73. ಅಜ್ಜಂಪುರದಲ್ಲಿ ಹೋಟೆಲ್ ಉದ್ಯಮ ಬೆಳೆದುಬಂದ ಬಗೆ


ಆತ್ಮೀಯರೇ,
ಒಂದು ಊರಿನಲ್ಲಿ ಹೋಟೆಲ್ ಸ್ಥಾಪನೆಯಾಗಿ, ಮುಂದೆ ಅದೊಂದು ಉದ್ಯಮವಾಗಿ ಬೆಳೆಯುವುದನ್ನು ದಾಖಲಿಸುವ ಅಗತ್ಯವಿದೆಯೇ ಎಂದುಕೊಂಡರೆ, ಹೌದು ಎನ್ನಬೇಕಾದೀತು. ಏಕೆಂದರೆ, ಊರೊಂದರ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಹೋಟೆಲ್ ಸೇರಿದಂತೆ ಇನ್ನಿತರ ಉದ್ಯಮಗಳು ಸಾರ್ವಜನಿಕ ಸಂಕೇತಗಳಾಗುತ್ತವೆ. ಇತ್ತೀಚೆಗಂತೂ ಹೋಟಲ್ ಗಳು ಊರಿನ ಹೆಗ್ಗುರುತು ಗಳಾಗುತ್ತ ನಡೆದಿವೆ. ಅಜ್ಜಂಪುರದ ಮಟ್ಟಿಗೆ ಹೇಳುವುದಾದರೆ, ಒಂದು ಕಾಲಕ್ಕೆ ಉತ್ತಮ ರುಚಿ-ಅಭಿರುಚಿಗಳಿದ್ದ ಹೋಟೆಲುಗಳಿದ್ದವು. ಈಗೀಗ, ಜನರ ತಿನ್ನುವ ಅಭಿರುಚಿ ಬದಲಾದ ಕಾರಣದಿಂದ ರಸ್ತೆಬದಿಯ ತಳ್ಳುಗಾಡಿಗಳೇ ಪ್ರಧಾನವಾಗಿ ಕಾಣುತ್ತಿವೆ. ಇಂದಿಗೂ ನಮ್ಮ ಊರಿಗೆ ಉತ್ತಮ ದರ್ಜೆಯ ಊಟ-ತಿಂಡಿಗಳು ದೊರೆಯುವಂಥ,  ವಿರಾಮವಾಗಿ ಚಹಾ ಹೀರುತ್ತ ಹರಟಲು ಬೇಕಿರುವ ಒಂದು ಜಾಗದ ಅವಶ್ಯಕತೆಯಿದೆ. ಇದನ್ನು ಗಮನಿಸುವ ಉದ್ಯಮಿಗಳಿಗೆ ಇಲ್ಲಿ ಮುಕ್ತ ಅವಕಾಶವಂತೂ ಇದೆ. 
ಗೆಳೆಯ ಕೇಶವಮೂರ್ತಿಯವರಿಗೆ ತಮ್ಮ ಅನುಭವಗಳನ್ನು ದಾಖಲಿಸಲು ಕೋರಿದ್ದಕ್ಕೆ ಸೂಕ್ತವಾಗಿ ಸ್ಪಂದಿಸಿರುವ ಲೇಖನ ನಿಮ್ಮ ಮುಂದಿದೆ. ಇದಕ್ಕೆ ಸೂಕ್ತ ಚಿತ್ರಾಲಂಕಾರ ಮಾಡಿದ ಮಿತ್ರ ಅಪೂರ್ವ ಬಸು ಅವರಿಗೆ ವಂದನೆಗಳು. ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಚಿತ್ರಗಳನ್ನು ಸಂಗ್ರಹಿಸಿ, ಅಡಿಬರಹಗಳನ್ನು ಸಿದ್ಧಪಡಿಸಿ ನೀಡಿದ್ದಾರೆ. ಕೃತಜ್ಞತೆಗಳು.







- ಶಂಕರ ಅಜ್ಜಂಪುರ
ದೂರವಾಣಿ - 99866 72483
-----------------------------------------------------------------------------------------------------------------















ಕೆ. ಕೇಶವಮೂರ್ತಿ


ಕೃಷ್ಣಮೂರ್ತಿ ಹತ್ವಾರರ ಕೃಷ್ಣಭವನ ಇದ್ದ ಜಾಗದಲ್ಲಿ ಎಸಿ ಚಂದ್ರಪ್ಪ 
ಸೋದರರು ಅದೇ ಹೆಸರಿನಲ್ಲಿ ಮುಂದುವರೆಸಿ ಯಶಸ್ವಿಯಾದರು.
ನಾನು ಕೆ. ಕೇಶವಮೂರ್ತಿ, ಹೆಸರಿಗಷ್ಟೇ ಘಟ್ಟದ ತಗ್ಗಿನವ. ನನ್ನ ಜೀವನದ ಬಹುಭಾಗ ಅಜ್ಜಂಪುರದಲ್ಲೇ ಕಳೆಯುವಂತಾಗಿದ್ದರಿಂದ ನಾನು ಸ್ಥಳೀಕನೇ ಆಗಿಹೋಗಿದ್ದೆ. ನನ್ನ ಮನೆ ಅಜ್ಜಂಪುರದ ನೀರಿನ ಟ್ಯಾಂಕ್ ಸಮೀಪವಿತ್ತು. ನನ್ನ ಶಾಲೆ ಮನೆಯೆದುರಿಗೆ ಇದೆ. 
ಕೃಷ್ಣಮೂರ್ತಿ ಹತ್ವಾರರು ಕೊನೆಯದಾಗಿ ವಾಸವಿದ್ದ ಮನೆಯ
ಪಕ್ಕದಲ್ಲಿ ರಮೇಶ್ ಕ್ಯಾಂಟೀನ್ ನ್ನು ಕೆಲಕಾಲ ನಡೆಸಿದರು
ಈ ಐದಾರು ದಶಕಗಳಲ್ಲಿ ಅಜ್ಜಂಪುರದಲ್ಲಿ ಉಂಟಾಗಿರುವ ಬೆಳವಣಿಗೆಯಿಂದಾಗಿ, ಈಗಿನ ತಲೆಮಾರಿಗೆ ಇರದ ಪರಿಚಯಕ್ಕಾಗಿ ಇದೆಲ್ಲವನ್ನೂ ಹೇಳಬೇಕಾಯಿತು. ಅದು ಸ್ವಾಭಾವಿಕ ಕೂಡ.





ಶ್ರೀ ಕೃಷ್ಣಮೂರ್ತಿ ಹತ್ವಾರ್ ಮತ್ತು ಶ್ರೀಮತಿ ಗಿರಿಜಮ್ಮ
ನನ್ನ ತಂದೆ ಕೃಷ್ಣಮೂರ್ತಿ ಹತ್ವಾರರು 1959ರ ದೀಪಾವಳಿಯ ದಿನ ತಮ್ಮ ಉದ್ಯಮವನ್ನು ಅಜ್ಜಂಪುರದಲ್ಲಿ ಆರಂಭಿಸಿದರು. ಅನೇಕ ಏಳು-ಬೀಳುಗಳ ನಡುವೆ ನಡೆಸಿಕೊಂಡು ಬಂದ ಹೋಟೆಲ್ ಉದ್ಯಮ ನಮ್ಮನ್ನು ಕೈಹಿಡಿದು ನಡೆಸಿದ್ದಂತೂ ಹೌದು. ಜತೆಗೆ ಈ ವೃತ್ತಿಯಲ್ಲಿ ತೊಡಗಿದ ಬಾಂಧವರನ್ನೂ ಹತ್ತಿರದಿಂದ ಬಲ್ಲವನಾದ್ದರಿಂದ  ಅಜ್ಜಂಪುರದಲ್ಲಿ ಹೋಟೆಲುಗಳ ಬೆಳವಣಿಗೆಯ ಬಗ್ಗೆ ಹೇಳಬಹುದಾದಷ್ಟನ್ನಂತೂ ತಿಳಿದಿದ್ದೇನೆ.

ಎಲ್ಲ ಊರುಗಳ ಅಗತ್ಯದಂತೆ ಅಜ್ಜಂಪುರಕ್ಕೂ ಹೋಟೆಲ್ ಬಂದುದು ಕಳೆದ ಶತಮಾನದ 40-50ರ ದಶಕದಲ್ಲಿ ಎನ್ನಬಹುದು. ಇದು ಸಾಧಾರಣ ಸಂಗತಿಯಿರಬಹುದು. ಚಿಕ್ಕ ಊರಿನ ಬೆಳವಣಿಗೆಯ ಅಂಗವಾಗಿ ಆರಂಭವಾದ ಹೋಟೆಲ್ ಉದ್ಯಮ, ಜನರ ಅಗತ್ಯವನ್ನು ಪೂರೈಸಿ, ಜನಪ್ರಿಯಗೊಳಿಸಿದವರಲ್ಲಿ ಎಲ್ಲ ಊರಿನಂತೆ ದಕ್ಷಿಣ ಕನ್ನಡದವರೇ ಅಗ್ರಗಣ್ಯರು.  


ರಾಮಕೃಷ್ಣ ಭವನ - ಮಹಾದೇವರಾವ್  ಅಜ್ಜಂಪುರದಲ್ಲಿ ಸ್ಥಾಪಿಸಿದ
ಹೋಟೆಲ್ ಮತ್ತು ಮೊದಲ ವಸತಿಗೃಹ
ಅಜ್ಜಂಪುರದ ಮಟ್ಟಿಗೆ ಅದನ್ನು ಆಗಲೂ ಈಗಲೂ ಉದ್ಯಮವೆನ್ನಲಾಗದು. ಅಜ್ಜಂಪುರದ ನಾಲ್ಕು ದಿಕ್ಕಿಗೆ ನಾಲ್ಕು ಹೋಟೆಲುಗಳು ಎನ್ನುವಂತೆ, ಬಸ್ ನಿಲ್ದಾಣದಲ್ಲಿ ಮಹದೇವ ರಾವ್ ಎಂಬುವವರು ನಡೆಸುತ್ತಿದ್ದ ಒಂದು ಹೋಟೆಲ್ ಇತ್ತು. 





ಜನತಾ ಹೋಟೆಲ್ ಪಾಲುದಾರರಲ್ಲಿ ಓರ್ವರಾಗಿದ್ದ ಗೋಪಾಲ ರಾವ್
ಮಕ್ಕಳು  ನಡೆಸುತ್ತಿರುವ ಸಮರ್ಥ್ ಬೇಕರಿ.
ಊರಿನ ಒಳಗೆ ನಾಗಪ್ಪಯ್ಯ, ಸುಬ್ಬಣ್ಣಯ್ಯ ಎನ್ನುವವರ ಫಲಹಾರ ಮಂದಿರಗಳಿದ್ದವು. ಎಲ್ಲ ವ್ಯವಹಾರಗಳಲ್ಲಿರುವ ಏರುಪೇರುಗಳಂತೆಯೇ ಕೆಲವರು ತಮ್ಮ ಹೋಟೆಲುಗಳನ್ನು ಕೆಲಕಾಲ ಮುಚ್ಚಬೇಕಾದ ಪರಿಸ್ಥಿತಿಯೂ ಇತ್ತು. 





ಅಲಂಕಾರ ಹೋಟೆಲ್ ನ ಈಗಿನ ಚಿತ್ರ
ಅಜ್ಜಂಪುರಕ್ಕೆ ಜನಪ್ರಿಯವಾದ ಪೇಟೆ ಮಧ್ಯದಲ್ಲಿರುತ್ತಿದ್ದ ಅಲಂಕಾರ್ ಹೋಟೆಲ್ ಸದಾ ಚಟುವಟಿಕೆಯ ತಾಣವಾಗಿರುತ್ತಿತ್ತು.  ಈಗ ಅದಿರುವ ಪರಿಸ್ಥಿತಿಯನ್ನು ನೋಡಿದರೆ, ಆ ಹೋಟೆಲ್ ಮಾತ್ರವಲ್ಲ, ಇಡೀ ಪೇಟೆ ಬೀದಿಯ ಚಿತ್ರವೇ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಬದಲಾವಣೆಗೆ ತೆರೆದುಕೊಂಡಾಗ ಇದೆಲ್ಲ ಸ್ವಾಭಾವಿಕವೇ ಸರಿ. 





ಇನ್ನೋರ್ವ ಹೋಟೆಲ್ ಉದ್ಯಮಿ ವೆಂಕಟಾಚಲಯ್ಯನವರ ಮನೆ.
ಇಲ್ಲಿಯೇ ಕರ್ಣಾಟಕ ಬ್ಯಾಂಕ್ ನ ಅಜ್ಜಂಪುರ ಮೊದಲ ಶಾಖೆ
ಆರಂಭವಾಯಿತು.
ರೈಲುನಿಲ್ದಾಣದ ದಾರಿಯಲ್ಲಿ ಸೀತಾರಾಮಯ್ಯನವರ ಹೋಟೆಲ್ ಇತ್ತು. ಮುಂದೆ ಇದೇ ಕಟ್ಟಡದಲ್ಲಿ ಕರ್ಣಾಟಕ ಬ್ಯಾಂಕ್ ನ ಶಾಖೆ ಆರಂಭವಾಯಿತು.  ನಂತರ ಹೋಟೆಲ್ ಬಸ್ ನಿಲ್ದಾಣಕ್ಕೆ ಬದಲಾದರೆ, ಬ್ಯಾಂಕ್ ಅಲಂಕಾರ ಹೋಟೆಲಿನ ಮಹಡಿಗೆ ಬಂದಿತು. 










ಬೇವಿನಮರದಮ್ಮನ ಕಟ್ಟೆ, ಇಲ್ಲಿ ಆ ಕಾಲದ ಯುವಕರು
ರಾಮಕೃಷ್ಣ ಭವನದ ರೇಡಿಯೋ ಕೇಳಲೆಂದು ಸೇರುತ್ತಿದ್ದರು
ಬಸ್ ನಿಲ್ದಾಣದ ವಾಯಿದೆ ಮುಗಿದ ನಂತರ ಕಿರಾಳಮ್ಮ ದೇವಾಲಯದ ಸಮೀಪ ಆರಂಭವಾದ ಅವರ ಹೋಟೆಲ್ ಸಾಕಷ್ಟು ಕಾಲ ಮುಂದುವರೆಯಿತು. ಅವರ ಹೋಟೆಲಿನಲ್ಲಿ ಜೋರಾಗಿ ರೇಡಿಯೋ ಹಾಕುತ್ತಿದ್ದರು. ಅದನ್ನು ಕೇಳಲು, ಊರಿನ ಯುವಕರು ಸಮೀಪದಲ್ಲಿ ಬೇವಿನಮರದ ಕಟ್ಟೆಯ ಸಮೀಪ ಜಮಾಯಿಸಿರುತ್ತಿದ್ದರು. 






ಗೋಪಾಲರಾವ್, ಹನುಮಂತರಾವ್, ಶ್ರೀನಿವಾಸರಾವ್ ಇವರ
ಸಹಭಾಗಿತ್ವದ ಜನತಾ ಹೋಟೆಲ್, 60ರ ದಶಕದಲ್ಲಿ ಯಶಸ್ವಿ
ಯಾಗಿ ನಡೆದು ಊರಿಗೊಂದು ಶೋಭೆ ನೀಡಿದ ದಿನಗಳಿದ್ದವು.
ಮುಂದೆ ಈ ಹೋಟೆಲಿನ ಮುಂಭಾಗದಲ್ಲಿದ್ದ ಪುರಸಭೆಯ ಕಟ್ಟಡದಲ್ಲಿ ಹನುಮಂತರಾವ್, ಗೋಪಾಲರಾವ್ ಸೋದರರು ತಮ್ಮ ಹೋಟೆಲನ್ನು ಆರಂಭಿಸಿದಾಗ ಇದ್ದ ಚಿತ್ರವೇ ಬೇರೆ ರೀತಿಯಿತ್ತು. ಬ್ರಹ್ಮಚೈತನ್ಯ ಪಂಥದ ಅನುಯಾಯಿಗಳಾದ ಅವರು ಕೋಟೆ ಆಂಜನೇಯ ದೇವಾಲಯದ ಬಗ್ಗೆ ಅಪಾರ ಭಕ್ತಿ ಹೊಂದಿದ್ದರು. ಭಜನೆ, ಗಾಯನಗಳಲ್ಲಿ ಆಸ್ಥೆಯಿದ್ದ ಅವರು ಕೆಲವೇ ವರ್ಷಗಳಲ್ಲಿ ಸ್ಥಳೀಯರೊಂದಿಗೆ ಬೆರೆತುಹೋದರು. 
ಮುಂಡಾಡಿ ಗೋಪಾಲ ರಾವ್
ಗೋಪಾಲರಾಯರು ತಮ್ಮ ಜನತಾ ಹೋಟೆಲ್ ನ ಚಟುವಟಿಕೆಗಳ ನಂತರ ಊಟದ ಮೆಸ್ ನಡೆಸಿದರು. ಅವರು ಹವ್ಯಾಸಿ ರಂಗ ಕಲಾವಿದರಾಗಿದ್ದರು. ಅನೇಕ ನಾಟಕಗಳಲ್ಲಿ ಭಾಗವಹಿಸಿದರು. ಅಜ್ಜಂಪುರದ ಗೆಳೆಯರ ಬಳಗವು 2017ರ ನಾಟಕೋತ್ಸವದ ರಂಗದ್ವಾರಕ್ಕೆ ಅವರ ಹೆಸರಿಟ್ಟು ಗೌರವಿಸಿತು. ಇವರ ಮಕ್ಕಳಾದ ಸುದರ್ಶನ, ಮಂಜುನಾಥ ಮತ್ತು ಶ್ರೀಕಾಂತ್ ಇವರು ಬೇಕರಿ ಉದ್ಯಮ ನಡೆಸುತ್ತಿದ್ದಾರೆ. ಮಂಜುನಾಥ ಸ್ಥಳೀಯ ಬ್ರಾಹ್ಮಣ ಸಂಘದ ಅಧ್ಯಕ್ಷರು.


ನನ್ನ ತಂದೆ ಆರಂಭಿಸಿದ ಹೋಟೆಲ್ ಸ್ಥಳದಲ್ಲಿ ಅಜ್ಜಂಪುರದ ಸಮೀಪದ ಗ್ರಾಮದ ಅತ್ತಿಮೊಗ್ಗೆಯ ಮಲ್ಲೇಗೌಡರ ತಮ್ಮ ಬಸಪ್ಪ ನವರು ಈ ಉದ್ಯಮಕ್ಕೆ ಇಳಿದು ಯಶಸ್ವಿಯಾದರು. ನನ್ನ ತಂದೆ ಆ ಸ್ಥಳದಿಂದ ಮುಂದೆ ಶ್ರೀ ಹನುಮಂತಪ್ಪ ಹಾಗೂ ನನ್ನ ಗುರುಗಳಾದ ಮಲ್ಲೇನಹಳ್ಳಿ ಸಿದ್ಧಪ್ಪನವರ ಸ್ಥಳದಲ್ಲಿ ಹೋಟೆಲನ್ನು ನಡೆಸಿದರು. ಮುಂದೆ ನಮ್ಮ ಮನೆಯ ಸಮೀಪದ ಸ್ವಂತ ಇಳದಲ್ಲಿ ಕೆಲಕಾಲ ನಡೆಸಿದೆವು.

ವಿರಾಮವಾಗಿ ಕುಳಿತು, ಚಹಾ-ಕಾಫಿ ಹೀರುತ್ತ ಹರಟುತ್ತಿದ್ದ ಮಂದಿ ಈಗ ಕಾಣಸಿಕ್ಕುವುದಿಲ್ಲ. ಇದು ಬಹುಶಃ ಎಲ್ಲ ಚಿಕ್ಕ ಊರುಗಳಿಗೂ ಅನ್ವಯಿಸಬಹುದೇನೋ. ಅದೇ ಹೊತ್ತಿಗೆ ಒಂದು ಊರಿನ ಅಭಿರುಚಿಯನ್ನು ಅಲ್ಲಿನ ಹೋಟೆಲ್ ಗಳು ಹೇಳಬಲ್ಲವು. ಅಲ್ಲಿ ದೊರೆಯುವ ಊಟ-ತಿಂಡಿಗಳು, ಸ್ಥಳಾವಕಾಶ, ಹೋಟೆಲಿಗೆ ಬರುವ ಜನರ ಸಾಮಾಜಿಕ ಮಟ್ಟ ಮುಂತಾದ ಹಲವು ಸಂಗತಿಗಳನ್ನು ಯಾರ ವಿವರಣೆಯೂ ಇಲ್ಲದೆ ತಿಳಿಯಲು ಅವಕಾಶವಿರುವ ಸ್ಥಳವೆಂದರೆ ಹೋಟೆಲ್ ಗಳು ಮಾತ್ರವೇ. ಆದರೆ ಇಂದು ಅಜ್ಜಂಪುರದ ಹೋಟೆಲುಗಳ ಸ್ಥಿತಿಯನ್ನು ನೋಡುವಾಗ ಬೇಸರವೆನ್ನಿಸುತ್ತದೆ. ಹೆಚ್ಚು ಬಂಡವಾಳ ಬೇಡದ, ಶುಚಿ-ರುಚಿಗೆ ಆಶೆಪಡದೆ, ಕೇವಲ ಹೆಚ್ಚು ಆಹಾರ ಪ್ರಮಾಣವನ್ನು ಮಾತ್ರ ಗಮನಿಸುವ ಕೃಷಿ ಕಾರ್ಮಿಕ, ಬಡ ರೈತ ವರ್ಗವು ಬೀದಿ ಬದಿಯಲ್ಲಿ ಸಂಜೆಯಾದರೆ ತಲೆಯೆತ್ತಿ ವ್ಯಾಪಾರ ನಡೆಸುವ ತಳ್ಳುಗಾಡಿಗಳಿಗೆ ಶರಣುಹೋಗಿದ್ದಾರೆ. 

80ರ ದಶಕದಲ್ಲಿ ಅಜ್ಜಂಪುರದಲ್ಲಿ ಜಾನಪದ ಸಾಹಿತ್ಯ ಸಮ್ಮೇಳನವು, ಹಿರಿಯ ಜಾನಪದ ವಿದ್ವಾಂಸ ಕೆ.ಆರ್. ಲಿಂಗಪ್ಪನವರ ನೇತೃತ್ವದಲ್ಲಿ ನಡೆಯಿತು. ಮೂರ್ನಾಲ್ಕು ದಿನ ನಡೆದ  ಈ ಕಾರ್ಯಕ್ರಮದ ಊಟೋಪಚಾರದ ವ್ಯವಸ್ಥೆಗಳನ್ನು ನನ್ನ ತಂದೆ ಕೃಷ್ಣಮೂರ್ತಿ ಹತ್ವಾರರು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕೆ ಜನ ಮೆಚ್ಚಿದ್ದರು. ಹಿರಿಯ ರಾಜಕಾರಣಿಗಳು ಯಾರೇ ಬಂದರೂ ಅವರ ಊಟ-ಉಪಹಾರಗಳ ನಿರ್ವಹಣೆ ನಮ್ಮದೇ ಆಗಿರುತ್ತಿದ್ದುದು ಒಂದು ಹೆಮ್ಮೆ. ಮುಂದೆ ಉಪರಾಷ್ಟ್ರಪತಿಯಾದ ಶ್ರೀ ಬಿ.ಡಿ. ಜತ್ತಿ ನಮ್ಮಲ್ಲಿಗೆ ಬಂದು ಭೋಜನ ಮಾಡಿದ್ದು ಆ ಕಾಲಕ್ಕೆ ಹೆಗ್ಗಳಿಕೆಯ ಮಾತಾಗಿತ್ತು.

ಸಿದ್ಧರಾಮೇಶ್ವರ ಸರ್ಕಲ್,  ಇಲ್ಲಿ ತಿಮ್ಮಪ್ಪಯ್ಯನವರ ಹೋಟೆಲ್ ಇತ್ತು.
ಇದೆಲ್ಲದರ ಕಾರಣವೆಂದರೆ, ಊರೊಟ್ಟಿನ ಜನರೊಂದಿಗೆ ಹೊಂದಿಕೊಂಡು ಹೋಗುವ ನಮ್ಮ ಗುಣ ಮತ್ತು ಜನರು ನಮಗೆ ತೋರಿದ ವಿಶ್ವಾಸಗಳಿಂದಾಗಿ ಹೋಟೆಲುಗಳನ್ನು ನಡೆಸುವುದು ಸಾಧ್ಯವಾಗಿತ್ತು. ಈಗಿನಂಥ ಸ್ಪರ್ಧೆ ಕೂಡ ಇರುತ್ತಿಲ್ಲಲಿಲ್ಲವೆನ್ನುವುದು ಇನ್ನೊಂದು ಕಾರಣವಿರಬಹುದು. ಒಟ್ಟಿನಲ್ಲಿ ಅಜ್ಜಂಪುರದಲ್ಲಿ ನಾವು ಕೆಲವರಾದರೂ ದಕ್ಷಿಣ ಕನ್ನಡಿಗರು ನಮ್ಮ ಬದುಕು ಕಟ್ಟಿಕೊಂಡೆವೆನ್ನುವುದರಲ್ಲಿ, ನಮ್ಮ ಸಾಹಸ ಪ್ರವೃತ್ತಿಯ ಜತೆಗೆ ಊರಿನವರ ಸಹಕಾರ ಕೂಡ ಅಷ್ಟೇ ಮುಖ್ಯವಾಗಿತ್ತು ಎನ್ನುವುದೂ ಸತ್ಯ.

-0-0-0-0-0-0-0-0-

ಕಾಮೆಂಟ್‌ಗಳು

  1. ಆತ್ಮೀಯರೇ,
    ಲೇಖನ ಓದಿದೆ, ಅಪೂರ್ಣ ಎನಿಸಿತು. ಅಜ್ಜಂಪುರದಲ್ಲಿ ಹೊಟೆಲ್ ಉದ್ಯಮ ಮಾಡಿ ತಮ್ಮ ಬದುಕನ್ನು ಕಟ್ಟಿಕೊಂಡವರು ಇನ್ನೂ ಕೆಲವರಿದ್ದಾರೆ.
    ಅಂಥವರನ್ನೂ ಸೇರಿಸಬಹುದಿತ್ತೇನೋ. ಅವರಲ್ಲಿ ಇಬ್ಬರು ಉದ್ಯಮಿಗಳು. ಶಶಿ ಅಥವಾ ಕೆ. ಆರ್. ಎಸ್. ವಿ. ರಾವ್ ಅಂತ ಒಬ್ಬರು. ಇವರು
    ತಮ್ಮ ಸಹೋದರ ರಾಜನೊಂದಿಗೆ ಒಂದು ದಿನ ರಾತ್ರಿ ಅರಸೀಕೆರೆಯಿಂದ ಅಜ್ಜಂಪುರಕ್ಕೆ ಬಂದಿಳಿದರು. ಮೊದಲು ಇವರು ಒಂದು ಹೊಟೆಲ್
    ನಲ್ಲಿ ಕೆಲಸಗಾರರಾಗಿಯೇ ಇದ್ದರು. ಬಿಡುವಿದ್ದಾಗ ನಮ್ಮ ಮನೆಗೆ ( ಜಿ. ಟಿ. ಶ್ರೀಧರ ಶರ್ಮ, ರೋಹಿಣೀ ಶರ್ಮಾ) ಬರುತ್ತಿದ್ದರು. ಬರಿದೆ ಬಂದು
    ಹೋಗದೆ ನಮ್ಮ ಮನೆಯಲ್ಲಿರುವ ಪತ್ರಿಕೆ, ಪುಸ್ತಕಗಳನ್ನೂ ಬಿಡದೆ ಓದುತ್ತಿದ್ದರು. ವಿದ್ಯಾವಂತರೆಂಬುದು ಮೇಲ್ನೋಟಕ್ಕೆ ಕಾಣುತ್ತಿತ್ತು, ಆದರೂ
    ಹೊಟೆಲ್ ಕೆಲಸಗಾರರು! ಇವರ ಆ ಸ್ಥಿತಿಗೆ ಮಮ್ಮಲ ಮರುಗಿದ ನನ್ನ ಮಡದಿ ಶ್ರೀಮತಿ ರೋಹಿಣೀ ಶರ್ಮಾ ಅವರು " ನೀವೇಕೆ ನಿಮ್ಮದೇ ಸ್ವಂತದ್ದೊಂದು ಉದ್ಯಮ ಶುರುಮಾಡಬಾರದು?" ಎಂದು ಪ್ರಶ್ನಿಸಿದರು. ( ಮುಂದುವರೆಯುತ್ತದೆ)

    ಪ್ರತ್ಯುತ್ತರಅಳಿಸಿ
  2. ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು, ನೀವು ಪ್ರಸ್ತಾಪಿಸಿರುವವರ ಬಗ್ಗೆ ನನಗೆ ಮಾಹಿತಿಗಳಿಲ್ಲದಿದ್ದರಿಂದ ಅವರ ಬಗ್ಗೆ ಬರೆಯಲಾಗಿಲ್ಲ. ಇದೀಗ ನೀವು ಬರೆದಿರುವ ಮಾಹಿತಿಯೂ ಅಪೂರ್ಣವಾಗಿದ್ದು, ಮುಂದುವರೆಯುತ್ತದೆ ಎಂದಿರುವಿರಿ. ದಯವಿಟ್ಟು ಕಮೆಂಟ್ ಬಾಕ್ಸ್ ನಲ್ಲಿ ಮುಂದುವರೆಸಬಹುದು ಇಲ್ಲವೇ ಪ್ರತ್ಯೇಕ ಲೇಖನ ಬರೆದುಕೊಡಲು ವಿನಂತಿಸುತ್ತೇನೆ. ಮುಂದಿನ ಸಂಚಿಕೆಗಳಲ್ಲಿ ಪ್ರಕಟಿಸಲು ಅನುಕೂಲವಾಗುತ್ತದೆ.

    ಪ್ರತ್ಯುತ್ತರಅಳಿಸಿ
  3. ಸರಿ, ಊರೇ ಹೊಸದಿರುವ ಅವರು ಸ್ವಂತ ಉದ್ಯಮ ಪ್ರಾರಂಭಿಸುವುದಾದರೂ ಹೇಗೆ? ಅದೇ ಸಮಯದಲ್ಲಿ ಅಜ್ಜಂಪುರದ ಬಸ್ ನಿಲ
    ಹತ್ತಿರ ಒಂದು ಸಣ್ಣ ಮಳಿಗೆಯನ್ನು ಬಾಡಿಗೆಗೆ ಪಡೆದು ತಮ್ಮದೇ ಸ್ವಂತ ಉದ್ಯಮ ಪ್ರಾರಂಭಿಸಿದರು. ಅನಂತರ ಅಲ್ಲಿ ಸರಿಬರದೆ ಮತ್ತೆ
    ಬರಿಗಾಲೇ ಗತಿ! ಆದರೂ ಧೃತಿಗೆಡದ ಅವರು ಸ್ವಂತ ಸ್ಥಳಕ್ಕಾಗಿ ತಡಕಾಡುತ್ತಿದ್ದರು. ಅವರಿಗೆ ಬಸ್ ನಿಲ್ದಾಣದ ಆಸುಪಾಸಿನಲ್ಲಿಯೇ ಉ
    ದ್ಯಮ ಮಾಡುವಾಸೆ! ಆದರೆ ಜಾಗ? ಕೊನೆಗೆ ಪಶು ಆಸ್ಪತ್ರೆ ಹತ್ತಿರ ಅಗಲಕ್ಕಿಂತ ಉದ್ದದ ಒಂದು ಸ್ಥಳ ಇರುವುದಾಗಿಯೂ ಅದು ಅಜ್ಜಂ
    ಪುರದ ಪಟ್ಟಣ ಪಂಚಾಯತಿಯ ಅನುಮತಿ ಪಡೆದೇ ಶುರುಮಾಡಬೇಕೆಂದೂ ಅಲ್ಪ-ಸ್ವಲ್ಪ ತಂಟೆ -ತಕರಾರುಗಳಾಗಿ ಸಮಸ್ಯೆ ಉಲ್ಬಣವಾ
    ಗುತ್ತಾ ಬಂತು. ಆ ಕಾಲದಲ್ಲಿ ಅಜ್ಜಂಪುರದ ಪಟ್ಟಣ ಪಂಚಾಯತಿಯ ( ಗ್ರಾಮ ಪಂಚಾಯತಿ ಇದ್ದರೂ ಇರಬಹದು ) ಅಧ್ಯಕ್ಷರು ಎಂ ಸಿದ್ದಪ್ಪ
    ನವರು, ಜಿಲ್ಲಾ ಪಂಚಾಯತಿ ಸದಸ್ಯರು ಎ. ಸಿ. ಚಂದ್ರಪ್ಪನವರು ಮತ್ತು ತರೀಕೆರೆ ವಿಧಾನ ಸಭಾ ಸದಸ್ಯರು ಎಸ್. ಎಮ್ ನಾಗರಜ್ರವರು.
    ನಾನು ಹತ್ತನೇ ತರಗತಿ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕಾಗಿ ಹೊರಟಿದ್ದೆ. ಶಶಿ ಸಹೋದರರು ತೀವ್ರ ಆತಂಕ- ಉಮ್ಮಳದಲ್ಲಿದ್ದರು. ವಿಶೇ
    ಷವೆಂದರೆ ನನಗೆ ಸಿದ್ದಪ್ಪ, ಚಂದ್ರಪ್ಪ ಮತ್ತು ನಾಗರಜ್ ಮೂವರೂ ಆತ್ಮೀಯರೇ ಆಗಿದ್ದರು. ಚಂದ್ರಪ್ಪನವರಂತೂ ವೃತ್ತಿ ಮತ್ಸರ ಬಿಟ್ಟು ನಮ್ಮ
    ನೆರವಿಗೆ ಬಂದರು. ಆ ಮೂವರೂ ಒಂದಾಗಿ ಕೊಟ್ಟ ಭರವಸೆ- " ಶರ್ಮಾಜಿ, ನೀವು ನಿಮ್ಮ ಕೆಲಸಕ್ಕೆ ಹೋಗಿ ಬನ್ನಿ. ನಾವು ನಿಮ್ಮ ಬಂಧು ಶ
    ಶಿಗೆ ಅನ್ಯಾಯವಗದಂತೆ ವ್ಯವಸ್ಥೆ ಮಾಡುತ್ತೇವೆ". ಈ ಕುರಿತು ಒಮ್ಮೆ ತರೀಕೆರೆಗೆ ಹೋಗಿ ಶಾಸಕರನ್ನು ನನ್ನ ಶ್ರೀಮತಿ ಎಸ್. ರೋಹಿಣೀ ಶ
    ರ್ಮಾ ಮತ್ತು ಶಶಿಯ ಶ್ರೀಮತಿ ಸುಜಾತ ಭೇಟಿಮಾಡಿ ಪರಿಸ್ಥಿತಿಯ ತೀವ್ರತೆಯನ್ನು ಮನವರಿಕೆ ಮಾಡಿಕೊಟ್ಟರೆಂದು ನನಗೆ ಈಗ ನೆನಪಿದೆ
    ಆಗಿನ ಕಾಲವೇ ಹಾಗಿತ್ತು- ಕೊಟ್ಟ ಮಾತಿಗೆ ಈ ಮೂವರೂ ತಪ್ಪಲಿಲ್ಲ. ಶಶಿಗೇ ಆ ಸ್ಥಳ ದೊರೆಯಿತು. ಅನಂತರ ಶಶಿಯವರ ಭಾಗ್ಯದ ಬಾಗಿ
    ಲೇ ಬದಲಾಯಿತು, ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಕೆಲವು ವರ್ಷ ಆ ಜಾಗದಲ್ಲಿಯೇ ಉದ್ಯಮ ಮಾಡಿ, ಆದಿತ್ಯ ಮತ್ತು ಗಣೇಶ ಎಂಬ ಮುದ್ದಾದ, ಬುದ್ಧಿವಂತರೂ ಆದ ಇಬ್ಬರು ಮಕ್ಕಳನ್ನೂ ಪಡೆದರು. ಕೊನೆಗೆ ತಮ್ಮ ಭವಿಷ್ಯದ ಬದುಕಿಗೆ ಬೇರೆ ದಾರಿಯನ್ನೇ ಕಂಡುಕೊಂಡರು.
    ಅಂದರೆ ಅಜ್ಜಂಪುರಕ್ಕೆ ಹತ್ತಿರದ ಹೊಸದುರ್ಗದಲ್ಲಿ " ಗಣೇಶ ಮೆಡಿಕಲ್ಸ್" ಎಂಬ ಉದ್ಯಮ ಪ್ರಾರಂಭಿಸಿ ಈಗ ನೆಮ್ಮದಿ- ಸಂತೃಪ್ತಿಯಿಂದ ಇ
    ದ್ದಾರೆ. ಆದಿತ್ಯ ಇಂಜನಿಯರ್ ಪದವಿ ಪಡೆದು ನೌಕರಿಯಲ್ಲಿದ್ದರೆ ಗಣೇಶ 'ಪಶುವೈದ್ಯಕೀಯ' ಪದವಿಯಲ್ಲಿ ಕಲಿಯುತ್ತಿದ್ದಾನೆ. ಹೀಗೆ ಹೊಟೆಲ್
    ಉದ್ಯಮದಲ್ಲಿಯೇ ಬದುಕು ಕಟ್ಟಿಕೊಂಡ ಶಶಿ ಸಹೋದರರು ಅಜ್ಜಂಪುರದ ಹೊಟೆಲ್ ಉದ್ಯಮದ ಒಂದು ಅವಿಭಾಜ್ಯ ಅಂಗವಾಗಿದ್ದಾರೆ.
    ( ಮುಂದುವರೆಯುವುದು )

    ಪ್ರತ್ಯುತ್ತರಅಳಿಸಿ
  4. ಗೆಳೆಯ ಶ್ರೀ ಕೇಶವಮೂರ್ತಿ ಹತ್ವಾರ್, ಸೂಗಸಾಗಿ ನಮ್ಮೂರಿನ ಹೊಟಲ್ ಗಳ ಇತಿಹಾಸವನ್ನು ಪರಿಚಯಿಸಿದ್ದಾರೆ.ಖುಷಿಯಾಯಿತು. ಅವರ ತಂದೆ, ತಮ್ಮ ಪಾಡಿಗೆ ತಾವು ಅವರ ಕೆಲಸದಲ್ಲಿ ಸದಾ ಮಗ್ನರಾಗಿರುತ್ತಿದ್ದರೆ, ಅವರ ತಾಯಿ ಶ್ರೀಮತಿ ಗಿರಿಜಮ್ಮನವರು ತುಂಬಾ ಸ್ನೇಹಮಹಿ. ಅವರ ಪ್ರೀತಿ ವಾತ್ಸಲ್ಯಗಳ ನೆನಪಾಯಿತು. ಅಂದಹಾಗೆ ನಮ್ಮ ಮಿಡ್ಲಿಸ್ಕೂಲ್ ನ ಎದರಿಗೆ ನಾಗಪ್ಪಯ್ಯ ಅನ್ನುವವರ ಹೋಟೆಲ್ ಇತ್ತು. ಅವರ ಮಗ ಪುರುಷೋತ್ತಮ ನನ್ನ ಸಹಪಾಠಿ. ನಾಗಪ್ಪಯ್ಯ ಅವರ ದುರ್ವಾಸ ಕೊಪ ಆಗ ಜಗತ್ ಪ್ರಸಿದ್ಧ. ಅವರೊಡನೆ ಮಾತನಾಡಲೂ ಜನ ಹೆದರುತ್ತಿದ್ದರು. ಇವರು ಹೀಗೆ ಪ್ರಸಿದ್ಧರಾದರೆ, ಜನತಾ ಹೋಟಲ್ ನ ಶ್ರೀ ಹನುಮಂತ ರಾವ್ ತುಂಬಾ ಸ್ನೇಹಮಹಿಗಳು. ಆಂಜನೇಯ ದೇಗುಲದಲ್ಲಿ ಅವರು ಹೇಳಿಕೊಡುತ್ತಿದ್ದ ಭಜನೆಗಳು ಕಣ್ಣಿಗೆ ಕಟ್ಟಿದಂತಿದೆ. ಅದರಲ್ಲೂ 'ಯಮನೆಲ್ಲೂ ಕಾಣನೆಂದು ಹೇಳಬೇಡ, ಯಮನೆ ಶ್ರೀರಾಮಚಂದ್ರ ಸಂದೇಹ ಬೇಡ' , ಈ ಭಜನೆಯಂತೂ ಈಗಲೂ ಗುಣುಗುಡುತ್ತಿದೆ. ಕೇಶವನಿಗೆ ಧನ್ಯವಾದ.

    ಪ್ರತ್ಯುತ್ತರಅಳಿಸಿ
  5. ಒಂದು ಹೊಟೆಲ್ ಅಂದರೆ ದೋಸೆ "ಇರಲೇಬೇಕೆಂಬ" ಪರಂಪರೆಯಿದೆ. ಅದರೆ ಈ ಶಶಿ- ಸಹೋದರರು ದೋಸೆರಹಿತ ವ್ಯಾಪಾರಮಾಡಿಯೂ
    ಯಶಸ್ವಿಯದರೆಂಬುದು ಇತಿಹಾಸ. ಅಂತೆಯೇ ಇವರು ರವೆಇಡ್ಳಿ ಪ್ರಾರಂಭಿಸುವ ಮುನ್ನ ಅಜ್ಜಂಪುರದಲ್ಲಿ ರವೆಇಡ್ಳಿಯ ಸಂಸ್ಥಾಪಕ ಕೃಷ್ಣಮೂರ್ತಿ ಹತ್ವಾರರಿಗೆ ರವೆಇಡ್ಲಿ ಕೊಟ್ಟು, ನಮಸ್ಕರಿಸಿ " ತಪ್ಪಿದ್ದರೆ ಸರಿಪಡಿಸಿ" ಎಂದು ಶುರುಮಾಡಿದ್ದನ್ನೂ ಮರೆಯುವಂತಿಲ್ಲ. ಹಾಗೆ ಇವರ
    ಕಷ್ಟಕಾಲದಲ್ಲಿ ಇವರಿಗೆ ನೆರವಾದ ಶ್ರೀ ನಾಗರಾಜ ಡಾಕ್ಟರ್, ಕೋಟೆಯ ರಾಮಣ್ಣ, ಬಳಗಾರ ವೆಂಕಟೇಶ ಮತ್ತಿತರ ಅನೇಕ ಸಹೃದಯರು ಕೂಡ
    ದಾಖಲಿಸಲು ಯೋಗ್ಯರಾಗಿದ್ದಾರೆ. ಶಶಿ ಸಹೋದರರು ಬರಿ ಯಜಮಾನಿಕೆಯಿಂದ ಯಶಸ್ಸು ಗಳಿಸಲಿಲ್ಲ, ಬದಲಾಗಿ ಬದ್ಧತೆಯ ದುಡಿಮೆಯಿಂದ ಮೇಲೆ ಬಂದರೆಂಬ ಹೆಜ್ಜೆ ಹೆಜ್ಜೆ ಅನುಭವವೂ ನನಗೂ ಇದೆ. ಚಪಾತಿ ಮಾಡಿದ ಮೊದಲೆರಡು ದಿನಗಳು ಚಪಾತಿ
    ಉಳಿದಾಗ ಅವುಗಳನ್ನೇ ತಿಂದು- ನೀರು ಕುಡಿದೂ ಮಲಗಿದ್ದನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ಇವರ ಊರು ಪಡುಬಿದ್ರೆಯ ಹತ್ತಿರ
    ಒಂದು ಹಳ್ಳಿ. ಅಲ್ಲಿಂದ ಅಜ್ಜಂಪುರಕ್ಕೆ ಬಂದವರು ಜೀವನಮೌಲ್ಯಗಳನ್ನು ರೂಡಿಸಿಕೊಂಡು, ಹೃದಯ ಶ್ರೀಮಂತಿಕೆ ಹಾಗೆಯೇ ಆರ್ಥಿಕ
    ಶ್ರೀಮಂತಿಕೆ ಎರಡನ್ನೂ ಗಳಿಸಿಕೊಂಡ ಮನಸ್ಸಿಲ್ಲದ ಮನಸ್ಸಿನಿಂದ ಅಜ್ಜಂಪುರದ ಹೊಟೆಲ್ ಉದ್ಯಮ ಬಿಟ್ಟು ಈಗ ಹತ್ತಿರದ ಹೊದು
    ರ್ಗದಲ್ಲಿ ಔಷಧ ಉದ್ಯಮದಲ್ಲಿ ತೊಡಗಿದ್ದಾರೆಂಬುದು ಅಜ್ಜಂಪುರದಲ್ಲಿ ಇತಿಹಾಸವಾದರೆ ಹೊಸದುರ್ಗದಲ್ಲಿ ವರ್ತಮಾನ!
    ಈ ಶಶಿ-ರಾಜ ಇವರೊಂದಿಗೇ ರಾಮನೊಂದಿಗೆ ಹನುಮಂತನಂತೆ ನಂಬಿಕೆಗೆ ಮತ್ತೊಂದು ಹೆಸರಾಗಿದ್ದವನೆಂದರೆ ಕೇಶವ. ಇವನು
    ಘಟ್ಟದ ಕೆಳಗಿನ ಸಿದ್ದಾಪುರವನು. ಮೊದಲು ಶಶಿಯೊಂದಿಗೇ ಇದ್ದು ಅನಂತರ ಅಜ್ಜಂಪುರ- ಹೊಸದುರ್ಗ ರಸ್ತೆಯಲ್ಲಿ ಪ್ರವಾಸಿ ಮಂದಿರ-
    ಸಂತೆ ಮೈದಾನದ ಎದುರು ವೀರಪ್ಪನವರ ಮನೆಯ ಪಕ್ಕ ಬಾಡಿಗೆ ಮನೆಯಲ್ಲಿ ಹೊಟೆಲ್ ಉದ್ಯಮ ಶುರುಮಾಡಿದ. ದುಡಿಮೆಗೆ ಮತ್ತೊಂ
    ದು ಹೆಸರೇ ಈ ಕೇಶವ. ಇವನೂ ತನ್ನದೇ ಛಾಪು ಮೂಡಿಸಿ, ಗಿರಾಕಿಗಳನ್ನೂ ಅಭಿಮಾನಿಗಳನ್ನೂ ಪಡೆದ. ಕೆಲವು ಕಾಲಾನಂತರ ಹೆಚ್ಚಿನ
    ದುಡಿಮೆ- ಅವಕಾಶಗಳ ಹಂಬಲದಿಂದ ಈಗ ಬೆಂಗಳೂರಿನಲ್ಲಿ ತನ್ನದೇ ಉದ್ಯಮ ಮಾಡುತ್ತಿದ್ದಾನೆಂದು ಕೇಳಿದ್ದೇನೆ.
    ಹೀಗೆ ನಾವು ಎಷ್ಟು ವರ್ಷ ಒಂದೂರಿನಲ್ಲಿ ಇದ್ದೆವು ಎಂಬುದಕ್ಕಿಂತ ಹೇಗಿದ್ದೆವು ಎಂಬುದು ಮುಖ್ಯ. ಈ ದೃಷ್ಟಿಯಲ್ಲಿ ಶಶಿ ಸಹೋದರರು ಮತ್ತು
    ಕೇಶವ ಕೂಡ ಅಜ್ಜಂಪುರದ ಹೊಟೆಲ್ ಉದ್ಯಮದಲ್ಲಿ ದಾಖಲಾಗಿರುತ್ತಾರೆ.
    ( ನನ್ನ ನೆನಪುಗಳನ್ನು ಹಂಚಿಕೊಳ್ಳಲು ಸಹಕರಿಸಿದ ಶಂಕರ ಅಜ್ಜಂಪುರ ಇವರಿಗೆ ಅನಂತ ಧನ್ಯವಾದಗಳು. ನಾನು ನೇರವಾಗಿ ಇಲ್ಲಿಯೇ
    ಬರೆದಿರುವುದರಿಂದ ನುಸುಳಿರುವ ಒಂದೆರಡು ತಪ್ಪುಗಳಿಗಾಗಿ ಓದುಗರ ಕ್ಷಮೆ ಕೇಳುತ್ತೇನೆ. ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ. )

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ