ಪೋಸ್ಟ್‌ಗಳು

ಏಪ್ರಿಲ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

123. ದಕ್ಷ ಅಧಿಕಾರಿ - ಪುಟ್ಟ ರಂಗಪ್ಪ

ಇಮೇಜ್
ನಾನು ಬಹುದಿನಗಳಿಂದ ಈ ಅಂಕಣದಲ್ಲಿ ದಾಖಲು ಮಾಡಬೇಕೆಂದು ಬಯಸಿದ್ದ ವಿಷಯವನ್ನು ಗೆಳೆಯ ಮಲ್ಲಿಕಾರ್ಜುನ ಇಲ್ಲೊಂದು ಸಮಗ್ರ ಚಿತ್ರ ಲೇಖನದೊಡನೆ ಒದಗಿಸಿದ್ದಾರೆ. ಅವರಿಗೆ ಧನ್ಯವಾದಗಳು. ಪಾಂಡುರಂಗಪ್ಪ ಮತ್ತು ಅವರ ಪುತ್ರರು ಅಜ್ಜಂಪುರದ ಜನ ಮಾನಸದಲ್ಲಿ ಸ್ಥಾನಗಳಿಸಲು ಅವರು ವಿದ್ಯಾಭ್ಯಾಸಕ್ಕೆ ನೀಡಿದ ಮಹತ್ವ ಮತ್ತು ದೂರದೃಷ್ಟಿಗಳೇ ಕಾರಣವೆಂದು ಹೇಳಬಹುದು. ಅಜ್ಜಂಪುರದ ಪೇಟೆಯ ಬಳಿ ಇದ್ದ ಚಿತ್ರಮಂದಿರದ ಎದುರಿನಲ್ಲಿ ಇದ್ದ ನಾಲ್ಕಾರು ಮನೆಗಳ ಗುಂಪು, ತನ್ನ ಸ್ವಚ್ಛತೆಯಿಂದ  ಗಮನ ಸೆಳೆಯುವಂತಿತ್ತು. ಸಗಣಿ ಹಾಕಿ ಸಾರಿಸಿದ ನೆಲ, ದೊಡ್ಡ ರಂಗೋಲಿಯ ವಿನ್ಯಾಸಗಳಿಂದಾಗಿ ವಿಶಿಷ್ಟವಾಗಿ ಕಾಣುತ್ತಿತ್ತು. ಈ ಆವರಣದಲ್ಲಿ ವಾಸವಿದ್ದ ಪಾಂಡುರಂಗಪ್ಪನವರು ಗಾಂಧೀಜಿಯ ಪ್ರಭಾವಕ್ಕೆ ಒಳಗಾಗಿದ್ದವರು. ಅವರ ಹಿರಿಯ ಮಗ ತಿಪ್ಪಯ್ಯ ಮಾಸ್ತರರು ಶಿಕ್ಷಕರಾಗಿ ನಂತರ ರಾಜಕೀಯದಲ್ಲಿ ಭಾಗವಹಿಸಿ ತಮ್ಮ ಛಾಪನ್ನು ಮೂಡಿಸಿದ್ದರೆ, ಎರಡನೆಯವರಾದ ಪುಟ್ಟರಂಗಪ್ಪನವರು ತಮ್ಮ ಆಡಳಿತ ಶೈಲಿಯಿಂದ ರಾಜ್ಯದಲ್ಲಿ ಜನಪ್ರಿಯರಾದರು. ಪುಟ್ಟರಂಗಪ್ಪನವರ ಅಧಿಕಾರ ಅವಧಿಯಲ್ಲಿ ಜಾತಿಯ ಹಂಗಿಲ್ಲದೆ ಸಮಾಜದ ಎಲ್ಲ ವರ್ಗಗಳ ಅಜ್ಜಂಪುರದ ಜನ ಪ್ರಯೋಜನ ಪಡೆದದ್ದುಂಟು. ಶಿಕ್ಷಣ ತಂದುಕೊಟ್ಟ ಆತ್ಮ ಗೌರವ ಮತ್ತು ಆತ್ಮ ವಿಶ್ವಾಸಗಳ ಮಹತ್ವವನ್ನು ಸ್ವತಃ ಬದುಕಿ ತೋರಿಸಿದ ಪುಟ್ಟರಂಗಪ್ಪನವರ ಸ್ಮರಣಾರ್ಥ ಅಪರೂಪದ ಚಿತ್ರಗಳೊಂದಿಗೆ ಇರುವ ಈ ಲೇಖನ ಅಜ್ಜಂಪುರವು ನಿಜಕ್ಕೂ ಹೆಮ್ಮೆ ಪಡುವಂಥದ್ದು. ಶಂಕರ ಅಜ್ಜಂಪ