ಕೆರೆ ಹಿಂದಿನ ಶ್ರೀ ಶಂಕರ ಲಿಂಗೇಶ್ವರ ದೇವಾಲಯ
ಪರ್ವತರಾಯನ ಕೆರೆಯಲ್ಲಿ ಸೂರ್ಯಾಸ್ತ ಕೆರೆಯ ಹಿನ್ನೆಲೆಯಲ್ಲಿ ಹಣ್ಣೆ ಗುಡ್ಡ ಸಾಮಾನ್ಯವಾಗಿ ಊರಿಗೆ ನೀರು ನೀಡುವ ಜಲಸ್ಥಾನಗಳಲ್ಲಿ ಒಂದು ಚಿಕ್ಕ ಮಂದಿರವಿರುತ್ತಿದ್ದುದು ವಾಡಿಕೆ. ದೇವಾಲಯದ ಹೊರನೋಟ ಈ ವಿಷಯದಲ್ಲಿ ಅಜ್ಜಂಪುರವೂ ಹೊರತಾಗಿಲ್ಲ. ಈ ಚಿತ್ರದಲ್ಲಿ ಕಾಣುವ ಚಿಕ್ಕ ಮಂದಿರವನ್ನು ಕೆರೆ ಹಿಂದಿನ ದೇವಸ್ಥಾನ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಅದು ಇರುವುದು ಪರ್ವತರಾಯನ ಕೆರೆಯ ಏರಿಯ ಬುಡದಲ್ಲಿ. ಹೀಗಾಗಿ ಈ ಹೆಸರೇ ಪ್ರಚಲಿತವಿದ್ದರೂ , ಅಲ್ಲಿ ನೆಲೆಗೊಂಡಿರುವುದು ಶ್ರೀ ಶಂಕರಲಿಂಗೇಶ್ವರ. ನಾಲ್ಕು ಚದರಡಿಯ ಒಂದು ಗರ್ಭಗೃಹ ಮತ್ತು ಹತ್ತು ಚದರಡಿಯ ಮುಖಮಂಟಪವನ್ನು ಮಾತ್ರ ಹೊಂದಿರುವ ಈ ದೇವಾಲಯ ಅಜ್ಜಂಪುರದ ಪ್ರಾಚೀನವೆಂದು ಹೇಳಬಹುದಾದ ಶಿವಮಂದಿರ. ಇಲ್ಲಿ ಹಿಂದೆ ಸಂಭ್ರಮವಿತ್ತು. ಪೂಜಾದಿಗಳು ಯಥಾಕ್ರಮ ನಡೆಯುತ್ತಿದ್ದ ದಿನಗಳಿದ್ದವು. ಇದರ ನಿರ್ವಹಣೆಗೆಂದು ಸಾಕಷ್ಟು ಕೃಷಿ ಜಮೀನನ್ನು ಉಂಬಳಿ ನೀಡಲಾಗಿತ್ತು. ಮಳೆಯ ಅಭಾವವಿರುವ ವರ್ಷಗಳಲ್ಲಿ ಇಲ್ಲಿ ರುದ್ರಾಭಿಷೇಕವನ್ನು ನಡೆಸಿ , ಮಳೆಯನ್ನು ಆಹ್ವಾನಿಸುವ ಪದ್ಧತಿಯಿತ್ತು. ಈಗ ಅದೆಲ್ಲ ಕೇವಲ ನೆನಪು ಮಾತ್ರ. ಸಾಧಾರಣವಾಗಿ ಇಂಥ ರಚನೆಯ ದೇವಾಲಯಗಳಲ್ಲಿ ಗರ್ಭಗುಡಿಯ ಮೇಲೆ ಇಟ್ಟಿಗೆ-ಗಾರೆಗಳಿಂದ ನಿರ್ಮಿಸುವ ಶಿಖರವಿರುತ್ತದೆ...