಾಂತರ ಮಾಡುತ್ತಿದ್ದರು. ಹತ್ತಾರು ಸಾವಿರ ಜನ ಸೇರುತ್ತಿದ್ದರು. ಹೀಗಾಗಿ ತೆಲುಗು ಪ್ರಾಂತದಲ್ಲೂ ಅವರು ಹೆಸರು ಮಾಡಿದರು. ಇವರ ಸ್ಮರಣಾರ್ಥ ೧೯೭೬ರಲ್ಲಿ ೪೫ನೇ ವಾರ್ಷಿಕ ಗೀತಾಜಯಂತಿಯ ಅಂಗವಾಗಿ ಗೀತಾಭವನವನ್ನು ಕಟ್ಟಲಾಯಿತು. ನಾನು ಕೂಡ ಸತತ ಅರವತ್ತು ವರ್ಷಗಳ ಕಾಲ, ಒಂದು ವರ್ಷವೂ ಬಿಡದಂತೆ ಅವರ ಪ್ರವಚನವನ್ನು ಕೇಳಿದ್ದೇನೆ. ವರ್ಷದಲ್ಲಿ ಎರಡು ಕಾರ್ಯಕ್ರಮಗಳಂತೂ ವಿಜೃಂಭಣೆಯಿಂದ ನಡೆಯುತ್ತಿದ್ದವು. ಅವರ ಕಾಲಾನಂತರವೂ ಅವರ ಆರಾಧನೆ ನಡೆಯುತ್ತಿತ್ತು. ಅವರು ತಮ್ಮ ಅಂತಿಮ ದಿನಗಳಲ್ಲಿ, ಎಂದರೆ ತಮ್ಮ ೮೫ನೇ ವಯಸ್ಸಿನಲ್ಲಿ ಕೂಡ ಅನೇಕ ಪುಸ್ತಕಗಳನ್ನು ಪ್ರಕಟಿಸಿದರು. ಉತ್ತರ ಭಾರತದಲ್ಲಿ ಗೋರಖಪುರವು ಗೀತಾ ಪ್ರಕಾಶನಕ್ಕೆ ಹೆಸರಾದ ಸ್ಥಳವಾಗಿರುವಂತೆ, ದಕ್ಷಿಣದಲ್ಲಿ ಅಜ್ಜಂಪುರವು ಗೀತಾ ಪ್ರವಚನ ಮತ್ತು ಪ್ರಕಟಣೆಗಳಿಗೆ ಹೆಸರಾಗುವಂತೆ ಶಂಕರಾನಂದರು ಶ್ರಮಿಸಿದರು. ೧೯೯೩ರಲ್ಲಿ ಬೆಂಗಳೂರಿನ ಎಲ್. ರಾಮಚಂದ್ರ ಖೋಡೆಯವರ ನೆರವಿನಿಂದ ಶಂಕರತೀರ್ಥವೆಂಬ ಪುಷ್ಕರಣಿಯನ್ನು ನಿರ್ಮಿಸಲಾಯಿತು. ಆಶ್ರಮದ ಆವರಣದಲ್ಲೇ ಪಂಚವಟಿಯೆಂಬ ಕಿರುವನವೂ ಅಭಿವೃದ್ಧಿಯಾಗಿದೆ. 

ಅಜ್ಜಂಪುರದ ಸಮೀಪವಿರುವ ಹೊಸೂರು ರಸ್ತೆಯಲ್ಲಿ ಪುಣ್ಯಾತ್ಮರೊಬ್ಬರು ಸ್ವಲ್ಪ ಜಮೀನನ್ನು ಸ್ವಾಮಿಗಳಿಗೆ ದಾನ ಮಾಡಿದರು. ಅಲ್ಲೊಂದು ಪಾಠಶಾಲೆಯನ್ನು ನಿರ್ಮಿಸಿದರು, ನಂತರ ಅವರ ಅಂತ್ಯಕಾಲ ಸಮೀಪಿಸಿತು. ಅವರ ಮರಣಾನಂತರ ಆಂಧ್ರಪ್ರದೇಶದ ಶಿಷ್ಯರು ಬಂದು ಅವರ ಪಾರ್ಥಿವ ಶರೀರವನ್ನು ಆಂಧ್ರಕ್ಕೆ ಕೊಂಡೊಯ್ಯಲು ನಿರ್ಧರಿಸಿದರು. ಆದರೆ ಸುಬ್ಬಯ್ಯನವರು ಆಸಕ್ತಿ ವಹಿಸಿ, 'ಸ್ವಾಮಿಗಳು ಅಜ್ಜಂಪುರದವರು, ಅವರ ಸಮಾಧಿ ಅಜ್ಜಂಪುರದಲ್ಲೇ ಆಗಬೇಕು' ಎಂದರು. ಅದರಂತೆ ಮುಂದೆ ೩ ಅಂತಸ್ತುಗಳ ಕಟ್ಟಡವನ್ನು ನಿರ್ಮಿಸಿ, ನೆಲಮಾಳಿಗೆಯಲ್ಲಿ ಶಂಕರಾನಂದರ ಸಮಾಧಿ, ಮೇಲೆ ಶ್ರೀ ಕೃಷ್ಣಮಂದಿರ, ಅದರ ಮೇಲೆ ಶಂಕರಾನಂದರ ಪ್ರತಿಮೆಗಳನ್ನು ಸ್ಥಾಪಿಸಲಾಯಿತು. ಶಂಕರಾನಂದರ ಅಂತ್ಯಕಾಲದಲ್ಲಿ, ಅವರ ಅನುಮತಿಯೊಡನೆ ಸುಬ್ಬಯ್ಯನವರು ಸ್ವಾಮಿ ಶಂಕರಾನಂದ ವಿಶ್ವಸ್ಥ ಸಮಿತಿಯನ್ನು ಸ್ಥಾಪಿಸಿದರು. 

ಶಂಕರ ತೀರ್ಥ 
ಪಂಚವಟಿ ಕಿರು ವನ 
ಕಾಲ ಹೀಗೇ ಇರುವುದಿಲ್ಲ. ಮುಂದೆ ಅನೇಕ ಬೆಳವಣಿಗೆಗಳಾದವು.  ಸುಬ್ಬಯ್ಯನವರು ಅವರ ಪುತ್ರಿಯ ವಿವಾಹವನ್ನು ಬೆಂಗಳೂರಿನಲ್ಲಿ ಅದ್ಧೂರಿಯಿಂದ ನಡೆಸಿದರು. ಆ ವೈಭವ ಸರಕಾರದ ಕಣ್ಣುಕುಕ್ಕಿತು. ಅವರ ಆದಾಯದ ಮೂಲವನ್ನು ಅರಸಿ, ಅವರ ಆಸ್ತಿಯನ್ನು ಸರಕಾರ ಮುಟ್ಟುಗೋಲು ಮಾಡಿಕೊಂಡಿತು. ಈ ಸಂಬಂಧದಲ್ಲಿ ಸರಕಾರವು ಅಜ್ಜಂಪುರದ ಆಶ್ರಮದತ್ತಲೂ ಕಣ್ಣುಹಾಕಿತ್ತು. ಆದರೆ ಅದರಿಂದೇನೂ ತೊಂದರೆಯಾಗಲಿಲ್ಲ. ಸುಬ್ಬಯ್ಯನವರು ಬೆಂಗಳೂರಿಗೆ ತೆರಳುವಾಗ ಟ್ರಸ್ಟ್‌ನ ನಿರ್ವಹಣೆಗೆಂದು ಹೊಸ ಸ್ವಾಮೀಜಿಯವರನ್ನು ಹುಡುಕುವ ಸಂದರ್ಭ ಒದಗಿತು. ಆಗ ಅವರು ಶಿವಾನಂದರೆಂಬ ಬ್ರಹ್ಮಚಾರಿಯನ್ನು ಇಲ್ಲಿನ ಸ್ವಾಮಿಗಳಾಗಬೇಕೆಂದು ಕೋರಿದರು.  ಶಿವಾನಂದರು ಯುವಕ, ಶ್ರೀಮಂತ ಮನೆತನದಿಂದ ಬಂದಿದ್ದ ಅವರಿಗೆ ಸಮಾಜಸೇವೆಯ ಮನಸ್ಸಿತ್ತು. ಇಂಥ ಪ್ರಭಾವಶಾಲಿಯು ಆಶ್ರಮದ ಸ್ವಾಮಿಗಳಾಗಿ ನಿಯುಕ್ತರಾದರೆ ತಮಗೂ, ಆಶ್ರಮಕ್ಕೂ ಒಳ್ಳೆಯ ಭವಿಷ್ಯವಿದೆಯೆಂದು ಸುಬ್ಬಯ್ಯನವರು ಊಹಿಸಿದರು.  ಶಿವಾನಂದರ ತಂದೆತಾಯಿಯರ ಅನುಮತಿಗೂ ಕಾಯದೆ ತರಾತುರಿಯಲ್ಲಿ ಅವರಿಗೆ ಸನ್ಯಾಸ ದೀಕ್ಷೆ ಕೊಡಿಸಿದರು. ಇದರಿಂದ ತಂದೆ ತಾಯಿಗಳು, ಬಂಧುಗಳು ಆಘಾತಕ್ಕೊಳಗಾದರು. ಅವರು ವಿರೋಧಿಸಿದರೂ, ಈ ಅವಕಾಶವು ಎಲ್ಲರಿಗೂ ಬಾರದು, ಸಮಾಜಸೇವೆಯ ಉತ್ತಮ ಅವಕಾಶವನ್ನು ಹಾಳುಮಾಡಬಾರದೆಂಬ ಸಾರ್ವಜನಿಕರ ಮನವಿಯ ಮೇರೆಗೆ ಅವರು ಒಲ್ಲದ ಮನಸ್ಸಿನಿಂದ ಒಪ್ಪಿಗೆ ಸೂಚಿಸಿ ತೆರಳಿದರು. ಮುಂದೆ ಸುಬ್ಬಯ್ಯನವರು ನೂತನ ಸ್ವಾಮೀಜಿಗಳಿಗೆ ಯಾವ ವ್ಯವಸ್ಥೆಯನ್ನೂ ಮಾಡಲಾಗಲಿಲ್ಲ, ಅವರು ನಿಧನರಾದರು. 

ಕೃಷ್ಣ ಮಂದಿರ 


ಮುಂದಿನ ಕೆಲವು ವರ್ಷಗಳಲ್ಲಿ ಯಾರ ಆಡಳಿತವೂ ಇಲ್ಲದೆ ಅನಾಥವಾದ ಆಶ್ರಮದ ಧರ್ಮದರ್ಶಿಗಳು ಚದುರಿಹೋಗಿದ್ದರು. ಸಭೆಗಳಿಗೆ ಹಾಜರಾಗುತ್ತಿರಲಿಲ್ಲ. ಆಗ ಸುಬ್ಬಯ್ಯನವರ ಅಳಿಯ  ಕೈಗಾರಿಕೋದ್ಯಮಿಯಾಗಿದ್ದ ಚಂದ್ರಶೇಖರ್ ಅವರಿಗೆ ಈ ಟ್ರಸ್ಟ್ ನ ಅಧ್ಯಕ್ಷರಾಗಿ ಮುಂದುವರೆಸುವಂತೆ ನೀಡಲಾಯಿತು. ಅವರ ಕಾಲದಲ್ಲಿ ಸುಮಾರು ಎಲ್ಲ ಯೋಗ್ಯತೆಗಳಿದ್ದ ೪-೫ ಸ್ವಾಮಿಗಳ ನೇಮಕಾತಿ ನಡೆದರೂ, ಯಾರೂ ನೆಲೆಗೊಳ್ಳುವಂಥ ಪರಿಸ್ಥಿತಿ ಇರಲಿಲ್ಲ. ಅವರ ಮೇಲೆ ಇಲ್ಲಸಲ್ಲದ ಆಪಾದನೆಗಳನ್ನು ಸೃಷ್ಟಿಸಿ, ಅವರು ಪೀಠದಲ್ಲಿ ಮುಂದುವರೆಯದಂತೆ ನೋಡಿಕೊಳ್ಳುವ ಹುನ್ನಾರ ನಡೆದಿತ್ತು. ಶಂಕರಾನಂದರ ಆಪ್ತಶಿಷ್ಯರು ನಾಲ್ವರಿದ್ದರು. ಅವರೆಂದರೆ ಶ್ರೀಕಂಠಾಚಾರ್ಯ, ಚಂದ್ರಾಚಾರ್ಯ ಚಿಕ್ಕೀಶ್ವರಾಚಾರ್ಯ ಮತ್ತು ಕುಂಟಿನಮಡುವಿನ ಪುಟ್ಟಸ್ವಾಮಿ. ಇವರು ತಮ್ಮ ಗುರುಗಳ ಮೇಲಿನ ಅಭಿಮಾನದಿಂದ ಇದನ್ನು ಮುಂಚಿನ ಸ್ಥಿತಿಗೆ ತರುತ್ತೇವೆಂದು ಶ್ರಮಿಸಿದರು. ಆದರೆ ಅಲ್ಲಿಯೂ ಕೆಲವು ತಪ್ಪುಗಳು ಕಾಣತೊಡಗಿದವು. ಸ್ವಾಮಿಗಳ ಪೂರ್ವಾಶ್ರಮದ ಪತ್ನಿಯು ಆಶ್ರಮಕ್ಕೆ ಬರುವುದನ್ನು ನಿರ್ಬಂಧಿಸಿದರು. ಇದರಿಂದ ಬೇಸರಗೊಂಡ ಸ್ವಾಮಿಗಳು ಮುಂದೆ ಬೆಂಗಳೂರಿಗೆ ತೆರಳಿ ಅಲ್ಲಿ ತಮ್ಮ ಕಾರ್ಯದಲ್ಲಿ ನಿರತರಾಗಿ ಯಶಸ್ಸು ಸಾಧಿಸಿದರು. ಮುಂದೆಯೂ ಅನೇಕರು ಬರಬೇಕೆಂದುಕೊಂಡರೂ ಇಲ್ಲಿನ ಪರಿಸ್ಥಿತಿಗಳು ಅನುಕೂಲಕರವಾಗಿ ಕಾಣದೇ ಯಾರೂ ಬರಲಿಲ್ಲ. 
ಶ್ರೀ ಶಾಂತಾನಂದ ಸ್ವಾಮಿಯವರ ಗುರುಮಂದಿರ  

ಈಗೀಗ ಭಗವದ್ಗೀತೆಯ ಬಗ್ಗೆ ಕೆಲವರಿಗಾದರೂ ಕಾಳಜಿ ಬಂದಿದೆ. ತತ್ಪರಿಣಾಮವಾಗಿ ಅಲ್ಲಲ್ಲಿ ಗೀತಾಜಯಂತಿಗಳು, ಅಭಿಯಾನಗಳು ಆರಂಭವಾಗಿವೆ. ಆದರೆ ಇದಾವುದೂ ಇರದ ಕಾಲಕ್ಕೆ, ಈ ದೇಶದ ನೈತಿಕ ಮೌಲ್ಯಗಳ ಆಧಾರಸ್ತಂಭವಾದ ಭಗವದ್ಗೀತೆಯನ್ನು ಪ್ರೀತಿಸಿದ ಶಂಕರಾನಂದರು ತಮ್ಮ ಜೀವಿತವನ್ನು ಅದರ ಪ್ರಚಾರ, ಪ್ರಸಾರಗಳಿಗೆಂದೇ ಮೀಸಲಿಟ್ಟರು, ಅಹರ್ನಿಶಿ ದುಡಿದರು. ಹೀಗಾಗಿ ಒಂದು ಕಾಲಕ್ಕೆ ವೈಭವದಿಂದ ಮೆರೆದು ದೇಶಾದ್ಯಂತ ಹೆಸರು ಮಾಡಿದ ಅಜ್ಜಂಪುರದ ಶಿವಾನಂದಾಶ್ರಮ ಈಗ ಅನಾಥವಾಗಿದೆ. ಈ ಆಶ್ರಮದ ವಿಶ್ವಸ್ಥ ಸಮಿತಿಯ ಸದಸ್ಯನಾಗಿದ್ದುಕೊಂಡು, ನನ್ನಿಂದಾದ ಕಾರ್ಯಗಳನ್ನು ಆಗ ನಿರ್ವಹಿಸಿದೆ. ಅದೇ ಉಮೇದು ಈಗ ಕಂಡುಬರುತ್ತಿಲ್ಲ, ಇದು ಪಾಪದ ಕೆಲಸ, ಹೀಗೆ ಮಾಡಬೇಡಿ,  ಮುಂಚಿ ಸ್ಥಿತಿಗೆ ಹೇಗಾದರೂ ಮುಂದುವರೆಸಿ ಎನ್ನುವುದಷ್ಟೇ ನನ್ನ ಕಳಕಳಿಯ ಮನವಿ". 

* * * * * * *


ಕಾಮೆಂಟ್‌ಗಳು

 1. ಪ್ರೀತಿಯ ಶಂಕ್ರು, ನಮ್ಮೂರ ಹಿರಿಯರ ಪೈಕಿ ಪ್ರಾತಃ ಸ್ಮರಣೀಯರಾದ ಶ್ರೀ ಸುಬ್ರಮಣ್ಯ ಶೆಟ್ರು- ಅವರಷ್ಟೇ ನಾನು ಪ್ರೀತಿಸುವ ಗೌರವಿಸುವ ಶ್ರೀ ಸತ್ಯನಾರಾಯಣ ಶೆಟ್ರು ರವರ,ನಮ್ಮೂರ ಆಶ್ರಮದ ಬಗ್ಗೆ ಬಂದಿರುವ ಸಂದರ್ಶನ ಓದಿದೆ. ಚಿಕ್ಕ ವಯಸ್ಸಿನಲ್ಲಿ ಅವರ ಮನೆಗೆ ಮನೆಪಾಠಕ್ಕೆ ಹೋಗುತ್ತಿದ್ದ ನನ್ನ ತಂದೆ ಒಮ್ಮೊಮ್ಮೆ ರಜೆ ಹಾಕಿದಾಗ,ಹೋಗುತ್ತಿದ್ದ ನನ್ನ ಆ ಬಾಲ್ಯದ ದಿನಗಳು ಈಗಲೂ ನೆನೆಪಾಗುತ್ತಿದೆ. ಅವರ ಧರ್ಮಪತ್ನಿ ಶ್ರೀಮತಿ ಅನ್ನಪೂರ್ಣಮ್ಮನವರು ಸಾಕ್ಷಾತ್ ಅನ್ನಪೂರ್ಣೆಶ್ವರಿ.ಶ್ರೀಮಂತ ಮನೆಯವರಾದರೂ, ಮನೆಗೆ ಬಂದವರೊಡನೆ ಅವರು ನೆಡೆದು ಕೊಳ್ಳುತ್ತಿದ್ದ ರೀತಿ ಅದೆಷ್ಟು ಸರಳ ಹಾಗು ಪ್ರೇಮಮಯ. ಅವರ ಮನೆಯವರೆಲ್ಲರ ನಿರ್ವಾಜ್ಯ ಪ್ರೀತಿ ವಾತ್ಸಲ್ಯಗಳು ತೋರಿಕೆಯ ಈ ಯುಗದಲ್ಲಿ ಊಹಿಸಲು ಆಗದದ್ದು. ಮುಂದೆ "ಗೀತಾಮಿತ್ರ" ದಲ್ಲಿ ಕೆಲಸ ಮಾಡುವಾಗ,ಶೆಟ್ರನ್ನು ಹತ್ತಿರದಿಂದ ನೋಡಿ ಅರಿಯುವ ಸೌಭಾಗ್ಯ ನನ್ನದಾಗಿತ್ತು.ಶ್ರೀ ಸುಬ್ರಮಣ್ಯ ಶೆಟ್ರ ಸಾಮಿಪ್ಯ, ಸಾನಿಧ್ಯದಲ್ಲಿ ಹಿರಿಯ ಶೆಟ್ರ ರವರಷ್ಟೇ ಸಾರ್ಥಕ ಬಾಳ್ವೆ ರೂಪಿಸಿಕೊಂಡ ಹಿರಿಯ ಚೇತನಗಳು ಶ್ರೀ ನಾಗರಾಜ ಶ್ರೇಷ್ಠಿಯವರು ಮತ್ತು ಶ್ರೀ ಸತ್ಯನಾರಾಯಣ ಶ್ರೇಷ್ಠಿಯವರು.ಬಿಡುವಿಲ್ಲದ ದಿನಪೂರ್ತಾ ವ್ಯವಹಾರ ನಡೆಸುತ್ತಿದ್ದಾಗ್ಯು ,ಸಾಮಾಜಿಕ ಕರ್ತವ್ಯ ನಿಷ್ಠೆ, ಆಧ್ಯಾತ್ಮಿಕತೆ ಗಳನ್ನೊಳಗೊಂಡ ಶಿಸ್ತು ಬದ್ದ ಜೀವನ ಗಳಿಂದ ತಾವು ನಂಬಿದ ಜೀವನ ಮೌಲ್ಯ ಗಳಿಗೆ ತಕ್ಕಂತೆ ನಿತ್ಯದ ಬದುಕನ್ನು ನೆಡಸಿ ಯಶಸ್ವಿಯಾದವರು. ಅತ್ಯಂತ ಕಿರಿಯರಾದ ನನ್ನ ಓರಿಗೆಯವರೊಡನೆ ಇವರೀರ್ವರು ನೆಡೆದು ಕೊಳ್ಳುತ್ತಿದ್ದ ಬಗೆ ಅಪೂರ್ವ. ನಮ್ಮ ಚಿಕ್ಕ ಚಿಕ್ಕ ಗುಣಗಳನ್ನೂ,ಹೊಗಳಿ ಬೆನ್ನು ತಟ್ಟಿದವರು.ನಮ್ಮ ಯಶಸ್ಸಿನಲ್ಲಿ ಸಂಭ್ರಮಿಸಿದವರು, ಆಪತ್ತಿನಲ್ಲಿ ಆತು ಕೊಂಡವರು.ಇಂತಹ ಮಾನವೀಯ ಸ್ಪರ್ಶ ಸುಖದ ಅನುಭವದ ನೆನಪು ನನಗಿನ್ನೂ ಬಾಳಬುತ್ತಿಯಾಗಿದೆ.
  ರೀ ಸತ್ಯನಾರಾಯಣ ಶೆಟ್ರು ಅವರ "ಕಲಾಸೇವಾ ಸಂಘದ",ಮತ್ತು ಶ್ರೀ ಶಿವಾನಂದಾ ಆಶ್ರಮದದ ಒಡನಾಟ, ಅವರು ಬರೆದ ಅನೇಕ ನಾಟಕ, ಲೇಖನಗಳ ಪರಿಚಯವಿದ್ದ ನನಗೆ, ಮೊನ್ನೆ ನನ್ನ ಗೆಳೆಯ ಮಂಜು
  ಶ್ರೀ ಸತ್ಯನಾರಾಯಣ ಶೆಟ್ರ ಕೈ ಬರಹದ " ಜ್ಞಾನ ಭಂಡಾರ " ದ ಕೃತಿ ತೋರಿಸಿದ.ಹಾಗೇ ನೋಡುತ್ತ ಬೆರಗಾಗಿ -ದಂಗಾಗಿ ಮೂಕಸ್ಮಿತನಾದೆ. ನಾನು ಕಂಡ ಅನೇಕ ಉದ್ಗ್ರಂಥ ಗಳ ಸಾಲಲ್ಲಿ ನಿಲ್ಲುವಂತಹದ್ದು. ಸ್ವಾಮಿ ರಂಗನಾಥಾನಂದರ ಪರಿವರ್ತನ ಶೀಲ ಸಮಾಜಕ್ಕೆ ಶಾಶ್ವತ ಮೌಲ್ಯಗಳು, ಸ್ವಾಮಿ ರಾಮರವರ ಹಿಮಾಲಯ ಮಹಾತ್ಮರ ಸಾನಿಧ್ಯದಲ್ಲಿ, ಸ್ವಾಮಿ ಯೋಗಾನಂದರ ಯೋಗಿಯ ಆತ್ಮಕಥೆ,ಓಶೋರ ಸಾಧನ ಸೂತ್ರ, ಸ್ವಾಮಿ ಜಗದಾತ್ಮಾನಂದರ ಬದುಕಲು ಕಲಿಯಿರಿ, ಈ ಎಲ್ಲ ಅನರ್ಘ್ಯ ರತ್ನಗಳನ್ನು ನಾನು ಮೊದಲು ಕಂಡ ಮೂಕಸ್ಮಿತ ಅನುಭವ ಮತ್ತೆ ನನಗಾಯಿತು. ತಮ್ಮ ಜೀವಾನುಭಾವದ ಹಿನ್ನೆಲೆಯಲ್ಲಿ, ಎಲ್ಲ ಧಾರ್ಮಿಕ ವಿಷಯಗಳಿಗೆ ನೀಡಿರುವ ವ್ಯಾಖ್ಯೆ (define) ಅದ್ಭುತ. ತೀರಾ ಸಾಮಾನ್ಯರಿಗೂ ಅರ್ಥವಾಗುವಷ್ಟು ಸರಳ,ಆದರೆ ವಿಷಯದ ಮಹತ್ತಿನಲ್ಲಿ ಕಿಂಚಿತ್ ತೂಕ ತಪ್ಪದ ಪ್ರೌಢಿಮೆ.ಎಷ್ಟು ಅಚ್ಚುಕಟ್ಟಾದ ವಿಷಯ ಸಂಗ್ರಹ.ಒಟ್ಟಾರೆ ಕಂಡು ಕೇಳರಿಯದಂತಹ ವಿಶಿಷ್ಟ ಜ್ಞಾನಕೋಶ. ಇದರ ಹಿಂದೆ ಅದೆಂತಹ ಶ್ರಮ,ಅಧ್ಯಯನ,ಜೊತೆಗೆ ತಮಗೆ ದೊರಕಿದ ಅಪೂರ್ವ ನಿಧಿಯನ್ನು ಮುಂದಿನ ಪೀಳಿಗೆಗೆ ಕೊಡಿಗೆಯಾಗಿ ನೀಡಿರುವ ಕಾಳಜಿ ಎಲ್ಲಾ ಸೇರಿ ಧನ್ಯೋಸ್ಮಿ ಎಂಬ ಭಾವದಲ್ಲಿ ನಮಿಸಿದೆ.ನನ್ನ ಗೆಳೆಯ ಅಪೂರ್ವ ಈ ಕೃತಿಯ ಬಗ್ಗೆ ಬರೆದ ಪ್ರತಿ ಪದವೂ ಅದಕ್ಕೆ ನೀಡಬೇಕಿದ್ದ ಗೌರವ ಸಮರ್ಪಣೆಯೇ. ಪುಸ್ತಕ ಕೆಳಗಿಡುವಾಗ, ಕೇವಲ copy paste ಗಳಿಂದ ಅಂತರ್ಜಾಲದಲ್ಲಿ ಸಿಕ್ಕ ಅನೇಕ ಮಾಹಿತಿ ಗಳನ್ನುತುರುಕಿಸಿದ, ನಾನು ಅಮೇರಿಕೆಯಿಂದ ತಂದ 100 GB hard disk ಜೇಬಿನಲ್ಲಿ ನಾಚಿ ಮುದುಡಿ ಕುಳಿತಿತ್ತು.
  ಸಂದರ್ಶನದ ಪೂರ್ತ ಆಶ್ರಮದ ಏಳು ಬೀಳು ಗಳನ್ನು ವಿವರಿಸಿದ ಕೊನೆಯಲ್ಲಿ, ಇಂದಿನ ಸ್ತಿತಿಯ ಬಗ್ಗೆ ಅವರ ವಿಷಾದ ಮನ ಮುಟ್ಟುತ್ತದೆ. ಆದರೆ ಎಲ್ಲೂ ತಮ್ಮ ಸ್ವಂತವಿಷಯ ಗಳನ್ನೂ ಕುರಿತು ಹೇಳದ ಅವರ ದೊಡ್ಡತನ, ತಮಗಿಂತ ತಾವು ಪ್ರಾಮುಖ್ಯ ನೀಡಿದ ಜೀವನ ಮೌಲ್ಯಗಳಿಗೆ ತಾವು ನಿಡುವ ಪ್ರಾಧಾನ್ಯತೆ ಎಂಬ ಸಂದೇಶ ಕಾಣಬಹುದಾಗಿದೆ.
  ನಮನಗಳೊಂದಿಗೆ,
  ಬಿ ಎಸ್ಸ್ ಲಕ್ಷ್ಮೀ ನಾರಾಯಣರಾವ್.
  ಮೈಸೂರು.

  ಪ್ರತ್ಯುತ್ತರಅಳಿಸಿ
 2. ಈ ಕೆಳಗಿನ ಪತ್ರವನ್ನು ಹಿರಿಯರಾದ ಶ್ರೀ ಸತ್ಯನಾರಾಯಣ ಶೆಟ್ಟರು, ಬ್ಲಾಗ್‌ನ ಬಗ್ಗೆ ತಮ್ಮ ಅಭಿಪ್ರಾಯವನ್ನು ದಾಖಲಿಸಲೆಂದು ದಿನಾಂಕ ೬-೪-೨೦೧೨ರಂದು ನನಗೆ ಬರೆದಿದ್ದರು. ಇದು ಅವರಿಗೆ ಸೌಕರ್ಯವಾದ ಮಾಧ್ಯಮ. ತುಂಬ ಸುಂದರವಾದ ಅಕ್ಷರಗಳು, ತಪ್ಪಿಲ್ಲದಂತೆ, ಸ್ಫುಟವಾಗಿ ಬರೆದಿರುವ ಈ ಪತ್ರದ ಯಥಾವತ್ತು ನಕಲನ್ನು ಪ್ರಕಟಿಸಬೇಕೆಂಬ ಆಶೆಯಿತ್ತು. ಆದರೆ ಅದನ್ನು ಸ್ಕ್ಯಾನ್ ಮಾಡಿ ಹಾಕಬೇಕಾಗುತ್ತದೆಯಾಗಿ, ಅಂಥ ಸೌಲಭ್ಯಗಳು ನನಗೆ ಇಲ್ಲವಾದ ಕಾರಣ, ಅವರ ಪತ್ರವನ್ನು ಬೆರಳಚ್ಚುಮಾಡಿ ಇಲ್ಲಿ ನೀಡಿದ್ದೇನೆ. ಈ ಪತ್ರದಲ್ಲಿ ಅವರು ಬ್ಲಾಗ್‌ನ್ನು ಸಂಪೂರ್ಣವಾಗಿ ಓದಿ ನಮೂದಿಸಿರುವ ಅವರ ಅಮೂಲ್ಯ ಅಭಿಪ್ರಾಯಗಳು ಗಮನಾರ್ಹವಾಗಿವೆ. ಅಂತೆಯೇ ಈ ಬ್ಲಾಗ್‌ಗೆಂದು ಬರೆಯುವವರನ್ನು ಪ್ರೋತ್ಸಾಹಿಸಿ ಬರೆದಿರುವ ನುಡಿಗಳಿವೆ. ಇತ್ತೀಚಿನ ತಂತ್ರಜ್ಞಾನವನ್ನು ಕಿರಿಯರ ಮೂಲಕ ತಿಳಿದು, ಈ ಹಿರಿಯರು ವಹಿಸುತ್ತಿರುವ ಆಸಕ್ತಿ ನನಗೆ ಆಶ್ಚರ್ಯ ಮತ್ತು ಸಂತಸ. ಏಕೆಂದರೆ, ತಿಳಿಯಲು, ಕಲಿಯಲು ವಯಸ್ಸು ಅಡ್ಡಿಯಾಗಬಾರದೆನ್ನುದಕ್ಕೆ ಅವರ ಈ ಪ್ರತಿಕ್ರಿಯೆಗಳೇ ಸಾಕ್ಷಿ. ಮುಂದಿರುವುದು ಶ್ರೀ ಸತ್ಯನಾರಾಯಣ ಶೆಟ್ಟರ ಪತ್ರದ ಪಠ್ಯ - ತಮ್ಮ ಅವಗಾಹನೆಗಾಗಿ.

  " ಆತ್ಮೀಯರಾದ ಶಂಕರ ಅಜ್ಜಂಪುರ ಇವರಿಗೆ ಸಪ್ರೇಮ ವಂದನೆಗಳು.
  ತಾವು ಅಜ್ಜಂಪುರದ ಮಣ್ಣಿನ ಮಗನಾಗಿ, ನನ್ನ ಊರು ಎಂಬ ಹಿರಿಯ ಭಾವನೆಯಿಂದ, ಬಹಳ ಆಸಕ್ತಿವಹಿಸಿ, ಇದುವರೆಗೂ ಯಾರೂ ಮಾಡದಿರುವ ಸಾಹಸವನ್ನು ಮೆಚ್ಚಲೇಬೇಕು. ಇದು ಸಂಸ್ಕಾರ ಬಲ, ಜಾಣ್ಮೆ, ಸೇವಾಭಾವನೆ. ನನ್ನದು ಎಂಬ ಮಮತೆಯಿದ್ದವರಿಗೆ ಮಾತ್ರ ಸಾಧ್ಯ. ಹುಟ್ಟಿದ ಊರನ್ನು ತೊರೆದು ದೂರದ ಸೇವೆಯಲ್ಲಿದ್ದು, ನನ್ನ ತವರೂರು, ಅಪ್ಪನ ಊರು, ಹುಟ್ಟಿ, ಆಡಿ, ಬೆಳೆದ ಊರು, ಎಲ್ಲಿದ್ದರೂ ನನ್ನದು-ತನ್ನದು ಎಂಬ ಮಮಕಾರವಿದ್ದಾಗ, ದೂರ, ಶ್ರಮ, ಕಷ್ಟ ಯಾವುದೂ ಲೆಖ್ಖಕ್ಕೆ ಬರುವುದಿಲ್ಲ. ಅದರಂತೆ ನೀವು ಅತ್ಯಾಸಕ್ತಿಯಿಂದ ಬಹಳ ಶ್ರಮಪಟ್ಟು ಅಜ್ಜಂಪುರದ ಹಿಂದಿನ ವ್ಯಕ್ತಿಗಳ ಪರಿಚಯ ಹಾಗೂ ಸಾಧನೆಗಳನ್ನು ಇಂಟರ್‌ನೆಟ್‌ನಲ್ಲಿ ಮೂಡಿಸಿ ಬಹುದೊಡ್ಡ ಉಪಕಾರ ಮಾಡಿರುವಿರಿ.
  ಇದು ಸ್ವಾರ್ಥಮಯ ಪ್ರಪಂಚ. ಬಹುಮಟ್ಟಿನ ಜನರು ತಾನು, ತನ್ನ ಹಂಡತಿ, ಮಕ್ಕಳು ಮಾತ್ರ ಸುಖವಾಗಿದ್ದರೆ ಸಾಕು ಎಂಬ ಸಂಕುಚಿತ ಮನೋಭಾವನೆಯಿಂದ ಬೇರೆಯವರ ಬಗ್ಗೆ ಯೋಚಿಸುವುದು ಕನಸಿನಲ್ಲೂ ಅಸಾಧ್ಯ. ಹೀಗಿರುವಾಗ ನೀವು ಹುಟ್ಟೂರಿನ ಬಗ್ಗೆ ಪ್ರೇಮದಿಂದ, ಬಹು ಕಷ್ಟಸಾಧ್ಯವಾದ ಹಿಂದಿನ ಆಗಿಹೋಗಿರುವ ಪುಣ್ಯಾತ್ಮರ ಪರಿಚಯಕ್ಕೆ ಅಲೆದಾಡಿ, ಸಾಹಸದಿಂದ ಒಟ್ಟುಗೂಡಿಸಿ ಇಂಟರ್‌ನೆಟ್‌ ಮೂಲಕ ವಿಶ್ವಕ್ಕೇ ಪರಿಚಯಿಸಿ ಉಪಕರಿಸಿರುವಿರಿ. ಅಜ್ಜಂಪುರ ಕೃಷ್ಣಸ್ವಾಮಿಯವರ ಇತಿಹಾಸ, ಅವರ ಸಾಧನೆ, ಪುಸ್ತಕಗಳ ಪರಿಚಯ, ಎಲ್ಲದರೊಂದಿಗೆ ಆ ಮಹನೀಯರ ಭಾವಚಿತ್ರ ಪ್ರಕಟಿಸಿರುವುದು ಅವರನ್ನೇ ನೋಡಿದಂತಾಯಿತು. ಹಾಗೆಯೇ ಸರ್ಕಸ್ ಸುಬ್ಬರಾಯರ ಸರ್ಕಸ್ ಪ್ರೇಮ, ಭಯಂಕರ ಪ್ರಾಣಿಗಳ ಜತೆ ಅವರ ಒಡನಾಟ, ನಾಡಿನ ಇತಿಹಾಸದಲ್ಲೇ ಒಬ್ಬ ಅಪ್ಪಟ ಬ್ರಾಹ್ಮಣ, ಒಂದು ಸರ್ಕಸ್ ಕಂಪೆನಿಯನ್ನು ಸ್ಥಾಪಿಸಿ, ಮೈಸೂರು ಮಹಾರಾಜರಿಂದ ಸವರನ್ ಹಾರ ಪಡೆದ ಘಟನೆ ಬಹಳ ಸ್ವಾರಸ್ಯಕರವಾಗಿದ್ದು, ಅಜ್ಜಂಪುರದಲ್ಲಿ ಇಂತಹ ಸಾಹಸಿಗರಿದ್ದರು ಎಂದರೆ ಹೆಮ್ಮೆಯ ವಿಷಯ.
  ಮರೆತು ಮಣ್ಣುಪಾಲಾಗಿದ್ದ ಸಾಹಸಿಗರಾದ ಅಜ್ಜಂಪುರ ಶಾಮಣ್ಣ, ಸುಬ್ಬರಾವ್, ನರಸಪ್ಪಯ್ಯ, ಚಿಕ್ಕದೇವರಪ್ಪ ಮುಂತಾದವರ ಸಾಧನೆ ಹಾಗೂ ಅಜ್ಜಂಪುರದ ಹೆಸರಾಂತ ಶಿವಾನಂದಾಶ್ರಮದ ಕಥೆ, ಅಜ್ಜಂಪುರ ನಗರದ ವಿವರಣೆ, ಹೀಗೆ ಎಲ್ಲವನ್ನೂ ನೋಡಿದಾಗ ಬಹಳ ಸಂತೋಷವಾಗಿ ನಿಮ್ಮ ಪ್ರಯತ್ನ ಹಾಗೂ ಊರಿನ ಸೇವೆ, ಪ್ರೇಮದ ಬಗ್ಗೆ ಬಹಳ ಮೆಚ್ಚುಗೆಯಾಯಿತು. ಹೂವಿನೊಂದಿಗೆ ನಾರೂ ಸ್ವರ್ಗಕ್ಕೆ ಹೋಯಿತು ಎಂಬಂತೆ ನಿಮ್ಮೊಂದಿಗೆ ಇರುವ ನನ್ನ ಭಾವಚಿತ್ರವನ್ನು ಲೋಕಕ್ಕೆ ಪರಿಚಯಿಸಿದಂತಾಯಿತು."

  " ಒಂದೇ ಒಂದು ಸಣ್ಣ ತಪ್ಪು ಈ ರೀತಿಯಿದೆ : ನನ್ನ ತಂದೆ ಹಿರಿಯ ಪತ್ರಕರ್ತ ಎ.ಪಿ.ನಾಗರಾಜ ಶೆಟ್ರು ಎಂದು ತಪ್ಪಾಗಿ ಮುದ್ರಣವಾಗಿದ್ದು ಸರಿಪಡಿಸಲು ವಿನಂತಿ."

  ಇಲ್ಲೊಂದು ಚಿಕ್ಕ ವಿವರಣೆ ಅಗತ್ಯ. ಶ್ರೀ ಸತ್ಯನಾರಾಯಣ ಶೆಟ್ಟರು ಉದ್ಧರಿಸಿರುವ ಮೇಲಿನ ವಾಕ್ಯವು ಗೀತಾ ಅಧ್ವರ್ಯು ಎಂಬ ಶಿವಾನಂದಾಶ್ರಮದ ಲೇಖನಕ್ಕೆ ಸಂಬಂಧಿಸಿರದೇ, ಅದರ ಹಿಂದಿನ ಸಂಚಿಕೆಯಲ್ಲಿ ಕಿರಾಳಮ್ಮನ ಐತಿಹ್ಯ, ಪುರಾಣ, ಚರಿತ್ರೆ ಎಂಬ ಲೇಖನಕ್ಕೆ ಸಂಬಂಧಿಸಿದ್ದು, ಅದರ ಲೇಖಕರಾದ ಮಂಜುನಾಥ ಅಜ್ಜಂಪುರ ಅವರು ತಮ್ಮ ನಿರೂಪಣೆಯಲ್ಲಿ, ತಮ್ಮ ತಂದೆಯವರಾದ ಶ್ರೀ ಎ.ಪಿ. ನಾಗರಾಜ ಶೆಟ್ಟರನ್ನು ಕುರಿತಾಗಿ ಹೇಳಿರುವ ವಾಕ್ಯವದು. ಬ್ಲಾಗ್‌ನ ಪುಟಗಳನ್ನು ಮೇಲೆ ಕೆಳಗೆ ಸರಿಸಿ ನೋಡುವಲ್ಲಿ, ಉಂಟಾಗಿರಬಹುದಾದ ಗೊಂದಲವಷ್ಟೇ ಶ್ರೀ ಸತ್ಯನಾರಾಯಣ ಶೆಟ್ಟರ ಈ ಪ್ರತಿಕ್ರಿಯೆಗೆ ಕಾರಣ.

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

87. ಬಂಗಾರದ ಭರವಸೆ ಹುಟ್ಟಿಸುವ ಹಣ್ಣೆ ಗುಡ್ಡ

82. "ಬಾರ್ನ್ ಹೆಡ್ ಮಾಸ್ಟರ್" ಅಜ್ಜಂಪುರ ವೆಂಕಟೇಶಮೂರ್ತಿ

ಮಹಾರಾಜರ ಕಟ್ಟೆ !