12. ಅಜ್ಜಂಪುರ ಗ್ರಾಮದೇವತೆ ಕಿರಾಳಮ್ಮ - ಐತಿಹ್ಯ - ಸ್ಥಳಪುರಾಣ - ಚರಿತ್ರೆ



ಅಜ್ಜಂಪುರಕ್ಕೆ ಸಂಬಂಧಿಸಿದ ಈ ಬ್ಲಾಗ್ ಗ್ರಾಮದೇವತೆಯಿಂದಲೇ ಆರಂಭವಾಗುವಂತಿದ್ದರೆ ಔಚಿತ್ಯಪೂರ್ಣವಾಗಿರುತ್ತಿತ್ತು. ಪ್ರಸ್ತುತ ಲೇಖನವನ್ನು ಬಹಳ ಹಿಂದೆಯೇ ಗೆಳೆಯ ಮಂಜುನಾಥ ಅಜ್ಜಂಪುರ ಸಿದ್ಧಪಡಿಸಿಟ್ಟಿದ್ದರು. ಆದರೆ ಅದು ದೊರೆತದ್ದು ಈಗ.  ಆರಂಭಕ್ಕೇ ಪ್ರಕಟಿಸಬೇಕಿದ್ದ ಈ ಲೇಖನ ತಡವಾಗಿಯಾದರೂ ಪ್ರಕಟವಾಗುತ್ತಿದೆ. 

ನೀವೆಲ್ಲರೂ ಗಮನಿಸಿರಬಹುದಾದಂತೆ ವಿಕಿಪೀಡಿಯಾ ನೀಡಿರುವ ಮಾಹಿತಿಯಲ್ಲಿ ಅಜ್ಜಂಪುರಕ್ಕೆ ಕೇರಳ ಎಂಬ ಹೆಸರಿತ್ತು. ಕೇರಳ, ಕಿರಾಳಿಪುರ ಇತ್ಯಾದಿ ಬದಲಾವಣೆಗಳಾಗಿ, ಈಗಿರುವ "ಅಜ್ಜಂಪುರ" ಎಂಬ ಹೆಸರು ಹೇಗೆ ಬಂದಿತೆಂಬುದರ ಬಗ್ಗೆಯೂ ಈ ಹಿಂದೆ ಅವರೇ ಬರೆದಿರುವ ಲೇಖನವಿದೆ. ಈ ವಿಷಯದ ಬಗ್ಗೆ ಇನ್ನಷ್ಟು ಐತಿಹಾಸಿಕ ಮಾಹಿತಿಗಳು ದೊರೆಯುವಂತಾದರೆ ಕಳಿಸಿಕೊಡಿ. 

ಈ ಲೇಖನದ ಜತೆಯಲ್ಲಿ ನಾನು ಸಂಗ್ರಹಿಸಿದ ಕಿರಾಳಮ್ಮ ದೇವಿಯ ಈಗಿರುವ ವಿಗ್ರಹ, ಉತ್ಸವ ಮೂರ್ತಿಯ ಚಿತ್ರಗಳು, ಮಂಜುನಾಥ ಅಜ್ಜಂಪುರ ಇವರು ಇತ್ತೀಚೆಗೆ ತೆಗೆದಿರುವ ಕಿರಾಳಮ್ಮ ದೇವಾಲಯದ ಛಾಯಾಚಿತ್ರಗಳಿವೆ.



                                                 ಗರ್ಭ ಗುಡಿಯಲ್ಲಿರುವ ಕಿರಾಳಮ್ಮನ ಮೂಲ ವಿಗ್ರಹ 

ಕಿರಾಳಮ್ಮನ ಉತ್ಸವ ಮೂರ್ತಿ 

ಅಜ್ಜಂಪುರ ಗ್ರಾಮದೇವತೆ ಕಿರಾಳಮ್ಮ


ಐತಿಹ್ಯ - ಸ್ಥಳಪುರಾಣ - ಚರಿತ್ರೆ

ಕರ್ನಾಟಕ ಸರಕಾರವು ಜಿಲ್ಲಾವಾರು ಗೆಜೆಟಿಯರ್ (ಗೆಜೆಟ್ ಅಲ್ಲ, ಗೆಜೆಟಿಯರ್ - ಭೂವಿವರ ಸಂಗ್ರಹ) ಪ್ರಕಟಿಸಿದೆ. ರಲ್ಲಿ ರಚಿಸಲಾಗಿರುವ ಚಿಕ್ಕಮಗಳೂರು ಗೆಜೆಟಿಯರ್‌ನಲ್ಲಿ  ಅಜ್ಜಂಪುರದ ಬಗ್ಗೆ, ಇಲ್ಲಿನ ಗ್ರಾಮದೇವತೆ ಕಿರಾಳಮ್ಮನ ಬಗ್ಗೆ ಕೆಲವು ಸ್ವಾರಸ್ಯಪೂರ್ಣ ವಿವರಗಳಿವೆ. ಆದರೆ ಎಪ್ಪತ್ತು ವರ್ಷಗಳ ಹಿಂದೆ ಅಂದಿನ ಮಹಾರಾಜರ ಸರಕಾರ ಪ್ರಕಟಿಸಿದ್ದ ಕಡೂರು ಜಿಲ್ಲಾ ಗೆಜೆಟಿಯರ್ ನಲ್ಲಿ ಇನ್ನೂ ಹೆಚ್ಚಿನ ವಿವರಗಳಿವೆ. ನನ್ನ ತಂದೆ ಹಿರಿಯ ಪತ್ರಕರ್ತ ಶ್ರೀ ಎ.ಪಿ. ನಾಗರಾಜಶೆಟ್ಟರು ಸಂಗ್ರಹಿಸಿ ಬರೆದಿಟ್ಟುಕೊಂಡಿರುವ ವಿವರಗಳಲ್ಲಿ ಕೆಲವನ್ನು ಇಲ್ಲಿ ನೀಡುತ್ತಿರುವೆ.

                                                         ದೇವಾಲಯದ ಹೊರ ನೋಟ

ಅಜ್ಜಂಪುರದ ಮುಂಚಿನ ಹೆಸರು ಕಿರಾಳಿಪುರ. ಇಲ್ಲಿನ ಗ್ರಾಮದೇವತೆ ಕಿರಾಳಮ್ಮ. ಕಿರಾಳಮ್ಮನ ದೇಗುಲಕ್ಕೆ ಒಂದು ಸಾವಿರ ವರ್ಷ ಸಂದಿರಬಹುದು. ವಿಜಯನಗರ ಸ್ಥಾಪಕರಾದ ಹಕ್ಕ-ಬುಕ್ಕರಲ್ಲಿ ಎರಡನೆಯವನಾದ ಬುಕ್ಕರಾಯನು ೧೩೫೭ರಲ್ಲಿ ಸಿಂಹಾಸನಾರೋಹಣಮಾಡಿ, ಸಾಮ್ರಾಜ್ಯವನ್ನು ವಿಸ್ತರಿಸಿ, ಅನೇಕ ದೇವಾಲಯಗಳ ಸ್ಥಾಪನೆ ಮತ್ತು ಜೀರ್ಣೋದ್ಧಾರ ಕಾರ್ಯಗಳನ್ನು ಕೈಗೊಂಡನು. ಇದೇ ಸಮಯದಲ್ಲಿ ಅಜ್ಜಂಪುರದ ಕಿರಾಳಮ್ಮನ ದೇವಾಲಯವೂ ನಿರ್ಮಾಣವಾಯಿತು. 

                                                        ದೇವಾಲಯದ ಆವರಣದಲ್ಲಿರುವ  ಗಜಲಕ್ಷ್ಮಿ

ಕಿರಾಳಮ್ಮ ದೇವಾಲಯದ ಗರ್ಭಗುಡಿಯಲ್ಲಿರುವ ವಿಗ್ರಹಕ್ಕೆ "ಹಾಲುಗರೆಯಮ್ಮ" ಎಂದೂ ಕರೆಯಲಾಗುತ್ತಿತ್ತು. ಮೇಯಲು ಹೋದ ಹಸುಗಳು ಸಂಜೆ ಮನೆಗೆ ಹಿಂದಿರುಗಿದಾಗ ಸರಿಯಾಗಿ ಹಾಲು ನೀಡುತ್ತಿರಲಿಲ್ಲ. ಆಗ ಮನೆಯವರು ದನ ಕಾಯುವ ಹುಡುಗರನ್ನು ಶಿಕ್ಷಿಸಿದರಂತೆ. ಆ ದನಗಳು ಹಾಲುಗರೆಯಮ್ಮನ ವಿಗ್ರಹದ ಮೇಲೆ ಹಾಲು ಸುರಿಸಿ ಬರುತ್ತಿದ್ದುದು ತಿಳಿದಮೇಲೆ, ದನ ಕಾಯುವವರದು ತಪ್ಪಿಲ್ಲ ಎಂದು ಅರಿವಾಯಿತಂತೆ. ನಂತರ ಆ ಪ್ರತಿಮೆಗೆ ಪುಟ್ಟ ಗುಡಿ ನಿರ್ಮಾಣವಾಯಿತಂತೆ. (ಇದು ತಿರುಪತಿ ತಿಮ್ಮಪ್ಪನ ದೇವಾಲಯದ ಕತೆಯನ್ನು ಹೋಲುತ್ತದೆ) ಗರ್ಭಗುಡಿಯ ವಿಗ್ರಹ ಹಾಲುಗರೆಯಮ್ಮ ಆದರೆ ಉತ್ಸವ ಮೂರ್ತಿ ಕಿರಾಳಮ್ಮ. ಈ ಉತ್ಸವಮೂರ್ತಿಯು ಬುಕ್ಕರಾಯನ ಕಾಲದಲ್ಲಿ ನಿರ್ಮಾಣಗೊಂಡಿರಬಹುದೆಂಬ ಸಾಧ್ಯತೆಯಿದೆ. ಉತ್ಸವಮೂರ್ತಿಯು ಲೋಹದ್ದಾಗಿರದೇ, ಶಿಲಾಪ್ರತಿಮೆಯಾಗಿರುವುದು ಅಪರೂಪದ ಹಾಗೂ ವಿಶೇಷ ಸಂಗತಿಯಾಗಿದೆ.

ಕಲ್ಲಿನ  ತೊಲೆಯ ಮೇಲಿನ  ಶಿಲಾ ಶಾಸನ 


ಇತ್ತೀಚೆಗೆ ಹಾಲುಗರೆಯಮ್ಮನ ವಿಗ್ರಹವನ್ನು ಭೂಮಿಯಲ್ಲಿ ಹುಗಿದು, ಹೊಸ ವಿಗ್ರಹದ ಪ್ರತಿಷ್ಠಾಪನೆಯಾಯಿತು. ಆ ವಿಗ್ರಹವನ್ನು ಹಾಗೇ ರಕ್ಷಿಸಿ ಇಟ್ಟುಕೊಂಡಿದ್ದರೆ ಚೆನ್ನಾಗಿತ್ತು. (ಕಾಶಿಯ ವಿಶಾಲಾಕ್ಷಿ ದೇವಾಲಯದಲ್ಲಿ ಹಳೆಯ ವಿಗ್ರಹವನ್ನು ಹಾಗೆಯೇ ರಕ್ಷಿಸಿಡಲಾಗಿದೆ) ಕಿರಾಳಮ್ಮನ ಗುಡಿಯ ಕೆಲವು ಕಲ್ಲಿನ ತೊಲೆಗಳ ಮೇಲೆ ಹಳೆಗನ್ನಡದ ಅಕ್ಷರಗಳು, ಅಂಕೆಗಳು ಕಾಣಸಿಗುತ್ತವೆ. ಶಾಸನವನ್ನು ಓದಬಲ್ಲ ತಜ್ಞರಿಂದ ಓದಿಸಿ, ಅವರಿಗೆ ಹಾಲುಗರೆಯಮ್ಮನ, ಕಿರಾಳಮ್ಮನ ವಿಗ್ರಹಗಳನ್ನು ತೋರಿಸಿದ್ದರೆ ಇನ್ನಷ್ಟು ಅಧಿಕೃತ ಮಾಹಿತಿ ನಮಗೆ ದೊರಕುತ್ತಿತ್ತು.

೧೭೬೧ರಲ್ಲಿ ಹೈದರಾಲಿಯು ಅಜ್ಜಂಪುರದ ಕೋಟೆಗೆ ಲಗ್ಗೆ ಹಾಕಿ, ದೇವಾಲಯ ಮತ್ತು ಕೋಟೆಯನ್ನು ನಾಶಪಡಿಸಿದನು. ನೂರಾರು ವರ್ಷ ಪಾಳುಬಿದ್ದ ಕೋಟೆ ಮತ್ತು ದೇಗುಲಗಳನ್ನು, ತರೀಕೆರೆಯ ಪಾಳೆಯಗಾರರಾಗಿದ್ದ ಸರ್ಜಾ ಹನುಮಪ್ಪನಾಯಕರು ೧೯ನೇ ಶತಮಾನದಲ್ಲಿ ಜೀರ್ಣೋದ್ಧಾರಗೊಳಿಸಿದರು. 

 ಕಿರಾಳಮ್ಮ ರಥ 

                                                                     

ಕಿರಾಳಮ್ಮನ ತೇರು, ಸಿಡಿ, ಜಾತ್ರೆಗಳಿಗೂ ಅನೇಕ ಶತಮಾನಗಳ ಇತಿಹಾಸವಿದೆ. ೧೯೭೭ರ ವರೆಗೆ ಹರಿಜನ ಮಹಿಳೆಯರಿಂದ ಸಿಡಿ ನಡೆಯುತ್ತಿತ್ತು. ದಲಿತ ಸಂಘರ್ಷ ಸಮಿತಿಯವರ ಆಗ್ರಹದ ಮೇರೆಗೆ, ಹರಿಜನರನ್ನಾಗಲೀ, ಮಹಿಳೆಯರನ್ನಾಗಲೀ ಸಿಡಿ ಏರಿಸದಂತೆ ಸರಕಾರ ಪ್ರತಿಬಂಧಿಸಿತು. ಖ್ಯಾತ ಕವಿ, ಸಾಹಿತಿ, ಡಾ. ಸಿದ್ಧಲಿಂಗಯ್ಯನವರು ೧೯೮೦ರಲ್ಲಿ ಅಜ್ಜಂಪುರಕ್ಕೆ ಭೇಟಿಯಿತ್ತಾಗ ಈ ಸಿಡಿಯು ಸಾವಿರಾರು ವರ್ಷಗಳ ಹಿಂದಿದ್ದ ನರಬಲಿಯ ಪ್ರತೀಕವೆಂದು ಅಭಿಪ್ರಾಯಪಟ್ಟಿದ್ದರು. ಕಿರಾಳಮ್ಮನ ಅಸಾದಿ ಹೇಳಿದ ಹಲವು  ಜಾನಪದ ಗೀತೆಗಳನ್ನು ಸಂಗ್ರಹಿಸಿ, ತಮ್ಮ ಸಂಶೋಧನಾ ಪ್ರಬಂಧದಲ್ಲಿ ಪ್ರಕಟಿಸಿದ್ದಾರೆ. ನರಬಲಿಯಿರಲಿ, ಪ್ರಾಣಿಬಲಿಯೂ ಇತಿಶ್ರೀ ಆದುದು ಇತಿಹಾಸದ ಹೊಸ ತಿರುವು. ಹಿಂದೆ ಕಿರಾಳಮ್ಮನ ಭಕ್ತರೊಬ್ಬರ ಮನೆಯಲ್ಲಿ ತಾಳೆಗರಿಯ ಗ್ರಂಥಗಳು ಇದ್ದವಂತೆ. ಅವುಗಳನ್ನು ಸಂರಕ್ಷಿಸಿದ್ದಲ್ಲಿ ಇನ್ನಷ್ಟು ಐತಿಹಾಸಿಕ ವಿವರಗಳು ಲಭ್ಯವಾಗುತ್ತಿದ್ದವು.


- ಮಂಜುನಾಥ ಅಜ್ಜಂಪುರ

* * * * * * * 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.