128) ಸರಳ ವ್ಯಕ್ತಿತ್ವದ ಅಜ್ಜಂಪುರದ ಜನಪ್ರಿಯ ವೈದ್ಯ ಡಾ| ಬಿ.ಎಸ್.ನಾಗರಾಜ್
ವೈದ್ಯ ವೃತ್ತಿಯನ್ನು ಸೇವೆ ಎಂದು ಪರಿಗಣಿಸಿ ದುಡಿದು ಹೆಸರು ಮಾಡಿ ಸಮಾಜಕ್ಕೆ ಸೇವೆ ಸಲ್ಲಿಸಿದ ಅನೇಕ ವೈದ್ಯ ಮಹನೀಯರು ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದವರೇ ಆಗಿದ್ದಾರೆ. ಅದಕ್ಕೆ ವೈದ್ಯಕೀಯ ವೃತ್ತಿಗೆ ಅಂದು ಇದ್ದ ಗೌರವ ಮತ್ತು ಘನತೆಗಳೇ ಕಾರಣ.
ಗ್ರಾಮೀಣ ಪ್ರದೇಶಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ದುಡಿದ ವೈದ್ಯರು, ಖಾಸಗಿ ವಲಯದ ವೈದ್ಯರು ಕೂಡ ಕೇವಲ ಎಂ ಬಿ ಬಿ ಎಸ್ ಮಾಡಿ ಜನರ ಆರೋಗ್ಯವನ್ನು ಕಾಪಾಡಿದವರು. ಅಂಥ ವೈದ್ಯರು ಜನರ ಸ್ಮರಣೆಯಲ್ಲಿ ಎಂದಿಗೂ ಇರುತ್ತಾರೆ.
ಹಾಗೆ ನನ್ನ ಊರು ಅಜ್ಜಂಪುರದಲ್ಲಿ ನಾನು ನೆನಪಿಸಿಕೊಳ್ಳುವ ಇಬ್ಬರು ವೈದ್ಯರೆಂದರೆ ಹಿಂದೆ ಇದ್ದ ಹೋಮಿಯೋಪತಿ ವೈದ್ಯ ಡಾಕ್ಟರ್ ಕರೀಮ್ ಖಾನ್ ಮತ್ತು ಸುಮಾರು ಅರ್ಧ ದಶಕಗಳ ಕಾಲ ವೈದ್ಯಕೀಯ ಸೇವೆಯನ್ನು ನೀಡಿದ ಡಾ. ಬಿ. ಎಸ್. ನಾಗರಾಜ್.
ಡಾ. ಬಿ.ಎಸ್. ನಾಗರಾಜ್ ಅಲ್ಪ ಕಾಲದ ಅಸ್ವಸ್ಥತೆಯ ನಂತರ ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಕೋಟೆಯಲ್ಲಿ ವಾಸವಾಗಿದ್ದ ಈ ವೈದ್ಯರು ನಮ್ಮ ಕುಟುಂಬ ಮಾತ್ರವಲ್ಲದೆ ಊರಿನ ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು.
ಕಪ್ಪು ಪ್ಯಾಂಟು ಬಿಳಿಯ ಬುಷ್ ಶರ್ಟಿನಲ್ಲಿ ಇರುತ್ತಿದ್ದ ಎತ್ತರದ ನಿಲುವಿನ ಡಾ. ನಾಗರಾಜ್ ಎಂದೂ ಆಡಂಬರಕ್ಕಾಗಲೀ, ದುಬಾರಿ ವೆಚ್ಚದ ಚಿಕಿತ್ಸೆಗಳಿಗಾಗಲೀ ಗಮನ ನೀಡಿದವರಲ್ಲ.
ಅವರು ಅಜ್ಜಂಪುರಕ್ಕೆ ಬಂದ ದಿನಗಳಲ್ಲಿ ನನ್ನ ತಂದೆ ಅಜ್ಜಂಪುರ ಕ್ಷೇತ್ರಪಾಲಯ್ಯನವರು ನೀಡಿದ ಸಹಕಾರದ ಬಗ್ಗೆ ವಿಶೇಷ ಗೌರವ ಹೊಂದಿದ್ದರು. ಅವರು ಕ್ಲಿನಿಕ್ ಅನ್ನು ಪೂಜೆ ಮಾಡಿ ಆರಂಭಿಸಿದಾಗ ಸ್ಥಳೀಯ ಪುರೋಹಿತ ಕ್ಷೇತ್ರಪಾಲಯ್ಯನವರ ಬೆಂಬಲವನ್ನು ಸ್ಮರಿಸುತ್ತಿದ್ದರು.
ಅರ್ಧ ಶತಮಾನದ ಹಿಂದೆ ಎಂಬಿಬಿಎಸ್ ದೊಡ್ಡ ಪದವಿಯೇ ಆಗಿತ್ತು. ಡಾ| ನಾಗರಾಜ್ ಅಜ್ಜಂಪುರದಲ್ಲಿ ಕ್ಲಿನಿಕ್ ತೆರೆದಾಗ ಆಗಿದ್ದ ಎಲ್ಎಂಪಿ, ಆರ್. ಎಂ. ಪಿ. ನಾಟಿ ವೈದ್ಯರ ವಿರೋಧವನ್ನು ಎದುರಿಸಿದ್ದುಂಟು.
ಮುಂದೆ ನಮ್ಮ ಕುಟುಂಬವು ಅಜ್ಜಂಪುರವನ್ನು ಬಿಟ್ಟು ಬೆಂಗಳೂರು ಸೇರಿದಾಗ, ಊರಿನ ಹಳೆಯ ಮನೆಯ ದೇಖರೇಖಿಗಳನ್ನು ಅವರೇ ನೋಡಿಕೊಂಡರು. ಹಣಕಾಸಿನ ವಿಷಯದಲ್ಲಿ ಅತ್ಯಂತ ಶಿಸ್ತಿನ ವ್ಯಕ್ತಿಯಾಗಿದ್ದ ಅವರು ನಾನು ಹೋದಾಗಲೆಲ್ಲ ತುಂಬಾ ಪ್ರೀತಿ ಮತ್ತು ಗೌರವಗಳಿಂದ ಮಾತನಾಡಿಸುತ್ತಿದ್ದರು. ನಾನು ಊರಿನ ಸಂಪರ್ಕವನ್ನು ಕಳೆದುಕೊಳ್ಳದೇ ಇದ್ದ ಬಗ್ಗೆ ಅವರಿಗೆ ಸಂತೋಷವಿತ್ತು.
ಮುಂದೆ ಊರಿನಲ್ಲಿ ಹೊಸ ವೈದ್ಯರು ದವಾಖಾನೆಗಳು ಬಂದರೂ ಕೂಡ, ನಾನೇ ಗಮನಿಸಿದಂತೆ ಅವರು ಕ್ಲಿನಿಕ್ ಗೆ ಹೊರಡುವ ಮೊದಲೇ ಮನೆಯ ಬಾಗಿಲಲ್ಲಿ ಜನರು ಕಾದಿರುತ್ತಿದ್ದರು. ಗ್ರಾಮೀಣ ಜನತೆಗೆ ವೈದ್ಯರೊಡನೆ ವ್ಯವಹರಿಸಬೇಕಾದಾಗ ಇರಬೇಕಿರುವ ಗೌರವ ತಾಳ್ಮೆಗಳ ಅಭಾವವನ್ನೂ ನೋಡಿದ್ದೆ. ಅವುಗಳಿಂದ ಅವರೆಂದೂ ಬೇಸರಿಸಿಕೊಳ್ಳದೆ, ಸಮಾಧಾನದಿಂದ ವರ್ತಿಸುತ್ತಿದ್ದರು.
ಪ್ರಾಣಿಗಳ ಬಗ್ಗೆಯೂ ಅಪರಿಮಿತ ಪ್ರೀತಿ ಹೊಂದಿದ್ದ ಡಾ| ನಾಗರಾಜ್ ರವರ ಮನೆಯಲ್ಲಿ ನಾಯಿ, ಬೆಕ್ಕುಗಳು ಸಹಜೀವನ ನಡೆಸುತ್ತಿದ್ದವು. ಅವರ ಕ್ಲಿನಿಕ್ ನ ಹಳೆಯ ಮರದ ಬೆಂಚಿನ ಮೇಲೆ ಒಂದು ನಾಯಿ ಕುಳಿತಿರುತ್ತಿತ್ತು. ಅದನ್ನು ಅಸ್ಪೃಶ್ಯ ಎಂದು ಜನರಾಗಲಿ, ವೈದ್ಯರಾಗಲಿ ಎಂದೂ ಭಾವಿಸಿರಲಿಲ್ಲ!
ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಲೇಖನವನ್ನು ಈ ಮೊದಲೇ ಪ್ರಕಟಿಸಲು ಪ್ರಯತ್ನಿಸಿದಾಗ, "ಅದೆಲ್ಲ ಏನು ಬೇಡ" ಎಂದು ಸರಳವಾಗಿ ನಿರಾಕರಿಸಿದ್ದರು. ಅದು ಹೇಗೋ ಮಿತ್ರ ಮಲ್ಲಿಕಾರ್ಜುನ ಅಜ್ಜಂಪುರ ಅವರು ಮಾಹಿತಿ ಸಂಗ್ರಹಿಸಿ ಪ್ರಕಟಿಸಿರುವ ಲೇಖನದ ಕೆಲವು ಅಂಶಗಳು ಇಲ್ಲಿವೆ. ಅವರಿಗೆ ಕೃತಜ್ಞತೆಗಳು.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಸಮೀಪದ ಬ್ರಹ್ಮನ ಕೋಡು ಅವರ ಸ್ವಗ್ರಾಮ.
ಹತ್ತನೇ ತರಗತಿಯನ್ನು ಅತ್ಯುನ್ನತ ಶ್ರೇಣಿಯಲ್ಲಿ ಮುಗಿಸಿ ನಂತರ ಮದ್ರಾಸ್ ನ ಪಾಚಿಯಪ್ಪ ಕಾಲೇಜಿನಲ್ಲಿ ಪಿಯುಸಿ ಮತ್ತು ಬಿ.ಎಸ್ಸಿ. ಪದವಿಯನ್ನು ಮುಗಿಸಿದರು. ನಂತರ 1976 ರಲ್ಲಿ ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನ ಎರಡನೆಯ ಬ್ಯಾಚ್ ನಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆದರು.
ಸರಳತೆ ಮೃದು ಮಾತು ಮತ್ತು ರೋಗಿಗಳೊಂದಿಗೆ ಉತ್ತಮ ಬಾಂಧವ್ಯಗಳಿಂದಾಗಿ ಜನಾನುರಾಗಿಯಾದರು. ಇವರಿಂದ ಚಿಕಿತ್ಸೆ ಪಡೆಯದ ಊರಿನ ಜನರೇ ಇಲ್ಲವೆಂದರೆ ಅದು ಅತಿಶಯೋಕ್ತಿಯಲ್ಲ.
ಅಗತ್ಯತೆ ಮೀರಿ ಔಷಧಿಗಳನ್ನು ಬರೆದು ಕೊಡದೇ ಅತ್ಯಂತ ಕಡಿಮೆ ಶುಲ್ಕವನ್ನು ರೋಗಿಗಳಿಂದ ಪಡೆಯುತ್ತಿದ್ದರು. ಹಳ್ಳಿಗಳಿಂದ ಬರುತ್ತಿದ್ದ ಬಡರೋಗಿಗಳ ಹಣದ ಕೊರತೆಯನ್ನು ನೋಡಿ ಇವರೇ ಬಸ್ ಚಾರ್ಜ್ ಹಣವನ್ನು ಕೊಟ್ಟು ಕಳುಹಿಸಿದ ಘಟನೆಗಳು ಸಾಕಷ್ಟಿವೆ.
ಪ್ರಥಮ ಎಂಬಿಬಿಎಸ್ ಪ್ರವೇಶಕ್ಕೆ ಆಗ ಐದು ಸಾವಿರ ರೂಗಳನ್ನು ಮನೆಯವರು ಕಷ್ಟಪಟ್ಟು ಹೊಂದಿಸಿದ್ದನ್ನು,
ಅಜ್ಜಂಪುರದ ಶೆಟ್ರ ಸಿದ್ದಪ್ಪನವರ ಮಕ್ಕಳಾದ ಅಜ್ಜಪ್ಪನವರ ಪ್ರೇರಣೆಯಿಂದ ಅಜ್ಜಂಪುರಕ್ಕೆ ಬರಲು ಸಾಧ್ಯವಾಯಿತು ಎಂದು ನೆನಪಿಸಿಕೊಂಡಿದ್ದರು.
ಅಜ್ಜಂಪುರ ಜನತೆಯ ಮನದಲ್ಲಿ ಸದಾ ಸ್ಮರಣೀಯರಾಗಿ ಉಳಿಯುವ ಡಾ. ಬಿ.ಎಸ್. ನಾಗರಾಜ್ ಇವರಿಗೆ ಗೌರವಪೂರ್ವಕ ಈ ನುಡಿ ನಮನ ಅರ್ಪಣೆ.
-00000000-
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ