02. ಇದ್ದದ್ದು-ಇಲ್ಲದ್ದು
ಶೀರ್ಷಿಕೆ ಬದಲಾಗಿರುವುದನ್ನು ನೀವು ಗಮನಿಸಿರಬಹುದು. ಸಾಮಾನ್ಯ ಉಪಯೋಗದಲ್ಲಿರುವ ಪದವನ್ನು ನಾನು ಬಳಸಿದ್ದೆ. ಆದರೆ ಅದು ಹಾಗಲ್ಲ, ಶೀರ್ಷಿಕೆ ಸರಿಯಾದ ರೂಪ ಹೀಗಿರಬೇಕು ಎಂದು ಆಧಾರ ಸಹಿತವಾಗಿ ಮಿತ್ರ ಮಂಜುನಾಥ ಅಜ್ಜಂಪುರ ತಿಳಿಸಿದ್ದಾರೆ. ಕಮೆಂಟ್ ನಲ್ಲಿ ಅವರ ಪ್ರತಿಕ್ರಿಯೆಯನ್ನು ಗಮನಿಸಿ. ಇಂಥ ಸಕ್ರಿಯ ಭಾಗವಹಿಸುವಿಕೆಯೇ ಬ್ಲಾಗ್‌ನ ಗುಣಮಟ್ಟ ಹೆಚ್ಚಿಸಬಲ್ಲದು. ಅಜ್ಜಂಪುರದ ಬಿ.ಆರ್. ಮಮತಾ ಫೇಸ್ ಬುಕ್‌ನಲ್ಲಿ ತಮ್ಮ ಪ್ರತಿಕ್ರಿಯೆಯನ್ನು ಬರೆಯುವಾಗ ಹೀಗೆ ಹೇಳಿದ್ದಾರೆ : "very nice blog uncle, ಖುಷಿ ಆಗುತ್ತೆ, ನಮ್ಮ ಊರಿನ ಬಗ್ಗೆ ನನ್ನ ಫ್ರೆಂಡ್ಸ್ ಎಲ್ಲರಿಗೂ ವಿವರಿಸಲು ಈ ಬ್ಲಾಗ್ ತುಂಬಾ ಚೆನ್ನಾಗಿದೆ". ಹಲವರಿಗೆ ವಿದ್ಯಾಭ್ಯಾಸ, ಉದ್ಯೋಗ ಮುಂತಾದ ಕಾರಣಗಳಿಂದಾಗಿ ಈಗ ಊರಿನಲ್ಲಿ ಇರಲಾಗದಿದ್ದರೂ, ಅದರ ಬಗ್ಗೆ ಅಭಿಮಾನವೇನೂ ಕುಂದುವುದಿಲ್ಲ. ಬದಲಾಗಿ ಇನ್ನಷ್ಟು ಹೆಚ್ಚಾಗುತ್ತದೆ. ಹುಟ್ಟಿದೂರಿನ ಸೆಳೆತವೇ ಅಂಥದು. ಆಕೆ ಹೇಳಿರುವಂತೆ ಊರಿನ ಬಗ್ಗೆ ವಿವರಿಸಲು, ತಿಳಿಯಲು ನನ್ನ ನೆನಪಿನಲ್ಲಿರುವ ಕೆಲ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುವೆ. ಇಲ್ಲದ್ದನ್ನು ಇದ್ದಂತೆ ಚಿತ್ರಿಸುವಂತಾಗುವುದೇ ಇಂಥ ಬರವಣಿಗೆಗಳಲ್ಲಿ ಇರುವ ಅಪಾಯ. ಹಾಗಾಗದಂತೆ ನಾನು ಗಮನಿಸಿದ್ದಷ್ಟನ್ನು ಮಾತ್ರವೇ ಇಲ್ಲಿ ದಾಖಲಿಸಿರುವೆ. ಈ ಮಾಹಿತಿಗಳಿಗೆ ಪೂರಕವಾಗಿ ನಿಮ್ಮಿಂದ ಇನ್ನಷ್ಟು ವಿವರಗಳು ಹರಿದುಬರುವಂತಾದರೆ ಸಂತೋಷ. ಈ ಬಗ್ಗೆ ಇನ್...