ಶ್ರೀ ಶಂಕರಾನಂದ ಸ್ವಾಮೀಜಿ
ಆತ್ಮೀಯರೇ, ನಿಮ್ಮೆಲ್ಲರ ಸತತ ಪ್ರೋತ್ಸಾಹದಿಂದ ಈ ಬ್ಲಾಗ್ ಐದನೇ ವರ್ಷವನ್ನು ಪೂರೈಸಿದೆ. ಓದುಗರೆಲ್ಲರಿಗೆ ಧನ್ಯವಾದಗಳು. ತಿಂಗಳಿಗೆ ಒಂದು ಲೇಖನದಂತೆ ಮಾತ್ರ ಪ್ರಕಟಿಸಲು ಸಾಧ್ಯವಾಗಿದೆ. ಏಕೆಂದರೆ ಊರಿನ ಬಗ್ಗೆ, ಅಲ್ಲಿನ ಇತಿಹಾಸ, ವಿಶೇಷ ಘಟನೆಗಳ ಬಗ್ಗೆ ಆಸಕ್ತಿ ತಳೆದು ಮಾಹಿತಿಗಳನ್ನು ನೀಡುವಂತಾದರೆ ಇನ್ನಷ್ಟು ಮಾಹಿತಿ ಸಂಗ್ರಹವಾಗುತ್ತಿತ್ತು. ಕೆಲವರಾದರೂ ಈ ನಿಟ್ಟಿನಲ್ಲಿ ಸಹಕಾರ ನೀಡುತ್ತಿರುವರು. ಅವರೆಲ್ಲರಿಗೂ ಧನ್ಯವಾದಗಳು. ಈಗ ಪ್ರಕಟವಾಗಿರುವ 60ನೆಯ ಲೇಖನವನ್ನು ಸ್ವಪ್ರೇರಣೆಯಿಂದ ರಚಿಸಿ, ಮಾರ್ಚ್ ತಿಂಗಳ ಈ ಸಂಚಿಕೆಯನ್ನು ವಿಶಿಷ್ಟವಾಗಿಸಿರುವವರು ಅಜ್ಜಂಪುರದ ಹಿರಿಯರಾದ ಶ್ರೀ ಸತ್ಯನಾರಾಯಣ ಶ್ರೇಷ್ಠಿಯವರು. ಅವರು ಅಜ್ಜಂಪುರದ ಬ್ಲಾಗ್ ನ ಮೇಲಣ ಅಭಿಮಾನದಿಂದ, ಅಜ್ಜಂಪುರದ ಶಿವಾನಂದಾಶ್ರಮದ ಶಂಕರಾನಂದ ಸ್ವಾಮೀಜಿಯವರನ್ನು ಕುರಿತಂತೆ ತಮ್ಮ ನೆನಪುಗಳನ್ನು ದಾಖಲಿಸಿದ್ದಾರೆ. ನನ್ನ ಈ ಯತ್ನವನ್ನು ಆರಂಭದಿಂದಲೂ ಬೆಂಬಲಿಸಿ, ಸ್ಫೂರ್ತಿಯುತ ನುಡಿಗಳನ್ನಾಡಿ ಹರಸಿರುವ, ಶ್ರೀ ಶ್ರೇಷ್ಠಿಯವರು ಬರೆದಿರುವ ಈ ಬರವಣಿಗೆಯನ್ನು, ಯಥಾವತ್ತಾಗಿ ಹಾಗೆಯೇ ಪ್ರಕಟಿಸಿರುವೆ. ಇದಕ್ಕೆ ಕಾರಣಗಳೆಂದರೆ ಅವರ ಮುದ್ದಾದ, ತಪ್ಪುಗಳಿಲ್ಲದ, ಮುದ್ರಣ ಸದೃಶವಾದ ಬರವಣಿಗೆ, ಭಾಷಾ ಶೈಲಿ ಮತ್ತು ಗೀತಾಕೈಂಕರ್ಯದ ಬಗೆಗಿನ ಅವರ ಶ್ರದ್ಧೆ. 94ರ ವಯಸ್ಸಿನಲ್ಲಿ ಅಪರಿಮಿತ ಜೀವನೋತ್ಸಾಹದಿಂದ ಮುನ್ನಡೆಯುತ್ತಿರುವ ಅವರು ನಮ್ಮೆಲ್ಲರಿಗೂ ಚೈತನ್ಯದಾಯಕರು, ಸ್ಫೂರ್ತಿ...