ಪಟ್ಟಣಗೆರೆ ಸೋದರರು


 ವೆಂಕಟಕೃಷ್ಣಯ್ಯ, ವೆಂಕಟರಾಮಯ್ಯ, ವೆಂಕಟೇಶಯ್ಯ ಮತ್ತು ಹಿರಿಯಣ್ಣಯ್ಯ




ಪಟ್ಟಣಗೆರೆ ವೆಂಕಟದಾಸಪ್ಪ

ಪಟ್ಟಣಗೆರೆ ವೆಂಕಟದಾಸಪ್ಪನವರು ಅಜ್ಜಂಪುರದಲ್ಲಿದ್ದವರು. ಅವರು ಖಾದಿ ಗ್ರಾಮೋದ್ಯೋಗ ಸಂಘದಲ್ಲಿ ಕೆಲಸಮಾಡುತ್ತಿದ್ದವರು. ಅವರ ಪತ್ನಿ ಗೌರಮ್ಮನವರು. ವೆಂಕಟದಾಸಪ್ಪ ದಂಪತಿಗಳ ಜೀವನ ಬಡತನದಿಂದ ಕೂಡಿದ್ದಾದರೂ, ಅದೊಂದು ಕೊರತೆ ಎಂದು ಎನ್ನಿಸದಂತೆ ಬದುಕಿದರು. ಇವರನ್ನು ನಾನು ನೋಡುವಾಗ ಅವರೀರ್ವರೂ ವೃದ್ಧಾಪ್ಯ ತಲುಪಿದ್ದರು.  ಅವರಿಗೆ ೬ ಜನ ಮಕ್ಕಳು. ಅವರೆಂದರೆ ಗಂಡುಮಕ್ಕಳಾದ ವೆಂಕಟಕೃಷ್ಣಯ್ಯ, ವೆಂಕಟರಾಮಯ್ಯ, ವೆಂಕಟೇಶಯ್ಯ ಮತ್ತು ಹಿರಿಯಣ್ಣಯ್ಯ ಹಾಗೂ ಹೆಣ್ಣಮಕ್ಕಳು ವಿಶಾಲಾಕ್ಷಮ್ಮ ಮತ್ತು ರುಕ್ಮಿಣಮ್ಮ.  ಇವರೆಲ್ಲರ ಪ್ರಸ್ತಾಪವೇಕೆಂದರೆ ಇವರೆಲ್ಲರೂ ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದರೂ, ಕೆಲವು ಕ್ಷೇತ್ರಗಳಲ್ಲಿ ವಿಶೇಷ ತಿಳುವಳಿಕೆ ಹೊಂದಿದ್ದವರು. ಅವರ ಸಾಧನೆಯನ್ನು ಗುರುತಿಸುವ ಕೆಲಸ ನಡೆಯಲಿಲ್ಲವಾದರೂ, ಅವರೆಲ್ಲರೂ ಮಾನವ ಪ್ರೀತಿ, ಸಾಹಿತ್ಯ ಮತ್ತು ಕಲೆಗಳ ಬಗ್ಗೆ ಅಪಾರ ಅಭಿಮಾನ ಹೊಂದಿದವರು ಮತ್ತು ಜನಾನುರಾಗಿ ವ್ಯಕ್ತಿತ್ವವುಳ್ಳವರು. 

ಹಿರಿಯರಾದ ವೆಂಕಟಕೃಷ್ಣಯ್ಯನವರು ತಮ್ಮ ಜೀವಿತದ ಬಹುಕಾಲವನ್ನು ಮೈಸೂರಿನಲ್ಲೇ ಕಳೆದರು. ರಾಮಾಯಣ ಮತ್ತು ಮಹಾಭಾರತಗಳೆರಡೂ ಅವರಿಗೆ ಅತ್ಯಂತ ಪ್ರಿಯವಾದ ವಿಷಯಗಳು. ಈ ಮಹಾಕಾವ್ಯಗಳ ಬಗ್ಗೆ ಅಧ್ಯಯನ ನಡೆಸಿ, ಕೈ ಬರವಣಿಗೆಯಲ್ಲಿ ತಮ್ಮ ಅಧ್ಯಯನವನ್ನು ದಾಖಲಿಸಿದರು. ಆದರೆ ಅವುಗಳನ್ನು ಪ್ರಕಟಿಸುವ ಅನುಕೂಲಗಳಿಲ್ಲದೇ ಅವೆಲ್ಲವೂ ಹಾಗೆಯೇ ಉಳಿದವು. ಸಾಹಿತ್ಯದಲ್ಲಿ ಅಪರಿಮಿತ ಆಸಕ್ತಿ ಹೊಂದಿದ್ದ ಅವರು ಮೈಸೂರಿನಂಥ ದೊಡ್ಡ ನಗರದಲ್ಲಿದ್ದರೂ, ಆಡಂಬರ, ಪ್ರಚಾರಗಳಿಗೆ ಮನಸೋಲದೇ ನಿರ್ಲಿಪ್ತ ಜೀವನ ನಡೆಸಿದರು. ಅವರ ಆಸಕ್ತಿಗಳಿಗೆ ತಕ್ಕದಾದ ಬೆಂಬಲ ದೊರೆಯುವಂತಾಗಿದ್ದರೆ, ಮಹಾಕಾವ್ಯಗಳ ಅವರ ಅಧ್ಯಯನ ಬೆಳಕು ಕಾಣುತ್ತಿತ್ತೋ ಏನೋ. ಅವರ ಕೊನೆಯ ದಿನಗಳನ್ನು ಹುಟ್ಟೂರು ಅಜ್ಜಂಪುರದಲ್ಲೇ ಕಳೆದರು. ಆ ಬಗ್ಗೆ ಅವರಿಗೆ ಸಮಾಧಾನವಿತ್ತು.


ಪಿ. ವೆಂಕಟರಾಮಯ್ಯ
ಎರಡನೆಯವರಾದ ಪಿ. ವೆಂಕಟರಾಮಯ್ಯನವರು ಶಾಲಾ ಅಧ್ಯಾಪಕರಾಗಿದ್ದರು. ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಸದಾ ಹಸನ್ಮುಖಿ, ಖಾದಿ ವಸ್ತ್ರಗಳ ಬಗ್ಗೆ ಅವರಿಗೆ ಅಭಿಮಾನ. ತಮ್ಮ ಹಾಸ್ಯಪರತೆಯಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೆಚ್ಚಿನ ಉಪಾಧ್ಯಾಯರು. ನಮ್ಮೆಲ್ಲರಿಗೆ ಅವರು ಯಂಟಣ್ಣ.  ಅವರಿಗೆ ಮಕ್ಕಳನ್ನು ಕಂಡರೆ ತುಂಬ ಪ್ರೀತಿ. ಬಾಲಭಾಷೆಗಳನ್ನು ಮಕ್ಕಳೆದುರಿಗೆ ಅವರು ಮಾತನಾಡುತ್ತಿದ್ದಾಗ ದೊಡ್ಡವರಿಗೆ ಅದೊಂದು ಅಣಕು ಕಲೆಯಂತೆ ಕಾಣಿಸಿದರೆ, ಮಕ್ಕಳಿಗೆ ಮಾತ್ರ ಅತ್ಯಂತ ಸಮೀಪವಾಗುತ್ತಿದ್ದರು. ಅವರು ಬಹುಮುಖ ಪ್ರತಿಭೆ ಮತ್ತು ಉತ್ತಮ ಅಭಿರುಚಿಯ ವ್ಯಕ್ತಿ. 

ವೆಂಕಟರಾಮಯ್ಯನವರಿಗೆ ಸಂಗೀತ-ಸಾಹಿತ್ಯಗಳೆರಡೂ ಅತ್ಯಂತ ಪ್ರಿಯವಾದ ಸಂಗತಿಗಳು. ಅಜ್ಜಂಪುರದಲ್ಲಿ ಶಾಸ್ತ್ರೀಯ ಸಂಗೀತಗಾರರು ಯಾರೂ ನೆಲೆಸಲಿಲ್ಲವಾದರೂ, ಸಂಗೀತದ ಬಗ್ಗೆ ಆಕರ್ಷಣೆ ಮತ್ತು ಅಭಿರುಚಿಗಳಿದ್ದವರು ಅನೇಕರಿದ್ದರು. ಆದರೆ ಅದನ್ನು ಕಲಿಯಬೇಕೆನ್ನುವವರಿಗೆ ತಕ್ಕ ಅನುಕೂಲಗಳು ಇರುತ್ತಿರಲಿಲ್ಲ. ವೆಂಕಟರಾಮಯ್ಯನವರಿಗೆ ಬಾಲ್ಯದಲ್ಲಿ ಕೊಳಲು ಕಲಿಯುವ ಆಸ್ಥೆ. ಅದಕ್ಕೆಂದು  ಅವರು ಪಪ್ಪಾಯಿ ಗಿಡದ ಎಲೆಗಳ ದಂಟಿಗೆ ರಂಧ್ರಗಳನ್ನು ಮಾಡಿ ಅದರಿಂದ ತಮ್ಮ ಮೊದಲ ಕೊಳಲನ್ನು ತಯಾರಿಸಿಕೊಂಡಿದ್ದರು. ಮುಂದೆ ಅಭಿರುಚಿ ಬೆಳೆದಂತೆ ಉತ್ತಮ ಕೊಳಲುಗಳನ್ನು ಸಂಗ್ರಹಿಸಿ, ಶಾಸ್ತ್ರೀಯ ಸಂಗೀತದ ಅನೇಕ ರಾಗಗಳಲ್ಲದೆ, ಚಲನಚಿತ್ರಗೀತೆಗಳು, ಜನಪ್ರಿಯ ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ನುಡಿಸುತ್ತಿದ್ದರು. ಹಾಗೆ ನೋಡಿದರೆ ನನಗೆ ಕೊಳಲು ವಾದ್ಯದ ಬಗ್ಗೆ ಮೊದಲ ಮಾಹಿತಿ ದೊರೆತದ್ದು ಅವರಿಂದಲೇ. ಅವರು ತಮ್ಮ ಬಿಡುವಿನ ವೇಳೆಯಲ್ಲಿ, ಹೆಚ್ಚಾಗಿ ಸಂಜೆ ತಮ್ಮ ಮನೆಯಲ್ಲಿ ಕುಳಿತು ಕೊಳಲು ನುಡಿಸುತ್ತಿದ್ದರು. ಅದನ್ನು ಕೇಳುತ್ತಿದ್ದ ನನಗೆ ಅಭಿರುಚಿ ಮೂಡಿತು. ಮುಂದೆ ನಾನು ಬೆಂಗಳೂರು ಸೇರಿದ ನಂತರ ಒಂದೆರಡು ವರ್ಷ ಶಾಸ್ತ್ರೀಯವಾಗಿ ಕಲಿತೆನಾದರೂ, ಅದನ್ನು ಹೆಚ್ಚಾಗಿ ರೂಢಿಸಿಕೊಳ್ಳಲಾಗಲಿಲ್ಲ. ಇರಲಿ. 

ವೆಂಕಟರಾಮಯ್ಯನವರಿಗೆ ಸಾಹಿತ್ಯದ ಅದರಲ್ಲೂ ಹಳೆಗನ್ನಡ ಮತ್ತು ಅಧ್ಯಾತ್ಮದ ವಿಷಯದಲ್ಲಿ ಹೆಚ್ಚು ಆಸಕ್ತಿ ಮತ್ತು ಪ್ರೀತಿ. ಸುಮಧುರ ಕಂಠ ಹೊಂದಿದ್ದ ಅವರಿಗೆ ಹಿಂದೀ ಭಾಷೆಯಲ್ಲಿ ಉತ್ತಮ ಪರಿಶ್ರಮವಿತ್ತು. ಗೋರಖಪುರದ ಪ್ರಕಟಣೆಗಳಾದ ಭಾಗವತ ಗ್ರಂಥಗಳನ್ನು ತರಿಸಿ, ಅವುಗಳನ್ನು ತಮ್ಮ ತಾಯಿ ಹಾಗೂ ಇನ್ನಿತರ ಆಸಕ್ತರ ಮುಂದೆ ಓದುತ್ತ ವಿಮರ್ಶಿಸುತ್ತಿದ್ದರು. ಅಂಥ ವಾಚನದ ಸಂದರ್ಭಗಳಲ್ಲಿ ಸ್ವಾರಸ್ಯಕರ ಅಥವಾ ಭಕ್ತಿಪ್ರಧಾನ ಸಂಗತಿಗಳು ಬಂದಾಗ, ಇಲ್ಲವೇ ಜೀವನ ಮೌಲ್ಯಗಳನ್ನು ಸ್ಫುರಿಸುವ ಸನ್ನಿವೇಶಗಳು ಒದಗಿದಾಗ ಅವುಗಳನ್ನು ಆಸ್ವಾದಿಸುತ್ತಿದ್ದ ಪರಿಯನ್ನು ನೋಡಿಯೇ ತಿಳಿಯಬೇಕಿತ್ತು. ಎಂದರೆ ಕಾವ್ಯದ ವಾಚನ, ವಿವರಣೆಗಳನ್ನು ವಿಸ್ತರಿಸುವಾಗ ಅವರಲ್ಲಿ ಪಾಂಡಿತ್ಯ ಪ್ರದರ್ಶನದ ಸುಳಿವು ಇರುತ್ತಿರಲಿಲ್ಲ, ಬದಲಾಗಿ ಅಲ್ಲಿ ಹೇಳಿದ ಮೌಲ್ಯಗಳನ್ನು ತಾವೂ ಆನಂದಿಸಿ ಇತರರಿಗೂ ಹಂಚುವಾಗ ಅವರ ಮೊಗದಲ್ಲಿ ಮಿನುಗುತ್ತಿದ್ದ ಮಂದಹಾಸ, ಕಾರುಣ್ಯ ಭಾವಗಳನ್ನು ನಾನು ಅನೇಕ ಬಾರಿ ನೋಡಿ ಆನಂದಿಸಿದ್ದೇನೆ. ಬಾಲ್ಯದಲ್ಲಿ ನಾನು ಕಂಡ ಇಂಥ ದೃಶ್ಯಗಳು ನನ್ನ ಮಟ್ಟಿಗೆ ಸಾಹಿತ್ಯ ರಸಾಸ್ವಾದನೆಯ ಪ್ರಾಥಮಿಕ ಪಾಠಗಳಾಗಿದ್ದವು. ಪರೋಕ್ಷ ಪ್ರಭಾವವೆಂದರೆ ಇದೇ ಇರಬೇಕು. 

ಅಜ್ಜಂಪುರದ ಕಲಾಸೇವಾ ಸಂಘದ ಚಟುವಟಿಕೆಗಳಲ್ಲಿ ವೆಂಕಟರಾಮಯ್ಯನವರು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರು ನಟ, ನಿರ್ದೇಶಕ, ಸಾಹಿತ್ಯ ಹಾಗೂ ಸಂಭಾಷಣಾ ರಚನಕಾರ, ಸಂಗೀತಜ್ಞ. ಹೀಗೆ ಎಲ್ಲವೂ ಅವರೇ ಆಗಿದ್ದುದರಿಂದ ರಂಗಭೂಮಿ ಅವರಿಗೆ ಕಷ್ಟವಾಗಲಿಲ್ಲ, ಬದಲಾಗಿ ಇಷ್ಟವೇ ಆಯಿತು. ಅಜ್ಜಂಪುರದ ಕಲಾ ಸೇವಾ ಸಂಘವು ಸಮಾನ ಆಸಕ್ತಿಯುಳ್ಳ ರಂಗಾಭಿಮಾನಿಗಳ ಒಕ್ಕೂಟವಾಗಿತ್ತು. ಅದರಲ್ಲಿ ಸತ್ಯನಾರಾಯಣ ಶೆಟ್ಟರು, ಟಿ.ಎನ್. ಕೃಷ್ಣೋಜಿ ರಾವ್ ಚವ್ಹಾಣ್, ವೆಂಕಟರಾಮಯ್ಯ, ಚಂದ್ರಾಚಾರ್ಯರು, ಎ.ಪಿ. ನಾಗರಾಜಶೆಟ್ಟರು, ರಾಮಶೆಟ್ಚರು,  ಸೀತಾರಾಮಭಟ್ಟರು ಮುಂತಾಗಿ ಹಲವರಿದ್ದರು. ಇವರಲ್ಲಿ ಕೆಲವರು ರಂಗ ಚಟುವಟಿಕೆಗಳಲ್ಲಿ ನೇರವಾಗಿ ಪಾತ್ರವಹಿಸಿದರೆ, ಮತ್ತೆ ಕೆಲವರು ನೇಪಥ್ಯದಲ್ಲಿ ಕೆಲಸಮಾಡುತ್ತಿದ್ದರು. ವೆಂಕಟರಾಮಯ್ಯನವರು ಎರಡೂ ಕಡೆ ಸಲ್ಲುತ್ತಿದ್ದವರು.  ಈ ಸಂಸ್ಥೆಯಲ್ಲಿ ಅಜ್ಜಂಪುರದ ಕಲಾವಿದರು ನಾಡಿನಾದ್ಯಂತ ಪ್ರಸಿದ್ಧರಾಗದಿದ್ದರೂ, ನಾಟಕ ಚಟುವಟಿಕೆಗಳಿಗೆ ಹೊಸ ಅರ್ಥ ಮತ್ತು ಪ್ರೋತ್ಸಾಹ ಬರುವಂತೆ ಮಾಡಿದ್ದು ಸುಳ್ಳಲ್ಲ.

ವೆಂಕಟರಾಮಯ್ಯನವರು  ಪ್ರಚಾರಕ್ಕಾಗಲೀ, ಹೆಸರಿಗಾಗಲೀ ಹಂಬಲಿಸಲಿಲ್ಲವೆನ್ನುವುದು ಅವರು ಆರಿಸಿಕೊಂಡಿರುವ ಕಥಾನಕಗಳ ಶೀರ್ಷಿಕೆಗಳಿಂದಲೇ ತಿಳಿಯುತ್ತದೆ.  "ಭರತನ ಭ್ರಾತೃಪ್ರೇಮ", "ಮಹಾರಥಿ ಭೀಷ್ಮ", "ಮಾರೀಚ ಋಷಿ" ಮೊದಲಾದ ಪೌರಾಣಿಕ ನಾಟಕಗಳನ್ನು ಬರೆದು, ಆ ಕಥಾನಕಗಳಲ್ಲಿ ತಾವು ದರ್ಶಿಸಿದ ಮೌಲ್ಯಗಳನ್ನು ಪ್ರಚುರಪಡಿಸಿದರು. ಮಹಾರಥಿ  ಭೀಷ್ಮ ನಾಟಕದಲ್ಲಿ ಅವರೇ ಭೀಷ್ಮನ ಪ್ರಧಾನ ಪಾತ್ರಧಾರಿ. ಅವರ  ಅಂದಿನ ಅಭಿನಯವನ್ನು ಅವರ ಆಪ್ತ  ಮಿತ್ರ  ಶ್ರೀ ಸತ್ಯನಾರಾಯಣ ಶೆಟ್ಟರು ಹೀಗೆ ನೆನಪಿಸಿಕೊಂಡಿದ್ದಾರೆ. "ವಯೋವೃದ್ಧ ಭೀಷ್ಮರು ಕಣ್ಣಮುಂದೆ ಬಂದು ನಿಂತಂತಿತ್ತು ಅವರ ಅಭಿನಯ. ಅಂತೆಯೇ ಬೇಲೂರು  ಕೃಷ್ಣಮೂರ್ತಿಯವರ  "ಹುಚ್ಚಾ"  ನಾಟಕದಲ್ಲಿ ಮನೋವಿಕಾರಗೊಂಡ  ಮತಿಹೀನನ ಪಾತ್ರದಲ್ಲಿ ಸ್ಮರಣೀಯ ಅಭಿನಯ ನೀಡಿದರು.  ಮುಂದೆ ಮಹಾತ್ಮಾ ಬಸವೇಶ್ವರ ನಾಟಕದಲ್ಲಿ ಅವರು ಹರಳಯ್ಯನ ಪಾತ್ರ ಮಾಡಿದರು. ಹರಳಯ್ಯ ಅಂತ್ಯಜ. ಅಂಥವನ ಪಾತ್ರವನ್ನು ತಾವು ಮಾಡಲಾರೆವು ಎಂದು ಹಲವು ಕಲಾವಿದರು ಹಿಂದೆ ಸರಿದರು. ಇದು ನಡೆದದ್ದು ೬೦ರ ದಶಕದಲ್ಲಿ. ಆಗ ಜಾತಿವ್ಯಾಮೋಹ ಬಲವಾಗಿತ್ತು. ಆದರೆ ಬ್ರಾಹ್ಮಣ ಕುಲದ ವೆಂಕಟರಾಮಯ್ಯನವರು ಸ್ವಪ್ರೇರಿತರಾಗಿ ಹರಳಯ್ಯನ ಪಾತ್ರ ವಹಿಸಿ, ಅಮೋಘವಾಗಿ ಅಭಿನಯಿಸಿದರು.  ಮುಂದೊಮ್ಮೆ ಸಮೀಪದ ಬುಕ್ಕಾಂಬುಧಿಯಲ್ಲಿ ಬ್ರಾಹ್ಮಣರ ಧಾರ್ಮಿಕ ಕಾರ್ಯಕ್ರಮವೊಂದಿತ್ತು. ಅದರಲ್ಲಿ ವೆಂಕಟರಾಮಯ್ಯ ಮತ್ತು ತರೀಕೆರೆಯ ಕೃಷ್ಣಮೂರ್ತಿಗಳಿಗೂ ಆಹ್ವಾನವಿತ್ತು. ಅವರಿಬ್ಬರೂ ಆ ಕಾರ್ಯಕ್ರಮಕ್ಕೆ ಹೋದಾಗ, ಅವರನ್ನು ಪ್ರತ್ಯೇಕ ಪಂಕ್ತಿಯಲ್ಲಿ ಕುಳ್ಳಿರಿಸಿ ಊಟ ಹಾಕಲಾಯಿತು. ಕಾರಣ ಅವರು ಅಂತ್ಯಜನ ಪಾತ್ರವಹಿಸಿದ್ದು".

ಅವರ ಮಿತ್ರ ತರೀಕೆರೆಯ ಕೃಷ್ಣಮೂರ್ತಿ. ಬಂಧುಗಳಲ್ಲಿ ಅವರು ಶೇಬ ಎಂದೇ ಜನಪ್ರಿಯರು. ವೆಂಕಟರಾಮಯ್ಯನವರ ಕಾವ್ಯವಾಚನ, ಕೃಷ್ಣಮೂರ್ತಿಗಳ ವ್ಯಾಖ್ಯಾನಗಳು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹೆಸರುವಾಸಿಯಾಯಿತು. ಇವರೀರ್ವರಲ್ಲೂ ಈ ಕಲೆ ಹಿಂದಿನಿಂದಲೂ ಜಾಗೃತವಾಗಿತ್ತಾದರೂ, ಅದು ೬೦ರ ದಶಕದಲ್ಲಿ ಅಜ್ಜಂಪುರದಲ್ಲಿ ನಡೆದ ಮತ್ತೂರು ಲಕ್ಷ್ಮೀಕೇಶವ ಶಾಸ್ತ್ರಿಗಳ ವ್ಯಾಖ್ಯಾನ ಕಾರ್ಯಕ್ರಮದೊಂದಿಗೆ ಒಂದು ರೂಪ ಪಡೆಯಿತು.

 

ವೆಂಕಟರಾಮಯ್ಯನವರು ಬೆಂಗಳೂರು ಮತ್ತು ಭದ್ರಾವತಿ ಆಕಾಶವಾಣಿ ಕೇಂದ್ರಗಳಲ್ಲಿ ಗಮಕ ವಾಚನ, ನಾಟಕಗಳ ಪ್ರಸಾರ ಮಾಡಿದರು. ೧೯೯೨ರಲ್ಲಿ ಚಿಕ್ಕಮಗಳೂರಿನ ಸಾಂಸ್ಕೃತಿಕ ಸಂಘವು ತನ್ನ ಬೆಳ್ಳಿಹಬ್ಬದ ಸಂದರ್ಭದಲ್ಲಿ ವೆಂಕಟರಾಮಯ್ಯನವರು ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪ್ರಶಂಸಿಸಿ ಗೌರವಿಸಿತು. ೧೯೯೭ರಲ್ಲಿ ಕರ್ನಾಟಕ ಸರ್ಕಾರವು ತರೀಕೆರೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದಾಗ ಗಮಕ ವಾಚನಕ್ಕೆಂದು ಪ್ರಶಸ್ತಿ ನೀಡಿ ಗೌರವಿಸಿತು. ೨೦೦೩-೦೪ರಲ್ಲಿ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ತು ಶೃಂಗೇರಿಯಲ್ಲಿ ನಡೆದ ೬ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅವರು ರಂಗಭೂಮಿ ಮತ್ತು ಕಲಾಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಗೆಂದು ಗೌರವ ಸಮರ್ಪಿಸಿತು.

ವೆಂಕಟರಾಮಯ್ಯನವರು ಬೆಂಗಳೂರಿಗೆ ಬಂದರೆ ನೀರಿನಿಂದ ಹೊರತೆಗೆದ ಮೀನಿನಂತೆ ಚಡಪಡಿಸುತ್ತಿದ್ದರು. ಅಜ್ಜಂಪುರದಲ್ಲೇ ಸ್ವಂತ ಮನೆ ಕಟ್ಟಿಕೊಂಡರು. ತಮ್ಮ ವಿಶ್ರಾಂತ ಜೀವನವನ್ನು ಅಲ್ಲಿಯೇ ಕಳೆಯಬೇಕೆಂಬುದು ಅವರ ಮನದಾಸೆಯಾಗಿದ್ದರೂ, ಕಾರಣಾಂತರಗಳಿಂದ ಅವರ ಪತ್ನಿಯ ತವರೂರು ತರೀಕೆರೆಯಲ್ಲಿ ವಾಸಿಸುವಂತಾಯಿತು. ಅಲ್ಪಕಾಲದ ಅನಾರೋಗ್ಯದ ನಂತರ ಅವರು ನಿಧನರಾದರು. ಬೆಂಗಳೂರು ಅಥವಾ ಇನ್ನಾವುದೇ ದೊಡ್ಡ ನಗರಗಳಲ್ಲಿ ಇವರೆಲ್ಲ ಇರುವಂತಾಗಿದ್ದರೆ, ಕೀರ್ತಿ, ಪ್ರಸಿದ್ಧಿಗಳು ಅರಸಿಬಂದಿರುತ್ತಿದ್ದವೇನೋ. ಅದು ಅವರ  ಇದಾವುದಕ್ಕೂ ಆಶೆ ಪಡದೆ, ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡೇ ತಮ್ಮಲ್ಲಿರುವ ಪ್ರತಿಭೆಯನ್ನು ಬೆಳಗಿದರು, ಜನರನ್ನು ರಂಜಿಸಿದರು. ಸಂತೋಷ, ನೆಮ್ಮದಿಗಳು ಸಿರಿತನ, ಬಡತನಗಳಲ್ಲಿ ಅಡಗಿಲ್ಲ, ಬದಲಾಗಿ ನಮ್ಮ ಮನದಲ್ಲೇ ಅಡಗಿರುತ್ತವೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ತಿಳುವಳಿಕೆ ಬಂದರೆ ಜೀವನ ನೆಮ್ಮದಿಯಾಗಿರುತ್ತದೆ ಎಂದು ನಂಬಿದವರು ವೆಂಕಟರಾಮಯ್ಯ. 

ತಮಗಿದ್ದ ಸಾರ್ವಜನಿಕ ಬೆಂಬಲವನ್ನು ಅವರೆಂದೂ ವೈಯುಕ್ತಿಕ ಹಿತಾಸಕ್ತಿಗಳಿಗೆ ಬಳಸಿಕೊಳ್ಳಲಿಲ್ಲವೆನ್ನುವುದಕ್ಕೆ ಕಾರಣ, ಭಗವದ್ಗೀತೆಯ ಅಧ್ಯಯನ. ಅದೆಂದೂ ಅವರ ಮಟ್ಟಿಗೆ ಕೇವಲ ಪ್ರವಚನದ ವಸ್ತುವಾಗಿಲಿಲ್ಲ. ಬದಲಾಗಿ ಅದು ಅವರ ಜೀವನ ಕ್ರಮವೇ ಆಗಿತ್ತೆನ್ನುವುದು  ಸರಿಯಾದ ಮಾತಾದೀತು. 


* * * * * * *


ಪ. ವೆಂಕಟೇಶಯ್ಯ
ಪ. ವೆಂಕಟೇಶಯ್ಯನವರೂ ಅಜ್ಜಂಪುರದಲ್ಲೇ ಇತ್ತೀಚಿನವರೆಗೂ ಇದ್ದರು. ಅವರು ಅಧ್ಯಾಪಕರಾಗಿದ್ದರು. ಈಗ ಕೊಳ್ಳೇಗಾಲದಲ್ಲಿ ನೆಲೆಸಿದ್ದಾರೆ. ಅಜ್ಜಂಪುರ ಗ್ರಾಮೀಣ ಭಾಗದಲ್ಲಿ ಪ್ರಚಲಿತವಿರುವ ಕನ್ನಡ ಅವರಿಗೆ ತುಂಬ ಇಷ್ಟ. ಶಿಷ್ಟ ಭಾಷೆ ಮತ್ತು ಹಳ್ಳಿಯ ಜನರ ಭಾಷೆಗಳ ನಡುವೆ ಇರುವ ವ್ಯತ್ಯಾಸಗಳು, ಸ್ವಾರಸ್ಯಗಳನ್ನು ಅವರೊಂದಿಗೆ ಮಾತಾಡುತ್ತ ಸವಿಯಬಹುದು. ಇದು ಮನರಂಜನೆಗೆಂದಲ್ಲ, ಸೂಕ್ತ ಕನ್ನಡಪದಕ್ಕಾಗಿ ತಡಕಾಡುವ ನಗರದ ಮಂದಿಗೆ ಕನ್ನಡದ ಮೂಲಪದಗಳು ಹೀಗೂ ಇವೆಯೇ ಎಂಬ ಅಚ್ಚರಿ ಅವರ ಸಂಭಾಷಣೆಗಳಿಂದ ವ್ಯಕ್ತವಾಗುತ್ತದೆ.
ಅವರ ಬಳಿ ರಾಮಾಶ್ವಮೇಧಂ, ಶಬ್ದಮಣಿ ದರ್ಪಣ, ರಾಘವಾಂಕನ ಕಾವ್ಯ ಹೀಗೆ ಯಾವಾಗಲೂ ಒಂದಾದರೂ ಹಳೆಗನ್ನಡದ ಪುಸ್ತಕ ಇದ್ದೇ ಇರುತ್ತದೆ. ಅಣ್ಣನಂತೆಯೆ ಅವರಿಗೂ ಸಂಗೀತದ ಪ್ರವೇಶವಿದೆ, ಕೊಳಲು ನುಡಿಸುತ್ತಾರೆ. ಐದಾರು ದಶಕಗಳ ಕಾಲ ಅವರು ವಿನಾಯಕ ಚತುರ್ಥಿಗೆಂದು ಮಣ್ಣಿನಿಂದ ಪೂಜಾ ವಿಗ್ರಹಗಳನ್ನು ತಯಾರಿಸುತ್ತಿದ್ದರು. ಅವರಿಗೆ ಅದೊಂದು ಧಾರ್ಮಿಕ ಶ್ರದ್ಧೆಯ ಸಂಗತಿಯಾಗಿತ್ತು. ಅವರ ವಿಗ್ರಹಗಳ ವಿಶಿಷ್ಟತೆಯೆಂದರೆ, ಗಣಪನು ಕೋಟು ಹಾಕಿರುತ್ತಿದ್ದ. ಭಾರವಾದ ಚಿನ್ನದ ಎಳೆಗಳ ಸರಳ ಹಾರಗಳನ್ನು ಧರಿಸಿರುತ್ತಿದ್ದ. ನೋಡಲು ತುಂಬ ಮುದ್ದಾಗಿ ಕಾಣುತ್ತಿದ್ದ ಆ ವಿಗ್ರಹಗಳ ಚಿತ್ರಗಳು ಎಲ್ಲಾದರೂ ಲಭ್ಯವಿದೆಯೋ ತಿಳಿಯದು. ­ಅಜ್ಜಂಪುರದ ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿಯೂ ಅವರು ಕೆಲಸಮಾಡಿದರು. ಅಜ್ಜಂಪುರದ ಕೋಟೆ ಆಂಜನೇಯ ದೇವಾಲಯದ ಪುನರ್ ಪ್ರತಿಷ್ಠಾಪನೆಯ ಕಾರ್ಯಗಳಲ್ಲಿ, ೮೦ವಯಸ್ಸಿನ ಅವರು, ಕಿರಿಯರು ನಾಚುವಂತೆ ಚಟುವಟಿಕೆಯಿಂದ  ಓಡಾಡಿ ಸಂಭ್ರಮಿಸಿದರು.

* * * * * * *

ಹಿರಿಯಣ್ಣಯ್ಯ

ಅವರ ಕೊನೆಯ ತಮ್ಮ ಹಿರಿಯಣ್ಣಯ್ಯನವರದು ವರ್ಣರಂಜಿತ ವ್ಯಕ್ತಿತ್ವ. ಅವರು ಯಾವ ದೊಡ್ಡ ಹುದ್ದೆಯಲ್ಲೂ ಇರಲಿಲ್ಲ. ಅವರು ವ್ಯಾಪಾರ, ಪತ್ರಿಕಾ ಪ್ರತಿನಿಧಿ, ಬಸ್ ಏಜೆಂಟ್, ಮುಂತಾಗಿ ಹಲವು ವೃತ್ತಿಗಳಲ್ಲಿದ್ದರು. ಜನಸಂಪರ್ಕವೆನ್ನುವುದು ಅವರಿಗೆ ಕರಗತವಾಗಿತ್ತು. ಊರಿನಲ್ಲಿ ಯಾರ ಮನೆಯಲ್ಲಿ ಯಾವುದೇ ಕಾರ್ಯಕ್ರಮಗಳಿದ್ದರೂ, ಅಲ್ಲೆಲ್ಲ ಭಾಗವಹಿಸುತ್ತಿದ್ದರು. ತಮ್ಮಿಂದಾದ ನೆರವು, ಸಲಹೆ, ಸಹಕಾರಗಳನ್ನು ನೀಡುತ್ತಿದ್ದರು. ವಿಶೇಷತಃ ಕೋಟೆ ಪ್ರದೇಶದಲ್ಲಿದ್ದ ಬ್ರಾಹ್ಮಣರ ಮನೆಗಳೆಲ್ಲದರ ಕಾರ್ಯಕ್ರಮಗಳಲ್ಲಿ ಅವರು ನೀಡಿದ ಸಹಕಾರ, ಸಹಾಯಗಳಿಂದಾಗಿ, ಈಗ ಅವರು ನಮ್ಮ ನಡುವೆ ಇಲ್ಲವಾದರೂ, ಜನರ ಸ್ಮರಣೆಯಲ್ಲಿ ಹಸಿರಾಗಿದ್ದಾರೆ.

ಕನ್ನಡ ಪ್ರಭ ಪತ್ರಿಕೆಯ ಪ್ರಸಾರ ನಿರ್ವಾಹಕರಾಗಿದ್ದ ಶ್ರೀ ವಿಜಯ ರಾಯರಿಗೆ ಹಿರಿಯಣ್ಣಯ್ಯನವರ ಕಾರ್ಯಕ್ಷಮತೆಯ ಅರಿವಿದ್ದುದರಿಂದ ಅವರನ್ನು ಆರಿಸಿದರು. ಮುಂದೆ ಅನೇಕ ವರ್ಷಗಳ ಕಾಲ ಪತ್ರಿಕೆಯ ಸ್ಥಳೀಯವರದಿಗಾರರಾಗಿ ಹಿರಿಯಣ್ಣಯ್ಯ ಕೆಲಸಮಾಡಿದರು. ಸದಾ ಚಟುವಟಿಕೆ ಮತ್ತು ಉತ್ಸಾಹಗಳ ಚಿಲುಮೆಯಾಗಿದ್ದ ಹಿರಿಯಣ್ಣಯ್ಯ ಒಂದು ಸಂಕ್ರಾಂತಿಯ ಹಬ್ಬದ ದಿನ ಬಸ್ ನಿಂದ ಇಳಿಯುವಾಗ ಆಯತಪ್ಪಿ ಬಿದ್ದು ನಿಧನರಾದರು. ಅಂದು ಸೇರಿದ್ದ ಜನಸ್ತೋಮ ಮತ್ತು ಹರಿಸಿದ ಕಂಬನಿಗಳು ಅವರ ಜನಪ್ರಿಯತೆಯ ದ್ಯೋತಕವಾಗಿದ್ದವು. ಹಿರಿಯಣ್ಣಯ್ಯ ಮರೆಯಾಗಿದ್ದರೂ ಅಜ್ಜಂಪುರದ ಜನತೆಯ ಸ್ಮರಣೆಯಲ್ಲಿ ಅಜರಾಮರರು.

ಇವರೆಲ್ಲರನ್ನೂ ನಾನು ಹತ್ತಿರದಿಂದ ಕಂಡಿದ್ದರಿಂದ ಈ ಮಾಹಿತಿಗಳನ್ನು ಪ್ರಕಟಿಸುವುದು ಸುಲಭವಾಯಿತು. ಅಂತೆಯೆ ನಿಮಗೆ ಹೀಗೆ ಪರಿಚಿತರಿರುವ, ಇದ್ದ, ಅನೇಕ ಹಿರಿಯರು, ಕಿರಿಯರಿರಬಹುದು. ಅವರ ಬಗೆಗಿನ ಸ್ವಾರಸ್ಯಕರ ಸಂಗತಿಗಳನ್ನು ನೀವೂ ಬರೆಯಲಿ ಎಂಬುದೊಂದು ಆಶೆ. ಅದಾಗದಿದ್ದರೆ ನಿಮ್ಮಲ್ಲಿರುವ ಮಾಹಿತಿಗಳನ್ನು ನನಗೆ ನೀಡಿ. ನಾನು ಬರಹರೂಪಕ್ಕೆ ತಂದು ಪ್ರಕಟಿಸುವೆ.
* * * * * * *  

ಕಾಮೆಂಟ್‌ಗಳು

 1. ಪ್ರಿಯರೆ,

  "ಮಹಾರಥಿ ಭೀಷ್ಮ" ನಾಟಕದಲ್ಲಿ ಭೀಷ್ಮನ ಪಾತ್ರ ವಹಿಸಿದವರು, ಎನ್.ಪಾಂಡುರಂಗರಾವ್ ಅವರು (ನಮ್ಮ ಗೆಳೆಯ ಡಾ| ಎನ್.ಮುರಳೀಧರ್ ಅವರ ಚಿಕ್ಕಪ್ಪ). ಎತ್ತರ - ಗಾತ್ರಗಳಿಂದ, ಪ್ರಬುದ್ಧತೆಯಿಂದ ಅವರು ಆ ಪಾತ್ರಕ್ಕೆ ಜೀವ ತುಂಬಿದ್ದರು. ಕಲಾ ಸೇವಾ ಸಂಘದ ಅಂದಿನ ಬಹುಪಾಲು ನಟರು ಅದ್ಭುತವಾಗಿ ಅಭಿನಯಿಸುತ್ತಿದ್ದರು (ಇದನ್ನು ನಾನು ಬರಿಯ ಅಭಿಮಾನದಿಂದ ಹೇಳುತ್ತಿಲ್ಲ). ದೈನಂದಿನ ಜೀವನದಲ್ಲಿಯೂ ಈ ನಟರನ್ನು ಅವರ ಪಾತ್ರಗಳಿಂದಲೇ ಗುರುತಿಸಲಾಗುತ್ತಿತ್ತು, ಸಂಬೋಧಿಸಲಾಗುತ್ತಿತ್ತು. ಭರತ ಎಂದರೆ ರಾಮಶೆಟ್ರು, ಕೃಷ್ಣೋಜಿ ರಾಯರೆಂದರೆ ಶ್ರೀರಾಮಚಂದ್ರ, ಹೀಗೆ.

  ವೆಂಕಟರಾಮಯ್ಯನವರು ಶಕುನಿಯ ಪಾತ್ರ ವಹಿಸಿದಂತೆ ನೆನಪು. ಆದರೆ ಅರ್ಧ ಶತಮಾನವೇ ಕಳೆದುಹೋಗಿದೆ. ನೆನಪು ಮಾಸಿದೆ. ಗೆಳೆಯ ಮಹಾವೀರನಿಗೆ - ಅಪ್ಪಾಜಿಗೆ ನೆನಪಿರಬಹುದು!

  - ಮಂಜುನಾಥ ಅಜ್ಜಂಪುರ, ಬೆಂಗಳೂರು. 9901055998

  ಪ್ರತ್ಯುತ್ತರಅಳಿಸಿ
 2. ಶತಾಯುಶಿಯಾಗುವ ಹಂತದಲ್ಲಿರುವ ಶ್ರೀ ಸತ್ಯನಾರಾಯಣ ಶೆಟ್ಟರ ಸಂದರ್ಶನದಿಂದ ಈ ಲೇಖನವನ್ನು ಸಿದ್ಧಪಡಿಸಲಾಗಿದ್ದು, ಅವರೂ ಮರೆವಿನ ಪ್ರಭಾವಕ್ಕೆ ಒಳಗಾಗಿ ಹೀಗಾಗಿರಬಹುದು. ಏನಿದ್ದರೂ ನಾಟಕ ಕಲೆಗೆ ಅಜ್ಜಂಪುರದ ಕಲಾಸೇವಾ ಸಂಘದ ಕೊಡುಗೆ ಸ್ಮರಣೀಯ.

  ಪ್ರತ್ಯುತ್ತರಅಳಿಸಿ
 3. ಆತ್ಮೀಯರೇ,
  ಇಲ್ಲಿರುವ ಪತ್ರದಲ್ಲಿ ಹಿರಿಯರಾದ ಶ್ರೀ ಅಜ್ಜಂಪುರ ಕೃಷ್ಣಸ್ವಾಮಿಗಳು ದಿನಾಂಕ ೨-೫-೧೨ರಂದು ಈ ಬ್ಲಾಗಿನ ಬಗ್ಗೆ ಬರೆದಿರುವ ಪ್ರೋತ್ಸಾಹಕರ ನುಡಿಗಳಿವೆ. ವಯೋವೃದ್ಧರೂ, ಜ್ಞಾನವೃದ್ಧರೂ ಆಗಿರುವ ಕೃಷ್ಣಸ್ವಾಮಿಗಳಲ್ಲಿ ತುಂಬಿರುವ ಜೀವನೋತ್ಸಾಹ, ಕಿರಿಯರನ್ನು ಹುರಿದುಂಬಿಸಿ ಮುನ್ನಡೆಸುವ ಗುಣಗಳು ಈ ಪತ್ರದಲ್ಲಿ ಕಂಡುಬರುತ್ತದೆ. ಅವರಂಥ ಹಿರಿಯರ ಬೆಂಬಲ, ಹಾರೈಕೆಗಳು ಸದಾ ಸ್ಫೂರ್ತಿದಾಯಕ. ಸ್ವತಃ ಅವರಿಗೆ ತಮ್ಮ ಅನಿಸಿಕೆಗಳನ್ನು ಕಂಪ್ಯೂಟರಿನಲ್ಲಿ ದಾಖಲಿಸುವುದು ಸದ್ಯಕ್ಕೆ ಆಗುತ್ತಿಲ್ಲವಾದ್ದರಿಂದ, ಅವರು ಬರೆದಿರುವ ಪತ್ರವನ್ನು ನಾನೇ ಇಲ್ಲಿ ನಮೂದಿಸಿದ್ದೇನೆ.

  "ಶ್ರೀಯುತ ಶಂಕರ ಅಜ್ಜಂಪುರರವರಿಗೆ ಸವಿನಯ ವಿಜ್ಞಾಪನೆಗಳು

  ಬ್ಲಾಗ್‌ನಲ್ಲಿ ತಮ್ಮ ಈಚಿನ ಸಂಚಿಕೆಗಳನ್ನು ನೋಡಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ಮುಖ್ಯ. ಎಲೆ ಮರೆಯ ಕಾಯಿಗಳನ್ನು ಹೊರಗೆ ಇಣುಕಿಸಿದ್ದೀರಿ. ತವರೂರಿನವರ ಬಗ್ಗೆ ಅಪಾರ ವಿಶ್ವಾಸ ತೋರಿದ್ದೀರಿ. ಶ್ರೀ ಬಿ.ಎಸ್. ರಾಜಾರಾಯರು, ಪಟ್ಟಣಗೆರೆ ಸಹೋದರರು, ಅಜ್ಜಂಪುರದ ಶಿವಾನಂದಾಶ್ರಮ ಇತ್ಯಾದಿಗಳ ಬಗ್ಗೆ ಅರಿವಿಲ್ಲದವರಿಗೆ ಅರಿವು ಮೂಡಿಸಿರುವಿರಿ. ಶ್ರೀ ವೆಂಕಟರಾಮಯ್ಯನವರು ಹರಳಯ್ಯನಾಗಿ ಪರಕಾಯ ಪ್ರವೇಶವೆಂಬಂತೆ ಆತ್ಮನಿಷ್ಠೆಯಿಂದ ಪಾತ್ರ ವಹಿಸಿದ್ದು, ಅವರ ಮನೋ ವೈಶಾಲ್ಯತೆಯನ್ನು ಪ್ರತಿಬಿಂಬಿಸಿದರೆ, ಪ್ರತ್ಯೇಕ ಪಂಕ್ತಿಯಲ್ಲಿ ಭೋಜನಕ್ಕೆ ಏರ್ಪಡಿಸಿದ್ದು ಕೀಳುಭಾವನೆಯ ಪರಾಕಾಷ್ಠೆ. ಅಜ್ಜಂಪುರದ ಪೂರ್ವದ ಹೆಸರು ಕಿರಾಳಿಪುರ ಎಂದು ತಿಳಿದು ಅಚ್ಚರಿಯಾಯಿತು. ಅಮ್ಮನವರ ಕೃಪೆ ಊರವರಿಗೆ, ಸರ್ವರಿಗೂ ನಿರಂತರವಾಗಿರಲಿ. ತಮ್ಮ ನಿಸ್ವಾರ್ಥಸೇವೆ. ಅನುಕರಣೀಯ."

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

87. ಬಂಗಾರದ ಭರವಸೆ ಹುಟ್ಟಿಸುವ ಹಣ್ಣೆ ಗುಡ್ಡ

82. "ಬಾರ್ನ್ ಹೆಡ್ ಮಾಸ್ಟರ್" ಅಜ್ಜಂಪುರ ವೆಂಕಟೇಶಮೂರ್ತಿ

ಮಹಾರಾಜರ ಕಟ್ಟೆ !