ಒಂದೇ ಸೂರಿನಡಿ ಮೂರು ತಲೆಮಾರಿನ ರಂಗ ಕಲಾವಿದರು
ಸಂಚಿಕೆ-64 ಆತ್ಮೀಯ ಓದುಗರೇ, ಅಮೆರಿಕಕ್ಕೆ ಇದು ನನ್ನ ಎರಡನೆಯ ಭೇಟಿ. ಇಲ್ಲಿ ಬಂದ ನಂತರವೂ ನನ್ನ ಈ ಬ್ಲಾಗ್ ಸಂಪಾದನೆಯ ಕೆಲಸ ನಿರುಮ್ಮಳವಾಗಿ ನಡೆಯುತ್ತಿದೆಯೆಂದರೆ, ಅದಕ್ಕೆ ಕಾರಣ ನನ್ನಂತೆಯೇ ಯೋಚಿಸಿ, ಕೆಲಸ ಮಾಡಬಲ್ಲ ಮಿತ್ರರ ತಂಡ. ನಾನು "ಅಮೆರಿಕದಲ್ಲಿ ಅಜ್ಜಂಪುರ" ಎಂಬ ಲೇಖನಮಾಲೆಯನ್ನು ಆರಂಭಿಸಿದೆನಾದರೂ, ಅದರಲ್ಲಿ ಅಜ್ಜಂಪುರದ ಬಗ್ಗೆ ಬರೆದದ್ದು ಕಡಿಮೆಯೇ ಎನ್ನಬೇಕು. ಆದರೆ ಅಮೆರಿಕದಲ್ಲಿ ಕುಳಿತು ಅಜ್ಜಂಪುರಕ್ಕೆ ಸಂಬಂಧಿಸಿದ ವ್ಯಕ್ತಿ, ವಿಷಯಗಳ ಮಾಹಿತಿಗಳನ್ನು ಪ್ರಕಟಿಸಲು ಈಗ ಸಾಧ್ಯವಾಗಿರುವುದು ನನ್ನ ಪ್ರೀತಿಯ ಮಿತ್ರ ಅಪೂರ್ವ ಬಸು ಅವರ ಸಹಕಾರದಿಂದ. ಅಜ್ಜಂಪುರ ಕೃಷಿಕರ ಊರಾಗಿರುವಂತೆ ಕಲಾವಿದರ ನೆಲೆಯೂ ಹೌದು. ಕಲಾ ಸೇವಾ ಸಂಘದ ಕಾರ್ಯ ಚಟುವಟಿಕೆಗಳನ್ನು ಕುರಿತಂತೆ ವಿಸ್ತಾರವಾದ ಲೇಖನಗಳು ಈಗಾಗಲೇ ಬ್ಲಾಗ್ ನಲ್ಲಿ ಪ್ರಕಟವಾಗಿವೆ. ಪೌರಾಣಿಕ ನಾಟಕಗಳಿಂದ ಆರಂಭಿಸಿ, ಆಧುನಿಕ ರಂಗಭೂಮಿಯ ಎಲ್ಲ ಪ್ರಯೋಗಗಳೂ ಅಜ್ಜಂಪುರದಲ್ಲಿ ನಡೆಯುತ್ತವೆ. ಈ ಸಂಚಿಕೆಯಲ್ಲಿ ಅಜ್ಜಂಪುರದ ಹೆಮ್ಮೆಯ ಕಲಾವಿದ ಶ್ರೀ ಶಿವಾಜಿರಾವ್ ಮತ್ತು ಅವರ ಮಗ ಮೋಹನರಾವ್ ಹಾಗೂ ಅವರ ಮೊಮ್ಮಗ ಉಲ್ಲಾಸ್ ಜಾಧವ್ ಇವರನ್ನು ಕುರಿತಂತೆ ವಿಸ್ತೃತ ಲೇಖನವನ್ನು ಅಪೂರ್ವ ಬಸು, ಉತ್ತಮ ಚಿತ್ರ ಸಂಗ್ರಹದೊಂದಿಗೆ ನಿಮ್ಮ ಓದಿಗೆಂದು ಇಲ್ಲಿ ಒದಗಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ಈ ಚಿತ್ರಮಾಲಿಕೆಯಲ್ಲಿ ಅಜ್ಜಂಪುರದ ಅನೇಕ ಹಿರಿಯರು ಭದ್ರಾ ನದಿಯಲ್ಲಿ ಜಳಕ ಮಾಡ...