ನಮ್ಮ ಪ್ರೀತಿಯ ಲಚ್ಚು ಮಾಸ್ತರರುನಾನೀಗ ಅಮೆರಿಕದ ಕೊಲಂಬಸ್ ನಲ್ಲಿ ಇರುವಾಗ ನನ್ನ ಪ್ರೀತಿಯ ಹಿರಿಯ ಮಿತ್ರರಾದ ಲಚ್ಚು ಮಾಸ್ತರರು ನಿಧನರಾದ ವಿಷಯ ತಿಳಿಯಿತು. ಅಜ್ಜಂಪುರಕ್ಕೆ ಭೇಟಿ ನೀಡಿದಾಗಲೆಲ್ಲ  ಅವರನ್ನು ಸಂದರ್ಶಿಸದೇ ಬರುತ್ತಿರಲಿಲ್ಲ. ಆದರೆ ಇಲ್ಲಿಗೆ ಬರುವ ಮುನ್ನ ಈ ಬಾರಿ ಜೂನ್ ನಲ್ಲಿ ಅಜ್ಜಂಪುರಕ್ಕೆ ತೆರಳಿದಾಗ ಅವರನ್ನು ಭೇಟಿಮಾಡಲು ಸಾಧ್ಯವಾಗಿರಲಿಲ್ಲ. ಪ್ರತಿ ಭೇಟಿಯಲ್ಲೂ ಹೊಸ ಸಂಗತಿಗಳ ಬಗ್ಗೆ ಆಸ್ಥೆಯಿಂದ ಕೇಳಿ ತಿಳಿದುಕೊಳ್ಳುತ್ತಿದ್ದ ಅವರ ಆಸಕ್ತಿ ಮತ್ತು ಜೀವನೋತ್ಸಾಹಗಳನ್ನು ಮರೆಯಲಾಗದು. ಅವರ ಒಡನಾಟದಲ್ಲಿ ನಾನು ಕಂಡಂತೆ ಅವರನ್ನು ಇಲ್ಲಿ ಚಿತ್ರಿಸಿದ್ದೇನೆ.

ಶಂಕರ ಅಜ್ಜಂಪುರ
ಈ-ಮೇಲ್ : shankarajp@gmail.com

-----------------------------------------------------------------------------------------------------------------------------------
ಬಂಕನಕಟ್ಟೆ ಜೋಡೀದಾರ್ ಲಕ್ಷ್ಮೀಪತಯ್ಯ ಲಕ್ಷ್ಮೀನರಸಿಂಹಯ್ಯ. ಇದು ಅವರ ಪೂರ್ಣ ಹೆಸರು. ಆದರೆ ಅವರು ಕುಟುಂಬ ವಲಯದಲ್ಲಿ ಲಚ್ಚು ಹಾಗೂ ವೃತ್ತಿ ಜೀವನದಲ್ಲಿ ಲಚ್ಚು ಮಾಸ್ತರರೆಂದೇ ಗುರುತಿಸಲ್ಪಟ್ಟವರು. ಅವರದು ಒಂದು ಕಾಲಕ್ಕೆ ಶ್ರೀಮಂತ ಕುಟುಂಬ. ಅವರ ಹಿರಿಯರು ತುಂಬ ಆಢ್ಯತೆಯಿಂದ ಬಾಳಿ ಬದುಕಿದವರು. ಕಾಲಾಂತರದಲ್ಲಿ ಆ ಶ್ರೀಮಂತಿಕೆಯೇನೂ ಉಳಿಯಲಿಲ್ಲವಾದರೂ, ಲಚ್ಚು ಮಾಸ್ತರರ ಜೀವನದ ಶ್ರೀಮಂತಿಕೆ ಅವರು ಬದುಕಿದ ಪರಿಯಲ್ಲಿ ಅಡಗಿತ್ತು. ಅವರೆಂದೂ ತಮ್ಮ ಗತವೈಭವವನ್ನು ಸ್ಮರಿಸಿಕೊಂಡು ಹೆಮ್ಮೆಪಟ್ಟಿದ್ದನ್ನಾಗಲೀ,  ಅದು ನಷ್ಟವಾದುದಕ್ಕೆ ಕೊರಗಿದುದನ್ನಾಗಲೀ ಯಾರೂ ಕಾಣಲಿಲ್ಲ. ದೊಡ್ಡ ಕುಟುಂಬದ ಹಿರಿಯಮಗನಾಗಿ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರು.  

ನನ್ನ ಅಜ್ಜ ಶಂಕರಪ್ಪ (ಅಜ್ಜಂಪುರ ಕ್ಷೇತ್ರಪಾಲಯ್ಯನವರ ತಂದೆ) ನವರು ಕೂಡ ಶಾಲಾ ಮಾಸ್ತರರಾಗಿ ಅಜ್ಜಂಪುರದ ಸಮೀಪದ ಗ್ರಾಮ  ಅತ್ತಿಮೊಗ್ಗೆಯಲ್ಲಿ ಕೆಲಸಮಾಡಿದ್ದರು. ಪ್ರಸಂಗವಶಾತ್ ನನ್ನ ತಂದೆ ಲಚ್ಚು ಮಾಸ್ತರರಲ್ಲಿ ಈ ವಿಷಯವನ್ನು ಯಾವಾಗಲೋ ಪ್ರಸ್ತಾಪಿಸಿದ್ದರೆಂದು ತೋರುತ್ತದೆ. ಮುಂದೆ ಅದೇ ಶಾಲೆಯಲ್ಲಿ ಲಚ್ಚು ಮಾಸ್ತರರು ಕೂಡ ಕೆಲಕಾಲ ಕೆಲಸ ಮಾಡಿದರು.  ಅಲ್ಲಿನ ಹಳೆಯ ಕಡತಗಳನ್ನು ತೆಗೆದು ನೋಡುತ್ತಿರುವಾಗ, ನನ್ನ ಅಜ್ಜ ಬರೆದ ಕೆಲವು ಶಾಲಾ ದಾಖಲೆಗಳು ದೊರೆತವು. ಅದರ ಪೈಕಿ ಸಾದಿಲ್ವಾರು ರಿಜಿಸ್ಟರಿನ ಒಂದು ಪುಟವನ್ನು ತಂದು ನನ್ನ ತಂದೆಗೆ ನೀಡಿದ್ದರು. 1915ರ ಈ ದಾಖಲೆಯನ್ನು ನನ್ನ ತಂದೆ ಜತನವಾಗಿ ಇಟ್ಟುಕೊಂಡಿದ್ದು, ಮುಂದೊಮ್ಮೆ ನಾನು ಊರಿಗೆ ಹೋದಾಗ ನನಗೆ ನೀಡಿದರು. ಅದನ್ನು ನೋಡಿದೊಡನೆ ನನಗೆ ತುಂಬ ಆಶ್ಚರ್ಯವಾಯಿತು. ಏಕೆಂದರೆ ನನ್ನ ಅಜ್ಜ, ನಾನು ಈಗ ಹೇಗೆ ಸಹಿ ಮಾಡುತ್ತೇನೋ ಅದೇ ರೀತಿ ಅವರೂ ಮಾಡುತ್ತಿದ್ದರು. ವಂಶವಾಹಿಯ ವರ್ಗಾವಣೆಯೆನ್ನಲು ಸೂಕ್ತ ಉದಾಹರಣೆಯಿದೆಂದು ತಿಳಿಯುತ್ತೇನೆ. ಇಂಥದೊಂದು ಅಪರೂಪದ ಸಂಗತಿ ನನಗೆ ಲಚ್ಚು ಮಾಸ್ತರರಿಂದ ತಿಳಿದುಬಂದಿತ್ತು. ಹಾಗಾಗಿ ಅವರು ನನಗೆ ಇನ್ನಷ್ಟು ಆಪ್ತರಾದರು.

ತಮಗೆ ಒದಗಿಬಂದ ಶಾಲಾ ಮಾಸ್ತರಿಕೆಯ ವೃತ್ತಿಯನ್ನು ಎಷ್ಟು ಶಿಸ್ತಿನಿಂದ ಮಾಡಿದರೋ, ಅದೇ ಶಿಸ್ತು, ಅಚ್ಚುಕಟ್ಟುತನಗಳು ಅವರ ಉಡುಪಿನಲ್ಲಿ, ಮಾತುಕತೆಗಳಲ್ಲಿ, ಸುಂದರವಾದ, ತಪ್ಪುಗಳಿಲ್ಲದ ಕೈ ಬರವಣಿಗೆಯಲ್ಲಿ ಕಾಣುತ್ತಿತ್ತು. ಶುಭ್ರವಾದ ವ್ಯಕ್ತಿತ್ವದಂತೆ ಸ್ವಚ್ಛವಾದ ಬಿಳಿ ಉಡುಗೆಯನ್ನೇ ಧರಿಸುತ್ತಿದ್ದರು. ಅಜ್ಜಂಪುರದ ಹೆಣ್ಣುಮಕ್ಕಳ ಮಾಧ್ಯಮಿಕ ಶಾಲೆ ಹಾಗೂ ಬೀರೂರಿನಲ್ಲಿ ಕೆಲವು ವರ್ಷಗಳು ಉಪಾಧ್ಯಾಯ ವೃತ್ತಿಯನ್ನು ನಿರ್ವಹಿಸಿದರು. ತಮ್ಮ ಶಾಲೆಯ ಮಕ್ಕಳಿಗೆ ಪ್ರೀತಿಪಾತ್ರರಾಗಿದ್ದರು. ನಾನೇ ಕಂಡಂತೆ, ನಿವೃತ್ತಿಗೆ ಕೆಲ ವರ್ಷಗಳು ಮುನ್ನ ಕೂಡ, ಮರುದಿನ ಮಾಡಬೇಕಿದ್ದ ಪಾಠ-ಪ್ರವಚನಗಳ ಬಗ್ಗೆ ಸಿದ್ಧತೆ ಮಾಡಿಕೊಂಡೇ  ತರಗತಿಯನ್ನು ಪ್ರವೇಶಿಸುತ್ತಿದ್ದರು. ಈಗಲೂ ಇಷ್ಟೆಲ್ಲ ಅಗತ್ಯವಿದೆಯೇ ಮೇಷ್ಟ್ರೇ ಎಂದು ಕೇಳಿದಾಗ, ಮುಂಚಿನಿಂದ ಹೀಗೇ ಮಾಡಿಕೊಂಡು ಬಂದಿರುವೆ. ಅನುಭವವಿದೆಯೆಂದು ಮಕ್ಕಳೆದುರಿಗೆ ಬಾಯಿಗೆ ಬಂದುದನ್ನು ಹೇಳಲಾಗದು, ಅಲ್ಲದೇ ಅದಕ್ಕೆಂದು ಸೂಕ್ತ ವ್ಯವಸ್ಥೆಯನ್ನು ರೂಢಿಸಿರುವಾಗ, ನಾವೇಕೆ ಅದನ್ನು ಪಾಲಿಸಬಾರದು ಎನ್ನುತ್ತಿದ್ದರು. ಮೃದುವಾದ ಮಾತು. ಪ್ರಸಂಗಾವಧಾನತೆಯಿಂದ ಕೂಡಿದ ಹಾಸ್ಯ. ಅದರಲ್ಲೂ ತಮ್ಮನ್ನೇ ಗೇಲಿಮಾಡಿಕೊಂಡು ನಗುತ್ತಿದ್ದ ನಿರಾಳದ ಸ್ವಭಾವ ಅವರದು.

ಶಿಕ್ಷಕ ವೃತ್ತಿಗೆ ಈಗ ಅಡಿಗೆ-ಊಟದ ಕೆಲಸಗಳೂ ಸೇರಿಕೊಂಡು, ಕೆಲವು ಉಪಾಧ್ಯಾಯರು ಪಾಠವೊಂದನ್ನು ಬಿಟ್ಟು ಬೇರೆಲ್ಲ ಕೆಲಸಗಳನ್ನು ಮಾಡಬೇಕಾದ ಪರಿಸ್ಥಿತಿಯಿರುವುದು ಕಾಣಿಸುತ್ತದೆ. ಹಿಂದಿದ್ದ ಪರಿಸ್ಥಿತಿ ಕೂಡ ಬೇರೆಯಾಗಿರಲಿಲ್ಲ, ಚುನಾವಣೆಗಳು, ಜನಗಣತಿ, ದನಗಣತಿ ಮುಂತಾದ ಸರಕಾರಕ್ಕೆ ಬೇಕಿರುವ ಮಾಹಿತಿಗಳೆಲ್ಲದರ ಸಂಗ್ರಹಕ್ಕೆ ಉಪಾಧ್ಯಾಯರೇ ಮೂಲಾಧಾರ. ನನ್ನ ನಿರುದ್ಯೋಗ ಪರ್ವದಲ್ಲಿ ಲಚ್ಚು ಮಾಸ್ತರರೊಂದಿಗೆ ಇಂಥ ಗಣತಿಗಳಲ್ಲಿ ತಿರುಗಾಡಿದ್ದುಂಟು. ಇದರಿಂದ ಊರಿನ ಬಗ್ಗೆ, ವಿವಿಧ ಜನವರ್ಗಗಳ ಬಗ್ಗೆ,  ನನಗರಿವಿಲ್ಲದಂತೆ ಅನೇಕ ಮಾಹಿತಿಗಳು ದೊರೆಯುತ್ತಿದ್ದವು. ಅದೀಗ ಅಂತರಜಾಲದಲ್ಲಿ ಅಜ್ಜಂಪುರ ಬ್ಲಾಗ್ ನಿರ್ವಹಿಸುವ ಸಂದರ್ಭದಲ್ಲಿ ಅನೇಕ ಬಾರಿ ಉಪಯೋಗಕ್ಕೆ ಬಂದಿದೆಯೆನ್ನುವುದನ್ನು  ಸ್ಮರಿಸುತ್ತಿದ್ದೇನೆ. ಉಪಾಧ್ಯಾಯ ವೃತ್ತಿಯ ವಿಶೇಷವೆಂದರೆ, ಅವರು ನಿವೃತ್ತರಾದರೂ ವೃತ್ತಿಯ ಸಂಬಂಧ ಕಳಚಿಹೋಗದು. ಅವರ ಶಿಷ್ಯ ಪರಂಪರೆಯಲ್ಲಿನ ಯಾರೋ, ಎಲ್ಲಿಯೋ, ಅವರನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಲಚ್ಚು ಮಾಸ್ತರರ ಬಗ್ಗೆಯೂ ಅಂಥ ನೆನಪುಗಳನ್ನು ನಾನು ಅವರ ಹಲವು ವಿದ್ಯಾರ್ಥಿಗಳಿಂದ ಕೇಳಿದ್ದೇನೆ.

ಅಪಾರ ದೈವಭಕ್ತಿಯನ್ನು ಹೊಂದಿದ್ದ ಲಚ್ಚುಮಾಸ್ತರರು, ನಿವೃತ್ತಿಯ ನಂತರ ಅಜ್ಜಂಪುರದ ವಾಸವಿ ದೇವಾಲಯದಲ್ಲಿ ಕೆಲಕಾಲ ಅರ್ಚಕ ವೃತ್ತಿಯನ್ನೂ ನಿರ್ವಹಿಸಿದರು. ಅವರ ಪಾಲಿಗೆ ಅದೊಂದು ವೃತ್ತಿಯಾಗಿರಲಿಲ್ಲ.  ಪೌರೋಹಿತ್ಯದ ಪಾಠ ಪದ್ಧತಿಯನ್ನು ಅವರು ಎಳವೆಯಿಂದ ಕಲಿತವರಲ್ಲ. ಅಧ್ಯಯನ-ಅಧ್ಯಾಪನಗಳೆರಡೂ ಅವರಿಗೆ ಪ್ರಿಯವಾದ ಸಂಗತಿಗಳಾಗಿತ್ತು. ಹಾಗೆಂದೇ ತೊಡಗಿಸಿಕೊಂಡ ಯಾವುದೇ ಕೆಲಸದ ಬಗ್ಗೆ ಸಾಕಷ್ಟು ಮಾಹಿತಿಯಿರದೇ, ಉಡಾಫೆಯಿಂದ ಅವರೆಂದೂ ಕೆಲಸ ಮಾಡಲಿಲ್ಲ. ದೇವಪೂಜಾ ವಿಧಾನಗಳಿಗೆ ಸಂಬಂಧಿಸಿದಂತೆ ಅನೇಕ ಪಾಠಗಳನ್ನು ಸುತ್ತಲಿದ್ದ ಹಿರಿಯರಿಂದ ಇಳಿವಯಸ್ಸಿನಲ್ಲಿ ಕಲಿತರು. ಸ್ಥಳೀಯ ಬ್ರಾಹ್ಮಣ ಸಂಘದ ಪದಾಧಿಕಾರಿಗಳಾಗಿ ಕೆಲಸಮಾಡಿದರು. ತಾವು ವಹಿಸಿಕೊಂಡ ಯಾವದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವುದರ ಜತೆಗೆ, ತಮ್ಮ ಜತೆಗಾರರ ಮನನೋಯದಂತೆ ಅವರನ್ನು ಅದರಲ್ಲಿ ತೊಡಗಿಸುವಂತೆ ಮಾಡುವ ಸಂಘಟನಾ ಕೌಶಲ್ಯ ಅವರಲ್ಲಿತ್ತು.

ಯಾರಾದರೂ ತೀರಿಕೊಂಡಾಗ ಅವರ ಆತ್ಮಕ್ಕೆ ಶಾಂತಿ ದೊರಕಲೆಂದು ಕೇಳಿಕೊಳ್ಳುವುದು ವಾಡಿಕೆ.  ನಿಜವೆಂದರೆ ಅದೊಂದು ಇಂಗ್ಲಿಷ್ ಪದ್ಧತಿಯ ಸಾರಾಸಗಟು ಅನುಕರಣೆ ಮಾತ್ರ. ಆದರೆ ಲಕ್ಷ್ಮೀನರಸಿಂಹಯ್ಯನವರ  ವ್ಯಕ್ತಿತ್ವವೇ ಶಾಂತಿಮಯವಾಗಿದ್ದರಿಂದ ಅವರ ಆತ್ಮಕ್ಕೆ ಅಂಥ ಅಗತ್ಯ ಬೀಳಲಾರದು.

-0-0-0-0-0-0-

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

87. ಬಂಗಾರದ ಭರವಸೆ ಹುಟ್ಟಿಸುವ ಹಣ್ಣೆ ಗುಡ್ಡ

82. "ಬಾರ್ನ್ ಹೆಡ್ ಮಾಸ್ಟರ್" ಅಜ್ಜಂಪುರ ವೆಂಕಟೇಶಮೂರ್ತಿ

ಮಹಾರಾಜರ ಕಟ್ಟೆ !