26. ಶ್ರೀ ಸತ್ಯನಾರಾಯಣ ಶೆಟ್ಟರ ಇನ್ನಷ್ಟು ನೆನಪುಗಳ ಸಂಗ್ರಹ
ಅಜ್ಜಂಪುರದ ಬಗ್ಗೆ ಶ್ರೀ ಸತ್ಯನಾರಾಯಣ ಶೆಟ್ಟರ ಇನ್ನಷ್ಟು ನೆನಪುಗಳ ಸಂಗ್ರಹ ಇಲ್ಲಿದೆ. ಇತ್ತೀಚೆಗೆ ಅವರು ನೀಡಿರುವ ವಿವಿಧ ಮಾಹಿತಿಗಳನ್ನು ಆಧರಿಸಿದ ಈ ಬರಹವನ್ನು ನಿಮ್ಮ ಓದಿಗಾಗಿ ಇಲ್ಲಿ ನೀಡಿದ್ದೇನೆ. ಸಮಾಜದಲ್ಲಿ ಎಲ್ಲ ಕಾಲಕ್ಕೂ ಒಳ್ಳೆಯವರು ಕೆಟ್ಟವರು ಇರುತ್ತಾರೆ. ವಿವಿಧ ಜಾತಿ , ಜನಾಂಗಗಳಲ್ಲಿ ದುಷ್ಟರು ಇಲ್ಲವೆಂದಲ್ಲ. ಅದನ್ನು ಆಯಾ ಸಮಾಜದವರು ಹೇಳಿಕೊಳ್ಳುವ ಮನೋಧರ್ಮ ತೋರಬೇಕಷ್ಟೆ. ಒಳಿತಿನಂತೆ ಕೆಡುಕನ್ನೂ ಹೇಳಿಕೊಳ್ಳುವುದು ರೂಢಿಯಾಗಬೇಕು. ಬ್ರಾಹ್ಮಣರಲ್ಲಿ ಈ ಕೆಳಗಿನ ಈರ್ವರನ್ನು ಕುರಿತಾಗಿನ ಪ್ರಸ್ತಾಪ ಆಗೀಗ ಬಂದುಹೋಗುವುದುಂಟು. ಅಜ್ಜಂಪುರದ ಕೆಲವು ಮಹನೀಯರನ್ನು ನೆನಪಿಸಿಕೊಂಡಿರುವಂತೆ ಕುಖ್ಯಾತರನ್ನೂ ಈ ಭಾಗದಲ್ಲಿ ನೆನಪಿಸಿಕೊಂಡಿದ್ದೇನೆ. ಅವರು ಅಂದಿಗೆ ಕುಖ್ಯಾತರಾದರೂ , ಇಂದು ನಡೆಯುತ್ತಿರುವ ಅಪರಾಧಗಳ ಮುಂದೆ ಅವರದೇನೂ ಅಲ್ಲ. ಹಾಗೆಂದು ಕ್ಷಮಾರ್ಹವೂ ಅಲ್ಲ. ಸೊಕ್ಕೆ ಗಿರಿಯಪ್ಪನೆಂಬಾತನು ಜಾತಿಯಿಂದ ಬ್ರಾಹ್ಮಣ. ಕೇವಲ ಜಾತಿಯಿಂದ ಶ್ರೇಷ್ಟತೆ ಬರುವುದಿಲ್ಲವಷ್ಟೆ. ವ್ಯಕ್ತಿಯ ನಡವಳಿಕೆಯನ್ನು ಜನರು ಮೆಚ್ಚುವರೇ ವಿನಾ ಅವನ ಕುಲ-ಅಂತಸ್ತುಗಳನ್ನಲ್ಲ. ಗಿರಿಯಪ್ಪನು ದುಷ್ಟಸಹವಾಸಕ್ಕೆ ಬಿದ್ದುದರ ಪರಿಣಾಮವಾಗಿ ಮದ್ಯವ್ಯಸನ , ದುಂಡಾವರ್ತಿಗಳನ್ನು ಬೆಳೆಸಿಕೊಂಡಿದ್ದ. ಪೇಟೆಯ ಬೀದಿಯಲ್ಲಿ ಸುತ್ತುತ್ತ ಅಂಗಡಿ...