77. ಕ್ವಿಟ್ ಇಂಡಿಯಾ ಚಳವಳಿ - ಕಮ್ಮತಿಗೆ ಚನ್ನಬಸಪ್ಪನವರ ನೆನಪುಗಳು


ಇವರು ನಮ್ಮ ಊರಿನ ಹಿರಿಯರು. ಕಮ್ಮತಿಗೆ ಚನ್ನಬಸಪ್ಪ. ವೃತ್ತಿಯಿಂದ ಕಿರಾಣಿ ವ್ಯಾಪಾರದಾರರಾಗಿದ್ದರೂ, ಸಾಹಿತ್ಯ, ವಿಚಾರವಾದ, ಧಾರ್ಮಿಕ ನಿಷ್ಠೆ, ವೈಜ್ಞಾನಿಕ ವಿಚಾರಧಾರೆ ಮುಂತಾಗಿ ಅವರ ಆಸಕ್ತಿಗಳು ಹಲವು ಕಡೆ ಹಂಚಿಹೋಗಿದ್ದವು. ಹೆಚ್ಚಿನ ವಿದ್ಯಾಭ್ಯಾಸವಿಲ್ಲದಿದ್ದರೂ, ವೈಚಾರಿಕವಾಗಿ ಚಿಂತಿಸಿ ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ನಮೂದಿಸುತ್ತಿದ್ದ ಚನ್ನಬಸಪ್ಪ ಕೇವಲ ತಮ್ಮ ಸಮುದಾಯದಲ್ಲಿ ಮಾತ್ರ ಪ್ರಸಿದ್ಧರಾಗಿರದೇ, ಇಡೀ ಊರಿನ ಗಮನ ಸೆಳೆದವರು.

ಈ ಹಿಂದೆ ಪ್ರಕಟಿಸಿರುವ ಗೌ.ರು. ಓಂಕಾರಯ್ಯನವರ ನೆನಪುಗಳಂತೆಯೇ, ಅಜ್ಜಂಪುರದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಅಜ್ಜಂಪುರದಲ್ಲಿ ನಡೆದ ಚಟುವಟಿಕೆಗಳ ಸಂಗ್ರಹಯೋಗ್ಯ   ಲೇಖನದ ಮುದ್ರಿತ ಅವತರಣಿಕೆಯನ್ನು ಮಿತ್ರ ಅಪೂರ್ವ ಬಸು ಹುಡುಕಿ ನಿಮ್ಮ ಓದಿಗೆಂದು ಇಲ್ಲಿ ನೀಡಿದ್ದಾರೆ. ಅವರಿಗೆ ಕೃತಜ್ಞತೆಗಳು. 
ಶಂಕರ ಅಜ್ಜಂಪುರ
ಸಂಪಾದಕ
ದೂರವಾಣಿ - 99866 72483
ಇ-ಮೇಲ್ - shankarajp@gmail.com


-------------------------------------------------------------------------------------------------------------------------------------------------------------------

ಕಮ್ಮತಿಗೆ ಚನ್ನಬಸಪ್ಪ ಅಜ್ಜಂಪುರದಲ್ಲಿ ವರ್ತಕರಾಗಿದ್ದವರು. ಅವರು ಜನಿಸಿದ್ದು 12-01-1917ರಲ್ಲಿ.  ಈ ವರ್ಷದವರೆಗೆ ಬದುಕಿದ್ದಿದ್ದರೆ ನೂರು ತುಂಬುತ್ತಿತ್ತು. ಅವರೋರ್ವ ಸಾಹಿತ್ಯಾಭಿಮಾನಿಗಳಾಗಿದ್ದರು. ಹೊಸ ವಿಷಯಗಳನ್ನು ಕುರಿತಂತೆ ಅವರ ಆಸಕ್ತಿ ಎಂದಿಗೂ ಕುಂದಿದ್ದಿಲ್ಲ. ಅವರು ಸ್ವದೇಶೀ ಚಳವಳಿ ಮತ್ತು ಕ್ವಿಟ್ ಇಂಡಿಯಾ ಚಳವಳಿಗಳಲ್ಲಿ ಭಾಗಿಯಾದರು, ಅದೂ ಮಹಾತ್ಮರ ಸಮ್ಮುಖದಲ್ಲಿ. ಕೇವಲ ಹತ್ತು ವರ್ಷ ವಯಸ್ಸಿನ ಚನ್ನಬಸಪ್ಪ, ಅಜ್ಜಂಪುರಕ್ಕೆ ಬಂದೊಡನೆ ಗಾಂಧೀ ಟೋಪಿ ಧರಿಸಿದರು. ತಮ್ಮ ಗೆಳೆಯರೂ ಟೋಪಿ ಧರಿಸುವಂತೆ ಪ್ರೇರೇಪಿಸಿದರು. 1942ಚಳವಳಿಯ ವೇಳೆಗೆ ಅವರಿಗೆ 25 ವರ್ಷಗಳ ಪ್ರಾಯ. ಚಳವಳಿಗೆ ಸಂಬಂಧಿಸಿದ ಅವರ ವಿವರಣೆ ಕೆಳಗೆ ನೀಡಿರುವ ಮುದ್ರಿತ ಲೇಖನದಲ್ಲಿದೆ. 








ಊರಿನಲ್ಲಿ ಜವಳಿ ಚನ್ನಬಸಪ್ಪ ಎಂದಿದ್ದರೂ ಅಜ್ಜಂಪುರದಲ್ಲಿ ನಡೆಯುವ ಮಂಗಳವಾರದ ಸಂತೆಯಲ್ಲದೆ, ಸುತ್ತಣ ಇತರ ಸ್ಥಳಗಳಿಗೂ ಹೋಗಿ ದಿನಸಿ ವ್ಯಾಪಾರ ಮಾಡುತ್ತಿದ್ದರು. ನಮ್ಮ ಊರಿನವರೇ ಆದ ಗೀತಾ ಪ್ರಿಂಟರ್ಸ್ ಮಾಲೀಕ ಎ.ಪಿ. ನಾಗರಾಜ ಶ್ರೇಷ್ಠಿಯವರು ಅವರ ಮಿತ್ರರು. ಇಬ್ಬರೂ ಪುಸ್ತಕಗಳು, ದಿನಪತ್ರಿಕೆ, ಮಾಸಪತ್ರಿಕೆ, ರೇಡಿಯೋ ಮಾಧ್ಯಮಗಳ ಮೂಲಕ ತಿಳಿದುಕೊಂಡ ರಾಜಕೀಯ, ಸಾಮಾಜಿಕ, ವೈಜ್ಞಾನಿಕ ವಿಷಯಗಳನ್ನು ಚರ್ಚಿಸುತ್ತಿದ್ದರು. 

ಚನ್ನಬಸಪ್ಪನವರಿಗೆ ಅಂದಿನ ವಿಚಾರಗಳ ಬಗ್ಗೆ ಅಸಾಧಾರಣ ಒಳನೋಟವಿತ್ತು. ಕಾಶ್ಮೀರದ ಇಂದಿಗೂ ಬಗೆಹರಿಯದ ಸಮಸ್ಯೆಗೆ ಪಂ. ಜವಹರಲಾಲ್ ನೆಹರೂ ಅವರೇ ಕಾರಣ ಎನ್ನುವುದು ಅವರ ಸ್ಪಷ್ಟ ನಿಲುವಾಗಿತ್ತು. ನಮ್ಮ ದೇಶದ ಮೊದಲ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲರು ಆಗಿದ್ದರೆ ಚೆನ್ನಾಗಿತ್ತು ಎಂದು ಅವರು ನಂಬಿದ್ದರು. ಪ್ರಸಿದ್ಧ ಸಾಹಿತಿ ಡಾ. ಶಿವರಾಮ ಕಾರಂತರ ವಿಶ್ವಕೋಶ ಮಾದರಿಯ ಕೃತಿಗಳನ್ನು ಓದಿಕೊಂಡಿದ್ದರು. ಅಬ್ರಹಾಂ ಕೋವೂರರ ಪುಸ್ತಕ ಓದಿ, ಪವಾಡ, ಮೂಢ ನಂಬಿಕೆಗಳನ್ನು ಟೀಕಿಸುವ ಧೈರ್ಯ ಅವರಿಗಿತ್ತು. 

ಆದರೆ ಧಾರ್ಮಿಕ ವಿಚಾರಗಳಲ್ಲಿ ಕೋವೂರರ ವಾದವನ್ನು ಒಪ್ಪುತ್ತಿರಲಿಲ್ಲ. ಸ್ವತಃ ಅಧ್ಯಾತ್ಮದ ವಿಚಾರಗಳನ್ನು ತಿಳಿಯಲು ಆಸಕ್ತಿ ಹೊಂದಿ, ಪ್ರಾಣಾಯಾಮ ಮತ್ತು ಧ್ಯಾನಗಳನ್ನು ಅಳವಡಿಸಿಕೊಂಡಿದ್ದರು. ತಮ್ಮ 89ನೇ ವಯಸ್ಸಿನಲ್ಲಿ ನಿಧನಹೊಂದಿದರು. ಅವರ ತಮ್ಮ ಲಾಯರ್ ಕರಿಸಿದ್ದಪ್ಪನವರ ಅಕಾಲಿಕ ನಿಧನ ಅವರಿಗೆ ನೋವು ತಂದಿತ್ತು. ಅವರೇನೂ ಕೂಡಿ ಬಾಳಲಿಲ್ಲವಾದರೂ, ಕೆಲವೇ ತಿಂಗಳುಗಳ ಅಂತರದಲ್ಲಿ ಸಾವಿನಲ್ಲಿ ಒಂದಾದರು.

                                                                                                     
ನಿರೂಪಣೆ - ಅಪೂರ್ವ ಬಸು  

ಕಾಮೆಂಟ್‌ಗಳು

  1. ಕಮ್ಮತ್ತಿಗೆ ಚನ್ನಬಸಪ್ಪನವರ ಕಂಠಸಿರಿ ಚೆನ್ನಾಗಿತ್ತು. ತುಂಬ ದೂರಕ್ಕೂ ಅವರ ಕಂಚಿನ ಕಂಠ ಕೇಳಿಬರುತ್ತಿತ್ತು. ತುಂಬ ಓದುತ್ತಿದ್ದರು, ಚರ್ಚಿಸುತ್ತಿದ್ದರು.
    ವಿಜ್ಞಾನ ಕುರಿತ ಅವರ ಆಸಕ್ತಿ ನಿಜಕ್ಕೂ ಅದ್ಭುತ. ಡಾ|| ಶಿವರಾಮ ಕಾರಂತರು ರಚಿಸಿ, ಅಚ್ಚು ಮಾಡಿಸಿ, ಪ್ರಕಟಿಸಿದ "ವಿಜ್ಞಾನ ಪ್ರಪಂಚ" ಕನ್ನಡ ಸಾಹಿತ್ಯಲೋಕದ ಒಂದು ವಿಸ್ಮಯ. ವಿಜ್ಞಾನ ಸಾಹಿತ್ಯದ ಬರಹಗಾರರೂ ಅಷ್ಟೊಂದು ಪ್ರಮಾಣದ ಸಾಹಿತ್ಯವನ್ನು ಒಬ್ಬರೇ ಕುಳಿತು ಸಂಗ್ರಹಿಸಿ, ಬರೆದು ಪ್ರಕಟಿಸಲು ಈ ವರೆಗೆ ಸಾಧ್ಯವಾಗಿಲ್ಲ.
    ಅಂತಹ ಅಪರೂಪದ "ವಿಜ್ಞಾನ ಪ್ರಪಂಚ"ದ ಮೊದಲನೆಯ ಸಂಪುಟ "ಈ ಜಗತ್ತು" (೧೯೫೯ರಲ್ಲಿ ಪ್ರಕಟವಾಯಿತು) ಗ್ರಂಥವನ್ನು ಓದಿ, ವಿಶ್ಲೇಷಿಸಿ, ಚನ್ನಬಸಪ್ಪನವರು ಮಾತನಾಡುತ್ತಿದ್ದರು.
    ಅವರೋರ್ವ ವಿಶೇಷ ವ್ಯಕ್ತಿ, ಸ್ಮರಣೀಯರು.

    ಅವರ ಬಗೆಗೆ ಬರೆದುದಕ್ಕೆ, ಶಂಕರ - ಅಪೂರ್ವ ದ್ವಯರಿಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.