128) ಅಪರೂಪದ ವೈದ್ಯ ಡಾ. ನಾಗರಾಜ್
ಐದು ದಶಕಗಳ ಸಾರ್ಥಕ ಸೇವೆ
- ಅಪೂರ್ವ ಅಜ್ಜಂಪುರ
ಅಜ್ಜಂಪುರದ ಜಿ.ಎಂ. ಬಸಪ್ಪನವರ ಕಿರಾಣಿ ಅಂಗಡಿ ಬೆಂಚಿನ ಮೇಲೆ ಬ್ರಿಟಿಷ್ ಜೇಮ್ಸ್ ಬಾಂಡ್ ಸಿನೆಮಾ ಖ್ಯಾತಿಯ ಶಾನ್ ಕಾನರಿಯಂತೆ(Sean Connery) ದಟ್ಟ ಹಾಗೂ ದಪ್ಪವಾದ ಕಪ್ಪುಹುಬ್ಬಿನ ಒಬ್ಬ ವ್ಯಕ್ತಿ ಕುಳಿತಿದ್ದರು. ಬಿಳಿವರ್ಣದ ಅವರಿಗೆ ಅವರ ವಿಶಿಷ್ಟ ಹುಬ್ಬುಗಳು ಎರಡು ಕಮಾನುಗಳ ಆಕಾರದಲ್ಲಿ ದೃಷ್ಟಿಬೊಟ್ಟುಗಳಂತೆ ಎದ್ದು ಕಾಣಿಸುತ್ತಿದ್ದವು.
ಪೂರ್ಣ ಮುಖಕ್ಷೌರ ಮಾಡಿಕೊಂಡಿದ್ದ ಆ ವ್ಯಕ್ತಿ ಅಚ್ಚ ಬಿಳಿ ಬಣ್ಣದ ತುಂಡು ತೋಳಿನ ಅಂಗಿ ಮತ್ತು ಕಡು ಛಾಯೆಯ ಪ್ಯಾಂಟ್ ಧರಿಸಿದ್ದರು . ಒಂದು ಮಳಿಗೆಯನ್ನು ತಮ್ಮ ಕ್ಲಿನಿಕ್ಕಿಗಾಗಿ ಬಾಡಿಗೆ ಪಡೆಯಲು ಬಸಪ್ಪನವರ ಬಳಿ ಬಂದಿದ್ದರು. ಅವರ ಜೊತೆ ದಾವಣಗೆರೆಯಿಂದ ಒಬ್ಬ ವ್ಯಕ್ತಿ (ಶೆಟ್ರು ಸಿದ್ದಪ್ಪನವರ ಸಂಬಂಧಿಯಂತೆ) ಬಂದಿದ್ದರು.
ಬೆಂಚಿನ ಮೇಲೆ ಕುಳಿತಿದ್ದ ವ್ಯಕ್ತಿಯೇ ಬಿ.ಎಸ್. ನಾಗರಾಜ್. ಅವರು ದಾವಣಗೆರೆಯಲ್ಲಿ ಎಂ.ಬಿ.ಬಿ. ಎಸ್. ಮಾಡಿ ಕೆಲವೇ ವರ್ಷಗಳಾಗಿದ್ದವು. ಶೆಟ್ಟರ ಸಂಬಂಧಿಯಾದ ವ್ಯಕ್ತಿಯು ನಿಮ್ಮ ಮಳಿಗೆಯನ್ನು ನಾಗರಾಜ್ ಡಾಕ್ಟರಿಗೆ ಬಾಡಿಗೆ ಕೊಡಿ ಎಂದು ಶಿಫಾರಸು ಮಾಡಿದರು.
ಈ ಹಿಂದೆ ಅದೇ ಮಳಿಗೆಯಲ್ಲಿ ಡಾ.ರಾಮಪ್ಪ ಎಂಬುವವರು ಕ್ಲಿನಿಕ್ ತೆರೆದಿದ್ದರು. ಹಾಗಾಗಿ ಕಿರಾಣಿ ಅಂಗಡಿ ಮತ್ತು ಪಕ್ಕದ ಮಳಿಗೆಗಳ ಮಾಲೀಕರಾದ ಜಿ.ಎಂ. ಬಸಪ್ಪನವರು ಕೂಡಲೇ ಒಪ್ಪಿದ್ದರು. ಅವರಿಗೆ ಕೂಡ ಒಬ್ಬ ಡಾಕ್ಟರಿಗೇ ಮಳಿಗೆ ಬಾಡಿಗೆಗೆ ಕೊಡಬೇಕೆಂಬ ಮನಸ್ಸಿತ್ತು.
ಜೊತೆಗೆ ಪಕ್ಕದ ಮಳಿಗೆಗೆ ನಮ್ಮೂರಿನ ಮೆಡಿಕಲ್ ಸ್ಟೋರ್ ನ ಪಿ.ಜಿ. ಶ್ರೀನಿವಾಸ ಗುಪ್ತ ಅವರು ತಮ್ಮ ಔಷಧಿ ಅಂಗಡಿ ಸ್ಥಳಾಂತರಿಸಲು ಮುಂಗಡವಾಗಿ ಕಾದಿರಿಸಿದ್ದರು. ಇಬ್ಬರಿಗೂ ತಲಾ ಅರವತ್ತು ರೂಪಾಯಿ ತಿಂಗಳ ಬಾಡಿಗೆ ಮತ್ತು ಐದು ನೂರು ರೂಪಾಯಿ ಮುಂಗಡ ಎಂದು ನಿಗದಿಯಾಗಿತ್ತು.
* * *
ಈ ಘಟನೆ ನಡೆದದ್ದು 1976 ನೆಯ ಇಸವಿಯಲ್ಲಿ. ಅದರಲ್ಲೇನೂ ವಿಶೇಷವಿಲ್ಲ. ಕ್ಲಿನಿಕ್ ತೆರೆದ ಡಾ. ಬಿ.ಎಸ್. ನಾಗರಾಜ್ ವಿಶೇಷವಾದ ವ್ಯಕ್ತಿ. ಅವರ ಕೊನೆಯ ದಿನಗಳು ಸೇರಿದಂತೆ ಅದೇ ಮಳಿಗೆಯಲ್ಲಿ 48 ವರ್ಷಗಳ ಸುದೀರ್ಘ ಕಾಲ ತಮ್ಮ ಕಾಯಕವನ್ನು ನಡೆಸಿದರು. ದಿನಾಂಕ 5-10-2024, ಮಂಗಳವಾರ ಬೆಂಗಳೂರಿನಲ್ಲಿ ಕೊನೆಯುಸಿರು ಎಳೆದರು.
* * *
ಡಾ.ನಾಗರಾಜ್ ಕ್ಲಿನಿಕ್ ನಲ್ಲಿ ಎಲ್ಲ ವರ್ಗದ ರೋಗಿಗಳು ಬರುತ್ತಿದ್ದರು. ಸಿರಿವಂತರು, ಬಡವರು, ನಿರ್ಗತಿಕರು ಯಾರೇ ಬಂದರೂ ಭೇದ, ತಾರತಮ್ಯ ಮಾಡುತ್ತಿರಲಿಲ್ಲ. ತಮ್ಮ ಶುಲ್ಕಕ್ಕಾಗಿ ಡಾಕ್ಟರು ಒತ್ತಾಯಿಸಿದ್ದಿಲ್ಲ. ಕೂಲಿಕಾರರು, ಬಡವರಿಗೆ ಶುಲ್ಕ ಪಡೆಯದೆ ಬೆನ್ನು ತಟ್ಟಿ ಕಳುಹಿಸುತ್ತಿದ್ದರು. ಡಾ.ನಾಗರಾಜ್ ತುಂಬಾ ಸಂಕೋಚದ ವ್ಯಕ್ತಿ.
ಪರಿಚಿತರ ವ್ಯಕ್ತಿಗಳಿಗೆ ಸಲಹಾ ಚೀಟಿ, ಒಮ್ಮೊಮ್ಮೆ ಔಷಧಿಗಳನ್ನು ಕೊಟ್ಟೂ ಹಣ ಪಡೆಯದೆ ಬೆನ್ನು ತಟ್ಟಿ ಕಳುಹಿಸುತ್ತಿದ್ದರು. ಬೇರೆಡೆ ಕೇವಲ ವೈದ್ಯಕೀಯ ಸಲಹೆಗೆ ನೂರಾರು ತೆರುವ ಸ್ಥಿತಿವಂತರು ಈ ಸಂಕೋಚದ ದುರುಪಯೋಗ ಮಾಡಿಕೊಂಡಿದ್ದನ್ನು ಕಣ್ಣಾರೆ ಕಂಡಿದ್ದೇನೆ.
ಒಳ್ಳೆಯ ಕೈಗುಣದ ಡಾಕ್ಟರೆಂದು ನಾಗರಾಜ್ ಅವರು ಅತ್ಯಂತ ಜನಪ್ರಿಯತೆ ಗಳಿಸಿದ್ದರು. ನಾಗರಾಜಪ್ಪ ಡಾಕ್ಟರು ಎಂದು ನಮ್ಮೂರಿನ ಮತ್ತು ಸುತ್ತಮುತ್ತಲಿನ ಹಳ್ಳಿಜನರು ಕರೆಯುತ್ತಿದ್ದರು.
ಅರ್ಧ ತೋಳಿನ ಅಚ್ಚ ಬಿಳಿಬಣ್ಣದ ಅಂಗಿ ಮತ್ತು ಕಪ್ಪು ಛಾಯೆಯ ಪ್ಯಾಂಟ್ ಅವರ ನಿತ್ಯದ ದಿರಿಸಾಗಿತ್ತು. ನುಣ್ಣಗೆ ಕ್ಷೌರಿಸಿದ ಮುಖ. ಇದು ಅವರ ಟ್ರೇಡ್ ಮಾರ್ಕ್ ಎನ್ನಬಹುದು. ಅದು ಬದಲಾದದ್ಧೇ ಇಲ್ಲ. ಕ್ಲೀನ್ ಶೇವ್ ಮಾಡದೆ ಎಂದೂ ಇರುತ್ತಿರಲಿಲ್ಲ. ಐದು, ಹತ್ತು, ಇಪ್ಪತ್ತು, ಕೊನೆಗೆ ಐವತ್ತು ಶುಲ್ಕ ಎಂದರೂ ಎಷ್ಟೋ ಜನ ಸಲಹಾಚೀಟಿ ಪಡೆದು ಹಣ ಕೊಡದೆ ಹೋದದ್ದುಂಟು.
ಖಾಸಗಿ ಕ್ಲಿನಿಕ್ ಎಂಬ ಸಾಮಾನ್ಯ ಅರಿವೂ ಇಲ್ಲದೆ ಸರಕಾರಿ ಆಸ್ಪತ್ರೆಗೆ ಬಂದವರಂತೆ ರೋಗಿಗಳು ನಡೆದುಕೊಳ್ಳುತ್ತಿದ್ದರು. ಡಾ.ನಾಗರಾಜ್ ಇದನ್ನೆಲ್ಲ ಉಪೇಕ್ಷಿಸಿ, ಸೇವಾಮನೋಭಾವದಿಂದ ರೋಗಿಗಳ ತಪಾಸಣೆ, ಚಿಕಿತ್ಸೆಗಳನ್ನು ಕೈಗೊಳ್ಳುತ್ತಿದ್ದರು.
ಕೊನೆಗಾಲದಲ್ಲಿ ನಡೆಯಲು ಕಷ್ಟವಾದರೂ ಕ್ಲಿನಿಕ್ ಗೆ ಬರಲು ತಪ್ಪಿಸುತ್ತಿರಲಿಲ್ಲ. ಮೆಟ್ಟಿಲು ಹತ್ತಲು ಕಷ್ಟವಾದಾಗ ಉಕ್ಕಿನ ಕೈಪಿಡಿ (ರೇಲಿಂಗ್ಸ್) ಹಾಗೂ ಮೆಟ್ಟಿಲುಗಳ ಮೇಲೆ ಇಳಿಜಾರು ಮಾಡಿಸಿಕೊಂಡು ಹತ್ತಿ ನಿತ್ಯವೂ ಕ್ಲಿನಿಕ್ ಗೆ ಬರುತ್ತಿದ್ದರು.
ಇತ್ತೀಚೆಗೆ ತೀವ್ರವಾದ ಬೆನ್ನು-ಕಾಲು ನೋವಿನ ನಡುವೆಯೂ ಕ್ಲಿನಿಕ್ಕಿಗೆ ಬರುತ್ತಿದ್ದರು. ರೇಲಿಂಗ್ಸ್ ಹಿಡಿದು ಹತ್ತಲೂ ಕಷ್ಟವಾಗಿ, ಅವರು ಜನರ ನೆರವಿನೊಂದಿಗೆ ಕ್ಲಿನಿಕ್ಕಿಗೆ ಬಂದು, ರೋಗಿಗಳ ತಪಾಸಣೆ ಮಾಡಿ, ಔಷಧೋಪಚಾರ ಮಾಡುತ್ತಿದ್ದರು. ಅವರಿಗೆ ಅವರ ವೈದ್ಯಕೀಯ ವೃತ್ತಿ ಅಷ್ಟು ಪ್ರಿಯವಾಗಿತ್ತು. ಗುರುರಾಜ ಕ್ಲಿನಿಕ್ ಗೆ ಇನ್ನು ಡಾ.ನಾಗರಾಜ್ ಶಾಶ್ವತವಾಗಿ ಬರುವುದಿಲ್ಲ ಎಂಬುದನ್ನು ನೆನೆದು, ಅಜ್ಜಂಪುರ ಹಾಗೂ ಸುತ್ತಲಿನ ಹಳ್ಳಿಗಳ ಜನ ಅದನ್ನು ಅರಗಿಸಿಕೊಳ್ಳಲಾರದೆ ಮಮ್ಮಲ ಮರುಗಿದರು.
* * *
ಡಾ.ನಾಗರಾಜ್ ಅವರು ನಾಯಿಬೆಕ್ಕುಗಳೆಂದರೆ ಅತೀವ ಪ್ರೀತಿ. ನಾಯಿಗಳು ರೋಗಿಗಳು ಕೂರುವ ಬೆಂಚಿನ ಮೇಲೆ ಮಲಗಿದರೂ ಓಡಿಸುತ್ತಿರಲಿಲ್ಲ. ಪಕ್ಕದ ಜಯರಾಮ ಅಯ್ಯಂಗಾರ್ ಬೇಕರಿಯ ಬ್ರೆಡ್-ಬಿಸ್ಕತ್ತುಗಳು ಕೊಂಡುತಂದು ಪುಷ್ಕಳವಾಗಿ ತಿನ್ನಿಸುತ್ತಿದ್ದರು. ಮನೆಯ ಬಳಿಯೂ ಅಷ್ಟೇ. ನಾಯಿ-ಬೆಕ್ಕುಗಳಿಗೆ ಇದೇ ಬಗೆಯ ಉಪಚಾರ. ದಿನವೂ ಹತ್ತಾರು ಬೆಕ್ಕುಗಳು ಇವರಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. ಡಾಕ್ಟರು ಪರಿಸರ ಪ್ರೇಮಿಯೂ ಆಗಿದ್ದರು. ಅವರ ಎರಡು ಹಿತ್ತಲುಗಳಲ್ಲಿ ಮರಗಳನ್ನು ಬೆಳೆಸಿದ್ದರು. ಅವರ ಹುಟ್ಟೂರು ಕೊಪ್ಪ ತಾಲೂಕಿನ ಬ್ರಹ್ಮನ ಕೋಡಿನ ಮಲೆನಾಡಿನ ಪರಿಸರವನ್ನು ಅಜ್ಜಂಪುರದ ತಮ್ಮ ಮನೆಯ ಸುತ್ತ ತಾವೇ ನಿರ್ಮಾಣ ಮಾಡಿಕೊಂಡಿದ್ದರು.
ಅಜ್ಜಂಪುರದ ಅವರ ಕ್ಲಿನಿಕ್, ಕೋಟೆಯಲ್ಲಿದ್ದ ಸ್ವಂತ ಮನೆ, ಹಿತ್ತಲುಗಳಲ್ಲಿರುವ ದೊಡ್ಡ ದೊಡ್ಡ ಮರಗಳ ಪರಿಸರ ಬಿಕೋ ಎನ್ನುತ್ತಿವೆ. ಅವರು ಪೋಷಿಸಿದ್ದ ನಾಯಿ-ಬೆಕ್ಕುಗಳು ಅನಾಥವಾದವು. ಡಾಕ್ಟರು ಬಾರದೆ ಇದ್ದರೂ ದಿಕ್ಕು ತೋಚದೆ ಅವರಿದ್ದ ಪರಿಸರದಲ್ಲೇ ಅವು ಓಡಾಡಿಕೊಂಡಿವೆ. ಕೋಟೆಯ ಮನೆಗೆ ಹಾಗೂ ಪೇಟೆಯ ಗುರುರಾಜ ಕ್ಲಿನಿಕ್ಕಿಗೆ ಡಾ. ನಾಗರಾಜ್ ಇನ್ನೆಂದೂ ಬರಲಾರರು ಎಂದು ಅವುಗಳಿಗೇನು ಗೊತ್ತು?
-------------------
ನಮ್ಮ ಪ್ರೀತಿಯ
"ಡಾಕ್ಟರ್ ಮಾಮಾ"
- ಅನೂಪ್
ಸಾಮಾನ್ಯವಾಗಿ ನಾನು ಫೇಸ್ಬುಕ್ ನಲ್ಲಿ ಯಾವ ವಿಚಾರವನ್ನು ಬರೆದು ಹಂಚಿಕೊಳ್ಳುವುದಿಲ್ಲ
ಇದೊಂದು ವಿಚಾರ ನನಗೆ ಹಂಚಿಕೊಳ್ಳಲೇ ಬೇಕು ಅನಿಸುತ್ತಿದೆ. ಅದು ನಮ್ಮ ನಿಮ್ಮೆಲ್ಲರ ನೆಚ್ಚಿನ ಪ್ರೀತಿಯ
ಡಾ| ನಾಗರಾಜ್ ಪ್ರೀತಿಯಿಂದ ನಾವು ಕರೆಯುತ್ತಿದ್ದ
"ಡಾಕ್ಟರ್ ಮಾಮ" ಮಂಗಳವಾರ ರಾತ್ರಿ 10.30 ಕ್ಕೆ
ಬೆಂಗಳೂರಿನ ಆಸ್ಪತ್ರೆಯಲ್ಲಿ ಅಗಲಿದ ಸಂಗತಿ.
ಅವರು ಹುಟ್ಟಿದ್ದು ಕೊಪ್ಪ ತಾಲೂಕಿನ ಬ್ರಹ್ಮನಕೋಡು ಎಂಬ ಪುಟ್ಟ ಗ್ರಾಮದಲ್ಲಿ.
ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿ ವೃತ್ತಿ ಆರಂಭಿಸಿದ್ದು ಅಜ್ಜಂಪುರದಲ್ಲಿ. 1975 ನೇ ಇಸವಿಯಲ್ಲಿ ಆರಂಭವಾದ ವೈದ್ಯಕೀಯ ವೃತ್ತಿ 2024 ಸಪ್ಟೆಂಬರ್ 3 ತಾರೀಕಿನವರೆಗೂ ನಿರಂತರ ಸೇವೆಯನ್ನು ಸಲ್ಲಿಸುತ್ತಾ ಬಂದರು.
ಅಜ್ಜಂಪುರದಲ್ಲಿದ್ದ ಪ್ರತಿದಿನವೂ ಅವರ ಚಟುವಟಿಕೆ ಆರಂಭವಾಗುತ್ತಿದ್ದುದು ಯೋಗ ಮತ್ತು ಸೂರ್ಯ ನಮಸ್ಕಾರದ ಮೂಲಕ. ನಂತರ ಅವರು ಓದುತ್ತಿದ್ದ ಪೇಪರ್ ಗಳ ಸಂಖ್ಯೆ 4/5 ಕಿಂತ ಕಮ್ಮಿ ಏನು ಇರುತ್ತಿರಲಿಲ್ಲ.
ಬಹುತೇಕರಿಗೆ ನಮ್ಮ ಡಾಕ್ಟರ್ ನೀಡುತ್ತಿದ್ದದ್ದು ಉಚಿತ ಚಿಕಿತ್ಸೆ, ಅದರಲ್ಲೂ ಇಂಜೆಕ್ಷನ್,ಮಾತ್ರೆ, ಔಷಧಿ, ಡ್ರಿಪ್ ಬಾಟಲ್, ಇನ್ನೂ ಕೆಲವರಿಗೆ ರಕ್ತ ಪರೀಕ್ಷೆ ಮಾಡಿಸಿದ ದುಡ್ಡನ್ನು ಅವರೇ ಕೊಟ್ಟಿದ್ದುಂಟು, ಬಲವಂತವಾಗಿ ಹಣ ಕೊಡೋಕೆ ಹೋದ್ರೆ ನಿಮಗೆ ದುಡ್ಡು ಹೆಚ್ಚಾಗಿದೆಯಾ ಅಂತ ಹೇಳಿ ಬೈದು ಕಳಿಸುತ್ತಿದ್ದರು.
ಅವರ ಪಕ್ಕದ ಮನೆಯಲ್ಲಿ ಇದ್ದ ನಮಗೆ ಅವರ ತೋರಿಸುತ್ತಿದ್ದ ಪ್ರೀತಿ ವಿಶ್ವಾಸ ಬೇರೆ.
ನನ್ನ ಹಾಗೂ ನನ್ನ ತಮ್ಮನನ್ನು ಪ್ರೀತಿಯಿಂದ ಬೇರೆ ಹೆಸರಿನಲ್ಲಿ ಕರೆಯುತ್ತಿದ್ದರು "ಹಣ್ಣನ್ನು ಹಂಚಿ ತಿನ್ನಬೇಕು "ಎನ್ನುವ ಪದದ ನಿಜವಾದ ಅರ್ಥ ನಮ್ಮ ಡಾಕ್ಟರ್ ಅವರು ತರುತ್ತಿದ್ದ ಪ್ರತಿ ಹಣ್ಣನ್ನು ಹೆಚ್ಚಿ ನಮಗೂ ಹಾಗೂ ಅವರ ಅಕ್ಕ ಪಕ್ಕದಲ್ಲಿರುವ ಎಲ್ಲರಿಗೂ ಕೊಡುತ್ತಿದ್ದರು.
ಡಾಕ್ಟರ್ ಇಷ್ಟಕ್ಕೆ ಮಾತ್ರ ಸೀಮಿತ ಅಲ್ಲ. ಪರಿಸರದ ಕಾಳಜಿಯ ಮತ್ತು ಪ್ರಾಣಿ ಪ್ರೇಮದ ಬಗ್ಗೆ ಅವರದ್ದು ಒಂದು ಕೈಮುಂದೆ.
ಸೋನಿ, ಗುಂಡ, ಜಾನಿ, ಜಿಮ್ಮಿ, ಒಂದೇ ಎರಡೇ. ಅವರ ಸಾಕಿದ್ದ ನಾಯಿಗಳಲ್ಲದೇ
ಬೀದಿ ನಾಯಿಗಳಿಗೆ ತೊಂದರೆಯಾಗಿದ್ದನ್ನು ಕಂಡರೆ ಅವುಗಳನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿ ತಮ್ಮ ಹಣದಲ್ಲಿ ಚಿಕಿತ್ಸೆ ನೀಡಿ ಕರೆದುಕೊಂಡು ಬರುತ್ತಿದ್ದರು.
ಇನ್ನು ಅವರ ಮನೆಯಲ್ಲಿ ಇದ್ದ ಬೆಕ್ಕುಗಳ ಸಂಖ್ಯೆ ಎಣಿಸಲು ಸಾಧ್ಯವಿಲ್ಲ. ಇನ್ನು ನಮ್ಮ ಕೋಟೆ ಭಾಗದಲ್ಲಿರುವ ಬಹುತೇಕ ಮರಗಳನ್ನು ಬಳಸಿದ್ದು ಕೂಡ ಅವರೇ. ಡಾಕ್ಟರ್ ಮನೆಯ ಹಿತ್ತಿಲಿನಲ್ಲಿ ಇರುವ ಹಲವು ಬಗೆಯ ಗಿಡಗಳು ಗಿಡಮರಗಳ ಬಗ್ಗೆ ಅವರಿಗಿದ್ದ ಪ್ರೇಮದ ಕಾಳಜಿಯನ್ನು ತೋರಿಸುತ್ತದೆ.
ಮರಗಳನ್ನು ಕಡಿದಾಗ ಅವರಿಗೆ ಆಗುತ್ತಿದ್ದ ಬೇಜಾರು ಮತ್ತು ಅವರಿಂದ ಬೈಸಿಕೊಳ್ಳುತ್ತಿದ್ದವರಿಗೆ ಗೊತ್ತು. ಹೀಗೆ ಒಂದಲ್ಲ ಎರಡಲ್ಲ ಅವರ ಸಾಮಾಜಿಕ ಕಾಳಜಿ.
ವೈದ್ಯರಾಜ ನಮಸ್ತುಭ್ಯಂ॥ ಯಮರಾಜ ಸಹೋದರ॥
ಯಮಸ್ತು ಹರತಿ ಪ್ರಾಣಾನ್॥ ವೈದ್ಯಃ ಪ್ರಾಣಾನ್ ಧನಾನಿ ಚ॥
(ಯಮರಾಜನ ಅಣ್ಣನಾದ ವೈದ್ಯನೇ, ನಿನಗೆ ನಮಸ್ಕಾರ. ಯಮರಾಜನು ರೋಗಿಗಳ ಪ್ರಾಣವನ್ನಷ್ಟೇ ಕೊಂಡೊಯ್ಯುತ್ತಾನೆ. ತಾವಾದರೊ, ರೋಗಿಗಳ ಪ್ರಾಣದ ಜೊತೆಗೆ ಅವರ ಹಣವನ್ನು ಕೊಂಡೊಯ್ಯುತ್ತೀರಿ!)
ಇತ್ತೀಚಿನ ದಿನಗಳಲ್ಲಿ ಕೆಲವು ಡಾಕ್ಟರ್ ಗಳು ನಡೆದುಕೊಳ್ಳುತ್ತಿರುವುದು ಇದೇ ರೀತಿ, ಆದರೆ ಇದರ ತದ್ವಿರುದ್ಧವಾಗಿ ಬದುಕಿ "ವೈದ್ಯೋ ನಾರಾಯಣೋ ಹರಿಃ" ಎಂಬ ಪದಕ್ಕೆ ನಿಜವಾದ ಅರ್ಥ ಕೊಟ್ಟು ಸಮಾಜ ಸೇವೆ ಬಡವರ ಪಾಲಿಗೆ ವೈದ್ಯರಾಗಿ ಸಲ್ಲಿಸಿದವರು ನಮ್ಮ ನಾಗರಾಜ್ ಡಾಕ್ಟರ್
ಮತ್ತೆ ಇಂಥ ವೈದ್ಯರು ನಮ್ಮ ಅಜ್ಜಂಪುರಕ್ಕೆ ಸಿಗುವುದು ಕಷ್ಟ
ಡಾಕ್ಟರು ಮಾಮಾ
ನಿಮಗೊಂದು ನಮನ
ಓಂ ಶಾಂತಿ🙏
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ