ಒಂದೇ ಸೂರಿನಡಿ ಮೂರು ತಲೆಮಾರಿನ ರಂಗ ಕಲಾವಿದರು

ಸಂಚಿಕೆ-64
ಆತ್ಮೀಯ ಓದುಗರೇ,
ಅಮೆರಿಕಕ್ಕೆ ಇದು ನನ್ನ ಎರಡನೆಯ ಭೇಟಿ. ಇಲ್ಲಿ ಬಂದ ನಂತರವೂ ನನ್ನ ಈ ಬ್ಲಾಗ್ ಸಂಪಾದನೆಯ ಕೆಲಸ ನಿರುಮ್ಮಳವಾಗಿ ನಡೆಯುತ್ತಿದೆಯೆಂದರೆ, ಅದಕ್ಕೆ ಕಾರಣ ನನ್ನಂತೆಯೇ ಯೋಚಿಸಿ, ಕೆಲಸ ಮಾಡಬಲ್ಲ ಮಿತ್ರರ ತಂಡ. ನಾನು "ಅಮೆರಿಕದಲ್ಲಿ ಅಜ್ಜಂಪುರ" ಎಂಬ ಲೇಖನಮಾಲೆಯನ್ನು ಆರಂಭಿಸಿದೆನಾದರೂ, ಅದರಲ್ಲಿ ಅಜ್ಜಂಪುರದ ಬಗ್ಗೆ ಬರೆದದ್ದು ಕಡಿಮೆಯೇ ಎನ್ನಬೇಕು. ಆದರೆ ಅಮೆರಿಕದಲ್ಲಿ ಕುಳಿತು ಅಜ್ಜಂಪುರಕ್ಕೆ ಸಂಬಂಧಿಸಿದ ವ್ಯಕ್ತಿ, ವಿಷಯಗಳ ಮಾಹಿತಿಗಳನ್ನು ಪ್ರಕಟಿಸಲು ಈಗ ಸಾಧ್ಯವಾಗಿರುವುದು ನನ್ನ ಪ್ರೀತಿಯ ಮಿತ್ರ ಅಪೂರ್ವ ಬಸು ಅವರ ಸಹಕಾರದಿಂದ.
ಅಜ್ಜಂಪುರ ಕೃಷಿಕರ ಊರಾಗಿರುವಂತೆ ಕಲಾವಿದರ ನೆಲೆಯೂ ಹೌದು. ಕಲಾ ಸೇವಾ ಸಂಘದ ಕಾರ್ಯ ಚಟುವಟಿಕೆಗಳನ್ನು ಕುರಿತಂತೆ ವಿಸ್ತಾರವಾದ ಲೇಖನಗಳು ಈಗಾಗಲೇ ಬ್ಲಾಗ್ ನಲ್ಲಿ ಪ್ರಕಟವಾಗಿವೆ. ಪೌರಾಣಿಕ ನಾಟಕಗಳಿಂದ ಆರಂಭಿಸಿ, ಆಧುನಿಕ ರಂಗಭೂಮಿಯ ಎಲ್ಲ ಪ್ರಯೋಗಗಳೂ ಅಜ್ಜಂಪುರದಲ್ಲಿ ನಡೆಯುತ್ತವೆ. ಈ  ಸಂಚಿಕೆಯಲ್ಲಿ ಅಜ್ಜಂಪುರದ ಹೆಮ್ಮೆಯ ಕಲಾವಿದ ಶ್ರೀ ಶಿವಾಜಿರಾವ್ ಮತ್ತು ಅವರ ಮಗ ಮೋಹನರಾವ್ ಹಾಗೂ ಅವರ ಮೊಮ್ಮಗ ಉಲ್ಲಾಸ್ ಜಾಧವ್ ಇವರನ್ನು ಕುರಿತಂತೆ ವಿಸ್ತೃತ ಲೇಖನವನ್ನು ಅಪೂರ್ವ ಬಸು, ಉತ್ತಮ ಚಿತ್ರ ಸಂಗ್ರಹದೊಂದಿಗೆ ನಿಮ್ಮ ಓದಿಗೆಂದು ಇಲ್ಲಿ ಒದಗಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ಈ ಚಿತ್ರಮಾಲಿಕೆಯಲ್ಲಿ ಅಜ್ಜಂಪುರದ ಅನೇಕ ಹಿರಿಯರು ಭದ್ರಾ ನದಿಯಲ್ಲಿ ಜಳಕ ಮಾಡುತ್ತಿರುವ ಅಪರೂಪದ ಚಿತ್ರವಿದೆ. ಅವರಲ್ಲಿನ ಅನೇಕರನ್ನು ನೀವು ಗುರುತಿಸಬಹುದು ಎಂದು ಭಾವಿಸುತ್ತೇನೆ.
ರಂಗಗೀತೆಗಳೆಂಬ ಮರೆತುಹೋಗುತ್ತಿರುವ ಕಲಾಪ್ರಾಕಾರದ ಕೊನೆಯ ಕೊಂಡಿಯಂತಿರುವ ಶಿವಾಜಿರಾವ್ ರಂಥ ಕಲಾವಿದರ ಕೊಡುಗೆ ಖಂಡಿತಕ್ಕೂ ಮರೆಯಲಾಗದು. ಸಹಕರಿಸಿದ ಶಿವಾಜಿರಾವ್ ಕುಟುಂಬವರ್ಗಕ್ಕೂ ಧನ್ಯವಾದಗಳು. ಇಂಥ ಅಪರೂಪದ ಚಿತ್ರ-ಮಾಹಿತಿಗಳನ್ನು ಸಂಗ್ರಹಿಸಿ ನನ್ನ ಇ-ಮೇಲ್ ವಿಳಾಸಕ್ಕೆ ಕಳಿಸಿ. ಪ್ರಕಟಿಸುವೆ.
ನನ್ನ ಇ-ಮೇಲ್ ವಿಳಾಸ : shankarajp@gmail.com   ದೂರವಾಣಿ : 99866 72483
------------------------------------------------------------------------------------------------------------------------------ 
 ಒಂದೇ ಸೂರಿನಡಿ ಮೂರು ತಲೆಮಾರಿನ ರಂಗ ಕಲಾವಿದರು


                 ಶಿವಾಜಿರಾವ್                                          ಮೋಹನ ರಾವ್                                  ಉಲ್ಲಾಸ್ ಜಾಧವ್


 ಅಪೂರ್ವ ಬಸು   ದೂರವಾಣಿ  : 94810 75410

ಬಂದಾನೋ ಬಾನಿನಿಂದ ರಾಯ ಓ ಮಳೆರಾಯ.... ಎಂದು ಆತ ಎತ್ತರ ಸ್ವರದಲ್ಲಿ ಹಾಡಲಾರಂಭಿಸಿದರು. ಅಜ್ಜಂಪುರದ ಕಲಾಸೇವಾ ಸಂಘದ ಹಿರಿಯ ತಲೆಗಳಿಗೆ ಪರಮಾಶ್ಚರ್ಯ. ಪ್ರೇಕ್ಷಕ ಕಮ್ ಶ್ರೋತೃಗಳಿಗಂತೂ ರಸದೌತಣ. ಯಾರೀ ಪುಣ್ಯಾತ್ಮ, ಎಷ್ಟು ಚಂದ ಹಾಡುತ್ತಿದ್ದಾರೆ ಎಂದು ತಮ್ಮ ತಮ್ಮಲ್ಲಿಯೇ ಪ್ರಶ್ನಿಸಿಕೊಳ್ಳುತ್ತಾ ಹಾಡು ಮುಗಿಯುವವರೆಗೆ ರೋಮಾಂಚನದ ಸ್ಥಿತಿಯಲ್ಲಿದ್ದರು. ಅಂದು ಯುವಕರಾಗಿದ್ದ ಟಿ. ಕೃಷ್ಣೋಜಿರಾಯರು ಇದೆಲ್ಲಿಟ್ಟಿದ್ದೆಯೋ, ಹಿಂಗಾ ಹಾಡೋದು ಅಲ್ಲ ಕಣೋ, ನೀ ಹಿಂಗೆ ಹಾಡಿಬಿಟ್ರೆ ಹೆಂಗೋ, ಹಿಂಗೆ ಹಾಡ್ತೀಯಾ ಅಂತ ಗೊತ್ತಿರಲಿಲ್ಲ ಬಿಡು ಎಂದು ಮೆಚ್ಚುಗೆಯ ನುಡಿಯಾಡಿದರು. ಅಂದು ಈ ಹಾಡು ಹಾಡಿದವರು ಬಿ. ಶಿವಾಜಿರಾವ್ ಎಂಬ ಅಜ್ಞಾತ ಕಲಾವಿದ. ಒಂದು ರೀತಿಯಲ್ಲಿ ಏಕಲವ್ಯ ಪ್ರತಿಭೆ. ಕುಲುಮೆ-ಕೃಷಿ ಕೆಲಸಮಾಡಿ ಕಟ್ಟುಮಸ್ತಾಗಿದ್ದ ಅವರ ಶರೀರದಲ್ಲಿ ಇಂಥದೊಂದು ಶಾರೀರ, ಅದನ್ನು ಶೃತಿಬದ್ಧಗೊಳಿಸುವ ಶಕ್ತಿ ಇದೆ ಎಂದು ಅಜ್ಜಂಪುರದ ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ.
ರಂಗಕರ್ಮಿ ಎ.ಎಸ್. ಕೃಷ್ಣಮೂರ್ತಿಯವರೊಂದಿಗೆ ಶಿವಾಜಿರಾವ್
ಈ ಘಟನೆ ನಡೆದದ್ದು ಇಪ್ಪತ್ತನೆಯ ಶತಮಾನದ ಅರವತ್ತರ ದಶಕದಲ್ಲಿ. ಅಜ್ಜಂಪುರದ ಸಮೀಪವಿರುವ ಲಿಂಗದಹಳ್ಳಿ ಎಂಬ ಗ್ರಾಮದಲ್ಲಿ ಗಣಪತಿ ಪೂಜಾ ಕಾರ್ಯಕ್ರಮದಲ್ಲಿ ಅಜ್ಜಂಪುರದ ಕಲಾಸೇವಾ ಸಂಘದ ಆರ್ಕೆಸ್ಟ್ರಾ ವ್ಯವಸ್ಥೆ ಮಾಡಲಾಗಿತ್ತು. ಈ ತಂಡ ಕಾರಿನ ಬಾಡಿಗೆ ಚೌಕಶಿ ಮಾಡಿ ಹೊರಡುವಷ್ಟರಲ್ಲಿ ತಡರಾತ್ರಿಯಾಗಿತ್ತು. ಕಾರ್ಯಕ್ರಮ ರದ್ದಾಗಿ ಜನರು ಮನೆಗೆ ಹಿಂತಿರುಗಿದ್ದರು. ಆರ್ಕೆಸ್ಟ್ರಾ ತಂಡದವರು ಲಿಂಗದಹಳ್ಳಿಗೆ ಕಾರಿನಲ್ಲಿ ಬಂದಿಳಿದಾಗ ವ್ಯವಸ್ಥಾಪಕರಿಗೆ ಕಕ್ಕಾಬಿಕ್ಕಿ! ಸಾರ ಹಾಕಿಸಿ, ಜನ ಸೇರಿಸಿದರು. ಅಂದು ಧರ್ಮವಿಜಯ ಕನ್ನಡ ಚಿತ್ರದ ಬಂದಾನೋ ಬಾನಿನಿಂದ ಓ ಮಳೆರಾಯ ಹಾಡನ್ನು ಶಿವಾಜಿ ರಾವ್ ಹಾಡಿದ್ದೇ ಸರಿ, ಕಾರ್ಯಕ್ರಮ ಭರ್ಜರಿ ಯಶಸ್ಸು ಕಂಡಿತು. ಕೋಟೆಯ ಪಿ. ವೆಂಕಟರಾಮಯ್ಯನವರ ಕೊಳಲು, ಹಾರ್ಮೋನಿಯಂ ನಲ್ಲಿ ಸತ್ಯನಾರಾಯಣ ಶೆಟ್ಟರು, ತಬಲಾದಲ್ಲಿ ಎಂ. ವಿಠಲರಾವ್ ಹಾಗೂ ಇನ್ನೊಬ್ಬ ಗಾಯಕ ಕೆ. ರಾಮಚಂದ್ರ ರಾವ್ ವಾದ್ಯವೃಂದದಲ್ಲಿದ್ದರು.

ಶಿವಾಜಿರಾವ್  ಅಭಿನಯದ ಕೆಲವು ಚಿತ್ರಗಳು
             -0-0-0-0-
 ಹಾಡುಗಾರಿಕೆ ಮತ್ತು ಅಭಿನಯ ಎರಡರಲ್ಲೂ ವಿಶಿಷ್ಟ ಛಾಪು ಮೂಡಿಸಿದ ವ್ಯಕ್ತಿ ಬಿ. ಶಿವಾಜಿರಾವ್. ಭೈರೋಜಿರಾವ್-ಗಂಗೂ ಬಾಯಿ ದಂಪತಿಗಳ ಕಿರಿಯ ಪುತ್ರ. ಶಿವಾಜಿರಾವ್ ಧರ್ಮಪತ್ನಿ ಇಂದ್ರಾಬಾಯಿ. ಕಬ್ಬಿಣದ ಕುಲುಮೆಯಲ್ಲಿ ಹುರಿಗೊಂಡ ಮೈಕಟ್ಟಿನ ಶಿವಾಜಿರಾವ್ ರಂಗ ಕುಲುಮೆಯಲ್ಲೂ ತಮ್ಮನ್ನು ಚೆನ್ನಾಗಿ ಹುರಿ ಗೊಳಿಸಿ ಕೊಂಡಿದ್ದರು. ಎಲೆಮರೆಯ ಕಾಯಿಯಂತಿದ್ದ ಈ ಪ್ರತಿಭೆ ಯನ್ನು ಮೊದಲು ಗುರುತಿಸಿದವರು ನಾಟಕ
ಸೋಮಪುರದ ಸಮೀಪ ಭದ್ರಾನದಿಯಲ್ಲಿ ಅಜ್ಜಂಪುರದ 
ಹಿರಿ-ಕಿರಿಯ ರಂಗಕಲಾವಿದರು
ಕಾರ-ನಿರ್ದೇಶಕ-ನಟರಾದ ಪಿ. ವೆಂಕಟರಾಮಯ್ಯ (ಇವರು ಕೋಟೆಯಲ್ಲಿ ಯಂಟಣ್ಣ ಎಂದೇ ಪ್ರಸಿದ್ಧರು). ಶಿವಾಜಿರಾವ್ ಅವರನ್ನು ಇಂದಿಗೂ ಗುರುಗಳು ಎಂದೇ ನೆನೆಯುತ್ತಾರೆ.
ಶಿವಾಜಿರಾವ್ ಸಹಕಲಾವಿದರೊಂದಿಗೆ
ಯಂಟಣ್ಣ ಮೇಷ್ಟ್ರು ಹಸುವಿಗೆ ಸೊಪ್ಪೆ ಮೇವು ಕೇಳಲು ಬಂದವರು ಶಿವಾಜಿರಾವ್ ಗೆ ನಾಟಕದಲ್ಲಿ ಅಭಿನಯಿಸಲು ಕರೆದರು. ಮಾದರಿಗ್ರಾಮ (1960) ನಾಟಕದಲ್ಲಿ ಅವರಿಗೆ ದೊರೆತ ತಮಟೆ ಬಾರಿಸುವ ಕುಳುವಾಡಿಯ ಪಾತ್ರವನ್ನು ಶ್ರದ್ಧೆಯಿಂದ ಅಭಿನಯಿಸಿದರು. ಇಂಥ ಪಾತ್ರ ಕೊಟ್ಟೆನಲ್ಲಾ ಎಂಬ ಅಳುಕು ಇದ್ದುದರಿಂದಲೋ ಏನೋ, ಮೇಷ್ಟ್ರು ನಿನಗೆ ಒಂದು ದಿನ ರಾಜನ ಪಾರ್ಟನ್ನು ಕೊಡುತ್ತೇನೆ ಎಂದರು.  ಶಿವಾಜಿರಾವ್ ದೊಡ್ಡ ಆಕಾಂಕ್ಷೆಯ ವ್ಯಕ್ತಿಯಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಎಂದು ಪಾತ್ರ ಚಿಕ್ಕದಿರಲಿ, ದೊಡ್ಡದಿರಲಿ ಶಿವಾಜಿರಾವ್ ಅದಕ್ಕೆ ಜೀವ ತುಂಬಿ ಕಳೆಗಟ್ಟಿಸುವುದರಲ್ಲಿ ನಿಸ್ಸೀಮರು. ಪಾತ್ರಕ್ಕೆ ಹಾಡು ಇರಲೇಬೇಕು. ಸೊಗಸಾಗಿ ಹಾಡಿ ಜನರ ಮನಸೂರೆಗೊಳ್ಳುತ್ತಿದ್ದರು. ಮಾದರಿ ಗ್ರಾಮ ನಾಟಕದಿಂದ ಶುರುವಾದ ಅವರ ರಂಗಪಯಣ ಅನೇಕ ನಾಟಕಗಳಲ್ಲಿ ಪೋಷಕಪಾತ್ರಗಳನ್ನು ಮಾಡಿಸಿತು.
-0-0-0-0-
ನಮ್ಮಿಸ್ಕೂಲು ಕಮಿಟಿ, ಶ್ರೀರಾಮ ಪಾದುಕಾ ಪಟ್ಟಾಭಿಷೇಕ, ಬಲಿದಾನ, ಮೆಚ್ಚಿದ ಮದುವೆ, ಜಗಜ್ಯೋತಿ ಬಸವೇಶ್ವರ, ಮಹಾರಥಿ ಭೀಷ್ಮ (1968-69) ಇಮಾನ ಅಪಹರಣ (1993) ಬಾಡಿಗೆ ಮನೆ, ಹುಚ್ಚ, ತ್ಯಾಗಿ ಮುಂತಾದ ನಾಟಕಗಳಲ್ಲಿ ಅಭಿನಯಿಸಿದರು. ಅಜ್ಜಂಪುರದ ಹವ್ಯಾಸಿ ರಂಗ ಸಂಸ್ಥೆಗಳಾದ ಕಲಾ ಸೇವಾ ಸಂಘ, ಕಲಾ ಸೇವಾ ಸಂಘ ಜೂನಿಯರ್ ಕಲಾವಿದರು, ತರುಣ ಕಲಾವಿದರು ತಂಡಗಳ ರಂಗ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಕಲಾ ಸೇವಾ ಸಂಘದ ಹಿರಿಯ ಕಲಾವಿದರ ಜತೆಗೆ ಅಭಿನಯಿಸಿದ ಅವರು ತಮಗಿಂತ ಕಿರಿಯರಾದ ಎ.ಎಸ್. ಕೃಷ್ಣಮೂರ್ತಿ, ಮಹಾವೀರ ಜೈನ್, ಕೆ.ವಿ. ಶಿವಾನಂದ್ ಮುಂತಾದ ಕಲಾವಿದರ ಜತೆಗೂ ಅಭಿನಯಿಸಿ, ಭೇಷ್ ಎನಿಸಿಕೊಂಡರು. ಮೂಡಲ್ ಕುಣಿಗಲ್ ಕೆರೆ ನೋಡೋಕ್ ಒಂದ್ ಐಭೋಗ ಎಂದು ಶಿವಣ್ಣ ಹಾಡುತ್ತಿದ್ದರೆ ಅಂದಿನ ಅಜ್ಜಂಪುರದ ಜನರಿಗೆ ರಸದೌತಣ. ಹಾಗೆ ಹಾಡುತ್ತಿದ್ದರು ಎಂದರೆ ಸರಿಹೋಗದು, ಇವತ್ತಿಗೂ ಹಾಗೇ ಹಾಡುತ್ತಾರೆ! ಕಲಾಸೇವಾ ಸಂಘದ ಪ್ರಾರ್ಥನಾ ಗೀತೆ ನಮೋ ನಮೋ ಭುವನೇಶ್ವರಿ, ನಮೋ ನಮೋ ಪರಮೇಶ್ವರಿ ನಮೋ ಭಾರತಿ, ನಮೋ ಧರಿತ್ರಿ ನಮೋ ರಾಜ ರಾಜರಾಜೇಶ್ವರಿ ಎಂದು ಅವರು ಈಗಲೂ ಸೊಗಸಾಗಿ ಹಾಡುತ್ತಾರೆ. ಅವರ ಗಾಯನ ಶಕ್ತಿ, ನೆನಪಿನ ಶಕ್ತಿಗಳಿಗೆ ನಾವು ನಮೋ ನಮೋ ಎನ್ನಬೇಕು. ವಿದ್ಯೆ ಆರನೆಯ ಕ್ಲಾಸಿಗೆ ಮುಗಿದಿದ್ದರೂ ಅವರು ರಂಗಚಟುವಟಿಕೆಗಳಲ್ಲಿ ಏರಿದ ಎತ್ತರ ಅದ್ಭುತವೇ ಸರಿ. ಪದಗಳ ಉಚ್ಚಾರ, ಏರಿಳಿತ, ಸಮಯಸ್ಫೂರ್ತಿಯ ಸಂಭಾಷಣೆ, ಗ್ರಾಂಥಿಕ-ಗ್ರಾಮ್ಯ ಎರಡರಲ್ಲೂ ಪಳಗಿದ ಕಂಠಶ್ರೀ......ಶಿವಾಜಿರಾವ್ ಬೆಲೆಕಟ್ಟಲಾಗದ ನಮ್ಮೂರಿನ ಮುತ್ತು ! ಈಗ ಅವರಿಗೆ ಎಪ್ಪತ್ತೈದರ ಹರೆಯ!!
-0-0-0-0-
ಗಣೇಶೋತ್ಸವದಲ್ಲಿ ಭಕ್ತ ಕುಂಬಾರನ ರೂಪಕ ಚಿತ್ರ
ಶಿವಾಜಿರಾವ್ ಕುಟುಂಬದ ವಿಶೇಷವೆಂದರೆ ಅವರ ಮಗ, ಮೊಮ್ಮಗ ಕೂಡ ರಂಗ ಕಲಾವಿದರು. ಮೂರು ತಲೆಮಾರಿನ ರಂಗ ಕಲಾವಿದರು ಒಂದೇ ಸೂರಿನಡಿ ಇದ್ದಾರೆ. ಮಗ ಎಸ್. ಮೋಹನರಾವ್ ಸುಶಿಕ್ಷಿತರು. ರಂಗಶಿಕ್ಷಣ ಯೋಗ ಶಿಕ್ಷಣ ಇವೆರಡನ್ನೂ ಪಡೆದಿದ್ದಾರೆ. ನಟರಾಗಿ ರಂಗಕರ್ಮಿಗಳಾಗಿ, ನಿರ್ದೇಶಕರಾಗಿ ಈಗಲೂ ಮೋಹನ್ ಸಕ್ರಿಯರಾಗಿದ್ದಾರೆ. ಎ. ಎಸ್. ಕೃಷ್ಣಮೂರ್ತಿ ಮತ್ತು ಮಹಾವೀರ ಜೈನ್ ರಂಥ ರಂಗಕರ್ಮಿಗಳ ಹಾಗೂ ಎ.ಸಿ. ಚಂದ್ರಪ್ಪನವರಂಥ ರಂಗಪೋಷಕರ ಜತೆ ಸಂಪರ್ಕವಿಟ್ಟುಕೊಂಡಿದ್ದಾರೆ. 1992ರಲ್ಲಿ ಓಡುವವರು ನಾಟಕದ ಮೂಲಕ ರಂಗಮಂಚದ ಮೇಲೆ ಪಾದಾರ್ಪಣ. ಅದಕ್ಕೂ ಮೊದಲು ಶಕುನಿ ಎಂಬ ಏಕಪಾತ್ರಾಭಿನಯ ಮಾಡತ್ತಿದ್ದರು. ಹಳವಂಡಗಳು, ಹಗ್ಗದ ಕೊನೆ, ಮುಖವಾಡಗಳು, ಸ್ವಾಮಿಗೋಳ ಸೋಮ್ವಾರ, ಸಗಣಿ ಗದ್ದಲ, ಭಾರತಾಂಬೆ (ಇವುಗಳಲ್ಲಿ ಬಹುಪಾಲು ನಗೆನಾಟಕಗಳು ರಂಗಜೋಡಿ ಎ.ಎಸ್. ಕೃಷ್ಣಮೂರ್ತಿ-ಮಹಾವೀರ ಜೈನ್ ನಿರ್ದೇಶನದಲ್ಲಿ ತಯಾರಾದವು) ಮುಂತಾದ ನಾಟಕಗಳಲ್ಲಿ ಅಭಿನಯ. 
ಮಹಾರಥಿ ಭೀಷ್ಮ ನಾಟಕದಲ್ಲಿ
ದುರ್ಯೋಧನನಾಗಿ ಮೋಹನರಾವ್

ಇತ್ತೀಚೆಗೆ 2012ರಲ್ಲಿ ಇದೇ ಜೋಡಿಯ ನಿರ್ದೇಶನದ ಮಹಾರಥಿ ಭೀಷ್ಮ (ರಚನೆ ಪಿ. ವೆಂಕಟರಾಮಯ್ಯ) ದಲ್ಲಿ ದುರ್ಯೋಧನನ ಪಾತ್ರ ವಹಿಸಿದ್ದರು. ಸ್ಥಳೀಯ ರಾಮ ಸೇವಾ ಸಮಿತಿಯ ಗಣಪತಿ ವಾರ್ಷಿಕ ಕಾರ್ಯಕ್ರಮಗಳಲ್ಲಿ ಕನ್ನಡ ಚಲನಚಿತ್ರಗಳಿಂದ ಆಯ್ದ ಭಕ್ತಿಪ್ರಧಾನ , ಪೌರಾಣಿಕ ದೃಶ್ಯಗಳನ್ನು ರೂಪಕಗಳಿಗೆ ಅಳವಡಿಸಿ, 15-20 ನಿಮಿಷಗಳಲ್ಲಿ ಗಣಪತಿಯ ದರ್ಶನ ಮಾಡಿಸುವ ಮೋಹನ ರಾವ್ ಪ್ರಯೋಗ ವಿಶಿಷ್ಟ. ಊರಿನ ಗಂಡಸರು, ಹೆಂಗಸರು ಮತ್ತು ಮಕ್ಕಳು ಸರದಿಯಲ್ಲಿ ನಿಂತು ಗಣೇಶೋತ್ಸವದ ಈ ರೂಪಕಗಳನ್ನು ನೋಡುತ್ತಾರೆ. ಪ್ರತಿ ದಿನ ರಾತ್ರಿ ಐದಾರು ಪ್ರದರ್ಶನಗಳ ಮೂಲಕ  ಗಣೇಶೋತ್ಸವದ ಧಾರ್ಮಿಕ ಉದ್ದೇಶಗಳ ಜತೆಗೆ ಉತ್ತಮ ಮೌಲ್ಯಗಳ ಪ್ರಚಾರ-ಪ್ರಸಾರಗಳಲ್ಲೂ ತಮ್ಮ ದೇಣಿಗೆ ನೀಡುತ್ತಿದ್ದಾರೆ.
-0-0-0-0-

ಉಲ್ಲಾಸ್ ಜಾಧವ್
ಮೂರನೆಯ ತಲೆಮಾರಿನ ಉಲ್ಲಾಸ್ ಜಾಧವ್ ಎಂಬ ಹನ್ನೆರಡರ ಹರೆಯದ ಬಾಲಕ, ಮೋಹನರಾವ್ ಮತ್ತು ಪ್ರಮೀಳಾ ಅವರ ಏಕಮಾತ್ರ ಪುತ್ರ. ಉಲ್ಲಾಸ್ ತಂದೆಯಂತೇ ನಟ ಹಾಗೂ ಯೋಗಪಟು. ಅಜ್ಜ ಶಿವಾಜಿರಾವ್ ಅವರಂತೆ ಹಾಡಬಲ್ಲ ಕೂಡ. ಏಳನೆಯ ವರ್ಷಕ್ಕೆ ಬಣ್ಣ ಹಚ್ಚಿದ ಉಲ್ಲಾಸ್ ಹಿರಣ್ಯಕಶಿಪು, ರಾವಣಾಸುರ, ಮಯೂರವರ್ಮ, ಮದಕರಿನಾಯಕ, ಬಬ್ಬುವಾಹನ, ಭಕ್ತಿ ಭಂಡಾರಿ ಬಸವಣ್ಣ ಮುಂತಾದ ಪಾತ್ರಗಳನ್ನು ಏಕಾಂಗಿಯಾಗಿ ಅಭಿನಯಿಸಿದ್ದಾನೆ. ಇದಕ್ಕೆಲ್ಲ ಮೋಹನ್ ಅವರದೇ ನಿರ್ದೇಶನ. ಬಸವಣ್ಣನ ಅಂತಿಮ ಕ್ಷಣಗಳ ಸ್ವಗತ ಸಂಭಾಷಣೆಯನ್ನು ಉಲ್ಲಾಸ್ ಹೇಳುತ್ತಿದ್ದರೆ ಲಿಂಗ ಮೆಚ್ಚಿ ಅಹುದಹುದೆನಬೇಕು ಎಂಬಂತಿರುತ್ತದೆ.

-0-0-0-0-

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.