75. ಸ್ವಾತಂತ್ರ್ಯ ಹೋರಾಟದಲ್ಲಿ ಅಜ್ಜಂಪುರದ ಪಾತ್ರ

ಆತ್ಮೀಯರೇ,


ಎಲ್ಲರಿಗೂ 69ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ದೇಶದ ಎಲ್ಲ ಊರುಗಳಂತೆಯೇ ನಮ್ಮೂರು ಅಜ್ಜಂಪುರದಲ್ಲೂ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಹಲವಾರು ಚಟುವಟಿಕೆಗಳು ನಡೆದವು. ಅಜ್ಜಂಪುರದಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆದಿತ್ತು ಎನ್ನುವುದು ಎಷ್ಟು ಜನರಿಗೆ ತಿಳಿದಿದೆ. ಈ ಸಂದರ್ಭದಲ್ಲಿ ಅದರಲ್ಲಿ ಭಾಗವಹಿಸಿ, ನಡೆದ ಘಟನೆಗಳನ್ನು ಈ ಸಂಚಿಕೆಯಲ್ಲಿ ದಾಖಲಿಸಲಾಗಿದೆ.  ಊರು ಈಗಿನಷ್ಟೂ ಇರದ ಆ ದಿನಗಳಲ್ಲಿ, ಇದ್ದಷ್ಟು ಕೆಲವೇ ಜನರು ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ತಮ್ಮಿಂದಾದ ಕಾರ್ಯಗಳನ್ನು ನಿರ್ವಹಿಸಿದರು. ಅಂಥ ಹಿರಿಯರಲ್ಲಿ ಕೆಲವರು ಇಂದಿಗೂ ನಮ್ಮ ನಡುವೆ ಇದ್ದಾರೆನ್ನುವುದೇ ಸಂತಸದ ಸಂಗತಿ. 

ಆ ದಿನಗಳ ನೆನಪನ್ನು ಲೇಖನದ ರೂಪದಲ್ಲಿ ದಾಖಲಿಸಿದವರು ಅಜ್ಜಂಪುರದ ಪುರಸಭಾಧ್ಯಕ್ಷರೂ, ಚಲನಚಿತ್ರಮಂದಿರದ ಮಾಲಕರಾಗಿದ್ದ ಉದ್ಯಮಿ ಶ್ರೀ ಟಿ. ಕೃಷ್ಣೋಜಿ ರಾವ್ ಚವ್ಹಾಣ್. ಅವರು ತರೀಕೆರೆಯ ಜನಪ್ರಿಯ ದೈನಿಕ ಅಂಚೆವಾರ್ತೆಗೆ ಬರೆದ ಲೇಖನವು ಮೂರು ದಶಕಗಳ   ನಂತರ ನಮ್ಮ-ನಿಮ್ಮ ಕೈಸೇರಲು ಕಾರಣರಾದವರು ಶ್ರೀಮತಿ ರೋಹಿಣಿ ಶರ್ಮಾ.

ಆಗ ಬರೆದ ಲೇಖನವನ್ನೇ ಈಗ ಇತಿಹಾಸವೆನ್ನುತ್ತೇವೆ. ಸ್ವಾತಂತ್ರ್ಯಕ್ಕಾಗಿ ಇವರೊಡನೆ ಇದ್ದು ಭಾಗವಹಿಸಿದ, ಸುಬ್ರಹ್ಮಣ್ಯ ಶೆಟ್ಟರ ಬೆಂಬಲಕ್ಕೆ ಸದಾ ಕಾಲವೂ ಇರುತ್ತಿದ್ದ ಸೀತಾರಾಮಭಟ್ಟರನ್ನು ಕೃಷ್ಣೋಜಿರಾಯರು ಅದು ಯಾವ ಕಾರಣಕ್ಕಾಗಿ ಮರೆತರೆನ್ನುವುದು ಆಶ್ಚರ್ಯಹುಟ್ಟಿಸುವಂತಿದೆ. ಇಡೀ ಲೇಖನದಲ್ಲಿ ಅವರ ಪ್ರಸ್ತಾಪವೇ ಇಲ್ಲದಿರುವುದೊಂದು ಲೋಪ ಎನ್ನುವುದನ್ನು ಅಜ್ಜಂಪುರದ ಜನ ಅನುಮೋದಿಸದೇ ಇರಲಾರರು. 

ಶ್ರೀಮತಿ ರೋಹಿಣಿ ಶರ್ಮಾ ಇವರು ಅಜ್ಜಂಪುರದ ಕಲಾಸೇವಾ ಸಂಘದ ಹೆಣ್ಣುಮಕ್ಕಳ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ಶ್ರೀಧರ ಶರ್ಮಾ ಇವರ ಪತ್ನಿ. ಅಜ್ಜಂಪುರದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ನಿವೃತ್ತರಾದ ಶರ್ಮರಿಗೆ ಅಜ್ಜಂಪುರವೆಂದರೆ ಅಪಾರ ಅಭಿಮಾನ. ಅವರ ಪುತ್ರ ಆರ್ಯಮಿತ್ರ ಕೂಡ ಸಾಹಿತ್ಯಾಭಿಮಾನಿ ಹಾಗೂ ಅಜ್ಜಂಪುರದ ನಂಟು ಇಂದಿಗೂ ಅವರನ್ನು ಬಿಟ್ಟಿಲ್ಲ. ಅಜ್ಜಂಪುರದ ಬಗ್ಗೆ ಅತೀವ ಪ್ರೀತಿಯಿರುವ ಈ ಕುಟುಂಬದ ಬಗ್ಗೆ ಪ್ರತ್ಯೇಕವಾಗಿ ಒಂದು ಲೇಖನ ಪ್ರಕಟವಾಗಲಿದೆ. 
ಅವರಿಗೆ ನಮ್ಮ ಅಭಿನಂದನೆಗಳು.
ಶಂಕರ ಅಜ್ಜಂಪುರ
ಸಂಪಾದಕ
ಸಂಪರ್ಕ : ದೂರವಾಣಿ 99866 72483
ಇ-ಮೇಲ್ : shankarajp@gmail.com
-----------------------------------------------------------------------------------------------------------------------------
1942ನೇ ಇಸವಿ, ಭಾರತಮಾತೆಯನ್ನು ಸಂಕೋಲೆಗಳಿಂದ ಬಿಡಿಸಿ, ಸ್ವಾತಂತ್ರ್ಯ ಸಂಪಾದಿಸಿ, ಬ್ರಿಟಿಷರು ಉಚ್ಚಾಟನೆ ಮಾಡಿದ್ದ ಸಂಕಲ್ಪದಲ್ಲಿ ಪರ್ವದಿನಗಳು. ಮಹಾತ್ಮಾಗಾಂಧಿಯವರ ನೇತೃತ್ವದಲ್ಲಿ ನೆಹರೂ, ಸರದಾರ್ ವಲ್ಲಭಭಾಯಿ ಪಟೇಲ್, ರಾಜೇಂದ್ರಪ್ರಸಾದ್ ಮುಂತಾದ ನಾಯಕರ ಮುಂದಾಳತ್ವದಲ್ಲಿ ಕ್ವಿಟ್ ಇಂಡಿಯಾ ಚಳವಳಿ ಬಿರುಸುಗೊಂಡಿದ್ದ ಕಾಲ. ದೇಶವನ್ನೇ ಆವರಿಸಿದ್ದ ಸ್ವಾತಂತ್ರ್ಯ ಚಳವಳಿಯ ಬಿಸಿ ಅಜ್ಜಂಪುರಕ್ಕೂ ತಟ್ಟದಿರಲಿಲ್ಲ. ನಮ್ಮ ಮೈಸೂರು ಸಂಸ್ಥಾನದ ಕಾಂಗ್ರೆಸ್ ನಾಯಕರಾಗಿದ್ದ ಕೆ.ಟಿ. ಭಾಷ್ಯಂ, ಸುಬ್ರಹ್ಮಣ್ಯಂ ಮುಂತಾದವರ ನೇತೃತ್ವದಲ್ಲಿ ಅಜ್ಜಂಪುರದಲ್ಲಿ ಅಂದಿನ ಊರ ಮುಖಂಡರು, ಸ್ವಾತಂತ್ರ್ಯಯೋಧರೂ ಆಗಿದ್ದ ಸುಬ್ರಹ್ಮಣ್ಯಶೆಟ್ಟರ ಮುಂದಾಳತ್ವದಲ್ಲಿ ಊರಿನ ಜನತೆ ಸ್ವಾತಂತ್ರ್ಯದ ಕರೆಗೆ ಓಗೊಟ್ಟು ಪಾನನಿರೋಧ, ವಿದೇಶೀ ವಸ್ತು ದಹನ, ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇದೇ ಸಮಯದಲ್ಲಿ ಅಖಿಲ ಮೈಸೂರು ಕಾಂಗ್ರೆಸ್ ಮಹಾ ಅಧಿವೇಶನವನ್ನು ಅಜ್ಜಂಪುರದಂಥ ಚಿಕ್ಕ ಗ್ರಾಮದಲ್ಲಿ ಮಾಡಲು ಮುಂದಾದಾಗ, ಎಲ್ಲ ಮುಖಂಡರೂ ಒಮ್ಮನಸ್ಸಿನಿಂದ ಒಪ್ಪಿಗೆಯನ್ನಿತ್ತು, ಕಾರ್ಯೋನ್ಮುಖರಾದರು. ರೈಲ್ವೇ ಸ್ಟೇಷನ್ ಸಮೀಪದ ಮಂಡಿ ರುದ್ರಣ್ಣನವರ ವಿಶಾಲ ಮೈದಾನದಲ್ಲಿ ಅಧಿವೇಶನವನ್ನು ನಡೆಸಲು ನಿಶ್ಚಯಿಸಿ, ಎಲ್ಲ ಸಿದ್ಧತೆಗಳೂ ಪ್ರಾರಂಭವಾಯಿತು. ವಿಶಾಲವಾದ ಚಪ್ಪರ, ಊಟದ ಏರ್ಪಾಡು ಎಲ್ಲ ರೂಪಗೊಂಡು, ನಾಳೆ ಅಧಿವೇಶನವೆಂದಾಗ ಅಂದಿನ ಸರ್ಕಾರದ ಕ್ರೂರದೃಷ್ಟಿ ಬಿತ್ತು. ಕೆ.ಸಿ. ರೆಡ್ಡಿ, ಕೆ.ಟಿ. ಭಾಷ್ಯಂ ಅಂದಿನ ಜನಪ್ರಿಯ ನಾಯಕರು. ಇವರೆಲ್ಲರೊಂದಿಗೆ ನಾಡಿನ ಪ್ರಮುಖರೆಲ್ಲರೂ ಬಂದುಬಿಟ್ಟಿದ್ದಾರೆ. ನೂರು ಜತೆ ಎತ್ತಿನ ಬಂಡಿಯಲ್ಲಿ ಅಧ್ಯಕ್ಷ ಭಾಷ್ಯಂರವರನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಲು ಸಿದ್ಧತೆಗಳು ಪೂರೈಸಿವೆ. ಜನ ಪ್ರವಾಹದಂತೆ ಬಂದು ಸೇರುತ್ತಿದ್ದಾರೆ. ಅಧ್ಯಕ್ಷರು ಇನ್ನೇನು ರಥವನ್ನೇರಬೇಕು, ಅಷ್ಟರಲ್ಲಿ ಪ್ರತಿಬಂಧಕಾಜ್ಞೆ ಕೈಯಲ್ಲಿ ಹಿಡಿದ ಪೊಲೀಸರು ಹಾಜರು. ಜತೆಯಲ್ಲಿ ಸಶಸ್ತ್ರ ಪೊಲೀಸ್ ಪಡೆ. ಅಜ್ಜಂಪುರ ಹಾಗೂ ಸುತ್ತಮುತ್ತ ಮೂರು ಮೈಲಿ ಫಾಸಲೆಯಲ್ಲಿ ಮೆರವಣಿಗೆ, ಸಭೆ ಸೇರಕೂಡದೆಂಬ ಸುಗ್ರೀವಾಜ್ಞೆ. ಜತೆಗೆ ಭಾಷ್ಯಂ ರನ್ನು ಬಂಧಿಸಲು ವಾರಂಟ್, ಇದೆಲ್ಲ ಕ್ಷಣಾರ್ಧದಲ್ಲಿ ನಡೆದುಹೋಯಿತು.  ನೆರೆದ ಜನಕ್ಕೆ ದಿಕ್ಕು ತೋಚದಂತಾಯಿತು. ಮುಂದೇನು ಎಂಬ ಯೋಚನೆ ಎಲ್ಲರಿಗೂ. ಆದರೆ ಮುಂದಾಳು ಸುಬ್ರಹ್ಮಣ್ಯಶೆಟ್ಟರು ಮತ್ತು ಅಜ್ಜಂಪುರದ ಜನತೆ ಹೆದರಲಿಲ್ಲ. ಚನ್ನಾಪುರದ ಈ ಸ್ಥಳಕ್ಕೆ ವಿಜಯ ಮೈದಾನ ಎಂದು ಕರೆಯಲಾಯಿತು. ಚನ್ನಾಪುರದ ಆಚೆ ವಿಶಾಲವಾದ ಮೈದಾನದಲ್ಲಿ ಧೈರ್ಯಗೆಡದ ನಾಯಕರಾದ ಸರ್ವಶ್ರೀ ಎಚ್. ಸಿ.ದಾಸಪ್ಪ, ಕೆ.ಸಿ.ರೆಡ್ಡಿ,  ಎಸ್. ಸಿದ್ಧಲಿಂಗಯ್ಯ ಮುಂತಾದವರೊಂದಿಗೆ ಚರ್ಚಿಸಿ ಊರಿನ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಮಾಲೋಚಿಸಿ, ವಿಜಯ ಮೈದಾನವೆಂದು ಕರೆದು ಪ್ರತಿಬಂಧಕಾಜ್ಞೆಗೂ ಭಂಗಬರದಂತೆ ಅದ್ದೂರಿಯಾಗಿ ಅಧಿವೇಶನ ನಡೆಸಲು ತೀರ್ಮಾನಿಸಲಾಯಿತು. ಪೊಲೀಸರು, ಸಶಸ್ತ್ರ ಪೊಲೀಸರು ಕಣ್ಣುಬಿಟ್ಟು ನೋಡುತ್ತಿದ್ದಂತೆ ವೈಭವಪೂರ್ಣವಾಗಿ ಭಾಷ್ಯಂರವರ ಮೆರವಣಿಗೆಯೊಂದಿಗೆ ಅಲ್ಲಿ ಅಧಿವೇಶನ ನಡೆದೇಹೋದಾಗ ಎಲ್ಲರಿಗೂ ಅಚ್ಚರಿ, ಆಶ್ಚರ್ಯ. ಇದೊಂದು ಅಜ್ಜಂಪುರದ ಐತಿಹಾಸಿಕ ದಿನವೆನ್ನಬಹುದು.
ಟಿ. ಕೃಷ್ಣೋಜಿ ರಾವ್ ಚವ್ಹಾಣ್

1947ರಲ್ಲಿ ಚಳವಳಿ ಬಿರುಸಾಗಿ ಸಾಗುತ್ತಿದ್ದ ದಿನಗಳು. ಅಜ್ಜಂಪುರದ ಬಿಸಿರಕ್ತದ ಯುವಕರು ಹಿಂದುಳಿಯಲಿಲ್ಲ. ಸರ್ಕಾರದ ಧೋರಣೆಯ ವಿರುದ್ಧ ಭಾಷಣಗಳು, ಸರ್ಕಾರಿ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವಿಕೆ, ವಿದೇಶೀ ವಸ್ತುಗಳನ್ನು ಸುಡುವುದು, ಪಾನ ನಿರೋಧದನ್ವಯ ಹೆಂಡದಂಗಡಿಗಳ ಮೇಲೆ ಪಿಕೆಟಿಂಗ್ ಮುಂತಾದ ಚಳವಳಿಗಳಲ್ಲಿ ಸಂಪೂರ್ಣವಾಗಿ ಭಾಗವಹಿಸಿದರು.
ಚಲೋ ಮೈಸೂರು
ಮೈಸೂರು ಚಳವಳಿಯಲ್ಲಿ ಎಸ್. ಸುಬ್ರಹ್ಮಣ್ಯ ಶೆಟ್ಟರು ಅಂದು ಎಲ್ಲರಿಗೂ ಚೈತನ್ಯಸ್ವರೂಪರು. ಅವರ ಮಾತೆಂದರೆ ವೇದವಾಕ್ಯ. ಎಂತಹ ತ್ಯಾಗಕ್ಕೂ ಸಿದ್ಧ. ಭಾರೀ ಯುವಕ ತಂಡವೇ ಕಾಲ್ನಡೆಯಲ್ಲಿ ಮೈಸೂರನ್ನು ತಲುಪಲು ಸಿದ್ಧರಾಗಿ ನಿಂತರು. ಭಾರತಮಾತಾ ಕೀ ಜೈ, ಮೈಸೂರು ಚಲೋ ಮುಂತಾದ ಘೋಷಣೆಗಳು ಮುಗಿಲುಮುಟ್ಟುವಂತಿದ್ದು, ಮಹಾತ್ಮಾ ಗಾಂಧೀ ಕೀ ಜೈ ಎಂಬ ಘೋಷಣೆಯೊಂದಿಗೆ ಹೊರಟಾಗ ಎಸ್. ವೈ. ನಾಗಣ್ಣಶೆಟ್ಟರು, ಕಮ್ಮತ್ತಿಗೆ ಚನ್ನಬಸಪ್ಪ, ಜಿ.ಕೆ. ಮಹದೇವಪ್ಪ, ಡಿ.ರಂಗಯ್ಯ ಮುಂತಾದ ಉತ್ಸಾಹಿ ಯುವಕರೊಂದಿಗೆ ಹಾಸನದ ಮಾರ್ಗವಾಗಿ ಪಾದಯಾತ್ರೆ ಮಾಡುತ್ತ ಹೊರಟಾಗ ಊರಿಗೆ ಊರೇ ಹಾರ ಹಾಕಿ ಗೌರವಿಸಿ ಬೀಳ್ಕೊಟ್ಟರು. ದಾರಿಯುದ್ದಕ್ಕೂ ಸಿಕ್ಕ ನಗರಗಳು, ಹಳ್ಳಿಗಳಲ್ಲಿ ಕಾನೂನುಭಂಗ ಮಾಡುತ್ತ, ಬಾರೀ ಸಭೆಗಳನ್ನು ಏರ್ಪಡಿಸಿ, ಸ್ವಾತಂತ್ರ್ಯ ಘೋಷಣೆ ಮಾಡುತ್ತ ಹೊರಟು ಹಾಸನ ತಲುಪಿ, ಅಲ್ಲಿ ಭಾರೀ ಸಭೆಯಲ್ಲಿ ಭಾಗವಹಿಸಿದ್ದಾಗ, ಪೊಲೀಸರ ಲಾಠಿ ಏಟು ತಿಂದು ನೋವನ್ನು ಕಾಣದೇ, ಮುಖಂಡರಾಗಿದ್ದ ಸುಬ್ರಹ್ಮಣ್ಯಶೆಟ್ಟರು, ಎಸ್. ವೈ. ನಾಗಣ್ಣ ಶೆಟ್ಟರು, ಜಿ.ಕೆ. ಮಹದೇವಪ್ಪ ನವರೊಂದಿಗೆ ಎಲ್ಲರನ್ನೂ ಹಾಸನದ ಜಿಲ್ಲಾ ಲಾಕಪ್ ನಲ್ಲಿ ಬಂದಿಗಳನ್ನಾಗಿ ಮಾಡಲಾಯಿತು. ಕೆ.ಜಿ. ರುದ್ರಪ್ಪ, ಕೆ. ನೀಲಕಂಠಪ್ಪ, ಬಿ. ಶಿವಮೂರ್ತಿ, ಕೃಷ್ಣೋಜಿರಾವ್ ಚವ್ಹಾಣ್, ಬಿ.ಎನ್. ರಾಮದಾಸ್, ಬಿ.ಎಂ. ಏಕೋರಾಮಸ್ವಾಮಿ ಮುಂತಾದವರು ಮೈಸೂರು ಸಮೀಪಿಸುತ್ತಿದ್ದಾಗ, ಹಲವರನ್ನು ಕಾಡಿನಲ್ಲಿ ಬಿಟ್ಟು ಮತ್ತೆ ಕೆಲವರನ್ನು ಶ್ರೀರಂಗಪಟ್ಟಣದ ಜೈಲಿನಲ್ಲಿಟ್ಟರು.
ತರೀಕೆರೆ ತಾಲ್ಲೂಕು ಕಛೇರಿ ಮೇಲೆ ಧ್ವಜಾರೋಹಣ
ದಿನ ದಿನಕ್ಕೂ ಚಳವಳಿ ಜೋರಾಗಿ ಪ್ರಾರಂಭವಾಯಿತು. ತರೀಕೆರೆ ತಾಲೂಕು ಕಾಂಗ್ರೆಸ್ ನವರು ತಾಲೂಕು ಕಛೇರಿಯ ಮೇಲೆ ಕಾಂಗ್ರೆಸ್ ಧ್ವಜವನ್ನು ಹಾರಿಸುವ ಕಾರ್ಯಕ್ರಮವೊಂದನ್ನು ಹಾಕಿ ತರೀಕೆರೆ ಟಿ.ಸಿ. ಬಸಪ್ಪನವರು, ಎಸ್. ಸುಬ್ರಹ್ಮಣ್ಯಶೆಟ್ಟರ ನೇತೃತ್ವದಲ್ಲಿ ನಡೆಯಲು ತೀರ್ಮಾನ ಕೈಗೊಂಡು ಅಜ್ದಂಪುರದಿಂದ ನೂರಾರು ಜನರು, ಜಿಕೆ. ಸಿದ್ದಪ್ಪ ಶೆಟ್ಟಿ, ಕೆ.ಜಿ. ಸಿದ್ದಪ್ಪ, ಕೆ.ಜಿ. ರುದ್ರಣ್ಣ, ಎನ್. ಶೆಟ್ಟೋಜಿರಾವ್, ಎ.ಆರ್.ಭೀಮಯ್ಯ, ಜಿ. ತಿಮ್ಮಯ್ಯ, ಟಿ. ಭೀಮೋಜಿರಾವ್, ಏಕೋರಾಮಸ್ವಾಮಿ, ಟಿ, ಕೃಷ್ಣೋಜಿರಾವ್, ಎಂ. ನಿಂಗೋಜಿರಾವ್, ಎನ್. ಮಂಜುನಾಥ, ಪಿ.ಕೆ. ಗಣೇಶರಾವ್ ಇನ್ನೂ ಇತರರೊಂದಿಗೆ, ತರೀಕೆರೆ ಜನತೆಯೊಂದಿಗೆ ಧ್ವಜಾರೋಹಣ ಮಾಡಲಾಯಿತು. ತಕ್ಷಣ ಪೊಲೀಸಿನವರು, ಲಾಠಿ ಛಾರ್ಜು ಮಾಡಿ ಜನ ಚದುರಿಸಿ ನಮ್ಮಗಳನ್ನೆಲ್ಲ ಪೊಲೀಸ್ ವ್ಯಾನಿನಲ್ಲಿ ತುಂಬಿಕೊಂಡು ಬೀರೂರು, ಕಡೂರು, ಚಿಕ್ಕಮಗಳೂರು ಪೊಲೀಸು ಠಾಣೆಯಲ್ಲಿ ಇಡಲಾಯಿತು. ಈ ಐತಿಹಾಸಿಕ ಚಳವಳಿ ಅಜ್ಜಂಪುರಕ್ಕೆ ಕೀರ್ತಿತಂದಿತು.
ಶೆಟ್ಟರು ಜೈಲಿನಲ್ಲಿದಾದರೆ. ಅವರ ಅಪರೂಪದ ಏಕಮಾತ್ರ ಪುತ್ರ ಮರಣವನ್ನಂಪುವಂತಿದ್ದಾನೆ. ಹಸುಳೆ ಅತೀವ ಜ್ವರದಿಂದ ಪ್ರಾಣಾಂತಿಕ ಸ್ಥಿತಿಯಲ್ಲಿದೆ. ಆಗ ಪೊಲೀಸರಿಂದ ಶೆಟ್ಟರಿಗೆ ವಾರ್ತೆ ತಲುಪಿತು. ಅವರೆಂದರು. ಈಗಲಾದರೂ ಚಳವಳಿ ಯಲ್ಲಿ ಭಾಗವಹಿಸುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಟ್ಟರೆ ಬಿಡುಗಡೆ ಮಾಡುತ್ತೇವೆ. ಎಂದಾಗ ಶೆಟ್ಟರು ಮಗುವಿನ ಪ್ರಾಣಕ್ಕಿಂತ ಭಾರತಮಾತೆಯ ಸಂಕೋಲೆಯಿಂದ ಬಿಡಿಸುವುದು ಪವಿತ್ರಕಾರ್ಯ ಎಂದು ಧಿಕ್ಕರಿಸಿದಾಗ ಪೊಲೀಸರಿಗೂ ದಿಗ್ಭ್ರಮೆ. ಅಂತೂ ಮಗುವನ್ನು ಕಳೆದುಕೊಂಡರೇ ಹೊರತು ವಚನಭಂಗಮಾಡಲಿಲ್ಲ.
ಚಲೋ ಚನ್ನಗಿರಿ
ನಮ್ಮೂರಿನ ಉತ್ಸಾಹಿ ಯುವಕರು ಕಟ್ಟಾ ಆಳು ಎ.ಆರ್. ಭೀಮಯ್ಯನವರ ಮುಖಂಡತ್ವದಲ್ಲಿ ಮಸಣಕೆರೆಯಲ್ಲಿ ಈಚಲುಮರ ಕಡಿಯುವಿಕೆ ಕಾರ್ಯಕ್ರಮ ಹಾಕಿಕೊಂಡು ವೈ. ಯಲ್ಲೋಜಿರಾವ್, ವೆಂಕೋಬರಾವ್, ವಿ. ವೆಂಕಟರಾವ್, ಏಕೋರಾಮಸ್ವಾಮಿ, ಎಲ್ಲಪ್ಪ, ವೈ.ಜಿ. ಹನುಮಂತಪ್ಪ, ಪಿ.ಕೆ. ಗಣೇಶರಾವ್, ಎಂ. ವಿಠಲರಾವ್ ಮುಂತಾಗಿ ಐವತ್ತು ಜನರ ಗುಂಪು ದಾರಿಯುದ್ದಕ್ಕೂ ಚಳವಳಿ ನಡೆಸುತ್ತ ಚನ್ನಗಿರಿ ತಾಲೂಕು ಆಫೀಸಿನ ಮೇಲೆ ಬಾವುಟ ಹಾರಿಸಲು ಯತ್ನಿಸಿದಾಗ, ಚಳವಳಿಗಾರರಿಗೆ ಪೊಲೀಸರು ಬಹಳ ದೌರ್ಜನ್ಯದಿಂದ ವರ್ತಿಸಿ ಮುಖ, ಮೋರೆ, ಕೈಕಾಲು ಎನ್ನದೆ ಮೂಳೆ ಪುಡಿಯಾಗುವಂತೆ ಬಾರಿಸಿದರೂ ಎದೆಗುಂದದೆ, ಧೈರ್ಯಗೆಡದೆ, ರಾತ್ರೋರಾತ್ರಿ ಊರುಸೇರಿ, ಮತ್ತೆ ದೊಡ್ಡ ಸೈನ್ಯವನ್ನೇ ಕಟ್ಟಿ ಚನ್ನಗಿರಿಯನ್ನು ದಾಳಿಮಾಡಲು ಹೊರಟಾಗ ಚನ್ನಗಿರಿ ಚಲೋ ಎಂಬ ಘೋಷಣೆ ಕಾಡುಮೇಡುಗಳಲ್ಲೆಲ್ಲ ಪ್ರತಿಧ್ವನಿಸಿತು. ಅಲ್ಲಿ ಪೊಲೀಸರು ಬಲವಾದ ಕಾವಲಿನೊಂದಿಗೆ ಮೂರು ಮೈಲಿ ದೂರದಲ್ಲೇ ಎದುರಿಸಿ ತಡೆಗಟ್ಟಿದಾಗ ವಿಜಯಿಗಳಂತೆ ಶಾಸನಭಂಗ ಮಾಡಿ ಮರಳಿದ್ದರು ಅಜ್ಜಂಪುರದ ಸಿಂಹದ ಮರಿಗಳು.
ಜೈಲು ವಾಸ
ಚಳವಳಿಯು ಕಾಡ್ಗಿಚ್ಚಿನಂತೆ ಭರದಿಂದ ಹರಡಿತ್ತು. ಅಜ್ಜಂಪುರವನ್ನು ವ್ಯಾಪಿಸದಿರಲಿಲ್ಲ. ಚಿಕ್ಕಮಗಳೂರು ಜಿಲ್ಲಾ ಪೊಲೀಸರ ಕ್ರೂರ ದೃಷ್ಟಿ ಬಿತ್ತು. ಮುನ್ಸೂಚನೆಯನ್ನೂ ನೀಡದೆ ಅಜ್ಜಂಪುರಕ್ಕೆ ದಾಳಿ ಮಾಡಿ ಎಸ್. ಸುಬ್ರಹ್ಮಣ್ಯಶೆಟ್ಟರು, ವೆಂಕೋಜಿ ರಾವ್, ಮಾಳಿಗೆ ಕರಿಯಪ್ಪ, ಜಿ. ತಿಮ್ಮಯ್ಯ, ಟಿ. ಕೃಷ್ಣೋಜಿರಾವ್ ಚವ್ಙಾಣ್, ಭೀಮೋಜಿರಾವ್, ಯಲ್ಲೋಜಿರಾವ್, ಏಕೋರಾಮಸ್ವಾಮಿ, ಜಿ.ಟಿ. ಮೂಡಲಗಿರಿಯಪ್ಪ, ಎ.ಆರ್. ಭೀಮಯ್ಯ, ಎಸ್. ಸಿದ್ಲಿಂಗಪ್ಪ, ವೈ.ಜಿ. ಹನುಮಂತಪ್ಪ, ಎ.ಜಿ. ಮರುಳಸಿದ್ದಪ್ಪ, ಬಿ.ಎನ್. ರಾಮದಾಸ್,  ಎಲ್. ರಾಮಶೆಟ್ಟಿ, ಕೆ. ದೇವೋಜಿರಾವ್ ಮತ್ತಿತರರನ್ನು ಬಂಧಿಸಿ ಮೆರವಣಿಗೆಯಲ್ಲಿ ಹೊರಟಾಗ ಊರಿಗೆ ಊರೇ ಸಂಭ್ರಮದಿಂದ ಸ್ವಾತಂತ್ರ್ಯಯೋಧರನ್ನು ಬೀಳ್ಕೊಟ್ಟಿತು. ನಂಜುಂಡಪ್ಪ ಉತ್ಸಾಹೀ ಯುವಕ. ಓರ್ವ ಪೊಲೀಸನ ಅಟ್ಟಹಾಸ ಅವನಿಗೆ ಕೋಪತರಿಸಿತು. ಪೊಲೀಸರೆಂಬ ಹೆದರಿಕೆಯಿಲ್ಲದೆ ಹಲ್ಲುಗಳೆಲ್ಲ ಮುರಿಯುವಂತೆ ಬಾರಿಸಿಬಿಟ್ಟ. ಎಲ್ಲರೂ ಅವನ ಸಾಹಸಕ್ಕೆ ತಲೆದೂಗಿದರು. ಎಲ್ಲರನ್ನೂ ಬಂಧಿಸಿ ಸೆಂಟ್ರಲ್ ಜೈಲಿನ ಅತಿಥಿಗಳನ್ನಾಗಿಸಿದಾಗ ಅಜ್ಜಂಪುರ ಸಕ್ರಿಯವಾಗಿ ಚಳವಳಿಯಲ್ಲಿ ಭಾಗವಹಿಸಿದಂತಾಗಿತ್ತು. 

ಲಾಠಿ ಏಟು ತಿಂದ ಜೈಲು ಸೇರಿದವರೆಂದರೆ ಸಿ. ಮಲ್ಲಪ್ಪ, ಎ.ಮರಿಯಪ್ಪ, ಜಿ.ಕೆ. ಸಿದ್ದಪ್ಪ, ನೀರುಳ್ಳಿ ಸಿದ್ದಪ್ಪ, ಕೆ.ಜಿ. ರುದ್ರಪ್ಪ, ಹನುಮಂತಪ್ಪ, ಎಸ್. ಸಿದ್ದಪ್ಪ, ಕೆ.ಜಿ. ವೀರಣ್ಣ, ಆರ್. ಚಂದಣ್ಣ, ಮಲ್ಲೆ ನಿಂಗಪ್ಪ, ಮಲ್ಲಿಕಾರ್ಜುನಯ್ಯ, ಎಂ. ಮಹೇಶ್ವರಪ್ಪ, ಟಿ. ಸಿದ್ರಾಮಯ್ಯ, ಮಂಡಿ ಸಿದ್ದಪ್ಪ, ಮಂಡಿ ರುದ್ರಣ್ಣ, ಶೆಟ್ಟರ ಹನುಮಂತಪ್ಪ, ಮಾಳಿಗೆ ಕರಿಯಪ್ಪ, ಕೆ.ಜಿ. ವೀರಣ್ಣ, ಕುಪ್ಪಾಳು ಗಂಗಣ್ಣ, ಜಿ. ತಿಮ್ಮಯ್ಯ, ಮಂಡಿ ಸಿದ್ದಪ್ಪ, ಲೇ. ಹನುಮಂತಪ್ಪ, ಗವಿಯಣ್ಣ, ಆರ್. ಭದ್ರಣ್ಣ, ಅತ್ತತ್ತಿ ರುದ್ರಪ್ಪ, ಸಿ.ಬಿ. ಮರುಳಪ್ಪ, ದಿ. ತುಳೋಜಿರಾವ್, ಡಿ. ಸಿದ್ರಾಮಣ್ಣ,  ಮಾದಣ್ಣ ಇನ್ನೂ ಮುಂತಾದವರು ಕಾಂಗ್ರೆಸ್ ಮೀಟಿಂಗ್ ನಡೆಸಲು ಯಶಸ್ವಿಯಾಗಿದ್ದನ್ನು ಇಂದು ನೆನಪಿಸಿಕೊಳ್ಳಬೇಕು. ಇದಕ್ಕೆ ಸಹಕರಿಸಿದ ಎಸ್.ವಿ. ವೆಂಕಟಾಚಲಗುಪ್ತ, ಎಚ್.ಎನ್. ಗುರುನಂಜಪ್ಪ, ಕೆ.ರಾಮಯ್ಯ ಮತ್ತಿತರರು ಹೆಸರು, ಕೀರ್ತಿಗಳ ಆಶೆಗೆ ಬಲಿಯಾಗದೇ ದುಡಿದದ್ದನ್ನು ಸ್ಮರಿಸುವುದು ಅವಶ್ಯ.
-0-0-0-0-0-0-0-0-0-0-0-0-0-0-

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

90. ಹುಳಿಯಾದರೂ ಚೇಣಿಗೂ ಸೇರಬಲ್ಲ ಹುಣಿಸೆ

87. ಬಂಗಾರದ ಭರವಸೆ ಹುಟ್ಟಿಸುವ ಹಣ್ಣೆ ಗುಡ್ಡ