97. ಶ್ರೀಮದ್ ಭಗವದ್ಗೀತಾ ನಿತ್ಯ ಪಾರಾಯಣ
ಅಜ್ಜಂಪುರದಲ್ಲಿ ಗೀತಾ ಪ್ರಸಾರಕ್ಕೆ ಕಟಿಬದ್ಧರಾಗಿ ದುಡಿದು, ಈ ದಿಸೆಯಲ್ಲಿ ಅಜ್ಜಂಪುರವನ್ನು ದೇಶಾದ್ಯಂತ ಪ್ರಸಿದ್ಧಿಪಡಿಸಿದವರು ಶ್ರೀ ಶಂಕರಾನಂದ ಸ್ವಾಮಿಗಳು. ಅವರು ಹಚ್ಚಿದ ಈ ಹಣತೆ ಇನ್ನೂ ಬೆಳಗುತ್ತಿರುವುದು, ಇಂದಿನ ತಲೆಮಾರಿಗೂ ಪ್ರೇರಕವಾಗಿರುವುದು ಅವರ ಸಂಕಲ್ಪಶಕ್ತಿಯ ದೃಢತೆಯನ್ನು ಎತ್ತಿತೋರುವಂತಿದೆ. ಅಜ್ಜಂಪುರದ ಶಿವಾನಂದಾಶ್ರಮವನ್ನು ಕುರಿತಂತೆ ಈ ಹಿಂದ ವಿಸ್ತೃತ, ಚಿತ್ರಸಹಿತ ಲೇಖನವನ್ನು ಈ ಬ್ಲಾಗ್ ನಲ್ಲಿ ಪ್ರಕಟಿಸಲಾಗಿದೆ. ಇದೀಗ ಗೀತಾ ಪ್ರಸಾರ-ಪ್ರಚಾರದ ಚಟುವಟಿಕೆಯ ಇನ್ನೊಂದು ರೂಪವಾಗಿ, ವ್ಯವಸ್ಥಿತ ಕಾರ್ಯಕ್ರಮದೊಡನೆ ನಡೆಯುತ್ತಿರುವ ಶ್ರೀಮದ್ ಭಗವದ್ಗೀತಾ ನಿತ್ಯ ಪಾರಾಯಣವು ಅಜ್ಜಂಪುರದ ಆಧ್ಯಾತ್ಮಿಕ ಮಾಸಪತ್ರಿಕೆ "ಗೀತಾಮಿತ್ರ"ದ ಆಯೋಜಕತ್ವದಲ್ಲಿ ನಡೆಯುತ್ತಿರುವುದು ಅಭಿನಂದನಾರ್ಹ. ಫೇಸ್ ಬುಕ್ ನಲ್ಲಿ ನೋಡುತ್ತಿರುವಾಗ ಅಜ್ಜಂಪುರದಲ್ಲಿ ನಡೆಯುತ್ತಿರುವ ಗೀತಾ ನಿತ್ಯ ಪಾರಾಯಣವನ್ನು ಕುರಿತಂತೆ ಇದ್ದ ಚಿಕ್ಕದೊಂದು ಟಿಪ್ಪಣಿ ಮನಸೆಳೆಯಿತು. ಅದರ ವಿವರಗಳನ್ನು ಅಪೇಕ್ಷಿಸಿ, ಅಜ್ಜಂಪುರದ ಶ್ರೀಮದ್ಭಗವದ್ಗೀತಾ ನಿತ್ಯ ಪಾರಾಯಣ ಸಂಚಾಲಕಿ ಶ್ರೀಮತಿ ವೀಣಾ ನಟರಾಜ್ ಇವರನ್ನು ಸಂಪರ್ಕಿಸಿದೆ. ಒಂದೇ ದಿನದಲ್ಲಿ ಈ ಕಾರ್ಯಕ್ರಮದ ಸವಿವರ ಮಾಹಿತಿ ಹಾಗೂ ಚಿತ್ರಗಳು ದೊರಕಿದವು. ಅಜ್ಜಂಪುರಕ್ಕೆ ವಿಶಿಷ್ಟವಾದ ಈ ಗೀತಾ ಪಾರಾಯಣದ ಆಯೋಜನೆ, ಅದರ ಅಚ್ಚುಕಟ್ಟುತನ ಹಾಗೂ ಪಾರಂಪರಿಕ ಮೌಲ್...